Wednesday, June 29, 2011
ಜುಲೈಖಾ..!
ಇಬ್ಬನಿಗಳು ಚೆಲ್ಲಿದ ಮದರಸದ ಆ ಅಂಗಳದಲ್ಲಿ, ನಕ್ಷತ್ರಗಳ ಚಪ್ಪರದ ಕೆಳಗೆ ಚುಮುಚುಮು ಚಳಿಯನ್ನು ಹೊದ್ದುಕೊಂಡು ನಾನು ಕೇಳಿದ ‘ಜುಲೈಖಾ ಬೀಬಿ’ಯ ಕತೆ ಬೆಂಕಿಯ ಕೆಂಡದಂತೆ ನನ್ನ ಬಾಲ್ಯವನು ಹಾಗೂ ಕರಗಿ ಹೋಗುತ್ತಿರುವ ಈ ಯೌವನವನ್ನೂ ಬೆಚ್ಚಗಿಟ್ಟಿದೆ. ಹೆಣ್ಣಿನ ಬೆಂಕಿಯಂತಹ ವ್ಯಕ್ತಿತ್ವದ ಕಾವಿನಲ್ಲಿ ಮಾಗಿದ ನಾನು ಅವಸರವಸರವಾಗಿ ಬಾಲ್ಯದಿಂದ ಯೌವನಕ್ಕೆ ಕಾಲಿಟ್ಟನೇನೋ ಎನ್ನುವ ಅನುಮಾನ ನನ್ನನ್ನು ಆಗಾಗ ಕಾಡುವುದಿದೆ. ದೂರದ ಮಾಪಿಳ್ಳೆ ಪಟ್ಟಣದಿಂದ ಬಂದ ಮುಸ್ಲಿಯಾರರು ಆ ನಕ್ಷತ್ರಗಳ ಇರುಳಲ್ಲಿ ಹಾಡುತ್ತಿದ್ದ ಜುಲೈಖಾ ಬೀಬಿಯ ಮೋಹ, ತಲ್ಲಣ, ಮೋಸಗಳ ಕಥೆಯ ಆಕರ್ಷಣೆ ನನ್ನ ಪ್ರತಿ ಬರಹಗಳಲ್ಲೂ ಕಂಡೂ ಕಾಣಿದ ಒಂದು ನದಿಯಾಗಿ ಹರಿಯುತ್ತಿದೆ ಎಂದೇ ನಾನು ನಂಬಿದ್ದೇನೆ.
ಆ ಹಾಡಿಗೆ ‘‘ಯೂಸೂಫನ ಹಾಡು’’ ಎಂದೇ ಹೆಸರಾಗಿದ್ದರೂ ಅದು ನಿಜಕ್ಕೂ ಜುಲೈಖಾ ಬೀಬಿಯ ಹಾಡಾಗಿತ್ತು. ಯೂಸೂಫನ ಸೌಂದರ್ಯ, ಸತ್ಯ ಮತ್ತು ಅವನೊಳಗಿನ ಪ್ರವಾದಿತ್ವ ಇವೆಲ್ಲವೂ ಅರಳುಗಟ್ಟುವುದು ಜುಲೈಖಾಳ ಮುಖಾಮುಖಿಯ ಬಳಿಕ. ತನ್ನ ಸಹೋದರರಿಂದಲೇ ಬಾವಿಗೆ ತಳ್ಳಲ್ಪಡುವ ಎಳೆಯ ಯೂಸೂಫನನ್ನು ಆ ದಾರಿಯಾಗಿ ಹೋಗುತ್ತಿದ್ದ ಈಜಿಪ್ಟಿನ ವೃದ್ಧ ಅರಸನೊಬ್ಬ ರಕ್ಷಿಸಿ, ತನ್ನ ಅರಮನೆಗೆ ಕರೆದೊಯ್ಯುತ್ತಾನೆ. ಅಲ್ಲಿ ತನ್ನ ಪತ್ನಿ ಜುಲೈಖಾ ಬೀಬಿಗೆ ಆ ಎಳೆಯನನ್ನು ಒಪ್ಪಿಸಿ ‘‘ಇವನನ್ನು ನಾವು ನಮ್ಮ ಮಗನಾಗಿ ಸಾಕೋಣ’’ ಎಂದು ಹೇಳುತ್ತಾನೆ. ಆದರೆ ಬೆಳೆದಂತೆ ಬೆಳಗತೊಡಗಿದ್ದ ಯೂಸೂಫನ ಯೌವನ ಜುಲೈಖಾಳ ಬದುಕಿನ ಮೇಲೆ ಬಿರುಗಾಳಿಯಂತೆ ಅಪ್ಪಳಿಸಿ, ಎಲ್ಲವನ್ನು ಅಸ್ತವ್ಯಸ್ತಗೊಳಿಸಿತು. ಮುದುಕ ರಾಜನನ್ನು ವರಿಸಿದ್ದರೂ, ತನ್ನ ಪಾತಿವ್ರತ್ಯವನ್ನು ಭದ್ರವಾಗಿಟ್ಟುಕೊಂಡಿದ್ದ ಅವಳಿಗೆ ಯೂಸೂಫ್ ಒಂದು ಪರೀಕ್ಷೆಯೇ ಆಗಿ ಬಿಟ್ಟ. ಅವಳ ಎದೆಯ ತಳದಲ್ಲಿ ಮಲಗಿ ನಿದ್ದೆ ಹೋಗಿದ್ದ ಯೌವನ ಯಾರೋ ಅರ್ಧರಾತ್ರಿಯಲ್ಲಿ ಎಬ್ಬಿಸಿದ ರಾಕ್ಷಸನಂತೆ ಏದುಸಿರು ಬಿಡತೊಡಗಿತು. ಆತನ ಮೋಹಕ್ಕೆ ಬಿದ್ದ ಆಕೆ, ತನ್ನ ಸರ್ವಸ್ವವನ್ನು ಆತನಿಗಾಗಿ ಕಳೆದುಕೊಳ್ಳಲು ಸಿದ್ಧಳಾಗುತ್ತಾಳೆ.‘‘ಕುರ್ಆನ್’ನಲ್ಲಿ ‘ಯೂಸುಫ್’ ಎಂಬ ಅಧ್ಯಾಯದಲ್ಲಿ ಜುಲೈಖಾಳ ಪ್ರಸ್ತಾಪ ಬರುತ್ತದೆ. ಅಲ್ಲಿ ಆಕೆ ಒಂದು ನಿಮಿತ್ತ ಮಾತ್ರ. ಯೂಸುಫರ ಸೌಂದರ್ಯ ಮತ್ತು ವ್ಯಕ್ತಿತ್ವ ಎಷ್ಟು ಉನ್ನತವಾದುದು ಎನ್ನುವುದನ್ನು ಜುಲೈಖಾಳ ಪ್ರಸಂಗದ ಮೂಲಕ ಅಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಯೂಸೂಫನ ಸೌಂದರ್ಯದ ಮುಂದೆ ಜುಲೈಖಾ ಅದೆಷ್ಟು ಅಸಹಾಯಕಳಾಗಿದ್ದಳೆಂದರೆ, ಅವನನ್ನು ಮೋಹಿಸುವುದರ ಹೊರತಾಗಿ ಆಕೆಗೆ ಬೇರೆ ದಾರಿಯೇ ಇದ್ದಿರಲಿಲ್ಲ. ಹೆಣ್ಣಿನ ಕುರುಡು ಮೋಹ ಮತ್ತು ವಂಚನೆಯತ್ತ ಕುರ್ಆನ್ ಬೊಟ್ಟು ಮಾಡುತ್ತಲೇ, ಎಲ್ಲೊ ಒಂದು ಕಡೆ ಜುಲೈಖಾಳ ಕುರಿತು ಮೃದುವಾಗಿ ಬಿಡುತ್ತದೆಯೇನೋ ಎಂದೆನಿಸುತ್ತದೆ. ವ್ಯಭಿಚಾರದಂತಹ ಮಾನಸಿಕ ಸ್ಥಿತಿಯನ್ನು ಹೊಂದಿದ್ದರೂ ತೀರಾ ಕಠಿಣವಾದ ಶಬ್ದಗಳನ್ನು ಅವಳ ವಿರುದ್ಧ ಎಲ್ಲೂ ಬಳಸುವುದು ಕಾಣುವುದಿಲ್ಲ. ಯೂಸೂಫನ ಮುಂದೆ ಎಂತಹ ಹೆಣ್ಣು ಮಕ್ಕಳೂ ಅಸಹಾಯಕರಾಗಿ ನಿಲ್ಲಬೇಕಾಗುತ್ತದೆಯೆನ್ನುವುದು ಅಲ್ಲಿ ಪ್ರಕಟವಾಗುತ್ತದೆ.
ಜುಲೈಖಾ ಬೀಬಿ ಯೂಸೂಫನ ಹಿಂದೆ ಬಿದ್ದಿರುವುದು ಅರಮನೆಯ ಅಂತಃಪುರದ ತುಂಬಾ ಸುದ್ದಿಯಾಗುತ್ತದೆ. ಅಂತಃಪುರದ ತರುಣಿಯರು ಜುಲೈಖಾಳ ಕುರಿತಂತೆ ಹಗುರವಾಗಿ ಮಾತನಾಡಲಾರಂಭಿಸುತ್ತಾರೆ. ಇದು ಜುಲೈಖಾಳ ಕಿವಿಗೆ ಬೀಳುತ್ತದೆ. ಆದರೆ ಆಕೆಗೆ ಯೂಸುಫನ ಕುರಿತ ತನ್ನ ಪ್ರೇಮ ಮತ್ತು ಮೋಹದ ಬಗ್ಗೆ ಅಸಾಧ್ಯ ಭರವಸೆಯಿತ್ತು. ಯೂಸೂಫನನ್ನು ನೋಡಿದ ಯಾವ ಹೆಣ್ಣೂ ಆತನನ್ನು ಪ್ರೀತಿಸದೇ ಇರಲಾರಳು ಎನ್ನುವುದು ಆಕೆಯ ನಿಲುವಾಗಿತ್ತು. ಆಕೆ ಅದನ್ನು ಸಾಬೀತು ಮಾಡಲು ಹೊರಡುತ್ತಾಳೆ.
ಒಂದು ದಿನ, ಅಂತಃಪುರದ ಎಲ್ಲ ಸ್ತ್ರೀಯರನ್ನು ಒಂದು ವಿಶಾಲ ಕೋಣೆಗೆ ಆಹ್ವಾನಿಸುತ್ತಾಳೆ. ಬಳಿಕ ಅವರ ಕೈಗೆ ಒಂದೊಂದು ಹಣ್ಣನ್ನು ಮತ್ತು ಚೂರಿಯನ್ನು ನೀಡಿ, ಹಣ್ಣನ್ನು ಕತ್ತರಿಸುವುದಕ್ಕೆ ಹೇಳುತ್ತಾಳೆ. ಎಲ್ಲರೂ ಹಣ್ಣನ್ನು ಇನ್ನೇನು ಕತ್ತರಿಸಬೇಕು...ಎನ್ನುವಷ್ಟರಲ್ಲಿ ಆ ಕೋಣೆಯ ಮುಖಾಂತರ ಯೂಸೂಫ್ ನಡೆದು ಹೋಗುತ್ತಾನೆ. ಮಿಂಚಿನ ಬಳ್ಳಿಯೊಂದು ತಮ್ಮ ಕಣ್ಣ ಮುಂದಿನಿಂದಲೇ ಚಲಿಸುತ್ತಿರುವುದನ್ನು ದಂಗಾಗಿ ನೋಡುತ್ತಿರುವ ಸ್ತ್ರೀಯರು ಹಣ್ಣನ್ನು ಕತ್ತರಿಸುವ ಬದಲು ತಮ್ಮ ತಮ್ಮ ಕೈ ಬೆರಳುಗಳನ್ನೇ ಕೊಯ್ದುಕೊಳ್ಳುತ್ತಾರೆ. ಜುಲೈಖಾಳಂತಹ ಹೆಣ್ಣು ಯಾಕೆ ಯೂಸೂಫರ ಮೋಹದಲ್ಲಿ ಬಿದ್ದು ಬಿಟ್ಟಳು ಎನ್ನುವುದು ಆಗ ಅಂತಃಪುರದ ಆ ತರುಣಿಯರಿಗೆ ಅರ್ಥವಾಗುತ್ತದೆ.
ವಜ್ರದಲ್ಲಿ ಕಡೆದಿಟ್ಟ ಜುಲೈಖಾ ಹಂತಹಂತವಾಗಿ ಕರಗುತ್ತಾ ಹೋದಂತೆ, ಹೂವಿನಷ್ಟು ಕೋಮಲವಾದ ಯೂಸುಫ್ ವಜ್ರದಂತೆ ಗಟ್ಯಿಯಾಗುತ್ತಾ ಹೋಗುತ್ತಾರೆ. ಜುಲೈಖಾ ಯೂಸೂಫನನ್ನು ಕಾಡುತ್ತಾಳೆ. ಬೇಡುತ್ತಾಳೆ. ಜುಲೈಖಾಳ ಮೋಹ ಧಗಧಗಿಸಿ ಉರಿಯುತ್ತಿದ್ದಂತೆಯೇ ಆ ಉರಿಯಲ್ಲಿ ಯೂಸುಫ್ ಇನ್ನಷ್ಟು ಕಠಿಣವಾಗುತ್ತಾರೆ. ಒಮ್ಮೆ ಯೂಸುಫ್ ಕೋಣೆಯಲ್ಲಿ ಒಂಟಿಯಾಗಿರುವುದನ್ನು ನೋಡಿ ಜುಲೈಖಾ ಆತನನ್ನು ತನ್ನೆಡೆಗೆ ಒಲಿಸಿಕೊಳ್ಳುವುದಕ್ಕೆ ನೋಡುತ್ತಾಳೆ. ಯುಸುಫ್ ಜುಲೈಖಾಳ ಹಿಡಿತದಿಂದ ಪಾರಾಗಲು ಯತ್ನಿಸುತ್ತಾರೆ. ಕೋಣೆಯಿಂದ ಯೂಸುಫ್ ಪಲಾಯನ ಮಾಡುತ್ತಿದ್ದಾಗ ಜುಲೈಖಾ ಬೆಂಬತ್ತಿ ಹಿಡಿಯುವುದಕ್ಕೆ ಹವಣಿಸುತ್ತಾಳೆ. ಆ ಸಂದರ್ಭದಲ್ಲಿ ಯೂಸೂಫ್ ಅಂಗಿಯ ಹಿಂಬದಿಯನ್ನು ಜುಲೈಖಾ ಎಳೆಯುವಾಗ ಅದು ಹರಿಯುತ್ತದೆ. ಅಷ್ಟರಲ್ಲಿ ಅಲ್ಲಿಗೆ ಜುಲೈಖಾಳ ಪತಿಯ ಆಗಮನವಾಗುತ್ತದೆ. ಜುಲೈಖಾಳು ಯೂಸುಫನ ಮೇಲೆ ಕೆಂಡವಾಗುತ್ತಾಳೆ. ಯೂಸೂಫನ ತಿರಸ್ಕಾರದಿಂದ ಅವಳ ಯೌವನ ಘಾಸಿಗೊಂಡಿತ್ತು. ಪತಿಯ ಮುಂದೆ ಅಳುತ್ತಾ ‘‘ಯೂಸುಫ್ ತನ್ನನ್ನು ಅತಿಕ್ರಮಿಸಲು ಬಂದ’’ ಎಂದು ಸುಳ್ಳು ದೂರು ಹೇಳುತ್ತಾಳೆ. ಆದರೆ ಯೂಸುಫನ ಹರಿದ ಅಂಗಿ ನಿಜವೇನು ಎನ್ನುವುದನ್ನು ತಿಳಿಸುತ್ತಿತ್ತು. ತಪ್ಪು ಜುಲೈಖಾಳದ್ದೆನ್ನುವುದು ತೀರ್ಮಾನವಾಗುತ್ತದೆಯಾದರೂ, ಆಕೆಯ ಒತ್ತಡ ಯೂಸೂಫನನ್ನು ಸೆರೆಮನೆಗೆ ಸೇರಿಸುತ್ತದೆ.
ಆದರೆ ಯೂಸುಫ್ ಸಜ್ಜನ ಎನ್ನುವುದು ಸ್ವತಃ ರಾಜನಿಗೂ ಗೊತ್ತು. ಆಸ್ಥಾನಕ್ಕೂ ಗೊತ್ತು. ಸೆರೆಮನೆಯ ಕಂಬಿಗಳಿಗೂ ಗೊತ್ತು. ಆದರೆ ಜುಲೈಖಾನ ಸ್ವೇಚ್ಛೆಗಿಂತ ಜೈಲಿನ ಬಂಧನ ಯೂಸೂಫನಿಗೆ ಇಷ್ಟವಾಗುತ್ತದೆ. ಯೂಸುಫನಿಗೆ ಸ್ವಪ್ನಗಳಿಗೆ ಅರ್ಥ ಹೇಳುವ ಕಲೆ ಸಿದ್ಧಿಸಿತ್ತು. ರಾಜನಿಗೆ ಒಂದು ದಿನ ಬೀಳುವ ಮೂರು ಸ್ವಪ್ನಗಳು ಯೂಸೂಫನನ್ನು ಜೈಲಿನಿಂದ ಹೊರಕ್ಕೆ ತರುತ್ತದೆ. ಆತನ ನಿರಪರಾಧಿತ್ವ ಸಾಬೀತಾಗುತ್ತದೆ. ಸೆರೆಮನೆಯಿಂದ ಹೊರಬಂದ ಯೂಸುಫ್ ಕೊನೆಗೆ ಅದೇ ನಾಡಿನ ಸುಲ್ತಾನನಾಗಿ ಅಧಿಕಾರ ಹಿಡಿಯುತ್ತಾನೆ.
ಕುರ್ಆನಿನಲ್ಲಿ ಯೂಸುಫನ ವ್ಯಕ್ತಿತ್ವವನ್ನು ತನ್ನ ಉಜ್ವಲ ಮೋಹದ ನಿಕಷಕ್ಕೆ ಉಜ್ಜಿ, ಆತನನ್ನು ಬೆಳಗಿಸಿ ಜುಲೈಖಾ ಮುಗಿದು ಹೋಗುತ್ತಾಳೆ. ಆದರೆ ಜನಪದದಲ್ಲಿ ಜುಲೈಖಾಳ ಕಥೆ ಅಲ್ಲಿಗೇ ಮುಗಿಯುವುದಿಲ್ಲ. ‘‘ಯೂಸೂಫರ ಹಾಡು’ಗಳಲ್ಲಿ ಯೂಸುಫ್ ಮತ್ತು ಜುಲೈಖಾರ ಕಥೆ ಮತ್ತೆ ಮುಂದುವರಿಯುತ್ತದೆ. ಯೂಸೂಫರ ಸಾಕು ತಂದೆ ಮೃತರಾದ ಬಳಿಕ ಯೂಸುಫ್ ಅದೇ ನಾಡಿಗೆ ಅರಸರಾಗುತ್ತಾರೆ. ಬಳಿಕ ಯೂಸುಫ್ ಒಂದು ದಿನ ಜುಲೈಖಾಳ ಅಂತಃಪುರಕ್ಕೆ ಬರುತ್ತಾರೆ.
ಯೂಸುಫ್ ಅಂತಃಪುರಕ್ಕೆ ಭೇಟಿ ನೀಡುವ ಸುದ್ದಿ ಜುಲೈಖಾ ಬೀಬಿಗೆ ತಲುಪುತ್ತದೆ. ಆಕೆ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾಳೆ. ಓಹ್! ಸುಕ್ಕುಗಳ ಮರೆಯಲ್ಲಿ ಅಡಗಿ ಕೂತ ಕಾಲ ಜುಲೈಖಾಳನ್ನು ಅಣಕಿಸುತ್ತಿದ್ದಾನೆ. ಒಳಗೂ, ಹೊರಗೂ ಬೆಳಗುತ್ತಿರುವ ಯೂಸೂಫರೆಲ್ಲಿ, ವೃದ್ಧಾಪ್ಯದಿಂದ ಬಾಡಿದ ತಾನೆಲ್ಲಿ? ಯೂಸುಫ್ ಬಹುಶಃ ತನ್ನನ್ನು ಅಣಕಿಸಲು ಬರುತ್ತಿರಬೇಕು. ತನ್ನನ್ನು ಶಿಕ್ಷಿಸಲು ಬರುತ್ತಿರಬೇಕು. ಯೂಸುಫನ ಮುಂದೆ ಮುಖವೊಡ್ಡಿ ನಿಲ್ಲುವುದಕ್ಕಿಂತ ದೊಡ್ಡ ಶಿಕ್ಷೆ ತನಗಿದೆಯೆ? ಆಕೆ ತನ್ನ ಸುಕ್ಕುಗಟ್ಟಿದ ಮುಖವನ್ನು ಬಟ್ಟೆಯಿಂದ ಭದ್ರವಾಗಿ ಮುಚ್ಚಿಕೊಳ್ಳುತ್ತಾಳೆ. ಅದೋ ಯೂಸುಫ್ ಅಂತಃಪುರಕ್ಕೆ ಆಗಮಿಸಿದರು. ತನ್ನ ಪ್ರೇಮಕ್ಕಾಗಿ ತನ್ನ ವಿರುದ್ಧ ಒಂದು ಯುದ್ಧವನ್ನೇ ಹೂಡಿದ ಹೆಣ್ಣು...ಇದೀಗ ಸೋತು ತನ್ನನ್ನು ಎದುರುಗೊಳ್ಳಲಾಗದೆ ಮುಖ ಮುಚ್ಚಿ ಕುಳಿತಿದ್ದಾಳೆ. ಯೂಸುಫ್ ಜುಲೈಖಾಳ ಬಳಿಗೆ ಸಾಗುತ್ತಾರೆ. ನಿಧಾನಕ್ಕೆ ಮುಖದ ಬಟ್ಟೆಯನ್ನು ಸರಿಸುತ್ತಾರೆ. ಏನಾಶ್ಚರ್ಯ! ಯೂಸುಫನ ಸ್ಪರ್ಶಕ್ಕೆ ಜುಲೈಖಾ ಹದಿಹರೆಯದ ತರುಣಿಯಾಗಿ ಬದಲಾಗಿದ್ದಾಳೆ. ಅವಳ ಹಿಂದಿನ ಮುಖಸೌಂದರ್ಯ ಆಕೆಗೆ ಮರಳಿ ಸಿಕ್ಕಿದೆ. ಮಲ್ಲಿಗೆಯ ರಾಶಿ ಚೆಲ್ಲಿದಂತೆ ತನ್ನ ಮುಂದೆ ಯೂಸುಫ್ ನಗುತ್ತಿದ್ದಾರೆ! ಮುಂದೆ ಯೂಸುಫ್ ಜುಲೈಖಾಳನ್ನು ವರಿಸುತಾನೆ. ಇದು ಜನರು ಕಟ್ಟಿದ ಯುಸೂಫ್-ಜುಲೈಖಾರ ಕಥೆ. ಹೀಗೆ ಆಗಿದ್ದರೆ ಅದೆಷ್ಟು ಚೆನ್ನಾಗಿತ್ತು ಎಂದು ನಾವೆಲ್ಲರೂ ಬಯಸುವ ಕಟ್ಟು ಕತೆ.
ಜುಲೈಖಾ ಎನ್ನುವ ಪಾತ್ರವನ್ನು ನನ್ನ ಹಲವು ಗೆಳೆಯರು ಅಮೃತಮತಿಗೆ ಹೋಲಿಸಿದ್ದಿದೆ. ಇನ್ನೊಬ್ಬ ಗೆಳೆಯ ಯಾವುದೋ ಮಾತಿನ ಭರದಲ್ಲಿ ಯೂಸುಫ್ ಮತ್ತು ಜುಲೈಖಾ ಸಂಬಂಧವನ್ನು ಮೀರಾ ಮತ್ತು ಕೃಷ್ಣರ ನಡುವಿನ ಸಂಬಂಧವಾಗಿ ಪರಿಭಾವಿಸಬೇಕು ಎಂದು ಹೇಳಿದ್ದಿದೆ. ಆದರೆ ಜುಲೈಖಾ ಬೀಬಿ ಅಮೃತ ಮತಿ ಮತ್ತು ಮೀರಾರನ್ನು ಮೀರಿ ಬೆಳೆಯುತ್ತಾಳೆ. ಆಕೆಯದು ಕುರುಡು ಪ್ರೇಮವಲ್ಲ. ತಾನು ಏನನ್ನು ಬಯಸುತ್ತಿದ್ದೇನೆ ಎನ್ನುವುದು ಆಕೆಗೆ ಸ್ಪಷ್ಟವಿದೆ. ಆ ಕುರಿತಂತೆ ಆಕೆಗೆ ಯಾವುದೇ ಪಶ್ಚಾತ್ತಾಪವಿಲ್ಲ. ಅಲ್ಲಿ ಮೀರಾಳ ಅಧ್ಯಾತ್ಮದ ಸ್ಪರ್ಶವೂ ಇಲ್ಲ. ಮೀರಾಳದ್ದು ಆರಾಧನೆ, ಆದರೆ ಜುಲೈಖಾಳದ್ದು ಈಗಷ್ಟೇ ಕುಲುಮೆಯಿಂದ ತೆಗೆದಂತೆ ಧಗಿಸುತ್ತಿರುವ ಪ್ರೇಮ. ಯೂಸುಫನನ್ನು ಗಳಿಸುವುದಕ್ಕಾಗಿ ಸುಳ್ಳು, ಮೋಸ ಎಲ್ಲದಕ್ಕೂ ಆಕೆ ತಯಾರಾಗಿ ನಿಂತಿದ್ದಳು ಮತ್ತು ತನ್ನ ಸ್ಥಾನದಲ್ಲಿದ್ದ ಯಾವ ಹೆಣ್ಣೂ ಅದನ್ನೇ ಮಾಡುತ್ತಿದ್ದಳು ಎನ್ನುವುದನ್ನು ಆಕೆ ದೃಢವಾಗಿ ನಂಬಿದ್ದಳು.
ಜುಲೈಖಾಳಂತಹ ಹೆಣ್ಣಿನ ಮುಂದೆ ತನ್ನ ನೈತಿಕ ಶಕ್ತಿಯನ್ನು ಕಾಪಾಡಿಕೊಂಡ ಯೂಸುಫರನ್ನು ಪರಿಚಯಿಸುವುದಷ್ಟೇ ಕುರ್ಆನಿಗೆ ಮುಖ್ಯವಾಗುತ್ತದೆ. ಆಕೆಯ ಪಾತ್ರ ತನ್ನ ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ಅಲ್ಲಿ ಮುಗಿದು ಹೋಗುತ್ತದೆ. ಆದರೆ ಜನಸಾಮಾನ್ಯ ಆ ಬಳಿಕ ಜುಲೈಖಾಳ ಪಾತ್ರವನ್ನು ತನ್ನದೇ ಕಲ್ಪನೆಯ ಮೂಲಕ ವಿಸ್ತರಿಸುತ್ತಾ ಹೋಗುತ್ತಾನೆ. ಜುಲೈಖಾ ಎಲ್ಲಿ ಸೇರಬೇಕಾಗಿತ್ತೋ ಅಲ್ಲಿಗೆ ಆಕೆಯನ್ನು ಸೇರಿಸುತ್ತಾನೆ.
***
ನನ್ನ ಬಾಲ್ಯದಲ್ಲಿ ಕೇಳಿದ ಆ ಹಾಡು ಈಗಲೂ ಒಮ್ಮೆಮ್ಮೆ ತಂಗಾಳಿಯಂತೆ ನನ್ನನ್ನು ಸವರಿ ಹೋಗುತ್ತದೆ. ದಫ್ ಬಾರಿಸುತ್ತಾ ಹಾಡುತ್ತಿದ್ದ ಆ ಹಾಡು ನನ್ನ ಏಕಾಂತದಲ್ಲಿ ಮೆಲ್ಲಗೆ ಕಣ್ಣು ಪಿಳುಕಿಸುತ್ತವೆ. ಜುಲೈಖಾಳ ಎದೆಬಡಿತದ ಲಯದಂತೆ ದಫ್ನ್ನು ಸ್ಪರ್ಶಿಸುತ್ತಿರುವ ಬೆರಳುಗಳು. ಜಗತ್ತಿನ ಸ್ವಪ್ನಗಳಿಗೆ ಅರ್ಥ ಹೇಳುತ್ತಿರುವ ಯೂಸೂಫನ ಮುಂದೆ ತನ್ನ ಸ್ವಪ್ನಗಳನ್ನು ಬೊಗಸೆಯಲ್ಲಿಟ್ಟು ಜುಲೈಖಾ ವಿನೀತವಾಗಿ ಕೇಳುತ್ತಿದ್ದಾಳೆ ...‘‘ವರ್ಷಗಳಿಂದ ನನ್ನೆದೆಯಲ್ಲಿ ಬಚ್ಚಿಟ್ಟ ಆಸೆಗಳು ನಿನಗೆ ಕಾಣುವುದಿಲ್ಲವೆ...? ನನ್ನ ಸೌಂದರ್ಯ ಕಂಡು ನಿನ್ನಲ್ಲಿ ಯಾವುದೇ ಬಯಕೆಗಳು ಮೂಡುವುದಿಲ್ಲವೆ...!?’’
Subscribe to:
Post Comments (Atom)
nimma baraha tumba ishtavayitu. Julikalannu gandagiyu Yusufnannu hennagiyu badalayisi odidaru kateya artha badalagadu.Idu endendu mugiyada hadu.
ReplyDelete