Thursday, June 23, 2011

ಚಪ್ಪರ ಕಳಚುವ ಹೊತ್ತು


ನನ್ನ ‘ಪ್ರವಾದಿಯ ಕನಸು’ ಸಂಕಲನದಿಂದ ಆಯ್ದ ಇನ್ನೊಂದು ಕವಿತೆ ನಿಮ್ಮ ಮುಂದಿದೆ.


ಹಸಿದ ಹೊಟ್ಟೆ
ತೆರೆದ ಬಾಯಿ
ಕಸದ ಬುಟ್ಟಿಗೆ ಗೊತ್ತು
ಇದು
ಚಪ್ಪರ ಕಳಚುವ ಹೊತ್ತು!

ಹಳಸಿದ ಅನ್ನ
ಮಾಸಿದ ಬಣ್ಣ-ಸುಣ್ಣ
ಕಟ್ಟಿದ ತೋರಣ
ಯಾರಲ್ಲಿ....ಕಸಬರಿಕೆ ತನ್ನಿ
ಅದರ ಹೊಟ್ಟೆಗೆ ಸುರಿದು ಬನ್ನಿ!

ಬೇರು ಬಿಟ್ಟರೆ ಕಂಬಗಳು
ನೆಲದಾಳಕ್ಕೆ
ಕೊಡಲಿಯಿಟ್ಟು ಮುರಿದು ಬಿಡಿ
ಸುಕ್ಕು ಬಿದ್ದ ಜರಿ ಕಾಗದಗಳ ಕಿತ್ತು
ಬಿಸಿ ನೀರು ಕಾಯಿಸುವುದಕ್ಕೆ
ಒಳಗೆ ಕೊಡಿ!

ಬಾಡಿಗೆ ತಂದ ಪ್ಲೇಟು-ಲೋಟ
ಲೆಕ್ಕ ಮಾಡಿ
ನಿಮ್ಮ ನಿಮ್ಮ ಎದೆಗಳನ್ನು ತಡವಿ
ಇನ್ನೂ ಉರಿಯುತ್ತಿದ್ದರೆ ಬಣ್ಣದ ದೀಪ
ಆರಿಸಿ ಜಾಗೃತೆ
ಬಾಡಿಗೆಯವನದು ಪಾಪ!

ನಿದ್ದೆ ಕಳಚಿ ಎದ್ದವರ ಕಣ್ಣುಗಳಲ್ಲಿ
ಪಾಳು ಬಿದ್ದ ಮನೆ
ಆಕಾಶವ ತುಂಬಿಕೊಂಡು ನಿನ್ನೆ
ನಕ್ಷತ್ರಗಳ ಗಿಲಕಿ ಆಡಿದವರು
ಇರುಳ ಕಂಬಳಿಯಂತೆ ಹೊದ್ದು
ನೆಲ ಮುಟ್ಟಿದ ಚಪ್ಪರ-
ವನ್ನೇ ನೋಡುತ್ತಾರೆ ಕದ್ದು!

ಗೋಡೆ ತುಂಬಾ...
ಹಚ್ಚಿಟ್ಟ ಮದಿರಂಗಿಯಂತೆ
ಯಾರ್ಯಾರೋ ಊರಿದ್ದ ಗುರುತು
ಇನ್ನೊಂದು ಹಬ್ಬ-ಹರಿದಿನದ
ನಿರೀಕ್ಷೆಯಲ್ಲಿ
ನೆರಳಂತೆ ಮನೆ ತುಂಬಾ ಸುಳಿಯುವವರು
ಉಳಿಯುವವರು!

ಕತ್ತಲು ಇನ್ನೂ ಹರಿದಿಲ್ಲ
ವೌನ ಮುರಿದಿಲ್ಲ
ಗಪ್ಪೆಂದರೂ ಹಕ್ಕಿ-ಪಿಕ್ಕಿಗಳ ದನಿಯಿಲ್ಲ
ಓಯ್...ಚಪ್ಪರ ಕಳಚುವುದಕ್ಕೆ
ಇನ್ನೇಕೆ ಹೊತ್ತು!?
ಮದುವೆ ಮುಗಿಯಿತು
ಮದುಮಗಳೀಗ ಮದುಮಗನ ಸೊತ್ತು!

No comments:

Post a Comment