Monday, May 16, 2011

ಮದರಸದ ದಿನಗಳು-1 ಮನೆ ಮನೆಯ ಬುತ್ತಿಯೂಟ...


ನನ್ನನ್ನು ಶಾಲೆಯ ದಿನಗಳು ಹೇಗೆ ಬೆಳೆಸಿದೆಯೋ ಹಾಗೆಯೇ ಮದರಸದ ದಿನಗಳೂ ಬೆಳೆಸಿದೆ. ಅಂದಿನ ನೆನಪುಗಳನ್ನು ಆಗಾಗ ನಿಮ್ಮಲ್ಲಿ ಹಂಚಿಕೊಳ್ಳಬೇಕು ಎಂದು ಬಯಸಿದ್ದೇನೆ. ಇಲ್ಲಿ ದಿನಗಳ ಮೊದಲ ಬುತ್ತಿಯನ್ನು ನಿಮ್ಮ ಮುಂದೆ ತೆರೆದಿದ್ದೇನೆ.ಇತ್ತೀಚೆಗೆ ನನ್ನ ಗೆಳೆಯನನ್ನು ನೋಡಲೆಂದು ಆಸ್ಪತ್ರೆಗೆ ಹೋದಾಗ ಅವರ ಭೇಟಿಯಾಯಿತು. ಅವರೆಂದರೆ ಇನ್ನಾರೂ ಅಲ್ಲ, ನನಗೆ ಮದರಸದಲ್ಲಿ ಕಲಿಸಿದ ಗುರುಗಳು. ತುಂಬಾ ಅಂದರೆ ತುಂಬಾ ಹಿಂದೆ...ನನಗೆ ಕುರ್‌ಆನ್ ಜೊತೆಗೆ ಬದುಕಿನ ಒಳಿತುಕೆಡುಕುಗಳನ್ನು ಕೆಲಕಾಲವಾದರೂ ಕಲಿಸಿದವರು.ನೋಡಿದಾಕ್ಷಣ ನನಗೆ ಅವರ ಮುಖ ಪರಿಚಯವಾಯಿತು. ಮೂಲತಃ ಕೇರಳದವರು. ಬಹುಶಃ ಕಾಸರಗೋಡಿರಬೇಕು. ನನಗವರ ಹೆಸರು ಗೊತ್ತಿಲ್ಲ. ವೃದ್ಧಾಪ್ಯ ಅವರ ಮುಖವನ್ನು ಜರ್ಜರಿತ ಗೊಳಿಸಿತ್ತು. ಕುಳಿತದಲ್ಲೇ ಯಾವುದೋ ಯೋಚನಾ ಲಹರಿಯಲ್ಲಿದ್ದರು. ನಾನು ನೇರ ಅವರ ಮುಂದೆ ನಿಂತು ‘ಅಸ್ಸಲಾಂ ಅಲೈಕುಂ’ ಅಂದೆ. ಅವರು ಬೆಚ್ಚಿಬಿದ್ದವರಂತೆ ತಲೆಯೆತ್ತಿ ‘ವಅಲೈಕು ಸಲಾಂ’ ಎಂದರು. ಅಷ್ಟೇ. ಬಿಳಿ ಲುಂಗಿ ಉಟ್ಟು, ಬಟ್ಟೆ ಧರಿಸಿ, ಬಿಳಿ ಮುಂಡಾಸು ಧರಿಸಿದ ಮುಸ್ಲಿಯಾರುಗಳಿಗೆ ಸಲಾಂ ಹೇಳುವುದು ಒಂದು ಪರಿಪಾಠ. ಹಾಗೆಯೇ ಇವನಾರೋ ಸಲಾಂ ಹೇಳಿರಬೇಕೆಂದು ಮತ್ತೆ ತನ್ನ ಲೋಕದೊಳಗೆ ಇಳಿದರು. ನನ್ನ ನೆನಪಿರಲಿಕ್ಕಿಲ್ಲ ಎಂಬ ಅನುಮಾನದಿಂದ ನಾನು ಅಲ್ಲಿಂದ ಹೊರಟೆ.

ಅವರಿಗೆ ನನ್ನ ನೆನಪಿಲ್ಲದೇ ಇರುವುದಕ್ಕೂ ಒಂದು ಕಾರಣವಿದೆ. ಸಾಧಾರಣವಾಗಿ ಅಂದು(ಇಂದೂ ಕೂಡ) ನಮ್ಮ ಮದರಸದಲ್ಲಿ ಒಬ್ಬ ವೌಲವಿ ಹೆಚ್ಚೆಂದರೆ ಒಂದು ವರ್ಷ ಬಾಳಿಕೆ ಬರುತ್ತಿದ್ದರು. ಅಷ್ಟರಲ್ಲೇ ಜಮಾತಿನ ಯಾರಾದರೊಬ್ಬ ಏನಾದರೂ ಒಂದು ನೆಪದಿಂದ ಅವರನ್ನು ಓಡಿಸುತ್ತಿದ್ದರು. ಈ ಮುಸ್ಲಿಯಾರರು ಕನಿಷ್ಟ ಹೆಚ್ಚೆಂದರೆ ಎಂಟು ತಿಂಗಳು ಬಾಳಿಕೆ ಬಂದಿರಬಹುದು. ಆದರೆ ಇವರನ್ನು ನಾನು ನೆನೆದುಕೊಳ್ಳಲು ಕಾರಣವಿದೆ. ಈ ಮುಸ್ಲಿಯಾರರಿಗೆ ನಾನು ಕುರ್‌ಆನ್ ಪಠಿಸುವುದನ್ನು ತುಂಬಾ ಆಸ್ವಾದಿಸುತ್ತಿದ್ದರು. ಅವರು ಹೇಳಿಕೊಟ್ಟಂತೆಯೇ ತುಂಬಾ ರಾಗವಾಗಿ ಪಠಿಸುತ್ತಿದ್ದೆ. ಅಚ್ಚ ಮಲಯಾಳದಲ್ಲಿ ಅವರು ಮಾತನಾಡುತ್ತಿದ್ದರೂ, ಆ ಮಾತಿನಲ್ಲಿ ನನ್ನ ಕುರಿತಂತೆ ಅವರಿಗಿದ್ದ ವಾತ್ಸಲ್ಯವನ್ನು ನಾನು ಗುರುತಿಸುತ್ತಿದ್ದೆ. ಬಹುಶಃ ಮದರಸದಲ್ಲಿ ನನ್ನನ್ನು ಇಷ್ಟಪಟ್ಟ ಒಬ್ಬರೇ ಒಬ್ಬ ಮುಸ್ಲಿಯಾರರೆಂದರೆ ಇವರೇ ಇರಬೇಕು. ಶಾಲೆಯಲ್ಲಿ ನನ್ನನ್ನು ಇಷ್ಟಪಡುತ್ತಿದ್ದ ಒಬ್ಬ ಮೇಷ್ಟ್ರಿರಿದ್ದರು. ಅವರ ಹೆಸರು ನಾರಾಯಣ ಮಾಷ್ಟ್ರು. ಅವರಂತೆಯೇ ಈ ಮುಸ್ಲಿಯಾರ್ ಕೂಡ ನನ್ನನ್ನು ಇಷ್ಟಪಡುತ್ತಿದ್ದರು. ಆದರೆ, ಇಂದು ಈ ಆಸ್ಪತ್ರೆಯಲ್ಲಿ ಮಾತ್ರ ನಾವು ಪರಸ್ಪರ ಅಪರಿಚಿತರಂತೆ ಸಂಧಿಸಿದೆವು.
***


ನಮ್ಮ ಮದರಸದಲ್ಲಿ ಇಬ್ಬರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದರು. ಒಬ್ಬ ಮುಸ್ಲಿಯಾರ್. ಅಂದರೆ, ತುಸು ಹೆಚ್ಚು ಕಲಿತವರು. ನಮಾಝ್‌ನ ನೇತೃತ್ವವನ್ನು ವಹಿಸಿಕೊಳ್ಳುವುದು, ಶುಕ್ರವಾರ ಜುಮ್ಮಾ ನಮಾಝ್‌ನ ಸಂದರ್ಭದಲ್ಲಿ ಪ್ರವಚನವನ್ನು ನೀಡುವುದು ಇತ್ಯಾದಿ ಮುಖ್ಯ ಕೆಲಸ ಇವರಿಗೆ. ಇವರಿಗೆ ಹೆಚ್ಚೆಂದರೆ ಆಗ ಎರಡು ಸಾವಿರ ರೂಪಾಯಿ ಸಂಬಳವಿತ್ತು. ಇವರಿಗೆ ಸಹಾಯಕರಾಗಿ ಒಬ್ಬ ಮುಕ್ರಿಯನ್ನು ನೇಮಿಸುತ್ತಿದ್ದರು. ಮಸೀದಿ ನೆಲ ಒರೆಸುವುದು, ಮಸೀದಿಯ ಕೆರೆಯಲ್ಲಿ ನೀರು ಖಾಲಿಯಾಗದಂತೆ ನೋಡಿಕೊಳ್ಳುವುದು ಇತ್ಯಾದಿ ಇತ್ಯಾದಿ ಇವರ ಕೆಲಸ. ಬೆಳಗ್ಗೆ ಮದರಸದಲ್ಲಿ ಒಂದನೆ ಮತ್ತು ಎರಡನೆ ಮಕ್ಕಳಿಗೆ ಈ ಮುಕ್ರಿಯೇ ಕಲಿಸುತ್ತಿದ್ದರು. ಮುಕ್ರಿಗೆ ಹೆಚ್ಚೆಂದರೆ ಮುನ್ನೂರು ರೂಪಾಯಿ ಸಂಬಳ. ಉಳಿದ ಮುಖ್ಯ ತರಗತಿಗಳ ಉಸ್ತುವಾರಿಯನ್ನು ಮುಸ್ಲಿಯಾರ್ ನೋಡಿಕೊಳ್ಳುತ್ತಿದ್ದರು.
ಇವರಿಗೆ ಊಟವನ್ನು ಪ್ರತಿದಿನ ಮನೆ ಮನೆಯಿಂದ ತರಲಾಗುತ್ತಿತ್ತು. ನಮ್ಮ ಜಮಾತಿನಲ್ಲಿ ಆಗ ಸುಮಾರು 60 ಮನೆಗಳಿದ್ದವು. ಆಯ್ದ 30 ಮನೆಗಳನ್ನು ಗುರುತಿಸಲಾಗುತ್ತಿತ್ತು. ತಿಂಗಳಿಗೊಮ್ಮೆ ಒಂದೊಂದು ಮನೆಗೆ ಊಟದ ಜವಾಬ್ದಾರಿ ಬೀಳುತ್ತಿತ್ತು. ಮನೆಯ ತಾಯಂದಿರಿಗೆ ಈ ಊಟದ ದಿನ ಹತ್ತಿರ ಬರುತ್ತಿದ್ದಂತೆಯೇ ತಲೆ ಬಿಸಿ. ‘‘ನಾಳೆ ಮೊಯ್ಲಿರಿಗೆ ಊಟದ ದಿನ. ಎಂತ ಮಾಡುವುದೂಂತ ಗೊತ್ತಾಗುವುದಿಲ್ಲ...’’ ಸಾಧಾರಣವಾಗಿ ಕೋಳಿ, ಅಥವಾ ಮೀನು ಪದಾರ್ಥಗಳನ್ನೇ ಮಾಡಿಕೊಡುತ್ತಿದ್ದೆವು. ತಿಂಗಳಿಗೊಮ್ಮೆ ತಾನೆ. ಆದರೆ ಈ ಮೊಯ್ಲೆರುಗಳಿಗೆ ಪ್ರತಿದಿನ ಕೋಳಿ ತಿಂದು ತಿಂದೂ ಸಾಕಾಗುತ್ತಿತ್ತು.

ಆದರೆ ಎಲ್ಲಾ ದಿನಗಳು ಒಂದೇ ತರಹ ಇರುತ್ತದೆಯೆಂದು ಹೇಳಲಾಗುವುದಿಲ್ಲ. ಮೊಯ್ಲರಿನ ಮೇಲೆ ಏನಾದರೂ ಸಿಟ್ಟು ಬಂತೋ, ‘ಬುತ್ತಿಯಲ್ಲಿ ಗಂಜಿ ಮತ್ತು ಚಟ್ನಿ’ಯನ್ನು ತುಂಬಿಕೊಡುವುದಿದೆ. ಸಾಧಾರಣವಾಗಿ ಮೊಯ್ಲಿರುಗಳ ಜೊತೆಗೆ ಜಮಾತಿನ ಜನರಿಗೆ ಜಗಳವಾಗುವುದು ಮಕ್ಕಳ ವಿಷಯದಲ್ಲಿ. ಮದರಸದಲ್ಲಿ ಪಾಠ ಕಲಿಸುವಾಗ ಮಕ್ಕಳಿಗೇನಾದರು ಹೊಡೆದರೆ, ಅದನ್ನು ಮಕ್ಕಳು ಮನೆಗೆ ಹೊತ್ತು ಕೊಂಡು ಹೋದರೆ, ಒಂದು ದೊಡ್ಡ ಜಗಳವೇ ನಿರ್ಮಾಣವಾಗಿ ಬಿಡುತ್ತಿತ್ತು. ಒಂದೋ ಬಾಲಕನ ತಂದೆ ನೇರವಾಗಿ ಮದರಸದ ತರಗತಿಗೆ ನುಗ್ಗಿ ಗಲಾಟೆ ಮಾಡುತ್ತಿದ್ದ. ಅಥವಾ ವಾರದ ಮೀಟಿಂಗ್‌ನಲ್ಲ್ಲಿ ಮಸೀದಿ ಪ್ರೆಸಿಡೆಂಟ್‌ನ ಮುಂದೆ ‘‘ನನ್ನ ಮಗನಿಗೆ ಸುಮ್ಮ ಸುಮ್ಮನೆ ಹೊಡೆದಿದ್ದಾನೆ ಅಂವ. ಅವನನ್ನು ಮನೆಗೆ ಕಳುಹಿಸದೇ ಇದ್ದರೆ ನಾನು ತಿಂಗಳ ಊಟ ಕೊಡುವುದಿಲ್ಲ...ಕೋಳಿ ತಿಂದು ತಿಂದು ಚರ್ಬಿ ಅವನಿಗೆ...’’ ಬೆದರಿಕೆ ಹಾಕುತ್ತಿದ್ದ. ಮಾತು ಏಕವಚನಕ್ಕಿಳಿಯುತ್ತಿತ್ತು. ಮಕ್ಕಳ ವಿಷಯದಲ್ಲೇ ಹಲವು ಮುಸ್ಲಿಯಾರುಗಳು ಬಂದ ಬಸ್‌ನಲ್ಲೇ ವಾಪಸ್ ಹೋದದ್ದಿದೆ. ಬಡವರ ಮಕ್ಕಳಿಗೆ ಹೊಡೆದರೆ ಅದು ಹೆಚ್ಚು ಸುದ್ದಿಯಾಗುವುದಿಲ್ಲ. ಆದರೆ ಮಸೀದಿ ಪ್ರೆಸಿಡೆಂಟ್ ಅಥವಾ ಸೆಕ್ರಟರಿಯ ಮಕ್ಕಳಿಗೇನಾದರೂ ತಪ್ಪಿ ಮುಸ್ಲಿಯಾರರ ಬೆತ್ತದೇಟು ಬಿತ್ತೆಂದರೆ, ಆ ಮುಸ್ಲಿಯಾರರ ಗತಿ ಕೆಟ್ಟಿತೆಂದೇ ಅರ್ಥ. ಆದುದರಿಂದ ಸಾಧಾರಣವಾಗಿ ಯಾವುದೇ ಮುಸ್ಲಿಯಾರರು ನಮ್ಮ ಮಸೀದಿಗೆ ಬಂದರೂ ಅವರು ಹೋಗುವುದಕ್ಕೆ ಗಂಟುಮೂಟೆಯೊಂದಿಗೆ ರೆಡಿಯಾಗಿಯೇ ಬರುತ್ತಾರೆ.

ಒಮ್ಮೆ ಹೀಗಾಯಿತು. ನಮ್ಮೂರಿಗೆ ಹೊಸ ಮುಸ್ಲಿಯಾರರ ನೇಮಕವಾಯಿತು. ಮುಸ್ಲಿಯಾರರಿಗೆ ರಾತ್ರಿಯ ಹೊತ್ತು, ರೊಟ್ಟಿಯೋ, ದೋಸೆಯೋ ಆಗಬೇಕು. ಅನ್ನ ಇಳಿಯುವುದಿಲ್ಲ. ಅದಕ್ಕಾಗಿ ಮದರಸದ ಮಕ್ಕಳ ಮುಂದೆ, ರಾತ್ರಿ ‘ನನಗೆ ಅನ್ನ ಆಗುವುದಿಲ್ಲ. ಒಂದೋ ನಾಷ್ಟ ಆಗಬೇಕು. ನಾಷ್ಟಕೊಡುವುದಕ್ಕೆ ಆಗುವುದಿಲ್ಲಾಂತಾದ್ರೆ ಅನ್ನ ನನಗೆ ಬೇಡ. ಗಂಜಿ, ಚಟ್ನಿಯೇ ಸಾಕು’ ಎಂದು ಬಿಟ್ಟರು. ಆದರೆ, ಮಕ್ಕಳು ಮನೆಯಲ್ಲಿ ಹೇಳುವಾಗ ಮಾತ್ರ ವಿಷಯ ಬದಲಾಯಿತು. ‘‘ಹೊಸ ಮೊಯ್ಲಿರಿಗೆ ಅನ್ನ, ಕೋಳಿಸಾರು ಬೇಡವಂತೆ. ಗಂಜಿ ಚಟ್ನಿಯೇ ಇಷ್ಟವಂತೆ’’
ಸರಿ, ಎಲ್ಲ ಹೆಂಗಸರು ತುಂಬಾ ಸಂತೋಷದಿಂದ ರಾತ್ರಿಗೆ ಗಂಜಿ ಚಟ್ನಿ ಮಾಡಿಕೊಡತೊಡಗಿದರು. ಮೊಯ್ಲಿರಿಗೋ ಗಂಜಿ ಕುಡಿದು ಕುಡಿದು ಸಾಕಾಯಿತು. ವರ್ಷಕ್ಕೊಮ್ಮೆ ಮಸೀದಿಯ ವತಿಯಿಂದ ರಾತ್ರಿ ಏಳು ದಿನಗಳ ಮತಪ್ರಸಂಗವನ್ನು ಹಮ್ಮಿಕೊಳ್ಳುತ್ತಾರೆ. ಹೆಂಗಸರೂ ಈ ಮತಪ್ರಸಂಗ ಕೇಳಲು ಬರುತ್ತಾರೆ. ಮೊಯ್ಲಾರರು ಈ ಸಮಯವನ್ನು ಸರಿಯಾಗಿಯೇ ಬಳಸಿಕೊಂಡರು. ಮತ ಪ್ರಸಂಗ ಮಾಡುತ್ತಾ ಮಾಡುತ್ತಾ ಮಧ್ಯದಲ್ಲೇ ತನ್ನ ಊಟದ ಪ್ರಸ್ತಾಪವನ್ನೂ ಮಾಡಿ ಬಿಟ್ಟರು ‘‘ಈ ಊರಿನ ಹೆಂಗಸರು ಭಯಂಕರ. ನಾಷ್ಟ ಕೊಡುವುದಕ್ಕಾಗುವುದಿಲ್ಲವಾದರೆ ಗಂಜಿ ಸಾಕು ಎಂದರೆ...ಗಂಜಿಯನ್ನೇ ಪ್ರತಿ ದಿನ ಕೊಡುತ್ತಿದ್ದಾರೆ...’’ ಸಂದೇಶ ತಲುಪುವಲ್ಲಿಗೆ ತಲುಪಿಸಿತು. ಹೆಂಗಸರೆಲ್ಲ ಪಿಸಪಿಸನೆ ಒಬ್ಬರಿಗೊಬ್ಬರು ಮಾತನಾಡುತ್ತಾ ನಗತೊಡಗಿದರು. ಮರುದಿನದಿಂದ ರಾತ್ರಿ ನಾಷ್ಟದ ವ್ಯವಸ್ಥೆಯಾಯಿತು.

ಒಮ್ಮೆ ಒಂದು ಘಟನೆ ನಡೆಯಿತು. ನಾನಾಗ ಬಹುಶಃ ಮದರಸದ ಮೂರನೆ ತರಗತಿಯಲ್ಲಿರಬೇಕೆನ್ನಿಸುತ್ತದೆ. ಬೆಳಗ್ಗೆ ಮುಸ್ಲಿಯಾರರಿಗೆ ತಂದ ಬುತ್ತಿಯಲ್ಲಿ ಪುಂಡಿ ತಂದಿದ್ದರು. ಮುಸ್ಲಿಯಾರರಿಗೇಕೋ ಪುಂಡಿ ಇಳಿಯುತ್ತಿರಲಿಲ್ಲ. ಸರಿ, ಅವರು ಬೆಳಗ್ಗೆ ನಾಷ್ಟ ಮಾಡದೆಯೇ ಮದರಸದೊಳಗೆ ಬಂದರು. ನಮಗೆಲ್ಲ ಆತಂಕ. ‘ಮೊಯಿಲಾರ್ ನಾಷ್ಟ ಮಾಡಲಿಲ್ಲವಂತೆ’ ‘ಪಾಪ, ಪುಂಡಿ ಮಾಡಿದ್ದಂತೆ’ ‘ಯಾರಾದರೂ ಮುಸ್ಲಿಯಾರರಿಗೆ ಪುಂಡಿ ಮಾಡಿ ಕೊಡುತ್ತಾರ?’ ನಮ್ಮಾಳಗೆ ಗುಸುಗುಸು ಪಿಸಿಪಿಸಿ. ಅಷ್ಟರಲ್ಲೇ ನನ್ನ ಪಕ್ಕದಲ್ಲಿ ಕುಳಿತ ಜಮಾಲ್ ಎನ್ನುವ ಹುಡುಗ ಅಳತೊಡಗಿದ. ನೋಡಿದರೆ, ಅವತ್ತು ಮೊಯಿಲಾರಿಗೆ ಜಮಾಲ್‌ನ ಮನೆಯಿಂದ ಊಟ. ಜಮಾಲ್ ಬಿಕ್ಕುತ್ತಾ ಬಿಕ್ಕುತ್ತಾ ಹೇಳಿದ ‘‘ಮನೆಯಲ್ಲಿ ತಾಯಿಗೆ ಉಷಾರಿರಲಿಲ್ಲ...ಅದಕ್ಕೆ ಅಕ್ಕ ಪುಂಡಿ ಮಾಡಿದ್ದು....’’ ಎಂದೆಲ್ಲಾ ಸಮಜಾಯಿಶಿ ನೀಡತೊಡಗಿದ. ನಾವೆಲ್ಲ ಅವನನ್ನು ವಿಲನ್‌ನನ್ನು ನೋಡಿದಂತೆ ನೋಡಿದೆವು. ಅವನು ಕೊಟ್ಟ ಕಾರಣ ಸಕಾರಣ ಎಂದು ನಮಗ್ಯಾರಿಗೂ ಅನ್ನಿಸಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಮುಸ್ಲಿಯಾರರು ಪಾಪ ನಾಷ್ಟವೇ ಮಾಡಿರಲಿಲ್ಲ. ಬರಿ ಹೊಟ್ಟೆಯಲ್ಲಿದ್ದಾರೆ. ತಾಯಿಗೆ ಉಷಾರಿಲ್ಲ ಅಂತ ಹೇಳಿ ಯಾರಾದರೂ ‘ಪುಂಡಿ’ ಮಾಡಿಕೊಡುತ್ತಾರ? ನಾವೆಲ್ಲ ಅವನನ್ನು ಕೆಕ್ಕರಿಸಿ ನೋಡಿದೆವು. ಅಂದಿಡೀ ಅವನು ಅಳುತ್ತಲೇ ಇದ್ದ.

2 comments:

  1. ‘ಪುಂಡಿ’ಅಂದ್ರೆ ಏನು ಅಂತ ಗೊತ್ತಾಗಲಿಲ್ಲ

    ReplyDelete
  2. ಹಿಟ್ಟನ್ನು ಉರುಟಾಗಿ ಮುದ್ದೆ ಮಾಡಿ ಹಬೆಯಲ್ಲಿ ಬೇಯಿಸುತ್ತಾರಲ್ಲ, ಅದು.

    ReplyDelete