Thursday, March 10, 2011

ಹೀಗೊಬ್ಬ ಗುರು


ಅವರ ಹೆಸರು ಪ್ರಾಣೇಶ ಕುಲಕರ್ಣಿ. ಗೆಳೆಯರು ಪ್ರೀತಿ ಹೆಚ್ಚಾದರೆ ‘ಕುಲ್ಕಾ’ ಎಂದು ಕರೆಯುತ್ತಿದ್ದರು. ನನಗೆ ಪ್ರೀತಿ ಉಕ್ಕಿದರೆ ‘ಗುರುಗಳೇ’ ಎಂದು ಕರೆಯುತ್ತಿದ್ದೆ. ಮುಂಬೈಯ ‘ಕರ್ನಾಟಕ ಮಲ್ಲ’ ದೈನಿಕದಲ್ಲಿ ಅವರು ಹಿರಿಯ ಉಪಸಂಪಾದಕರಾಗಿದ್ದರು. ಈ ಮೊದಲು ಅವರು ‘ಸಂಯುಕ್ತ ಕರ್ನಾಟಕ’ದಲ್ಲಿ ಉಪಸಂಪಾದಕರಾಗಿದ್ದರು. ಅಲ್ಲಿಯ ಮುಷ್ಕರದಿಂದ ಕೆಲಸ ಕಳೆದುಕೊಂಡದ್ದನ್ನು ಅವರು ಆಗಾಗ ನೆನಪಿಸಿಕೊಳ್ಳುತ್ತಿದ್ದರು. ‘ನನಗಿನ್ನೂ ಆ ಪತ್ರಿಕೆಯಿಂದ ಒಂದಿಷ್ಟು ದುಡ್ಡು ಬರುವುದಕ್ಕೆ ಬಾಕಿ ಇದೆ. ಕೇಸು ಕೋರ್ಟ್‌ನಲ್ಲಿದೆ’ ಎಂದೆಲ್ಲ ಹೇಳುತ್ತಿದ್ದರು. ಎಲ್ಲವನ್ನು ನಂಬುವುದು ಹೇಗೆ ಎಂದು ನಾನು ಸುಮ್ಮ ಸುಮ್ಮಗೆ ನಂಬಿದಂತೆ ನಟಿಸುತ್ತಿದ್ದೆ. ಅವರು ಹೇಳಿದ್ದರಲ್ಲಿ ನಿಜ ಇದ್ದಿರಲೂ ಬಹುದು.

ಅವರು ಇದ್ದಲ್ಲಿ ನಗು ‘ಭುಗ್ಗೆಂ’ದು ಏಳುತ್ತಿತ್ತು. ಡೆಸ್ಕಲ್ಲಿ ಬಂದು ಕೂತದ್ದೇ, ಯಾರನ್ನಾದರೂ ಮಿಮಿಕ್ರಿ ಮಾಡುವುದಕ್ಕೆ ತೊಡಗುತ್ತಿದ್ದರು. ನಾನಿಲ್ಲದ ಹೊತ್ತಲ್ಲಿ ನಾನು ಮಾತನಾಡುವ ಶೈಲಿಯನ್ನೇ ಅನುಕರಣೆ ಮಾಡುತ್ತಿದ್ದರೆಂಬ ಅನುಮಾನ ನನಗೆ ಹಲವು ಬಾರಿ ಕಾಡಿದ್ದಿದೆ. ನೂರೆಂಟು ತಾಪತ್ರಯಗಳನ್ನು ಬೆನ್ನಲ್ಲಿ ಹೊತ್ತು ತಿರುಗುತ್ತಿದ್ದ ನನಗೆ ಅವರ ಸಹವಾಸ ಹಿತ ಎನಿಸುತ್ತಿತ್ತು. ಮಹಮ್ಮದ್ ರಫಿಯ ಹಾಡುಗಳನ್ನು ಎಷ್ಟು ಸೊಗಸಾಗಿ ಹಾಡುತ್ತಿದ್ದರೆಂದರೆ, ನನ್ನ ಸಮಸ್ಯೆಗಳೆಲ್ಲ ಗಾಳಿಯಲ್ಲಿ ತೇಲುತ್ತಾ ತೇಲುತ್ತಾ ಇಲ್ಲವಾಗುತ್ತಿತ್ತು. ಮನಸ್ಸಿಗೆ ತುಂಬಾ ಬೇಜಾರಾದಾಗ ಅವರ ಬಳಿ ಬಂದು ‘ಗುರುಗಳೇ ಒಂದು ರಫೀ ಹಾಡು ಹಾಡಿ’ ಎಂದರೆ, ಅದಕ್ಕಾಗಿಯೇ ಕಾಯುತ್ತಿದ್ದವರಂತೆ ರಫಿಯ ಯಾವುದಾದರೂ ಹಾಡಿನ ಎರಡು ಸಾಲುಗಳನ್ನು ಹಾಡುತ್ತಿದ್ದರು.

ಅಕಾಡೆಮಿಕ್ ಆದಂತಹ ಎಲ್ಲವುಗಳಿಗೆ ಅವರು ತುಸು ಹೆದರುತ್ತಿದ್ದರು. ಕವನಗಳ ಬಗ್ಗೆಯೂ ಇಂತಹ ಒಂದು ಭಯ ಅವರಿಗಿತ್ತು. ತನಗೆ ಅರ್ಥವಾಗದೇ ಇರುವಂತಹದೇನೋ ಅದರಲ್ಲಿದೆ ಎನ್ನುವ ಭಯ ಅದಾಗಿದ್ದಿರಲೂಬಹುದು. ನನ್ನ ಕವಿತೆಗಳು ಆಗಾಗ ಒಳ ನಾಡಿನ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದರಿಂದ ಆ ಕುರಿತು ಒಂದು ಸಣ್ಣ ಭಯ ನನ್ನ ಬಗ್ಗೆ ಇತ್ತು. ಆದರೆ ಬದುಕಿನ ಕುರಿತ ಅವರ ಅಪಾರ ಮೋಹ, ಜೀವನ ಪ್ರೀತಿಯ ಮುಂದೆ ನನ್ನ ಕವಿತೆ ಏನೇನೂ ಅಲ್ಲ ಎನ್ನುವುದು ನನಗೆ ಸ್ಪಷ್ಟವಿತ್ತು.

ಅವರನ್ನು ಅಂಟಿಕೊಂಡಿದ್ದ ಕುಡಿತದ ಚಟವನ್ನು ಯಾವ ರೀತಿಯಲ್ಲಿ ವ್ಯಾಖ್ಯಾನಿಸಬೇಕೆನ್ನುವುದು ನನಗೆ ಈ ಕ್ಷಣಕ್ಕೂ ಹೊಳೆಯುತ್ತಿಲ್ಲ. ಅವರ ಪ್ರತಿಭೆಯ ಮೂಲ ಸೆಲೆಯೇ ಕುಡಿತವಾಗಿದ್ದಿರಬಹುದೋ ಎನ್ನಿಸುವಷ್ಟು ಅವರು ಕುಡಿಯುತ್ತಿದ್ದರು. ಅದಕ್ಕೆ ಯಾವುದೇ ಶಿಸ್ತಿರಲಿಲ್ಲ. ಕೆಲವೊಮ್ಮೆ ಕುಡಿದೇ ಕಚೇರಿಗೆ ಬರುತ್ತಿದ್ದರು. ಅನೇಕ ಸಂದರ್ಭದಲ್ಲಿ ಅದು ಅವರನ್ನು ತೀರಾ ಸಣ್ಣ ಮಟ್ಟಕ್ಕೆ ಇಳಿಸುತ್ತಿತ್ತು. ಯಾರೊಂದಿಗೆ ಜಗಳವಾಡಿ ಮಾತು ನಿಲ್ಲಿಸಿರುತ್ತಿದ್ದರೋ ಅವರೊಂದಿಗೇ ಚಿಲ್ಲರೆ ಹಣಕ್ಕಾಗಿ ಕೈ ಚಾಚುವಂತೆ ಮಾಡುತ್ತಿತ್ತು.
ಒಮ್ಮೆ ಯಾವುದೋ ಕಾರಣಕ್ಕೆ ನಾನು ಸಿಟ್ಟಿನಿಂದ ನುಡಿದಿದ್ದೆ ‘ಗುರುಗಳೇ, ಇನ್ನು ನಿಮ್ಮೆಂದಿಗೆ ಮಾತನಾಡುವುದಿಲ್ಲ. ನೀವು ಕುಡಿದಾಗ ಒಂದು ಮಾತಾಡ್ತೀರಿ. ಕುಡಿಯದೇ ಇದ್ದಾಗ ಒಂದು ಮಾತಾಡ್ತೀರಿ..’
‘ಹೌದು ಮತ್ತೆ. ಇಲ್ಲಾಂದ್ರೆ ಹೆಂಡಕ್ಕೆ ರೊಕ್ಕ ಕೊಡೋದು ಯಾಕ? ಕುಡಿದಾಗ ಒಂದು ಮಾತಾಡ್ಬೇಕು. ಕುಡಿಯದೇ ಇದ್ದಾಗ ಇನ್ನೊಂದು ಮಾತಾಡ್ಬೇಕು..’ ಎಂದು ನನ್ನನ್ನು ಅಣಕಿಸಿದ್ರು. ಕರ್ನಾಟಕ ಮಲ್ಲದಿಂದ ನಾನು ವಿದಾಯ ಹೇಳುವ ದಿನ, ವಿದಾಯ ಭಾಷಣದಲ್ಲೂ ಅದನ್ನೇ ‘ಮಿಮಿಕ್ರಿ’ ಮಾಡಿ ಎಲ್ಲರನ್ನು ನಗಿಸಿದ್ದರು.

ಕುಡಿತ ಅವರನ್ನು ವರ್ಣರಂಜಿತ ವ್ಯಕ್ತಿಯನ್ನಾಗಿ ಮಾಡಿತ್ತು ಹೌದು. ಆದರೆ ಅವರ ವೈಯಕ್ತಿಕ ಬದುಕನ್ನು ಅದು ಪಾತಾಳಕ್ಕೆ ತಳ್ಳುತ್ತಿತ್ತು. ಒಳ್ಳೆಯ ಬರಹಗಾರರೂ ಆಗಬಹುದಾಗಿದ್ದ ಅವರು ತಮ್ಮ ಕುಡಿತಕ್ಕೆ ಹಣ ಹೊಂದಾಣಿಕೆ ಮಾಡುವುದಕ್ಕಾಗಿ ‘ಪೊಲೀಸ್ ನ್ಯೂಸ್’ನಂತಹ ಪತ್ರಿಕೆಗೆ ‘ಹೆಣ್ಣೇ ಹೇಳು ನಿನ್ನ ಗೋಳು’ನಂತಹ ಬರಹಗಳನ್ನು ಬರೆಯುತ್ತಿದ್ದರು. ‘ಗುರುಗಳೇ ಕತೆ ಬರೀರಿ.. ಲೇಖನ ಬರೀರಿ..’ ಎಂದು ನನ್ನ ಮತ್ತು ನನ್ನ ಗೆಳೆಯರ ಒತ್ತಡಕ್ಕೆ ಒಮ್ಮೆ ಒಂದು ಕತೆ ಬರೆದಿದ್ದರು. ಕತೆಯ ಹೆಸರು ‘ಸತ್ತೆಪ್ಪ’. ‘ಸತ್ತೆಪ್ಪ’ ಎನ್ನುವುದು ಕಥಾ ನಾಯಕನ ಹೆಸರು. ಹೆಣವನ್ನು ಹೂಳುವುದು ಆತನ ಕಾಯಕ. ಆದರೆ ಆತ ಸತ್ತಾಗ ಆತನ ಹೆಣವನ್ನು ದಫನ ಮಾಡುವವರಿಲ್ಲದೆ ಅನಾಥವಾಗುವುದೇ ಕಥಾವಸ್ತು. ಅದನ್ನು ತರಂಗಕ್ಕೆ ಕಳುಹಿಸಿದರು. ಅದು ಬಹುಮಾನಿತ ಕತೆಯಾಗಿ ಆಯ್ಕೆಯಾಯಿತು. ಹಲವು ತಿಂಗಳ ಕಾಲ ಆ ಬಹುಮಾನಿತ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾದರು. ಇನ್ನು ಮುಂದೆ ತಿಂಗಳಿಗೊಂದು ಕತೆ ಬರೀತೀನಿ ಎಂದರು. ಕುಡಿತವನ್ನು ಬಿಟ್ಟೆ ಎಂದರು.ಎರಡು ದಿನ ಕುಡಿತವನ್ನು ಬಿಟ್ಟರು ಕೂಡ. ‘ಕುಡಿತವನ್ನು ಬಿಟ್ಟೆ’ಎಂದು ಎಲ್ಲರಿಗೂ ಸಿಹಿ ಹಂಚಿದರು. ಮೂರನೆ ದಿನ ಕುಡಿದೇ ಬಂದರು. ಸಿಟ್ಟು ಮುಖದಿಂದ ಅವರನ್ನು ನೋಡಿದ್ದಕ್ಕೆ ‘ಕುಡಿಯದೇ ನೀವೆಲ್ಲ ಸಾಚಾ ಇದ್ದೀರೋ.. ನೀವೆಲ್ಲ ಕುಡಿಯದೇ ಏನು ಸಾಧಿಸಿದ್ರಿ?’ ಎಂದು ನಮಗೇ ಧಮಕಿ ಹಾಕಿದರು. ಆದರೂ ಆ ಕ್ಷಣದಲ್ಲಿ ಅವರ ಕಣ್ಣಿನ ಆಳದಲ್ಲಿ ಒಬ್ಬ ಒಳ್ಳೆಯ ಪತ್ರಕರ್ತ, ಲೇಖಕ, ಗೆಳೆಯ ಅಸಹಾಯಕನಾಗಿ ವಿಲ ವಿಲ ಒದ್ದಾಡುತ್ತಿರುವುದನ್ನು ನಾನು ಕಂಡಿದ್ದೆ.

ಯಾವುದೋ ಕಾರಣದಿಂದ ನಾನು ಧಾರಾವಿಯ ಕೋಣೆಯಿಂದ ಹೊರ ಬಿದ್ದಾಗ ಸುಮಾರು ಒಂದು ತಿಂಗಳ ಕಾಲ ಡೊಂಬಿವಿಲಿಯ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದೆ. ರಾತ್ರಿ ಪಾಳಿಯ ಕೆಲಸವನ್ನು ಮುಗಿಸಿ ಜೊತೆಯಾಗಿ ರಾತ್ರಿ 12 ಗಂಟೆಗೆ ಸಯನ್‌ನಲ್ಲಿ ರೈಲು ಹಿಡಿಯುತ್ತಿದ್ದೆವು. ಸುಮಾರು ಒಂದೂವರೆ ಗಂಟೆಯ ಪ್ರಯಾಣ. ಬಾಗಿಲ ಪಕ್ಕದಲ್ಲೇ ಎದುರು ಬದುರಾಗಿ ಕುಳಿತುಕೊಳ್ಳುತ್ತಿದ್ದೆವು. ಕಂಠಪೂರ್ತಿ ಕುಡಿದಿರುತ್ತಿದ್ದ ಅವರು, ಮುಖೇಶನದೊ, ರಫಿಯದೋ ಯಾರದಾದರೊಂದು ಹಾಡಿನ ಸಾಲನ್ನು ಹಿಡಿದು ಬಿಡುತ್ತಿದ್ದರು. ಎಷ್ಟು ಜೋರಾಗಿ ಹಾಡುತ್ತಿದ್ದರೆಂದರೆ ರೈಲಿನಲ್ಲಿದ್ದ ಪ್ರಯಾಣಿಕರೆಲ್ಲ ಅವರ ಸುತ್ತ ಸೇರಿಬಿಡುತ್ತಿದ್ದರು. ಒಮ್ಮೆ ಏನಾಯಿತೆಂದರೆ ಒಬ್ಬ ಪ್ರಯಾಣಿಕ ತೀರ ಭಾವುಕನಾಗಿ ಜೇಬಿನಿಂದ ಹತ್ತು ರೂ. ತೆಗೆದು ಕುಲಕರ್ಣಿಯವರ ಕೈಯಲ್ಲಿ ಇಟ್ಟು ಬಿಟ್ಟ. ಆವರೆಗೆ ಹವ್ಯಾಸಿಯಾಗಿ ಹಾಡುತ್ತಿದ್ದ ಅವರು, ಹಾಡನ್ನೇ ಒಂದು ವೃತ್ತಿ ಮಾಡಿಕೊಂಡು ಬಿಟ್ಟರು.

ಕುಲಕರ್ಣಿಯವರಿಗೆ ಮುದ್ದಾದ ಪುಟಾಣಿ ಮಗಳಿದ್ದಳು. ತುಂಬಾ ಚೂಟಿಯಾದ, ತಂದೆಯನ್ನು ತೀರಾ ಹಚ್ಚಿಕೊಂಡ ಹುಡುಗಿ. ಕುಲಕರ್ಣಿಯವರ ಪತ್ನಿ ಅನಕ್ಷರಸ್ಥರಾದರೂ ಪತಿಯ ಎಲ್ಲ ಅವಾಂತರಗಳ ನಡುವೆ ಸಂಸಾರವನ್ನು ದೂಗಿಸುವುದಕ್ಕೆ ಹಗಲಿರುಳು ಹೆಣಗಾಡುತ್ತಿದ್ದರು.ಎರಡು ಮೂರು ದಿನಗಳ ಕಾಲ, ಒಮ್ಮಿಮ್ಮೆ ಒಂದು ವಾರ ಕಾಲ ಅನಿರೀಕ್ಷಿತವಾಗಿ ಕಚೇರಿಗೆ ರಜೆ ಹಾಕಿ ಬಿಡುತ್ತಿದ್ದ ಕುಲಕರ್ಣಿಯವರನ್ನು ಮತ್ತೆ ಕಚೇರಿಗೆ ಸೇರಿಸಿಕೊಳ್ಳುವುದಕ್ಕಾಗಿ ತಿಂಗಳಿಗೆರಡು ಬಾರಿಯಾದರೂ ಮಧ್ಯಸ್ಥಿಕೆಗಾಗಿ ಪತ್ರಿಕೆಯ ಕಚೇರಿಗೆ ಬರುವುದೆಂದಿತ್ತು. ಕೆಲವೊಮ್ಮೆ ಪತ್ನಿಯಿಂದಲೇ ಸುಳ್ಳು ಕಾರಣಗಳನ್ನು ಹೇಳಿಸುತ್ತಿದ್ದರು. ಅವರು ಪತಿಯ ಒಂದೊಂದು ಅವಾಂತರಗಳನ್ನು ಹೇಳುವಾಗಲೂ ಕುಲಕರ್ಣಿಯ ಮೇಲೆ ಸಿಟ್ಟು ಧುಮ್ಮಿಕ್ಕಿ ಬರುತ್ತಿತ್ತು.
ಒಮ್ಮೆ ಮಧ್ಯರಾತ್ರಿ ಕಚೇರಿ ಬಿಟ್ಟು ಮನೆ ಕಡೆ ಹೋಗುತ್ತಿದ್ದ ಕುಲಕರ್ಣಿಯವರಿಗೆ ಡೊಂಬಿವಿಲಿ ರೈಲು ನಿಲ್ದಾಣದಲ್ಲಿ ಒಬ್ಬ ಸಾಧು ಸಿಕ್ಕಿದನಂತೆ. ಆತನೂ ಕುಡಿದು ತೂರಾಡುತ್ತಿದ್ದ. ಆತನೊಂದಿಗೆ ಒಂದರ್ಧ ಗಂಟೆ ಹರಟೆ ಕೊಚ್ಚಿದ ಕುಲಕರ್ಣಿ, ಅವನನ್ನು ಮನೆಗೆ ಕರೆದೊಯ್ದಿದ್ದರಂತೆ. ಕುಲಕರ್ಣಿಯವರ ಪತ್ನಿಗೆ ಎದೆಯೇ ಬಾಯಿಗೆ ಬಂದಂತಾಯಿತು. ‘ಯಾರ್ರೀ ಇವ್ರ’ ಎಂದು ಕೇಳಿದ್ದಕ್ಕೆ ‘...ಸ್ವಾಮೀಜಿ..ನನ್ನ ಫ್ರೆಂಡ್..’ ಎಂದು ಉತ್ತರಿಸಿದರಂತೆ. ರಾತ್ರಿಯಿಡೀ ಪತ್ನಿ ಮತ್ತು ಮಗು ನಿದ್ದೆಯಿಲ್ಲದೇ ಕಾಲ ಕಳೆದರಂತೆ. ಬೆಳಗ್ಗೆ ಸಾಧು ಎದ್ದು ಸ್ನಾನ ಮುಗಿಸಿ, ತಿಂಡಿ ತಿಂದು ಎಲ್ಲರನ್ನು ಆಶೀರ್ವದಿಸಿ ಮನೆ ಬಿಟ್ಟನಂತೆ.

ನಾನು ಮುಂಬೈ ಬಿಟ್ಟು ಮಂಗಳೂರಿಗೆ ಬಂದ ಒಂದೆರಡು ವರ್ಷ ಕುಲಕರ್ಣಿಯವರ ಸಂಗತಿಯೇ ತಿಳಿಯಲಿಲ್ಲ. ಆಮೇಲೆ ಒಂದು ದಿನ ಯಾರೋ ಹೇಳಿದರು ‘ಅವರು ಮುಂಬಯಿ ಬಿಟ್ಟಿದ್ದಾರೆ. ಈಗ ಬೆಳಗಾವಿಯಲ್ಲೆಲ್ಲೋ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ..’ ಹೊಸ ವಾತಾವರಣದಲ್ಲಿ ಹೊಸ ಕುಲಕರ್ಣಿಯೊಬ್ಬರನ್ನು ಯಾವತ್ತಾದರೂ ಎದುರುಗೊಳ್ಳಲಿದ್ದೇನೆ ಎನ್ನುವುದರಲ್ಲೇ ಮನಸ್ಸು ಸಂಭ್ರಮಿಸಿತ್ತು. ಅವರನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅವರ ಮಗಳು ಪ್ರತಿಭಾ ಕುಲಕರ್ಣಿ, ಅವರ ಪತ್ನಿ ಇವರನ್ನೆಲ್ಲ ಮತ್ತೊಮ್ಮೆ ಭೇಟಿಯಾಗಬೇಕು, ಜೊತೆಯಾಗಿ ಉಣ್ಣಬೇಕು ಇತ್ಯಾದಿಗಳು ಮನಸ್ಸನ್ನು ಮುತ್ತಿಕೊಂಡಿತ್ತು.

ಈ ಸುದ್ದಿ ಕೇಳಿದ ಎಷ್ಟೋ ತಿಂಗಳ ಬಳಿಕ ಮುಂಬೈಯಿಂದ ಗೆಳೆಯರೊಬ್ಬರು ಊರಿಗೆ ಬಂದಿದ್ದರು. ಮುಂಬೈ, ಅಲ್ಲಿನ ಗೆಳೆಯರು, ಕನ್ನಡ ಪತ್ರಿಕೆ ಇತ್ಯಾದಿಗಳ ಬಗ್ಗೆ ಮಾತನಾಡಿದ ನಂತರ ‘ಗುರುಗಳು ಯಾವತ್ತಾದರೂ ಸಿಕ್ಕಿದ್ದರಾ?’ ಎಂದು ಕೇಳಿದೆ. ಆತ ಒಮ್ಮೆಲೆ ಅವಕ್ಕಾಗಿ ‘ನಿಮಗೆ ಗೊತ್ತಿಲ್ಲವಾ?’ ಎಂದರು.
‘ಕುಲಕರ್ಣಿ ತೀರಿ ಹೋಗಿ ಎರಡು ಮೂರು ತಿಂಗಳಾಯಿತು. ರೈಲಿನ ಹಳಿಯಲ್ಲಿ ಅವರ ಮೃತದೇಹ ಪತ್ತೆಯಾಯಿತಂತೆ.. ಆಕ್ಸಿಡೆಂಟೋ, ಆತ್ಮಹತ್ಯೆಯೋ.. ಕೊಲೆಯೋ.. ಒಂದೂ ಗೊತ್ತಿಲ್ಲ’
ಜೀವಮಾನದಲ್ಲಿ ‘ಸತ್ತೆಪ್ಪ’ ಎಂಬ ಒಂದೇ ಒಂದು ಕತೆ ಬರೆದ ನನ್ನ ಗುರುಗಳು ಅಂತಹ ಸಾವಿರಾರು ಕತೆಗಳನ್ನು, ಕವಿತೆಗಳನ್ನು ಎದೆಯೊಳಗಿಟ್ಟು ಬದುಕಿದವರು. ‘ಕುಡಿಯದೇ ಇರುತ್ತಿದ್ದರೆ ಅವರು ಚೆನ್ನಾಗಿರುತ್ತಿದ್ದರು’ ಎಂದು ನಾನಿಲ್ಲಿ ಬರೆದರೆ ಅದು ಕುಲಕರ್ಣಿಯವರಿಗೆ ಮಾಡುವ ಅಪಚಾರವಾದೀತು.
ಧಡಧಡನೆ ಓಡುವ ರೈಲುಗಾಡಿಯಲ್ಲಿ, ಬಾಗಿಲ ಬಳಿ ಕುಳಿತು ಮುಖಕ್ಕೆ ಅಪ್ಪಳಿಸುವ ಚಳಿ ಗಾಳಿಯನ್ನು ಎಂಜಾಯ್ ಮಾಡುತ್ತಾ ಅವರು ಕುಡಿದು ಹಾಡಿದ ‘ಓ ದೂರ್ ಕೆ ಮುಸಾಫಿರ್..’ ಹಾಡು ನನ್ನೊಳಗಿನ್ನೂ ಎಷ್ಟು ಜೀವಂತವಾಗಿದೆ ಎಂದರೆ, ಆ ಹಾಡನ್ನು ಎಲ್ಲಾದರೂ ಕೇಳಿದರೆ ನನಗೆ ನೆನಪಾಗುವುದು ಮಹಮ್ಮದ್ ರಫಿಯಲ್ಲ, ಕುಲಕರ್ಣಿ.

5 comments:

  1. chennaagide andare adu bari maataaguvudillaa andondiddEne

    ReplyDelete
  2. ದಯವಿಟ್ಟು ಅನಿಸಿಕೆಯ ಜೊತೆ ನಿಮ್ಮ ಹೆಸರಿದ್ದರೆ ನನಗೆ ಇನ್ನಷ್ಟು ಖುಷಿಯಾಗುತ್ತದೆ.-ಬಿ. ಎಂ. ಬಶೀರ್

    ReplyDelete
  3. I Liked this very much. Keep writing. I regularly read your posts. They are full of life. I also wanted to tell you that I dint like your comment in facebook when Kambara got Jnaanapeetha. Appreciating our fav writer (Kambara) is fine but celebrating because Bhairappa did not get that is cynic.

    ReplyDelete
  4. M.Iqbal Uchila, DubaiMay 15, 2013 at 4:07 AM

    ತುಂಬಾ ಚೆನ್ನಾಗಿ ಬರೆದಿದ್ದೀರಾ ಸಾರ್....ಮನಕಲಕುವಂತೆ ನಿಮ್ಮ ಬರಹ...ಅನುಭವವಿದೆ. ನಾನು ನಿಮ್ಮ ಕತೆ, ಬರವಣಿಗೆ ಬಹಳ ಇಷ್ಟ. ದುಬೈಯಲ್ಲಿ ಕೂಡಾ ನೀವು ಏನಾದರೂ ‘ಗುಜರಿ ಅಂಗಡಿ’ಗೆ ಬರೆಯುತ್ತೀರಾ ಎನ್ನುವ ತವಕದಲ್ಲಿರುತ್ತೇನೆ. ಜೊತೆಗೆ ಆಗಾಗ್ಗೆ ಕಣ್ಣಾಡಿಸುತ್ತಾ ಇರುತ್ತೇನೆ. ಇನ್ನಷ್ಟು ಇಂಥ ಲೇಖನ ಮೂಡಿಬರಲಿ ಎಂಬುದೇ ನನ್ನ ಆಶಯ.....

    ಎಂ.ಇಕ್ಬಾಲ್ ಉಚ್ಚಿಲ, ದುಬೈ

    ReplyDelete
  5. ತುಂಬಾ ಇಷ್ಟವಾಯಿತು ಸಾರ್ ಇನ್ನಷ್ಟು ಇಂತಹ ಲೇಖನ ಮೂಡಿ ಬರಲಿ ಎಂಬ ಹಾರೈಕೆಯೊಂದಿಗೆ ರಹಿಮಾನ್ ಉದ್ಯಾವರ

    ReplyDelete