Thursday, March 17, 2011
ಭೂಕಂಪದ ಅವಶೇಷಗಳಿಂದ ಹೆಕ್ಕಿ ತೆಗೆದದ್ದು...
ಈ ಬಾರಿ ಕೆಲವು ಫೋಟೋಗಳನ್ನು ನಿಮ್ಮಂದಿಗೆ ಹಂಚಿಕೊಳ್ಳಬೇಕೆಂದು ಬಯಸಿದ್ದೇನೆ. ಏನನ್ನೋ ಹುಡುಕುತ್ತಿದ್ದಾಗ, ಈ ಪೋಟೋಗಳು ಅಚಾನಕ್ಕಾಗಿ ನನ್ನ ಕೈಗೆ ಸಿಕ್ಕಿದವು. ಆ ಪೋಟೋದ ಜೊತೆಗೇ ಕೆಲವು ಮಸುಕು ಮಸುಕಾದ ಬ್ಲಾಕ್‌ಎಂಡ್ ವೈಟ್ ನೆನಪುಗಳು. ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಆಗ ನಾನು ‘ಜನವಾಹಿನಿ’ ದೈನಿಕದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಸಂಜೆಯ ಹೊತ್ತಿಗೆ, ಪ್ರಧಾನ ಕಚೇರಿಯಿಂದ ಸಹಾಯಕ ಸಂಪಾದಕಿಯಾಗಿದ್ದ ಎಸ್. ಸತ್ಯಾ(ಇವರು ಹಿರಿಯ ಪತ್ರಕರ್ತ ಜಿ. ಎನ್. ಮೋಹನ್ ಅವರ ಬಾಳ ಸಂಗಾತಿ) ಅವರಿಂದ ಫೋನ್ ಬಂತು. ‘‘ಬಶೀರ್, ಗುಜರಾತಿಗೆ ಹೋಗುತ್ತೀರಾ...? ಹೋಗುವುದಿದ್ದರೆ ನಾಳೆಯೇ ಹೊರಡಬೇಕು’’
ಏನು ಉತ್ತರಿಸುವುದೆಂದು ಹೊಳೆಯಲಿಲ್ಲ. ಉತ್ತರಿಸುವುದು ಅಷ್ಟು ಸುಲಭವೂ ಇದ್ದಿರಲಿಲ್ಲ. ಗುಜರಾತ್‌ನಲ್ಲಿ ಭೀಕರ ಭೂಕಂಪ ಸಂಭವಿಸಿ ಅದಾಗಲೇ ಐದು ದಿನವಾಗಿತ್ತು. ಅಲ್ಲಿ ಸಣ್ಣ ಕಂಪನಗಳಿನ್ನೂ ನಿಂತಿರಲಿಲ್ಲ. ಅಲ್ಲಿನ ಸ್ಥಿತಿಗತಿಯನ್ನು ನೇರ ವರದಿ ಮಾಡಲು ಗುಜರಾತ್‌ಗೆ ಹೋಗಬಹುದೆ ಎಂದು ಸತ್ಯಾ ಅವರು ನನ್ನೊಂದಿಗೆ ಕೇಳುತ್ತಿದ್ದಾರೆ. ನಾನು ತಕ್ಷಣ ಕೇಳಿದ್ದು ‘‘ಸಂಸ್ಥೆಯಿಂದ ದುಡ್ಡು ಕೊಡುತ್ತಾರ?’’ ಯಾಕೆಂದರೆ, ಅದಾಗಲೇ ಜನವಾಹಿನಿಯ ಆರ್ಥಿಕ ಪರಿಸ್ಥಿತಿ ತೀರಾ ಕೆಟ್ಟು ಕೂತಿತ್ತು. ಅವರು ದುಡ್ಡು ಕೊಟ್ಟು ಗುಜರಾತಿಗೆ ಕಳುಹಿಸುತ್ತಾರೆ ಎನ್ನುವುದನ್ನು ನಂಬುವುದೇ ನನಗೆ ಕಷ್ಟಸಾಧ್ಯವಾಗಿತ್ತು. ‘‘ಸಂಸ್ಥೆಯಿಂದ ಐದು ಸಾವಿರ ರೂ. ವನ್ನು ತೆಗೆಸಿಕೊಡುತ್ತೇನೆ...ಅದನ್ನು ಬಳಸಿ ನೀವು ಗುಜರಾತಿಗೆ ಹೋಗಿ ಬರಬೇಕು...ಏನು ಉತ್ತರಿಸುವುದಿದ್ದರೂ ಇನ್ನೆರಡು ಗಂಟೆಯ ಒಳಗೆ ತಿಳಿಸಬೇಕು...’’ ಸತ್ಯಾ ಹೇಳಿದರು. ‘‘ಆಯಿತು’’ ಎಂದೆ. ನನ್ನ ಗೆಳೆಯರೊಂದಿಗೆ ಕೇಳಿದಾಗ ‘‘ಐನ್ ಸಾವಿರಡ್ ಗುಜರಾತ್‌ಗೆಂಚ ಪೋಪುನ ಮಾರಾಯ್ರೆ...ಈರೆಗ್ ಮರ್ಲ್(ಐದು ಸಾವಿರದಲ್ಲಿ ಗುಜರಾತಿಗೆ ಹೋಗಿ ವರದಿ ಮಾಡುವುದು ಹೇಗೆ ಮಾರಾಯ್ರೆ...ನಿಮಗೆ ಹುಚ್ಚು)’’ ಎಂದು ಬಿಟ್ಟರು. ಆದರೆ ಅವಕಾಶ ಕಳೆದುಕೊಳ್ಳಲು ನನಗೆ ಇಷ್ಟವಿರಲಿಲ್ಲ. ಕೊನೆಗೂ ಗುಜರಾತ್‌ಗೆ ಹೋಗುವ ನಿರ್ಧಾರಕ್ಕೆ ಬಂದಿದ್ದೆ. ಅದಕ್ಕೆ ಪೂರಕವಾಗಿ ಮರುದಿನವೇ...ಗುಜರಾತ್ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ತೆಗೆದುಕೊಂಡು ‘ಗುಜರಾತಿ ಸಂಘ’ದ ವ್ಯಾನೊಂದು ಹೋಗುವ ಕುರಿತು ಮಾಹಿತಿ ಸಿಕ್ಕಿತು. ಮರುದಿನ ಆ ವ್ಯಾನ್ ಹತ್ತಿ ಬಿಟ್ಟೆ.
ಸುಮಾರು 10 ದಿನ ನಾನು ಗುಜರಾತ್ ಭೂಕಂಪ ಪ್ರದೇಶದಲ್ಲಿ ಕಳೆದೆ. ಮೋರ್ಬಿ, ಅಧೋಯಿ, ಕಚ್, ಬಚಾವ್, ಅಂಜಾರ್, ಭುಜ್...ಮೊದಲಾದೆಡೆಯೆಲ್ಲ ತಿರುಗಿದೆ. ಯಾವುದೇ ಹೊಟೇಲ್‌ನಲ್ಲಿ, ಒಂದು ದಿನವೂ ಉಳಿದುಕೊಂಡಿಲ್ಲ. ಕಂಡ ಶಿಬಿರದಲ್ಲಿ ಉಣ್ಣುತ್ತಿದ್ದೆ. ಕಂಡ ಶಿಬಿರದಲ್ಲಿ ಮಲಗುತ್ತಿದ್ದೆ. ಅಂದಂದಿನ ವರದಿಯನ್ನು ಅಂದಂದೇ ಪತ್ರಿಕೆಗೆ ಫ್ಯಾಕ್ಸ್ ಮೂಲಕ ತಲುಪಿಸುತ್ತಿದೆ(ಮಾಧ್ಯಮಗಳಿಗಾಗಿ, ಪೊಲೀಸರಿಗಾಗಿ ಅಲ್ಲಲ್ಲಿ ವಿಶೇಷ ಫ್ಯಾಕ್ಸ್ ವ್ಯವಸ್ಥೆ ಮಾಡಿದ್ದರು). ಅಧೋಯಿಯ ಮಿಲಿಟರಿ ಕ್ಯಾಂಪ್‌ನಲ್ಲಿ ನನಗೆ ಕನ್ನಡದ ಯೋಧರು ಸಿಕ್ಕಿದರು. ಅವರ ಡೇರೆಯಲ್ಲಿ ‘ಬೆಂಗಳೂರು ಪ್ರೆಸ್’(ಫೋಟೋದಲ್ಲಿ ಗಮನಿಸಿ) ಹೆಸರಿನ ಕ್ಯಾಲೆಂಡರ್ ತೂಗು ಹಾಕಿರುವುದು ನೋಡಿ, ನನಗೆ ನನ್ನ ಊರೇ ಗುಳೆ ಎದ್ದು ಗುಜರಾತಿಗೆ ಬಂದಿದೆಯೋ ಅನ್ನಿಸಿತು. ಮಿಲಿಟರಿ ವ್ಯಾನ್ ಹತ್ತಿಕೊಂಡೇ ಕಛ್, ಬಚಾವ್ ಮೊದಲಾದ ಪ್ರದೇಶಗಳಲ್ಲಿ ತಿರುಗಾಡಿದೆ. ಕಚ್‌ನಲ್ಲಿರಬೇಕು...ರಾತ್ರಿ ಎಲ್ಲಿ ಉಳಕೊಳ್ಳುವುದು ಎಂದು ಯೋಚಿಸುತ್ತಿದ್ದೆ. ಯಾಕೆಂದರೆ ಅಧಿಕಾರಿಗಳು, ಪೊಲೀಸರು, ಜನರು, ಯೋಧರು ಎಲ್ಲರೂ ನಡು ರಸ್ತೆಯಲ್ಲೇ ಬಿದ್ದುಕೊಂಡಿದ್ದರು. ರಸ್ತೆಯ ಬದಿಯಲ್ಲಿ ಕುರ್ಚಿ ಹಾಕಿ ಕುಳಿತುಕೊಂಡಿದ್ದ (ಬಹುಶಃ ತಹಶೀಲ್ದಾರನೋ...ಎಸಿಯೋ ಇರಬೇಕು) ಅಧಿಕಾರಿಯಲ್ಲಿ ನನ್ನ ಪ್ರೆಸ್ ಕಾರ್ಡ್ ತೋರಿಸಿ...ಇಲ್ಲಿ ಉಳಿದುಕೊಳ್ಳುವುದಕ್ಕೆ ಸ್ಥಳ ಇದೆಯೇ ಎಂದು ಕೇಳಿದೆ. ಅವನು ಒಬ್ಬ ಸೈನಿಕನನ್ನು ಕರೆಸಿ...ಸಂತ್ರಸ್ತ ಶಿಬಿರದಲ್ಲಿ ಸೇರಿಸುವುದಕ್ಕೆ ಹೇಳಿದ. ಆ ಯೋಧ ನನ್ನನ್ನು ಶಿಬಿರದತ್ತ ಕರೆದೊಯ್ಯುತ್ತಿದ್ದಾಗ ‘‘ಯಾವ ಪತ್ರಿಕೆ? ಯಾವೂರು?’’ ಎಂದು ಕೇಳಿದ. ಅದನ್ನೆಲ್ಲ ಹೇಳಿ...‘‘ನನ್ನ ಹೆಸರು ಬಶೀರ್’’ ಎಂದೆ. ನನ್ನ ಹೆಸರು ಕೇಳಿದ್ದೇ ಅವನು ರೋಮಾಂಚನಗೊಂಡ. ಯಾಕೆಂದರೆ ಆ ಯೋಧನ ಹೆಸರು ‘ಶಫಿ’ ಎಂದಾಗಿತ್ತು. ಆತ ಕಾಶ್ಮೀರಿ. ತಕ್ಷಣ ನನ್ನನ್ನು ತನ್ನ ಡೇರೆಗೆ ಕರೆದೊಯ್ದು ಉಪಚರಿಸಿದ.
ಭುಜ್‌ನಲ್ಲಿ ಮಲಯಾಳಿ ಕ್ರಿಶ್ಚಿಯನ್ ಚರ್ಚ್ ಒಂದರಲ್ಲಿ ಆಶ್ರಯ ಪಡೆದೆ. ರಾತ್ರಿ ಅಲ್ಲಿನ ಧರ್ಮಗುರುಗಳು, ಸಿಸ್ಟರ್‌ಗಳ ಜೊತೆಗೆ ಉಂಡೆ. ಭುಜ್‌ನಲ್ಲಿ ‘ಮೀಡಿಯಾ ಸೆಂಟರ್’ ಎನ್ನುವ ಡೇರೆಯಲ್ಲಿ ಮೂರು ರಾತ್ರಿಗಳನ್ನು ಕಳೆದೆ. ಅಲ್ಲಿಂದ ಗಾಂಧಿನಗರಕ್ಕೆ ತೆರಳಿದೆ. ಅಲ್ಲಿ, ಸುರತ್ಕಲ್ ಸಮೀಪದ ಶೆಟ್ಟಿಗಳ ಹೊಟೇಲೊಂದು ಸಿಕ್ಕಿತು. ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಊರಿನ ಹುಡುಗ ಎಂದು ಮಧ್ಯಾಹ್ನ, ರಾತ್ರಿ ಪುಕ್ಕಟೆ ಊಟ ಹಾಕಿದರು. ಹೊಟೇಲ್ ಧನಿಗಳಿಗೆ ಖಾಸಗಿ ಬಸ್ಸುಗಳಿದ್ದವು. ಅಹ್ಮದಾಬಾದ್‌ಗೆ ತೆರಳುವ ಬಸ್ಸಿಗೆ ಅವರೇ ಹತ್ತಿಸಿದರು. ಅಹ್ಮದಾಬಾದ್‌ನಲ್ಲಿ ಕ್ರಿಶ್ಚಿಯನ್ ಸ್ವಯಂ ಸೇವಾ ಸಂಸ್ಥೆಯೊಂದಕ್ಕೆ ಭೇಟಿ ನೀಡಿದೆ. ಅಲ್ಲಿನ ಫಾದರ್ ಮೂಲತಃ ಮಂಗಳೂರಿನವರು. ಕೊಂಕಣಿ ಅವರ ಮಾತೃಭಾಷೆ. ಅವರೊಂದಿಗೂ ಕೆಲ ಗಂಟೆಗಳನ್ನು ಹಂಚಿಕೊಂಡೆ. ಅಂದು ರಾತ್ರಿ ಅಹ್ಮದಾಬಾದ್‌ನಲ್ಲಿ ನಿಲ್ಲಬೇಕು ಎನ್ನುವ ಆಸೆಯಿತ್ತು. ‘‘ಇವತ್ತು ರಾತ್ರಿ ಇಲ್ಲಿ ತಂಗಬಹುದೆ?’’ ಎಂದು ಕೇಳಿದೆ. ಅವರು ಕೆಲ ನಿಮಿಷ ಆಲೋಚಿಸಿ ‘‘ಸಾರಿ...ಇವತ್ತು ಸಿಸ್ಟರ್‌ಗಳು ಬರುತ್ತಾರೆ...ಇಲ್ಲೇ ಹತ್ತಿರ ಕಡಿಮೆ ರೇಟಿಗೆ ಒಳ್ಳೆಯ ಲಾಡ್ಜ್‌ಗಳಿವೆ...’’ ಎಂದರು.
ಅಲ್ಲಿಂದ ನೇರ ನಾನು ರ್ವೇಲ್ವೇ ಸ್ಟೇಶನ್‌ಗೆ ಹೋಗಿ, ಮುಂಬಯಿಯ ಗಾಡಿ ಹಿಡಿದೆ. ಜನಸಂದಣಿಯಿಂದ ಉಸಿರಾಡುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ. ಒಂದಿಡೀ ರಾತ್ರಿ ಆ ಗಾಡಿಯಲ್ಲಿ ಕಳೆದು ಮುಂಬಯಿ ಸೇರಿದೆ. ಅಲ್ಲಿಂದ ಮಂಗಳೂರಿಗೆ....ಹಾಂ...ಒಂದು ನೋವು ಈಗಲೂ ಮುಳ್ಳಿನಂತೆ ನನ್ನೊಳಗೆ ಕದಲುತ್ತಿದೆ. ಅಹ್ಮದಾಬಾದ್‌ವರೆಗೆ ಹೋದ ನಾನು ಮಹಾತ್ಮಾ ಗಾಂಧೀಜಿಯ ‘ಸಬರಮತಿ ಆಶ್ರಮ’ ನೋಡದೆ ಬಂದು ಬಿಟ್ಟೆ. ಇದು ನಾನು ಮಾಡಿದ ದೊಡ್ಡ ತಪ್ಪು. ನಾನದನ್ನು ಯಾಕೆ ಮರೆತು ಬಿಟ್ಟೆ ಎನ್ನುವುದು ನನಗೆ ಈಗಲೂ ಅರ್ಥವಾಗುತ್ತಿಲ್ಲ.
ಅಂದಹಾಗೆ, ‘ಜನವಾಹಿನಿ’ ಸಂಸ್ಥೆ ನನಗೆ ಕೊಟ್ಟ ಐದು ಸಾವಿರ ರೂಪಾಯಿಯಲ್ಲಿ 1,500 ಇನ್ನೂ ಕಿಸೆಯಲ್ಲಿ ಉಳಿದಿತ್ತು. ಅಕೌಂಟೆಂಟಿಗೆ 5200 ರೂ. ಎಂದು ಭರ್ತಿ ಲೆಕ್ಕ ಕೊಟ್ಟು ‘ಜಾಣ’ ಪತ್ರಕರ್ತನಾದೆ. ಇದಾದ ಕೆಲ ದಿನಗಳ ಬಳಿಕ ಮಂಗಳೂರಿನಲ್ಲಿ ಸಿಕ್ಕಿದ್ದ ಜಿ. ಎನ್. ಮೋಹನ್ ಅವರು ‘‘ನಿಮ್ಮ ಗುಜರಾತ್ ಅನುಭವಗಳನ್ನು ಪುಸ್ತಕ ರೂಪಕ್ಕೆ ತರಬಹುದಲ್ಲ?’’ ಎಂದು ಕೇಳಿದ್ದರು. ಆದರೆ ಇಂದಿಗೂ ಆ ಅನುಭವಗಳನ್ನು ನನಗೆ ‘ಪೂರ್ಣ ರೂಪ’ದಲ್ಲಿ ಬರಹರೂಪಕ್ಕೆ ಇಳಿಸಲು ಆಗಿಲ್ಲ. ಬರೇ ಪತ್ರಿಕೆಗೆ ಬರೆದ ವರದಿಗಳಿಗಷ್ಟೇ ಆ ಪ್ರಯಾಣ ಸೀಮಿತವಾಯಿತು. ಇನ್ನಂತೂ ಸಾಧ್ಯವೇ ಇಲ್ಲ ಬಿಡಿ.
ಕೈಗೆ ಸಿಕ್ಕಿದ ಫೋಟೋಗಳನ್ನು ನೋಡಿ ಮೇಲಿನದ್ದೆಲ್ಲ ನೆನಪಾಯಿತು. ಹೇಗೂ ‘ಹಳೆ ಸಾಮಾನು’ಗಳನ್ನು ಕೊಳ್ಳುವುದಕ್ಕೆ ‘ಗುಜರಿ ಅಂಗಡಿ’ ಇದ್ದೇ ಇದೆಯಲ್ಲ.
Subscribe to:
Post Comments (Atom)
No comments:
Post a Comment