ವಿನಾಶ ಕಾದಿದೆ ಆ ನಮಾಝ್ ನಿರ್ವಹಿಸುವವರಿಗೆ
ಅವರು ತೋರಿಕೆಯ ಕೆಲಸ ಮಾಡುತ್ತಾರೆ ಮತ್ತು
ಬಡವರಿಗೆ ಊಟ ಕೊಡಲು, ಜನರಿಗೆ ಅವಶ್ಯಕ ವಸ್ತು ಕೊಡಲು ಹಿಂದೇಟು ಹಾಕುತ್ತಾರೆ
-ಕುರ್‌ಆನ್(‘ಅಲ್‌ಮಾಊನ್’ ಅಧ್ಯಾಯ)
ನಮಾಝಿಗೆಂದು ಮಸೀದಿಯೆಡೆಗೆ
ಧಾವಿಸುತ್ತಿರುವವರು ನನ್ನನ್ನು ಕೈ ಬೀಸಿ ಕರೆಯುತ್ತಿದ್ದಾರೆ
ದೇವರನ್ನು ಮುಖಾಮುಖಿಯಾಗುವ ಧೈರ್ಯ ಸಾಲದೆ
ನಾನು ಅವಮಾನದಿಂದ ಮುಖ ಮುಚ್ಚಿಕೊಂಡಿದ್ದೇನೆ
ಹಸಿದ ಮಗುವೊಂದು ನನ್ನ
ಕಣ್ಣ ಆಳವನ್ನು ಕಲಕಿದೆ:
ತನ್ನ ದೃಷ್ಟಿಯ ಗರುಡ ಪಾತಾಳವನ್ನಿಳಿಸಿ...
ಅಯ್ಯೋ...ಈಗಷ್ಟೇ ಉಂಡು ಬಂದೆ
ತಲೆ ತಗ್ಗಿಸಿದ್ದೇನೆ ಅದರ ಮುಂದೆ!
ಆ ಮಗುವನ್ನು ಮರೆತು
ಉಂಡ ಅನ್ನದ ತುತ್ತು
ನನ್ನ ರಕ್ತದ ಕಣಕಣಗಳನ್ನೂ ಕಳಂಕಗೊಳಿಸಿದೆ
ಈ ಅಶುದ್ಧಿಯನ್ನು ತೊಳೆಯುವಷ್ಟು ನೀರು
ಮಸೀದಿಯ ಕೊಳದಲ್ಲಿದೆಯೆ?
ಏಕದೇವನ ಮುಂದೆ
ಪಾಲುದಾರಿಕೆಯನ್ನು ಬೇಡುತ್ತಿರುವ
ಶಬ್ದ, ಅಕ್ಷರಗಳ ವಿಗ್ರಹಗಳನ್ನು
ಮುರಿದು ಮುಂದೆ ಹೋಗಬೇಕಾಗಿದೆ
ಅದು ನನ್ನಿಂದ ಸಾಧ್ಯವಿದೆಯೆ?
ನನ್ನ ಮುಂದೆ ಸತ್ಯ ಧಗಧಗಿಸುತ್ತಿದೆ
ದೇವರೇ...ನಿನ್ನ ಪ್ರಾರ್ಥನೆಯ ಸಾಲುಗಳನ್ನು
ಮುರಿದು ಆ ಬೆಂಕಿಯ ಕುಲುಮೆಗಿಕ್ಕಿ
ಕರಗಿಸ ಹೊರಟಿದ್ದೇನೆ
ಸಾಧ್ಯವಾದರೆ ಆ ಅಗ್ನಿಧಾರೆಯನ್ನು ನೇಗಿಲುಗಳಾಗಿಸಿ
ನನ್ನ ಮರುಭೂಮಿಯಂತಹ ಎದೆಯನ್ನು ಉಳುತ್ತೇನೆ
ಸಬಲಗಳನ್ನಾಗಿಸಿ ನನ್ನೊಳಗಿನ ಬಂಡೆಯನ್ನು ಸೀಳುತ್ತೇನೆ
ಹನಿ ನೀರಿನೆಡೆಗೆ ದಾರಿ ಕೊರೆಯುತ್ತೇನೆ
...ಅಗತ್ಯ ಬಿದ್ದರೆ ಖಡ್ಗವನ್ನಾಗಿಸಿ
ಧರಿಸಿಕೊಳ್ಳುತ್ತೇನೆ
ಮತ್ತು ಅದನ್ನು ಮೊದಲು
ನನ್ನ ವಿರುದ್ಧವೇ ಬಳಸುತ್ತೇನೆ!
ಹೌದು, ನಿಮ್ಮ ಅನುಮಾನ ಸರಿ
ನಾನೊಬ್ಬ ಜಿಹಾದಿ...!
ಮೊದಲು ನನ್ನ ವಿರುದ್ಧ
ನೆನಪಿರಲಿ, ಗೆದ್ದರೆ...ನಿಮ್ಮ ವಿರುದ್ಧ!!
This comment has been removed by the author.
ReplyDeleteLovely poem. I like its intensity. way to go.
ReplyDeleteನನಗೆ ಅನ್ನಿಸುತ್ತೆ ; ನೀವು ಏಕಮುಖಿ ಚಿಂತನೆ ಮಾಡುತ್ತಿದ್ದೀರಿ ! ಜಗತ್ತಿನ ಎಲ್ಲ ಧರ್ಮಗಳ ತಿರುಳು ಒಂದೇ ಆಗಿದೆ ಎನ್ನುವುದನ್ನು ನಂಬಬೇಕೋ ಬಿಡಬೇಕೋ ಬೇರೆ ವಿಚಾರ ! ಆದರೆ ಎಲ್ಲ ಧರ್ಮಗಳನ್ನೂ ಓದಿಕೊಂಡು ; ಒಂದಿಷ್ಟು ತಿಳಿದುಕೊಂಡು ಬರೆಯುತ್ತಿರುವ ನಿಮ್ಮ ಸಂವೇದನೆ ಮಾನವೀಯ ಮಿಡತವನ್ನು ಹೊಂದಿದೆ ಎಂಬುದನ್ನು ಮಾತ್ರ ನಾನು ನಿರಾಕರಿಸಲಾರೆ. ಆದರೂ ಸತ್ತ ಹೆಣವನ್ನು ಗೋರಿಯಿಂದ ಎತ್ತಿ ತೆಗದು ಅದನ್ನೇ ಮುಂದಿಟ್ಟುಕೊಂಡು ಅಳುವ ಹೀನಸ್ಥಿತಿ ನಮ್ಮದಾಗಬಾರದಲ್ಲವೆ ? ಪರಿಹಾರ ಹುಡುಕೋಣ ; ಸಿಗದಿದ್ದರೆ ಪರ್ಯಾಯಗಳ ಸೃಷ್ಟಿಗೆ ಮುಂದಾಗೋಣ ! ಏನಂತಿರಾ ? ಡಾ. ಸಿದ್ರಾಮ ಕಾರಣಿಕ, ಧಾರವಾಡ
ReplyDelete