Thursday, September 29, 2011

ಸುಡುವ ನೆನಪುಗಳು..........

ಕೆಲವು ನೆನಪುಗಳೇ ಹಾಗೆ. ಅದರಿಂದ ಪಾರಾಗೂದಕ್ಕೆ ಎಷ್ಟು ಪ್ರಯತ್ನಿಸಿದರೂ ಮತ್ತೆ ಮತ್ತೆ ಕಾಲಿಗೆ ತೊಡರಿಕೊಳ್ಳುತ್ತಲೇ ಹೋಗುತ್ತದೆ. ಅಣ್ಣ ತೀರಿ ಹೋದ ಸುಮಾರು ಎರಡು ವರ್ಷಗಳ ಬಳಿಕ, ನಾನು ಅವನ ಅಳಿದುಳಿದ ಕತೆ, ಕವಿತೆ, ಹನಿಕವಿತೆ ಮತ್ತು ಒಂದೆರಡು ವರದಿಗಳನ್ನು ಒಟ್ಟು ಸೇರಿಸಿ ‘ಪರುಷ ಮಣಿ’ ಎಂಬ ಪುಸ್ತಕ ಮಾಡುವುದಕ್ಕೆ ಹೊರಟೆ. ಆಗ ಬೆಂಗಳೂರಿನಿಂದ ಆತ್ಮೀಯರಾದ ಶಿವರಾಮಯ್ಯ ಅವರನ್ನು ಸಂಪರ್ಕಿಸಿದ್ದೆ. ಒಂದು ಕಾಲದಲ್ಲಿ ಶಿವರಾಮಯ್ಯ ಮತ್ತು ಅಣ್ಣ ರಶೀದ್ ನಡುವೆ ಸುಮಾರು ಎರಡು ವರ್ಷಗಳ ಕಾಲ ಸುದೀರ್ಘ ಪತ್ರ ವ್ಯವಹಾರ ನಡೆದಿತ್ತು. ಆದರಲ್ಲಿ ಖಾಸಗಿಯಲ್ಲದ, ಸಾರ್ವತ್ರಿಕವಾಗಬಲ್ಲ ಒಂದಿಷ್ಟು ಪತ್ರಗಳು, ಬರಹಗಳನ್ನು ನನಗೆ ಕಳುಹಿಸಿಕೊಟ್ಟರು. ‘‘ಇವೆಲ್ಲ ರಶೀದ್ ನನಗೆ ಬರೆದದ್ದು. ಇದರಲ್ಲಿ ಕೆಲವನ್ನು ಆಯ್ಕೆ ಮಾಡಿ ನೀವು ಪ್ರಕಟಿಸುವ ಪುಸ್ತಕದಲ್ಲಿ ಬಳಸಿಕೊಳ್ಳಬಹುದು’’ ಎಂದರು. ಒಂದು ರಾಶಿ ಪತ್ರಗಳು ನನ್ನ ಮುಂದಿದ್ದವು. ಬಹುಶಃ ಅದೆಲ್ಲವೂ ಆತ ಅಂತಿಮ ಬಿ.ಎ.ಯಲ್ಲಿ ಕಲಿಯುತ್ತಿರುವಾಗ ಬರೆದಿರುವ ಪತ್ರಗಳು. ಅವನ ಪ್ರಪ್ರಥಮ ಕವನ ‘ಅಶಾಂತಿ ಪರ್ವ’ ರಾಜ್ಯ ಮಟ್ಟದಲ್ಲಿ ಬಹುಮಾನವನ್ನು ಪಡೆದು, ಪತ್ರಿಕೆಯೊಂದರಲ್ಲಿ ಪ್ರಕಟವಾದಾಗ ಅದಕ್ಕೆ ಶಿವರಾಮಯ್ಯ ಆಕಸ್ಮಿಕವಾಗಿ ಅವನಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದರು. ಹಾಗೆ ಆಕಸ್ಮಿಕವಾಗಿ ಆರಂಭವಾದ ಅವರ ನಡುವಿನ ಪತ್ರ ವ್ಯವಹಾರ ಸುಮಾರು ಎರಡು ಮೂರು ವರ್ಷ ಮುಂದುವರಿದು, ಒಂದು ದಿನ ಅಷ್ಟೇ ಆಕಸ್ಮಿಕವಾಗಿ ನಿಂತು ಹೋಯಿತು. ಅಂದ ಹಾಗೆ ಈ ಪತ್ರಗಳನ್ನೇ ಇಟ್ಟುಕೊಂಡು ಆತ ‘ಪರ್ಯಾಯ’ ಎಂಬ ಕತೆಯನ್ನು ಬರೆದಿದ್ದ. ಅದು ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ಶಿವರಾಮಯ್ಯ ಕಳುಹಿಸಿದ ಅಷ್ಟು ರಾಶಿ ಪತ್ರಗಳಿಂದ ನಾನು ಒಂದು ಹತ್ತು ಹನಿಗವಿತೆಗಳನ್ನು ಹಾಗೂ ಪತ್ರದ ರೂಪದಲ್ಲಿದ್ದ ಕತೆಯಾಗುವ ಸಾಧ್ಯತೆಯುಳ್ಳ ‘ಗರ್ಭಪಾತ-2’ ಎಂಬ ಪುಟ್ಟ ಕತೆಯನ್ನೂ ಆಯ್ಕೆ ಮಾಡಿಕೊಂಡೆ. ಉಳಿದಂತೆ ಆ ಪತ್ರಗಳ ರಾಶಿಯನ್ನು ಏನು ಮಾಡುವುದೆಂದು ಹೊಳೆಯದೆ ಬೆಂಕಿ ಕೊಟ್ಟು ಸುಟ್ಟು ಹಾಕಿ ಬಿಟ್ಟೆ. ಮತ್ತು ಶಿವರಾಮಯ್ಯ ಅವರಿಗೂ ದೂರವಾಣಿಯಲ್ಲಿ ಹೇಳಿದೆ ‘‘ಅವೆಲ್ಲವನ್ನೂ ಸುಟ್ಟು ಹಾಕಿದೆ’’ ಎಂದು. ಅವರಿಗೆ ಏನನಿಸಿರಬಹುದು ಎನ್ನುವುದರ ಬಗ್ಗೆ ನನಗೆ ಕಲ್ಪನೆಯಿಲ್ಲ. ‘‘ಆ ಪತ್ರಗಳ ‘ಕೆಲವು ಸಾಲುಗಳನ್ನೆಲ್ಲ ಬಳಸಿಕೊಳ್ಳಬಹುದಿತ್ತು ‘’ಎಂದಿದ್ದರು. ನನಗ್ಯಾಕೋ ಅವನ್ನೆಲ್ಲ ಸುಟ್ಟು ಹಾಕಬೇಕು ಅನ್ನಿಸಿತ್ತು. ಹಾಗೇ ಮಾಡಿದ್ದೆ.

ಮೊನ್ನೆ, ಯಾವು
ದೋ ಒಂದು ಹಳೆ ಫೋಟೋವನ್ನು ಹುಡುಕುತ್ತಿದ್ದಾಗ, ಫೈಲೊಳಗೆ ಆ ಒಂದು ಪತ್ರ ಮಾತ್ರ ಅದು ಹೇಗೆ ಉಳಿದಿತ್ತೋ ನನಗೆ ಗೊತ್ತಿಲ್ಲ. ಸುಮ್ಮನೆ ನನ್ನನ್ನು ನೋಡಿ ಹಲ್ಲು ಕಿರಿಯುತ್ತಿತ್ತು. ಫೈಲುಗಳ ರಾಶಿಯ ನಡುವೆ ಸವೆದು ಹೋಗಿತ್ತು. ಕಾಗದ ಪುಡಿಪುಡಿಯಾಗುವ ಹಂತದಲ್ಲಿತ್ತು. ಬಹುಶಃ ಇದು ಲಂಕೇಶ್ ಪತ್ರಿಕೆ ಆತನ ಮೊತ್ತ ಮೊದಲ ‘ಗರ್ಭ’ ಎನ್ನುವ ಪುಟ್ಟ ಕತೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ, ಶಿವರಾಮಯ್ಯ ಅವರಿಗೆ ಬರೆದ ಪತ್ರವಿರಬೇಕು. ಆರಂಭದ ಮತ್ತು ಕೊನೆಯ ಪುಟಗಳು ಇರಲಿಲ್ಲ. ಯಾವುದೋ ಒಂದು ಜೆರಾಕ್ಸ್ ಪ್ರತಿಯ ಖಾಲಿ ಜಾಗಗಳಲ್ಲಿ ಆ ಪತ್ರವನ್ನು ಬರೆದಿದ್ದ. ಅದರ ನಕಲು ಪ್ರತಿಯನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಹಾಗೆಯೇ ಆ ಪತ್ರದ ಸಾಲುಗಳನ್ನು ಯಥಾವತ್ ಇಲ್ಲಿ ದಾಖಲಿಸಿದ್ದೇನೆ.

.................ಲಂಕೇ
ಶ್ ಪತ್ರಿಕೆ ನನ್ನ ಪ್ರೀತಿಯ ಪತ್ರಿಕೆ. ನಿಮ್ಮ ಅಭಿಪ್ರಾಯ ಏನು? ಕರ್ನಾಟಕದಂತಹ ಒಂದು ರಾಜ್ಯಕ್ಕೆ ಇಂತಹ ಒಂದು ಪತ್ರಿಕೆ ಬೇಕು ಎಂದು ಅನ್ನಿಸುವುದಿಲ್ಲವೆ? ಬಹುಶಃ ಇದರ ನಷ್ಟ ಜನರಿಗೆ ಅರಿವಾಗುವುದು ಇದು ನಿಂತು ಹೋದ ಮೇಲೆ. ಯಾವುದರ ವೌಲ್ಯವೇ ಆಗಲಿ, ನಮಗದು ಅರಿವಾಗಬೇಕೆಂದರೆ ನಾವದನ್ನೊಮ್ಮೆ ಕಳೆದುಕೊಳ್ಳಬೇಕಲ್ಲ.... ಸಾರ್, ಇಲ್ಲಿ ಕೆಲವು ‘ವಿಮರ್ಶೆ’ ಬಯಸದ ‘ತುಣಕು-ಚೂರು’ಗಳಿವೆ. ಸುಮ್ಮನೆ ಕಳಿಸಿರುವೆ. ಸುಮ್ಮನೆ ಓದಿ. ನನಗೆ ಪತ್ರಿಕೆಗೆ ಲೇಖನಗಳನ್ನು ಕಳಿಸುವುದರಲ್ಲಿ ವಿಶ್ವಾಸವಿಲ್ಲ. ಇಂದಿನ ಪ್ರತಿ ಪತ್ರಿಕೆಯೂ ಮೂತಿ ನೋಡಿ ಮಣೆ ಹಾಕುವ ಸಂಪ್ರದಾಯಗಳನ್ನು ಪಾಲಿಸುತ್ತಿವೆ. ಇವುಗಳ ಧೋರಣೆಯನ್ನು ನೋಡಿದರೆ (ಕೆಲವು ಲೇಖಕರ ‘ಕಹಿ’ ಅನುಭವಗಳನ್ನು ಗಮನಕ್ಕೆ ತೆಗೆದುಕೊಂಡಂತೆ...) ನಮ್ಮ ಬರಹಗಳನ್ನು ಓದಿ ಯಾರು ಉದ್ಧಾರ ಆಗಬೇಕಾಗಿದೆ ಎಂಬ ವೈರಾಗ್ಯ ಬಂದು ಬಿಡುತ್ತದೆ. ಆದರೂ ಪತ್ರಿಕೆಗಳಿಗೆ ಲೇಖನಗಳನ್ನು ಕಳಿಸುವುದರಿಂದ ಒಂದು ಅನುಕೂಲವಿದೆ. ಸುಮ್ಮನೆ ನಿರೀಕ್ಷೆಯಲ್ಲಿ ಕಾಲ ಕಳೆಯಬಹುದಾದ್ದು. ಲಾಟರಿ ಕೊಂಡು ಫಲಿತಾಂಶ ಕಾಯುವ ಹಾಗೆ...ಕಾಯುವುದರಲ್ಲಿ ಖುಷಿಯಿದೆ ಸಾರ್...ಸುಮ್ಮನೆ ಬದುಕಿನಲ್ಲಿ ಯಾವುದಕ್ಕಾದರೂ ಕಾಯುತ್ತಿರಬೇಕು. ಹಾಗೆ ನೋಡಿದರೆ ಕನಿಷ್ಠ ನಿರೀಕ್ಷೆಗಳಾದರೂ ಇಲ್ಲದವನ ಬಾಳಿನಲ್ಲಿ ಏನಿದೆ ಸಾರ್? ನಿರೀಕ್ಷೆಗಳು ಮನುಷ್ಯನನ್ನು ಜೀವಿಸುವಂತೆ ಮಾಡುತ್ತದೆ. ಅವನಿಗರಿವಿಲ್ಲದಂತೆ...ಉದಾಹರಣೆಗೆ ನಾಳೆಗಳ ನಿರೀಕ್ಷೆಯಲ್ಲಿ ತೊಡಗುವುದರಿಂದ ಆಗುವ ಒಂದು ಉಪಯೋಗ ಏನು ಗೊತ್ತೆ? ಸುಲಭವಾಗಿ ಕಳೆದು ಹೋಗುವ ‘ಇಂದು’! ಆದುದರಿಂದ ಪತ್ರಿಕೆಗಳಿಗೆ ಲೇಖನ ಕಳಿಸಬೇಕು. ಆದರೆ ‘ರಿಟರ್ನ್ ಸ್ಟಾಂಪ್’ ಮಾತ್ರ ಇಡಬಾರದು. ಇಟ್ಟರೇ...ಗೊತ್ತೆ ಇದೆಯಲ್ಲ! ನನ್ನ ಎರಡು ಫೋಟೋಗಳನ್ನು ಇಟ್ಟಿದ್ದೇನೆ. ಇದರೊಟ್ಟಿಗೆ. ಒಂದು ಮೊನ್ನೆಯಷ್ಟೇ ತೆಗೆಸಿದ್ದು. ಮತ್ತೊಂದು ಸುಮಾರು ನಾಲ್ಕು ವರ್ಷ ಹಿಂದಿನದು. ಕಮ್ಯುನಿಸ್ಟ್ ಪ್ರಪಂಚದಲ್ಲಿದ್ದಾಗಿನ ಫೋಸ್! ಎಪ್ರಿಲ್ 23ಕ್ಕೆ ನನ್ನ ಪರೀಕ್ಷೆಗಳು ಮುಗಿಯುತ್ತದೆ. ಪರೀಕ್ಷೆಗಳನ್ನು ‘ಭಕ್ತಿ-ವಿಧೇಯತೆ’ಯಿಂದ ನಾನು ನಡೆಸಿಕೊಂಡಿಲ್ಲದ ಕಾರಣ ನೀವು ನಿರಾಶೆಪಡಬಹುದಾದ ಫಲಿತಾಂಶ ಬರಬಹುದೋ ಏನೋ? ಪರೀಕ್ಷೆಗಳಿಗೆ ಓದುವುದು ನನ್ನಿಂದ ಸಾಧ್ಯವಾಗುತ್ತಾ ಇಲ್ಲ ಸಾರ್. ಆಯಾ ಪರೀಕ್ಷೆಯ ಮುಂಚಿನ ಒಂದು ದಿನದಲ್ಲಿ ಓದುವುದು ನನ್ನ ಶೈಲಿ. ಆದುದರಿಂದ ‘ಪರೀಕ್ಷೆ’ ನನ್ನ ಮೇಲೆ ತಕ್ಕ ‘ಪ್ರತೀಕಾರ’ ಕೈಗೊಳ್ಳದೇ ಇರದು. ನನಗೆ ಚಿಂತೆ ಅದಲ್ಲ- ನಿಮಗಾಗ ಬಹುದಾದ ನಿರಾಶೆಯ ಬಗ್ಗೆ ಮಾತ್ರ. ನೋಡೋಣ ಏನಾಗುತ್ತದೆಯೆಂದು. ಮುಖೇಶನ ಪದ್ಯಗಳನ್ನು ಕೇಳಿ ಮುಗಿಸಿದ್ದೀರಾ ಸಾರ್? ಕೇಳಿ ಕೇಳಿ ಅಡಿಕ್ಟ್ ಆಗಿ ಬಿಡ್ತೀರಿ ಜೋಕೆ...ಆದರೆ ಅಪಾಯ ಏನೂ ಇಲ್ಲ. (ಜಾಗ ಇಲ್ಲವಲ್ಲ...ಎಲ್ಲಿ ಬರೀಲಿ...?)........
ಯುವರ್ಸ್‌,
ರಶೀದ್


ಸಾವಿನ ಕುರಿತಂತೆ ಆತ ಬರೆದ ಕವಿತೆಯೊಂದರ ಕೊನೆಯ ಸಾಲೊಂದು ಇಲ್ಲಿದೆ
........ನೀನು
ಬದುಕಿಗೆ
ರುಜುವಾಗುವ

ಹೊತ್ತಿಗೆ

ಬದುಕ ಬೊಗಸೆ

ಸದ್ದಿಲ್ಲದೇ ಸೋರಿ ಬರಿದು;

ನೀನು ಬದುಕಿಗೆ ಕೊಡುವರ್ಥ ಹಿರಿದು;

ಬದುಕಲುಂಟೆ

ಬದುಕಿಂದ ನಿನ್ನ ತೊರೆದು?

ಹಾಗಾಗಿ ನಾನು

ಮೆಚ್ಚಿಕೊಂಡಿದ್ದೇನೆ

ನಿನ್ನ ಕಣ್ಣುಗಳ

ಬೀಭತ್ಸ ಪ್ರೀತಿಗೆ

ನನ್ನೊಳಗೇ ಬೆಚ್ಚಿ ಬಿದ್ದಿದ್ದೇನೆ.......


ನನ್ನಿಂದ ತಲೆಮರೆಸಿ ಹೀಗೆ ಫೈಲಲ್ಲಿ ಕಳೆದ ಹತ್ತು ವರ್ಷಗಳಿಂದ ಜೀವ ಉಳಿಸಿಕೊಂಡಿದ್ದ ಈ ಪತ್ರದ ಚೂರನ್ನೂ ಸುಟ್ಟು ಹಾಕುವ ಮುನ್ನ ನನ್ನ ಬ್ಲಾಗಿನಲ್ಲಿ ದಾಖಲಿಸಬೇಕು ಅನ್ನಿಸಿತು. ಜೊತೆಗೆ ಆ ಪತ್ರದ ಜೆರಾಕ್ಸನ್ನೂ ಇಲ್ಲಿ ಲಗತ್ತಿಸಿದ್ದೇನೆ. ಪಿ. ಲಂಕೇಶ್, ಶಿವರಾಮಯ್ಯ ಸೇರಿದಂತೆ ಅವನ ಹತ್ತು ಹಲವು ಗೆಳೆಯರು ಅವನಿಗೆ ಬರೆದಿರುವ ಪತ್ರಗಳನ್ನು ಅವನ ಕಪಾಟಿನಲ್ಲಿ ನೋಡಿದ್ದೇನೆ. ಅದಕ್ಕೆ ಅವನು ಜೋಪಾನ ಬೀಗ ಹಾಕಿ
ಟ್ಟಿದ್ದ. ನಾನು ಮುಂಬಯಿಯಲ್ಲಿ ಎಂ.ಎ. ಮುಗಿಸಿ ಐದು ವರ್ಷ ಅಲ್ಲೇ ಪತ್ರಿಕೆಯೊಂದರಲ್ಲಿ ಕೆಲಸ ಮಾಡಿ, ಮರಳಿ ಮನೆ ಸೇರಿದೆ. ಕೆಲ ವರ್ಷಗಳ ಬಳಿಕ ನನ್ನ ಅರಿವಿಗೆ ಬಂತು. ಆ ಪತ್ರಗಳ ರಾಶಿಗಳನ್ನೆಲ್ಲ ಅವನು ಎಂದೋ ಸುಟ್ಟು ಹಾಕಿದ್ದ.

ಅಂದಹಾಗೆ ನಾನು ನನ್ನ ದೊಡ್ಡಪ್ಪ(ನನ್ನ ತಂದೆಯ ಅಣ್ಣ) ಕವಿ ದಿ. ಬಿ. ಎಂ. ಇದಿನಬ್ಬರ ಕುರಿತ ಸಂಸ್ಮರಣಾ ಗ್ರಂಥವೊಂದನ್ನು ತರಲು ಯೋಜನೆ ಹಾಕಿದ್ದೇನೆ. ಅವರು ತಮ್ಮ ಹರೆಯದಲ್ಲಿ ಸ್ಥಾಪಿಸಿದಮಾನವತಾ ಸಾಹಿತ್ಯ ಮಾಲೆಎನ್ನುವ ಪ್ರಕಾಶನಕ್ಕೆ ಮರುಜೀವ ಕೊಟ್ಟು ಅದರ ಮೂಲಕವೇ ಗ್ರಂಥವನ್ನು ಹೊರತರಲು ಸಿದ್ಧತೆ ನಡೆಸುತ್ತಿದ್ದೇನೆ. ಅವರ ಆತ್ಮೀಯರಿಗೆ ಪತ್ರಗಳನ್ನು ಬರೆಯಲು ಶುರು ಹಚ್ಚಿದ್ದೇನೆ. ಕೃತಿಗೆ ‘‘ಕಡಲ ಹಕ್ಕಿಯ ಹಾಡು-ದಿ. ಬಿ. ಎಂ. ಇದಿನಬ್ಬರ ಸಂಸ್ಮರಣಾ ಗ್ರಂಥ’’ ಎಂದು ಹೆಸರಿಟ್ಟರೆ ಹೇಗೆ ಎಂದು ಯೋಚಿಸುತ್ತಿದ್ದೇನೆ. ಅಂದ ಹಾಗೆ ಬಿ. ಎಂ. ಇದಿನಬ್ಬರು ಕಯ್ಯಿರ ಕಿಂಞಣ್ಣ ರೈಯವರಐಕ್ಯಗಾನವನ್ನು ವಿವಿಧ ಸಮಾರಂಭಗಳಲ್ಲಿ ಸುಮಾರು 4000 ಬಾರಿ ಹಾಡಿದ್ದರಂತೆ. ಹಾಗೆಯೇ ಕುವೆಂಪು ಅವರ ‘‘ಎಲ್ಲಾದರು ಇರು...’’ ಕವಿತೆಯನ್ನು ಒಂದು ಸಾವಿರಕ್ಕೂ ಅಧಿಕ ಬಾರಿ ಹಾಡಿದ್ದರಂತೆ. ‘ಇದು ನನ್ನ ಬದುಕಿನ ದೊಡ್ಡ ಸಾಧನೆ...ನಾನು ಮಾಡಿದ ಭಾಷಣಗಳಿಗಿಂತ ನನಗೆ ಇದೇ ದೊಡ್ಡದು...’ ಸ್ವತಃ ದೊಡ್ಡಪ್ಪ ಅವರೇ ನನ್ನೊಂದಿಗೆ ಹಂಚಿಕೊಂಡದ್ದು.

ಅವರ ಹಿರಿಯ ಮಗ ಬಿ. ಎಂ. ಭಾಷಾ ತಂದೆಯನ್ನು ನೆನೆದುಕೊಳ್ಳುವಾಗ ಒಂದು ವಿಷಯವನ್ನು ಹೇಳುತ್ತಾರೆ. ವೇದಿಕೆಯೊಂದರಲ್ಲೂ ಅದನ್ನು ಹಂಚಿಕೊಂಡಿದ್ದಾರೆ, ‘‘ನನ್ನ ತಂದೆ ನಮಗೆ ಯಾವಾಗಲೂ ಒಂದು ಮಾತನ್ನು ಹೇಳುತ್ತಿದ್ದರು. ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವಾಗ
ಮಾಜಿ ಶಾಸಕ ಇದಿನಬ್ಬರ ಮಗ ಎಂದು ಪರಿಚಯಿಸಿಕೊಳ್ಳಬೇಡಿ. ಬದಲಿಗೆ ಕವಿ ಬಿ. ಎಂ. ಇದಿನಬ್ಬರ ಮಗ ಎಂದು ಪರಿಚಯಿಸಿಕೊಳ್ಳಿ. ನಿಮಗೆ ಗೌರವ ಸಿಗುತ್ತದೆ’’
ಅವರ ಆತ್ಮಕತೆಯನ್ನು ನಾನು ಬರೆಯಬೇಕು ಎನ್ನುವುದು ಅವರ ಆಸೆಯಾಗಿತ್ತು. ಆದರೆ ಕೆಲವು ಕಾರಣಗಳಿಂದ ಅದನ್ನು ಈಡೇರಿಸುವುದಕ್ಕೆ ನನ್ನಿಂದ ಸಾಧ್ಯವಾಗಲಿಲ್ಲ. ದೊಡ್ಡಪ್ಪ ಈಗ ಇಲ್ಲ. ಅವರ ಆಸೆಯನ್ನು ಈಡೇರಿಸಲಾಗದ ಕೊರಗು ನನ್ನಲ್ಲಿ ಇನ್ನೂ ಹಾಗೆಯೇ ಉಳಿದುಕೊಂಡಿದೆ.

Monday, September 26, 2011

ಸಂತೋಷ ಮತ್ತು ಇತರ ಕತೆಗಳು

ಕೊಲೆ
ಅವನೊಬ್ಬ ಕ್ರೂರಿ. ನೂರಾರು ಕೊಲೆಗಳನ್ನು ಮಾಡಿದ್ದ.
ಅವನಿಗೆ ವಯಸ್ಸಾಯಿತು. ಮುದುಕನಾಗಿ ಅವನು ನಿಶ್ಶಕ್ತನಾಗಿ ಮೂಲೆ ಸೇರಿದ.
ಆಗ ನೂರಾರು ಜನ ಅವನ ಸುತ್ತ ಸೇರಿದರು.
ಅತ್ಯಂತ ಕ್ರೂರವಾಗಿ ಥಳಿಸಿ, ಥಳಿಸಿ ಕೊಂದರು.
ಬಳಿಕ ಹೇಳಿದರು ‘‘ಅವನನ್ನು ಕೊಂದೆವು’’
ಆದರೆ ಅವನು ಸತ್ತಿರಲಿಲ್ಲ.
ಅವರೆಲ್ಲರ ರಕ್ತದ ಕಣಕಣಗಳಲ್ಲಿ ಸೇರಿ, ನಗುತ್ತಿದ್ದ.

ಪ್ರಶ್ನೆ
ಹಲವರನ್ನು ಕೊಂದ ಕಟುಕನಿಗೆ ಗಲ್ಲು ಶಿಕ್ಷೆ ಘೋಷಿಸಲಾಗಿತ್ತು.
ಗಲ್ಲು ಶಿಕ್ಷೆಯ ದಿನ ಆತನೊಂದಿಗೆ ಕೇಳಿದರು
‘‘ನಿನಗೆ ಏನಾದರೂ ಆಸೆಗಳಿವೆಯೆ?’’
ಆತ ವಿಷಾದದಿಂದ ಉತ್ತರಿಸಿದ ‘‘ಈ ಪ್ರಶ್ನೆಯನ್ನು 20 ವರ್ಷಗಳ ಹಿಂದೆ ಕೇಳಿದ್ದಿದ್ದರೆ ನೀವು ನನಗೆ ಗಲ್ಲು ಶಿಕ್ಷೆ ನೀಡುವ ಪರಿಸ್ಥಿತಿಯೇ ಒದಗುತ್ತಿರಲಿಲ್ಲ. ತುಂಬಾ ತಡಮಾಡಿದಿರಿ’’

ಚಪ್ಪಲಿ
ಒಬ್ಬ ಜಿಪುಣ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಬರಿಗಾಲಲ್ಲಿ ನಡೆದುಕೊಂಡು ಹೋಗುತ್ತಿದ್ದ.
ಬಿಸಿಲು ಸುಡುತ್ತಿದ್ದರೂ, ಚಪ್ಪಲಿ ಸವೆಯುತ್ತದೆಯಲ್ಲ ಎನ್ನುವುದು ಅವನ ಆತಂಕ.
ದಾರಿ ಹೋಕನೊಬ್ಬ ಅದನ್ನು ನೋಡಿ ಕೇಳಿದ ‘‘ಹಾಗಾದರೆ ಚಪ್ಪಲಿಯನ್ನು ಕೊಂಡುಕೊಂಡದ್ದಾದರೂ ಯಾಕೆ?’’
‘‘ನಾನೆಲ್ಲಿ ಕೊಂಡುಕೊಂಡೆ? ಇದು ನನ್ನ ಅಪ್ಪನಿಗೆ ನನ್ನ ತಾತನಿಂದ ಸಿಕ್ಕಿದ್ದು. ಅಪ್ಪನಿಂದ ನನಗೆ ಸಿಕ್ಕಿತು’’ ಜಿಪುಣ ಉತ್ತರಿಸಿದ.

ಹಣ್ಣು
ಒಬ್ಬ ಹಣ್ಣಿನ ವ್ಯಾಪಾರಿ ಸಂತೆಯಲ್ಲಿ ಕುಳಿತಿದ್ದ.
‘ಸಿಹಿಯಾದ ಹಣ್ಣು...ಸಿಹಿಯಾದ ಹಣ್ಣು ಬನ್ನಿ ಬನ್ನಿ’ ಎಂದು ಕೂಗುತ್ತಿದ್ದ.
ಅಷ್ಟರಲ್ಲಿ ಒಬ್ಬ ಸಿಟ್ಟಿನಿಂದ ಬಂದು ಹೇಳಿದ ‘‘ನೀನು ಸುಳ್ಳು ಹೇಳುತ್ತಿದ್ದೀಯ...ಅದು ಹುಳಿ ಹಣ್ಣು...ನಿನ್ನೆ ತೆಗೆದುಕೊಂಡು ಹೋಗಿ ನಾನು ಮೋಸ ಹೋದೆ...ಸುಳ್ಳುಗಾರ...’’
ವ್ಯಾಪಾರಿ ತಣ್ಣಗೆ ಹೇಳಿದ ‘‘ನೀನು ಶ್ರೀರಾಮ ಅನ್ನುವುದು ನನಗೆ ಗೊತ್ತಿದ್ದಿದ್ದರೆ ನಾನದನ್ನು ಶಬರಿಯಂತೆ ಕಚ್ಚಿ ರುಚಿ ನೋಡಿ ಕೊಡುತ್ತಿದ್ದೆ’’

ಸಂತೋಷ
ಜೋರಾದ ಬಿರುಗಾಳಿಗೆ ಸಂತನ ಆಶ್ರಮ ಬಿದ್ದು ಬಿಟ್ಟಿತು. ಶಿಷ್ಯರು ಆತಂಕದಿಂದ ಕೇಳಿದರು ‘‘ಗುರುಗಳೇ ಏನು ಮಾಡೋಣ?’’
ಸಂತ ಹೇಳಿದ ‘‘ಬೀಳುವುದಕ್ಕೆ ಇನ್ನೇನು ಇಲ್ಲವಲ್ಲ ಎಂದು ಸಂತೋಷ ಪಡೋಣ’’

ಸ್ವರ್ಗ-ನರಕ
ನರಕ-ಸ್ವರ್ಗ ಅಕ್ಕಪಕ್ಕದಲ್ಲಿದ್ದರು.
ನರಕದ ಆಕ್ರಂದನ ಸ್ವರ್ಗದವರಿಗೆ ಕೇಳುತ್ತಿತ್ತು.
ಸ್ವರ್ಗದ ಸುಖ ನರಕದವರಿಗೆ ಕಾಣುತ್ತಿತ್ತು.
ದೇವರು ಸ್ವರ್ಗದವರಲ್ಲಿ ಕೇಳಿದ ‘‘ಹೇಗಿದ ಸ್ವರ್ಗ?’’
ಸ್ವರ್ಗದವರು ಹೇಳಿದರು ‘‘ದೇವರೇ, ಈ ಆಕ್ರಂದನವನ್ನು ಕೇಳಿಕೊಂಡು ನಾವು ಸುಖ ಪಡುವುದು ಸಾಧ್ಯವೆ?’’
ದೇವರು ನರಕದವರಲ್ಲಿ ಕೇಳಿದ ‘‘ಹೇಗಿದೆ ನರಕ?’’
ಅವರು ರೋದಿಸುತ್ತಾ ಹೇಳಿದರು ‘‘ದೇವರೇ...ಸ್ವರ್ಗದವರ ಸುಖ ನಮ್ಮನ್ನು ಬೆಂಕಿಗಿಂತಲೂ ತೀವ್ರವಾಗಿ ಸುಡುತ್ತಿದೆ. ದಯವಿಟ್ಟು ಅದರಿಂದಲಾದರೂ ನಮ್ಮನ್ನು ರಕ್ಷಿಸು’’

ಗಂಡು
ಮರಣದ ನೋವನ್ನು ಅನುಭವಿಸುತ್ತಾ ಚೀರಾಡುತ್ತಿದ್ದ ಆಕೆ ಕೊನೆಗೂ ಹೆತ್ತಳು.
ದಾದಿಯರು ಸಂತೋಷದಿಂದ ಉದ್ಗರಿಸಿದರು ‘‘ಮಗು ಗಂಡು!’’
‘‘ಆ ಮರಣದ ನೋವನ್ನು ಅನುಭವಿಸುವಾಗಲೇ ನನಗೆ ಗೊತ್ತಾಗಿ ಬಿಟ್ಟಿತ್ತು, ಗಂಡು ಮಗುವಾಗಿರಬೇಕೆಂದು’’ ತಾಯಿ ತನಗೆ ತಾನೆ ನಿಟ್ಟುಸಿರಿಟ್ಟು ಹೇಳಿದರು.

ಕಳವು
ಜೇನು ನೊಣವನ್ನು ನೋಡಿ ಬರೇ ನೊಣವೊಂದು ಕೇಳಿತು ‘‘ಪ್ರತಿ ಬಾರಿ ನೀನು ತಯಾರಿಸಿದ ಜೇನನ್ನು ಮನುಷ್ಯರು ಕದಿಯುತ್ತಾರೆ. ನಿನಗೆ ದುಃಖವಾಗುವುದಿಲ್ಲವೆ?’’
ಜೇನು ನೊಣ ನಕ್ಕು ಹೇಳಿತು ‘‘ಅವರು ಜೇನನ್ನಷ್ಟೇ ಕದಿಯಬಲ್ಲರು. ಜೇನು ತಯಾರಿಸುವ ನನ್ನ ಕಲೆಯನ್ನಲ್ಲ’’.

ಮಕ್ಕಳು
ಅವರಿಬ್ಬರು ನೆರೆ-ಹೊರೆಯವರು.
ಇಬ್ಬರು ಒಟ್ಟಿಗೆ ಮದುವೆಯಾದರು.
ಅವನಿಗೊಂದು ಮಗುವಾಯಿತು.
ಇವನಿಗೋ ಮಗುವಾಗಲಿಲ್ಲ.
ಕಾದು ಸುಸ್ತಾಗಿ ಆತ ಒಂದು ತೆಂಗಿನ ಗಿಡವನ್ನು ನೆಟ್ಟು ‘ಇದೇ ನನ್ನ ಮಗು’ ಎಂದ.

ಅವನಿಗೆ ಎಷ್ಟು ಮಕ್ಕಳಾಯಿತೋ, ಇವನು ಅಷ್ಟೇ ತೆಂಗಿನ ಗಿಡಗಳನ್ನು ನೆಡುತ್ತಾ, ಅವುಗಳನ್ನು ಪ್ರೀತಿಸತೊಡಗಿದ.
ಕಾಲ ಸರಿದಂತೆ ಅವನ ಮಕ್ಕಳು, ಇವನ ಗಿಡಗಳು ಬೆಳೆದವು.
ಮಕ್ಕಳು ದಾರಿತಪ್ಪಿದರು. ಆದರೆ ತೆಂಗಿನ ಗಿಡ ಎತ್ತೆರೆತ್ತರ ಬೆಳೆದು ಫಲಬಿಡತೊಡಗಿದವು.
ಒಂದು ದಿನ ಬೆಳೆದ ಮಕ್ಕಳು ‘ಅವನ’ನ್ನು ಮನೆಯಿಂದ ಹೊರ ಹಾಕಿದರು.
ಅವನು ಬಿಕ್ಕುತ್ತಾ, ನೆರೆಯ
‘ಇವನ’ ಮನೆಗೆ ಬಂದ.
ಇವನು ತನ್ನ ತೆಂಗಿನ ಗಿಡದಿಂದ ಎಳೆನೀರನ್ನು ಕಿತ್ತು, ಅವನಿಗಿತ್ತು ಸಂತೈಸಿದ.


ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Monday, September 19, 2011

ಅಳು ತರಿಸುವ ‘ರಾಂಪನ ಜೋಕು’ಗಳು

ರಾಮಪ್ಪರ ಜೊತೆ ಸಂವಹನ ನಡೆಸುತ್ತಿರುವ ತುಳು ದೈವ.

ನೀವು ಕರಾವಳಿಯ ಯಾರಲ್ಲಾದರೂ ‘ರಾಮಪ್ಪ ಪೂಜಾರಿ ನಿಮಗೆ ಗೊತ್ತಾ ?’ ಎಂದು ಕೇಳಿ. ಯಾವ ‘ರಾಮಪ್ಪ ?’ ಎಂದು ನಿಮ್ಮನ್ನು ಮರು ಪ್ರಶ್ನಿಸುತ್ತಾರೆ. ಈಗ ನಿಮ್ಮ ಪ್ರಶ್ನೆಯನ್ನು ತುಸು ಬದಲಿಸಿ. ‘ರಾಂಪ ನಿಮಗೆ ಗೊತ್ತಾ ?’ ಎಂದು ಕೇಳಿ. ಆತನ ಮುಖ ಒಮ್ಮೆಲೇ ಅರಳುತ್ತದೆ. ಅದಷ್ಟೇ ಸಾಕು ‘ರಾಂಪ’ ಎನ್ನುವ ಹೆಸರಿನ ಜನಪ್ರಿಯತೆಯನ್ನು ಊಹಿಸಲು. ಕರಾವಳಿಯ ಪುಟ್ಟ ಮಗುವಿನಿಂದ ಹಿಡಿದು, ಹಣ್ಣು ಮುದುಕನವರೆಗೂ ‘ರಾಂಪ’ ಎಂದರೆ ಗೊತ್ತು. ಇವರೆಲ್ಲರೂ ಒಂದಲ್ಲ ಒಂದು ಕ್ಷಣದಲ್ಲಿ ‘ರಾಂಪನ ಜೋಕು’ಗಳನ್ನು ಹೇಳಿಕೊಂಡು ನಕ್ಕಿದ್ದಾರೆ. ಆದರೆ ಇವರಾರಿಗೂ ರಾಮಪ್ಪ ಪೂಜಾರಿ ಗೊತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ರಾಂಪ ಮತ್ತು ರಾಮಪ್ಪ ಪೂಜಾರಿ ಒಂದೇ ವ್ಯಕ್ತಿಯ ಹೆಸರುಗಳು ಎನ್ನುವುದೂ ಗೊತ್ತಿಲ್ಲ. ಇವರು ತಮಾಷೆ ಮಾಡಿ ನಕ್ಕಿರುವುದು ಸ್ವತಃ ತಮ್ಮನ್ನೇ ತಾವು ಅಣಕಿಸಿ ಎನ್ನುವುದು ಕೂಡ ಗೊತ್ತಿಲ್ಲ.

ಕರಾವಳಿಯಲ್ಲಿ ಮೇಲ್ವರ್ಣೀಯ ಮತ್ತು ಮೇಲ್ವರ್ಗದ ಜಾತಿ ರಾಜಕಾರಣಕ್ಕೆ ಬಲಿಯಾದ ಹತ್ತು ಹಲವು ಗಣ್ಯರಲ್ಲಿ ಈ ರಾಮಪ್ಪಣ್ಣರೂ ಒಬ್ಬರು. ಒಂದು ವೇಳೆ ರಾಮಪ್ಪ ಪೂಜಾರಿಯವರು ಮೇಲ್ವರ್ಣೀಯನಾಗಿ ಹುಟ್ಟಿದ್ದಿದ್ದರೆ ಇಂದು ಮಂಗಳೂರಿನಲ್ಲಿ ಅವರ ಹೆಸರಿನಲ್ಲೊಂದು ಸ್ಮಾರಕ ಇರುತ್ತಿತ್ತೋ ಏನೋ. ಒಂದು ಕಾಲದಲ್ಲಿ ‘ಉಡುಪಿ ಹೊಟೇಲ್’ ಮಾಡಿ ಹೆಸರು ಪಡೆದ ಅದೆಷ್ಟೋ ಮೇಲ್ಜಾತಿ ಜನರನ್ನು ಕರಾವಳಿಯ ಜನರು ನೆನಪಿಸಿಕೊಳ್ಳುತ್ತಾರೆ. ಅವರು ಯಾವ ಸಮಾಜ ಸೇವೆ ಮಾಡದಿದ್ದರೂ ಕೂಡ. ಆದರೆ ಹೊಟೇಲ್ ಉದ್ಯಮದಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ, ರಾಜಕೀಯದಲ್ಲಿ ಒಬ್ಬ ಅನಕ್ಷರಸ್ಥ, ಶೂದ್ರ ವರ್ಗದ ಬಿಲ್ಲವನೊಬ್ಬ ಸಾಧಿಸಿದ ಸಾಧನೆಯನ್ನು ಸಹಿಸದ ಶಕ್ತಿಗಳು ಆತನ ಒಳ್ಳೆಯತನವನ್ನು, ಸಮಾಜಸೇವೆಯನ್ನು ತಮಾಷೆಯ ವಸ್ತುವಾಗಿಸಿ, ಆತನನ್ನು ಸಂಪೂರ್ಣ ಮುಗಿಸಿ ಬಿಡಲು ಹವಣಿಸಿದವು. ಹೊಟೇಲ್ ಉದ್ಯಮದಲ್ಲಿ ಒಳ್ಳೆಯತನ, ಸಮಾಜಸೇವೆ, ಮಾನವೀಯತೆ ಇತ್ಯಾದಿ ವೌಲ್ಯಗಳನ್ನು ಬಿತ್ತಲು ರಾಮಪ್ಪ ಪೂಜಾರಿಯವರು ನಡೆಸಿದ ವಿಫಲ ಪ್ರಯತ್ನದ ಕಾರಣಕ್ಕಾಗಿ ಇಂದು ಅವರು ‘ರಾಂಪ’ನಾಗಿ ಜನರಿಂದ ತಮಾಷೆಗೊಳಪಡಬೇಕಾಯಿತು. ಈ ಹುನ್ನಾರಗಳನ್ನು, ರಾಜಕೀಯವನ್ನು ಅರಿಯದ ಶೂದ್ರ ತರುಣರೇ, ಅವರ ಹೆಸರಿನಲ್ಲಿ ‘ಜೋಕು’ಗಳನ್ನು ಹೇಳಿಕೊಂಡು ಇಂದು ಮೇಲ್ವರ್ಗದ ಜನರನ್ನು ನಗಿಸುತ್ತಿದ್ದಾರೆ.

ರಾಮಪ್ಪ ಪೂಜಾರಿಯವರನ್ನು ಮೇಲೆತ್ತಿದ್ದು ಯಾವ ಮೀಸಲಾತಿಯೂ ಅಲ್ಲ. ಮೇಲ್ವರ್ಗದ ಜನರ ಅನುಕಂಪವೂ ಅಲ್ಲ. ನಾಲ್ಕಕ್ಷರವೂ ಗೊತ್ತಿಲ್ಲದ ರಾಮಪ್ಪ ಪೂಜಾರಿ ಎರಡು ದೊಡ್ಡ ಮಾಂಸಾಹಾರಿ ಹೊಟೇಲ್‌ಗಳನ್ನು ಆರಂಭಿಸಿ ಮಂಗಳೂರಿನ ಹೊಟೇಲ್ ಉದ್ಯಮವನ್ನು ಅಲ್ಲಾಡಿಸಿದವರು. ರಾಮಪ್ಪನವರು ಹುಟ್ಟಿದ್ದು 1925ರಲ್ಲಿ, ಸೋಂಪ ಪೂಜಾರಿ ಮತ್ತು ದುಗ್ಗೆ ಪೂಜಾರ್ತಿಯವರ ಮಗನಾಗಿ. ಆಗ ದಕ್ಷಿಣ ಕನ್ನಡದಲ್ಲಿ ಬಿಲ್ಲವ ಸಮುದಾಯ ಅದೆಷ್ಟು ಕೆಟ್ಟ ಪರಿಸ್ಥಿತಿಯಲ್ಲಿತ್ತೆಂದರೆ, ಅಕ್ಷರವೆನ್ನುವುದು ಅವರ ಪಾಲಿಗೆ ಕನಸಾಗಿತ್ತು. ಊರಿಗೆ ಉಣಿಸಲು ಹೊಟೇಲು ಇಡುವುದಿರಲಿ, ಒಂದು ಹೊತ್ತಿನ ಊಟ ಸಿಕ್ಕಿದರೆ ಅದವರ ಭಾಗ್ಯವಾಗಿತ್ತು. ಮನೆಯ ಪರಿಸ್ಥಿತಿ ತೀರ ಕೆಟ್ಟಾಗ ತನ್ನ 14ನೆ ವಯಸ್ಸಿನಲ್ಲಿ ಮನೆ ಬಿಟ್ಟು ಓಡಿ, ಮಂಗಳೂರಿಗೆ ಬಂದರು. ಕಂಕನಾಡಿಯ ರೆಸ್ಟೋರೆಂಟೊದರಲ್ಲಿ ಗ್ಲಾಸು ತೊಳೆಯುವ ಮೂಲಕ ಹೊಟೇಲ್ ಬದುಕನ್ನು ಆರಂಭಿಸಿದರು. ಅಲ್ಲಿಂದ ಅವರ ಬದುಕು ಚಿಗುರತೊಡಗಿತು. ತನ್ನ ಶ್ರಮದಿಂದಲೇ ಹೊಟೇಲ್ ಮಾಲಕರ ಹೃದಯ ಗೆದ್ದ ರಾಮಪ್ಪ ವರ್ಷಗಳ ಬಳಿಕ ತನ್ನದೇ ಆದ ಒಂದು ಹೊಟೇಲನ್ನು ಕಂಕನಾಡಿಯಲ್ಲಿ ಆರಂಭಿಸಿದರು. ಆಮೇಲೆ ಅದು ಕಂಕನಾಡಿ ರೆಸ್ಟೋರೆಂಟ್ ಎಂದೇ ಹೆಸರು ಪಡೆದು ಜನಪ್ರಿಯವಾಯಿತು. ಬಳಿಕ ಹಂಪನಕಟ್ಟೆಯಲ್ಲಿ ರಾಜ್‌ಕಮಲ್ ಎಂಬ ಹೊಟೇಲ್ ಆರಂಭಿಸಿದರು. ಅವರು ಸುತ್ತಲಿನ ಹೊಟೇಲ್ ಉದ್ಯಮಿಗಳು ಅಚ್ಚರಿ ಪಡೆಯುವ ವೇಗದಲ್ಲಿ ಬೆಳೆಯ ತೊಡಗಿದರು. ಜಪ್ಪಿನಮೊಗರಿನಲ್ಲಿ ಬೃಹತ್ ಬಂಗಲೆಯನ್ನು ಕಟ್ಟಿದರು ಮಾತ್ರವಲ್ಲ, ಪರಿಸರದಲ್ಲಿ ಮೊತ್ತ ಮೊದಲು ವಿದ್ಯುತ್, ದೂರವಾಣಿ ಭಾಗ್ಯ ಕಂಡ ಮನೆ ಅವರದಾಗಿತ್ತು.

ಹಸಿವಿನ ಕುರಿತು ಅವರಿಗೆ ಚೆನ್ನಾಗಿ ಪರಿಚಯವಿತ್ತು. ಆದುದರಿಂದಲೇ ಅವರಿಗೆ ಹೊಟೇಲ್ ಎನ್ನುವುದು ಬರೇ ಒಂದು ದಂಧೆಯಾಗಿರಲಿಲ್ಲ. ಮಂಗಳೂರಿನ ಹೊಟೇಲ್ ಉದ್ಯಮದಲ್ಲೇ ಮೊತ್ತ ಮೊದಲ ಬಾರಿಗೆ 5 ರೋಪಾಯಿಗೆ ಹೊಟ್ಟೆ ತುಂಬಾ ಊಟ ಎಂದು ಘೋಷಿಸಿದರು. ಯಾವನೇ ಬಂದು 5 ರೂ. ಕೊಟ್ಟು ಎಷ್ಟು ಬೇಕಾದರೂ ಉಣ್ಣಬಹುದು. ಎಕ್ಸ್‌ಟ್ರಾ ಊಟಕ್ಕೆ ಚಾರ್ಜಿಲ್ಲ ಎಂಬ ನಿಯಮವನ್ನು ತಮ್ಮ ಹೊಟೇಲ್‌ನಲ್ಲಿ ಜಾರಿಗೆ ತಂದರು. ಇದು ಕರಾವಳಿಯಾದ್ಯಂತ ಭಾರೀ ಜನಪ್ರಿಯತೆಯನ್ನು ಪಡೆಯಿತು. ಇದೇ ಸಂದರ್ಭದಲ್ಲಿ ಊಟ ಮಾಡಿದವರು ಹೊಟ್ಟೆ ತುಂಬಾ ಉಂಡು ಅನ್ನವನ್ನು ತಟ್ಟೆಯಲ್ಲಿ ಉಳಿಸಿ ಹೂಗುವುದನ್ನು ಗಮನಿಸಿದರು. ಇದನ್ನು ಸಹಿಸದ ರಾಮಪ್ಪ ತಟ್ಟೆಯಲ್ಲಿ ಊಟ ಬಿಟ್ಟರೆ 50 ಪೈಸೆ ದಂಡ ಎಂಬ ನೋಟಿಸನ್ನು ಹೊಟೇಲ್‌ನೊಳಗೆ ಹಾಕಿದರು. ಮಂಗಳೂರಿಗೆ ಬರುವ ಹಳ್ಳಿಯ, ದೂರದ ಕೇರಳದ ಜನರಿಗೆ ರಾಮಪ್ಪ ಪೂಜಾರಿಯವರ ಹೊಟೇಲ್ ಅಚ್ಚುಮೆಚ್ಚಿನ ಹೊಟೇಲಾಗಿತ್ತು. ತನ್ನ ಹೊಟೇಲ್‌ನಲ್ಲಿ ಬಡವರಿಗೆ ರಿಯಾಯಿತಿಯಲ್ಲಿ ಅನ್ನವನ್ನು ನೀಡುತ್ತಿದ್ದರು. ಸ್ಥಳೀಯ ಮಿಲಾಗ್ರಿಸ್ ಶಾಲೆಯ ವಿದ್ಯಾರ್ಥಿಗಳಿಗೂ ಊಟದಲ್ಲಿ ರಿಯಾಯಿತಿ ಇರುತ್ತಿತ್ತು. ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ರಾಮಪ್ಪ ಪೂಜಾರಿ ಮಕ್ಕಳ ದಿನಾಚರಣೆ, ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಸಿಹಿ ಹಂಚುವುದನ್ನು ಒಂದು ಸಂಪ್ರದಾಯವನ್ನಾಗಿ ಮಾಡಿಕೊಂಡಿದ್ದರು. ಶಾಲೆಗಳಿಗೆ ಅಪಾರ ಧನಸಹಾಯವನ್ನು ಮಾಡುತ್ತಿದ್ದರು. ಗೋಕರ್ಣನಾಥ ಶಾಲೆಗೆ ಆ ಕಾಲದಲ್ಲೇ ಒಂದು ಲಕ್ಷ ರೂಪಾಯಿ ದಾನವಾಗಿ ನೀಡಿದ್ದರು. ಕೋಳಿ ಅಂಕ, ಕಂಬಳ ಇವರ ಪ್ರೀತಿಯ ತುಳು ಕ್ರೀಡೆಗಳಾಗಿದ್ದವು. ಇದಕ್ಕಾಗಿ ಅಪಾರ ಹಣ ವೆಚ್ಚ ಮಾಡುತ್ತಿದ್ದರು. ನೇಮ, ತುಳು ದೈವಗಳಿಗಾಗಿಯೂ ಹಣವನ್ನು ಚೆಲ್ಲುತ್ತಿದ್ದರು.

ರಾಮಪ್ಪ ಪೂಜಾರಿ ಮಂಗಳೂರಿನ ಉಳಿದ ‘ಉಡುಪಿ ಹೊಟೇಲ್’ ಸೇರಿದಂತೆ ಗಣ್ಯ ಹೊಟೇಲ್ ಉದ್ಯಮಿಗಳಿಗೆ ತಲೆನೋವಾಗಿ ಪರಿಣಮಿಸಿದರು. ಇಂತಹ ಸಂದರ್ಭದಲ್ಲೇ, ಹೊಟೇಲ್‌ನಲ್ಲಿ 5 ರೂಪಾಯಿಗೆ ಹೊಟ್ಟೆ ತುಂಬಾ ಊಟ, ಅನ್ನ ಬಿಟ್ಟರೆ ಅದಕ್ಕೆ ದಂಡ ಇತ್ಯಾದಿ ಕ್ರಮವನ್ನು ತಮಾಷೆ ಮಾಡಲು ಆರಂಭಿಸಿದರು. ರಾಮಪ್ಪ ಪೂಜಾರಿ ಅದೆಷ್ಟು ದೊಡ್ಡ ಉದ್ಯಮಿಯಾಗಿ ಬೆಳೆದಿದ್ದರೂ, ಅವರ ಅನಕ್ಷರತೆ, ಜಾತಿ ತಮಾಷೆಗೆ ವಸ್ತುವಾಯಿತು. ಅವರ ಒಳ್ಳೆಯತನ, ಮಾನವೀಯತೆಗಳೆಲ್ಲ ಇವರಿಗೆ ಹಾಸ್ಯಸ್ಪದ ಎನ್ನಿಸತೊಡಗಿತ್ತು. ಹೀಗೆ ರಾಮಪ್ಪ ಪೂಜಾರಿಯನ್ನು ಮಟ್ಟ ಹಾಕಲು ಒಂದು ಸಂಚಿನ ರೂಪದಲ್ಲಿಯೇ ಅವರ ವಿರುದ್ಧ ‘ಜೋಕು’ಗಳು ಹುಟ್ಟಿಕೊಂಡವು. ಅವು ಎಷ್ಟು ವ್ಯಾಪಕವಾಗಿ ಹರಡತೊಡಗಿದವು ಎಂದರೆ, ಕೆಲ ಜನರು ರಾಮಪ್ಪ ಪೂಜಾರಿಯವರ ಹೊಟೇಲ್‌ನಲ್ಲೇ ಕುಳಿತು, ಅವರ ರಿಯಾಯಿತಿ ಊಟವನ್ನೇ ಉಣ್ಣುತ್ತಾ ಅವರ ವಿರುದ್ಧ ಜೋಕುಗಳನ್ನು ಹೇಳತೊಡಗಿದರು. ಆದರೆ ಇದಕ್ಕೆ ರಾಮಪ್ಪ ಪೂಜಾರಿ ಮಾತ್ರ ಕಿವುಡಾಗಿದ್ದರು. ಪತ್ರಿಕೆಯೊಂದು ಅವರ ಕುರಿತ ಜೋಕುಗಳನ್ನು ಪ್ರತಿ ವಾರ ತನ್ನ ಪತ್ರಿಕೆಯಲ್ಲಿ ಛಾಪಿಸತೊಡಗಿತ್ತು. ಆದರೆ ರಾಮಪ್ಪ ಆ ಕಡೆ ತಲೆಯೆತ್ತಿಯೂ ನೋಡಿಲ್ಲ. ಈ ದಾಳಿ ಅದೆಷ್ಟು ತೀವ್ರವಾಗಿತ್ತೆಂದರೆ, ಅವರ ಪತ್ನಿಯ ಮೇಲೂ ಜೋಕುಗಳು ಹರಿದಾಡ ತೊಡಗಿದವು. ಆದರೂ ಈ ಕುರಿತು ಆಕ್ರೋಶದ ಮಾತನ್ನು ಆಡಿದವರಲ್ಲ ರಾಮಪ್ಪ ಪೂಜಾರಿ. ‘ಅಕ್ಲೆನ್ ದೇವೆರ್ ತೂಪೆರ್ (ಅವರನ್ನು ದೇವರು ನೋಡಿಕೊಳ್ಳುತ್ತಾರೆ)’ ಎಂದಷ್ಟೇ ಪ್ರತಿಕ್ರಿಯಿಸುತ್ತಿದ್ದರು.

ಇಂದು ಬಿಲ್ಲವ ನಾಯಕ, ರಾಷ್ಟ್ರಮಟ್ಟದ ರಾಜಕಾರಣಿ ಎಂದು ಗುರುತಿಸಿಕೊಳ್ಳುವ ಮಾಜಿ ಸಚಿವ ಜನಾರ್ದನ ಪೂಜಾರಿ ಈ ಮಟ್ಟಕ್ಕೆ ಏರಿದ್ದರೆ ಅದರ ಹಿಂದೆ ರಾಮಪ್ಪ ಪೂಜಾರಿಯವರಿದ್ದಾರೆ. ಜನಾರ್ದನ ಪೂಜಾರಿಯವರ ಆರಂಭದ ರಾಜಕೀಯ ನಡೆಗಳಲ್ಲಿ ಜೊತೆ ನೀಡಿದವರು ರಾಮಪ್ಪ ಪೂಜಾರಿ. ಮುಂದೆ ಜನಾರ್ದನ ಪೂಜಾರಿ ಕೇಂದ್ರದಲ್ಲಿ ಸಚಿವರಾದರು. ಅನಕ್ಷರಸ್ಥ ಶೂದ್ರ ರಾಮಪ್ಪ ಪೂಜಾರಿ ಈ ಮೂಲಕ ತನ್ನ ರಾಜಕೀಯ ವರ್ಚಸ್ಸನ್ನು ದಿಲ್ಲಿಯವರೆಗೂ ಬೆಳೆಸಿದರು. ತಮಾಷೆಯೆಂದರೆ, ಜನಾರ್ದನ ಪೂಜಾರಿ ರಾಜಕೀಯವಾಗಿ ರಾಷ್ಟ್ರಮಟ್ಟದಲ್ಲಿ ಬೆಳೆದು ನಿಂತಾಗ, ಮೇಲ್ವರ್ಗದ ಜನ ರಾಮಪ್ಪ ಪೂಜಾರಿಯ ಜೊತೆಗೆ ಜನಾರ್ದನ ಪೂಜಾರಿಯ ಹೆಸರನ್ನು ಜೋಕಿನಲ್ಲಿ ಸೇರಿಸಿ ತಮಾಷೆ ಮಾಡತೊಡಗಿದರು. ಕರಾವಳಿಯ ರಾಂಪನ ಹೆಚ್ಚಿನ ಜೋಕುಗಳಲ್ಲಿ ಆತ್ಮೀಯ ಗೆಳೆಯ ಜನಾರ್ದನ ಪೂಜಾರಿಯವರೂ ಬರುತ್ತಾರೆ. ವೀರಪ್ಪ ಮೊಯ್ಲಿ, ಗುಂಡೂರಾವ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ರಾಮಪ್ಪ ಪೂಜಾರಿಯವರಿಗೆೆ ಹತ್ತಿರವಾಗಿದ್ದರು. ಬಂಗಾರಪ್ಪ ಹತ್ತಿರವಾದಾಗ ಜನಾರ್ದನ ಪೂಜಾರಿ ದೂರವಾದರು. ಆದರೂ ಹೆಚ್ಚಿನ ರಾಜಕೀಯ ನಾಯಕರು ರಾಮಪ್ಪ ಪೂಜಾರಿಯ ಆರ್ಥಿಕ ಬೆಂಬಲದೊಂದಿಗೇ ಮೇಲೆ ಬಂದಿದ್ದರು.
ಕರಾವಳಿಯಲ್ಲಿ ‘ಮುಂಗಾರು’ ಪತ್ರಿಕೆ ಹುಟ್ಟಿಕೊಂಡಾಗ ಅದರ ಬೆನ್ನಿಗೆ ಬಲವಾಗಿ ನಿಂತವರು ರಾಮಪ್ಪಣ್ಣ. ಉದ್ಯಮಿಗಳನ್ನೂ, ರಾಜಕಾರಣಿಗಳನ್ನೂ ಸದಾ ದೂರವಿಡುತ್ತಲೇ ಬಂದಿದ್ದ ವಡ್ಡರ್ಸೆ ರಾಮಪ್ಪಣ್ಣರಿಗೆ ಮಾತ್ರ ಹತ್ತಿರದ ವ್ಯಕ್ತಿಯಾಗಿದ್ದರು. ಇದೇ ರಾಮಪ್ಪಣ್ಣರ ಮನೆಯಲ್ಲಿ ನಡೆದ ಭೂತದ ಕೋಲದ ಸುದ್ದಿಯೊಂದು ಮುಂಗಾರು ಪತ್ರಿಕೆಯ ಸಂಪಾದಕೀಯ ಬಳಗದೊಳಗೆ ಬಿರುಕು ತಂದಿತು ಎನ್ನುವುದನ್ನು ಪತ್ರಕರ್ತರೊಬ್ಬರು ನೆನಪಿಸಿಕೊಳ್ಳುತ್ತಾರೆ.

ಇಂತಹ ರಾಮಪ್ಪ ಪೂಜಾರಿಯವರಿಗೆ ಒಬ್ಬ ಪುಟ್ಟ ಹೆಣ್ಣು ಮಗಳಿದ್ದಳು. 5ನೆ ವರ್ಷಕ್ಕೆ ಆ ಮಗು ಕಾಯಿಲೆಯಿಂದ ತೀರಿ ಹೋಯಿತು. ಮುಂದೆ ಮಕ್ಕಳಿಲ್ಲದೆ ತಮ್ಮ ನೆಂಟರಿಷ್ಟರನ್ನು, ಅನಾಥರನ್ನು ಮಕ್ಕಳೆಂದು ತಿಳಿದು ಸಾಕಿದರು. ಮಕ್ಕಳೇ ಇಲ್ಲದಿದ್ದರೂ ಅವರ ಮನೆ ಅವಿಭಕ್ತ ಕುಟುಂಬವಾಗಿತ್ತು. ಸುಮಾರು 70 ಜನರು ಆ ಕುಟುಂಬದ ಸದಸ್ಯರಾಗಿದ್ದರು. ಬಡವರನ್ನು ಹುಡುಕಿ ಅವರನ್ನು ಮನೆಗೆ ಕರೆದು ಊಟ ಹಾಕುತ್ತಿದ್ದರು. ಇಂತಹ ಬಿಲ್ಲವ ನಾಯಕನನ್ನು ಬಿಲ್ಲವರೇ ಮರೆತು ಬಿಟ್ಟಿದ್ದಾರೆ. ಬಿಲ್ಲವ ತರುಣರೇ ರಾಂಪನ ಜೋಕುನ್ನು ಹಬ್ಬಿಸಿದ್ದಾರೆ. ತಾವು ತಮ್ಮನ್ನೇ ಅಣಕಿಸುತ್ತಿದ್ದೇವೆ ಎನ್ನುವ ಸಂಗತಿ ಅವರಿಗೆ ತಿಳಿದಿಲ್ಲ. ಇಂದು ರಾಮಪ್ಪ ಪೂಜಾರಿ ನಮ್ಮ ನೆನಪಿನಿಂದ ಅಳಿದು ಹೋಗುತ್ತಿದ್ದಾರೆ. ಆದರೆ ರಾಂಪ ಜೀವಂತವಾಗಿದ್ದಾನೆ. ಇದಲ್ಲವೇ ದುರಂತ! ಈ ಕಾರಣಕ್ಕಾಗಿಯೇ, ‘ರಾಂಪನ ಜೋಕು’ಗಳನ್ನು ಕೇಳುವಾಗ ನನಗೆ ಸಿಟ್ಟು ಉಕ್ಕಿ ಬರುತ್ತದೆ. ಒಬ್ಬ ಶೂದ್ರ, ಅನಕ್ಷರಸ್ಥ ಮಾನವೀಯ ವ್ಯಕ್ತಿಯನ್ನು ನೆನೆದು ಯಾಕೋ ಕಣ್ಣಾಲಿ ತುಂಬುತ್ತದೆ.

Saturday, September 17, 2011

ಹನಿ ಕವಿತೆಗಳು
















ಫೈಲುಗಳ ನಡುವೆ ಧೂಳು ತಿನ್ನುತ್ತಿದ್ದ ಕೆಲವು ಹನಿಗವಿತೆಗಳು.

ರಜಾ
ನನ್ನೆದುರಲ್ಲೇ ಮಿಲಿಟರಿ ವ್ಯಾನೊಂದು
ಸರಿದು ಹೋದದ್ದು

ಪುಟ್ಟ ಮಗು ಅದರೆಡೆಗೆ ಕೈ ಬೀಸಿ
‘ಟಾ..ಟಾ..’ ಎಂದದ್ದು

ಬಾಗಿಲ ಪಕ್ಕ
ಕುಳಿತ ಯೋಧನೊಬ್ಬ
ಅದನ್ನು ಸ್ವೀಕರಿಸಿದ್ದು
ಒಂದೇ ಕ್ಷಣಕ್ಕೆ ನಡೆದು ಹೋಯಿತು!

ಇನ್ನು ಯುದ್ಧಕ್ಕೆ ರಜಾ!

ಪಾವತಿ
ಗುಲಾಬಿ ಮತ್ತು ಕವಿತೆ ಜತೆ
ಬರುತ್ತಿದ್ದೇನೆ
ಧಾರಾವಿಯ ಕಪ್ಪು ಬೆಳಕಿನ ದಾರಿ ಒಡೆದು
ಎದ್ದು ಬಂದ ಪುಟ್ಟ ಮಗು
ಗುಲಾಬಿಯನ್ನು ಕೈ ಮಾಡಿ ಕರೆಯಿತು
ನನ್ನ ಕವಿತೆ ಗುಲಾಬಿಯ ಜೊತೆ
ಮಗುವಿನ ಕಣ್ಣಲ್ಲಿ
ಇಂಗಿ ಹೋಯಿತು

ಪಡೆದ ಸಾಲ ಮರಳಿದಂತೆ

ತಾಯಿ
ಅವಳ ಮಡಿಲಲ್ಲಿ ಮುಳುಗೇಳುತ್ತಿದ್ದ ಮಗು
ಪಕ್ಕನೆ ಅವಳ ಮುಖ ಪರಚಿ ಬಿಟ್ಟಿತು
ಆ ಗಾಯವನ್ನು ಆರದಂತೆ
ಜೋಪಾನ ಇಟ್ಟು
ನರಳುತ್ತಾಳೆ ತಾಯಿ

ಇಂದಿಗೂ ಸುಖದಿಂದ!

ಮೌನ

ಸಾವು ಹಗುರ
ಅದು ಬಿಟ್ಟು ಹೋಗುವ
ಮೌನ
ಹೊರಲಾಗದಷ್ಟು ಭಾರ!

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Wednesday, September 14, 2011

ಮಾಧ್ಯಮ ಲೋಕ ಮತ್ತು ಅಣ್ಣನ ನೆನಪು











ಇತ್ತೀಚಿಗೆ ಸಂಪಾದಕೀಯ ಬ್ಲಾಗ್ನಲ್ಲಿ ಮಾಧ್ಯಮ ಲೋಕವನ್ನು ಕಾಡುತ್ತಿರುವ ಬ್ರಷ್ಟಾಚಾರದ ಕುರಿತ ಲೇಖನ ಓದಿದಾಗ ಯಾಕೋ ನನಗೆ ನನ್ನ ಅಣ್ಣನ ನೆನಪಾಯಿತು.

ಇದು ನನ್ನ ಅಣ್ಣ ಬದುಕಿದ್ದಾಗ ಆತ ತನ್ನ ಗೆಳೆಯನೋಬ್ಬನೊಂದಿಗೆ ಸಿಟ್ಟಿನಿಂದ ಹಂಚಿಕೊಂಡಿದ್ದನ್ನು ಕೇಳಿಸಿ ಕೊಂಡಿದ್ದು. ಅದು ಮಂಗಳೂರಿನ ಸುರತ್ಕಲಿನ ಕೋಮು ಗಲಭೆಯ ಸಂದರ್ಭ.( ಅಣ್ಣ ಆಗ ಲಂಕೇಶ್ ಪತ್ರಿಕೆ ಅಥವಾ ಹಾಯ್ ಬೆಂಗಳೂರು...ಇವೆರಡರಲ್ಲಿ ಯಾವುದೋ ಒಂದು ಪತ್ರಿಕೆಗೆ ದ. ಕ. ಜಿಲ್ಲೆಯ ವರದಿಗಾರನಾಗಿದ್ದ. ) ಸುರತ್ಕಲ್ ಗಲಭೆಯಲ್ಲಿ ಮುಸ್ಲಿಮರೆ ಅತಿ ಹೆಚ್ಚು ಸಂತ್ರಸ್ತರಾಗಿದ್ದವರು. ಒಂದಿಷ್ಟು ಮುಸ್ಲಿಂ ಮುಖಂಡರು ಅಣ್ಣನನ್ನು ಸಂತ್ರಸ್ತ ಪ್ರದೇಶದ ಸ್ಥಳ ವೀಕ್ಷಣೆಗೆಂದು ಕರೆದೊಯ್ದಿದ್ದರು. ಅವನು ಹೋದಾಕ್ಷಣ ಪ್ರದೇಶದ ಮುಸ್ಲಿಮರು ಸುತ್ತುಗಟ್ಟಿ ತಮ್ಮ ಗೋಳನ್ನು ಹೇಳತೊಡಗಿದರಂತೆ. ಹಲವರು ಕಣ್ಣೀರು ಇಟ್ಟರಂತೆ. ಅಲ್ಲಿನ ಸ್ಥಿತಿ ನಿಜಕ್ಕೂ ಆತನನ್ನು ಕಂಗೆಡಿಸಿತ್ತು. ಎಲ್ಲರಿಂದಲೂ ಹೇಳಿಕೆಗಳನ್ನು ಪಡೆದ. ವಿವರಗಳನ್ನು ದಾಖಲಿಸಿದ. ಎಲ್ಲ ಮುಗಿದ ಬಳಿಕ ಇನ್ನೇನೂ ಹೊರಡಬೇಕು ಎನ್ನುವಷ್ಟರಲ್ಲಿ ಮುಸ್ಲಿಂ ಮುಖಂಡರಲ್ಲಿ ಒಬ್ಬ ಅಣ್ಣನ ಕಿಸೆಗೆ ಕವರೊಂದನ್ನು ತುರಿಕಿಸಿದನಂತೆ. ಏನಿದು ಎಂದು ಅಲ್ಲೇ ತೆರೆದು ನೋಡಿದರೆ ಆ ಕವರಿನೊಳಗೆ 500 ರ ಎರಡು ನೋಟುಗಳಿತ್ತು. ಅದನ್ನು ಅಲ್ಲೇ ಅವನ ಮುಖಕ್ಕೆ ಎಸೆದು, ಅವನಿಗೆ ಉಗಿದು ಅಲ್ಲಿಂದ ಪಾರಾಗಿ ಬಂದನಂತೆ.

ಇದಾಗಿ ಸುಮಾರು 10 ವರ್ಷಕ್ಕೂ ಅಧಿಕ ಕಾಲ ಲಂಕೇಶ್ ಪತ್ರಿಕೆ ಮತ್ತು ಹಾಯ್ ಬೆಂಗಳೂರಲ್ಲಿ ಅಣ್ಣ ವರದಿಗಾರನಾಗಿ ದುಡಿದಿದ್ದ. ಒಂದು ದಿನ ಅವನು ಸತ್ತಾಗ ಅವನದೆಂದು ನನಗೆ ಸಿಕ್ಕಿದ್ದು ಒಂದು ಪರ್ಸ್ ಮತ್ತು ಅವನ ಕಿಸೆಯಲ್ಲಿ ಯಾರಿಗೂ ತೋರಿಸದಂತೆ ಭದ್ರವಾಗಿ ಇಟ್ಟುಕೊಂಡಿದ್ದ ಪಾಸ್ ಬುಕ್. ಪರ್ಸನಲ್ಲಿದ್ದುದು ಬರೆ 125 ರು. ಅವನ ಬ್ಯಾಂಕ್ ಅಕೌಂಟ್ನಲ್ಲಿದ್ದುದು ಬರೆ 450 ರು.

ಮಸೀದಿಯಲ್ಲಿ ಅಂತ್ಯಸಂಸ್ಕಾರ ಮಾಡಬೇಕಾದರೆ ಕನಿಷ್ಠ 3 000 ರು. ವಾದರೂ ಬೇಕು ಎನ್ನೋದು ವರದಿಗಾರನಾದ ಅವನಿಗೆ ಗೊತ್ತಿರಲಿಲ್ಲ. ಅವನ ಸಾಚಾತನದ ಕುರಿತಂತೆ ನನಗೆ ಹೆಮ್ಮೆ ಪಡಲು ಇದ್ದ ಒಂದೇ ಒಂದು ಪುಸ್ತಕವಾಗಿತ್ತು ಅವನು ಬಿಟ್ಟು ಹೋದ ಪಾಸ್ ಪುಸ್ತಕ. ಇಂದಿಗೂ ಅದು ನನ್ನಲ್ಲಿ ಭದ್ರವಾಗಿದೆ.

Tuesday, September 13, 2011

ಗಾಯ ಮತ್ತು ಇತರ ಕತೆಗಳು













ಧ್ಯಾನ
ಶಿಷ್ಯ ಕಣ್ಣು ಮುಚ್ಚಿ ಧ್ಯಾನಸ್ಥನಾಗಿದ್ದ.
ಸಂತ ಹೇಳಿದ. ‘‘ಮೂರ್ಖ...ಯಾಕೆ ಹೇಡಿಯಂತೆ ಕಣ್ಣು ಮುಚ್ಚಿದ್ದೀಯ? ಕತ್ತಲಲ್ಲಿ ಏನನ್ನು ಹುಡುಕುತ್ತಿದ್ದೀಯ? ತೆರೆ ಕಣ್ಣನ್ನು, ನೋಡು ಜಗವನ್ನು. ಬೆಳಕಲ್ಲಿ ಹುಡುಕು’’

ಕೇಳುವುದು!
ಆತ ಹೆಣ್ಣು ನೋಡುವುದಕ್ಕೆ ಹೋಗಿದ್ದ.
ಹೆಣ್ಣನ್ನು ನೋಡಿದವನೇ ಕೇಳಿದ ‘‘ನಿಮಗೆ ಹಾಡುವುದಕ್ಕೆ ಬರುತ್ತದೆಯೆ?’’
ಹೆಣ್ಣು ತಕ್ಷಣ ಮರು ಪ್ರಶ್ನಿಸಿದಳು
‘‘ನಿಮಗೆ ಕೇಳುವುದಕ್ಕೆ ಬರುತ್ತದೆಯೆ?’’

ಮರ
ಒಂದು ಬೀಜ ಯಾರದೋ ಕೈಯಿಂದ ತಪ್ಪಿ ಉದುರಿ ಒದ್ದೆ ಮಣ್ಣಿನ ಮೇಲೆ ಬಿತ್ತು.
ನಾಲ್ಕೇ ದಿನದಲ್ಲಿ ಅದು ಮೊಳಕೆ ಒಡೆಯಿತು.
ಕೆಲವು ಸಮಯ ಕಳೆದರೆ ಗಿಡವಾಗಿ, ಮರವಾಯಿತು.
ಹೂ ಬಿಟ್ಟಿತು...ಹಣ್ಣಾಯಿತು....
ಒಬ್ಬಾತ ಬಂದವನೇ ಘೋಷಿಸಿದ ‘‘ಇದು ನನ್ನ ಮರ’’

ಅಮ್ಮ!
ಒಂದು ಕಡೆ ಕೋಮುಗಲಭೆ ನಡೆಯುತ್ತಿತ್ತು.
ಪುಟಾಣಿಯೊಬ್ಬ ಆ ಗಲಭೆಯಲ್ಲಿ ಸಿಲುಕಿಕೊಂಡ.
ಗುಂಪೊಂದು ಮಗುವನ್ನು ತಡೆದು ಕೇಳಿತು ‘‘ನಿನ್ನದು ಯಾವ ಧರ್ಮ?’’
ಮಗು ಹೇಳಿತು ‘‘ನನಗೆ ನನ್ನ ಅಮ್ಮ ಬೇಕು...’’
‘‘ಹೋಗಲಿ...ನಿನ್ನ ಅಮ್ಮನ ಧರ್ಮವೇನು?’’ ಗುಂಪು ಕೇಳಿತು.
‘‘ಅಮ್ಮ...’’ ಮಗು ಅಳುತ್ತಾ ಉತ್ತರಿಸಿತು.

ಹಿಮಕರಡಿಗಳು
ಒಬ್ಬ ಶಿಷ್ಯ ಬಂದು ಸಂತನಲ್ಲಿ ಹೇಳಿದ ‘‘ಗುರುಗಳೇ...ನಾನು ಹೆಚ್ಚಿನ ಜ್ಞಾನ ಮತ್ತು ತಪಸ್ಸಿಗಾಗಿ ಹಿಮಾಲಯಕ್ಕೆ ಹೋಗಬೇಕೆಂದಿದ್ದೇನೆ...ಅಪ್ಪಣೆಕೊಡಿ...’’
‘‘ಜನವೇ ಇಲ್ಲದಲ್ಲಿ ಜ್ಞಾನಾರ್ಜನೆ ಹೇಗಾಗುತ್ತದೆ ಶಿಷ್ಯ?’’
ಶಿಷ್ಯ ಹೇಳಿದ ‘‘ಹಿಮಾಲಯದಂತಹ ಪುಣ್ಯ ಸ್ಥಳದಲ್ಲಿ ತಪಸ್ಸು ಮಾಡಿದರೆ ಬೇಗ ಜ್ಞಾನೋದಯವಾಗಬಹುದಲ್ಲವೆ?’’
ಸಂತ ಗೊಣಗಿದ ‘‘ಹಿಮಕರಡಿಗಳು ಶತಶತಮಾನಗಳಿಂದ ಹಿಮಾಲಯದಲ್ಲೇ ಬದುಕುತ್ತಿವೆ. ಒಂದೇ ಒಂದು ಹಿಮಕರಡಿಗೂ ಜ್ಞಾನೋದಯವಾದ ಸುದ್ದಿ ನನಗೆ ಈವರೆಗೆ ತಿಳಿದು ಬಂದಿಲ್ಲ’’

ಪ್ರಪಂಚ
ಬೇರೆ ಬೇರೆ ಆಶ್ರಮಗಳಲ್ಲಿ ಕಲಿತ ಶಿಷ್ಯರು ಒಟ್ಟು ಸೇರಿದ್ದರು
ಅವರೆಲ್ಲ ಬೇರೆ ಬೇರೆ ಪಂಥಗಳಿಗೆ ಸೇರಿದವರು.
ಒಬ್ಬ ಹೆಮ್ಮೆಯಿಂದ ಹೇಳಿದ ‘‘ನನ್ನ ಗುರುಗಳು ನನಗಾಗಿ ತಾವು ಬರೆದ ಅಪರೂಪದ ಬೃಹತ್ ಗ್ರಂಥವನ್ನೇ ಬಿಟ್ಟು ಹೋಗಿದ್ದಾರೆ’’
ಇನ್ನೊಬ್ಬ ಹೇಳಿದ ‘‘ನನಗಾಗಿ ನನ್ನ ಗುರುಗಳು ಇಡೀ ವಿದ್ಯಾಸಂಸ್ಥೆಯನ್ನೇ ಬಿಟ್ಟು ಹೋಗಿದ್ದಾರೆ.
ಮಗದೊಬ್ಬ ಹೇಳಿದ ‘‘ನನಗಾಗಿ ನನ್ನ ಗುರುಗಳು ಹೊಸ ಸಿದ್ಧಾಂತವೊಂದನ್ನು ಬಿಟ್ಟು ಹೋಗಿದ್ದಾರೆ.’’
ಒಬ್ಬ ಶಿಷ್ಯ ಸುಮ್ಮಗೆ ಕೂತಿದ್ದ. ಉಳಿದವರೆಲ್ಲ ಕೇಳಿದರು ‘‘ನಿನಗಾಗಿ ನಿನ್ನ ಗುರುಗಳು ಏನು ಬಿಟ್ಟು ಹೋಗಿದ್ದಾರೆ?’’
ಆತ ಉತ್ತರಿಸಿದ ‘‘ನನಗಾಗಿ ಅವರು ಈ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾರೆ’’

ಆಸೆ
ಸಂತ ಮರಣಶಯ್ಯೆಯಲ್ಲಿದ್ದ.
ಶಿಷ್ಯರೆಲ್ಲ ಅವನ ಸುತ್ತುಗೂಡಿದ್ದರು.
ಒಬ್ಬ ಶಿಷ್ಯ ಕೇಳಿದ ‘‘ಗುರುಗಳೇ ನಿಮ್ಮದೇನಾದರೂ ಅಂತಿಮ ಆಸೆಯಿದೆಯೆ?’’
ಸಂತ ‘‘ಹೂಂ’’ ಎಂದ.
ಎಲ್ಲ ಶಿಷ್ಯರು ಮುತ್ತಿಕೊಂಡು ‘‘ಹೇಳಿ ಗುರುಗಳೇ’’ ಎಂದರು.
‘‘ಸಾಯುವ ಮೊದಲು ನಾನು ಯಾವುದಕ್ಕಾಗಿಯಾದರೂ ಆಸೆ ಪಡಬೇಕು. ಹೇಳಿ, ಅಂತಹ ವಸ್ತುವೇನಾದರೂ ಈ ಜಗತ್ತಿನಲ್ಲಿದೆಯೆ?’’

ಗಾಯ
ವೈದ್ಯರು ಕೇಳಿದರು ‘‘ಯಾವುದೇ ಇರಿತದ ಗಾಯ ಕಾಣ್ತಾ ಇಲ್ವಲ್ಲ?’’
‘‘ಇಲ್ಲ ಸಾರ್ ತುಂಬಾ ನೋವಾಗುತ್ತಿದೆ...ಡಾಕ್ಟರ್...ಏನಾದ್ರು ಮಾಡಿ...’’
‘‘ಗಾಯ ಆದದ್ದು ಹೇಗೆ’’
‘‘ಗೆಳೆಯನೊಬ್ಬ ಇರಿದ ಡಾಕ್ಟರ್’’
‘‘ಹೌದಾ? ಯಾವುದರಿಂದ?’’
‘‘ಮಾತಿನಿಂದ....’’

ಚಿಟ್ಟೆ
ಅದೊಂದು ಪರೀಕ್ಷೆ ಹಾಲ್.
ಎಲ್ಲರೂ ಬೆವರುತ್ತಾ, ಬೆದರುತ್ತಾ ಗಂಭೀರವಾಗಿ ಪರೀಕ್ಷೆ ಬರೆಯುತ್ತಿದ್ದರು.
ಅಷ್ಟರಲ್ಲಿ ಅಲ್ಲಿಗೆ ಹಾರುತ್ತಾ ಒಂದು ಬಣ್ಣದ ಚಿಟ್ಟೆ ಬಂತು.
‘‘ಚಿಟ್ಟೆ’’ ಯಾರೋ ಪಿಸುಗುಟ್ಟಿದರು.
ಎಲ್ಲರ ದೃಷ್ಟಿ ಚಿಟ್ಟೆಯಕಡೆಗೆ.
ಒಮ್ಮೆಲೆ ಕಲರವ
ಸೆಕ್ಷನ್ ಉಲ್ಲಂಘಿಸಿ ಆ ಪರೀಕ್ಷೆ ಹಾಲಿಗೆ ಬಂದು ಎಲ್ಲರ ಪರೀಕ್ಷೆಯ ಭಯವನ್ನು ತನ್ನ ರೆಕ್ಕೆಯೊಳಗೆ ಕಟ್ಟಿಕೊಂಡು ಚಿಟ್ಟೆ ನಿಧಾನಕ್ಕೆ ಹಾರಿ ಹೋಯಿತು.
ಈಗ ಎಲ್ಲರೂ ನಗು ನಗುತ್ತಾ ಪರೀಕ್ಷೆ ಬರೆಯತೊಡಗಿದರು.

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Thursday, September 8, 2011

ಹಸುವಿನಂತೆ ಪ್ರೀತಿ

















ತುಂಬಾ ಹಿಂದೆ ಬರೆದ ಕವಿತೆ. ನನ್ನ ‘ಪ್ರವಾದಿಯ ಕನಸು’ ಸಂಕಲನದಲ್ಲಿ ಪ್ರಕಟವಾಗಿದೆ.


ಅಪರಿಚಿತನಿಗೆ ಪ್ರೀತಿ
ಹಸುವಿನಂತೆ
ಬೀಸಿದರೆ ಕೊಂಬು
ಎಂಬ ಚಿಂತೆ!

ಮೊದಲು ಪ್ರೀತಿಯ ನಂಬು
ಚಪ್ಪರಿಸಿ ಬೆನ್ನು
ಮುಖಕ್ಕೆ ಮುಖ ಉಜ್ಜಿ
ಇಡು ಕಣ್ಣಿಗೆ ಕಣ್ಣು
ಆರ್ದ್ರತೆಯನ್ನೆಲ್ಲ ನಿನ್ನೊಳಗೆ ತುಂಬು!

ಸರಪಳಿ ಬಿಚ್ಚು
ಪ್ರೀತಿಗೆ ಸ್ವಾತಂತ್ರವೇ ಕೆಚ್ಚು
ಒಂದು ಹಿಡಿ ಮೇವು ಸಾಕು
ಈಗ ಕೆಚ್ಚಲಿಗೇ ಬಾಯಿ ಹಚ್ಚು!

ಪ್ರೀತಿ ಹಸುವಿನಂತೆ
ಕಟುಕನ ಕತ್ತಿಗೆ ಚೂರು ಚೂರು
ಅಮ್ಮನ ಮುಂದೆ ಧಗಿಸುವ ಒಲೆ
ಒಲೆ ಮೇಲೆ
ಘಮಘಮಿಸುವ ಸಾರು!


ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.