Saturday, June 23, 2012

ಗ್ಯಾಂಗ್ಸ್ ಆಫ್ ವಸ್ಸೇಪುರ್: ಕಲ್ಲಿದ್ದಲ ಗಣಿಯ ಕತ್ತಲ ಕೂಪದಲ್ಲಿ....

ಹೀಗೊಂದು ಚಿತ್ರ ವಿಮರ್ಶೆ 

 ‘ಗ್ಯಾಂಗ್ಸ್ ಆಫ್ ವಸ್ಸೇಪುರ್’ ವಸ್ಸೇಪುರ್ ಮತ್ತು ಧನಬಾದ್‌ನ ಸ್ವಾತಂತ್ರ ಪೂರ್ವ ರಕ್ತಸಿಕ್ತ ದಾಖಲೆಗಳು. ದಂಡಕಾರಣ್ಯದಂತಿರುವ ವಸ್ಸೇಪುರ್ ಮತ್ತು ಧನ್‌ಬಾದ್ ಜನರ ಬದುಕಿನ ಕಪ್ಪು ರೂಪಕ ಇಲ್ಲಿನ ಕಲ್ಲಿದ್ದಲು ಗಣಿಗಳು. ಕಲ್ಲಿದ್ದಲು, ರಕ್ತ ಮತ್ತು ಸೇಡು ಇಲ್ಲಿಯ ಜನರ ಭಾಷೆ. ಸ್ವಾತಂತ್ರಪೂರ್ವದಿಂದ ಹಿಡಿದು 90ರ ದಶಕದ ವರೆಗಿನ ಇಲ್ಲಿನ ಬದುಕನ್ನು ಬಿಡಿ ಬಿಡಿಯಾಗಿ ಸಂಗ್ರಹಿಸುತ್ತಾ, ಅದನ್ನು ಸೇಡಿನ ಕರುಳಮಾಲೆಯಲ್ಲಿ ಬೆಸೆಯುತ್ತಾ ಹೋಗುತ್ತಾರೆ ಅನುರಾಗ್ ಕಶ್ಯಪ್. ಸ್ವಯಂ ನಿರ್ದೇಶಕರೇ ಈ ಚಿತ್ರವನ್ನು ವಸ್ಸೇಪುರ್‌ನ ಮುಸ್ಲಿಮರ ಮಹಾಭಾರತ ಇದು ಎಂದು ಕರೆದಿದ್ದಾರೆ.
    
 ಹಾಗೆ ನೋಡಿದರೆ ಈ ಚಿತ್ರಕ್ಕೆ ಒಂದು ಕತೆಯೇ ಇಲ್ಲ. ಸೇಡು ಇಲ್ಲಿನ ಮುಖ್ಯವಸ್ತು. ಆರಂಭದಲ್ಲಿ ವಸ್ಸೇಪುರ್ ಮತ್ತು ಧನ್‌ಬಾದ್‌ನ್ನು ಸುತ್ತುವರಿದಿರುವ ಕಲ್ಲಿದ್ದಲು ಮಾಫಿಯಾ ಮತ್ತು ಅದನ್ನು ಬೆಸೆದಿರುವ ಇಲ್ಲಿನ ಪಠಾಣ್ ಮತ್ತು ಖುರೇಷಿ ಮುಸ್ಲಿಮರ ರಕ್ತಸಿಕ್ತ ವಂಶಾವಳಿಗಳ ಪುಟಗಳನ್ನು ಅಸವಸರವಾಗಿ ಬಿಡಿಸುತ್ತಾ ಹೋಗುತ್ತಾರೆ. ಅದಕ್ಕೆ ಒತ್ತಿಕೊಂಡ ಲೂಟಿ, ಡಕಾಯಿತಿ, ರಾಜಕೀಯಗಳನ್ನು ಕಪ್ಪುಬಿಳುಪಿನಲ್ಲಿ ತೆರೆದಿಡುತ್ತಾರೆ. ಅಲ್ಲಿನ ಅರಣ್ಯ ಕಾನೂನನ್ನು ಸಣ್ಣ ಸಣ್ಣ ಘಟನೆಗಳ ಮೂಲಕ ಎದೆ ಝಲ್ಲೆನಿಸುವಂತೆ ಮುಂದಿಡುತ್ತಾರೆ. ಹೀಗೆ ಮೊದಲ ಮೂವತ್ತು ನಿಮಿಷ ಹತ್ತು ಹಲವು ಹೆಸರುಗಳು, ಪಾತ್ರಗಳು ನಮ್ಮ ಮುಂದೆ ಪಟಪಟನೆ ಸರಿಯುತ್ತಾ ಹೋಗುತ್ತವೆ. ಕಟ್ಟಕಡೆಗೆ ಚಿತ್ರ ಶಾಹಿದ್ ಖಾನ್‌ನ ಮಗ ಸರ್ದಾರ್ ಖಾನ್(ಮನೋಜ್ ಭಾಜ್‌ಪೈ)ಯಲ್ಲಿಗೆ ಬಂದು ನಿಲ್ಲುತ್ತದೆ. ವಸ್ಸೇಪುರ್ ಡಕಾಯಿತಿ ಬದುಕಿನಿಂದ ಕಳಚಿಕೊಂಡು ಕಲ್ಲಿದ್ದಲು ಗಣಿಯಲ್ಲಿ ಕೆಲಸ ಮಾಡುವ ಶಾಹಿದ್ ಖಾನ್(ಜೈದೀಪ್ ಅಹ್ಲಾವತ್) ತನ್ನ ಪತ್ನಿಯ ಹೆರಿಗೆಯ ಸಮಯದಲ್ಲಿ, ಪತ್ನಿಯನ್ನು ಭೇಟಿಮಾಡಲು ಅವಕಾಶ ನೀಡದ ಗಣಿ ಮಾಲಿಕರ ವಿರುದ್ಧ ತಿರುಗಿ ನಿಲ್ಲುತ್ತಾನೆ. ಬಳಿಕ ಅಲ್ಲಿನ ಕಾರ್ಮಿಕರನ ಜೊತೆ ನಿಂತು ಮಾಲಿಕರಿಗೆ ಸೆಡ್ಡು ಹೊಡೆಯುತ್ತಾನೆ. ಮುಂದೆ ಇದೇ ಗಣಿಯ ಮಾಲಿಕ ರಾಮ್‌ಧೀರ್ ಸಿಂಗ್(ತಿಗ್ಮಾಂಶು ಧುಲಿಯಾ), ಶಾಹಿದ್‌ನನ್ನು ತನ್ನ ಬಲಗೈ ಬಂಟನನ್ನಾಗಿಸಿ ಕಾರ್ಮಿಕರನ್ನು ಬಗ್ಗು ಬಡಿಯುತ್ತಾನೆ. ಕಾಲ ಸರಿದಂತೆ ಬಂಟ ಶಾಹಿದ್ ಮುಂದೊಂದು ದಿನ ತನಗೆ ಮುಳುವಾಗಬಹುದು ಎಂದು ರಾಮ್‌ಧೀರ್ ಸಿಂಗ್ ಆತನನ್ನು ಕೊಲ್ಲಿಸುತ್ತಾನೆ. ಶಾಹಿದ್‌ನ ಪುಟ್ಟ ಮಗನ ಜೊತೆಗೆ ಆತನ ಸಹಾಯಕ ಅಲ್ಲಿಂದ ಪರಾರಿಯಾಗುತ್ತಾನೆ. ಮುಂದೆ ಶಾಹಿದ್‌ನ ಪುಟ್ಟಮಗ ಸರ್ದಾರ್ ಖಾನ್ ಬೆಳೆದು ರಾಮ್‌ಧೀರ್‌ನ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಅಣಿಯಾಗುತ್ತಾನೆ. ಮೇಲ್ನೋಟಕ್ಕೆ ಇಡೀ ಕತೆ ರಾಮ್‌ಧೀರ್ ಮತ್ತು ಸರ್ದಾರ್ ಖಾನ್‌ನ ನಡುವಿನ ಸೇಡಿನ ಕತೆಯಂತೆ ಭಾಸವಾದರೂ, ಅದನ್ನಿಟ್ಟುಕೊಂಡು ವಸ್ಸೇಪುರ್-ಧನ್‌ಬಾದ್ ಮುಸ್ಲಿಮರೊಳಗಿನ ಕ್ರೌರ್ಯವನ್ನೇ ಧಾತುವಾಗಿಸಿಕೊಂಡ ರಕ್ತಸಿಕ್ತ ಬದುಕನ್ನು ನಿರೂಪಿಸುತ್ತಾ ಹೋಗುತ್ತಾರೆ ಅನುರಾಗ್ ಕಶ್ಯಪ್. 

1941ರ ಕಾಲಘಟ್ಟದಲ್ಲಿ ಕಲ್ಲಿದ್ದಲ ಗಣಿಯಿಂದ ಭುಗಿಲೆದ್ದ ದ್ವೇಷದ ಬೆಂಕಿ ಇಡೀ ವಸ್ಸೇಪುರ್‌ನ್ನು ಕೌಟುಂಬಿಕವಾಗಿ, ರಾಜಕೀಯವಾಗಿ ಹಬ್ಬುತ್ತಾ ಹೋಗುತ್ತದೆ. ಕುರೇಶಿಗಳು ಮತ್ತು ಫಠಾಣ್ ಮುಸ್ಲಿಮರ ನಡುವಿನ ಈ ದ್ವೇಷ ಮತ್ತು ಹಿಂಸೆಯ ಬೆಂಕಿ ಮೂರು ತಲೆಮಾರುಗಳಳವರೆಗೂ ಹಿಂಬಾಲಿಸುತ್ತದೆ. ಕತ್ತಲು, ಮಳೆ, ರಕ್ತ ಮತ್ತು ಕಲ್ಲಿದ್ದಲು ಇವುಗಳನ್ನೆಲ್ಲ ಕಶ್ಯಪ್ ಅತ್ಯದ್ಭುತವಾಗಿ ಬಳಸಿಕೊಂಡಿದ್ದಾರೆ. ವಸ್ಸೇಪುರ್‌ನ ಇತಿಹಾಸವನ್ನು ಮಂಡಿಸುವಾಗ ಆರಂಭದಲ್ಲಿ ಪಾತ್ರಗಳ ಕುರಿತಂತೆ ಗೊಂದಲಗಳು ಎದುರಾಗುತ್ತವೆಯಾದರೂ ಸರ್ದಾರ್ ಖಾನ್‌ಗೆ ಬಂದು ನಿಂತ ತಲೆಮಾರಿನ ಕತೆ, ಕೊನೆಗೂ ನಿರ್ದಿಷ್ಟ ಉದ್ದೇಶಕ್ಕೆ ಬರುತ್ತದೆ. 

ಚಿತ್ರದ ಮುಖ್ಯಪಾತ್ರ(ಸರ್ದಾರ್‌ಖಾನ್)ದಲ್ಲಿ ನಟಿಸಿರುವ ಮನೋಜ್ ಬಾಜ್‌ಪೈ ಈಗಷ್ಟೇ ಕಲ್ಲಿದ್ದಲ ಗಣಿಯಿಂದ ಎದ್ದು ಬಂದವನ ಕಾಠಿಣ್ಯವನ್ನು, ಕ್ರೌರ್ಯವನ್ನು, ಅರಾಜಕತೆಯನ್ನು ಮೈಗೂಡಿಸಿಕೊಂಡು ನಟಿಸಿದ್ದಾರೆ. ಸತ್ಯ ಚಿತ್ರದಲ್ಲಿ ಬಿಕ್ಕೂ ಭಾಯಿಯಾಗಿ ಚಿರಪರಿಚಿತರಾದ ಭಾಜ್‌ಪೈಯ ಚಿತ್ರ ಬದುಕಿನ ಇನ್ನೊಂದು ಮಗ್ಗುಲು ಸರ್ದಾರ್ ಪಾತ್ರದ ಮೂಲಕ ತೆರೆದುಕೊಂಡಿದೆ. ಸರ್ದಾರ್ ಪಾತ್ರ ಚಿತ್ರದ ಹೆಗ್ಗಳಿಕೆಯಾಗಿದೆ. ಮಹಾಭಾರತದ ಧುರ್ಯೋಧನ ಮತ್ತು ಭೀಮನ ವ್ಯಕ್ತಿತ್ವಗಳನ್ನು ಹೋಲುವ ಈತನೊಳಗಿನ ಕ್ರೌರ್ಯ, ಹೆಣ್ಣುಬಾಕತನ, ಸೇಡು ಹಾಗೂ ಪ್ರೀತಿ ಇಡೀ ವಸೇಪುರ್‌ನ ಅರಾಜಕ ಗುಣಲಕ್ಷಣಗಳಿಗೆ ಪೂರಕವಾಗಿದೆ. ಆತನ ಮೊದಲ ಹೆಂಡತಿ ನಗ್ಮಾ ಪಾತ್ರದಲ್ಲಿ ರಿಚಾ ಚಡ್ಡಾ ಕೂಡ ಅಷ್ಟೇ ಸ್ಫೋಟಕವಾಗಿ ಕಾಣುತ್ತಾಳೆ. ಸರ್ದಾರ್ ಖಾನ್‌ಗೆ ಸರಿಸಾಟಿಯಾಗಿ ನಟಿಸಿರುವ ರಿಚಾ, ವಸ್ಸೇಪುರ್‌ನ ಕಲ್ಲಿದ್ದಲ ಗಣಿಯಿಂದ ಚಿಮ್ಮಿದ ಸ್ಫೋಟಕಗಳ ಚೂರಿನಂತೆ ಪ್ರತಿ ದೃಶ್ಯಗಳಲ್ಲಿ ಚಲಿಸುತ್ತಾಳೆ. ದುರ್ಗಾ ಪಾತ್ರದಲ್ಲಿ ರಿಮಾಸೇನ್‌ನ ವೌನ-ಸಿಟ್ಟು ಕೂಡ ಚಿತ್ರವನ್ನು ಇನ್ನಷ್ಟು ತೀವ್ರವಾಗಿಸುತ್ತದೆ. ಸರ್ದಾರ್ ಖಾನ್‌ನ ಓರ್ವ ಮಗನಾಗಿ ನವಾಝುದ್ದೀನ್ ಸಿದ್ದೀಕ್ ಪಾತ್ರ ಸಣ್ಣದಾದರು ಬಹಳಷ್ಟು ಕಾಡುವಂತಹದ್ದು. ಬಹುಶಃ ಚಿತ್ರದ ಮುಂದಿನ ಭಾಗದಲ್ಲಿ ಈ ಪಾತ್ರ ಇನ್ನಷ್ಟು ಬೆಳೆಯುವ ಸಾಧ್ಯತೆಗಳಿವೆ. ಅದಕ್ಕಾಗಿಯೇ ನಿರ್ದೇಶಕ ಈ ಪ್ರತಿಭಾವಂತನನ್ನು ಆಯ್ಕೆ ಮಾಡಿಕೊಂಡಿರಬೇಕು. ಚಿತ್ರದ ಇನ್ನೊಂದು ಮುಖ್ಯಪಾತ್ರದಲ್ಲಿ ತಿಗ್‌ಮಾಂಶು ದುಲಿಯಾ ಕಾಣಿಸಿಕೊಂಡಿದ್ದಾರೆ. ರಾಮ್‌ಧೀರ್ ಸಿಂಗ್‌ನ ಗಾಂಭೀರ್ಯ, ತಣ್ಣಗಿನ ಕೌರ್ಯವನ್ನು ದುಲಿಯಾ ಪಳಗಿದ ನಟನಂತೆ ವ್ಯಕ್ತಪಡಿಸಿದ್ದಾರೆ.

ಜಿ.ವಿ. ಪ್ರಕಾಶ್ ಅವರ ಹಿನ್ನೆಲೆ ಸಂಗೀತ, ಸ್ನೇಹ ಖಾನ್‌ವಾಲ್ಕರ್ ಅವರ ಜಾನಪದ ಸಂಗೀತದ ಸೊಗಡು ಚಿತ್ರವನ್ನು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿಸುತ್ತದೆ. ಕತೆಗೆ ಹಾಡು ಪೂರಕವಾಗಿದೆ. ಸಂಗೀತದ ಮೂಲಕ ವಸ್ಸೇಪುರ್ ಇನ್ನಷ್ಟು ಆಳಕ್ಕೆ ಇಳಿಯುತ್ತದೆ. ನಮ್ಮೆಳಗಿನ ಒಳ್ಳೆಯತನ, ನಯ, ವಿನಯಗಳನ್ನೆಲ್ಲವನ್ನೂ ಒಂದು ಕ್ಷಣ ಅಲುಗಾಡಿಸಿ ಬಿಡುವ ಈ ಚಿತ್ರ ದುರ್ಬಲ ಹೃದಯದವರಿಗಲ್ಲ. ಚಿತ್ರ ಮುಗಿದಾಗಲೂ ಕತೆ ಮುಗಿಯುವುದಿಲ್ಲ. ಸೇಡಿನ ಹೆಡೆ ಮತ್ತೆ ಬಿಚ್ಚಿ ನಿಲ್ಲುತ್ತದೆ. ಇನ್ನೇನು ನಮ್ಮನ್ನು ಕಚ್ಚಿಯೇ ಬಿಡಬೇಕು ಎನ್ನುವಷ್ಟರಲ್ಲಿ ಸಿನಿಮಾಮಂದಿರದೊಳಗೆ ಬೆಳಕಾಗುತ್ತದೆ. ಕಲ್ಲಿದ್ದಲ ಗಣಿಯ ಆಳದ ಕತ್ತಲಿಂದ ಹೊರಬಂದಂತೆ ನಾವು ನಿಟ್ಟಿಸಿರುಡುತ್ತೇವೆ. ಚಿತ್ರ ಮುಗಿಯುವುದು ಮುಂದಿನ ಭಾಗಕ್ಕೆ ನಮ್ಮನ್ನು ತಯಾರು ಮಾಡುವ ಮೂಲಕ. ಈ ಚಿತ್ರವನ್ನು ನೋಡಿದವರು, ಇದರ ಮುಂದಿನ ಭಾಗಕ್ಕಾಗಿ ಚಿತ್ರಮಂದಿರದ ಬಾಗಿಲಲ್ಲೇ ಕುಕ್ಕರು ಕೂತರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಏನೇ ಇರಲಿ. ವಸ್ಸೇಪುರ್ ಗ್ಯಾಂಗ್‌ಗಳನ್ನು ಮುಖಾಮುಖಿಯಾಗುವ ಮುನ್ನ ನಿಮ್ಮ ಎಚ್ಚರದಲ್ಲಿ ನೀವಿರಿ.

Tuesday, June 12, 2012

ತೋಟ ಮತ್ತು ಇತರ ಕತೆಗಳು


ತೋಟ
ಒಬ್ಬ ರೈತನಿಗೆ ಸಲಹೆ ನೀಡಿದ ‘‘ಹೀಗೆ ಒಂದು ಗಿಡವನ್ನು ನೆಟ್ಟರೆ ಪ್ರಯೋಜನವಿಲ್ಲ. ದೊಡ್ಡ ತೋಟವನ್ನು ಮಾಡಬೇಕು. ಆಗ ಲಾಭ’’
ರೈತ ಹೇಳಿದ ‘‘ಒಂದು ಬೀಜದೊಳಗೆ ಒಂದು ದೊಡ್ಡ ತೋಟವೇ ಅಡಗಿದೆ’’
ಬೀಜ ಬಿತ್ತಿದ ರೈತ ತೋಟವನ್ನು ಬೆಳೆದ.
ತೋಟದ ಕನಸು ಕಾಣುತ್ತಿದ್ದವ ಒಂದು ಗಿಡವನ್ನೂ ಬೆಳೆಯಲಿಲ್ಲ.

ಮಳೆ
‘‘ಈ ಸಾರಿ ಮಳೆ ಸರಿಯಾದ ಸಮಯಕ್ಕೆ ಬೀಳುತ್ತದೆಯೋ ಇಲ್ಲವೋ...’’ ಅವನು ಆತಂಕದಿಂದ ಪ್ರಶ್ನಿಸಿದ.
‘‘ದೇವರು ಕೋಟಿ ವರ್ಷಗಳಿಂದ ತನ್ನ ಕರ್ತವ್ಯವನ್ನು ಸರಿಯಾಗಿಯೇ ಮಾಡುತ್ತಾ ಬಂದಿದ್ದಾನೆ...ಮೊದಲು ನೀನು ಮಳೆಗಾಲಕ್ಕೆ ಸಿದ್ಧನಾಗಿದ್ದೀಯ ಎನ್ನುವುದನ್ನು ಹೇಳು’’ ಇವನು ಉತ್ತರಿಸಿದ.

ಕಂಬಿಗಳು
ಕಳ್ಳನೊಬ್ಬ ಜೈಲುಕಂಬಿಗಳನ್ನು ಮುರಿಯಲು ನೋಡಿದ.
‘‘ಬಲವಾಗಿದೆ ಕಂಬಿಗಳು’’ ಕಳ್ಳ ಪರಿತಪಿಸಿದ.
‘‘ಹೌದು. ಇದನ್ನು ಮುರಿದು ಬಿಡುಗಡೆ ಪಡೆಯಲು ಕೆಲಸಕ್ಕೆ ಸೇರಿದ ದಿನದಿಂದ ಪ್ರಯತ್ನಿಸುತ್ತಿದ್ದೇನೆ. ಸಾಧ್ಯವಾಗಿಲ್ಲ’’ ಜೈಲು ವಾರ್ಡನ್ ನುಡಿದ.

ಸಂಭ್ರಮ
‘‘ಈ ಬಾರಿಯ ದೀಪಾವಳಿ ಕಳೆದ ಬಾರಿಯಷ್ಟು ಸಂಭ್ರಮವಿಲ್ಲ’’
ಆಕೆ ನಿರಾಸೆಯಿಂದ ಪತಿಗೆ ಹೇಳಿದಳು.
ಅವನು ವೌನವಾಗಿದ್ದ.
ಕಳೆದ ದೀಪಾವಳಿಯಂದು ಪಕ್ಕದ ಮನೆಗೆ ಬೆಂಕಿ ಬಿದ್ದದ್ದು ಅವನಿಗಿನ್ನೂ ನೆನಪಿದೆ.

ಮರ
ಕಟುಕನ ಕೊಡಲಿಗೆ ಉರುಳುತ್ತಿದ್ದ ಮರ ಹೇಳಿತು
‘‘ಕಬ್ಬಿಣದ ಕೊಡಲಿಯೇ, ನೀನು ನನ್ನನ್ನು ಕತ್ತರಿಸುವುದಕ್ಕೆ ನನಗೆ ನೋವಿಲ್ಲ. ನಿನಗೆ ಹಿಡಿಯ ರೂಪದಲ್ಲಿ ಸಹಕರಿಸುತ್ತಿದೆಯಲ್ಲ ಮತ್ತೊಂದು ಮರ, ಅದಕ್ಕಾಗಿ ನಾನು ನೊಂದಿದ್ದೇನೆ...’’

ಆಟದ ಖುಷಿ
ಅವನೊಬ್ಬ ವೃತ್ತಿಪರ ಆಟಗಾರ.
ಒಬ್ಬ ಹುಡುಗ ಕೇಳಿದ ‘‘ನೀವು ಯಾವಾಗಲೂ ಆಡುತ್ತೀರಲ್ಲ, ಕೆಲಸ ಯಾವಾಗ ಮಾಡುತ್ತೀರಿ?’’
‘‘ಆಡುವುದೇ ನನ್ನ ಕೆಲಸ’’ ಆಟಗಾರ ಹೇಳಿದ.
‘‘ಆಡುವುದು ಒಂದು ಕೆಲಸವೆ?’’ ಹುಡುಗ ಕೇಳಿದ.
‘‘ಹೌದು. ಅದಕ್ಕಾಗಿಯೇ ನನಗೆ ಕೋಟಿ ಕೋಟಿ ರೂ. ಕೊಡುತ್ತಾರೆ’’
‘‘ಆಡುವುದು ಕೆಲಸವಾದರೆ, ಅದರಿಂದ ಆಡುವ ಖುಷಿ ಸಿಗುವುದು ಹೇಗೆ?’’ ಹುಡುಗ ವಿಚಿತ್ರ ಪ್ರಶ್ನೆ ಕೇಳಿದ.

ರೋಗ
ಆ ಊರಲ್ಲಿ ವೈದ್ಯರೇ ಇರಲಿಲ್ಲ.
ಆದುದರಿಂದ ಅಲ್ಲಿ ರೋಗಗಳೂ ಇರಲಿಲ್ಲ.
ವೈದ್ಯನೊಬ್ಬ ಬಂದು ಅಲ್ಲಿ ಆಸ್ಪತ್ರೆ ತೆರೆದ.
ಅಂದಿನಿಂದ ಆ ಊರಲ್ಲಿ ಯಾರಾದರೊಬ್ಬರಿಗೆ ಹೊಟ್ಟೆನೋವು, ತಲೆನೋವು.

ಕೃಷಿ
‘‘ಈ ಬಾರಿಯ ಮಳೆಗಾಲಕ್ಕೆ ಸರಕಾರ ಸಂಪೂರ್ಣ ಸಿದ್ಧವಾಗಿದೆ’’ ಮುಖ್ಯಮಂತ್ರಿ ನುಡಿದರು.
ಹೌದು.
ಕಳೆದ ಬಾರಿಯಂತೆ ಈ ಬಾರಿ ಬೀಜ, ಗೊಬ್ಬರಕ್ಕಾಗಿ ರೈತರು ಆಕ್ರೋಶ ವ್ಯಕ್ತ ಪಡಿಸಲಾರರು.
ಯಾಕೆಂದರೆ ಬೀದಿ ಬೀದಿಯಲ್ಲಿ ಪೊಲೀಸ್ ಪಡೆಗಳು ಕೋವಿ ಹಿಡಿದು ಸಿದ್ಧವಾಗಿ ನಿಂತಿವೆ.

Saturday, June 2, 2012

ವಿಷಾದದ ಹನಿಗಳು

ಇಲ್ಲಿರುವ ಹನಿಗಳನ್ನು ಬರೆದವರು ಪತ್ರಕರ್ತ, ಕವಿ, ದಿ. ಬಿ.ಎಂ. ರಶೀದ್. ಅವರ "ಪರುಷ ಮಣಿ' ಸಂಕಲನದಿಂದ ಆರಿಸಿ ಕೊಡಲಾಗಿದೆ. 

ವಿಷಾದದ ಹನಿಗಳು

1
ಈ ಜಗತ್ತಿನಲ್ಲಿ ಗಾಯಕಿಯಂತೆ
ಮೈ ಮರೆತು ಬದುಕು
‘‘ಜಗತ್ತು ನಿನಗೆ ಅಪೂರ್ವ ಸಂಗೀತ’’
ಶ್ರೋತೃಳಂತೆ ಮನ ತೆರೆದೆಯೋ
ವಿಷಾದದಿಂದ ಉದ್ಗರಿಸಲಿರುವೆ;
‘‘ಜಗತ್ತು ಅಪೂರ್ವ ಸಂಗೀತ ನಿಜ
ಆದರೆ, ಅವೆಷ್ಟೊಂದು ಅಪಸ್ವರಗಳು’’

2
ನಿನ್ನೆದೆಯೊಳಗೆ
ಗರ್ಭ ಕಟ್ಟಿದ ದುಃಖ
ಹಡೆದದ್ದು ಆ ಕಣ್ಣೀರು

ನನ್ನೆದೆಯ ಅಸಹಾಯಕ
ಕೈಗಳು ಹೊಸೆದದ್ದು
ಈ ಕವನದ ಕರವಸ್ತ್ರ

ತಗೋ ಇದನ್ನು
ಒರೆಸಿ ಪಕ್ಕಕ್ಕೆಸೆ ಅದನ್ನು

3
ಸಾವು ಸಹಿ ಮಾಡಿದ
ಖಾಲಿ ಚೆಕ್ಕು
ಈ ಬದುಕು!

ಕಂಡ ಕನಸುಗಳೇ ಬರೆಯಬಹುದಾದ
ಅಖಂಡ ಅಂಕೆಗಳು...

ಆದರೆ ನನಗೆ ದಕ್ಕಿದ್ದು ಮಾತ್ರ
ಖೋಟಾ ಚೆಕ್ಕು!!

4
ನಿನಗೆಲ್ಲವೂ ಇದೆ
‘ಇದೆ’ಯೆನ್ನುವುದೊಂದರ
ಹೊರತು...

ನನಗೆಲ್ಲವೂ ಇಲ್ಲ
‘ಇಲ್ಲ’ವೆನ್ನುವುದೊಂದರ
ಹೊರತು...

5
ನಿನ್ನ ಹೃದಯದ ಬಾಗಿಲೆಂದು
ಮುಚ್ಚಿಕೊಂಡವೋ
ನಿರ್ದಾಕ್ಷಿಣ್ಯವಾಗಿ...

ಹೆಂಡದಂಗಡಿಯ ಬಾಗಿಲಂದು
ತೆರೆದುಕೊಂಡವು
ಹಾರ್ದಿಕವಾಗಿ...

6
ನಾನು ತುಟಿ ತೆರೆದು ಕಾದಂದು
ನೀನು ಕಿವಿ ಮುಚ್ಚಿ ನಡೆದೆ
ನೀನು ಕಿವಿ ತೆರೆದು ನಿಂತಂದು
ನಾನು ತುಟಿ ಮುಚ್ಚಿ ನಡೆದೆ

7
ಕಣ್ಣು ಬಿಡಲಾರದ
ಅಂಧಕಾರದೊಳಗೆ
ನನ್ನ ದಾರಿ
ಕಳೆದು ಹೋಗಿದೆ
ಬೆಳಗಿ ಮೊರೆವ
ದಾರಿ ಕೊರೆವ
ಮಿಂಚಿಗಾಗಿ
ಕಾಯುತ್ತಿದ್ದೇನೆ

8
ಸಾವಿಗವಳು
ಕೊನೆಯ ಕಂತನ್ನು
ಒಪ್ಪಿಸಲಿದ್ದಾಳೆ
ಒಪ್ಪಿಸಲಿ ಬಿಡು, ವಿಷಾದವಿಲ್ಲ!
ಸಾವಿಗೆಷ್ಟೊಂದು
ಕಂತುಗಳನ್ನು
ತೆತ್ತಳವಳು, ಲೆಕ್ಕವಿಲ್ಲ!!

9
ಗತವನ್ನು
ಕೆದಕಲು
ನಾನು ಇಚ್ಛಿಸುವುದಿಲ್ಲ!
ಯಾಕೆಂದರೆ ಗತದ ಹಿನ್ನೆಲೆಯಲ್ಲಿ
ಭೂಗತಗೊಂಡ
ನನ್ನ ಕನಸುಗಳಿವೆ

10
ಶಬ್ದಗಳು
ಒಲ್ಲೆನೆಂದರೂ
 
ನಿನ್ನ ಕವನಿಸಿದೆ ನಲ್ಲೇ
ಆದರದು ಕವನವಾಗಲಿಲ್ಲ!
ಒಂದು 
ಅಪಚಾರವಾಯಿತು. 

Saturday, May 26, 2012

ಆಕೆ ಮತ್ತು ಇತರ ಕತೆಗಳು

ಮಂಚ
‘‘ಇದು ನಾನು ವಿದೇಶದಿಂದ ತಂದ ಅತ್ಯಂತ ಬೆಲೆಬಾಳುವ ಮಂಚ’’
‘‘ಹೌದಾ? ಬಹುಶಃ ಇದರಲ್ಲಿ ಮಲಗಿದಾಕ್ಷಣ ನಿದ್ದೆ ಬರಬಹುದಲ್ವಾ?’’
‘‘ಹಾಗೇನೂ ಇಲ್ಲ...ನಿದ್ರೆ ಮಾತ್ರೆ ತೆಗೆದುಕೊಳ್ಳದೇ ನನಗೆ ನಿದ್ದೆ ಬರುವುದಿಲ್ಲ...’’
‘‘ಯಾವ ಮಂಚದಲ್ಲಿ ಮಲಗಿದಾಕ್ಷಣ ನಿದ್ದೆ ಬರುವುದೋ ಅದೇ ಹೆಚ್ಚು ಬೆಲೆಬಾಳುವ ಮಂಚ. ಅಂತಹ ಮಂಚವನ್ನು, ನಾನು ಹಲವು ಗುಡಿಸಲುಗಳಲ್ಲಿ ನೋಡಿದ್ದೇನೆ’’

ಬಾಡಿಗೆ ಮನೆ
‘‘ಯಾವಾಗ ನೋಡಿದರೂ ಬಾಡಿಗೆ ಮನೆಯಲ್ಲೇ ಇರುತ್ತೀರಲ್ಲ...ಒಂದು ಸ್ವಂತ ಮನೆ ಮಾಡಿಕೊಳ್ಳಬಾರದೆ?’’ ಅವರು ಕೇಳಿದರು.
‘‘ಸ್ವಂತ ಮನೆ ಮಾಡಿಕೊಳ್ಳುವ ಆಸೆಯಿದೆ. ಹಾಗೆಂದು ಹೊರಟಾಗಲೆಲ್ಲ ಯಾರದೋ ಬಾಡಿಗೆ ಮನೆಯಂತಿರುವ ಈ ಭೂಮಿಯಲ್ಲಿ ಕಟ್ಟಿದ್ದು ನನ್ನ ಸ್ವಂತ ಮನೆ ಹೇಗಾದೀತು? ಎಂಬ ಪ್ರಶ್ನೆ ಕಾಡುತ್ತದೆ’’

ಅಹಿಂಸೆ
ಅಂದು ಅಹಿಂಸೆಯ ಪ್ರತಿಪಾದಿಸಿದ ಮಹಾವೀರ ಜಯಂತಿಯ ದಿನ.
ಸೌಹಾರ್ದ ಮೆರೆಯಲು ಸರಕಾರ ಒಂದಿಡೀ ದಿನ ಮಾಂಸ ನಿಷೇಧ ಘೋಷಿಸಿತು.
ನಗರದಲ್ಲಿ ಮಾಂಸ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು.
ಕಟುಕನ ಮನೆಯಲ್ಲಿ ಅಂದಿಡೀ ಮಕ್ಕಳು ಹಸಿದು ಅಳುತ್ತಿದ್ದರು.
ಆತನ ಕದ್ದು ಮಾಂಸ ಮಾರಲು ಹೋಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ.
ಅವರ ಹೊಡೆತ ಬೀಳಬಾರದದಲ್ಲಿಗೆ ಬಿದ್ದು ಲಾಕಪ್‌ನಲ್ಲಿ ಸತ್ತು ಹೋಗಿದ್ದ.
ಮರುದಿನ ಮಹಾವೀರ ಜಯಂತಿಯ ಅಹಿಂಸೆ ಸಂದೇಶ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಯಿತು.
ಮಹಾವೀರ ಜಯಂತಿ ಯಶಸ್ವಿಯಾಗಿ ಆಚರಿಸಲ್ಪಟ್ಟಿತು.
ಸೌಹಾರ್ದ ಎತ್ತಿ ಹಿಡಿಯಲಾಗಿತ್ತು.
ಕಟುಕನ ಮನೆಯ ಹೆಂಡತಿ ಮಕ್ಕಳು ತಮ್ಮ ತಂದೆಗಾಗಿ ಇನ್ನೂ ಹುಡುಕುತ್ತಲೇ ಇದ್ದಾರೆ.

ಬೆಂಕಿ
‘‘ಭೂಮಿಯ ಒಡಲಲ್ಲಿ ಬೆಂಕಿ ಇದೆಯಂತೆ ಹೌದ?’’
‘‘ಹೌದು. ತಾಯಿಯ ಒಡಲಲ್ಲಿ ಸಿಟ್ಟಿರುವಂತೆ’’

ಕನಸು
‘‘ನಿನ್ನೆ ನನ್ನ ತಾಯಿ ತುಂಬಾ ದಿನಗಳ ಬಳಿಕ ನನ್ನ ಕನಸಲ್ಲಿ ಬಂದಿದ್ದರು...ನನ್ನ ಬಗ್ಗೆ ಅವರಿಗೆ ತುಂಬಾ ಪ್ರೀತಿ’’
‘‘ಹೌದೆ...ಅವರು ತೀರಿ ಹೋಗಿ ಎಷ್ಟು ವರ್ಷವಾಯಿತು..?’’
‘‘ಹಾಗೇನಿಲ್ಲ...ಅವರು ವೃದ್ಧಾಶ್ರಮದಲ್ಲಿದ್ದಾರೆ...’’

ಹೃದಯ
ಹಿಮಾಲಯ ಕರಗುತ್ತಿತ್ತು.
ಗಂಗಾನದಿ ದಿನದಿಂದ ವಿಶಾಲವಾಗುತ್ತಿತ್ತು.
‘ನೀನೇಕೆ ಕರಗುತ್ತಿದ್ದೀಯ?’ ಗಂಗೆ ಕೇಳಿದಳು.
‘ಬೆಟ್ಟವಾದರೇನು...ನನಗೂ ಹೃದಯ ಇರಬಾರದೇನು?’ ಹಿಮಾಲಯ ಕೇಳಿತು.

ಮಕ್ಕಳು
ಆರು ಮಂದಿ ತಾಯಂದಿರು ಒಟ್ಟು ಸೇರಿದ್ದರು.
ತಮ್ಮ ತಮ್ಮ ಮಕ್ಕಳ ಬಗ್ಗೆ ಗುಣಗಾನ ಮಾಡುತ್ತಿದ್ದರು.
‘‘ನನ್ನ ಮಗನಿಗೆ ನಾನೆಂದರೆ ತುಂಬಾ ಇಷ್ಟ...ಗೊತ್ತಾ...ಅವನು ದೊಡ್ಡ ಇಂಜಿನಿಯರ್...ದೊಡ್ಡ ದೊಡ್ಡ ಸೇತುವೆಗಳನ್ನು ಕಟ್ಟಿದ್ದಾನೆ...ತಿಂಗಳಿಗೆ ಹತ್ತು ಲಕ್ಷ ಸಂಪಾದಿಸುತ್ತಾನೆ...’’
‘‘ನನ್ನ ಮಗ ಬರಹಗಾರ...ಮೊನ್ನೆಯಷ್ಟೇ ಅವನು ಬರೆದ ಕಾದಂಬರಿಯ ಒಂದು ಲಕ್ಷ ಪ್ರತಿ ಮಾರಾಟವಾಯಿತು...ನನ್ನ ಮಗನಿಗೆ ಸಮಾಜ ತುಂಬಾ ಗೌರವ ನೀಡುತ್ತದೆ...’’
‘‘ನನ್ನ ಮಗನಿಗೂ ಅಷ್ಟೇ...ಅವನು ಪ್ರಖ್ಯಾತ ಹೃದಯ ತಜ್ಞ. ಎಂತಹ ಹೃದಯವನ್ನು ಅರೆಕ್ಷಣದಲ್ಲಿ ಬಿಚ್ಚಿ ಅದರ ರೋಗವನ್ನು ವಾಸಿ ಮಾಡುತ್ತಾನೆ...’’
ಹೀಗೆ ಮಾತನಾಡುತ್ತಿರುವಾಗ ಸಂಜೆಯಾಯಿತು. ಅಷ್ಟರಲ್ಲಿ ವಾರ್ಡನ್ ಬಂದು ಚೀರಿದಳು ‘‘ಸಮಯವಾಯಿತು...ಎಲ್ಲರೂ ಅವರವರ ಕೋಣೆಗೆ ತೆರಳಿ’’
ಅಂದ ಹಾಗೆ ಅದೊಂದು ವೃದ್ಧಾಶ್ರಮವಾಗಿತ್ತು.

ಆಕೆ
ಒಬ್ಬ ಮಹಿಳೆ ಆ ಬೀದಿಯಲ್ಲಿ ಒಬ್ಬಂಟಿಯಾಗಿ ನಿಂತಿದ್ದಳು.
‘‘ಅವಳು ವೇಶ್ಯೆಯಾಗಿರಬಹುದೆ?’’ ಶಿಷ್ಯ ಕೇಳಿದ.
‘‘ಆಗದೆಯೂ ಇರಬಹುದು....’’ ಸಂತ ಹೇಳಿದ.
‘‘ಅವಳ ವರ್ತನೆ ವೇಶ್ಯೆಯಂತೆ ಕಾಣುತ್ತಿದೆ...’’ ಶಿಷ್ಯ ಹೇಳಿದ.
‘‘ಅಲ್ಲ. ನಿನ್ನ ಒಳಗಿನ ವರ್ತನೆ ಆಕೆಯನ್ನು ನಿನಗೆ ವೇಶ್ಯೆಯಂತೆ ಕಾಣಿಸುತ್ತಿದೆ’’ ಸಂತ ಸಮಾಧಾನಿಸಿದ.

Tuesday, May 22, 2012

ಬಾಡೂಟದ ಜೊತೆಗೆ ಗಾಂಧಿಜಯಂತಿ!

5 ವರ್ಷಗಳ ಹಿಂದೆ ಬರೆದ ಲೇಖನ ಇದು. ಪೇಜಾವರ ಶ್ರೀಗಳ ವಿವಾದಾತ್ಮಕ ಹೇಳಿಕೆ ಹಾಗು ಅಂಬೇಡ್ಕರ್ ಜಯಂತಿ ದಿನ ಮಾಂಸ ನಿಷೇಧ ಆದೇಶದ ಹಿನ್ನೆಲೆಯಲ್ಲಿ ಈ ಲೇಖನ ಪ್ರಸ್ತುತವಾಗಬಹುದು ಎಂದು ಹಾಕಿದ್ದೇನೆ. 

ಮೊನ್ನೆ ಗಾಂಧಿ ಜಯಂತಿ ದಿನ ಸಚಿವನ ಮಗನೊಬ್ಬ ಸಾರ್ವಜನಿಕ ಸ್ಥಳದಲ್ಲಿ ತನ್ನ ಗೆಳೆಯರೊಂದಿಗೆ ‘ಬಾಡೂಟ’ ಮಾಡಿ ಉಂಡದ್ದು ಸಾಕಷ್ಟು ಸುದ್ದಿಯಾಯಿತು. ಒಂದು ಟಿ.ವಿ. ಚಾನೆಲ್ ಅಂತೂ ಇದನ್ನು ಅನಾಹುತವೋ ಎಂಬಂತೆ ವರದಿ ಮಾಡಿತು. ಕೆಲವು ಗಾಂಧಿವಾದಿಗಳು ಇದಕ್ಕೆ ಆಘಾತ ವ್ಯಕ್ತಪಡಿಸಿದರು. ಸಚಿವನ ಮಗನೇ ಬಾಡೂಟ ಮಾಡಿ ಉಂಡಿರುವುದು ಗಾಂಧಿಗಾದ ಅವಮಾನ ಎಂಬಂತೆ ಚಿತ್ರಿತವಾಯಿತು. ಸಂಸ್ಕೃತಿಯನ್ನು ಕ್ರೆಡಿಟ್ ಕಾರ್ಡಿನಂತೆ ಕಿಸೆಯೊಳಗಿಟ್ಟು ಓಡಾಡುವ ಬಿಜೆಪಿಯ ಸಚಿವನಿಗೆ ತನ್ನ ಸುಪುತ್ರನ ಕೆಲಸದಿಂದ ಸಾಕಷ್ಟ ಮುಜುಗರವಾಯಿತು. ‘ಗಾಂಧಿ ದಿನದಂದು ಹಿಂಸೆ ಗಾಂಧಿ ದಿನದಂದು ಮಾಂಸ’! ಇತ್ಯಾದಿ ಉದ್ಗಾರಗಳು ಕೇಳಿ ಬಂದವು.

ಬಾಡೂಟವೆನ್ನುವ ಮೂರಕ್ಷರದ ಶಬ್ದಕ್ಕೆ ಸಾಂಸ್ಕೃತಿಕ ಹಿನ್ನೆಲೆಯಿದೆ. ಈ ದೇಶದ ಬಹುಜನರ ಆಹಾರ ಸಂಸ್ಕೃತಿ. ದಲಿತರು, ಶೂದ್ರರು, ಮುಸ್ಲಿಮರು, ಕ್ರಿಶ್ಚಿಯನ್ನರೂ ಮಾತ್ರವಲ್ಲ ದೇಶದ ಕೆಲವು ಭಾಗಗಳಲ್ಲಿ ಬ್ರಾಹ್ಮಣರೂ ಅತಿಯಾಗಿ ಇಷ್ಟಪಡುವ ಊಟ ಬಾಡೂಟ. ಬಾಡೂಟವನ್ನು ಅವಮಾನಿಸುವುದೆಂದರೆ ಗತಿಸಿಹೋದ ನಮ್ಮ ಹಿರಿಯರನ್ನು ಅವಮಾನಿಸುವುದೆಂದರ್ಥ.ತುಳುನಾಡಿನಲ್ಲಿ ಬಾಡೂಟಕ್ಕೆ ಹಲವು ಸಂಕೇತಗಳಿವೆ. ಅರ್ಥಗಳಿವೆ. ಬಾಡೂಟ ದುಡಿಮೆಯ, ಬೆವರಿನ ಸಂಕೇತ. ನೆಲದ ಮಣ್ಣಿನ ಸೊಗಡು ಅದರಲ್ಲಿ ಮಿಳಿತವಾಗಿದೆ. ಕಾಡು, ಬೇಟೆ, ಶೌರ್ಯ, ಹೋರಾಟ ಇತ್ಯಾದಿಗಳು ಈ ಬಾಡೂಟದೊಂದಿಗೆ ತಳಕು ಹಾಕಿಕೊಂಡಿವೆ. ಕೆದಂಬಾಡಿ ಜತ್ತಪ್ಪ ರೈಯವರ ‘ಬೇಟೆಯ ನೆನಪುಗಳು’ ಓದಿದರೆ ಬಾಡೂಟದ ಸೊಗಸನ್ನು, ಪರಿಮಳವನ್ನು ಅಸ್ವಾದಿಸಬಹುದು. ಈ ಊಟವನ್ನು ಆಗಷ್ಟೇ ತಾಳೆಮರದಿಂದ ಇಳಿಸಿದ ಕಳ್ಳ ಇನ್ನಷ್ಟು ಅರ್ಥಪೂರ್ಣಗೊಳಿಸುತ್ತದೆ. ಈ ಊಟದ ಜೊತೆಗೆ ಸಂಬಂಧ ಸಂಬಂಧಗಳು ಹತ್ತಿರವಾಗುತ್ತವೆ. ಬಾಡೂಟವನ್ನು ಅವಮಾನಿಸುದೆಂದರೆ ಮಣ್ಣಿನ ಮಕ್ಕಳ ದುಡಿಮೆಯನ್ನು, ಬೆವರನ್ನು ಅವಮಾನಿಸಿದಂತೆ.
  
   ಗಾಂಧಿ ಈ ದೇಶದ ಬಹುಸಂಸ್ಕೃತಿಯನ್ನು ಅತಿಯಾಗಿ ಗೌರವಿಸಿದವರು ಮಾತ್ರವಲ್ಲ. ಅದರ ಬಗ್ಗೆ ಗಟ್ಟಿ ನಂಬಿಕೆಯನ್ನು ಹೊಂದಿದ್ದರು. ಈ ದೇಶದ ಬಹು ಸಂಸ್ಕೃತಿ ಶಾಶ್ವತವಾಗಿ ಉಳಿಯಬೇಕೆಂದೇ ಗಾಂಧೀಜಿ ಜಾತಿಯನ್ನು ಬೆಂಬಲಿಸುತ್ತಿದ್ದರು. ಗಾಂಧಿ ಮಾಂಸ ತಿನ್ನದೇ ಇದ್ದುದು ಬರೇ ‘ಅಹಿಂಸೆ’ಯ ಕಾರಣಕ್ಕಾಗಿಯಲ್ಲ. ಅದು ಅವರ ಮನೆಯ ಸಂಪ್ರದಾಯವೂ ಆಗಿತ್ತು. ಕ್ರಮೇಣ ಆ ಸಂಪ್ರದಾಯ ಆಹಿಂಸೆಯೊಂದಿಗೆ ತಳಕು ಹಾಕಿಕೊಂಡಿತು. ಆಹಾರಕ್ಕಾಗಿ ಕೋಳಿ, ಕುರಿಗಳನ್ನು ಬಳಸುವುದನ್ನು ಭಾರತೀಯ ಸಂಸ್ಕೃತಿ ಯಾವತ್ತು ಹಿಂಸೆ ಎಂದು ಗುರುತಿಸಿಲ್ಲ. ಹಸಿವಿಗಿಂತ ಹಿಂಸೆ ಇನ್ನಾವುದಿದೆ? ಆ ಹಿಂಸೆಯನ್ನು ವಿರೋಧಿಸುವ ಪ್ರಕ್ರಿಯೆಯಲ್ಲಿ ಗಾಂಧೀಜಿಯ ಉಪವಾಸ ಕಲ್ಪನೆ ಹುಟ್ಟಿಕೊಂಡಿತು. ಗಾಂಧೀಜಿಯ ಹುಟ್ಟು ಹಬ್ಬದ ದಿನ ಈ ದೇಶದ 17ಕೋಟಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರಲ್ಲ, ಅದು ಹಿಂಸೆ. ಗಾಂಧೀಜಿಯ ಈ ದೇಶದಲ್ಲಿ ಒಂದು ಮಗು ಹಸಿವಿನಿಂದ ಸತ್ತು ಹೋದರೆ, ಅದು ಬರ್ಬರ ಹಿಂಸೆ. ಅಪೌಷ್ಟಿಕತೆ, ಹಸಿವು ತುಂಬಿದ ನಾಡಿನಲ್ಲಿ ಬಹು ಸಂಖ್ಯಾತರ ಆಹಾರ ಪದ್ಧತಿಯನ್ನು ತಿರಸ್ಕರಿಸುವುದು ಬಹುದೊಡ್ಡ ಹಿಂಸೆ. ನಿಮಗೆ ನೆನಪಿರಬಹುದು ಕೆಲವು ವರ್ಷಗಳ ಹಿಂದೆ ಬಕ್ರೀದ್ ಹಬ್ಬ ಮತ್ತು ಮಹಾವೀರ ಜಯಂತಿ ಜೊತೆ ಜೊತೆಯಾಗಿಯೇ ಬಂತು. ಆಗ ರಾಜ್ಯದ ಮೂರ್ಖ ಸರಕಾರ (ಬಾಡೂಟವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜೆ.ಎಚ್. ಪಟೇಲರೇ ಆಗ ಮುಖ್ಯಂತ್ರಿಯಾಗಿದ್ದದು ದುರಂತ) ಮಹಾವೀರ ಜಯಂತಿ ದಿನ ಮಾಂಸ ಮಾರಾಟವನ್ನು ನಿಷೇಧಿಸಿತು. ಒಂದು ಧರ್ಮವನ್ನು ಗೌರವಿಸುವ ಹೆಸರಿನಲ್ಲಿ ಇನ್ನೊಂದು ಧರ್ಮದ ವೌಲ್ಯವನ್ನು ಅವಮಾನಿಸಿತು. ಬಕ್ರೀದ್ ಹಬ್ಬದಂದು ಶ್ರೀಮಂತರು ಮಾಂಸವನ್ನು ದೇವರ ಹೆಸರಿನಲ್ಲಿ ಬಡವರಿಗೆ ದಾನವಾಗಿ ಹಂಚುತ್ತಾರೆ. ಮನೆಮನೆಗಳಲ್ಲಿ ಬಾಡೂಟದ ಪರಿಮಳ ಆವರಿಸಿಕೊಂಡಿರುತ್ತದೆ. ಮಹಾವೀರನ ಹೆಸರಿನಲ್ಲಿ ಮುಸ್ಲಿಮರು ತಮ್ಮ ಹಬ್ಬವನ್ನೇ ಆಚರಿಸಿಕೊಳ್ಳಲಾಗದಂತಹ ಸನ್ನಿವೇಶ ನಿರ್ಮಾಣವಾಯಿತು. ಮುಸ್ಲಿಮರು ಇನ್ನೊಂದು ಧರ್ಮದ ನಂಬಿಕೆಗಳನ್ನು ಗೌರವಿಸಬೇಕು ಎಂಬ ಅತೀ ದೊಡ್ಡ ಸುಳ್ಳು ಘೋಷಣೆಯನ್ನು ಸಾರ್ವಜನಿಕವಾಗಿ ಹರಡಲಾಯಿತು. ಒಂದು ಧರ್ಮದ ಹಬ್ಬ ಇನ್ನೊಂದು ಧರ್ಮದ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತದೆಯೆಂದಾದರೆ ಅದನ್ನು ಸೌಹಾರ್ದ ಎಂದು ಕರೆಯಬಹುದೆ?

ಇನ್ನೊಂದು ಘಟನೆಯನ್ನು ಇಲ್ಲಿ ಸ್ಮರಿಸಬೇಕು. ಗುಜರಾತ್‌ನಲ್ಲಿ ಜೈನಧರ್ಮೀಯರ ಹಬ್ಬವೊಂದರ ನೆಪದಲ್ಲಿ ಅಲ್ಲಿನ ಮಹಾನಗರ ಪಾಲಿಕೆ ಒಂದು ವಾರ ಕಾಲ ಮಾಂಸ ನಿಷೇಧಿಸಿ ಹೊರಡಿಸಿದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್‌ನ ಪೀಠವೊಂದು ಸಮರ್ಥಿಸಿತು. 1998ರಲ್ಲಿ ಜೈನರ ‘ಪರ್‌ಯೂಶನ್’ ಹಬ್ಬದ ಹಿನ್ನೆಲೆಯಲ್ಲಿ ಗುಜರಾತ್‌ನ ಅಹ್ಮದಾಬಾದ್ ಮಹಾನಗರ ಪಾಲಿಕೆಯು ಆಗಸ್ಟ್ 19ರಿಂದ 26ರವರೆಗೆ ನಗರದಲ್ಲಿ ಮಾಂಸವನ್ನು ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಅಧಿಸೂಚನೆಯಿಂದ ಮೂರು ಸಾವಿರಕ್ಕೂ ಅಧಿಕ ಮಾಂಸದ ವ್ಯಾಪಾರಿಗಳು ಸಂಕಷ್ಟವನ್ನು ಎದುರಿಸಬೇಕಾಯಿತು. ಇಷ್ಟು ವ್ಯಾಪಾರಿಗಳ ಕುಟುಂಬಗಳು ಇನ್ನೊಂದು ಧರ್ಮದ ಹಬ್ಬಕ್ಕಾಗಿ ತಮ್ಮ ದೈನಂದಿನ ಬದುಕನ್ನು ತೆತ್ತುಕೊಳ್ಳುವಂತಹ ಸನ್ನಿವೇಶ ಒದಗಿ ಬಂತು. ಸಹಜವಾಗಿಯೇ ಮಹಾನಗರ ಪಾಲಿಕೆಯ ವಿರುದ್ಧ ವ್ಯಾಪಾರಿಗಳ ಸಂಘ ನ್ಯಾಯಾಲಯದ ಮೆಟ್ಟಿಲೇರಿತು. 2005 ಜೂನ್ 22ರಂದು ಹೈಕೋರ್ಟ್ ಪೀಠವೊಂದು ಈ ಅಧಿಸೂಚನೆಯ ವಿರುದ್ಧ ತೀರ್ಪನ್ನು ನೀಡಿತು. ವ್ಯಾಪಾರಿಗಳ ಮೂಲಭೂತ ಹಕ್ಕನ್ನು ಈ ಅಧಿಸೂಚನೆ ಕಸಿದುಕೊಳ್ಳುತ್ತದೆ ಎಂದಿತು ಹೈಕೋರ್ಟ್. ಆದರೆ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಅಹ್ಮದಾಬಾದ್‌ನ ‘ಹಿಂಸಾವಿರೋಧಕ್ ಸಂಘ್’ ಸುಪ್ರೀಂಕೋರ್ಟ್‌ಗೆ ಹೋಯಿತು. ಕಳೆದ ಮಾರ್ಚ್ 14ರಂದು ತನ್ನ ತೀರ್ಪನ್ನು ನೀಡಿದ ಸುಪ್ರೀಂಕೋರ್ಟ್ ಪೀಠ, ಮಹಾನಗರ ಪಾಲಿಕೆಯ ತೀರ್ಪನ್ನು ಸಮರ್ಥಿಸಿಕೊಂಡಿತು.ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಾಧೀಶರು ತನ್ನ ತೀರ್ಪಿನಲ್ಲಿ ನೀಡಿದ ಹೇಳಿಕೆ ಏನು ಗೊತ್ತೆ ‘‘ಅಕ್ಬರ್ ಮಹಾರಾಜನು ಗುಜರಾತಿನಲ್ಲಿ ಆರು ತಿಂಗಳ ಕಾಲ ಮಾಂಸಾಹಾರದಿಂದ ದೂರವಿದ್ದಿರುವಾಗ, ಇನ್ನೊಂದು ಹಬ್ಬವನ್ನು ಗೌರವಿಸಲು ದೂರವಿರುವುದಕ್ಕಾಗುವುದಿಲ್ಲವೇ?’’ ಒಂದಾನೊಂದು ಕಾಲದಲ್ಲಿ ಅಕ್ಬರ್ ಮಹಾರಾಜನ ‘ನಾನ್‌ವೆಜಿಟೇರಿಯನ್’ ಕತೆಯನ್ನು ಮುಂದಿಟ್ಟುಕೊಂಡು ಈ ದೇಶದ ಬಹುಸಂಖ್ಯಾತ ಜನರ ಆಹಾರದ ಹಕ್ಕುಗಳ ಮೇಲೆ ದಾಳಿ ನಡೆಸುವ ನ್ಯಾಯವನ್ನು ‘ನ್ಯಾಯ’ವೆಂದು ಒಪ್ಪಿಕೊಳ್ಳಲು ಸಾಧ್ಯವೆ? ಎಲ್ಲಕ್ಕಿಂತ ಮುಖ್ಯವಾಗಿ, ಒಂದು ಸಮುದಾಯ ಹಬ್ಬ ಆಚರಿಸುತ್ತಿರುವಾಗ ಇನ್ನೊಂದು ಸಮುದಾಯ ತನ್ನ ಬದುಕುವ ಹಕ್ಕುಗಳನ್ನು ಕಳೆದುಕೊಳ್ಳುವುದು ಹೇಗೆ ‘ಸೌಹಾರ್ದ’ದ ಸಂಕೇತವಾಗಾತ್ತದೆ?

ಈ ದೇಶದ ಆಹಾರದ ಕೊರತೆಯನ್ನು ಎದುರಿಸುತ್ತಿರುವ ದಿನಗಳಲ್ಲಿ ‘ಮಾಂಸ’ವನ್ನು ಆಹಾರದ ಮುಖ್ಯವಾಹಿನಿಯಿಂದ ಹೊರಗಿಡುವ ಹುನ್ನಾರಕ್ಕೆ ನ್ಯಾಯಾಲಯ ತೀರ್ಪು ಪರೋಕ್ಷ ಬೆಂಬಲವನ್ನು ನೀಡಿತು. ಈ ದೇಶದ ಮುಖ್ಯ ಆಹಾರ ಮೀನು, ಕೋಳಿ, ಆಡು, ಕುರಿ, ಹಸು, ಮೊಟ್ಟೆ ಇತ್ಯಾದಿಗಳು. ಜನ ಸಾಮಾನ್ಯರ ಬದುಕಿನಲ್ಲಿ ಆಹಾರವಾಗಿ ಮಾತ್ರವಲ್ಲ, ಸಂಸ್ಕೃತಿಯಾಗಿ ಸೇರಿಕೊಂಡಿದೆ. ಲಕ್ಷಾಂತರ ಮೊಗವೀರರು ಮೀನಿನ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಮೀನುಗಾರಿಕೆ ಅವರ ‘ಧರ್ಮ’ವಾಗಿದೆ. ಅವರ ಬದುಕನ್ನು ಪೊರೆಯುವ ಕಡಲನ್ನು ಹೊರತುಪಡಿಸಿದ ಧರ್ಮ ಅವರಿಗಿಲ್ಲ. ಹಾಗೆಯೇ ಕೋಳಿಯ ಉದ್ಯಮವೂ ಈ ದೇಶದಲ್ಲಿ ಲಕ್ಷಾಂತರ ಜನರನ್ನು ಪೊರೆಯುತ್ತಿದೆ. ಕುರಿ, ಆಡಿನ ಮಾಂಸವೂ ಒಂದು ಉದ್ಯಮವಾಗಿ ಈ ದೇಶದಲ್ಲಿ ಬೆಳೆದಿದೆ. ಕುರಿ, ಆಡಿನ ಮಾಂಸ ತನ್ನ ದರದಿಂದಾಗಿ ಕೆಳವರ್ಗದ ಜನರ ಕೈಗೆಟಕದೇ ಇದ್ದಾಗ, ಗೋಮಾಂಸ ಅದನ್ನು ಪೊರೆದಿದೆ.

ತಳವರ್ಗದ ಜನರ ಹಬ್ಬ ಮಾಂಸವಿಲ್ಲದೆ ಪೂರ್ತಿಯಾಗುವುದಿಲ್ಲ. ಮಾಂಸದ ಪರಿಮಳದೊಂದಿಗೇ ಅವರ ಹಬ್ಬ ಸಂಭ್ರಮವನ್ನು ಪಡೆದುಕೊಳ್ಳುತ್ತದೆ. ಸಸ್ಯಾಹಾರಿಗಳ ಹಬ್ಬ ಸಸ್ಯಾಹಾರದ ಖಾದ್ಯಗಳ ಜೊತೆಗೆ ನಡೆಯುತ್ತದೆ. ಒಬ್ಬರ ಹಬ್ಬಗಳನ್ನು ಇನ್ನೊಬ್ಬರ ಆಹಾರದ ಜೊತೆಗೆ ತಳಕು ಹಾಕುವುದೇ ತಪ್ಪು. ಸಸ್ಯಾಹಾರಿಗಳ ಹಬ್ಬದ ದಿನ ಮಾಂಸಾಹಾರಿಗಳು ಮಾಂಸ ತ್ಯಜಿಸಬೇಕೆಂದು ಬಯಸುವುದು, ಮಾಂಸಾಹಾರಿಗಳ ಹಬ್ಬದ ದಿನ ಸಸ್ಯಾಹಾರಿಗಳು ಮಾಂಸವನ್ನು ಸೇವಿಸಿ ‘ಸೌಹಾರ್ದ’ವನ್ನು ಮೆರೆಯಬೇಕೆಂದು ಬಯಸಿದಷ್ಟೇ ಹಾಸ್ಯಾಸ್ಪದ. ಕನಿಷ್ಠ ಹಬ್ಬದ ದಿನವಾದರೂ ಮಾಂಸಹಾರವನ್ನು ತ್ಯಜಿಸಬೇಕು ಎಂಬ ಹೇಳಿಕೆಯಲ್ಲಿ ಪರೋಕ್ಷವಾಗಿ ಮಾಂಸಾಹಾರಿಗಳನ್ನು ‘ಅಪರಾಧಿ’ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರವಿದೆ. ‘ಮಾಂಸ’ವನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಸಂಚಿದೆಈ ದೇಶದಲ್ಲಿ ಮಾಂಸ ಮತ್ತು ಮದ್ಯವನ್ನು ಒಂದೇ ತಕ್ಕಡಿಯಲ್ಲಿಡುವ ಪ್ರಯತ್ನ ಮೊದಲಿನಿಂದಲೂ ನಡೆದು ಬಂದಿದೆ. ಮಾಂಸ ಆಹಾರ, ಆದರೆ ಮದ್ಯ ಆಹಾರವಲ್ಲ. ಅದನ್ನು ಜೋಡಿಪದವಾಗಿ ಬಳಸುವುದೇ ಒಂದು ರಾಜಕೀಯ. ಜನರನ್ನು ಅವಿವೇಕದೆಡೆ ನಡೆಸುವ, ಅವರ ವಿವೇಕವನ್ನು, ಪ್ರಜ್ಞೆಯನ್ನು ನಾಶ ಮಾಡುವ ಪಾನೀಯ ಮದ್ಯ. ಅದನ್ನು ಸಾಧಾರಣವಾಗಿ ಅಕ್ಟೋಬರ್ 2, ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ನಿಷೇಧಿಸುವ ಪದ್ಧತಿಯಿದೆ. ಚುನಾವಣೆಯ ಸಂದರ್ಭದಲ್ಲೂ ಮದ್ಯದಂಗಡಿಗಳನ್ನು ನಿಷೇಧಿಸಲಾಗುತ್ತಿದೆ. ಕಾನೂನು, ಶಾಂತಿ ಸುವ್ಯವಸ್ಥೆಗೆ ಇದು ಅತ್ಯಗತ್ಯ. ಆದರೆ ಮಾಂಸ ತಿಂದು ಯಾರೂ ಹಿಂಸೆಗಿಳಿದ ಘಟನೆ ಈವರೆಗೆ ನಡೆದ ಉದಾಹರಣೆಯಿಲ್ಲ.

   ಈ ಸಂದರ್ಭದಲ್ಲಿ ಯುವ ದಲಿತ ಕವಿಯೊಬ್ಬರು ಬರೆದ ‘ಗೋವು ತಿಂದು ಗೋವಿನಂತಾದವನು...’ ಎಂಬ ಕವಿತೆಯ ಸಾಲು ನೆನಪಾಗುತ್ತದೆ. ಈ ಸನಾತನ ದೇಶದಲ್ಲಿ ಬ್ರಾಹ್ಮಣರು ಮಾಂಸ ತಿನ್ನದೇ ಬದುಕಿದರು. ದಲಿತರು ದನ ತಿಂದು ಬದುಕಿದರು. ಆದರೆ ಇತಿಹಾಸದಲ್ಲಿ ದಲಿತರು ಬ್ರಾಹ್ಮಣರು ಹಲ್ಲೆ ನಡೆಸಿದ ಉದಾಹರಣೆಯೇ ಇಲ್ಲ. ಆದರೆ ಬ್ರಾಹ್ಮಣರು ದಲಿತರ ಮೇಲೆ ನಡೆಸಿದ ದೌರ್ಜನ್ಯಕ್ಕೆ ಲೆಕ್ಕವೇ ಇಲ್ಲ. ದನದ ಮಾಂಸ ತಿಂದು ದಲಿತರು ದನದ ಹಾಗೆ ಸಾತ್ವಿಕವಾಗಿ ಬದುಕಿದರು. ಸೊಪ್ಪು ಕಡ್ಡಿ ತಿಂದರೂ ಬ್ರಾಹ್ಮಣರೂ ವ್ಯಾಘ್ರರಂತೆ ಅವರ ಮೇಲೆ ಎರಗಿದರು. ಈಗ ಹೇಳಿ ಗಾಂಧಿ ಜಯಂತಿಯ ದಿನ ಬಾಡೂಟ ಮಾಡಿದ ಕಾರಣದಿಂದ ಗಾಂಧಿಗೆ ಅವಮಾನವಾಯಿತೆನ್ನುವುದು ನಂಬುವುದಕ್ಕೆ ಅರ್ಹ ವಿಷಯವೇ?

ಹಸಿವು ತಡೆಯಲಾಗದೆ ವಿಶ್ವಾಮಿತ್ರ ನಾಯಿ ಮಾಂಸವನ್ನೇ ತಿಂದ ಕತೆಯನ್ನು ಹೊಂದಿದ ದೇಶ ನಮ್ಮದು. ಇಂತಹ ದೇಶದಲ್ಲಿ ಸಾವಿರಾರು ಜನರ ಹೊಟ್ಟೆಯ ಮೇಲೆ ಹೊಡೆದು, ಲಕ್ಷಾಂತರ ಜನರ ಆಹಾರವನ್ನು ಕಿತ್ತುಕೊಂಡು ಅದಕ್ಕೆ ಸೌಹಾರ್ದದ ಹೆಸರನ್ನು ನೀಡುವುದು ಅಮಾನವೀಯ. ಮತ್ತು ಈ ಅಮಾನವೀಯತೆಗೆ ಅಕ್ಬರನ ಕತೆಯನ್ನು ಸಮರ್ಥನೆಯಾಗಿ ನೀಡುವುದು ನಮ್ಮ ನ್ಯಾಯ ವ್ಯವಸ್ಥೆಯ ವಿಡಂಬನೆಯೇ ಸರಿ. ಅಂತಹ ತೀರ್ಪನ್ನು ನ್ಯಾಯಾಧೀಶ ತನ್ನ ವೈಯಕ್ತಿಕ ನಂಬಿಕೆಯ ಆಧಾರದಲ್ಲಿ ನೀಡಿದ್ದಾನೆಯೇ ಹೊರತು, ಸಂವಿಧಾನದ ಆಧಾರದ ಮೇಲಲ್ಲ ಎನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಧಾರ್ಮಿಕ ಹಬ್ಬಗಳೆನ್ನುವುದು ಆಯಾ ಧರ್ಮಗಳ ಖಾಸಗಿ ವಿಷಯಳು. ಹಬ್ಬದ ಹೆಸರಿನಲ್ಲಿ ಮೆರವಣಿಗೆ ಇತ್ಯಾದಿಗಳನ್ನು ಮಾಡಿ, ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಮಾಡಿದಷ್ಟೇ ಪ್ರಮಾದದಿಂದ ಕೂಡಿದೆ, ಹಬ್ಬದ ಹೆಸರಿನಲ್ಲಿ ಮಾಂಸಾಹಾರ ನಿಷೇಧ ಮಾಡುವುದು. ಇನ್ನೊಬ್ಬರ ಹಬ್ಬಕ್ಕಾಗಿ ಉಳಿದ ಧರ್ಮೀಯರು ತಮ್ಮ ಜೀವನಾವಶ್ಯಕ ಆಹಾರವನ್ನು ತ್ಯಜಿಸಬೇಕೆಂದು ಆದೇಶಿಸುವುದು. ಇದರಿಂದ ಸೌಹಾರ್ದ ಹೆಚ್ಚುವುದಿಲ್ಲ. ಪರಸ್ಪರ ಅಸಹನೆ ಬೆಳೆಯುತ್ತದೆ. ಹಸಿವಿಗಿಂತ ದೊಡ್ಡ ಹಿಂಸೆ ಬೇರಿಲ್ಲ. ಈ ದೇಶದಲ್ಲಿ 17 ಕೋಟಿ ಮಕ್ಕಳು ಆಹಾರದ ಕೊರತೆಯಿಂದ ನರಳುತ್ತಿದ್ದಾರೆ. ಇದು ಹಿಂಸೆ. ಇವರ ಉದರ ಯಾವತ್ತು ಸಂಪೂರ್ಣ ತುಂಬುತ್ತದೋ, ಅಂದು ಈ ದೇಶಕ್ಕೆ ನಿಜವಾದ ಹಬ್ಬ. ಅದುವೇ ನಿಜವಾದ ಸೌಹಾರ್ದ. ಅಂದು ಆಚರಿಸುವ ಗಾಂಧೀಜಯಂತಿಯೇ ನಿಜವಾದ ಅರ್ಥದ ಗಾಂಧೀಜಯಂತಿ.
(ಅಕ್ಟೋಬರ್ 5, 2007, ಶುಕ್ರವಾರ)

Thursday, May 17, 2012

ಗೂಡಂಗಡಿಯಲ್ಲಿ ಒಂದು ಗ್ಲಾಸ್ ಚಹಾದ ಜೊತೆಗೆ......

ಕಾಫಿ ಶಾಪೊಂದರಲ್ಲಿ ಚಹಾ ಕುಡಿದು, ನಾಲಗೆ ಕೆಡಿಸಿಕೊಂಡು, ಅಂದೇ ಸಂಜೆ ಬರೆದ ಒಂದು ಪುಟ್ಟ ಲೇಖನ. ಡಿಸೆಂಬರ್ 28, 2007ರಲ್ಲಿ ಬರೆದಿದ್ದು.

 ಒಂದು ಕಾಫಿ ಶಾಪ್‌ನಲ್ಲಿ ಆ ಸಂಜೆಯ ಕೆಲವು ನಿಮಿಷಗಳನ್ನು. ತಣ್ಣಗಿನ ಎಸಿ. ಅದಕ್ಕೆ ಒಪ್ಪಿತವಾಗುವ ವೌನ. ಆ ವೌನದ ಗೂಡೊಳಗೆ ಕುಳಿತು ಪಿಸುಗುಟ್ಟಿತ್ತಿರುವ ಹೊಸ ತಲೆ ಮಾರು. ವೈಟರ್‌ಗಳು ತಮ್ಮದೇ ಆದ ಯುನಿಫಾರ್ಮು ಹಾಕಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು. ತಿಂಡಿಯ ಐಟಂಗಳನ್ನು ನೋಡಿದೆ. ಪೀಝಾ, ಪಪ್ಸ್, ಕೆಲವು ದುಬಾರಿ ಬಿಸ್ಕತ್‌ಗಳು. ವೈಟರ್ ಹಾಕಿಕೊಂಡ ಯುನಿಫಾರ್ಮುನಂತಹದ್ದೇ ಕಂಪೆನಿ ತಿಂಡಿಗಳು. ಯಾವುದೇ ಕಾಫಿ ಶಾಫ್‌ಗೆ ಹೋದರು, ಕಾಫಿಯ ರುಚಿ ಒಂದೇ. ಯಾಕೆಂದರೇ ಅವೆಲ್ಲವೂ ಒಂದೇ ಕಂಪೆನಿಯದು. ರುಚಿಯೂ ಒಂದೇ.

    ಯಾಕೋ ನನ್ನ ಹದಿಹರೆಯ ನೆನೆಪಾಯಿತು. ಧೋ ಎಂದು ಸುರಿಯುವ ಮಳೆಯಿಂದ ಪಾರಾಗುತ್ತಾ ನಾನು ಸೇರಿಕೊಳ್ಳುತ್ತಿದ್ದ ನನ್ನೂರಿನ ಬಸ್‌ಸ್ಟಾಂಡ್ ಪಕ್ಕದಲ್ಲಿದ್ದ ಅಬ್ಬೂ ಕಾಕನ ಗೂಡಂಗಡಿ. ಅಬ್ಬೂ ಕಾಕನ ಚಹ ಎಂದರೆ ನನಗೆ, ನನ್ನ ಗೆಳೆಯರಿಗೆಲ್ಲಾ ಅತೀವ ಪ್ರೀತಿ. ಹಾಗೆ ನೋಡಿದರೆ ನನ್ನ ಮತ್ತು ನನ್ನ ಗೆಳೆಯರ ಕನಸುಗಳು, ರಾಜಕೀಯ ಚಿಂತನೆಗಳು ಅರಳಿದ್ದು, ಈ ಗೂಡಂಗಡಿಯಲ್ಲೇ. ಅಬ್ಬೂ ಕಾಕನ ತಟ್ಟಿಯ ಅಂಗಡಿ ಎಂದರೆ ಒಂದು ಪುಟ್ಟ ಕ್ಲಾಸ್ ರೂಮ್. ಅಲ್ಲಿರುವ ಉದ್ದನೆಯ ಎರಡು ಬೆಂಚು, ಟೇಬಲ್‌ಗಳು ಸಂಜೆ 5ರ ನಂತರ ನಾನು ಮತ್ತು ನನ್ನ ಗೆಳೆಯರಿಂದ ತುಂಬಿ ಹೋಗುತ್ತಿತ್ತು. ಹಾಗೆಂದು ಅಬ್ಬೂ ಕಾಕನಿಗೆ ನಮ್ಮಿಂದ ಸಖತ್ ವ್ಯಾಪಾರವಾಗುತ್ತ್ತಿತ್ತು ಎಂದೇನಲ್ಲ. ಒಂದು ಟೀಯನ್ನು ಎರಡೆರಡು ಮಾಡಿ ಅದನ್ನೇ ಗಂಟೆಗಟ್ಟಲೇ ಕೈಯಲ್ಲಿ ಹಿಡಿದುಕೊಂಡು ದೇಶದ , ರಾಜ್ಯದ, ಊರಿನ ಸಮಸ್ಯೆಗಳನ್ನು ಚರ್ಚೆ ಮಾಡುತ್ತಿದ್ದೆವು. ಅಬ್ಬೂಕಾಕನಿಗೆ ನಾವೆಂದರೆ ವಿಶೇಷ ಪ್ರೀತಿ. ಈ ಗೂಡಂಗಡಿಗೆ ಅವರೇ ಮಾಲಕರು, ವೈಟರ್, ಕ್ಲೀನರ್ ಎಲ್ಲ. ಅವರೇನೂ ಈ ಕಾಫಿಶಾಫ್‌ನ ವೈಟರ್‌ಗಳಂತೆ ಯೂನಿಫಾರ್ಮ್ ಹಾಕಿಕೊಂಡಿರುತ್ತಿರಲಿಲ್ಲ. ಒಂದು ನೀಲಿ ಗೀಟು ಗೀಟಿನ ಲುಂಗಿ ಉಡುತ್ತಿದ್ದರು. ಮೈ ಮುಚ್ಚಲು ಬಿಳಿ ಬನಿಯಾನ್. ತಲೆಗೊಂದು ನೀರು ದೋಸೆಯ ಟೊಪ್ಪಿ. ನಾವೆಂದರೆ ಅವರಿಗೆ ವಿಶೇಷ ಪ್ರೀತಿ. ಈ ದೇಶದ ರಾಜಕೀಯದ ಕುರಿತಂತೆ ವಿಶೇಷ ಆಸಕ್ತಿ. ನಾವು ಬಂದು ಕುಳಿತರೆ ಅವರು ಒಂದು ಕಿವಿಯನ್ನು ನಮ್ಮ ಚರ್ಚೆಯತ್ತ ಬಿಟ್ಟು ಬಿಡುತ್ತಿದ್ದರು. ನಾವು ಬಂದು ಕುಳಿತರೆ ಸಾಕು, ನಮಗಾಗಿಯೇ ಖಡಕ್ ಚಹಾದ ಸಿದ್ಧತೆ ಮಾಡುತ್ತಿದ್ದರು. ಅನೇಕ ಸಂದರ್ಭದಲ್ಲಿ ಇತರ ಗಿರಾಕಿಗಳನ್ನೇ ನಮಗಾಗಿ ಕಳೆಕೊಳ್ಳುವುದಿತ್ತು. ಯಾಕೆಂದರೆ ಬೆಂಚು ತುಂಬಾ ನಮ್ಮ ಪಟಾಲಂಗಳೇ ತುಂಬುಕೊಂಡಿರುತ್ತಿದ್ದವು. ನಮ್ಮ ಮಾತಿನ ನಡುವೆ ವಿ.ಪಿ.ಸಿಂಗ್ ಹೆಸರು ಬಂದಾಕ್ಷಣ, ಓಡೋಡಿ ಬರುತ್ತಿದ್ದರು. ಅವರ ಪ್ರಕಾರ ಈ ದೇಶದ ನ್ಯಾಯಕ್ಕೆ ಹೇಳಿದ ಮನುಷ್ಯ ವಿ.ಪಿ.ಸಿಂಗ್ ಮಾತ್ರ ಆಗಿದ್ದ. ಯಾಕೆಂದರೆ ಬಾಬರಿ ಮಸೀದಿಗಾಗಿ ಆತ ಅಧಿಕಾರವನ್ನೇ ತ್ಯಾಗ ಮಾಡಿದನಲ್ಲ ಎನ್ನುವುದು ಅವರ ಸಮರ್ಥನೆಯಾಗಿತ್ತು. ಅವರಿಗೆ ನಮ್ಮ ಮಾತಿನ ನಡುವೆ ಒಂದೇ ಒಂದು ಆಸೆ. ವಿ.ಪಿ. ಸಿಂಗ್ ಮತ್ತೆ ಪ್ರಧಾನಿಯಾಗುವ ಚಾನ್ಸ್ ಉಂಟೋ?

   ಅಬ್ಬೂ ಕಾಕನನನ್ನು ನಾವೆಲ್ಲರೂ ಕಾಕ ಎಂದು ಕರೆಯತ್ತಿದ್ದೆವು. ನಮ್ಮ ಪಾಲಿಗೆ ಅವರು ಬರೇ ಚಹಾ ತಯಾರಿಸುವ ಕಾಕ ಮಾತ್ರ ಆಗಿರಲಿಲ್ಲ. ನಮ್ಮ ರಾಜಕೀಯ ಚಿಂತನೆಗಳ ಸಹಭಾಗಿಯಾಗಿದ್ದರು. ನಾವು ಇಂದಿರಾ ಗಾಂಧಿಗೆ ಬೈದರೆ, ಅವರಿಗೆ ಅತೀವ ಸಿಟ್ಟು ಬರುತ್ತಿತ್ತು. ಈ ದೇಶ ಇವತ್ತಿಗೂ ಇಂದಿರಾ ಗಾಂಧಿಯ ಹೆಸರು ಹೇಳಿ ಬದುಕುತ್ತಿರುವುದು ಎನ್ನುವುದು ಅವರ ವಾದ. ದೂರದ ಕೊಕ್ಕಡಕ್ಕೆ ಇಂದಿರಾ ಗಾಂಧಿ ಬಂದಾಗ ಅಲ್ಲಿ ವಾಸವಿರುವ ಅವರ ತಾಯಿ ಇಂದಿರಾ ಗಾಂಧಿಗೆ ಹೂಮಾಲೆ ಹಾಕಿದರಂತೆ. ಇಂದಿರಾ ಗಾಂಧಿ ಅವರ ತಾಯಿಯ ಕೆನ್ನೆ ಮುಟ್ಟಿದರಂತೆ. ಇವುಗಳನ್ನೆಲ್ಲಾ ಪ್ರತಿ ಬಾರಿಯೂ ನಮ್ಮ ಚರ್ಚೆಯ ನಡುವೆ ತರುತ್ತಿದ್ದರು. ನಮ್ಮ ಮೇಲೆ ಅದೆಷ್ಟು ಪ್ರೀತಿಯಿದ್ದರೂ, ಕಮ್ಯುನಿಸ್ಟರು ಎಂದು ಬೈಯುತ್ತಿದ್ದರು. ನಾವು ಒಮ್ಮಿಮ್ಮೆ ಕಮ್ಯುನಿಸ್ಟರಿಗೆ ಛೀಮಾರಿ ಹಾಕುವಾಗ ಹಾಗಾದರೆ ನೀವು ಕಮ್ಯುನಿಸ್ಟ್ ಅಲ್ವಾ? ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದರು.

    ಅಬ್ಬೂಕಾಕನ ಗೂಡಂಗಡಿಯಲ್ಲಿ ಮನೆಯಲ್ಲಿ ಮಾತ್ರ ಸಿಗಬಹುದಾದ ಆತ್ಮೀಯತೆಯಿತ್ತು. ಅವರ ಫೇಮಸ್ ಐಟಂಗಳ ರುಚಿಯೇ ಬೇರೆ. ನೀರು ದೋಸೆ, ಕಲ್ತಪ್ಪವನ್ನು ಮೀನು ಸಾರಿನ ಜೊತೆ ಬಡಿಸಿದರೆಂದರೆ ಅದರ ಮುಂದೆ ಯಾವ ಪೀಝಾವು ನಿಲ್ಲಲಾರದು. ಅಷ್ಟು ಸಣ್ಣ ಗೂಡಂಗಡಿಯಲ್ಲಿ ಇಡ್ಲಿ, ಕಲ್ತಪ್ಪ, ನೀರು ದೋಸೆ ಎಲ್ಲವನ್ನು ಮಾಡಿಡುತ್ತಿದ್ದರು. ತಿನ್ನುವಾಗ ಪ್ರೀತಿಯಿಂದ ‘ತಿನ್ನಿ ಮಕ್ಕಳೇ ತಿನ್ನಿ’ ಎನ್ನುತ್ತಿದ್ದರು. ಆ ಗೂಡಂಗಡಿಯಲ್ಲಿ ಹಲವರು ವಾರಕ್ಕೊಮ್ಮೆ ದುಡ್ಡು ಪಾವತಿಸುತ್ತಿದ್ದರು. ಅದಕ್ಕಾಗಿಯೇ ಒಂದು ಲೆಕ್ಕ ಪುಸ್ತಕ ಇಟ್ಟಿದ್ದರು. ಅನೇಕರು ದುಡ್ಡು ಕೊಡದೆ ಕೈಕೊಟ್ಟಿದ್ದರು. ಹಲವರು ಹಿಂದಿನ ಬಾಕಿ ಇಟ್ಟುಕೊಂಡೇ ಮತ್ತೆ ಬಂದು ತಿಂದು ಹೋಗುತ್ತಿದ್ದರು. ಕೇಳಿದವರಿಗೆ ಇಲ್ಲ ಎನ್ನುತ್ತಿರಲಿಲ್ಲ. ಬಹಳ ಕಷ್ಟಪಟ್ಟು ಹಿಂದಿನ ಬಾಕಿ ಕೇಳುತ್ತಿದ್ದರು.

     ಈಗಲೂ ಅಷ್ಟೇ ಎಲ್ಲಾದರೂ ಒಂದು ಸಣ್ಣ ಗೂಡಂಗಡಿ ಕಂಡರೆ ಅದರೊಳಗೆ ನುಗ್ಗುತ್ತೇನೆ. ಅಲ್ಲಿರುವ ವ್ಯಕ್ತಿಯಲ್ಲಿ ಅಬ್ಬೂಕಾಕನನ್ನು ಕಾಣಲು ಪ್ರಯತ್ನಿಸುತ್ತೇನೆ. ಅಲ್ಲಿರುವ ವೈವಿಧ್ಯಮಯ ತಿಂಡಿಗಳನ್ನು ಆತ್ಮೀಯವಾಗಿ ಆಸ್ವಾದಿಸುತ್ತೇನೆ. ಒಂದು ಗೂಡಂಗಡಿಗಿಂತ, ಇನ್ನೊಂದು ಗೂಡಂಗಡಿಯ ತಿಂಡಿಗಳ ರುಚಿಯೇ ಬೇರೆ. ಚಹಾದಲ್ಲೂ ಅಷ್ಟೇ. ಅವರು ಇಟ್ಟುಕೊಳ್ಳುವ ಗ್ಲಾಸಿನ ಆಕಾರದಲ್ಲೂ ಅಷ್ಟೇ ವೈವಿಧ್ಯತೆ. ಅಬ್ಬೂಕಾಕನ ಗೂಡಂಗಡಿಯ ಗ್ಲಾಸ್‌ನ ಚಂದವೇ ಬೇರೆ. ಪ್ಲೇನ್ ಗ್ಲಾಸ್‌ಗೆ ಕೆಂಪು ದೊಡ್ಡ ಆಕಾರದ ಹೂವುಗಳು ಸುತ್ತಿಕೊಂಡಿರುತ್ತವೆ. ಆ ಗ್ಲಾಸ್‌ಗಳಲ್ಲಿ ಕುಡಿದರೇನೆ ನಮಗೆ ತೃಪ್ತಿ. ನಮ್ಮ ಮನೆಗಳಲ್ಲಿ ಅವಸಾನದ ಅಂಚಿನಲ್ಲಿರುವ ತಿಂಡಿಯ ವೈವಿಧ್ಯಗಳು ಅಲ್ಪಸ್ವಲ್ಪ ಜೀವಂತ ಉಳಿದುಕೊಂಡಿರುವುದು ಈ ಗೂಡಂಗಡಿಗಳಲ್ಲಿ ಮಾತ್ರ. ಇಂದಿಗೂ ನಾನು ನೋಡುವ ಗೂಡಂಗಡಿಗಳಲ್ಲಿ ಯಾರಾದರು ನಾಲ್ಕು ತರುಣರೋ, ಹಿರಿಯರೋ ಒಂದು ಗ್ಲಾಸ್ ಚಹದ ಜೊತೆಗೆ ಹರಟೆ ಕೊಚ್ಚುತ್ತಿರುತ್ತಾರೆ. ಅವರಲ್ಲಿ ನನ್ನ ಹದಿಹರೆಯದ ದಿನಗಳನ್ನು ಹುಡುಕುವ ಪ್ರಯತ್ನ ಮಾಡುತ್ತೇನೆ. ಈ ಗೂಡಂಗಡಿಗಳು ಒಂದು ರೀತಿಯಲ್ಲಿ ಆ ಊರಿನ ಜೀವಂತಿಕೆಯ ಸಂಕೇತ. ಯಾಕೆಂದರೆ, ಆ ಊರಿನ ಹಿರಿಯರನ್ನು, ಯುವಕರನ್ನು ಒಂದೆಡೆ ಸೇರಿಸುವ ಕ್ಲಬ್‌ಗಳು ಈ ಗೂಡಂಗಡಿ. ಅದು ಬರೇ ವ್ಯಾಪಾರವನ್ನಷ್ಟೇ ಗುರಿಯಾಗಿಸಿಕೊಂಡಿರುವುದಿಲ್ಲ. ಚಹಾದ ಜೊತೆಗೆ ಸ್ನೇಹವನ್ನು, ಆತ್ಮೀಯತೆಯನ್ನು ಗೂಡಂಗಡಿಗಳು ಹಂಚುತ್ತವೆ. ಒಂದು ಊರಿನ ವೈವಿಧ್ಯಮಯ ಆಲೋಚನೆಗಳಿಗೆ ಆ ಗೂಡಂಗಡಿಗಳು ವೇದಿಕೆಯಾಗುತ್ತವೆ.

ಇಂದು ಗೂಡಂಗಡಿಗಳು ನಗರಗಳಿಗೆ ಒಂದು ಸಮಸ್ಯೆಯಾಗಿದೆ. ಅವರ ಪ್ರಕಾರ ಈ ಗೂಡಂಗಡಿಗಳು ನಗರದ ಸೌಂಧರ್ಯಕ್ಕೆ ಧಕ್ಕೆ ತರುತ್ತಿವೆ. ಕಾಫಿ ಶಾಫ್‌ಗಳು, ಪೀಝಾಹಟ್‌ಗಳು, ಬೃಹತ್ ಹೊಟೇಲ್‌ಗಳ ಸಂಚಿನಿಂದಾಗಿ ಈ ಗೂಡಂಗಡಿಗಳು ನೆಲೆ ಕಳೆದುಕೊಳ್ಳುತ್ತಿವೆ. ಇದರ ಜೊತೆಗೆ ತಿಂಡಿಗಳ ಗ್ರಾಮೀಣ ಸೊಗಡು, ಚಹಾದಲ್ಲಿರುವ ಆತ್ಮೀಯ ಪರಿಮಳವೂ ಇಲ್ಲವಾಗುತ್ತಿವೆ. ವೈವಿಧ್ಯತೆ ನಾಶವಾಗಿ, ನಮ್ಮನ್ನೆಲ್ಲಾ ವಿವಿಧ ಕಂಪೆನಿಗಳ, ಬ್ರಾಂಡ್‌ಗಳ ಚಹಾ, ಕಾಫಿಗಳ ಋಣಕ್ಕೆ ಬಲಿ ಬೀಳಿಸಲಾಗುತ್ತಿದೆ. ಕಾಫಿಶಾಫ್‌ಗಳಲ್ಲಿ ಯಾವುದೋ ಕಂಪೆನಿಯ ಚಹಾ, ಕಾಫಿ, ತಿಂಡಿ ಸಿಗಬಹುದು. ಆದರೆ ತಂದೆಯಂತಹ ಅಬ್ಬುಕಾಕನ ಆತ್ಮೀಯತೆ, ಪ್ರೀತಿ ಮಾತ್ರ ಸಿಗಲಾರದು.
ಡಿಸೆಂಬರ್ 28, 2007

Tuesday, May 15, 2012

"ಅಂಗೈಯಲ್ಲೇ ಆಕಾಶ''

ನನ್ನ ಹನಿ ಹನಿ ಕತೆಗಳು...
"ಅಂಗೈಯಲ್ಲೇ ಆಕಾಶ'' ಕೃತಿ ಬೇಕಾದವರು ಕೆಳಗಿನ ವಿಳಾಸವನ್ನು ಸಂಪರ್ಕಿಸಬಹುದು
.
ಅಕ್ಷತ ಹುಂಚದಕಟ್ಟೆ,
ಅಹರ್ನಿಶಿ ಪ್ರಕಾಶನ,
ಪ್ರಶಾಂತ ನಿಲಯ,
ಜ್ಯೋತಿ ರಾವ್ ಬೀದಿ,
4 ನೆ ಕ್ರಾಸ್, ವಿದ್ಯಾನಗರ,
ಶಿವಮೊಗ್ಗ
ದೂರವಾಣಿ: 08182 -241681
ಮೊಬೈಲ್- 94491 74662