ರಾಜ್ಯ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಘೋಷಿಸಿದ ಸಂದರ್ಭದಲ್ಲಿ ಬರೆದ ಲೇಖನ ಇದು.
ಬ್ಯಾರಿಗಳಿಗೊಂದು ಸಾಹಿತ್ಯ ಅಕಾಡಮಿ ದೊರಕಿದ ಸುದ್ದಿ ಕೇಳಿ ರೋಮಾಂಚಿತನಾದವನಲ್ಲಿ ನಾನೂ ಒಬ್ಬ. ಅದಕ್ಕೆ ಕಾರಣ ನಾನೊಬ್ಬ ಬ್ಯಾರಿ ಸಮುದಾಯದಲ್ಲಿ ಹುಟ್ಟಿದವನು ಎನ್ನುವುದಷ್ಟೇ ಆಗಿರಲಿಲ್ಲ. ‘ಬ್ಯಾರಿ’ ಎನ್ನುವ ಶಬ್ದ ಕಳೆದ ಮೂರು ದಶಕಗಳಿಂದ ಸಾಮಾಜಿಕವಾಗಿ ಅನುಭವಿಸಿಕೊಂಡು ಬಂದ ಕೀಳರಿಮೆ ತುಳಿತ, ಅವಮಾನಗಳ ಕುರಿತಂತೆ ಅರಿವಿರುವವರೆಲ್ಲರಿಗೂ, ಈ ಸುದ್ದಿ ರೋಮಾಂಚನ ತರಿಸಬಲ್ಲುದು. ಕಳೆದ ಮೂರು ದಶಕಗಳಲ್ಲಿ ‘ಬ್ಯಾರಿ’ ಎನ್ನುವ ಶಬ್ದ ಬಳಕೆಯಾಗುತ್ತಿದ್ದುದು ಕರಾವಳಿ ಮುಸ್ಲಿಮರನ್ನು ಅವಮಾನಿಸುವುದಕ್ಕಾಗಿ ಮಾತ್ರವಾಗಿತ್ತು. ‘ಬ್ಯಾರಿ ಬುದ್ದಿ ತೋಜ್ಪಾವೊಡ್ಚಿ (ಬ್ಯಾರಿ ಬುದ್ದಿ ತೋರಿಸಬೇಡ)’ ‘ಮಲ್ಲ ಬ್ಯಾರಿ ಮಾರಾಯ (ಭಯಂಕರ ಬ್ಯಾರಿ ಮಾರಾಯ)’, ‘ದಾನೆಂಬೆ ಬ್ಯಾರಿ (ಏನೋ ಬ್ಯಾರಿ)’ ಮೊದಲಾದ ಪದಗಳು ಕರಾವಳಿಯ ಜನಜೀವನದಲ್ಲಿ ಹೇಗೆ ಅವಿನಾಭಾವವಾಗಿ ಸೇರಿಕೊಂಡಿದ್ದವೋ ಅದನ್ನು ಪ್ರತಿರೋಧಿಸುವ ಆತುರದಲ್ಲಿ ಕರಾವಳಿಯ ಮುಸ್ಲಿಮರು ಕೂಡ ಆ ಐಡೆಂಟಿಟಿಯನ್ನು ಅಷ್ಟೇ ತೀವ್ರವಾಗಿ ತಿರಸ್ಕರಿಸುತ್ತಿದ್ದರು. ‘ಬ್ಯಾರೀಂದ್ ಪನೋಡ್ಚಿ (ಬ್ಯಾರೀಂತ ಕರೀಬೇಡ)’ ‘ನನೋರ ಬ್ಯಾರೀಂದ್ ಪನ್‌ಗೆ’ (ಧೈರ್ಯ ಇದ್ರೆ ಇನ್ನೊಮ್ಮೆ ಬ್ಯಾರೀಂತ ಹೇಳು)?’ ‘ಅಂವ ಬ್ಯಾರೀಂತ ಕರ್ದ, ಅದಕ್ಕೆ ಹೊಡ್ದೆ’ ‘ಸಾರ್, ‘ಇವ ನನ್ನನ್ನು ಬ್ಯಾರೀಂತ ಕರೀತಿದ್ದಾನೆ’ ಹೀಗೆ ಬ್ಯಾರಿ ಎಂಬ ‘ಐಡೆಂಟಿಟಿ’ಯ ಅವಮಾನದಿಂದ ಪಾರಾಗುವುದಕ್ಕೆ ಒಂದು ತಲೆಮಾರು ಸಾಕಷ್ಟು ಹೆಣಗಾಡಿದೆ. ತನ್ನದೇ ಅಸ್ಮಿತೆಯ ವಿರುದ್ಧ ಹೋರಾಡಿ ಆ ತಲೆಮಾರಿನ ಜನರು ಹುತಾತ್ಮರಾಗಿದ್ದಾರೆ. ತನ್ನದೇ ನೆರಳನ್ನು ತನ್ನ ಶತ್ರುವೆಂಬಂತೆ ಭಾವಿಸಿ, ಅದರಿಂದ ಪಲಾಯನ ಮಾಡಲು ಪ್ರಯತ್ನಿಸಿದ, ವಿಫಲವಾದ ಈ ತಲೆಮಾರಿನ ದುರಂತ ಹೃದಯವಿದ್ರಾವಕವಾದುದು.
ಒಂದೆಡೆ ಈ ತಲೆಮಾರಿಗೆ ತಾವು ಆಡುವ ಭಾಷೆ ಒಂದು ಸ್ವತಂತ್ರ ಭಾಷೆ ಎಂಬ ಅರಿವೇ ಇದ್ದಿರಲಿಲ್ಲ. ‘ನಿಮ್ಮ ಮಾತೃಭಾಷೆ ಯಾವುದು?’ ಎಂದು ಯಾರಾದರೂ ಕೇಳಿದರೆ ಅವರು ‘ಮಲಯಾಳಂ’ ಎಂದು ಹೇಳುತ್ತಿದ್ದರು. ಇತ್ತ ಮಲಯಾಳಂ ಮಾತನಾಡುವವರು ಆ ಭಾಷೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ‘ಬ್ಯಾರಿ’ ಎನ್ನುವ ಪದಕ್ಕೆ ಅಂಜುತ್ತಾ ಬದುಕುತ್ತಿದ್ದ ಈ ತಲೆಮಾರಿಗೆ ತಮ್ಮ ಭಾಷೆಯನ್ನು ‘ಬ್ಯಾರಿ ಭಾಷೆ ’ ಎಂದು ಕರೆಯುವುದಕ್ಕೆ ಧೈರ್ಯ ಸಾಲುತ್ತಿರಲಿಲ್ಲ. ಈ ಭಾಷೆಯನ್ನು ಕರಾವಳಿಯ ಒಂದು ಪ್ರದೇಶದ ಜನರು ‘ನಕ್ಕ್‌ನಿಕ್ಕ್’ ಭಾಷೆ ಎಂದು ಕರೆಯುತ್ತಿದ್ದರು. ‘ನಕ್ಕ್-ನಿಕ್ಕ್’ ಅಂದರೆ ‘ನನಗೆ-ನಿನಗೆ’ ಎಂದರ್ಥ. ಇದೊಂದು ರೀತಿಯಲ್ಲಿ ಒಂದು ಭಾಷೆಯನ್ನು ‘ಸಾರ್ವತ್ರಿಕ’ವಾಗಿಸುವಲ್ಲಿರುವ ಭಯವನ್ನು, ಕೀಳರಿಮೆಯನ್ನು ಎತ್ತಿ ತೋರಿಸುತ್ತದೆ. ‘ನನಗೆ ಮತ್ತು ನಿನಗೆ’ ಮಾತ್ರ ಅನ್ವಯವಾಗುವ ಒಂದು ಭಾಷೆಯಿದ್ದರೆ ಅದು ‘ಬ್ಯಾರಿ ಭಾಷೆ’ ಮಾತ್ರ ಎಂದು ಹೇಳಬೇಕು. ಒಂದು ಕಡೆ ತನ್ನ ಭಾಷೆಯನ್ನು ಮಲಯಾಳಂ ಎಂದು ಕರೆಯುತ್ತಲೇ ‘ಮಲಯಾಳಂ ಅಂದರೆ ಮಲಯಾಳಂ ಅಲ್ಲ. ಸ್ವಲ್ಪ ವ್ಯತ್ಯಾಸವಿದೆ..’ ಎಂಬಿತ್ಯಾದಿ ಸಮರ್ಥನೆಗಳನ್ನು ವ್ಯಾಖ್ಯಾನಗಳನ್ನು ನೀಡುತ್ತಾ, ತನ್ನದೇ ಭಾಷೆಯ ಕುರಿತು ಒಂದು ತಲೆಮಾರು ಕೀಳರಿಮೆಯಿಂದ ಬದುಕುತ್ತಾ ಬಂತು. ಅನ್ಯಭಾಷಿಕರ ನಡುವೆ ಇಬ್ಬರು ಬ್ಯಾರಿ ಭಾಷೆಯಲ್ಲಿ ಮಾತನಾಡಿದರೆ, ಅದನ್ನು ನೋಡಿ ತಮಾಷೆ ಮಾಡುವ ಸಮುದಾಯದ ನಡುವೆ ಬ್ಯಾರಿಗಳ ಒಂದು ತಲೆಮಾರು ಬದುಕಿದೆ, ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ಕಡತಗಳಲ್ಲಿ ಬ್ಯಾರಿಗಳು ತಮ್ಮ ಭಾಷೆಯ ಹೆಸರನ್ನು ‘ಮಲಯಾಳಂ’ ಎಂದು ಬರೆಯುತ್ತಿದ್ದರು. ಆದರೆ ಅವರು ಮಲಯಾಳಿಗಳಾಗಿರದೆ, ಕರಾವಳಿಯ ತುಳು ಮಣ್ಣಿನ ಮುಸ್ಲಿಮರೇ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಮಲಯಾಳಿಗಳಿಂದ ಈ ಸಮುದಾಯ ಮತ್ತು ಅವರು ಆಡುವ ಭಾಷೆ ತಿರಸ್ಕೃತವಾಗಿದ್ದವು. ಜೊತೆಗೆ, ತಮ್ಮದೇ ನೆಲದ ಜನರಿಂದಲೂ ತಮ್ಮ ಭಾಷೆ ಮತ್ತು ಐಡೆಂಟಿಟಿಯ ಕಾರಣಕ್ಕಾಗಿ ಅವರು ಅವಮಾನಿತರಾಗಿ ಬದುಕಬೇಕಾಗಿತ್ತು. ಕರಾವಳಿಯ ಮುಸ್ಲಿಮರನ್ನು ನಿಂದಿಸಬೇಕೆಂದರೆ ‘ಸೂ..ಮಗ, ಬೇ.. ಬೋ...ಮಗ’,ಇತ್ಯಾದಿಗಳನ್ನು ಬಳಸಬೇಕೆಂದಿರಲಿಲ್ಲ. ‘ಬ್ಯಾರಿ!’ ಎಂದರೆ ಸಾಕಿತ್ತು. ಬ್ಯಾರಿಗಳು ತಮ್ಮ ಮಸೀದಿಗಳಲ್ಲಿ ‘ವೌಲ್ವಿ’ಗಳಿಂದ ಧರ್ಮ ಪ್ರವಚನ ಮಾಡಿಸಬೇಕೆಂದರೆ ಕೇರಳದಿಂದಲೇ ಮುಸ್ಲಿಯಾರುಗಳನ್ನು ತರಿಸುತ್ತಿದ್ದರು. ಯಾಕೆಂದರೆ ‘ಧರ್ಮಪ್ರವಚನ’ ಬ್ಯಾರಿ ಭಾಷೆಯಲ್ಲಿ ಮಾಡುವುದು ಅವರಿಗೆ ನಿಲುಕುವ ವಿಷಯವಾಗಿರಲಿಲ್ಲ. ‘ಗಂಭೀರ ಮತ ಪ್ರಸಂಗ’ ಏನಿದ್ದರೂ ಅದು ‘ಗಂಭೀರ ಮಲಯಾಳಂ’ನಲ್ಲೇ ನಡೆಯಬೇಕು ಎಂದು ಅವರು ನಂಬಿದ್ದರು. ಧಾರ್ಮಿಕ ವಿಷಯಗಳನ್ನು ಮಲಯಾಳಂನಲ್ಲೇ ಮುಸ್ಲಿಯಾರುಗಳು ಬೋಧಿಸುತ್ತಿದ್ದ ಕಾಲವಿತ್ತು. ಬ್ಯಾರಿ ಭಾಷೆಯನ್ನು ಅಲ್ಲಿ ಬಳಸಲಾಗುತ್ತಿರಲಿಲ್ಲ. ತಮ್ಮದಲ್ಲದ, ಅರ್ಥವಾಗದ ‘ಕಠಿಣ ಮಲಯಾಳಂ’ನಲ್ಲೇ ವಿದ್ಯಾರ್ಥಿಗಳು ಧಾರ್ಮಿಕ ವಿಷಯಗಳನ್ನು ಕಲಿಯುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾರಿ ಭಾಷೆಗೆ ಲಿಪಿಯಿಲ್ಲ. ಬ್ಯಾರಿ ಭಾಷೆಯನ್ನು ಬರೆಯುವುದಕ್ಕೆ ಬಳಕೆ ಮಾಡುವ ಸಂದರ್ಭವೇ ತೀರ ಕಡಿಮೆಯಿತ್ತು. ಆದುದರಿಂದಲೇ ಲಿಪಿಯ ಕುರಿತಂತೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಮದರಸಗಳ ಲೆಕ್ಕಪತ್ರಗಳನ್ನೆಲ್ಲ ಕನ್ನಡದಲ್ಲೇ ಬರೆಯಲಾಗುತ್ತಿತ್ತು. ಬ್ಯಾರಿಗಳು ಮನೆಯಲ್ಲಿ ಬ್ಯಾರಿ ಭಾಷೆ, ಹೊರಗೆ ತುಳು ಭಾಷೆ, ಶಾಲೆ, ಕಚೇರಿಗಳಲ್ಲಿ ಕನ್ನಡ ಹೀಗೆ ಒಂದೇ ಸಂದರ್ಭದಲ್ಲಿ ಹಲವು ಭಾಷೆಗಳನ್ನು ಕಲಿಯಬೇಕಾದ, ಹಲವು ಭಾಷೆಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿತ್ತು. ಇಷ್ಟು ಅವಮಾನ, ಪ್ರತಿಕೂಲ ಪರಿಸ್ಥಿತಿಯ ನಡುವೆ ಒಂದು ಭಾಷೆ ಉಳಿದು ಬೆಳೆದು, ಇದೀಗ ಸರಕಾರದಿಂದ ಸಾಹಿತ್ಯ ಅಕಾಡೆಮಿಯನ್ನು ತನ್ನದಾಗಿಸಿಕೊಂಡಿರುವುದು, ಆ ಭಾಷೆಯ ಸಾಮರ್ಥ್ಯವನ್ನು ಎತ್ತಿ ಹಿಡಿಯುತ್ತದೆ.
ಹಾಗೆಂದು ಬ್ಯಾರಿಗಳು ತಲೆ ತಲಾಂತರದಿಂದ ಹೀನಾಯವಾಗಿ ಬದುಕಿಕೊಂಡು ಬಂದವರಲ್ಲ ಎನ್ನುವುದು ಕೂಡ ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಬರೇ 60 ವರ್ಷಗಳ ಹಿಂದೆ ಬ್ಯಾರಿಗಳು ತುಳು ನಾಡಿನಲ್ಲಿ ಅತ್ಯುನ್ನತ ಬದುಕನ್ನು ಬಾಳಿದವರು. ವ್ಯಾಪಾರ, ಯುದ್ದ, ಬೇಟೆ, ಪಾಳೇಗಾರಿಕೆ, ಶ್ರೀಮಂತಿಕೆ ಎಲ್ಲ ದಿಕ್ಕಿನಲ್ಲೂ ಅವರು ಕರಾವಳಿಯ ಉಳಿದ ತುಳುವರಿಗೆ ನೇರ ಸ್ಪರ್ಧೆಯನ್ನು ನೀಡಿದವರು. ಸೀದಿ ಬ್ಯಾರಿ, ಪೊಡಿಯ ಬ್ಯಾರಿ, ಉಸ್ಮಾನ್ ಬ್ಯಾರಿ ಇಂತಹ ಹೆಸರುಗಳಿಗೆ ಒಂದು ಕಾಲದಲ್ಲಿ ತುಳುವರು ಬಾಗಿ ‘ಸಲಾಂ’ಹೇಳುತ್ತಿದ್ದ ಕಾಲ ಅದು. ರಾಣಿ ಅಬ್ಬಕ್ಕ ದೇವಿಯ ಸೈನ್ಯದಲ್ಲಿ ಬ್ಯಾರಿ ಸೈನಿಕರ ಪಾತ್ರ ವರ್ಣಿಸಳಸದಳವಾದುದು. ಅಬ್ಬಕ್ಕನ ಬೆಂಗಾವಲಾಗಿ ನಿಂತವರು ಬ್ಯಾರಿಗಳು. ‘ಎಣ್ಬೂರಿನ’ ಜೈನ ಅರಸರ ಜೊತೆಗೂ ಬ್ಯಾರಿಗಳ ಸಂಬಂಧ ಅನ್ಯೋನ್ಯವಾಗಿತ್ತು. ಪ್ರತಿ ಊರಲ್ಲೂ ಒಬ್ಬ ಬ್ಯಾರಿ ಪಾಳೇಗಾರನಿದ್ದ. ಒಂದು ಕಾಲದಲ್ಲಿ ಬ್ಯಾರಿಗಳು ಭಾರೀ ದಿನಸಿ ವ್ಯಾಪಾರಿಗಳಾಗಿದ್ದರೆ, ಸ್ಥಳೀಯ ಕೊಂಕಣಿಗಳು ಅವರ ಬಂಡಸಾಲೆಗಳಲ್ಲಿ ಲೆಕ್ಕ ಬರೆಯುತ್ತಿದ್ದರು. ‘ಬ್ಯಾರ್ಲು ಬರೊಂದುಲ್ಲೆರ್ (ಬ್ಯಾರಿಗಳು ಬರುತ್ತಿದ್ದಾರೆ)’ ಎನ್ನುವ ಮಾತು, ಸುತ್ತಲಿನ ಜನರನ್ನು ಸಂಚಲನಗೊಳಿಸುತ್ತಿತ್ತು. ತುಳುವರ ಬದುಕಿನಲ್ಲಿ ಬ್ಯಾರಿಗಳನ್ನು ಕಳೆದರೆ, ತುಳುವರಿಗೆ ಅಸ್ತಿತ್ವವೇ ಇದ್ದಿರಲಿಲ್ಲ. ತುಳು ಪಾಡ್ದನಗಳಲ್ಲಿ ಜಾನಪದಗಳಲ್ಲಿ ಬ್ಯಾರಿಗಳ ಪ್ರಸ್ತಾಪವಿದೆ. ಬಪ್ಪನಾಡಿನಲ್ಲಿ ‘ಬಪ್ಪಬ್ಯಾರಿ’ಯ ಆರ್ಥಿಕ ಸಹಾಯದಿಂದಲೇ ಅಲ್ಲಿಯ ಇಡೀ ಊರು ಅಭಿವೃದ್ಧಿಗೊಂಡಿರುವುದು ಇತಿಹಾಸ. ಅಂದಿನ ಬ್ಯಾರಿಗಳು ತಮ್ಮ ಹೆಸರಿನೊಂದಿಗೆ ಕಡ್ಡಾಯವಾಗಿ ‘ಬ್ಯಾರಿ’ ಎನ್ನುವ ಐಡೆಂಟಿಟಿಯನ್ನು ಸೇರಿಸುತ್ತಿದ್ದರು. ಅದು ಅವರಿಗೆ ಸಮಾಜದಲ್ಲಿ ಘನತೆಯನ್ನು, ಗೌರವವನ್ನು ನೀಡುತ್ತಿತ್ತು. ನೀವು ಎಪ್ಪತ್ತರ ದಶಕದ ಹಿಂದಿನ ಕರಾವಳಿಯ ಯಾವ ಕಡತಗಳಲ್ಲಿ ನೋಡಿದರೂ, ಸ್ಥಳೀಯ ಮುಸ್ಲಿಮರ ಹೆಸರಿನ ಮುಂದೆ ‘ಬ್ಯಾರಿ’ ಎಂದು ಉಲ್ಲೇಖಿಸಿರುವುದನ್ನು ಕಾಣಬಹುದು. ಬ್ಯಾರಿಗಳು ಬ್ರಿಟಿಷರೊಂದಿಗೆ ಮಾತ್ರವಲ್ಲ, ಸ್ಥಳೀಯ ಪುರೋಹಿತಶಾಹಿಗಳೊಂದಿಗೆ, ಪಾಳೇಗಾರರೊಂದಿಗೂ ಸಡ್ಡು ಹೊಡೆದಿದ್ದರು. ಧರ್ಮಸ್ಥಳದ ಹೆಗಡೆ ಕುಟುಂಬದ ವಿರುದ್ಧವೂ ಕೋರ್ಟು, ನ್ಯಾಯ ಎಂದು ಅಲೆದಾಡಿ ಗೆದ್ದ ಅದೆಷ್ಟೋ ಬ್ಯಾರಿಗಳಿದ್ದಾರೆ. ಬ್ಯಾರಿಗಳೊಂದಿಗೆ ಜಿದ್ದಿಗೆ ಬೀಳಲು ಜನರು ಹೆದರುತ್ತಿದ್ದ ಕಾಲ ಅದು.
ಅತಂಹದೊಂದು ಸಮುದಾಯಕ್ಕೆ ಇದ್ದಕ್ಕಿದ್ದಂತೆಯೇ ಯಾಕೆ ಗ್ರಹಣ ಬಡಿಯಿತು? ಅನಂತರದ ಕೆಲವು ತಲೆಮಾರುಗಳು ಯಾಕೆ ತಮ್ಮ ಹೆಸರಿಗೆ ಅಂಜುವಂತಹ ಪರಿಸ್ಥಿತಿ ಎದುರಾಯಿತು?ಇದು ಅತ್ಯಂತ ಕುತೂಹಲಕರವಾಗಿದೆ. ಕಾಲ ಹೇಗೆ ಉರುಳಿತೆಂದರೆ, ಬ್ಯಾರಿಗಳ ಭಂಡಸಾಲೆಯಲ್ಲಿ ಲೆಕ್ಕ ಬರೆಯುತ್ತಿದ್ದವರೆಲ್ಲ ಕ್ರಮೇಣ ಪ್ರಬಲರಾದರು. ಹೆಸರುವಾಸಿಗಳಾಗಿದ್ದ ಬ್ಯಾರಿಗಳ ನಂತರದ ತಲೆಮಾರು ಲೆಕ್ಕ ಬರೆಯುತ್ತಿದ್ದವರನ್ನೇ ಒಡೆಯರೆಂದು ಕರೆಯುವ ಪರಿಸ್ಥಿತಿ ಎದುರಾಯಿತು. ತುಳುನಾಡಿನಲ್ಲಿ ಬ್ರಾಹ್ಮಣ್ಯದ ಪ್ರವೇಶವಾದಂತೆ ಕ್ರಮೇಣ ಬ್ಯಾರಿಗಳು ತುಳುವರಿಗೆ ಅನ್ಯರಾಗತೊಡಗಿದರು. ಬ್ಯಾರಿಗಳ ಅತಿ ಆತ್ಮವಿಶ್ವಾಸ, ‘ಒಂದಾನೊಂದು ಕಾಲದಲ್ಲಿ ನನ್ನಜ್ಜನಿಗೊಂದಾನೆಯಿತ್ತು’ ಎನ್ನುವ ಒಣ ಹುಂಬತನ, ಪಾಳೇಗಾರಿಕೆಯ ಕಾಲದ ಆ ‘ಭ್ರಮೆ’ಗಳಿಂದ ಹೊರಬರಲು ಸಿದ್ಧವಿಲ್ಲದ ಅನಂತರದ ಪೀಳಿಗೆ ಸಮಾಜದಲ್ಲಿ ತಮಾಷೆಗೆ ಗುರಿಯಾಯಿತು. ಶಿಕ್ಷಣದಿಂದ ವಂಚಿತವಾದ ಈ ಪೀಳಿಗೆಗೆ, ಕೈ ತಪ್ಪಿದ ‘ತರವಾಡು ಅಂತಸ್ತಿ’ನಿಂದ ಏಕಾಏಕಿ ಮೀನು ಮಾರುವುದು, ಗುಜರಿ ಹೆಕ್ಕುವುದು ಇತ್ಯಾದಿಯೇ ಅನಿವಾರ್ಯವಾಯಿತು. ಬ್ಯಾರಿಗಳನ್ನು ಏಕಾಏಕಿ ಆಹುತಿ ತೆಗೆದುಕೊಂಡ ಬಡತನ, ನಾಯಕತ್ವದ ಕೊರತೆ ಅವರನ್ನು ಅತಂತ್ರವನ್ನಾಗಿಸಿದವು. ಅವರ ಅಸಹಾಯಕತೆಯನ್ನು ಚೆನ್ನಾಗಿಯೇ ಬಳಸಿಕೊಂಡ ‘ಮೇಲ್ವರ್ಗ’ ಬ್ಯಾರಿಗಳನ್ನು ಕಳ್ಳರನ್ನಾಗಿಯೂ, ಕಾಮುಕನ್ನಾಗಿಯೂ ಬಿಂಬಿಸುವ ಪ್ರಯತ್ನ ನಡೆಸಿತು. ಅದರ ಪರಿಣಾಮ ಎಷ್ಟು ತೀವ್ರವಾಯಿತೆಂದರೆ ಒಂದು ತಲೆಮಾರು ತನ್ನ ಭಾಷೆ, ಐಡೆಂಟಿಟಿಗಾಗಿ ನಾಚಿಕೊಳ್ಳುವಷ್ಟು. ಇದರಿಂದಾಗಿ ಬ್ಯಾರಿ ಭಾಷೆ, ಸಂಸ್ಕೃತಿಯೊಳಗೆ ಅಡಕವಾಗಿದ್ದ ಜಾನಪದಗಳು, ಸಾಹಿತ್ಯಗಳು ಸಂಪೂರ್ಣ ಅವಜ್ಞೆಗೊಳಗಾದವು.
ಇಂತಹ ಒಂದು ಭಾಷೆ ಏಕಾಏಕಿ ಆತ್ಮವಿಶ್ವಾಸದೊಂದಿಗೆ ತಲೆ ಎತ್ತಿ ನಿಂತುದು 90ರ ದಶಕದಲ್ಲಿ. ಕೆಲವು ಬ್ಯಾರಿ ಸಾಹಿತಿಗಳು, ಮುಖಂಡರು ಒಂದಾಗಿ ‘ನಾವೆಲ್ಲ ಬ್ಯಾರಿಗಳು’ ಎಂದು ಘೋಷಿಸಿಕೊಂಡುದು ತುಳುನಾಡಿನ ಜನರಿಗೆ ಅಚ್ಚರಿಯನ್ನು ತಂದಿತ್ತು. ಅಷ್ಟೇ ಅಲ್ಲ, ಬ್ಯಾರಿ ಸಮುದಾಯದ ಜನರಿಗೆ ಇದು ಮೊತ್ತ ಮೊದಲ ಬಾರಿಗೆ ‘ತಮಾಷೆ’ಯಾಗಿ ಕಂಡಿತ್ತು. ಆದರೆ ಕೆಲವು ಮುಖಂಡರು ಸೇರಿ ಮೊತ್ತ ಮೊದಲ ಬ್ಯಾರಿ ಸಮಾವೇಶ ಮಾಡಿದಾಗ, ಅದರಲ್ಲಿ ಸರ್ವ ಬ್ಯಾರಿಗಳು ಒಂದಾಗಿ ತಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸಿದಾಗ ಕರಾವಳಿಯ ಇತರ ಮೇಲ್ವರ್ಣಿಯ ತುಳುವರು ‘ಅಪರಾಧಿಗಳಂತೆ’ ತಲೆ ತಗ್ಗಿಸಿದರು. ಆ ಒಂದು ಸಮ್ಮೇಳನದಲ್ಲಿ ಬ್ಯಾರಿ ಭಾಷೆ, ಸಮುದಾಯ ತನ್ನ ಅವಮಾನ, ಕೀಳರಿಮೆ ಇತ್ಯಾದಿಗಳನ್ನು ಕೊಡವಿ ತಲೆಯೆತ್ತಿ ನಿಂತಿತು. ಅನಂತರ ಬ್ಯಾರಿಗಳು ಮಾಡಿದ ಎಲ್ಲ ಸಮಾವೇಶಗಳು ಉಳಿದ ಸಮಾವೇಷಗಳಿಗೆ ಒಂದು ಮಾದರಿಯಂತಿದ್ದವು. ಪ್ರಪ್ರಥಮ ಬ್ಯಾರಿ ಸಮ್ಮೇಳನದಲ್ಲಿ ಸಭಿಕರಲ್ಲೊಬ್ಬನಾಗಿ ನಾನೂ ಭಾಗವಹಿಸಿದ್ದೆ. ರೋಮಾಂಚಿತನಾಗಿದ್ದೆ. ಈ ಸಮ್ಮೇಳನ ನಡೆದ ಬರೇ ಹತ್ತು ವರ್ಷಗಳಲ್ಲಿ ಬ್ಯಾರಿ ಭಾಷೆ ತನ್ನದೇ ಆದ ಒಂದು ಅಕಾಡಮಿಯನ್ನು ಸರಕಾರದಿಂದ ಗಿಟ್ಟಿಸಿಕೊಂಡಿತು. ಬ್ಯಾರಿ ಭಾಷೆಗೆ ಯಾಕೆ ಅಕಾಡಮಿ ನೀಡುವುದು? ಎಂದು ಕೇಳಿದವರೇ ಬ್ಯಾರಿಗಳ ಒಂದು ಕಾಲದ ಹೀನಾಯ ಸ್ಥಿತಿಗೆ ಕಾರಣರಾದವರು ಎನ್ನುವುದನ್ನು ನಾನಿಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
ಬ್ಯಾರಿ ಭಾಷೆಗೆ ಅಕಾಡಮಿ ನೀಡುವ ಮೂಲಕ 12 ಲಕ್ಷಕ್ಕೂ ಅಧಿಕ ಜನರಿರುವ ಒಂದು ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರಕಾರ ಮಾಡಿದೆ. ಒಂದು ಕಾಲದಲ್ಲಿ ಅವಮಾನ, ಕೀಳರಿಮೆಯ ಬದುಕನ್ನು ಸವೆಸಿದ ಸಮುದಾಯಕ್ಕೆ ನ್ಯಾಯವನ್ನು ನೀಡುವ ಪ್ರಯತ್ನ ಇದಾಗಿದೆ. ಆದುದರಿಂದ ಬ್ಯಾರಿಗಳ ಸಂಭ್ರಮದಲ್ಲಿ ಕರಾವಳಿಯ ತುಳುವರು ಮಾತ್ರವಲ್ಲ ಇಡೀ ಕನ್ನಡಿಗರೇ ಪಾಲುಗೊಳ್ಳಬೇಕು. ಅವರಿಗೆ ಮಾರ್ಗದರ್ಶನವನ್ನು ನೀಡಬೇಕು. ಈ ಮೂಲಕ, ಬ್ಯಾರಿ ಸಮುದಾಯಕ್ಕೆ ಈವರೆಗೆ ಆದ ಅನ್ಯಾಯಕ್ಕೆ ಪಶ್ಚಾತ್ತಾಪ ಪಡಬೇಕು.
ಪ್ರೀತಿ, ಸಂಗೀತ ಮತ್ತು ಬದುಕು ಇವುಗಳನ್ನು ವಿಭಿನ್ನವಾಗಿ ಕಟ್ಟಿಕೊಡುವ ಇಮ್ತಿಯಾಝ್ ಅಲಿ ಅವರ ಇನ್ನೊಂದು ಪ್ರಯತ್ನ ‘ರಾಕ್‌ಸ್ಟಾರ್’. ಜಬ್ ವಿ ಮೆಟ್ ಮತ್ತು ಲವ್ ಆಜ್, ಕಲ್‌ನಿಂದ ಇನ್ನೊಂದು ಹಂತ ಬೆಳೆದಿದ್ದಾರೆ ನಿರ್ದೇಶಕರು. ಎಲ್ಲ ಗೋಡೆಗಳನ್ನು ಒಡೆದು ಒಂದಾಗಲು ಹಂಬಲಿಸುವ ಪ್ರೀತಿ ಮತ್ತು ಸಂಗೀತ! ಹಾಗೆಯೇ ಅದರ ಬೆನ್ನು ಹತ್ತಿ ಹರಾಜಕ ಬದುಕನ್ನು ಅಪ್ಪಿಕೊಳ್ಳುವ ರಾಕ್‌ಸ್ಟಾರ್. ಒಂದು ಅರ್ಥದಲ್ಲಿ ಇಲ್ಲಿ ಕತೆಯೇ ಇಲ್ಲ. ಬರೇ ಭಾವನೆಗಳನ್ನೇ ಸಿನಿಮಾವಾಗಿಸಿದ್ದಾರೆ. ರಾಕ್‌ಸ್ಟಾರ್‌ನ ಕೈಬೆರಳ ಸ್ಪರ್ಶದಿಂದ ಆರೋಗ್ಯಪೂರ್ಣವಾಗುವ ನಾಯಕಿ. ನಾಯಕಿಯ ಹಂಬಲಿಕೆಯಿಂದಲೇ ತನ್ನ ಸಂಗೀತದ ತೀವ್ರತೆಯನ್ನು ಮುಟ್ಟುವ ರಾಕ್‌ಸ್ಟಾರ್. ಆಧುನಿಕ ಮನಸ್ಸುಗಳ ತಳಮಳ, ಮಿಡಿತಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಚಿತ್ರದಲ್ಲಿದೆ. ಒಂದು ರೀತಿಯಲ್ಲಿ ತಂತಿಯ ಮೇಲೆ ನಡೆದಿದ್ದಾರೆ ಇಮ್ತಿಯಾಝ್. ತುಸು ಕಾಲು ಜಾರಿದರೂ ಪ್ರಪಾತಕ್ಕೆ. ಒಬ್ಬ ಖ್ಯಾತ ಸಂಗೀತಗಾರನಾಗಬೇಕಾದರೆ ಆತ ಬದುಕಿನಲ್ಲಿ ನೋವು ತಿನ್ನುವುದು ಅತ್ಯಗತ್ಯವೆ? ಅವನ ಬದುಕು ಅರಾಜಕವಾಗುವುದು ಅನಿವಾರ್ಯವೆ? ಮಧ್ಯಮ ವರ್ಗದಿಂದ ಬಂದ ಜನಾರ್ದನ್ ಜಖರ್ ಗಿಟಾರ್ ಹಿಡಿದು ಅದರಿಂದ ಸಂಗೀತವನ್ನು ಹೊರಡಿಸಲು ಪ್ರಯತ್ನಿಸುವಾಗ ಅವನಿಗೆ ಸಿಗುವ ಸಲಹೆ ಇದು. ಯಾವುದೇ ಸಂಗೀತಗಾರನ ಹಿನ್ನೆಲೆಯನ್ನು ನೋಡು. ಅವನೊಬ್ಬ ಭಗ್ನ ಪ್ರೇಮಿಯಾಗಿರುತ್ತಾನೆ. ಅವನ ಬದುಕು ನೋವಿನ ಕುಲುಮೆಯಿಂದ ಎದ್ದು ಬಂದಿರುತ್ತದೆ. ಆ ಭಗ್ನ ಹೃದಯದಿಂದ ಸಂಗೀತ ಹುಟ್ಟುತ್ತದೆ. ದಿಲ್ಲಿ ಯುನಿವರ್ಸಿಟಿಯ ಕ್ಯಾಂಟೀನ್‌ನಲ್ಲಿ ಸಮೋಸಾ ಜೊತೆಗೆ ಚಟ್ನಿಗಾಗಿ ಗದ್ದಲ ಎಬ್ಬಿಸುವ ಜನಾರ್ದನ್‌ಗೆ ಇದು ದೊಡ್ಡ ಸಮಸ್ಯೆಯಾಗುತ್ತದೆ. ನೋವುಗಳಿಲ್ಲದಿರುವುದೇ ಅವನ ನೋವುಗಳಿಗೆ ಕಾರಣ. ತಾನು ಸಂಗೀತಗಾರನಾಗಬೇಕಾದರೆ ನೋವುಗಳು ಬೇಕು. ಅದರ ಹುಡುಕಾಟದಲ್ಲಿ ಮತ್ತಷ್ಟು ಹಾಸ್ಯಾಸ್ಪದನಾಗುತ್ತಾ ಹೋಗುತ್ತಾನೆ ಜನಾರ್ದನ್.
ಹೀರಾ ಎನ್ನುವ ಕಾಲೇಜಿನ ಸ್ಟಾರ್ ಹುಡುಗಿಯನ್ನು ಪ್ರೇಮಿಸುವುದಕ್ಕೆ ಹೊರಟು, ಭಗ್ನ ಪ್ರೇಮಿಯಾಗಲು ಯತ್ನಿಸುತ್ತಾನೆ. ಆದರೆ ಕ್ಯಾಂಟೀನ್ ಮಾಲಕ ಮಾತ್ರ ಆತನಿಗೆ ಛೀಮಾರಿ ಹಾಕುತ್ತಾನೆ. ‘ನೀನು ನಿಜಕ್ಕೂ ಆ ಹುಡುಕಿಯನ್ನು ಪ್ರೀತಿಸಿದ್ದಿದ್ದರೆ ಇಲ್ಲಿ ಚಟ್ನಿಗಾಗಿ ಜಗಳ ಮಾಡುತ್ತಾ ಕಾಲ ಹರಣ ಮಾಡುತ್ತಿರಲಿಲ್ಲ’ ಎನ್ನುತ್ತಾನೆ. ಆದರೆ ಪ್ರೀತಿಯ ಕುರಿತ ಈ ಹುಡುಗಾಟವೇ ಆ ಹುಡುಗಿಯನ್ನು ಅವನಿಗೆ ಹತ್ತಿರವಾಗಿಸುತ್ತದೆ. ಹೀರಾ ಮೇಲ್ದರ್ಜೆಯ ಹುಡುಗಿ ಎನ್ನುವುದು ಜನಾರ್ದನ್ ಕಲ್ಪನೆ. ಆದರೆ ಆ ಕಲ್ಪನೆಯನ್ನು ಒಂದು ದಿನ ಹೀರಾ ಒಡೆದು ಹಾಕುತ್ತಾಳೆ. ತನಗೆ ದಿಲ್ಲಿಯ ಕಳಪೆ ಥಿಯೇಟರ್‌ನಲ್ಲಿ ‘ಜಂಗ್ಲಿಜವಾನಿ’ ಎನ್ನುವ ಕಳಪೆ ಚಿತ್ರ ನೋಡಬೇಕಾಗಿದೆ. ಹೋಗೋಣವೆ? ಎಂದು ನಾಯಕನಲ್ಲಿ ಕೇಳುತ್ತಾಳೆ. ಇಲ್ಲಿಂದ ಅವರ ಸ್ನೇಹ ತೆರೆದುಕೊಳ್ಳುತ್ತದೆ. ದಿಲ್ಲಿಯ ಕತ್ತಲ ಮೂಲೆಗಳಲ್ಲಿ ಬಚ್ಚಿಟ್ಟುಕೊಂಡಿರುವ ಗಂಧೀ ಬದುಕಿನಲ್ಲಿರುವ ಸ್ವಾತಂತ್ರವನ್ನು ಅವರಿಬ್ಬರು ಕದ್ದು ಮುಚ್ಚಿ ಅನುಭವಿಸುತ್ತಾರೆ. ಹೆಂಡ ಕುಡಿಯುತ್ತಾರೆ. ಹೋಗಬಾರದ, ನೋಡಬಾರದ ಸ್ಥಳಗಳನ್ನೆಲ್ಲ ನೋಡುತ್ತಾರೆ. ಹೀರಾಳ ಮದುವೆ ದಿನ ಹತ್ತಿರವಾಗುತ್ತದೆ. ಆಕೆಯ ಮದುವೆಯಲ್ಲಿ ಪಾಲ್ಗೊಳ್ಳಲು ನಾಯಕ ಕಾಶ್ಮೀರಕ್ಕೆ ತೆರಳುತ್ತಾನೆ. ಅಲ್ಲಿ ತಾನವಳನ್ನು ಕಳೆದುಕೊಳ್ಳುತ್ತಿರುವುದು ಅವನಿಗೆ ಮನವರಿಕೆಯಾಗುತ್ತದೆ. ಮದಿರಂಗಿ ಹಾಕಿದ ಕೈಗಳನ್ನು ಮುಂದಿಟ್ಟು ತನ್ನನ್ನು ತಬ್ಬಿಕೋ ಎಂದು ಅವಳು ಹೇಳುತ್ತಾಳೆ. ನಾಯಕ ಮೆದುವಾಗಿ ತಬ್ಬಿಕೊಳ್ಳುತ್ತಾಳೆ. ‘‘ಇನ್ನೂ ಗಟ್ಟಿಯಾಗಿ’’ ಎನ್ನುತ್ತಾಳೆ ಮದುಮಗಳು.
ಅಲ್ಲಿಂದ ಮರಳಿದ ಜನಾರ್ದನ್ ನಿಧಾನಕ್ಕೆ ಮನೆಯಲ್ಲೂ ತಿರಸ್ಕೃತನಾಗುತ್ತಾ ಹೋಗುತ್ತಾನೆ. ಗಿಟಾರ್ ಅವನ ಜೊತೆಯಾಗುತ್ತಾನೆ. ಕಳ್ಳತನದ ಸುಳ್ಳು ಆರೋಪ ಹೊತ್ತು ಮನೆಯಿಂದ ಹೊರಗಟ್ಟಿದಾಗ ಅವನು ದಿಲ್ಲಿಯ ದರ್ಗಾ ಸೇರುತ್ತಾನೆ. ಅಲ್ಲಿ ಹಾಡುತ್ತಾ ಕಾಲ ಕಳೆಯುತ್ತಾನೆ. ಬದುಕು ಅವನನ್ನು ತಿರಸ್ಕರಿಸಿದಂತೆ, ಸಂಗೀತ ಅವನೊಳಗೆ ತೀವ್ರಗೊಳ್ಳುತ್ತಾ ಹೋಗುತ್ತದೆ. ಮುಂದೆ ವಿದೇಶದಲ್ಲಿ ಹೀರಾಳನ್ನು ಅವನು ಮತ್ತೆ ಭೇಟಿ ಮಾಡುತ್ತಾನೆ. ಕಟ್ಟುಪಾಡಿನ ಜಗತ್ತಿನಲ್ಲಿ ಅವಳು ಬಂಧಿಯಾಗಿರುತ್ತಾಳೆ. ಆರೋಗ್ಯ ಕೆಟ್ಟಿರುತ್ತದೆ. ಮಾನಸಿಕ ವೈದ್ಯರನ್ನು ಬೇಟಿಯಾಗಲೆಂದು ಹೊರಟಾಗ ನಾಯಕ ಎದುರಾಗುತ್ತಾನೆ. ನಾಯಕನ ಭೇಟಿಯಿಂದ ಆಕೆ ಮತ್ತೆ ಅರಳುತ್ತಾಳೆ. ಇನ್ನೊಮ್ಮೆ ಆಕೆಯನ್ನು ಅವಳ ಮನೆಯಲ್ಲಿ ಭೇಟಿ ಮಾಡುವ ಪ್ರಯತ್ನ ಅವನನ್ನು ಅಪರಾಧಿಯನ್ನಾಗಿಸುತ್ತದೆ. ಇದು ಜಾರ್ಡನ್‌ಗೆ ಹೊಸ ಇಮೇಜ್ ನೀಡುತ್ತದೆ. ಆತ ಜೈಲು ಸೇರುತ್ತಾನೆ. ಜೈಲಿನಿಂದ ಬಿಡುಗಡೆಯ ಹಂಬಲ ಅವನ್ನು ಇನ್ನಷ್ಟು ಸಂಗೀತದ ಆಳಕ್ಕೆ ಒಯ್ಯುತ್ತದೆ. ‘‘ಈ ನಗರದಲ್ಲಿ ಒಮ್ಮೆ ದಟ್ಟ ಕಾಡಿತ್ತು. ಇಲ್ಲಿರುವ ಮರಗಳನ್ನು ಕಡಿದು ನಗರ ಮಾಡಲಾಯಿತು. ಮರವನ್ನು ಕಡಿಯುವಾಗ ಎರಡು ಜೋಡಿ ಪಾರಿವಾಳಗಳು ಇಲ್ಲಿಂದ ಹಾರಿ ಹೋದವು. ಅದನ್ನು ಯಾರಾದರೂ ಕಂಡಿರಾ...’’ ಸಂಗೀತಗಾರನ ಬಿಡುಗಡೆಯ ಹಂಬಲ. ಎಲ್ಲ ಗೋಡೆಗಳನ್ನು ಮುರಿದು ಪ್ರೀತಿಯಲ್ಲಿ ಒಂದಾಗುವ ತಹತಹಿಕೆ...ಸದ್ದಾಹಕ್ ಹಾಡು...ನಾಯಕನ ಒಳಗಿನ ಸ್ವಾತಂತ್ರದ ಕನಸುಗಳಿಗೆ ರೆಕ್ಕೆ ಕಟ್ಟುತ್ತದೆ. ನಾಯಕನ ವರ್ಚಸ್ಸಿಗೆ ಕಪ್ಪು ಬಣ್ಣ ಬಳಿದಂತೆ ಆತನ ಅಭಿಮಾನಿಗಳು ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತಾರೆ. ನಾಯಕ ಜರ್ಝರಿತನಾದಷ್ಟು ಆತನ ಸಂಗೀತ ಉತ್ಕಟ ಹಂತವನ್ನು ತಲುಪುತ್ತದೆ.
ಎಲ್ಲ ಸಭ್ಯ, ಸಂಪ್ರದಾಯದ ಗೋಡೆಗಳನ್ನು ಒಡೆದು ನಾಯಕನ ಸ್ಪರ್ಶಕ್ಕೆ ಹಂಬಲಿಸುವ ಹೀರಾ...ಹಾಗೆಯೇ ಆ ಬೆಂಕಿಯ ಪ್ರೀತಿಯಲ್ಲಿ ಧಗಧಗಿಸುವ ನಾಯಕನ ಸಂಗೀತ ಇವನ್ನು ಇಟ್ಟುಕೊಂಡು ಇಮ್ತಿಯಾಝ್ ಅಲಿ ಮಾಡಿರುವ ಪ್ರಯತ್ನವನ್ನು ನಾವು ಮೆಚ್ಚಬೇಕಾಗಿದೆ. ರಣ್‌ಬೀರ್ ಕಪೂರ್‌ಗೆ ಇದೊಂದು ವಿಭಿನ್ನ ಅವಕಾಶ. ಮುಗ್ಧ ವಿದ್ಯಾರ್ಥಿಯಾಗಿಯೂ, ರಾಕ್‌ಸ್ಟಾರ್ ಆಗಿಯೂ ಕಪೂರ್ ಮಿಂಚುತ್ತಾರೆ. ಹೀರಾ ಪಾತ್ರದಲ್ಲಿ ನರ್ಗೀಸ್ ಫಖ್ರಿ ಪರವಾಗಿಲ್ಲ ಎನ್ನುವಂತೆ ನಟಿಸಿದ್ದಾರೆ. ಎ. ಆರ್. ರಹಮಾನ್ ಸಂಗೀತ ಚಿತ್ರದ ಧ್ವನಿಯಾದರೆ, ಅನಿಲ್ ಮೆಹ್ತಾ ಅವರ ಕ್ಯಾಮರಾವರ್ಕ್ ಒಟ್ಟು ಚಿತ್ರದ ದೇಹ. ತುಡಿಯುವ ಪ್ರೇಮ ಚಿತ್ರದ ಆತ್ಮ.
ಹಾಗೆಂದು ಚಿತ್ರ ಪರಿಪೂರ್ಣವಾಗಿದೆ ಎಂದರ್ಥವಲ್ಲ. ಚಿತ್ರವನ್ನು ಇನ್ನಷ್ಟು ತೀವ್ರವಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಗಂಧಿ ಜಗತ್ತಿನ ಪರಿಚಯ ನಿರ್ದೇಶಕರಿಗೆ ತುಸು ಕಡಿಮೆ ಅನ್ನಿಸುತ್ತದೆ. ಸುಂದರ ಕಾಶ್ಮೀರವನ್ನು ಕಟ್ಟಿಕೊಡುವಷ್ಟು ಉತ್ಸಾಹ ಆ ಗಂಧೀ ಜಗತ್ತನ್ನು ಕಟ್ಟಿಕೊಡುವಲ್ಲಿ ಕ್ಯಾಮರಾಗಳಿಗಿದ್ದಂತಿಲ್ಲ. ನಾಯಕಿಯ ಅಭಿನಯ ಇನ್ನಷ್ಟು ಪಕ್ವವಾಗಬೇಕಾಗಿತ್ತು ಅನ್ನಿಸುತ್ತದೆ. ತಣ್ಣಗೆ ಜುಳು ಜುಳು ಹರಿಯುವ ಈ ಚಿತ್ರದಲ್ಲಿ ವಿಶೇಷ ತಿರುವುಗಳಿಲ್ಲ. ಆದರೆ ವಿಭಿನ್ನ ದೃಷ್ಟಿಯಿದೆ. ಅದಕ್ಕಾಗಿ ನಿರ್ದೇಶಕರನ್ನು ಅಭಿನಂದಿಸಬೇಕು.
ಹೆಣ್ಣು ದೈವ
ಅದು ಭೂಸುಧಾರಣೆಯ ಕಾಲ.
ಹೊಲ ಉಳುತ್ತಿರುವವರೇ ಹೊಲದೊಡೆಯರಾಗುತ್ತಿರುವ ಕಾಲ.
ಆ ಸಂದರ್ಭದಲ್ಲಿ ಭೂತದ ಕೋಲದಲ್ಲಿ ದೈವವೊಂದು ಕುಣಿಯುತ್ತಾ ‘‘ಯಾರೂ ಧನಿಗಳ ಭೂಮಿಯನ್ನು ಕಬಳಿಸಬಾರದು’’ ಎಂದು ಕೂಗಿತಂತೆ.
ಆದರೆ ಭೂಮಿ ಪಡೆದ ರೈತರೆಲ್ಲ ಭೂತಕ್ಕೆ ಅಲ್ಲೇ ತಿರುಗಿ ಬಿದ್ದರು.
‘‘ದೈವಕ್ಕೆ ಎದುರಾಡುತ್ತೀರಾ?’’ ಭೂತ ಕೇಳಿತು.
‘‘ಸದ್ಯಕ್ಕೆ ನೀನು ನಮ್ಮ ಧನಿಗಳ ದೈವ. ನಮ್ಮ ದೈವ ಹೆಣ್ಣು ಭೂತ. ಅದರ ಹೆಸರು ಇಂದಿರಾಗಾಂಧಿ’’ ಎಂದವರೇ ಭೂತಕ್ಕೆಂದು ತಂದ ಕೋಳಿಯೊಂದಿಗೆ ತಮ್ಮ ತಮ್ಮ ಮನೆಗಳಿಗೆ ಮರಳಿದರಂತೆ.
ಕೊಲೆ
ಹಾಡುಹಗಲಲ್ಲೇ ಅಲ್ಲೊಂದು ಕೊಲೆಯಾಯಿತು.
ಪೊಲೀಸ್ ಅಧಿಕಾರಿ ಬಂದು ಕೇಳಿದ ‘‘ಕೊಲೆಯನ್ನು ಯಾರಾದರೂ ನೋಡಿದವರಿದ್ದಾರೆಯೋ?’’
ಯಾರೂ ತುಟಿ ಬಿಚ್ಚಲಿಲ್ಲ. ಅಪರಾಧಿ ಅಲ್ಲೇ ಇದ್ದರೂ ಸಾಕ್ಷಿ ನುಡಿಯಲು ಹಿಂದೇಟು ಹಾಕಿದರು.
ಅಧಿಕಾರಿ ವಿಷಾದದಿಂದ ಹೇಳಿದ ‘‘ಈ ಕೊಲೆಯನ್ನು ಯಾರೋ ಒಬ್ಬ ಮಾಡಿರಬೇಕು ಎಂದು ತಿಳಿದಿದ್ದೆ. ಈಗ ನೋಡಿದರೆ ಈ ಕೊಲೆಯನ್ನು ನೀವೆಲ್ಲ ಜೊತೆ ಸೇರಿ ಮಾಡಿದ್ದೀರಿ’’
ಮೊತ್ತ ಮೊದಲು
ಅಪರಾಧಿಯನ್ನು ನ್ಯಾಯಾಧೀಶರು ಕೇಳಿದರು
‘‘ಇಷ್ಟು ಕೊಲೆ ಮಾಡಿದ್ದೀಯಲ್ಲ...ಹೇಗೆ ಸಾಧ್ಯವಾಯಿತು?’’
ಅವನು ಹೇಳಿದ ‘‘ಮೊತ್ತ ಮೊದಲು ಒಂದು ಕೊಲೆ ಮಾಡಿದೆ. ಆ ಬಳಿಕ ಕೊಲೆ ಮಾಡುವುದು ಕಷ್ಟವಾಗಲಿಲ್ಲ’’
‘‘ನೀನು ಮಾಡಿದ ಮೊದಲ ಕೊಲೆ ಯಾರದು?’’
‘‘ಮೊತ್ತ ಮೊದಲು ನಾನು ಕೊಂದದ್ದು ನನ್ನನ್ನು’’
ಪತ್ರಕರ್ತ
ಪತ್ರಕರ್ತನೊಬ್ಬ ಪೊಲೀಸ್ ಸ್ಟೇಶನ್‌ಗೆ ಫೋನ್ ಮಾಡಿದ
‘‘ಸಾರ್...ಏನಿದೆ ಕ್ರೈಂ ವಿಶೇಷ?’’
‘‘ವಿಶೇಷ ಏನು ಇಲ್ಲ ಸಾರ್, ಒಂದು ಸಣ್ಣ ಆಕ್ಸಿಡೆಂಟ್ ಅಷ್ಟೇ’’ ಪೊಲೀಸ್ ಪೇದೆ ಉತ್ತರಿಸಿದ.
‘‘ಹೌದಾ...ಡೆತ್ ಆಗಿದಾ?’’ ಪತ್ರಕರ್ತ ಕೇಳಿದ.
‘‘ಹೌದು ಒಂದು ಡೆತ್ ಆಗಿದೆ. ಸ್ಕೂಟರ್‌ಗೆ ಬಸ್ ಡಿಕ್ಕಿ’’
‘‘ಬರೇ ಒಂದು ಮಾತ್ರಾನ, ಬೇರೇನೂ ವಿಶೇಷ ಇಲ್ವಾ?’’
‘‘ಇಲ್ಲಾ ಸಾರ್...ಅಷ್ಟೇ...’’
‘‘ಏನು ಪೊಲೀಸರಪ್ಪ ನೀವು...ಒಂದು ದಿನಾನೂ ವಿಶೇಷ ಸುದ್ದಿ ಕೊಡಲ್ಲ. ಹೀಗೇ ಆದರೆ ನಾವು ಪತ್ರಿಕೆಯೋರು ಏನನ್ನು ಪ್ರಿಂಟ್ ಮಾಡಬೇಕು...’’ ಪತ್ರಕರ್ತ ಫೋನ್ ಕುಕ್ಕಿದ.
ತುಸು ಹೊತ್ತಲ್ಲೇ ಮನೆಯಿಂದ ಪತ್ರಕರ್ತನಿಗೆ ಫೋನ್ ಬಂತು
‘‘ಅಪ್ಪನ ಸ್ಕೂಟರ್ ಆಕ್ಸಿಡೆಂಟ್ ಆಗಿದೆ...ಬೇಗ ಬಾ....’’
ನಾಚಿಕೆ
ಮಹಾ ವಂಚಕನೊಬ್ಬನನ್ನು ಬಂಧಿಸಿ ಒಯ್ಯುತ್ತಿದ್ದರು.
ಆದರೆ ಅವನು ಯಾವ ಅಂಜಿಕೆಯೂ ಇಲ್ಲದೆ ನಗು ನಗುತ್ತಾ ಅವರ ಹಿಂದೆ ನಡೆಯುತ್ತಿದ್ದ.
ಅದನ್ನು ನೋಡಿ ಸಂತ ಹೇಳಿದ
‘‘ತನ್ನ ಅಪರಾಧಕ್ಕಾಗಿ ಸ್ವಯಂ ನಾಚಿಕೊಳ್ಳದವನನ್ನು ಯಾವ ಜೈಲೂ ಶಿಕ್ಷಿಸಲಾರದು’’
ಲೆಕ್ಕ
ಮೇಷ್ಟ್ರು ಲೆಕ್ಕ ಪಾಠ ಹೇಳಿ ಕೊಡುತ್ತಿದ್ದರು.
ಹುಡುಗನೊಬ್ಬನನ್ನು ನಿಲ್ಲಿಸಿ ಕೇಳಿದರು ‘‘ನನ್ನ ಕೈಯಲ್ಲಿ ಹತ್ತು ರೊಟ್ಟಿ ಇದೆ. ಎರಡು ರೊಟ್ಟಿಯನ್ನು ನಾನು ನಮ್ಮ ಮನೆಯ ನಾಯಿಗೆ ಹಾಕುತ್ತೇನೆ. ಈಗ ನನ್ನಲ್ಲಿ ಉಳಿದ ರೊಟ್ಟಿ ಎಷ್ಟು?’’
ಹುಡುಗ ವಿಷಾದದಿಂದ ಕೇಳಿದ ‘‘ಸಾರ್ ನಾಯಿಗೆ ಹಾಕುವ ಆ ಎರಡು ರೊಟ್ಟಿಯನ್ನು ನನಗಾದರೂ ಕೊಡಬಾರದೆ?’’
ಮೇಷ್ಟ್ರು ಸಿಟ್ಟಾದರು ‘‘ನಾನು ರೊಟ್ಟಿಯನ್ನು ಯಾರಿಗೆ ಹಾಕುತ್ತೇನೆ ಎನ್ನುವುದು ಮುಖ್ಯವಲ್ಲ. ನನ್ನ ಕೈಯಲ್ಲಿ ಎಷ್ಟು ರೊಟ್ಟಿಯಿದೆ ಅದಕ್ಕೆ ಉತ್ತರಿಸು’’
ಹುಡುಗ ಅಷ್ಟೇ ಕಟುವಾಗಿ ಉತ್ತರಿಸಿದ ‘‘ಮನೆಯಲ್ಲಿ ಹಸಿದು ಕೆಲಸ ಮಾಡುತ್ತಿರುವ ನನ್ನ ಅಮ್ಮನಿಗೆ ನಿಮ್ಮ ಕೈಯಲ್ಲಿರುವ ಎಂಟು ರೊಟ್ಟಿಗಿಂತ, ನೀವು ನಾಯಿಗೆ ಹಾಕಿದ ಎರಡು ರೊಟ್ಟಿ ತುಂಬಾ ಮುಖ್ಯ’’
ಮೇಷ್ಟ್ರು ಹತಾಶೆಯಿಂದ ಹೇಳಿದರು ‘‘ಇದು ಕಲ್ಪನೆ ಕಣೋ...’’
ಹುಡುಗನೂ ಅಷ್ಟೇ ಹತಾಶೆಯಿಂದ ಕೇಳಿದ ‘‘ಕಲ್ಪನೆಯಲ್ಲಾದರೂ ಆ ಎರಡು ರೊಟ್ಟಿಯನ್ನು ನನ್ನ ತಾಯಿಗೆ ನೀಡಬಾರದೆ?’’
ಅನುಭವ
ಲಾರಿ ಚಾಲಕರ ಸಂದರ್ಶನ ನಡೆಯುತ್ತಿತ್ತು
ಚಾಲಕನಲ್ಲಿ ಆತ ಕೇಳಿದ ‘‘ಚಾಲಕ ವೃತ್ತಿಯಲ್ಲಿ ಎಷ್ಟು ವರ್ಷ ಅನುಭವವಿದೆ?’’
‘‘ನನ್ನ ಬದುಕಿನಲ್ಲಿ ಕೆಲವು ಸೆಕೆಂಡುಗಳು ನನಗೆ ನೂರಾರು ವರ್ಷಗಳ ಅನುಭವವನ್ನು ನೀಡಿದೆ’’ ಆ ವೃದ್ಧ ಚಾಲಕ ನುಡಿದ.
ಸೀತೆ
‘‘ಬೆಂಕಿಗೆ ಹಾರಿಯೂ ಸೀತೆ ಹೇಗೆ ಬದುಕಿದಳು?’’
ತಾಯಿಯ ಬಳಿ ಮಗ ಕೇಳಿದ.
‘‘ನಾನು ಪ್ರತಿದಿನ ಬದುಕುತ್ತಿಲ್ಲವೆ ಮಗಾ...ಹಾಗೆ’’ ತಾಯಿ ಉತ್ತರಿಸಿದಳು
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.
ಮುಕ್ತಿ
ರಾಜಕಾರಣಿ ಅದೊಂದು ಸ್ಲಂಗೆ ಭೇಟಿ ನೀಡಿದ.
ಸಾವಿರಾರು ಗುಡಿಸಲುಗಳಿರುವ ಸ್ಲಂ ಅದು.
ಅಲ್ಲಿನ ಬಡತನ, ಕಷ್ಟ ಕಂಡು ರಾಜಕಾರಣಿ ತುಂಬಾ ನೊಂದುಕೊಂಡ.
ತಕ್ಷಣ ತನ್ನ ಜೊತೆಗಿದ್ದ ಅಧಿಕಾರಿಗೆ ಆದೇಶಿಸಿದ
‘‘ಈ ಬಡತನ, ನೋವಿಗೆ ಮುಕ್ತಿ ಕೊಡಿ. ಇವರನ್ನು ಮೇಲೆತ್ತಿ ಮುಂದಿನ ವರ್ಷ ಬಂದಾಗ ಇಲ್ಲಿ ಬಡತನ ಅನ್ನೋದೆ ಇರಬಾರದು’’
ಅಧಿಕಾರಿ ‘‘ಸರಿ ಸಾರ್’’ ಎಂದ.
ಮರುದಿನ ಆ ಸ್ಲಂಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು, ಅಷ್ಟೂ ಬಡವರು ಸುಟ್ಟು ಬೂದಿಯಾದರು.
ಮುಂದಿನ ವರ್ಷ ಅಲ್ಲಿ ತಲೆಯೆತ್ತಿದ್ದ ಕಾಂಪ್ಲೆಕ್ಸ್‌ನ್ನು ಉದ್ಘಾಟಿಸಲು ಆ ರಾಜಕಾರಣಿ ಬಂದಾಗ, ಅಲ್ಲೆಲ್ಲ ಶ್ರೀಮಂತರೇ ರಾರಾಜಿಸುತ್ತಿದ್ದರು.
ರಾಜಕಾರಣಿ ಅಧಿಕಾರಿಯನ್ನು ಮೆಚ್ಚುಗೆಯಿಂದ ನೋಡಿದ.
ಗೊಬ್ಬರ
ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಸಿಟ್ಟಿನಿಂದ ಹೇಳಿದ ‘‘ನಿನ್ನ ತಲೆಯಲ್ಲಿರುವುದು ಗೊಬ್ಬರ’’
ವಿದ್ಯಾರ್ಥಿ ಸಂತೋಷದಿಂದ ಉತ್ತರಿಸಿದ
‘‘ನಿಜ. ನನ್ನ ತಲೆಯಲ್ಲಿರುವುದು ಗೊಬ್ಬರ. ಅಲ್ಲಿ ಬೀಜ ಬಿತ್ತಿ ಬೆಳೆ ತೆಗೆಯುವುದು ನಿಮ್ಮ ಕೆಲಸ. ಅದನ್ನು ಮಾಡಿ’’
ಪವಾಡ
ಸಂತ ಆಶ್ರಮದ ಗಿಡಕ್ಕೆ ನೀರೆರೆಯುತ್ತಿದ್ದ. ಆಗ ಅಲ್ಲಿಗೊಬ್ಬ ಅಪರಿಚಿತ ಬಂದು ಕೇಳಿದ ‘‘ಸ್ವಾಮಿ...ಈ ಆಶ್ರಮದ ಗುರುಗಳು ಪವಾಡ ಮಾಡುತ್ತಾರಂತೆ ಹೌದ?’’
ಸಂತ ನಕ್ಕು ‘‘ಹೌದು’’ ಎಂದ.
ಅಪರಿಚಿತನಿಗೆ ಸಂತೋಷವಾಯಿತು. ‘‘ಅವರು ಮಾಡಿರುವ ಒಂದು ಪವಾಡವನ್ನು ಹೇಳಿ...’’ ಕುತೂಹಲದಿಂದ ಕೇಳಿದ.
ಸಂತ ಹೇಳ ತೊಡಗಿದ ‘‘ನಿಜಕ್ಕೂ ಅದೊಂದು ದೊಡ್ಡ ಪವಾಡ. ಒಂದು ದಿನ ಅವರೊಂದು ಬೀಜವನ್ನು ತಂದರು. ಆಮೇಲೆ ಅದನ್ನು ಮಣ್ಣಲ್ಲಿ ಬಿತ್ತಿದರು. ಪ್ರತಿದಿನ ನೀರು ಹಾಕತೊಡಗಿದರು. ನೋಡನೋಡುತ್ತಿದ್ದಂತೆಯೇ ಒಂದು ಮಣ್ಣನ್ನು ಸೀಳಿ ಬೀಜದಿಂದ ಸಸಿಯೊಂದು ಮೊಳಕೆಯೊಡೆಯಿತು. ಪವಾಡ ಇಲ್ಲಿಗೆ ಮುಗಿಯುವುದಿಲ್ಲ...ಗುರುಗಳು ಅದಾವುದೋ ಮಂತ್ರದ ನೀರು ಹಾಕುತ್ತಿರಬೇಕು. ಸಸಿ ಕೆಲವೇ ದಿನಗಳಲ್ಲಿ ಗಿಡವಾಯಿತು. ಒಂದೆರಡು ವರ್ಷಗಳಲ್ಲೇ ಮರವಾಯಿತು. ಒಂದು ದಿನ ನೋಡಿದರೆ ಮರ ತುಂಬಾ ಹಣ್ಣುಗಳು. ಆ ಹಣ್ಣುಗಳು ಅದೆಷ್ಟು ಸಿಹಿ ಅಂತೀರಾ? ಆಹಾ...ಆ ಒಂದು ಪುಟ್ಟ ಬೀಜದೊಳಗಿಂದ ಅವರು ಒಂದು ದೊಡ್ಡ ಮರವನ್ನೇ ಹೊರತೆಗೆದರು. ಅಷ್ಟೇ ಅಲ್ಲ, ಮರದಿಂದ ಅಷ್ಟೂ ಸಿಹಿಸಿಹಿಯಾದ ಹಣ್ಣುಗಳನ್ನು ಹೊರತೆಗೆದರು. ಆ ಪವಾಡವನ್ನು ನೋಡಿ ಊರ ರೈತರೆಲ್ಲ ಅವರ ಭಕ್ತರಾದರು...’’
ಭಕ್ತಿ
ಶಿಷ್ಯ ಕೇಳಿದ ‘‘ಗುರುಗಳೇ ಭಕ್ತಿ ಎಂದರೇನು?’’
ಸಂತ ನಕ್ಕು ಹೇಳಿದ ‘‘ಭಕ್ತಿ ಎಂದರೆ ಜೂಜು. ಒಮ್ಮೆ ಈ ಜೂಜಿಗಿಳಿದರೆ ಸಾಕು, ಒಂದೊಂದನ್ನೇ ಒತ್ತೆಯಿಟ್ಟು ಕಳೆದುಕೊಳ್ಳುತ್ತಾ ಹೋಗುತ್ತೀರಿ...ಕಳೆದುಕೊಳ್ಳುವುದರಲ್ಲೇ ಈ ಜೂಜಿನ ಮಜ ಇರುವುದು’’
ಹಬ್ಬ
‘‘ನಾಳೆ ಹಬ್ಬ’’ ಆ ಶ್ರೀಮಂತ ಮನೆಯ ಹುಡುಗ ಸಂಭ್ರಮದಿಂದ ಹೇಳಿದ.
‘‘ಹೌದಾ?’’ ಬಡ ಹುಡುಗೂ ಉದ್ಗರಿಸಿದ.
ನಾಳೆ ಏನೋ ವಿಶೇಷ ಇರಬೇಕು ಎಂದು ಸಂತೋಷಪಟ್ಟ.
ಮರುದಿನ ಶ್ರೀಮಂತ ಹುಡುಗ ಬೇಸರದಿಂದ ಹೇಳಿದ ‘‘ಹಬ್ಬದಲ್ಲಿ ಏನೂ ವಿಶೇಷವೇ ಇರಲಿಲ್ಲ. ನಮ್ಮ ಮನೆಯಲ್ಲಿ ಯಾವತ್ತೂ ಬಿರಿಯಾನಿ. ನಿನ್ನೆಯೂ ಬಿರಿಯಾನಿ ಮಾಡಲಾಗಿತ್ತು. ಯಾವತ್ತೂ ಹೊಸ ಬಟ್ಟೆಯೇ ಹಾಕುತ್ತಿದ್ದೆ. ನಿನ್ನೆಯೂ ಹೊಸಬಟ್ಟೆಯನ್ನೇ ಹಾಕಿದೆ. ಏನಿದೆ ಹಬ್ಬದಲ್ಲಿ ವಿಶೇಷ?’’
ಬಡಹುಡುಗನೂ ಅಷ್ಟೇ ಬೇಸರದಿಂದ ಹೇಳಿದ
‘‘ಹೌದು, ನಮ್ಮ ಮನೆಯಲ್ಲೂ ಹಬ್ಬದಲ್ಲಿ ಏನೂ ವಿಶೇಷವೇ ಇರಲಿಲ್ಲ. ಯಾವತ್ತೂ ಗಂಜಿಯೇ ಕುಡಿಯುತ್ತಿದ್ದೆವು. ನಿನ್ನೆಯೂ ಗಂಜಿಯನ್ನೇ ಕುಡಿದೆವು. ಯಾವಾಗಲೂ ಹರಿದ ಹಳೆಯ ಬಟ್ಟೆಯೇ ಹಾಕುತ್ತಿದ್ದೆವು. ನಿನ್ನೆಯೂ ಅದನ್ನೇ ಹಾಕಿದೆವು. ಏನಿದೆ ಹಬ್ಬದಲ್ಲಿ ವಿಶೇಷ?’’
ಕೊರಗು
ಸಂತನ ಬಳಿ ಶಿಷ್ಯ ದುಃಖದಿಂದ ಹೇಳಿದ ‘‘ಗುರುಗಳೇ, ನಾನು ಇಂದು ಬೆಳಗ್ಗೆ ದೇವರ ಪ್ರಾರ್ಥನೆಯನ್ನು ಮರೆತು ನಿದ್ರಿಸಿ ಬಿಟ್ಟೆ. ನಾನೇನು ಮಾಡಲಿ?’’
ಸಂತ ಹೇಳಿದ ‘‘ದೇವರ ಪ್ರಾರ್ಥನೆ ಮಾಡಿದೆ ಎಂದು ಹೆಮ್ಮೆಯಿಂದ ತಿರುಗಾಡುವವನಿಗಿಂತ, ಪ್ರಾರ್ಥನೆ ಮಾಡಿಲ್ಲವೆಂದು ಕೊರಗುವವನೇ ದೇವರಿಗೆ ಹೆಚ್ಚು ಇಷ್ಟ. ಚಿಂತೆ ಮಾಡಬೇಡ’’
ಹಗ್ಗ
ಸಂತನ ಆಶ್ರಮದ ತೋಟಕ್ಕೆ ಕಳ್ಳನೊಬ್ಬ ನುಗ್ಗಿದ.
ಶಿಷ್ಯರೆಲ್ಲ ಸೇರಿ ಅವನನ್ನು ಹಿಡಿದರು.
ಅವನೋ ಬಲಾಢ್ಯ. ಅವನನ್ನು ಕೊತ್ವಾಲನಿಗೆ ಒಪ್ಪಿಸಲು ಕೈಕಾಲು ಕಟ್ಟುವುದು ಅಗತ್ಯವಿತ್ತು.
ಶಿಷ್ಯನೊಬ್ಬ ಆಶ್ರಮಕ್ಕೆ ಬಂದು ಹಗ್ಗಕ್ಕಾಗಿ ಹುಡುಕಾಡತೊಡಗಿದ.
ಸಂತ ಕೇಳಿದ ‘‘ಏನು ಹುಡುಕುತ್ತಿದ್ದೀಯ?’’
‘‘ಕಳ್ಳನನ್ನು ಕಟ್ಟಿ ಹಾಕಲು ಹಗ್ಗ’’
‘‘ಪ್ರೀತಿ, ಸ್ನೇಹ, ಬಂಧುತ್ವದ ಹಗ್ಗದಿಂದ ಅವನನ್ನು ಕಟ್ಟಿ ಹಾಕಿ. ಅದು ಎಂದಿಗೂ ಕಡಿಯದಷ್ಟು ಗಟ್ಟಿಯಾದ ಹಗ್ಗ’’ ಸಂತ ಸಲಹೆ ನೀಡಿದ.
ದಿಕ್ಕು
ಒಂದು ನದಿಯ ದಿಕ್ಕನ್ನು ತಿರುಗಿಸುವುದಕ್ಕೆ ಅವರು ಹೊರಟರು.
ಹಲವು ವರ್ಷಗಳ ಬಳಿಕ ದಿಕ್ಕೇನೋ ಬದಲಾಯಿತು.
ಆದರೆ ನದಿಯದ್ದಲ್ಲ, ಜನರದು.
ನದಿಯ ದಿಕ್ಕು ಎಂದಿನಂತೆ ಸಮುದ್ರದ ಕಡೆಗೇ ಇತ್ತು.
ಆದರೆ ಜನರ ದಿಕ್ಕು ಚೆಲ್ಲಾಪಿಲ್ಲಿಯಾಗಿತ್ತು.
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.
ಒಂದು ಹಳೆಯ ಕವಿತೆ. ನನ್ನ ಪ್ರವಾದಿಯ ಕನಸು ಸಂಕಲನದಲ್ಲಿ ಪ್ರಕಟವಾಗಿದೆ.
ಇರುಳು ಸಾಗರದಂತೆ
ಬಿದ್ದುಕೊಂಡಿರುವಾಗ ಇವನು
ನಿದ್ದೆಯನ್ನು ಬಲೆಯಂತೆ ಬೀಸಿ
ಸ್ವಪ್ನಗಳನ್ನು ಆಯುತ್ತಾನೆ!
ದುರಾಸೆಯ ಹುಡುಗಾ...
ಪುಟ್ಟ ದೋಣಿ ತುಂಬ
ಕನಸುಗಳ ಗೋರುತ್ತಾ ತುಂಬುವನು
ನೆಲೆ ತಪ್ಪಿ, ಇರುಳು ತೋಳು ಎತ್ತಿ ಒಗೆದರೆ
ಹಗಲ ತೀರದಲ್ಲಿ ಪೆಚ್ಚಾಗಿ ಬಿದ್ದುಕೊಳ್ಳುವನು
ಸ್ವಪ್ನಗಳಿಗಾಗಿ ತನ್ನ ನಿದ್ದೆಗಳನ್ನೂ
ಸಾಲಿಗನಂತೆ ಕಾಡುವ
ಹಗಲಿಗಾಗಿ ತನ್ನ ಸ್ವಪ್ನಗಳನ್ನೂ
ಅಡವಿಡುವ ಇವನ
ವೌನದ ತಿಜೋರಿಯಲ್ಲಿ
ಅದೆಷ್ಟು ಸಾಲಪತ್ರಗಳು!
ಠೇವಣಿಯೆಂದಿಟ್ಟ ನಾಳೆಗಳೆಲ್ಲಾ
ಬೊಗಸೆಯಿಂದ ಮಂಜಿನಂತೆ ಕರಗಿ
ಹೋಗುವುದನ್ನು ಕಂಡು
ತಲ್ಲಣಗೊಂಡು
ಅಳುವನು!
ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.
ಗುಜರಿ ಅಂಗಡಿಯಲ್ಲಿ -ಮದರಸದ ದಿನಗಳ- ಒಂದು ಕಂತನ್ನು ಈ ಹಿಂದೆ ಹಂಚಿಕೊಂಡಿದ್ದೆ. ಇದೀಗ ಅದರ ಎರಡನೆ ಕಂತನ್ನು ಹಂಚಿಕೊಳ್ಳುತ್ತಿದ್ದೇನೆ.
ಮದರಸ ಮತ್ತು ಶಾಲೆಯ ಒಂದು ಓದಿನ ಕ್ರಮದ ಒಂದು ಮುಖ್ಯ ವ್ಯತ್ಯಾಸವನ್ನು ನಾನು ಬಾಲ್ಯದಲ್ಲೇ ಗಮನಿಸಿದ್ದೆ. ಮೇಷ್ಟ್ರುಗಳು ಪಾಠ ಪುಸ್ತಕವನ್ನು ಬಿಡಿಸಿ ‘‘ಮಕ್ಕಳೇ ವೌನವಾಗಿ ಓದಿರಿ’’ ಎನ್ನುತ್ತಿದ್ದರು. ನಾವೆಲ್ಲರೂ ವೌನವಾಗಿ ಅಥವಾ ವೌನವನ್ನು ನಟಿಸಿ ಓದುತ್ತಿದ್ದೆವು. ಆದರೆ ಮದರಸದಲ್ಲಿ ಮುಸ್ಲಿಯಾರರು ಹಾಗಲ್ಲ. ‘‘ಮಕ್ಕಳೇ ಜೋರಾಗಿ ಓದಿರಿ’’ ಎನ್ನುತ್ತಿದ್ದರು. ಅಷ್ಟೇ ಅಲ್ಲ, ನಮ್ಮ ಸ್ವರ ತುಸು ಮೆಲ್ಲಗಾದರೂ ಬೆತ್ತ ಹಿಡಿದು ಓಡಾಡ ತೊಡಗುತ್ತಿದ್ದರು. ಆದುದರಿಂದ ನಾವು ಮದರಸದಲ್ಲಿ ಗಂಟಲು ಹರಿಯುವಂತೆ ಓದುತ್ತಿದ್ದೆವು.
‘ಅ-ಅಲಿಫ್, ಬ-ಬಾಹ್’ ಎಂದು ಜೋರಾಗಿ ನಾವು ಗುಣಿತಾಕ್ಷರಗಳನ್ನು ಓದುತ್ತಿದ್ದೆವು. ನಮ್ಮ ಮದರಸ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಇದೆ. ಮದರಸದೊಳಗಿಂದ ಜೋರಾಗಿ ಎಲ್ಲರೂ ಆ, ಇ, ಉ, ಇ ಎನ್ನುವುದು ರಾಷ್ಟ್ರೀಯ ಹೆದ್ದಾರಿಗೆ ಅಪ್ಪಳಿಸುತ್ತಿತ್ತು. ಒಂದು ದಿನ ಬಸ್ ಕಾಯುತ್ತಿದ್ದ ನನ್ನ ಗೆಳೆಯ ಕೇಳಿದ ‘‘ಅಲ್ಲ ಮರಾಯ, ಮದರಸದೊಳಗೆ ಕರಾಟೆ ಕಲಿಸ್ತಾರ?’’ ನಾನು ನಕ್ಕು ಅವನಿಗೆ ವಿವರಿಸಿದೆ.
ಒಂದನೆ ತರಗತಿಯಲ್ಲಿ ನಮಗೆ ಅ, ಆ, ಇ, ಈ ಕಲಿಸಿದಂತೆಯೇ ಅರಬಿ ಅಕ್ಷರಗಳನ್ನೂ ಕಲಿಸುತ್ತಿದ್ದರು. ವಿಚಿತ್ರವೆಂದರೆ ನಮ್ಮದು ಅರಬಿ ಮಲಯಾಳ. ಅಂದರೆ ಅಕ್ಷರವಷ್ಟೇ ಅರೇಬಿಕ್. ಆದರೆ ಅದರ ಒಳಗಿನ ತಿರುಳು ಮಲಯಾಳಂನಲ್ಲಿರುತ್ತಿತ್ತು. ಅಂದರೆ ಮಲಯಾಳಂನ್ನು ಅರೇಬಿಕ್ ಅಕ್ಷರದಲ್ಲಿ ಬರೆದು ಕಲಿಸುತ್ತಿದ್ದರು. ಆದುದರಿಂದ, ಇತ್ತ ಮಲಯಾಳವನ್ನು ಕಲಿಯದೆ, ಅತ್ತ ಅರೇಬಿಕ್‌ನ್ನು ಅರ್ಥ ಮಾಡಿಕೊಳ್ಳದೆ ನನ್ನ ಸುಮಾರು ಐದು ವರ್ಷದ ಮದರಸದ ಕಲಿಕೆ ವ್ಯರ್ಥವಾಗಿತ್ತು. ಅದಕ್ಕೊಂದು ಮುಖ್ಯ ಕಾರಣವೂ ಇದೆ. ಸಾಧಾರಣವಾಗಿ ದಕ್ಷಿಣ ಕನ್ನಡದ ಮುಸ್ಲಿಮರನ್ನು ಬ್ಯಾರಿಗಳು ಎಂದು ಕರೆಯುತ್ತಾರೆ. ಒಂದು ಕಾಲದಲ್ಲಿ ಈ ಭಾಗದಲ್ಲಿ ‘ಆದಂ ಬ್ಯಾರಿ’ ‘ಯೂಸುಫ್ ಬ್ಯಾರಿ’ ‘ಇದ್ದಿನ್ ಬ್ಯಾರಿ’ ಎಂದೇ ಮುಸ್ಲಿಮರು ಗುರುತಿಸಿಕೊಳ್ಳುತ್ತಿದ್ದರು. ವ್ಯಾಪಾರ, ಪುಂಡಾಟಿಕೆ, ಪಾಳೇಗಾರಿಕೆ, ಸಾಹಸ ಎಲ್ಲವೂಗಳಲ್ಲೂ ಈ ಬ್ಯಾರಿಗಳದ್ದು ಎತ್ತಿದ ಕೈಯಾಗಿತ್ತು. ಆದರೆ ಅದೇನು ದುರಂತವೋ, ನಿಧಾನಕ್ಕೆ ಬ್ಯಾರಿ ಎನ್ನುವ ಅಸ್ಮಿತೆಯೇ ಅವರಿಗೆ ಅವಮಾನವಾಗಿ ಕಾಣತೊಡಗಿತು. ಬ್ಯಾರಿಯ ಅಸ್ಮಿತೆ ಕಳೆದುಕೊಂಡ ಅವರು, ಬಳಿಕ ಬ್ಯಾರಿ ಎಂದು ಯಾರಾದರೂ ಕರೆದರೆ, ಅವಾಚ್ಯ ಶಬ್ದ ಬಳಸಿದಂತೆ ಸಿಟ್ಟಿಗೇಳುತ್ತಿದ್ದರು. ಬ್ಯಾರಿ ಎಂದು ಗುರುತಿಸಲು ಹಿಂಜರಿಯುತ್ತಿದ್ದರು. ಬಹುಶಃ ಅದಕ್ಕೆ ತುಳುವ ಸಮಾಜದ ಸಾಂಸ್ಕೃತಿಕ ಪಲ್ಲಟವೂ ಕಾರಣವಾಗಿರಬಹುದು. ಹಾಗೆಯೇ ಮುಸ್ಲಿಮ್ ಬದುಕಿನಲ್ಲಿ ಕೇರಳದ ಮುಸ್ಲಿಮರ ಪ್ರಭಾವವೂ ಕಾರಣವಾಗಿರಬಹುದು.
ಅದಿರಲಿ. ನಮ್ಮ ಮನೆ ಭಾಷೆ ಬ್ಯಾರಿ. ಕರಾವಳಿಯ ಶೇ. 90ರಷ್ಟು ಮುಸ್ಲಿಮರಿಗೆ ಉರ್ದು ಬರುವುದಿಲ್ಲ. ಆದರೆ ನಮ್ಮ ಭಾಷೆಗೆ ಒಂದು ಸ್ಪಷ್ಟ ಅಸ್ತಿತ್ವವೇ ಇದ್ದಿರಲಿಲ್ಲ. ಯಾವುದಾದರೂ ದಾಖಲೆಗಳಲ್ಲಿ ಭಾಷೆ ಯಾವುದೆಂದು ಕೇಳಿದರೆ ನಾವು ಮಲಯಾಳಂ ಎಂದು ಹೇಳುತ್ತಿದ್ದೆವು. ಯಾಕೆಂದರೆ ಬ್ಯಾರಿ ಭಾಷೆ ಶೇ. 90ರಷ್ಟು ಮಲಯಾಳಂನ್ನು ಹೋಲುತ್ತಿತ್ತು. ಆದರೆ ಅತ್ತ ಮಲಯಾಳಿಗಳು ಬ್ಯಾರಿ ಭಾಷೆಯನ್ನು ಮಲಯಾಳಂ ಎಂದು ಒಪ್ಪುತ್ತಿರಲಿಲ್ಲ. ಅದೆಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಭಾಷೆಯ ಹೆಸರೇನು ಎನ್ನುವುದೂ ನಮಗೆ ಗೊತ್ತಿರಲಿಲ್ಲ. ‘ನಕ್ಕ್-ನಿಕ್ಕ್(ನನಗೆ-ನಿನಗೆ)’ ಎಂದು ಈ ಭಾಷೆಯನ್ನು ನಾವು ಕರೆಯುತ್ತಿದ್ದೆವು. ನಕ್ಕ್-ನಿಕ್ಕ್ ಭಾಷೆ. ಅಂದರೆ ನನಗೆ-ನಿನಗೆ ಅಷ್ಟೇ ಸೀಮಿತವಾದ ಭಾಷೆ ಎಂದು ಬಹುಶಃ ಆಳದಲ್ಲಿ ಒಪ್ಪಿಕೊಂಡಿದ್ದೆವು ಎಂದು ಕಾಣುತ್ತದೆ. (ಈ ಭಾಷೆಯ, ಸಂಘರ್ಷ, ಹೋರಾಟ, ಮತ್ತು ಒಂದು ಯಶೋಗಾಥೆಯ ಕುರಿತ ಇನ್ನಷ್ಟು ವಿವರಗಳನ್ನು ಇನ್ನೊಮ್ಮೆ ಹಂಚಿಕೊಳ್ಳುವೆ).
ನಮ್ಮ ಮದರಸಗಳಿಗೆ ಮುಸ್ಲಿಯಾರುಗಳು ಬೇಕೆಂದರೆ ನಾವು ಕೇರಳದಿಂದಲೇ ತರಿಸಬೇಕು. ಆಗ ಸ್ಥಳೀಯವಾಗಿ ಮುಸ್ಲಿಮರು ಧಾರ್ಮಿಕ ವಿದ್ಯಾಭ್ಯಾಸ ಕಲಿಯುವುದು ಕಡಿಮೆ. ಒಂದು ವೇಳೆ ಕಲಿಯುವುದಿದ್ದರೂ ಕೇರಳದಲ್ಲಿ ಹೋಗಿ ಕಲಿತು ಬರಬೇಕು. ಬರುವಾಗ ಅಪ್ಪಟ ಮಲಯಾಳ ಭಾಷೆಯಲ್ಲಿ ಮಾತನಾಡಿ ನಮ್ಮನ್ನೆಲ್ಲ ಹೆದರಿಸುತ್ತಿದ್ದರು. ಕೇರಳದಿಂದ ಬಂದ ಮುಸ್ಲಿಯಾರರು ನಮಗೆ ಮದರಸದ ಪಠ್ಯಗಳನ್ನು ಮಲಯಾಳಂನಲ್ಲೇ ಬೋಧಿಸುತ್ತಿದ್ದರು. ಪಠ್ಯಗಳಲ್ಲಿರುವ ಅಕ್ಷರಗಳೆಲ್ಲ ಅರೇಬಿಕ್ ಆಗಿದ್ದವು. ಆದರೆ ಮಾಧ್ಯಮ ಮಾತ್ರ ಮಲಯಾಳಂ. ಹೀಗೆ ನಾವು ಅರಬೀ-ಮಲಯಾಳಂ ಮೂಲಕ ಮದ್ರಸಗಳಲ್ಲಿ ಓದಿದೆವು. ಇದರ ಪರಿಣಾಮವಾಗಿ, ನಾವೆಲ್ಲ ಮದರಸದಲ್ಲಿ ಕುರ್‌ಆನನ್ನು ಓದಲು ಮಾತ್ರ ಕಲಿತೆವು. ಆದರೆ ಅದರ ಅರ್ಥ ಗೊತ್ತೇ ಇರಲಿಲ್ಲ. ನಾನು ಕುರ್‌ಆನ್‌ನ್ನು ಅರ್ಥ ಸಹಿತ ಓದಿದ್ದು ಮದರಸ ತೊರೆದ ಎಷ್ಟೋ ವರ್ಷಗಳ ಬಳಿಕ. ಅದೂ ಕನ್ನಡದಲ್ಲಿ. ಕುರ್‌ಆನನ ಕನ್ನಡ ಅನುವಾದ ಬಂದುದರಿಂದ ನಾವು ಕುರ್‌ಆನ್‌ನ್ನು ಅರ್ಥ ಸಹಿತ ಓದುವಂತಾಯಿತು. ಮದರಸ-ಮಸೀದಿ ವತಿಯಿಂದ ವರ್ಷಕ್ಕೊಮ್ಮೆ ಗಂಭೀರ ಮತ ಪ್ರಸಂಗವನ್ನು ಮಾಡುತ್ತಿದ್ದರು. ಅಂದರೆ ಧಾರ್ಮಿಕ ಭಾಷಣ. ಇದಕ್ಕೂ ಕೇರಳದಿಂದಲೇ ವೌಲ್ವಿಗಳು ಭಾಷಣ ಮಾಡಲು ಬರುತ್ತಿದ್ದರು. ಅವರು ಮಲಯಾಳಂನಲ್ಲಿ ಈ ಭಾಷಣವನ್ನು ಮಾಡಿದರೆ ಮಾತ್ರ ಅದಕ್ಕೊಂದು ಮರ್ಯಾದೆ. ನಾವೆಲ್ಲ ಮಲಯಾಳಂ ಎಂದರೆ ಮುಸ್ಲಿಮರ ಭಾಷೆ ಎಂದೇ ತಿಳಿದುಕೊಂಡಿದ್ದೆವು. ಹೇಗೆ ಉತ್ತರ ಕರ್ನಾಟಕದಲ್ಲಿ ಉರ್ದುವನ್ನು ಮುಸ್ಲಿಂ ಭಾಷೆ ಎಂದು ತಪ್ಪು ತಿಳಿದುಕೊಂಡಿದ್ದಾರೋ, ಹಾಗೆಯೇ ನಾವು ಮಲಯಾಳಂ ಕುರಿತಂತೆಯೂ ತಪ್ಪು ತಿಳಿದಿದ್ದೆವು. ಮಲಯಾಳಂ ಮಾತನಾಡುವವರೆಲ್ಲ ಮುಸ್ಲಿಮರು ಎಂದು ನಂಬಿದ್ದೆವು. ಹೀಗಿರುವಾಗ, ನಮ್ಮ ಉಪ್ಪಿನಂಗಡಿ ಸಮೀಪದ ಮುಸ್ಲಿಯಾರರೊಬ್ಬರು ಒಂದು ಕ್ರಾಂತಿಯನ್ನು ಮಾಡಿದರು. ಅವರು ಕೇರಳದಲ್ಲಿ ಕಲಿತು ಬಂದವರೇ ಆಗಿದ್ದರೂ, ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗವನ್ನು ಹೇಳಲು ಶುರು ಮಾಡಿದರು. ಇದು ಆಸುಪಾಸಿನಲ್ಲೆಲ್ಲ ಕುತೂಹಲಕ್ಕೆ ಕಾರಣವಾಗಿತ್ತು. ‘‘ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗವೆ?’’ ಎಂದು ಎಲ್ಲರೂ ಕಿಸ್ಸಕ್ಕನೆ ನಗುತ್ತಿದ್ದರು.
ಒಂದು ದಿನ ನಮ್ಮ ಮಸೀದಿಗೂ ಅವರನ್ನು ಕರೆಯಲಾಯಿತು. ಅವರು ಬ್ಯಾರಿ ಭಾಷೆಯಲ್ಲಿ ಮತಪ್ರಸಂಗ ಮಾಡುತ್ತಿದ್ದರೆ ನಾವೆಲ್ಲ ಕಿಸಕಿಸನೆ ನಗುತ್ತಿದ್ದೆವು. ಯಾಕೆಂದರೆ, ಆಳದಲ್ಲಿ ನಾವೆಲ್ಲ ನಾವಾಡುವ ಬ್ಯಾರಿ ಭಾಷೆಯ ಬಗ್ಗೆ ಕೀಳರಿಮೆಯಿಂದ ನರಳುತ್ತಿದ್ದೆವು. ಆದರೆ ನಿಧಾನಕ್ಕೆ ಅವರ ಪ್ರಸಂಗ ನಮಗೆಲ್ಲ ಇಷ್ಟವಾಗತೊಡಗಿತು. ಆ ಬಳಿಕ ಅವರು ಬ್ಯಾರಿ ಭಾಷೆಯಲ್ಲಿ ಮತ ಪ್ರಸಂಗ ನೀಡುವುದಕ್ಕಾಗಿಯೇ ಜನಪ್ರಿಯರಾದರು.
ಏಳಾಂ ಅರಿವು: ಮುರುಗದಾಸನಲ್ಲ, ಮೂರ್ಖದಾಸ!
ದೊಡ್ಡ ಯಶಸ್ಸು, ದೊಡ್ಡ ಪ್ರತೀಕ್ಷೆಗಳು ಕೆಲವೊಮ್ಮೆ ಸೃಜನಶೀಲ ಕಲಾವಿದನ ಕಣ್ಣಿಗೆ ಕತ್ತಲನ್ನು
ಕವಿಸುತ್ತದೆ. ‘ಘಜಿನಿ’ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಎ. ಆರ್. ಮುರುಗದಾಸ್ ಆ ಯಸಸ್ಸಿನ ಅಮಲಿನಲ್ಲಿದ್ದಾಗಲೇ ‘ಏಳಾಂ ಅರಿವು’ ಚಿತ್ರವನ್ನು ಘೋಷಿಸಿದರು. ಚಿತ್ರದ ಹೆಸರು, ವಿಭಿನ್ನ ಕತೆ, ನಾಯಕ ಪಾತ್ರದಲ್ಲಿರುವ ಸೂರ್ಯ ಇವೆಲ್ಲವೂ ಚಿತ್ರದ ಕುರಿತಂತೆ ಅಗಾಧ ನಿರೀಕ್ಷೆಯನ್ನು ಹುಟ್ಟಿಸಿ ಹಾಕಿತು. ಮಾಧ್ಯಮಗಳೂ ಸೇರಿದಂತೆ ರಾಷ್ಟ್ರಮಟ್ಟದ ಚಿತ್ರೋದ್ಯಮಿಗಳ ಕಣ್ಣು ‘ಏಳಾಂ ಅರಿವು’ ಚಿತ್ರದ ಮೇಲಿದ್ದವು ಘಜಿನಿ ಚಿತ್ರದಲ್ಲಿ ಪ್ರೇಮ ಮತ್ತು ಸೇಡನ್ನು ವಿಭಿನ್ನವಾಗಿ ನಿರೂಪಿಸಿದ ರೀತಿ ಎಲ್ಲರಿಂದಲೂ ಮೆಚ್ಚುಗೆ ಗಳಿಸಿತ್ತು. ಕ್ಷಣ ಕ್ಷಣಗಳನ್ನು ಕುತೂಹಲಕರವಾಗಿ ಕಟ್ಟಿಕೊಟ್ಟಿದ್ದರು ಮುರುಗದಾಸ್. ಇಂತಹ ನಿರ್ದೇಶಕರೊಬ್ಬ ‘ಬೌದ್ಧ ಸನ್ಯಾಸಿ’ಯೊಬ್ಬನ ಕತೆಯನ್ನು ಚಿತ್ರದ ಮೇಲೆ ತೋರಿಸುತ್ತೇನೆ ಎಂದಾಗ ಎಲ್ಲರ ಗಮನ ಅತ್ತ ಹರಿಯುವುದು ಸಹಜ.
‘ಏಳಾಂ ಅರಿವು’ ಚಿತ್ರವನ್ನು ನೋಡಿದಾಕ್ಷಣ ಮುರುಗದಾಸ್ ಯಶಸ್ಸಿನ ಭಾರವನ್ನು ಬೆನ್ನಲ್ಲಿ ಕಟ್ಟಿಕೊಂಡು ಏದುಸಿರು ಬಿಡುತ್ತಿರುವುದು ಸ್ಪಷ್ಟವಾಗುತ್ತದೆ. ಅತ್ತ ಸಾಹಸ ಪ್ರಧಾನ ಚಿತ್ರವೂ ಆಗದೆ, ಇತ್ತ ಯಾವ ಯಾವ ಏಳನೇ ಅರಿವನ್ನು ಕಟ್ಟಿಕೊಡಗಲಾಗದೆ, ಕ್ಲೈಮಾಕ್ಸ್‌ನಲ್ಲಿ ತಮಿಳರ ಮೇಲಾಗುವ ದೌರ್ಜನ್ಯ ಮತ್ತು ತಮಿಳರು ಹೊಂದ ಬೇಕಾದ ಜಾಗೃತಿಯ ಕುರಿತ ರಾಜಕೀಯ ಭಾಷಣದೊಂದಿಗೆ ಚಿತ್ರ ಮುಗಿಯುತ್ತದೆ. ಈ ಭಾಷಣವನ್ನು ಕೇಳುವುದಕ್ಕಾಗಿ ಮೂರು ಗಂಟೆ ಚಿತ್ರಮಂದಿರದೊಳಗೆ ಕಳೆದೆವೇ ಎಂಬ ‘ಎಂಟನೆ ಅರಿವು’ ನಮಗಾಗುತ್ತದೆ.
1600 ವರ್ಷಗಳ ಹಿಂದೆ ತಮಿಳಿನಾಡಿನಿಂದ ಚೀನಾಕ್ಕೆ ತೆರಳಿದ ಬೋಧಿಧರ್ಮ ಎಂಬ ತಮಿಳಿಗ ಸನ್ಯಾಸಿ ಅಲ್ಲಿನ ಜನರ ಸಂಕಟಗಳ ಪರಿಹಾರಕ್ಕೆ ಕಾರಣವಾಗುತ್ತಾನೆ. ಭೀಕರ ಕಾಯಿಲೆಯೊಂದು ಚೀನಾದ ಜನರ ಮೇಲೆರಗಿದಾಗ ಅವರನ್ನು ರೋಗದಿಂದ ಕಾಪಾಡುತ್ತಾನೆ. ಶತ್ರುಗಳು ಅವರ ಮೇಲೆರಗಿದಾಗ, ತನ್ನ ಕುಂಗ್‌ಫು ಮೂಲಕ ಅವರನ್ನು ಉಳಿಸುತ್ತಾನೆ. ಅಷ್ಟೇ ಅಲ್ಲ ಅವರೆಲ್ಲರಿಗೂ ಸಮರಕಲೆಯನ್ನು ಕಲಿಸಿಕೊಡುತ್ತಾನೆ. ಅವರೆಲ್ಲರ ಆರಾಧ್ಯನಾಗುತ್ತಾನೆ. ಮುಂದೆ ತನ್ನ ಕೆಲಸ ಮುಗಿಸಿ ವೃದ್ಧಾಪ್ಯ ಹತ್ತಿರವಾಗುತ್ತಿರುವಾಗ ಅವನು ಮರಳಿ ತಾಯಿ ನಾಡಿಗೆ ಹೊರಡಲು ತೀರ್ಮಾನಿಸುತ್ತಾನೆ. ಆದರೆ ಅವನು ತಮ್ಮ ಮಣ್ಣಲ್ಲೇ ಮಣ್ಣಾಗಬೇಕು. ಅದರಿಂದ ಊರಿಗೆ ಒಳ್ಳೆಯದಾಗುತ್ತದೆ ಎನ್ನುವುದು ಚೀನಾದ ಜನರ ಆಶಯ. ಆದುದರಿಂದ ಆತನ ಅನ್ನದಲ್ಲಿ ವಿಷ ಹಾಕಿ ಕೊಡುತ್ತಾರೆ. ಇದು ಬೋದಿಧರ್ಮನಿಗೆ ಗೊತ್ತಾಗುತ್ತದೆ. ಜನರ ಆಶಯದಂತೆ, ಆ ಅನ್ನವನ್ನು ತಿಂದು, ಅಲ್ಲೇ ಮಣ್ಣಾಗುತ್ತಾನೆ.
ಇದು ಆರಂಭದ 20 ನಿಮಿಷಗಳ ಕತೆ. ಇಷ್ಟನ್ನು ನಿರ್ದೇಶಕರು ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ. ಬೋಧಿಧರ್ಮನ ಪಾತ್ರವನ್ನು ಸೂರ್ಯಕೂಡ ಆವಾಹಿಸಿಕೊಂಡಿದ್ದಾರೆ. ಎಲ್ಲೂ ಪಾತ್ರ ಗಾಂಭೀರ್ಯ ಕಳೆದುಹೋಗದಂತೆ ಜಾಗರೂಕತೆ ವಹಿಸಿದ್ದಾರೆ. ಆದರೆ ಚಿತ್ರದ ಅಧ್ವಾನ ಆರಂಭವಾಗುವುದು ತದನಂತರ. ಕತೆ, ನಿರ್ದೇಶನ, ಸಂಕಲನ ಎಲ್ಲವೂ ಈ ಅಧ್ವಾನಗಳಿಗೆ ಸಹಕರಿಸುತ್ತದೆ. 1600 ವರ್ಷಗಳ ಬಳಿಕ ಕತೆ ಆಧುನಿಕ ರೂಪವನ್ನು ಪಡೆಯುತ್ತದೆ. ಚೀನ ದೇಶ ಭಾರತದ ಮೇಲೆ ಜೈವಿಕ ಯುದ್ಧವನ್ನು ಹೇರಲು ಬಯಸುತ್ತದೆ. ಅದಕ್ಕಾಗಿ ಡೋಂಗ್ಲೀ(ಜೋನಿ ಟ್ರಿ ಗುಯೇನ್) ಎಂಬ ಏಜೆಂಟ್‌ನನ್ನು ಆರಿಸಿಕೊಳ್ಳುತ್ತದೆ. ಈತ ಮಾರ್ಷಲ್ ಆರ್ಟ್ ಮಾತ್ರವಲ್ಲ, ಇಪ್ನಾಟಿಸಂ ಸೇರಿದಂತೆ ಹಲವು ಸಮರ ಕಲೆಗಳಲ್ಲಿ ಪ್ರವೀಣ. ‘ಆಪರೇಷನ್ ರೆಡ್’ ಎಂದು ತನ್ನ ಕಾರ್ಯಾಚರಣೆಗೆ ಚೀನ ಹೆಸರಿಡುತ್ತದೆ.
ಇತ್ತ ಭಾರತದಲ್ಲಿ ಶುಭಾ ಶ್ರೀನಿವಾಸನ್(ಶ್ರುತಿ ಹಾಸನ್) ಎಂಬ ವಿಜ್ಞಾನಿ ವಂಶವಾಹಿಯ ಕುರಿತಂತೆ ಸಂಶೋಧನೆ ನಡೆಸುತ್ತಿರುತ್ತಾಳೆ. ತನ್ನ ಅಧ್ಯಯನಕ್ಕೆ ಬೋಧಿಧರ್ಮನನ್ನೇ ಆರಿಸಿಕೊಂಡು ಆತನ ಡಿಎನ್‌ಎ ಹೊಂದಿದವರು ಯಾರಾದರೂ ಈಗ ಅವನ ವಂಶದಲ್ಲಿದ್ದಾರೆಯೋ ಎನ್ನುವುದನ್ನು ಅನ್ವೇಷನೆ ನಡೆಸುತ್ತಿರುತ್ತಾಳೆ. ಆಗ ಅರವಿಂದ್(ಸೂರ್ಯ) ಎಂಬ ಸರ್ಕಸ್ ಉದ್ಯೋಗಿ ಆ ವಂಶದವನೆನ್ನುವುದು, ಆತ ಆ ಡಿಎನ್‌ಎ ಹೊಂದಿದ್ದಾನೆ ಎನ್ನುವುದು ಅವಳಿಗೆ ತಿಳಿಯುತ್ತದೆ. ಆತನನ್ನು ಪ್ರೀತಿಸಿದಂತೆ ನಾಟಕವಾಗಿ ತನ್ನ ಸಂಶೋಧನೆಗೆ ಅವನನ್ನು ಗಿನಿಪಿಗ್ ಆಗಿ ಬಳಸಿಕೊಳ್ಳುತ್ತಾಳೆ. ತನ್ನ ಸಂಶೋಧನೆಯನ್ನು ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೂ ಕಳುಹಿಸಿಕೊಡುತ್ತಾಳೆ.
ಅಂದ ಹಾಗೆ ಆಪರೇಶನ್ ರೆಡ್‌ನ ಉದ್ದೇಶ ಏನೆಂದರೆ ಭಾರತದಲ್ಲಿ ಮಾರಕ ರೋಗವನ್ನು ನಾಯಿಯೊಂದಕ್ಕೆ ಇಂಜೆಕ್ಟ್ ಮಾಡುವುದು. ಅದರ ಮೂಲಕ ಮಿಂಚಿನ ವೇಗದಲ್ಲಿ ಈ ರೋಗ ಹರಡತೊಡಗುತ್ತದೆ. ಈ ರೋಗಕ್ಕೆ ಮದ್ದು ಭಾರತದಲ್ಲಿ ಕಂಡು ಹಿಡಿದಿರುವುದಿಲ್ಲ. ಆದರೆ ಚೀನಾದವರು ಈ ಮದ್ದನ್ನು ಸಿದ್ಧುಪಡಿಸಿಕೊಂಡಿರುತ್ತಾರೆ. ಹೇಗೆ ಗೊತ್ತೆ? 1600 ವರ್ಷಗಳ ಹಿಂದೆ ಚೀನಾದಲ್ಲಿ ಮಾರಕ ರೋಗ ಬಂದಿತ್ತಲ್ಲ, ಆಗ ಬೋಧಿಧರ್ಮ ಅವರನ್ನೆಲ್ಲ ವಾಸಿ ಮಾಡಿದ್ದನಲ್ಲ ಅದೇ ಮದ್ದು. ಭಾರತದಲ್ಲಿ ಲಕ್ಷಾಂತರ ಜನ ಸಾಯುವಾಗ ಈ ಮದ್ದಿಗಾಗಿ ಚೀನ ಹೇಳಿದಂತೆ ಭಾರತ ಕೇಳಬೇಕಾಗುತ್ತದೆ. ಇದು ಆಪರೇಷನ್ ರೆಡ್‌ನ ಗುರಿ.
ಇತ್ತ ಅರವಿಂದ್‌ನ ಡಿಎನ್‌ಎಯ ಮೂಲಕ ಬೋಧಿಧರ್ಮನನ್ನು ಮತ್ತೆ ತರಲು ಸಾಧ್ಯವೇ ಎನ್ನುವ ಸಂಶೋಧನೆಯನ್ನು ಶುಭಾ ಮಾಡುತ್ತಿರುವುದು ಚೀನಾಕ್ಕೆ ಸಿಟ್ಟು ತರಿಸುತ್ತದೆ. ಆಕೆಯನ್ನು ಕೊಲ್ಲುವುದಕ್ಕೆ ಏಜೆಂಟ್ ಡೋಂಗ್ಲಿ ನಿರ್ಧರಿಸುತ್ತಾನೆ. ಇದರ ಜೊತೆಗೆ ಡೋಂಗ್ಲಿ ನಾಯಿಯ ಮೂಲಕ ಹರಡಿದ ರೋಗ ತಮಿಳು ನಾಡಿನಾದ್ಯಂತ ಹರಡುತ್ತದೆ. ಇದರ ಕಾರಣ ಏನು ಎನ್ನುವುದು ಶುಭಾ ಮೂಲಕ ಅರವಿಂದ್‌ನಿಗೂ ಗೊತ್ತಾಗುತ್ತದೆ. ಶುಭಾ ಹೇಳುವ ಮಾತನ್ನು ಯಾವ ವೈದ್ಯರೂ ನಂಬುತ್ತಿಲ್ಲ. ಆದುದರಿಂದ ಇವರು ಪ್ರತ್ಯೇಕ ಪ್ರಯೋಗಾಲಯದಲ್ಲಿ ಅರವಿಂದ್‌ನನ್ನು ಇಟ್ಟುಕೊಂಡು ಮತ್ತೆ ಬೋಧಿಧರ್ಮನಿಗೆ ಪುನರ್‌ಜ್ಜೀವ ಕೊಡುವ ಪ್ರಯತ್ನ ನಡೆಸುತ್ತಾರೆ. ಇದೇ ಸಂದರ್ಭದಲ್ಲಿ ಡೋಂಗ್ಲಿಯೂ ಇವರನ್ನು ಹುಡುಕುತ್ತಾ ಬರುತ್ತಾನೆ. ಚಿತ್ರದ ಕೊನೆಯಲ್ಲಿ ಡೋಂಗ್ಲಿ ಮತ್ತು ಬೋಧಿಧರ್ಮರ ನಡುವೆ ಮುಖಾಮುಖಿಯಾಗುತ್ತದೆ. ಕತೆ ಕೇಳಿ ಸುಸ್ತಾಯಿತೆ?
ಕನಿಷ್ಠ ತನ್ನ ಎಂದಿನ ಬಿಗಿ ನಿರೂಪಣೆ, ನಿರ್ದೇಶನದ ಮೂಲಕವಾದರೂ ಈ ಚಿತ್ರವನ್ನು ಪರಿಣಾಮಕಾರಿಯಾಗಿ ಮಾಡಿದ್ದಾರೆಯೋ ಎಂದರೆ ಅದೂ ಇಲ್ಲ. ಸಡಿಲವಾದ ನಿರ್ದೇಶನ. ಜಾಳು ನಿರೂಪಣೆ. ಕತೆಯ ಓಘ ಕೃತಕವಾಗಿದೆ. ಸೂರ್ಯನ ನಟನೆ ಪೇಲವವಾಗಿದೆ. ಶೃತಿ ಹಾಸನ್ ಗೊಂಬೆಯಂತೆ ನಟಿಸಿದ್ದಾರೆ. ಮುಖದಲ್ಲಿ ಭಾವನೆಗಳೇ ಇಲ್ಲ. ಅವರು ಆಡುವ ಇಂಗ್ಲಿಷ್ ತಮಿಳನ್ನು ಕೇಳಿದರೆ ಕಮಲ್ ಹಾಸನ್ ಮುಖಮುಚ್ಚಿಕೊಳ್ಳಬೇಕು. ಎಲ್ಲಕ್ಕಿಂತ ವಿಚಿತ್ರವೆಂದರೆ, ಅಂತ್ಯದಲ್ಲಿ ಚಿತ್ರವನ್ನು ಒಂದು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿರುವುದು. ಸರ್ಕಸ್‌ನಲ್ಲಿ ಸಿಬ್ಬಂದಿಯಾಗಿರುವ ಅರವಿಂದ್, ತಮಿಳರ ಮೇಲೆ ಜಗತ್ತಿನಾದ್ಯಂತ ನಡೆಯುತ್ತಿರುವ ಶೋಷಣೆ, ದೌರ್ಜನ್ಯದ ಕುರಿತಂತೆ ಆಗಾಗ ಭಾಷಣ ಕೊರೆಯತೊಡಗುತ್ತಾನೆ. ತಮಿಳರು ತಮ್ಮ ಅಸ್ಮಿತೆಯನ್ನು ಮರೆತಿದ್ದಾರೆ. ತಮ್ಮ ರಕ್ತಕಣಗಳಲ್ಲಿ ಬೋಧಿಧರ್ಮರಂತಹ ಮಹಾತ್ಮರಿದ್ದಾರೆ, ಅವರಿಗೆ ಜೀವ ನೀಡಬೇಕು....ಎಂಬಿತ್ಯಾದಿಯಾಗಿ...ಹೇಳಿಕೆ ನೀಡುವುದು. ಕ್ಯಾಪ್ಟನ್ ಪ್ರಭಾಕರನ್ ಅವರ ಹತ್ಯೆಯ ಕುರಿತಂತೆಯೂ ಈತ ತನ್ನ ಸಿಟ್ಟನ್ನು ವ್ಯಕ್ತಪಡಿಸುತ್ತಾನೆ ‘‘ಒಂಬತ್ತು ದೇಶಗಳು ಸೇರಿ ಒಬ್ಬನನ್ನು ಕೊಲ್ಲುವುದು ಯುದ್ಧವಲ್ಲ, ದ್ರೋಹ’’ ಎಂಬೆಲ್ಲ ಘೋಷಣೆಗಳು ಆಗಾಗ ಕೇಳಿ ಬರುತ್ತದೆ. ಚಿತ್ರ ಹಳಿ ತಪ್ಪಿರುವುದು ನಿರ್ದೇಶಕನ ಗಮನಕ್ಕೆ ಬಂದಿದೆ. ಆದುದರಿಂದಲೇ ಚಿತ್ರ ಮನರಂಜನೆಯ ಹಳಿಯಿಂದ ಜಾರಿ, ರಾಜಕೀಯ ಉದ್ದೇಶಕ್ಕೆ ವಾಲಿಕೊಳ್ಳುತ್ತದೆ. ಚಿತ್ರದಲ್ಲಿ ಅರವಿಂದ್‌ನ ಡಿಎನ್‌ಎಯಯಿಂದ ಬೋಧಿಧರ್ಮನನ್ನು ಜಾಗೃತಿಗೊಳಿಸುವುದಂತೂ ತಮಾಷೆಯಾಗಿದೆ. ವಿಜ್ಞಾನವೋ, ಜಾದುವೋ, ಮಂತ್ರವೋ ಒಂದೂ ಅರ್ಥವಾಗುವುದಿಲ್ಲ. ಅಂತೂ ಬೋಧಿಧರ್ಮ ಮತ್ತೆ ಬಂದು ಡೋಂಗ್ಲಿಯನ್ನು ಕೊಂದು, ಮಾರಕರೋಗವನ್ನು ವಾಸಿ ಮಾಡುತ್ತಾನೆ. ಜೊತೆಗೆ, ತಮಿಳರನ್ನು ಜಾಗೃತಿಗೊಳಿಸುವ ಕೆಲಸವನ್ನೂ ಮಾಡುತ್ತಾನೆ. ಇರುವುದರಲ್ಲಿ ಚೀನಾ ನಟ ಜೋ ಟ್ರಿಯ ಡೋಂಗ್ಲಿ ಪಾತ್ರ ಫೈಟಿಂಗ್ ನೋಡುವಂತಿದೆ.
ಮುರುಗದಾಸ್ ಒಂದು ಒಳ್ಳೆಯ ಕಲ್ಪನೆಯನ್ನು ಕೈಗೆತ್ತಿಕೊಂಡಿದ್ದಾರೆ. ಇದರಲ್ಲಿ ಅನುಮಾನವಿಲ್ಲ. ಆದರೆ ಯಾವುದೇ ಹೋಮ್‌ವರ್ಕ್‌ಗಳನ್ನು ಮಾಡಿಕೊಂಡಂತಿಲ್ಲ. ಅವರ ಅತಿ ಆತ್ಮವಿಶ್ವಾಸ ಅವರಿಗೆ ಕೈಕೊಟ್ಟಿದೆ. ಹ್ಯಾರಿಸ್ ಜಯರಾಜ್ ಅವರ ಸಂಗೀತದಲ್ಲೂ ಹೇಳಿಕೊಳ್ಳುವಂತಹದ್ದೇನೂ ಇಲ್ಲ. ಮುರುಗದಾಸ್ ಈ ಚಿತ್ರದ ಮೂಲಕ ಮೂರ್ಖದಾಸ್ ಆಗಿದ್ದಾರೆ.
ವೀಡಿಯೋ ಗೇಮ್ ಮಟ್ಟದಿಂದ ಮೇಲೇರದ ‘ರಾ-ವನ್’
‘ರಾ-ವನ್’ ಚಿತ್ರಕ್ಕೆ ಶಾರುಕ್ ತಂಡ ಈ ಬಗೆಯ ಪ್ರಚಾರ, ಹಣ, ವದಂತಿಗಳನ್ನು ಸುರಿಯದೇ ಇದ್ದಿದ್ದರೆ ನಾವು ಈ ಚಿತ್ರವನ್ನು ಒಮ್ಮೆ ನೋಡಿ ‘ಪರವಾಗಿಲ್ಲ’ ಎಂದು ಹೇಳಿ ಮರೆತು ಬಿಡಬಹುದಿತ್ತು. ಆದರೆ ಅದಕ್ಕೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದ್ದಾರೆ ಸ್ವತಃ ಶಾರುಕ್ ಎನ್ನುವ ಸ್ಟಾರ್ ನಟ. ಸಿನಿಮಾವೊಂದನ್ನು ಪ್ರಚಾರದ ಮೂಲಕವೇ ಗೆಲ್ಲಿಸಲು ಮುಂದಾದರೆ, ಒಂದು ಚಿತ್ರದ ತೂಕಕ್ಕಿಂತ ಭಾರವಾದ ನಿರೀಕ್ಷೆಗಳನ್ನು, ವದಂತಿಗಳನ್ನು ಮಾಧ್ಯಮಗಳ ಮೂಲಕ ಬಿತ್ತಿದರೆ ಏನಾಗಬಹುದೇ ಅದೇ ‘ರಾ-ವನ್’ಗೂ ಆಗಿದೆ. ಒಂದು ವೀಡಿಯೋ ಗೇಮ್‌ಗೆ ಸರಿಗಟ್ಟಬಹುದಾದ ಚಿತ್ರಕ್ಕೆ ಈ ಪರಿಯಾದ ಪ್ರಚಾರಕವನ್ನು ಶಾರುಕ್ ಯಾಕೆ ಕೊಟ್ಟರು? ಎನ್ನುವುದೇ ಒಂದು ದೊಡ್ಡ ಪ್ರಶ್ನೆ. ಸ್ಟಾಂಪ್ ಸೈಝ್‌ನ ಫೋಟೋ
ಗೆ ಆಕಾಶದೆತ್ತರದ ಚೌಕಟ್ಟು ನಿರ್ಮಿಸಿದಂತಿದೆ, ರಾ-ವನ್ ಪ್ರಚಾರಕ್ಕಾಗಿ ಶಾರುಕ್ ಸುರಿದ ಹಣ.
ಈಗಾಗಲೇ ರಜನೀಕಾಂತ್ ‘ಎಂದಿರನ್’ ಅಥವಾ ‘ರೋಬೊಟ್’ ಮೂಲಕ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ರಜನೀಕಾಂತ್ ಅವರ ಚಿಟ್ಟಿ ರೋಬೋಟ್ ಎಲ್ಲರ ಮೆಚ್ಚುಗೆಯನ್ನು ಗಳಿಸಿತ್ತು. ಏಕಕಾಲದಲ್ಲಿ ಒಳಿತು-ಕೆಡುಕಿನ ಪಾತ್ರಗಳನ್ನು ಆವಾಹಿಸಿಕೊಂಡ ಚಿಟ್ಟಿ, ತನ್ಮೂಲಕ ಮನುಷ್ಯ ಜಗತ್ತಿಗೆ ಹೃದಯಸ್ಪರ್ಶಿಸಂದೇಶವೊಂದನ್ನು ನೀಡುತ್ತಾನೆ. ಪ್ರೀತಿಗಾಗಿ ಹಪಹಪಿಸುವ ಯಂತ್ರವೊಂದು, ಅಂತಿಮವಾಗಿ ಅದನ್ನು ದಕ್ಕಿಸುವುದಕ್ಕಾಗಿ ಮನುಷ್ಯನ ಮೂಲಕವೇ ವಿಲನ್ ಆಗಿ ಪರಿವರ್ತನೆ ಹೊಂದುತ್ತದೆ. ಪ್ರೀತಿಗಾಗಿ ಮನುಷ್ಯನ ಜೊತೆಗೆ ಸ್ಪರ್ಧೆಗೆ ನಿಂತು ವಿಫಲವಾಗುತ್ತದೆ. ಅಂತಿಮವಾಗಿ, ತನ್ನನ್ನು ತಾನೇ ನ್ಯಾಯಾಲಯದಲ್ಲಿ ಕೊಂದುಕೊಳ್ಳುತ್ತದೆ. ಹಣ, ಸಾಹಸ ಮತ್ತು ಹೃದಯಸ್ಪರ್ಶಿ ಕತೆ. ಇದನ್ನು ಬೆಸೆದ ಸೂಪರ್‌ಸ್ಟಾರ್ ರಜನೀಕಾಂತ್. ರೋಬೊಟ್‌ನ್ನು ಮೆಚ್ಚಲು ಇದಕ್ಕಿಂತ ಹೆಚ್ಚೇನು ಬೇಕು?
ಶಾರುಕ್‌ಖಾನ್ ಮಾಡಿದ ಮೊದಲ ತಪ್ಪು, ರಜನೀಕಾಂತ್ ಅವರ ರೋಬೊಟ್ ಜೊತೆಗೆ ‘ರಾ-ವನ್’ನ್ನು ಸ್ಪರ್ಧೆಗಿಳಿಸಿದ್ದು. ಇದು ಎರಡು ಸೂಪರ್ ಸ್ಟಾರ್‌ಗಳ, ಸೂಪರ್ ಪವರ್‌ಗಳ ಜಂಗೀಕುಸ್ತಿಯಾಗಿ ಮಾರ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ರಾ-ವನ್ ಮೂಲಕ ಜನರು ಭಾರೀ ದೊಡ್ಡದನ್ನೇ ನಿರೀಕ್ಷಿಸಿದರು. ಅಂದರೆ ರೋಬೋಟ್‌ಗಿಂತಲ್ಲೂ ಸಮರ್ಥನಾದ ಸೂಪರ್‌ಮ್ಯಾನ್‌ನ ನಿರೀಕ್ಷೆಯಲ್ಲಿದ್ದರು. ಆದರೆ ಗೋಮಟನ ನಿರೀಕ್ಷೆಯಲ್ಲಿರುವ ಜನರ ಕೈಗೆ ವೀಡಿಯೋ ಗೇಮೊಂದರ ವಿಸಿಡಿಯನ್ನು ನೀಡಿ ಕೈತೊಳೆದುಕೊಂಡಿದ್ದಾರೆ ಶಾರುಕ್. ಕತೆಯಲ್ಲಾಗಲಿ, ಪಾತ್ರಗಳಲ್ಲಾಗಲಿ ಜೀವಂತಿಕೆಯಿಲ್ಲ. ಒಂದು ವಾಕ್ಯದಲ್ಲಿ ಹೇಳಿ ಮುಗಿಸಬಹುದಾದ ಕತೆ. ನಾಯಕ, ಖಳನಾಯಕ. ಇವರ ಮಧ್ಯೆ ಒಂದು ಮಗು. ರಾ-ವನ್ ಅರ್ಥಾತ್ ರಾವಣ್ ಎಂಬ ಖಳನಾಯಕನಿಂದ ಈ ಮಗುವನ್ನು ರಕ್ಷಿಸುವ ಸೂಪರ್ ಪವರ್ ಉಳ್ಳ ಜಿ-ವನ್ ಅರ್ಥಾತ್ ಜೀವನ್. ಶೇಖರ್ ಸುಬ್ರಹ್ಮಣ್ಯನ್ (ಶಾರುಕ್‌ಖಾನ್) ತನ್ನ ಮಗ ಪ್ರತೀಕ್‌ನಿಗಾಗಿಯೇ ಒಂದು ವಿಶೇಷ ವೀಡಿಯೋ ಗೇಮ್‌ನ್ನು ಮಾಡುವುದಕ್ಕೆ ಹೊರಡುತ್ತಾನೆ. ಮಗನಿಗೆ ನಾಯಕನಿಗಿಂತ ಖಳನಾಯಕನ ಮೇಲೆಯೇ ಇಷ್ಟ. ಆದುದರಿಂದ ಸೂಪರ್ ಪವರ್ ಉಳ್ಳ ಖಳನಾಯಕ ‘ರಾ-ವನ್’ನ್ನು ಸಿದ್ಧಪಡಿಸಲು ಮುಂದಾಗುತ್ತಾನೆ. ಜೊತೆಗೆ ಅವನನ್ನು ಎದುರಿಸಲು ಜಿ-ವನ್‌ನ್ನು ಕೂಡ. ಆದರೆ ರಾ-ವನ್ ಶೇಖರ್‌ನ ಕೈ ಮೀರುತ್ತದೆ. ಅದರ ಬಿಡುಗಡೆಯ ಸಮಾರಂಭದ ವೇಳೆ, ಬಾಲಕ ಪ್ರತೀಕ್ ರಾ-ವನ್ ಜೊತೆ ಆಡುವುದಕ್ಕೆ ಮುಂದಾಗುತ್ತಾನೆ. ಒಂದು ಹಂತದಲ್ಲಿ ಪ್ರತೀಕ್ ಆಟವನ್ನು ನಿಲ್ಲಿಸ ಬಯಸಿದರೂ ರಾ-ವನ್ ಆಟವನ್ನು ನಿಲ್ಲಿಸುವುದಕ್ಕೆ ಒಪ್ಪುವುದಿಲ್ಲ. ಅದು ಪ್ರತೀಕ್‌ನನ್ನು ಕೊಲ್ಲುವುದಕ್ಕೆ ನಿರ್ಧರಿಸುತ್ತದೆ. ಅಂದರೆ ಆಟದಿಂದ ಹೊರಗೆ ಪ್ರತೀಕ್‌ನನ್ನು ಹುಡುಕಿಕೊಂಡು ಬರುತ್ತದೆ. ಈ ಹಂತದಲ್ಲಿ ಪ್ರತೀಕ್‌ನ ತಂದೆ ಶೇಖರ್‌ಸುಬ್ರಹ್ಮಣ್ಯನನ್ನು ಕೊಂದು ಹಾಕುತ್ತದೆ. ಅಂತಿಮವಾಗಿ ರಾ-ವನ್ ವಿರುದ್ಧ ಜಿ-ವನ್‌ನನ್ನು ಸಿದ್ಧಪಡಿಸಬೇಕಾಗುತ್ತದೆ. ಜೀ-ವನ್ ಪ್ರತೀಕ್‌ನನ್ನು ರಕ್ಷಿಸಲು ಗೇಮ್ಸ್‌ನಿಂದ ಹೊರ ಬರುತ್ತಾನೆ. ಉಳಿದಂತೆ ಒಳಿತು-ಕೆಡುಕುಗಳ ನಡುವೆ ತಿಕ್ಕಾಟ. ಅಂತಿಮವಾಗಿ ಜಿ-ವನ್ ರಾವಣ್‌ನನ್ನು ಕೊಲ್ಲಲೇ ಬೇಕಲ್ಲ?
ದೃಶ್ಯ, ದೃಶ್ಯಗಳಲ್ಲೂ ವಿಶೇಷವನ್ನು ಅರಸಿಹೋದ ಪ್ರೇಕ್ಷಕರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಯಾಕೆಂದರೆ, ರಾ-ವನ್ ಆಗಲಿ, ಜೀ-ವನ್ ಆಗಲಿ ಎಲ್ಲೂ ರಜನೀಕಾಂತ್ ಅವರ ರೋಬೊಟ್ ಚಿಟ್ಟಿಯನ್ನು ಸರಿಗಟ್ಟುವುದಿಲ್ಲ. ಎಂದಿರನ್‌ನ ಅರ್ಧಕ್ಕೂ ಬರುವುದಿಲ್ಲ ಶಾರುಕ್ ಅವರ ‘ರಾ-ವನ್’. ಇಲ್ಲಿ ಪಾತ್ರಗಳಿಗೆ ಬೆಳೆಯುವುದಕ್ಕೆ ಅವಕಾಶವೇ ಇಲ್ಲ. ಈ ಕಾರಣದಿಂದಲೇ ಇಡೀ ಚಿತ್ರ ವೀಡಿಯೋ ಗೇಮ್ ಮಟ್ಟಕ್ಕಿಂತ ಮೇಲೇರುವುದಿಲ್ಲ. ಕರೀನಾ ಕಪೂರ್, ಶಾರುಕ್ ಖಾನ್ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ನೀಡಿದ್ದಾರೆ ಎನ್ನುವುದನ್ನಷ್ಟೇ ಹೇಳಬಹುದು.
ಸಾಹಸ ದೃಶ್ಯಗಳ ಮೂಲಕವಾದರೂ ಗಮನ ಸೆಳೆಯುತ್ತದೆಯೋ ಎಂದರೆ ಅದೂ ಇಲ್ಲ. ಕ್ಲೈಮಾಕ್ಸ್ ರೈಲಿನ ಸಾಹಸ ದೃಶ್ಯ, ಛತ್ರಪತಿ ಟರ್ಮಿನಸ್ ಕುಸಿಯುವ ದೃಶ್ಯ ಒಂದಿಷ್ಟು ಪರಿಣಾಮಕಾರಿಯಾಗಿದೆ. ಅನುಭವ್ ಸಿನ್ಹಾ ಅವರಂತಹ ಅನನುಭವಿ ನಿರ್ದೇಶಕನ ಕೈಯಲ್ಲಿ ವಿಶೇಷ ಸ್ಕೋಪ್ ಇಲ್ಲದ ಕತೆಯೊಂದನ್ನು ಕೊಟ್ಟರೆ ಏನಾಗಬೇಕೇ ಅದೇ ಆಗಿದೆ. ರಾ-ವನ್ ಈ ದೀಪಾವಳಿಗೆ ಶಾರುಕ್ ಹಾರಿಸಿ ಬಿಟ್ಟ ಠುಸ್ ಪಟಾಕಿ.