Tuesday, November 29, 2016

ಚಿಂದಿ ನೋಟುಗಳು: ದೇವಲೋಕದ ಬಟ್ಟೆ

ನೋಟು ನಿಷೇಧದ ಬಳಿಕ ನನ್ನ ಎಂದಿನ ತರಕಾರಿ ಅಂಗಡಿಗೆ ಇದೇ ಮೊದಲ ಬಾರಿ ಭೇಟಿ ನೀಡಿದ್ದೆ. ತರಕಾರಿ ಅಂಗಡಿಯವ ನೊಣ ಹೊಡೆಯುತ್ತಿದ್ದ.
‘‘ಸಾರ್, ಎಂತ ವ್ಯಾಪಾರ ಇಲ್ಲವಾ?’’ ಕೇಳಿದೆ.
ಸಿಟ್ಟಿನಿಂದ ಅವನು ಉತ್ತರಿಸಿದ ‘‘ಸ್ವಇಪ್ ಮಾಡ್ಲಿಕ್ಕೆ ಕಾರ್ಡ್ ಉಂಟಾ ಕೇಳ್ತಾರೆ...ನನ್ನಲ್ಲಿ ತೂಕ ಮಾಡ್ಲಿಕ್ಕೆ ಸರಿಯಾದ ತಕ್ಕಡಿಯೇ ಇಲ್ಲ....ಎಲ್ಲರ ಬದುಕೂ ಈ ಕಾರ್ಡ್‌ನ ಹೆಸರಲ್ಲಿ ಎಕ್ಕುಟ್ಟಿ ಹೋಗುವುದು ಖಂಡಿತಾ...’’ 
‘‘ಆದರೂ ಭವಿಷ್ಯಕ್ಕೆ ಈ ಕಾರ್ಡ್ ಒಳ್ಳೆಯದೇ... ಜನ ಎಲ್ಲ ಸಂಭ್ರಮದಲ್ಲಿದ್ದಾರೆ....ಇವತ್ತಿನ ದಿನವನ್ನು ಬಿಜೆಪಿಯೋರು ಸಂಭ್ರಮದ ದಿನ ಅಂತ ಆಚರಿಸುತ್ತಾ ಇದ್ದಾರೆ...ಸಂಭ್ರಮ ಇಲ್ಲದೆ ಸುಮ್ಮಗೆ ಆಚರಿಸ್ತಾರಾ....ರಿಕ್ಷಾದ ಡ್ರೈವರಲ್ಲಿ ನಾನು ಕೇಳಿದೆ...ಅವನೂ ಸಂಭ್ರಮದಲ್ಲೇ ಇದ್ದ....’’ ಸಮಾಧಾನ ಹೇಳಿದೆ 
ತರಕಾರಿ ಅಂಗಡಿಯವ ಅದಕ್ಕೆ ಉತ್ತರಿಸದೆ ಸ್ವಲ್ಪ ಹೊತ್ತು ವೌನವಾಗಿದ್ದ. 
ಬಳಿಕ ಇದ್ದಕ್ಕಿದ್ದಂತೆಯೇ ಕೇಳಿದ ‘‘ವ್ಯಾಪಾರ ಹೇಗೂ ಇಲ್ಲ. ಒಂದು ಕತೆ ಹೇಳ್ತೇನೆ ಕೇಳ್ತೀರಾ?’’ 
ಹೇಳಿದರೆ ಹೇಳಲಿ. ಅದಕ್ಕೇನು ದುಡ್ಡು ಕೊಡಬೇಕಾ?
 ‘ಹೇಳು’ ಎಂದೆ.
ಅವನು ಕತೆ ಹೇಳಲು ಶುರು ಮಾಡಿದ
‘‘ಒಂದು ಊರಲ್ಲಿ ಒಬ್ಬ ಸರ್ವಾಧಿಕಾರಿ ರಾಜನಿದ್ದ. ಪ್ರಜೆಗಳ ಸಂಪತ್ತನ್ನೆಲ್ಲ ದೋಚಿ ಖಜಾನೆಯಲ್ಲಿಟ್ಟಿದ್ದ. ತನ್ನದೇ ವೈಭವದ ಲೋಕದಲ್ಲಿ ಕಾಲ ಕಳೆಯುತ್ತಿದ್ದ. ಜಗತ್ತಿನ ಶ್ರೇಷ್ಠವಾದುದೆಲ್ಲ ತನ್ನ ಅರಮನೆಯಲ್ಲಿ ಇರಬೇಕು, ತನ್ನ ಆಸ್ತಿಯಾಗಬೇಕು ಎನ್ನುವುದು ಅವನ ಆಸೆ. ಹೀಗಿರುವಾಗ ಅವನ ಅರಮನೆಗೆ ಅರೇಬಿಯಾದ ಶ್ರೇಷ್ಠ ಬಟ್ಟೆ ವ್ಯಾಪಾರಿಗಳು ಬಂದರು...’’
   ‘‘...ರಾಜ ಅವರನ್ನು ಕುಳ್ಳಿರಿಸಿ ‘ತನ್ನ ಶ್ರೇಷ್ಠತೆಗೆ ತಕ್ಕ ಬಟ್ಟೆ ನಿಮ್ಮಲ್ಲಿದೆಯೇ?’ ಎಂದು ಕೇಳಿದ. ‘ಹೌದು, ಮಹಾರಾಜರೇ’ ಎಂದು ಆ ಬಟ್ಟೆ ವ್ಯಾಪಾರಿಗಳು ತಮ್ಮ ಪೆಟ್ಟಿಗೆಯಲ್ಲಿದ್ದ ಬಗೆ ಬಗೆಯ ಬಟ್ಟೆಗಳನ್ನು ಬಿಚ್ಚಿ ತೋರಿಸಿದರು. ಯಾವುದೂ ರಾಜನಿಗೆ ಇಷ್ಟವಾಗಲಿಲ್ಲ. ‘ಇದು ನನ್ನ ಸೌಂದರ್ಯ, ಶ್ರೇಷ್ಠತೆಗೆ ತಕ್ಕುದಾಗಿಲ್ಲ’ ಎಂದು ಒಂದೊಂದನ್ನೇ ತಿರಸ್ಕರಿಸುತ್ತಾ ಹೋದ. ವ್ಯಾಪಾರಿಗಳು ತಮ್ಮಲ್ಲಿರುವ ಅತಿ ದುಬಾರಿ, ಶ್ರೇಷ್ಠ ನೂಲುಗಳಿಂದ ತಯಾರಿಸಿದ ಬಟ್ಟೆಯನ್ನು ತೋರಿಸಿದರು. ‘ಇಲ್ಲ, ಇದೂ ನನ್ನ ಶ್ರೇಷ್ಠತೆಗೆ ತಕ್ಕುದಾಗಿಲ್ಲ....’ ಎಂದು ರಾಜ ಅದನ್ನೂ ತಿರಸ್ಕರಿಸಿಯೇ ಬಿಟ್ಟ....’’
‘‘....ಬಟ್ಟೆ ವ್ಯಾಪಾರಿಗಳಿಗೆ ಇದರಿಂದ ತೀವ್ರ ಅವಮಾನವಾಯಿತು. ಈ ರಾಜನಿಗೆ ಒಂದು ಪಾಠ ಕಲಿಸಿಯೇ ತೀರಬೇಕು ಎಂದು ಅವರು ನಿರ್ಧರಿಸಿದರು. ಈಗ ಅವರು ಒಂದು ಸುಂದರ ಬಣ್ಣ ಪೆಟ್ಟಿಗೆಯನ್ನು ರಾಜನ ಮುಂದಿಟ್ಟರು ‘ಮಹಾರಾಜ...ಈ ಪೆಟ್ಟಿಗೆಯಲ್ಲಿರುವ ವಿಶಿಷ್ಟ ಬಟ್ಟೆಯನ್ನು ಈ ಜಗತ್ತಿನ ಸರ್ವಶ್ರೇಷ್ಠ ರಾಜನಿಗೆ ಅರ್ಪಿಸಬೇಕು ಎಂದು ನಾವು ತೆಗೆದಿಟ್ಟುಕೊಂಡಿದ್ದೆವು. ಇದೀಗ ಆ ರಾಜ ನೀವೇ ಎನ್ನುವುದು ನಮಗೆ ಮನವರಿಕೆಯಾಯಿತು. ಆದುದರಿಂದ ನಿಮಗೇ ಅರ್ಪಿಸಬೇಕು ಎಂದಿದ್ದೇವೆ...ಆದರೆ ಇದೊಂದು ವಿಶಿಷ್ಟ ದೇವಲೋಕದ ಬಟ್ಟೆ...ಇದನ್ನು ಉಡುವವನಿಗೆ ಕೆಲವು ಪ್ರಮುಖ ಅರ್ಹತೆಯಿರಬೇಕು....’ ಎಂದರು. ರಾಜನೋ ಕುತೂಹಲಗೊಂಡ ‘ಕೊಡಿ ಕೊಡಿ. ನಾನೇ ಸರ್ವ ಅರ್ಹತೆಯುಳ್ಳ ರಾಜ. ಏನಿದರ ವೈಶಿಷ್ಟ?’ ಅತ್ಯಾತುರದಿಂದ ಕೇಳಿದ. ವ್ಯಾಪಾರಿಗಳು ನುಡಿದರು ‘ಸ್ವಾಮಿ...ಇದು ದೇವಲೋಕದ ಮಾಯದ ಬಟ್ಟೆ. ಈ ಬಟ್ಟೆಯನ್ನು ಬಂಗಾರದ ನೂಲುಗಳಿಂದ ನೇಯಲಾಗಿದೆ. ವಜ್ರದ ಹರಳುಗಳಿಂದ ಅಲಂಕರಿಸಲಾಗಿದೆ. ದೇವಲೋಕದ ವರ್ಣಮಯ ಬಣ್ಣಗಳು ಇದರಲ್ಲಿ ಕಂಗೊಳಿಸುತ್ತಿವೆ...ಆದರೆ ಈ ಬಟ್ಟೆಯ ಸರ್ವ ಗುಣಗಳು ಕಾಣಬೇಕಾದರೆ ನೋಡುವವರಿಗೂ ಅರ್ಹತೆಯಿರಬೇಕಾಗುತ್ತದೆ....’ ರಾಜ ಇನ್ನಷ್ಟು ಕುತೂಹಲಗೊಂಡ ‘ಏನದು ಅರ್ಹತೆ? ಹೇಳಿರಿ...‘ ಬಟ್ಟೆ ವ್ಯಾಪಾರಿಗಳು ಒಳಗೊಳಗೆ ನಗುತ್ತಾ ಹೇಳಿದರು ‘ಈ ಬಟ್ಟೆ ಯಾರ ಕಣ್ಣಿಗಾದರೂ ಕಾಣಬೇಕಾದರೆ ಅವನು ಸತ್ಯಸಂಧನಾಗಿರಬೇಕು. ದೇಶಭಕ್ತನಾಗಿರಬೇಕು. ಯಾವತ್ತೂ ರಾಜದ್ರೋಹಿಯಾಗಿರಬಾರದು. ಸದ್ಗುಣಿಯಾಗಿರಬೇಕು. ಅಂತಹ ಎಲ್ಲರಿಗೂ ಈ ಬಟ್ಟೆ ಕಾಣುತ್ತದೆ. ತಾವಂತೂ ಈ ಎಲ್ಲ ಗುಣಗಳನ್ನು ಹೊಂದಿರುವವರು. ಆದರೆ ನಿಮ್ಮ ಆಸ್ಥಾನದಲ್ಲಿರುವವರಿಗೆ ಈ ಗುಣಗಳು ಇವೆಯೇ ಎನ್ನುವುದು ಮುಖ್ಯವಾಗುತ್ತದೆ....’ ರಾಜ ಆಸ್ಥಾನಿಗರ ಕಡೆಗೆ ನೋಡಿದ. ಅವರೆಲ್ಲರೂ ವ್ಯಾಪಾರಿಗಳಿಗೆ ಒಕ್ಕೊರಲಲ್ಲಿ ಹೇಳಿದರು ‘ಆ ಬಟ್ಟೆಯನ್ನು ತೋರಿಸಿರಿ...’
‘‘....ವ್ಯಾಪಾರಿಗಳು ಈಗ ಆ ವರ್ಣಮಯ ಪೆಟ್ಟಿಗೆಯನ್ನು ತೆರೆದರು. ತೆರೆದಾಕ್ಷಣ ಅವರು ಒಮ್ಮೆಲೆ ಕಣ್ಣು ಮುಚ್ಚಿಕೊಂಡು ಹೇಳಿದರು ‘ಕ್ಷಮಿಸಿ ದೊರೆಗಳೇ...ಇದರ ಬೆಳಕಿಗೆ ಕಣ್ಣು ಕೋರೈಸಿದಂತಾಗುತ್ತದೆ. ಜಗತ್ತಿನ ಅಪರೂಪದ ವಜ್ರಗಳ ಬೆಳಕು ಅದು....’ ಎಂದು ಮೆಲ್ಲನೆ ಪೆಟ್ಟಿಗೆಯಿಂದ ಬಟ್ಟೆಯನ್ನು ಹೊರ ತೆಗೆದಂತೆ ನಟಿಸಿದರು. ಇಬ್ಬರು ವ್ಯಾಪಾರಿಗಳು ಕೈಯಲ್ಲಿ ಬಟ್ಟೆಗಳ ಎರಡು ತುದಿಗಳನ್ನು ಹಿಡಿದಂತೆ ನಟಿಸಿದರೆ, ಉಳಿದ ವ್ಯಾಪಾರಿಗಳು ಅದರ ಅಂಚನ್ನು, ಅದರ ಬಣ್ಣವನ್ನು, ಅದರ ಗುಣಮಟ್ಟವನ್ನು ವರ್ಣಿಸತೊಡಗಿದರು....ರಾಜನಿಗೆ ಅಲ್ಲೇನೂ ಕಾಣಿಸಲಿಲ್ಲ. ಆದರೆ ಆ ಬಟ್ಟೆ ಸತ್ಯಸಂಧರಿಗೆ, ದೇಶಭಕ್ತರಿಗೆ, ಗುಣವಂತರಿಗೆ, ರಾಜಭಕ್ತರಿಗೆ ಮಾತ್ರ ಕಾಣುತ್ತದೆ ಎನ್ನುವ ಅಂಶ ಅವನಿಗೆ ನೆನಪಾಯಿತು. ತಕ್ಷಣ ಅವನು ಆಸ್ಥಾನದ ತನ್ನ ಮಂತ್ರಿಯೆಡೆಗೆ ನೋಡಿದ. ಮಂತ್ರಿಗೆ ಅಲ್ಲೇನೂ ಕಾಣುತ್ತಿರಲಿಲ್ಲ. ಕಾಣುತ್ತಿಲ್ಲ ಎಂದರೆ ರಾಜದ್ರೋಹಿ, ಅಸತ್ಯವಂತನಾಗುತ್ತಾನೆ....ತಕ್ಷಣ ಮಂತ್ರಿ ಬಟ್ಟೆಯನ್ನು ನೋಡಿದಂತೆ ನಟಿಸಿ ರೋಮಾಂಚನಗೊಂಡ ‘‘ಮಹಾರಾಜರೇ...ನಾನು ಇಂತಹ ಬಟ್ಟೆಯನ್ನು ನನ್ನ ಜೀವಮಾನದಲ್ಲಿ ನೋಡಿಲ್ಲ....ಎಂತಹ ಅತ್ಯದ್ಭುತ ಗುಣಗಳುಳ್ಳ ಬಟ್ಟೆಯಿದು...ಆಹಾ ...ಓಹೋ...ಅದರ ಬಣ್ಣವೋ...ಅದರ ಗುಣಮಟ್ಟವೋ...ಅದರ ಬಲಭಾಗದಲ್ಲಿರುವ ನೀಲ ವಜ್ರವಂತೂ ಅಪರೂಪವಾದುದು....’ ಮಂತ್ರಿ ಹೊಗಳಿ ಮುಗಿಸುವಷ್ಟರಲ್ಲಿ ಸೇನಾಪತಿ ಬಾಯಿ ತೆರೆದ ‘ಮಂತ್ರಿಗಳೇ ನೀವು ಅದರ ಅಂಚಿನಲ್ಲಿರುವ ಬಂಗಾರದ ಬಣ್ಣದ ನವಿಲಿನ ಚಿತ್ರದ ಬಗ್ಗೆ ಏನೂ ಹೇಳಲಿಲ್ಲ....ಆ ಚಿತ್ರವನ್ನು ದೇವಲೋಕದ ಕಲಾವಿದನೇ ಹೆಣೆದಿರಬೇಕು....’ ಅಷ್ಟರಲ್ಲಿ ಆಸ್ಥಾನ ಪಂಡಿತ ಬಾಯಿ ತೆರೆದ ‘ಈ ಬಟ್ಟೆಗೆ ರೇಶ್ಮೆಯನ್ನು ಬಳಸಿದ್ದಾರಾದರೂ ಇದು ಈ ಲೋಕದ ರೇಶ್ಮೆಯಂತಿಲ್ಲ...ಹಾಗೆಯೇ...ಮಧ್ಯದಲ್ಲಿರುವ ಹೂವುಗಳೂ ದೇವಲೋಕದ ಹೂವುಗಳಂತಿವೆ...’ ಈಗ ವ್ಯಾಪಾರಿಗಳೇ ಅಚ್ಚರಿ ಪಡುವಂತೆ ಆಸ್ಥಾನದಲ್ಲಿರುವ ಒಬ್ಬೊಬ್ಬರೇ ಬಟ್ಟೆಯ ಒಂದೊಂದು ಹೆಗ್ಗಳಿಕೆಯನ್ನು ರಾಜನಿಗೆ ವರ್ಣಿಸತೊಡಗಿದರು. ರಾಜನೂ ಆ ಬಟ್ಟೆಯ ಸೌಂದರ್ಯವನ್ನು ಆಸ್ವಾದಿಸತೊಡಗಿದ. ವ್ಯಾಪಾರಿಗಳು ಇದೇ ಸುಸಮಯ ಎಂದು ‘ರಾಜರೇ...ನಾವೇ ಈ ಬಟ್ಟೆಯನ್ನು ವಿಶಿಷ್ಟ ರೀತಿಯಲ್ಲಿ ನಿಮಗೆ ಉಡಿಸುತ್ತೇವೆ....’ ಎಂದರು. ಅಂತೆಯೇ ರಾಜ ಒಳಹೋಗಿ ತನ್ನ ಬಟ್ಟೆಯನ್ನೆಲ್ಲ ಕಳಚಿದ. ವ್ಯಾಪಾರಿಗಳು ಈ ಮಾಯದ ಬಟ್ಟೆಯನ್ನು ರಾಜನಿಗೆ ಉಡಿಸಿ, ಅವನನ್ನು ಆಸ್ಥಾನಕ್ಕೆ ಕರೆದುಕೊಂಡು ಬಂದರು. ಬರುವಾಗ ಅವರು ರಾಜನ ಸೌಂದರ್ಯ ಈ ಬಟ್ಟೆಯಿಂದ ಹೇಗೆ ಹೆಚ್ಚಿದೆ ಎನ್ನುವುದನ್ನು ವರ್ಣಿಸುತ್ತಾ ಬರುತ್ತಿದ್ದರು. ಆಸ್ಥಾನಿಗರೆಲ್ಲ ನೋಡುತ್ತಾರೆ....ತಮ್ಮ ಮುಂದೆ ರಾಜ ಬೆತ್ತಲೆಯಾಗಿ ನಿಂತಿದ್ದಾನೆ. ಆದರೆ ಯಾರೂ ಅದನ್ನು ಹೇಳುವಂತಿಲ್ಲ. ಒಬ್ಬೊಬ್ಬರಾಗಿ ಎಲ್ಲರೂ ರಾಜನ ಸೌಂದರ್ಯವನ್ನು ಹೊಗಳತೊಡಗಿದರು. ಬಟ್ಟೆಯ ಮಹಿಮೆಯನ್ನು ವರ್ಣಿಸತೊಡಗಿದರು. ವ್ಯಾಪಾರಿಗಳು ಅಪಾರ ಹಣವನ್ನು, ಚಿನ್ನದ ವರಹಗಳನ್ನು ಹಿಡಿದುಕೊಂಡು ತಮ್ಮ ಉಳಿದ ಅಸಲಿ ಬಟ್ಟೆಗಳೊಂದಿಗೆ ಅಲ್ಲಿಂದ ಪರಾರಿಯಾದರು....’’
‘‘...ಇದೇ ಸಂದರ್ಭದಲ್ಲಿ ಯಾರೋ ಸಲಹೆ ನೀಡಿದರು ‘ರಾಜರು ಈ ಬಟ್ಟೆಯ ಜೊತೆಗೆ ರಾಜಮಾರ್ಗದಲ್ಲಿ ಮೆರವಣಿಗೆ ಹೋಗಿ ತಮ್ಮ ಪ್ರಜೆಗಳನ್ನೂ ಧನ್ಯರಾಗಿಸಬೇಕು...’ ಎಲ್ಲರೂ ಅದೇ ಸರಿಯೆಂದರು. ತಕ್ಷಣ ರಾಜನ ಬಹತ್ ಮೆರವಣಿಗೆ ನಡೆಯಿತು. ಜನರೆಲ್ಲ ದೇವಲೋಕದ ಮಾಯದ ಬಟ್ಟೆ ಧರಿಸಿರುವ ರಾಜನ ಸ್ವಾಗತಕ್ಕೆ ಅಣಿಯಾಗಿ ನಿಂತರು. ಅವರೆಲ್ಲರಿಗೂ ಮೊದಲೇ ಹೇಳಲಾಗಿತ್ತು ‘ಬಟ್ಟೆ ಸತ್ಯಸಂಧರಿಗೆ, ಸದ್ಗುಣಿಗಳಿಗೆ, ದೇಶಭಕ್ತರಿಗೆ, ರಾಜಭಕ್ತರಿಗೆ ಮಾತ್ರ ಕಾಣುತ್ತದೆ...’. ರಾಜ ಆಗಮಿಸಿದ. ನೋಡಿದರೆ ‘ಬೆತ್ತಲೆ ರಾಜ!’ ಆದರೆ ಅವರೆಲ್ಲರೂ ‘ತಮಗೆ ಮಾತ್ರ ಬಟ್ಟೆ ಕಾಣಿಸುತ್ತಿಲ್ಲ, ಉಳಿದವರಿಗೆ ಕಾಣಿಸುತ್ತಿರಬೇಕು...’ ಎಂದು ಭಾವಿಸಿ ರಾಜನ ಬಟ್ಟೆಯನ್ನು ಒಬ್ಬೊಬ್ಬರಾಗಿ ಹೊಗಳತೊಡಗಿದರು. ಆದರೆ ಮನದೊಳಗೆ ರಾಜನನ್ನು ನೋಡಿ ನಗುತ್ತಿದ್ದರು, ಅಸಹ್ಯ ಪಡುತ್ತಿದ್ದರು. ಎಲ್ಲರೂ ರಾಜನ ಬಟ್ಟೆಗೆ ಭೋ ಪರಾಕ್ ಹೇಳುವವರೆ. ಹೀಗಿರುವಾಗ, ಆ ಜನರ ನಡುವೆ ಒಂದು ಪುಟ್ಟ ಮಗು ರಾಜನನ್ನು ನೋಡಿ ಜೋರಾಗಿ ಕೂಗಿ ಹೇಳಿತು ‘‘ಹೇ...ರಾಜ ಬಟ್ಟೆಯೇ ಹಾಕಿಲ್ಲ....’’. ತಕ್ಷಣ ಸೈನಿಕರು ಆ ‘ರಾಜದ್ರೋಹಿ, ದೇಶದ್ರೋಹಿ, ಸುಳ್ಳುಬುರುಕ’ ಮಗುವನ್ನು ಬಂಧಿಸಿ ಜೈಲಿಗೆ ತಳ್ಳಿದರು. ಉಳಿದಂತೆ ರಾಜನೀಗ ಅದೇ ಬಟ್ಟೆಯಲ್ಲಿ ತಿರುಗಾಡುತ್ತಿದ್ದಾನೆ....ಜನರು ರಾಜನನ್ನೂ ಅವನು ಧರಿಸಿದ ಬಟ್ಟೆಯನ್ನು ಹೊಗಳುತ್ತಲೇ ಇದ್ದಾರೆ....’’
ಹೀಗೆ ತನ್ನ ಕತೆ ಮುಗಿಸಿದ ತರಕಾರಿ ಅಂಗಡಿಯವ ಹೇಳಿದ ‘‘ನಿನ್ನೆ ಸಂಭ್ರಮ ಆಚರಿಸಿದ ಜನರಿಗೂ, ಆ ರಾಜನ ಪ್ರಜೆಗಳಿಗೂ ಯಾವುದಾದರೂ ವ್ಯತ್ಯಾಸವಿದೆಯೆ?....ಆದರೆ ಆತ ಬಟ್ಟೆಯನ್ನೇ ಧರಿಸಿಲ್ಲ ಎನ್ನುವುದು ಒಂದಲ್ಲ ಒಂದು ದಿನ ಗೊತ್ತಾಗದೇ ಇರುತ್ತದೆಯೆ?’’ ಎಂದು ನನ್ನನ್ನು ಪ್ರಶ್ನಿಸಿದ.
ನಾನು ಉತ್ತರಿಸಲಿಲ್ಲ. ಅರ್ಧ ಕೆಜಿ ಟೊಮೆಟೋ ಖರೀದಿಸಿ, ಅಳಿದುಳಿದ ಚಿಲ್ಲರೆಯನ್ನು ಆತನಿಗೆ ಕೊಟ್ಟು ಮನೆಯ ದಾರಿ ಹಿಡಿದೆ.

No comments:

Post a Comment