Monday, November 28, 2016

ಚಿಂದಿ ನೋಟುಗಳು: ಅಮ್ಮನ ಕತೆ....!

ನೋಟು ನಿಷೇಧದ ಬಳಿಕ ಪ್ರತಿ ದಿನ ಈ ರಿಕ್ಷಾ ಚಾಲಕರ ಗೋಳು ಕೇಳಿ ನಿಜಕ್ಕೂ ಸುಸ್ತಾಗಿ ಹೋಗಿದ್ದೆ. ಆದುದರಿಂದ ಈ ಬಾರಿ ಸಿಟಿ ಬಸ್‌ನಲ್ಲೇ ಕಚೇರಿಗೆ ಹೋಗಲು ನಿರ್ಧರಿಸಿದೆ. ನನ್ನ ಕಚೇರಿಯ ಕಡೆ ಹೋಗುವ ಬಸ್ ಸಿಕ್ಕಿದ್ದೇ ಉಸ್ಸಪ್ಪಾ ಎಂದು ಹತ್ತಿ, ಕಿಟಕಿ ಪಕ್ಕದ ಸೀಟ್ ಹಿಡಿದೆ. ರಿಕ್ಷಾ ಬಾಡಿಗೆಯೂ ಉಳಿಯಿತು. ಈ ರಿಕ್ಷಾ ಚಾಲಕರ ಗೋಳೂ ತಪ್ಪಿತು ಎಂದು ನಿಟ್ಟುಸಿರಿಡುವಷ್ಟರಲ್ಲಿ, ನನ್ನ ಪಕ್ಕದಲ್ಲೇ ಒಬ್ಬ ಬಂದು ಕುಳಿತ. ಕುಳಿತವನು ಸುಮ್ಮನೇ ಕೂತನಾ? ಅದೂ ಇಲ್ಲ. ‘‘ಸಾರ್...ಎರಡು ಸಾವಿರ ರೂಪಾಯಿಯ ಚಿಲ್ಲರೆ ಇದೆಯಾ?’’ ಎಂದು ಕೇಳಿದ. ‘‘ಇಲ್ಲ ಕಣ್ರೀ...ನಾನೇ ಚಿಲ್ಲರೆ ಇಲ್ಲದೆ ಒದ್ದಾಡುತ್ತಿದ್ದೇನೆ....’’ ಎಂದೆ. ಅಷ್ಟೇ...ಅವನು ತನ್ನ ಗೋಳನ್ನು ಹೇಳ ತೊಡಗಿದ. ‘‘ಹೀಗಾದರೆ ನಮ್ಮಂಥವರು ಬದುಕುವುದು ಹೇಗೆ?’’ ಎಂದು ಕೇಳಿದ.
ನಾನು ಎಂದಿನಂತೆ ಮೋದಿಯ ಪರವಾಗಿ ಮಾತನಾಡ ತೊಡಗಿದೆ ‘‘ನೋಡಿ, ಒಂದು ದೊಡ್ಡ ರೋಗಕ್ಕೆ ಮದ್ದು ಕೊಡುವಾಗ ಸಣ್ಣ ಪುಟ್ಟ ಸೈಡ್ ಎಫೆಕ್ಟ್ ಆಗತ್ತೆ...ಸ್ವಲ್ಪ ಸಹಿಸಬೇಕಾಗುತ್ತದೆ...’’ ಸಮಾಧಾನಿಸಿದೆ.
‘‘ನಿಮಗೆ ನನ್ನ ತಾಯಿಯ ಕತೆ ಹೇಳಲಾ?’’ ಅವನು ಒಮ್ಮೆಲೆ ನನ್ನ ಕಡೆ ತಿರುಗಿ ಕೇಳಿದ.
ಬೇಡಾ ಎಂದರೆ ಅವನಿಗೆ ಬೇಜಾರು. ‘‘ಸರಿ ಹೇಳಿ...’’ ಎಂದೆ. ಬಸ್ಸು ಸಾಗುತ್ತಿತ್ತು. ಅವನು ತನ್ನ ತಾಯಿಯ ಕತೆ ಹೇಳ ತೊಡಗಿದ.
‘‘ಅರವತ್ತು ವರ್ಷ ಕಳೆದಿರುವ ನನ್ನ ತಾಯಿ ಆಗಾಗ ಸಣ್ಣ ಪುಟ್ಟ ಬಿಪಿ, ಶುಗರ್ ಕಾಯಿಲೆಯಿಂದ ನರಳುತ್ತಿದ್ದರು. ಆದರೂ ಆರೋಗ್ಯವಾಗಿಯೇ ಇದ್ದರು. ಇದ್ದಕ್ಕಿದ್ದಂತೆಯೇ ಆಕೆಗೆ ಹೊಟ್ಟೆ ನೋವು ಆರಂಭವಾಯಿತು. ಜೊತೆಗೆ ಹಸಿವಿಲ್ಲ. ಹತ್ತಿರದ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿದಾಗ ಗೊತ್ತಾಯಿತು, ಆಕೆಗೆ ಕ್ಯಾನ್ಸರ್ ಎನ್ನುವುದು. ಡಾಕ್ಟರ್ ನೇರವಾಗಿಯೇ ಹೇಳಿದರು ‘‘ಘಟ್ಟ ಅಪಾಯವನ್ನು ತಲುಪಿದೆ. ನಿಮ್ಮ ತಾಯಿ ಹೆಚ್ಚೆಂದರೆ ಇನ್ನು ಮೂರು-ನಾಲ್ಕು ವರ್ಷ ಬದುಕಬಹುದು’’. ನನಗೆ ತಾಯಿಯ ಜೊತೆಗೆ ಇನ್ನಷ್ಟು ವರ್ಷಗಳ ಕಾಲ ಬದುಕುವ ಆಸೆ. ತಾಯಿಯನ್ನು ಉಳಿಸಲೇಬೇಕು ಎಂದು ನಾನು ನಗರದ ಅತಿ ದೊಡ್ಡ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿದೆ. ಬೃಹತ್ ಆಸ್ಪತ್ರೆ ಅದು. ಆ ಆಸ್ಪತ್ರೆಯ ಗಾತ್ರ ನೋಡಿಯೇ ನನ್ನ ತಾಯಿ ಬದುಕುತ್ತಾಳೆ ಎಂಬ ಭರವಸೆ ಮೂಡಿತು ನನಗೆ...’’
‘‘....ಡಾಕ್ಟರ್ ಪರೀಕ್ಷಿಸಿದ್ದೇ ಘೋಷಿಸಿದರು ‘‘ಕೀಮೋ ಥೆರಪಿ’’ ಆಗಬೇಕು. ನಾನು ಸರಿ ಎಂದೆ. ಡಾಕ್ಟರ್ ಕೀಮೋ ಥೆರಪಿ ಆರಂಭಿಸಿದರು. ಆದರೆ ನನ್ನ ದುರದಷ್ಟ. ಒಂದೆರಡು ದಿನ ಚೆನ್ನಾಗಿಯೇ ಇದ್ದ ತಾಯಿ ನಾಲ್ಕನೆ ದಿನಕ್ಕೆ ಸಂಪೂರ್ಣ ಆರೋಗ್ಯ ಕಳೆದುಕೊಂಡರು. ಕಾಲು ಬಾತತೊಡಗಿತು. ಅರೆಪ್ರಜ್ಞಾವಸ್ಥೆ ತಲುಪಿಸಿದರು. ಪ್ರತಿ ದಿನ ನನ್ನ ತಾಯಿಯನ್ನು ನೋಡಲು ಬರುತ್ತಿದ್ದ ಡಾಕ್ಟರ್ ನಾಲ್ಕನೇ ದಿನ ಒಮ್ಮೆಲೆ ಮುಳುಗಿದರು. ನರ್ಸ್‌ನ ಬಳಿ ವಿಚಾರಿಸಿದರೂ ಡಾಕ್ಟರ್ ರೋಗಿಯನ್ನು ನೋಡಲು ಬರುತ್ತಿಲ್ಲ. ನಾನೇ ಕಿಮೋಥೆರಪಿ ಡಾಕ್ಟರನ್ನು ಹುಡುಕಿಕೊಂಡು ಹೋದೆ. ಅವರು ನನ್ನನ್ನು ಪ್ರಶ್ನಾರ್ಹವಾಗಿ ನೋಡಿದರು. ನಾನು ತಾಯಿಯ ಸ್ಥಿತಿ ವಿವರಿಸಿದೆ. ಡಾಕ್ಟರ್ ನಿರ್ಲಿಪ್ತವಾಗಿ ಹೇಳಿದರು ‘‘ನೋಡಿ, ನಿಮ್ಮ ತಾಯಿಯ ಎರಡೂ ಕಿಡ್ನಿ ಹೋಗಿದೆ. ಮೊದಲು ಅದಕ್ಕೊಂದು ವ್ಯವಸ್ಥೆ ಆಗಬೇಕು. ಈ ವಿಭಾಗದಲ್ಲಿ ಕಿಡ್ನಿ ಡಾಕ್ಟರ್ ಇದ್ದಾರೆ. ಅವರಲ್ಲಿ ಮೊದಲು ಮಾತನಾಡಿ....’’
‘‘....ನಾನು ಕಿಡ್ನಿ ಡಾಕ್ಟರ ಬಳಿಗೆ ಓಡಿದೆ. ಅವರು ಹೇಳಿದರು ‘ನೋಡಿ, ನಿಮ್ಮ ತಾಯಿಗೆ ವಯಸ್ಸಾಗಿತ್ತು. ಜೊತೆಗೆ ಬೇರೆ ಕೆಲವು ರೋಗಗಳಿದ್ದವು. ಕಿಮೋಥೆರಪಿಯನ್ನು ತಾಳಿಕೊಳ್ಳುವ ಶಕ್ತಿ ಅವಳಿಗಿರಲಿಲ್ಲ. ಆದುದರಿಂದಲೇ ಅವಳ ಎರಡೂ ಕಿಡ್ನಿ ನಾಶವಾಗಿದೆ. ಈಗ ಏನೂ ಮಾಡುವ ಹಾಗಿಲ್ಲ...ಡಯಾಲಿಸಿಸ್‌ನ್ನು ತಾಳಿಕೊಳ್ಳುವ ಶಕ್ತಿ ನಿಮ್ಮ ತಾಯಿಯ ದೇಹಕ್ಕಿಲ್ಲ.... ನೀವು ಅವಸರದಿಂದ ಕೀಮೋಥೆರಪಿಯನ್ನು ಮಾಡಿಸಬಾರದಿತ್ತು...’. ನಾನು ಮತ್ತೆ ಕಿಮೋಥೆರಪಿ ಡಾಕ್ಟರಲ್ಲಿ ಹೋಗಿ ಹೇಳಿದೆ. ಅವರು ಸೆಡವಿನಿಂದ ಹೇಳಿದರು ‘‘ನೋಡ್ರಿ...ಕ್ಯಾನ್ಸರ್ ರೋಗಕ್ಕೆ ಬೇಕಾದ ಔಷಧಿಯನ್ನು ನಾವು ಕೊಟ್ಟಿದ್ದೇವೆ. ಅವರ ಕಿಡ್ನಿ ಅದನ್ನು ತಾಳಿಕೊಳ್ಳಲಿಲ್ಲ. ಅದಕ್ಕೆ ನಾವೇನೂ ಮಾಡುವ ಹಾಗಿಲ್ಲ....’’
‘‘....ಆರನೇ ದಿನ ನನ್ನ ತಾಯಿ ಆಸ್ಪತ್ರೆಯಲ್ಲೇ ತೀರಿ ಹೋದರು. ಆಸ್ಪತ್ರೆಯ ಬಿಲ್ ಎರಡೂವರೆ ಲಕ್ಷ ರೂ. ಆಗಿತ್ತು. ನನ್ನ ಮನೆಯಿರುವ ಪುಟ್ಟ ಜಮೀನನ್ನು ಮಾರಿ, ಆಸ್ಪತ್ರೆಯ ಬಿಲ್ ಕಟ್ಟಿ ತಾಯಿಯ ಹೆಣವನ್ನು ಬಿಡಿಸಿಕೊಂಡು ಬಂದೆ....’’ ಎನ್ನುತ್ತಾ ಅವನು ಮೌನವಾದ.
ನಾನು ಅವನ ಮುಖ ನೋಡಿದರೆ ಅವನ ಕಣ್ಣಂಚಲ್ಲಿ ಹನಿಯಿತ್ತು. ಅವನ ಕೈಯನ್ನು ಹಿಸುಕಿ ಸಮಾಧಾನಿಸಿದೆ.
ಇದೀಗ ಅವನು ಬಾಯಿ ತೆರೆದ ‘‘ಮೋದಿ ಮಾಡಿರುವ ಈ ಕೀಮೋಥೆರಪಿಯಲ್ಲಿ ನನ್ನ ಈ ತಾಯಿಯ ಕಿಡ್ನಿ ನಾಶವಾಗದಿದ್ದರೆ ಅಷ್ಟು ಸಾಕಾಗಿದೆ. ಯಾಕೆಂದರೆ, ತಾಯಿಯ ಹೆಣವನ್ನು ಬಿಡಿಸಿಕೊಳ್ಳಲು ನನ್ನಲ್ಲಿ ಮಾರುವುದಕ್ಕೀಗ ಜಮೀನು ಕೂಡ ಇಲ್ಲ....’’
ಅಷ್ಟರಲ್ಲಿ ಕಂಡಕ್ಟರ್ ನಾನು ಇಳಿಯುವ ಸ್ಟಾಪ್‌ನ ಹೆಸರು ಕೂಗುತ್ತಿರುವುದು ಕೇಳಿಸಿತು. ಭಾರವಾದ ಮನಸ್ಸಿನಿಂದ ಎದ್ದು ನಿಂತೆ.

No comments:

Post a Comment