Sunday, July 6, 2014

ಹೀಗೊಂದು ಬ್ಲಾಕ್ ಲಿಸ್ಟ್

 ಪತ್ರಕರ್ತರಾದ ಎನ್. ಎ. ಎಂ. ಇಸ್ಮಾಯಿಲ್ ಅವರು ಪ್ರಜಾವಾಣಿಯಲ್ಲಿ ‘‘ಎಲ್ಲಿದೆ ನಮ್ ಮನೆ’’ ( http://www.prajavani.net/article/%E0%B2%8E%E0%B2%B2%E0%B3%8D%E0%B2%B2%E0%B2%BF%E0%B2%A6%E0%B3%86-%E0%B2%A8%E0%B2%AE%E0%B3%8D-%E0%B2%AE%E0%B2%A8%E0%B3%86#.U7j9oc9Clwk.facebook) ಬರಹದಲ್ಲಿ ಮುಸ್ಲಿಮನೊಬ್ಬ ಬಾಡಿಗೆ ಮನೆ ಹುಡುಕಬೇಕಾದಾಗ ಎದುರಿಸಬೇಕಾದ ಕೆಲವು ತಮಾಷೆಗಳನ್ನು ಹೃದಯ ಮುಟ್ಟುವಂತೆ ಬರೆದಿದ್ದಾರೆ. ಇದಕ್ಕೆ ಪೂರಕವಾಗಿ ನನ್ನದೊಂದು ಅನುಭವವನ್ನು ವಿವರಿಸುತ್ತೇನೆ.
ಒಂದಾರು ತಿಂಗಳ ಹಿಂದೆ ನಾನೊಂದು ಆಕ್ಟೀವಾ ತೆಗೆಯಲು ಹೊರಟಿದ್ದೆ. ಅದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನೂ, ಜೊತೆಗೆ 25 ಸಾವಿರ ಡೌನ್ ಪೇಮೆಂಟ್‌ನ್ನೂ ಕಟ್ಟಿದ್ದೆ. ಹೆಚ್ಚೆಂದರೆ ಫೈನಾನ್ಸ್‌ನವರು ೆ ಒಂದು 25 ಸಾವಿರ ಕೊಡಬೇಕಾಗುತ್ತಿತ್ತು. ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ನಾನು ಯಾವ ಪ್ರದೇಶದಲ್ಲಿ ವಾಸ ಮಾಡುತ್ತಿದ್ದೇನೆ ಎನ್ನುವುದು ಸಾಲಕ್ಕೆ ತೊಡಕಾಗಿ ಪರಿಣಮಿಸಿತು. ‘‘ಇಲ್ಲಾ ಸಾರ್...ಆ ಏರಿಯಾ ಬ್ಲಾಕ್ ಲಿಸ್ಟ್‌ನಲ್ಲಿದೆ...’’ ಎಂದು ಬಿಟ್ಟ. ಹಾಗೆಂದು ಅವನು ಸುಳ್ಳೇನೂ ಹೇಳುತ್ತಿಲ್ಲ. ‘‘ಸಾರ್...ಆ ಊರಿನ ವಿಳಾಸ ಬೇಡ ಸಾರ್...ಬೇರೆ ಯಾವುದಾದರೂ ವಿಳಾಸ ಇದ್ರೆ ಹೇಳಿ...ಇಲ್ಲಾಂದ್ರೆ ನಿಮ್ಮ ಲೋನ್ ಸಾಂಕ್ಷನ್ ಆಗೋಲ.್ಲ ಬೇರೆ ವಿಳಾಸಕ್ಕೆ ಯಾವುದಾದರೂ ಒಂದು ದಾಖಲೆ ಕೊಡಿ ಸಾಕು’’ ಅಂದ.
 ಅರೆ! ನಾನಿರುವ ನಿಜ ವಿಳಾಸವನ್ನು ತಿರಸ್ಕರಿಸಿ ಇವನೇ ಸುಳ್ಳು ವಿಳಾಸವನ್ನು ಕೇಳುತ್ತಿದ್ದಾನೆ. ಇದೇನು ವಿಚಿತ್ರ!
‘‘ಅಲ್ಲಪ್ಪಾ...ನಾನಿರುವ ಊರು ತುಂಬಾ ಒಳ್ಳೆಯ ಏರಿಯಾದಲ್ಲಿದೆ. ತುಂಬಾ ಒಳ್ಳೆಯ ಜನರೇ ಇದ್ದಾರೆ. ಯಾಕೆ ಅದನ್ನು ಬ್ಲಾಕ್ ಲಿಸ್ಟ್‌ಗೆ ಹಾಕಿದ್ದೀರಾ?’’
‘‘ಸಾರ್...ಯಾವ ಊರಲ್ಲಿ ಸರಿಯಾಗಿ ಮರುಪಾವತಿ ಆಗುವುದಿಲ್ಲವೋ ಅಂತಹ ಊರನ್ನು ಬ್ಲಾಕ್ ಲಿಸ್ಟ್‌ನಲ್ಲಿ ಸೇರಿಸುತ್ತೇವೆ...’’
‘‘ಅಂದರೆ ಅದನ್ನು ಶಾಶ್ವತವಾಗಿ ಬ್ಲಾಕ್ ಲಿಸ್ಟ್‌ಗೆ ಸೇರಿಸುತ್ತೀರಾ?’’
‘‘ಹೌದು ಸಾರ್’’
‘‘ಅಲ್ಲ ಕಣ್ರೀ...ನಾನೀಗ ಸಾಲ ಪಡೆದು ಅದನ್ನು ಸರಿಯಾಗಿ ಮರುಪಾವತಿ ಮಾಡಿದ್ರೆ ನನ್ನ ಊರನ್ನು ಬ್ಲಾಕ್ ಲಿಸ್ಟ್‌ನಿಂದ ತೆಗೀತೀರಾ?’’
‘‘ಇಲ್ಲ ಸಾರ್. ಅದು ನಮ್ಮ ಕೈಯಲ್ಲಿಲ್ಲ’’
‘‘ಬ್ಲಾಕ್ ಲಿಸ್ಟ್‌ಗೆ ಸೇರಿಸಲು ನಿಮ್ಮಲ್ಲಿ ಮಾನದಂಡಗಳಿವೆಯಾ?’’
‘‘ಹಾಗೇನೂ ಇಲ್ಲ ಸಾರ್. ಆದರೆ ಕೆಲವು ದೊಡ್ಡ ಜನರಿಗೆ ಸಾಲ ಕೊಡುವ ಸಂದರ್ಭದಲ್ಲಿ ಇದನ್ನು ಪರಿಗಣಿಸುವುದಿಲ್ಲ’’
‘‘ಈ ದೊಡ್ಡ ಜನಗಳು ಅಂದರೆ...’’
ಅವನು ವೌನವಾದ. ಮತ್ತೆ ಹೇಳಿದ ‘‘ನೀವೇನೂ ತಲೆ ಬಿಸಿ ಮಾಡಬೇಡಿ. ಬೇರೆ ವಿಳಾಸ ನಮೂದಿಸಿ ನಾನು ನಿಮಗೆ ಲೋನ್ ತೆಗೆಸಿಕೊಡುತ್ತೇನೆ...’’
ನನ್ನ ತಲೆಕೆಟ್ಟು ಹನ್ನೆರಡಾಣೆಯಾಯಿತು. ‘‘ಸರಿ, ಯಾವುದೆಲ್ಲ ಏರಿಯಾಗಳನ್ನು ಬ್ಲಾಕ್ ಲಿಸ್ಟ್‌ಗೆ ಸೇರಿಸಿದ್ದೀರಿ, ಅದನ್ನಾದರೂ ಹೇಳಿ’’
ಅವನು ಒಂದೊಂದೇ ಏರಿಯಾವನ್ನು ಹೇಳುತ್ತಾ ಹೋದ. ನನಗೆ ಅಚ್ಚರಿ ಮತ್ತು ತಮಾಷೆ ಎನ್ನಿಸಿತು. ಅವನು ಹೇಳಿದ ಎಲ್ಲಾ ಏರಿಯಾಗಳು ಮುಸ್ಲಿಮ್ ಜನಸಂಖ್ಯೆ ಪ್ರಾಬಲ್ಯ ಇರುವ ಏರಿಯಾ ಆಗಿತ್ತು. ‘‘ಇಷ್ಟು ಏರಿಯಾಗಳನ್ನು ಬ್ಲಾಕ್ ಲಿಸ್ಟ್‌ನಲ್ಲಿ ಸೇರಿಸಿದ್ದೀರಲ್ಲ....ಅಲ್ಲಿ ಎಷ್ಟು ಅಲ್ಲಿ ಎಷ್ಟು ಸಲ ಪ್ರಕರಣಗಳು  ಮರುಪಾವತಿಯಾಗಿಲ್ಲ ಎನ್ನುವುದರ ಬಗ್ಗೆ ವಿವರ ನೀಡುತ್ತೀರಾ?’’
ಅವನು ಒಂದು ಕ್ಷಣ ವೌನವಾದ. ‘‘ಸಾರ್...ಅದೆಲ್ಲ ಬಿಡಿ. ನಿಮಗೆ ಲೋನ್ ಕೊಟ್ರೆ ಆಯ್ತಲ್ಲ. ನೀವು ಸ್ವಲ್ಪ ಸಹಕರಿಸಿ ಅಷ್ಟೇ...’’
‘‘ನಾನು ಸುಳ್ಳು ವಿಳಾಸ ಕೊಡೋದಿಲ್ಲ. ನನಗೆ ನನ್ನ ಮನೆ ಇರುವ ಏರಿಯಾದ ವಿಳಾಸದಲ್ಲೇ ಸಾಲ ಕೊಡುವುದಾದರೆ ಕೊಡಿ...ಇಲ್ಲಾಂದ್ರೆ ಬೇಡ...’’ ಎಂದೆ.
ಅವನು ತನ್ನ ಮ್ಯಾನೇಜರ್‌ಗೆ ಫೋನ್ ಮಾಡಿದ. ತುಸು ಹೊತ್ತು ಮಾತನಾಡಿ ಹೇಳಿದ ‘‘ಇಲ್ಲಾ ಸಾರ್...ಕಂಪ್ಯೂಟರ್‌ನಲ್ಲಿ ಫೀಡ್ ಆಗಿದೆ. ಏನು ಮಾಡೋ ಹಾಗಿಲ್ಲ. ಬೇರೆ ವಿಳಾಸ ಕೊಟ್ರೆ ನಿಮಗೆ ಲೋನ್ ಸಾಂಕ್ಷನ್ ಆಗತ್ತೆ...’’

ನಾನು ಅಲ್ಲಿಂದ ಎದ್ದು ಹೋದೆ. ಕೊನೆಗೂ ಒಂದು ಬ್ಯಾಂಕ್ ಮೂಲಕ ಆಕ್ಟೀವಾ ಸಿಗುವಂತಾಯಿತು ಬಿಡಿ.

2 comments:

  1. ನೀವು ಆವರ ಒತ್ತಾಯವನ್ನು ತಿರಸ್ಕರಿಸಿದ್ದು ಸರಿಯಾದ ಕ್ರಮ.
    ಇಲ್ಲಿ ಒಂದು ಪ್ರದೇಶವನ್ನು ಕಪ್ಪುಪಟ್ಟಿಗೆ ಸೇರಿಸಿರುವುದು ಸೌಮ್ಯೋಕ್ತಿ.
    ಒಂದು ಸಮುದಾಯವನ್ನು ಎನ್ನುವುದನ್ನು ಮುಚ್ಚಿಟ್ಟು ಪ್ರದೇಶ ಎಂದಿದ್ದಾರೆ.

    ReplyDelete
  2. I too have faced such problems in Bangalore. I was not even allowed to open a bank account in a reputed public sector bank branch in Gandhinagar even though I belong to a Central Govt department. Reason was nothing but I am a Muslim!

    ReplyDelete