Tuesday, July 15, 2014

ಫೆಲೆಸ್ತೀನ್-ಇಸ್ರೇಲ್ ಸಂಘರ್ಷ ಗಾಂಧಿ ಕಂಡಂತೆ

ಕೃಪೆ -ವಾರ್ತಾಭಾರತಿ ದಿನ ಪತ್ರಿಕೆ

ಫೆಲೆಸ್ತೀನ್ ನೆಲದಲ್ಲಿ ಯುರೋಪ್ ರಾಷ್ಟ್ರಗಳು ಇಸ್ರೇಲ್ ದೇಶವನ್ನು ಸ್ಥಾಪಿಸಿದ ಕುರಿತಂತೆ ಮಹಾತ್ಮಗಾಂಧೀಜಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಇದು 1938 ನವೆಂಬರ್ 26ರ ‘ಹರಿಜನ’ ಪತ್ರಿಕೆಯಲ್ಲಿ ಪ್ರಕಟಗೊಂಡ ಮಹಾತ್ಮಾ ಗಾಂಧಿಯ ಲೇಖನಫೆಲೆಸ್ತೀನ್‌ನ ಅರಬ್-ಯಹೂದಿ ಸಂಘರ್ಷ ಮತ್ತು ಜರ್ಮನಿಯಲ್ಲಿ ಯಹೂದಿಗಳ ವಿರುದ್ಧ ನಡೆಯುತ್ತಿರುವ ಹಿಂಸಾಚಾರ- ಇದರ ಬಗ್ಗೆ ನಾನು ನನ್ನ ನಿಲುವನ್ನು ಘೋಷಿಸಬೇಕೆಂದು ಕೋರಿ ಹಲವರು ನನಗೆ ಪತ್ರ ಬರೆದಿದ್ದಾರೆ. ಈ ಅತ್ಯಂತ ಜಟಿಲ ವಿಷಯದ ಕುರಿತ ನನ್ನ ನಿಲುವನ್ನು ಘೋಷಿಸಲು ಹಿಂಜರಿಕೆಯಿಂದಲೇ ಮುಂದಡಿಯಿಡುತ್ತಿದ್ದೇನೆ.

ಯಹೂದಿಯರ ಪರವಾಗಿ ನನ್ನ ಸಹಾನುಭೂತಿಯಿದೆ. ದಕ್ಷಿಣ ಆಫ್ರಿಕದಲ್ಲಿ ನಾನು ಅವರನ್ನು ಹತ್ತಿರದಿಂದ ಬಲ್ಲೆ. ಅವರ ಪೈಕಿ ಕೆಲವರು ನನ್ನ ಜೀವನಪೂರ್ತಿ ಸಂಗಾತಿಗಳಾದರು. ಶತಮಾನಗಳಿಂದ ಅವರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ಬಗ್ಗೆ ನನ್ನ ಈ ಸ್ನೇಹಿತರಿಂದಲೇ ನಾನು ಹೆಚ್ಚಾಗಿ ತಿಳಿದುಕೊಂಡಿದ್ದೇನೆ. ಅವರು ಕ್ರೈಸ್ತರಿಂದ ಅಸ್ಪೃಶ್ಯತೆಗೊಳಗಾಗಿದ್ದರು. ಕ್ರೈಸ್ತರು ಅವರನ್ನು ನಡೆಸಿಕೊಂಡ ರೀತಿಗೂ ಹಿಂದೂಗಳು ಅಸ್ಪೃಶ್ಯರನ್ನು ನಡೆಸಿಕೊಳ್ಳುತ್ತಿರುವ ರೀತಿಗೂ ನಿಕಟ ಸಾಮ್ಯವಿದೆ. ಎರಡೂ ಪ್ರಕರಣಗಳಲ್ಲಿ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ರೀತಿಗೆ ಧಾರ್ಮಿಕ ಸಮ್ಮತಿಯನ್ನು ನೀಡಲಾಗಿದೆ. ಹಾಗಾಗಿ, ಸ್ನೇಹಕ್ಕೆ ಹೊರತಾಗಿಯೂ, ಯಹೂದಿಯರ ಬಗೆಗಿನ ನನ್ನ ಸಹಾನುಭೂತಿಗೆ ವ್ಯಾಪಕ ಜಾಗತಿಕ ಕಾರಣವೂ ಇದೆ.
ಆದರೆ ಯಹೂದಿಯರ ಬಗ್ಗೆ ನಾನು ಹೊಂದಿರುವ ಸಹಾನುಭೂತಿ ನ್ಯಾಯದ ಕಡೆಗೆ ನಾನು ಕುರುಡಾಗಿ ವರ್ತಿಸುವಂತೆ ಮಾಡಿಲ್ಲ. ಯಹೂದಿಯರಿಗೆ ಒಂದು ದೇಶವನ್ನು ನೀಡಬೇಕೆನ್ನುವ ಕೂಗಿನ ಬಗ್ಗೆ ನಾನು ಆಕರ್ಷಿತನಾಗಿಲ್ಲ. ಅದನ್ನು ನಾನು ಬೆಂಬಲಿಸುವುದಿಲ್ಲ. ಭೂಮಿಯ ಮೇಲಿನ ಇತರ ಜನರಂತೆ, ಯಹೂದಿಗಳು ತಾವು ಹುಟ್ಟಿದ ಹಾಗೂ ಜೀವನೋಪಾಯ ಗಳಿಸುತ್ತಿರುವ ದೇಶವನ್ನೇ ತಮ್ಮ ಮನೆಯನ್ನಾಗಿ ಯಾಕೆ ಮಾಡಿಕೊಳ್ಳಬಾರದು? ಎನ್ನುವುದು ನನ್ನ ಪ್ರಶ್ನೆ.
ಇಂಗ್ಲೆಂಡ್ ಇಂಗ್ಲಿಷರಿಗೆ ಮತ್ತು ಫ್ರಾನ್ಸ್ ಫ್ರೆಂಚರಿಗೆ ಹೇಗೆ ಸೇರಿದೆಯೋ, ಅದೇ ರೀತಿ ಫೆಲೆಸ್ತೀನ್ ಅರಬ್ಬರಿಗೆ ಸೇರಿದೆ. ಅರಬ್ಬರ ಮೇಲೆ ಯಹೂದಿಯರನ್ನು ಹೇರುವುದು ತಪ್ಪು ಮತ್ತು ಅಮಾನವೀಯ. ಇಂದು ಫೆಲೆಸ್ತೀನ್‌ನಲ್ಲಿ ಏನು ನಡೆಯುತ್ತಿದೆಯೋ ಅದನ್ನು ಯಾವುದೇ ನೈತಿಕ ಮಾನದಂಡದಿಂದ ಸಮರ್ಥಿಸಲಾಗದು. ಫೆಲೆಸ್ತೀನನ್ನು ಆಂಶಿಕವಾಗಿ ಅಥವಾ ಪೂರ್ಣವಾಗಿ ಯಹೂದಿಯರ ದೇಶವನ್ನಾಗಿಸುವುದು ಹಾಗೂ ಆ ಮೂಲಕ ಅರಬ್ಬರ ಘನತೆಯನ್ನು ತಗ್ಗಿಸುವುದು ಖಂಡಿತವಾಗಿಯೂ ಮನುಕುಲದ ವಿರುದ್ಧ ಮಾಡಿದ ಅಪರಾಧವಾಗುತ್ತದೆ.

ಇದಕ್ಕೆ ಸರಿಯಾದ ಪರಿಹಾರವೆಂದರೆ ಯಹೂದಿಗಳು ಎಲ್ಲಿ ಹುಟ್ಟಿ ಬೆಳೆದಿದ್ದಾರೋ ಅಲ್ಲೇ ಅವರಿಗೆ ನ್ಯಾಯಯುತವಾದ ಸ್ಥಾನಮಾನ ಸಿಗುವಂತೆ ನೋಡಿಕೊಳ್ಳುವುದು. ಫ್ರಾನ್ಸ್‌ನಲ್ಲಿ ಹುಟ್ಟಿದ ಯಹೂದಿಗಳು ಫ್ರೆಂಚರು. ಯಹೂದಿಯರಿಗೆ ಫೆಲೆಸ್ತೀನ್ ಅಲ್ಲದೆ ಬೇರೆ ಮನೆ ಇಲ್ಲ ಎಂದಾದರೆ, ತಮ್ಮ ಮನೆಗಳನ್ನು ತೊರೆಯುವಂತೆ ಜಗತ್ತಿನ ಇತರ ಭಾಗಗಳಲ್ಲಿ ನೆಲೆ ಕಂಡುಕೊಂಡಿರುವ ಯಹೂದಿಗಳನ್ನು ಒತ್ತಾಯಿಸಬಹುದೇ? ಹಾಗೂ ಇಂಥ ಒತ್ತಾಯವನ್ನು ಅವರು ಸ್ವೀಕರಿಸುತ್ತಾರೆಯೇ? ಅಥವಾ ಅವರಿಗೆ ಎರಡು ಮನೆಗಳು ಬೇಕೇ ಹಾಗೂ ತಮಗೆ ಇಷ್ಟಬಂದಂತೆ ಅವರು ಆ ಮನೆಗಳಲ್ಲಿ ಇರಬಹುದೇ? ಈ ಪ್ರತ್ಯೇಕ ಇಸ್ರೇಲ್ ರಾಷ್ಟ್ರಕ್ಕಾಗಿನ ಕೂಗು ಜರ್ಮನಿಯಿಂದ ಯಹೂದಿಗಳನ್ನು ಉಚ್ಚಾಟಿಸುವ ಕ್ರಮವನ್ನು ಸಮರ್ಥಿಸುತ್ತದೆ.
 ಆದರೆ, ಜರ್ಮನಿಗರ ಕೈಯಲ್ಲಿ ಯಹೂದಿಗಳು ಅನುಭವಿಸಿದ ಹಿಂಸೆಗೆ ಇತಿಹಾಸದಲ್ಲಿ ಸಾಟಿಯೇ ಇಲ್ಲ. ಹಿಂದಿನ ಕಾಲದ ನಿರಂಕುಶ ಆಡಳಿತಗಾರರು ಕೂಡ ಹಿಟ್ಲರ್‌ನ ಹುಚ್ಚನ್ನು ಸರಿಗಟ್ಟಲಾರರು. ಹಿಟ್ಲರ್ ಇದನ್ನು ಧಾರ್ಮಿಕ ಉತ್ಸಾಹದಿಂದ ಮಾಡುತ್ತಿದ್ದಾನೆ. ಹಿಂಸಾ ವಿನೋದಿ ರಾಷ್ಟ್ರೀಯತೆಗಾಗಿಯೇ ಮುಡುಪಾಗಿಟ್ಟಿರುವ ನೂತನ ಧರ್ಮವೊಂದನ್ನು ಆತ ಸ್ಥಾಪಿಸುತ್ತಿದ್ದಾನೆ ಹಾಗೂ ಈಗ ಮತ್ತು ಇನ್ನು ಮುಂದೆ ಈ ಧರ್ಮದಲ್ಲಿ ಯಾವುದೇ ಅಮಾನವೀಯತೆಯ ಕತ್ಯ , ಮಾನವೀಯತೆಯ ಕತ್ಯವಾಗಿ ಪುರಸ್ಕರಿಸಲ್ಪಡುತ್ತದೆ. ಓರ್ವ ಹುಚ್ಚ, ಆದರೆ ಅಸಾಧಾರಣ ಧೈರ್ಯಶಾಲಿ ಯುವಕನೊಬ್ಬನ ಅಪರಾಧವನ್ನು ಆತನ ಜನಾಂಗದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಮನುಕುಲದ ಹೆಸರಿನಲ್ಲಿ ಮನುಕುಲಕ್ಕಾಗಿ ಎಂದಾದರೂ ಸಮರ್ಥನೀಯ ಯುದ್ಧ ನಡೆಯುತ್ತದೆ ಎಂದಾದರೆ, ಇಡೀ ಜನಾಂಗವೊಂದನ್ನು ಹಿಂಸೆಯಿಂದ ಪಾರು ಮಾಡಲು ಜರ್ಮನಿಯ ವಿರುದ್ಧ ಯುದ್ಧ ನಡೆಯಬೇಕಾಗಿದೆ ಹಾಗೂ ಅದು ಸಂಪೂರ್ಣ ಸಮರ್ಥನೀಯವಾಗಿದೆ. ಆದರೆ, ಯಾವುದೇ ಯುದ್ಧದಲ್ಲಿ ನನಗೆ ನಂಬಿಕೆಯಿಲ್ಲ. ಹಾಗಾಗಿ, ಇಂಥ ಯುದ್ಧದ ಸಾಧಕ-ಬಾಧಕಗಳು ನನ್ನ ವ್ಯಾಪ್ತಿಗೆ ಬರುವುದಿಲ್ಲ.
  ಯಹೂದಿಗಳ ವಿರುದ್ಧ ನಡೆಸಲಾಗುತ್ತಿರುವ ಇಂಥ ಅಪರಾಧದ ಹೊರತಾಗಿಯೂ ಜರ್ಮನಿಯ ವಿರುದ್ಧ ಯುದ್ಧ ಮಾಡುವುದು ಸಾಧ್ಯವಿಲ್ಲವಾದರೆ, ಖಂಡಿತವಾಗಿಯೂ ಜರ್ಮನಿಯೊಂದಿಗೆ ಮೈತ್ರಿಯೂ ಸಾಧ್ಯವಿಲ್ಲ. ನ್ಯಾಯ ಮತ್ತು ಪ್ರಜಾಪ್ರಭುತ್ವದ ಪರವಾಗಿರುವೆನೆಂದು ಹೇಳಿಕೊಳ್ಳುವ ದೇಶ ಹಾಗೂ ನ್ಯಾಯ ಮತ್ತು ಪ್ರಜಾಪ್ರಭುತ್ವದ ಘೋಷಿತ ಶತ್ರುವಾಗಿರುವ ದೇಶವೊಂದರ ನಡುವೆ ಮೈತ್ರಿ ಹೇಗೆ ಸಾಧ್ಯ? ಮಾನವೀಯತೆಯ ಮುಖವಾಡದಲ್ಲಿ ಸೋಗಲಾಡಿತನ ಅಥವಾ ದೌರ್ಬಲ್ಯವು ಮಧ್ಯಪ್ರವೇಶಿಸದಿದ್ದರೆ ಹಿಂಸೆಯನ್ನು ಎಷ್ಟು ದಕ್ಷತೆಯಿಂದ ನಿರ್ವಹಹಿಸಬಹುದು ಎಂಬುದನ್ನು ಜರ್ಮನಿ ವಿಶ್ವಕ್ಕೆ ತೋರಿಸಿಕೊಟ್ಟಿದೆ. ಇದನ್ನು ನಿಜರೂಪದಲ್ಲಿ ನೋಡಿದಾಗ ಅವು ಎಷ್ಟು ಅಗೋಚರವಾಗಿ, ಭಯಾನಕವಾಗಿ ಕಾಣಿಸುತ್ತದೆ ಎನ್ನುವುದೂ ಇದರಿಂದ ಗೊತ್ತಾಗುತ್ತದೆ.
ಈ ಸಂಘಟಿತ ಹಾಗೂ ಅನಾಗರಿಕ ಹಿಂಸೆಯನ್ನು ಯಹೂದಿಗಳು ವಿರೋಧಿಸಬಲ್ಲರೇ? ತಮ್ಮ ಸ್ವಾಭಿಮಾನವನ್ನು ರಕ್ಷಿಸಲು ಹಾಗೂ ತಾವು ಅಸಹಾಯಕರು, ನಿರ್ಲಕ್ಷಿತರು ಮತ್ತು ಅನಾಥರು ಎಂಬ ಭಾವನೆಯನ್ನು ಹೋಗಲಾಡಿಸಲು ಏನಾದರೂ ಮಾರ್ಗವಿದೆಯೇ? ಹೌದು, ಮಾರ್ಗವಿದೆ. ದೇವರ ಮೇಲೆ ನಂಬಿಕೆ ಇರುವ ಯಾವುದೇ ವ್ಯಕ್ತಿ ಅಸಹಾಯಕ ಅಥವಾ ಅನಾಥ ಭಾವನೆಯಿಂದ ನರಳುವ ಅಗತ್ಯವಿಲ್ಲ.
    ದೇವರು ಒಂದೇ, ಎಲ್ಲರಿಗೂ ಒಬ್ಬನೆ ಹಾಗೂ ವರ್ಣನೆಗೆ ಅತೀತ ಎಂಬುದಾಗಿ ಸಾಮಾನ್ಯ ನಂಬಿಕೆಯಿದ್ದರೂ, ಯಹೂದಿಗಳ ಜಿಹೋವಾ ಕ್ರೈಸ್ತರು, ಮುಸಲ್ಮಾನರು ಅಥವಾ ಹಿಂದೂಗಳ ದೇವರಿಗಿಂತ ಹೆಚ್ಚು ಆಪ್ತ. ಆದರೆ, ಯಹೂದಿಗಳು ದೇವರಿಗೆ ವ್ಯಕ್ತಿತ್ವವನ್ನು ನೀಡಿದ್ದಾರೆ ಹಾಗೂ ಆತ ತಮ್ಮ ಎಲ್ಲ ಕತ್ಯಗಳ ಮೇಲೆ ದೇವರು ನಿಯಂತ್ರಣ ಹೊಂದಿದ್ದಾನೆ ಎಂದು ಭಾವಿಸುತ್ತಾರೆ. ಹಾಗಾಗಿ, ಅವರು ಅಸಹಾಯಕ ಭಾವನೆಯನ್ನು ಹೊಂದುವ ಅಗತ್ಯವಿಲ್ಲ. ನಾನು ಯಹೂದಿಯಾಗಿದ್ದರೆ, ಜರ್ಮನಿಯಲ್ಲಿ ಹುಟ್ಟಿದ್ದರೆ ಹಾಗೂ ನನ್ನ ಜೀವನೋಪಾಯವನ್ನು ಅಲ್ಲೇ ಸಂಪಾದಿಸುತ್ತಿದ್ದರೆ, ಜರ್ಮನಿಯನ್ನು ನನ್ನ ಮನೆ ಎಂಬುದಾಗಿ ನಾನು ಘೋಷಿಸುತ್ತಿದ್ದೆ. ನನಗೆ ಗುಂಡು ಹಾರಿಸುವುದಾಗಿ ಹಾಗೂ ಕತ್ತಲ ಕೂಪಕ್ಕೆ ತಳ್ಳುವುದಾಗಿ ಎತ್ತರದ ಜರ್ಮನಿ ಜನಾಂಗೀಯನೊಬ್ಬ ನನಗೆ ಬೆದರಿಕೆ ಹಾಕಿದರೂ ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಉಚ್ಚಾಟನೆಗೊಳ್ಳಲು ಅಥವಾ ತಾರತಮ್ಯಪೂರಿತ ನಡವಳಿಕೆಗೆ ಒಳಗಾಗಲು ನಾನು ಒಪ್ಪುತ್ತಿರಲಿಲ್ಲ. ಹೀಗೆ ಮಾಡುವಾಗ ನನ್ನ ಸಹ ಯಹೂದಿಗಳು ನನಗೆ ಬೆಂಬಲ ನೀಡಬೇಕೆಂದು ನಾನು ಕಾಯುವುದಿಲ್ಲ, ಆದರೆ, ಕೊನೆಯಲ್ಲಿ ಇತರರು ನನ್ನ ಉದಾಹರಣೆಯನ್ನು ಅನುಸರಿಸುತ್ತಾರೆ ಎಂಬ ವಿಶ್ವಾಸವನ್ನು ನಾನು ಹೊಂದುತ್ತೇನೆ. ಇಲ್ಲಿ ನೀಡಿರುವ ಸಲಹೆಯನ್ನು ಒಬ್ಬ ಯಹೂದಿ ಅಥವಾ ಯಹೂದಿಗಳು ಒಪ್ಪಿಕೊಂಡರೆ, ಆತ ಅಥವಾ ಅವರು ಈಗಿನದಕ್ಕಿಂತ ಕೆಟ್ಟ ಪರಿಸ್ಥಿತಿಗೆ ಯಾವತ್ತೂ ಬೀಳುವುದಿಲ್ಲ. ಸ್ವಯಂ ದಂಡನೆ ಯಹೂದಿಗಳಿಗೆ ಆಂತರಿಕ ಶಕ್ತಿಯನ್ನು ತುಂಬುತ್ತದೆ. ಜರ್ಮನಿಯಿಂದ ಹೊರಗಿನ ಜಗತ್ತಿನಲ್ಲಿ ಎಷ್ಟೇ ಸಂಖ್ಯೆಯ ಅನುಕಂಪ ನಿರ್ಣಯಗಳನ್ನು ಅಂಗೀಕರಿಸಿದರೂ ಅವು ಈ ಶಕ್ತಿಗೆ ಸಮವಾಗಲಾರದು. ಈ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್‌ಗಳು ಜರ್ಮನಿ ವಿರುದ್ಧ ಯುದ್ಧ ಸಾರಿದರೂ ಅದು ಯಹೂದಿಗಳಿಗೆ ಆತ್ಮ ಶಕ್ತಿ ಮತ್ತು ಆತ್ಮ ಸಂತೋಷವನ್ನು ತರಲಾರದು. ಯುದ್ಧ ಘೋಷಣೆಗೆ ಹಿಟ್ಲರ್‌ನ ಪ್ರಥಮ ಪ್ರತಿಕ್ರಿಯೆಯನ್ನು ಗಮನಿಸಿದರೆ ಆತನ ಲೆಕ್ಕಾಚಾರದ ಹಿಂಸಾಚಾರ ಯಹೂದಿಗಳ ಸಾಮೂಹಿಕ ಮಾರಣಹೋಮದಲ್ಲೂ ಪರ್ಯಾವಸಾನಗೊಳ್ಳಬಹುದು. ಆದರೆ, ಸ್ವಯಂ ದಂಡನೆಗೆ ಯಹೂದಿಗಳು ಸಿದ್ಧರಿದ್ದರೆ ನಾನು ಊಹಿಸಿದ ಮಾರಣಹೋಮವೂ ಸಂತೋಷ ಮತ್ತು ಧನ್ಯವಾದ ಸಮರ್ಪಣೆಯ ದಿನವಾಗಿ ಮಾರ್ಪಡಬಹುದು. ಯಾಕೆಂದರೆ, ದೇವರಿಗೆ ಭಯಪಡುವವರಿಗೆ ಸಾವು ಭಯ ಹುಟ್ಟಿಸುವುದಿಲ್ಲ. ಅದೊಂದು ಸುಖದಾಯಕ ನಿದ್ರೆ.
ನನ್ನ ಪರಿಹಾರದ ಪ್ರಕಾರ ನಡೆಯುವುದು ಝೆಕ್‌ಗಳಿಗಿಂತಲೂ ಯಹೂದಿಗಳಿಗೆ ಹೆಚ್ಚು ಸುಲಭ ಎಂದು ಹೇಳುವ ಅಗತ್ಯವೇನೂ ಇಲ್ಲ. ಅವರು ದಕ್ಷಿಣ ಆಫ್ರಿಕದಲ್ಲಿ ನಡೆದ ಭಾರತೀಯ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದ್ದರು. ಜರ್ಮನಿಯಲ್ಲಿ ಯಹೂದಿಯರು ಪಡೆದ ಸ್ಥಾನವನ್ನೇ ದಕ್ಷಿಣ ಆಫ್ರಿಕದಲ್ಲಿ ಭಾರತೀಯರು ಪಡೆದುಕೊಂಡರು. ಹಿಂಸಾಚಾರದಲ್ಲೂ ಧಾರ್ಮಿಕತೆಯ ಮುದ್ರೆಯಿದೆ. ಬಿಳಿ ಕ್ರೈಸ್ತರು ದೇವರ ಆಯ್ದ ಸಷ್ಟಿ ಹಾಗೂ ಭಾರತೀಯರು ಬಿಳಿಯರ ಸೇವೆ ಮಾಡುವುದಕ್ಕಾಗಿ ಸಷ್ಟಿಸಲಾದ ಕೆಳ ಮಟ್ಟದ ಮಾನವರು ಎಂಬುದಾಗಿ ಅಧ್ಯಕ್ಷ ಕ್ರುಗರ್ ಹೇಳುತ್ತಿದ್ದರು. ಬಿಳಿಯರು ಹಾಗೂ ಏಶ್ಯನ್ನರು ಸೇರಿದಂತೆ ವರ್ಣೀಯ ಜನಾಂಗಗಳ ನಡುವೆ ಸಮಾನತೆ ಇರಕೂಡದು ಎಂಬುದಾಗಿ ಟ್ರಾನ್ಸ್‌ವಾಲ್ ಸಂವಿಧಾನದ ಮೂಲಭೂತ ವಿಧಿಯೊಂದು ಹೇಳುತ್ತದೆ. ಅಲ್ಲಿಯೂ ಭಾರತೀಯರನ್ನು ಕೊಳೆಗೇರಿಗಳಿಗೆ ನೂಕಲಾಗುತ್ತಿತ್ತು. ಅವರು ದಕ್ಷಿಣ ಆಫ್ರಿಕದಲ್ಲಿ ಎದುರಿಸುವ ಇತರ ಸಮಸ್ಯೆಗಳು ಜರ್ಮನಿಯಲ್ಲಿ ಯಹೂದಿಗಳು ಎದುರಿಸುತ್ತಿರುವ ಸಮಸ್ಯೆಯಂತೆಯೇ ಇದೆ. ಬೆರಳೆಣಿಕೆಯಷ್ಟಿದ್ದ ಭಾರತೀಯರು ಬಾಹ್ಯ ಜಗತ್ತು ಅಥವಾ ಭಾರತ ಸರಕಾರದ ಬೆಂಬಲವಿಲ್ಲದೆಯೇ ಸತ್ಯಾಗ್ರಹ ಆರಂಭಿಸಿದರು. ಬ್ರಿಟಿಶ್ ಅಧಿಕಾರಿಗಳು ಸತ್ಯಾಗ್ರಹಿಗಳ ಮನವೊಲಿಕೆಗೆ ಮುಂದಾಗಿದ್ದು ಮುನ್ನೋಟದ ಕ್ರಮವಾಗಿತ್ತು. ಎಂಟು ವರ್ಷಗಳ ಹೋರಾಟದ ಬಳಿಕ ಭಾರತ ಸರಕಾರ ಮತ್ತು ಜಾಗತಿಕ ನಿಲುವು ಸತ್ಯಾಗ್ರಹಿಗಳ ಪರವಾಗಿ ನಿಂತವು. ಇದು ಸಾಧ್ಯವಾದದ್ದು ರಾಜತಾಂತ್ರಿಕ ಒತ್ತಡದಿಂದಲೇ ಹೊರತು ಯುದ್ಧದ ಬೆದರಿಕೆಯಿಂದಲ್ಲ.
 ಆದರೆ, ಜರ್ಮನಿಯ ಯಹೂದಿಗಳು ದಕ್ಷಿಣ ಆಫ್ರಿಕದ ಭಾರತೀಯರಂತಲ್ಲದೆ ಅಸಂಖ್ಯಾತ ಉತ್ತಮ ವೇದಿಕೆಗಳ ಮೂಲಕ ಸತ್ಯಾಗ್ರಹ ನಡೆಸಬಹುದಾಗಿದೆ. ಯಹೂದಿಗಳು ಜರ್ಮನಿಯಲ್ಲಿರುವ ಸಮಾನತೆ ಹೊಂದಿದ ಸಮುದಾಯ. ಅವರು ದಕ್ಷಿಣ ಆಫ್ರಿಕದ ಭಾರತೀಯರಿಗಿಂತ ಅತಿ ಹೆಚ್ಚು ಪ್ರತಿಭಾವಂತರು. ಅವರ ಬೆನ್ನ ಹಿಂದೆ ಸಂಘಟಿತ ವಿಶ್ವಾಭಿಪ್ರಾಯವಿದೆ. ಧೈರ್ಯ ಮತ್ತು ದೂರದಷ್ಟಿ ಹೊಂದಿದ ವ್ಯಕ್ತಿಯೊಬ್ಬ ಅವರ ನಡುವೆ ಹುಟ್ಟಿ ಅಹಿಂಸಾತ್ಮಕ ಚಳವಳಿಯನ್ನು ಮುನ್ನಡೆಸಿದರೆ ಅವರ ಬದುಕಿನಲ್ಲಿ ಭರವಸೆಯ ಹೊಂಗಿರಣಗಳು ಮೂಡಲು ಸಾಧ್ಯ. ಅಂದು ಜರ್ಮನಿಯ ಯಹೂದಿಗಳು ಜರ್ಮನಿಯ ಯಹೂದಿಯೇತರರ ವಿರುದ್ಧ ಶಾಶ್ವತ ಗೆಲುವನ್ನು ಪಡೆಯುತ್ತಾರೆ. ಯಾಕೆಂದರೆ, ಮಾನವ ಘನತೆಯನ್ನು ಗೌರವಿಸುವ ಬಗ್ಗೆ ಅಂದು ಅವರು ಜರ್ಮನಿಯ ಯಹೂದಿಯೇತರರ ಮನವೊಲಿಸುತ್ತಾರೆ. ಅಂದು ಅವರು ತಮ್ಮ ಸಹ ಜರ್ಮನೀಯರ ಪ್ರತಿಷ್ಠೆಯನ್ನು ಹೆಚ್ಚಿಸಲಿದ್ದಾರೆ ಹಾಗೂ ಇಂದು ಜರ್ಮನ್ ಹೆಸರನ್ನು ವಿವಾದಕ್ಕೆ ಎಳೆದುಕೊಂಡು ಹೋಗುತ್ತಿರುವವರ ನಡುವೆ ನಿಜವಾದ ಜರ್ಮನೀಯರು ಯಾರು ಎಂಬುದನ್ನು ತೋರಿಸಿಕೊಡಲಿದ್ದಾರೆ.
ಈಗ ಫೆಲೆಸ್ತೀನ್‌ನಲ್ಲಿ ಇರುವ ಯಹೂದಿಯರಿಗೆ ಒಂದು ಮಾತು. ಅವರು ಇಲ್ಲಿ ತಪ್ಪು ಮಾಡುತ್ತಿದ್ದಾರೆ ಎಂದು ಹೇಳುವುದರಲ್ಲಿ ನನ್ನಲ್ಲಿ ಯಾವುದೇ ಗೊಂದಲಗಳಿಲ್ಲ. ಬೈಬಲ್‌ನಲ್ಲಿ ಉಲ್ಲೇಖಗೊಂಡಿರುವ ಫೆಲೆಸ್ತೀನ್ ವಾಸ್ತವದಲ್ಲಿ ಭೂಪ್ರದೇಶವಲ್ಲ. ಅದು ಯಹೂದಿಗಳ ಹದಯಗಳಲಿ ಮಾತ್ರ ಇದೆ. ಇಷ್ಟಾಗಿಯೂ ಫೆಲೆಸ್ತೀನ್ ಭೂಪ್ರದೇಶವನ್ನು ಯಹೂದಿಗಳು ತಮ್ಮ ರಾಷ್ಟ್ರೀಯ ಮನೆ ಎಂಬುದಾಗಿ ಪರಿಗಣಿಸುವುದಾದರೆ, ಬ್ರಿಟಿಶ್ ಬಂದೂಕಿನ ನೆರಳಿನಲ್ಲಿ ಅದನ್ನು ಪ್ರವೇಶಿಸುವುದು ತಪ್ಪು. ಧಾರ್ಮಿಕ ಕಾರ್ಯವೊಂದನ್ನು ಬಯೋನೆಟ್ (ಬಂದೂಕಿನ ತುದಿಯಲ್ಲಿರುವ ಚಾಕು) ಅಥವಾ ಬಾಂಬ್‌ಗಳ ನೆರವಿನಿಂದ ನಿರ್ವಹಿಸುವುದು ಸಾಧ್ಯವಿಲ್ಲ. ಅರಬ್ಬರ ಸದ್ಭಾವನೆಯೊಂದಿಗೆ ಮಾತ್ರ ಅವರು ಫೆಲೆಸ್ತೀನ್‌ನಲ್ಲಿ ನೆಲೆಸಲು ಸಾಧ್ಯ. ಅವರು ಅರಬ್ ಹದಯವನ್ನು ಪರಿವರ್ತಿಸಬೇಕು. ಯಹೂದಿ ಹದಯವನ್ನು ನಿಯಂತ್ರಿಸುವ ದೇವರೇ ಅರಬ್ ಹದಯವನ್ನು ನಿಯಂತ್ರಿಸುತ್ತಾನೆ. ಅವರು ಅರಬ್ಬರ ಸಮ್ಮುಖದಲ್ಲಿ ಸತ್ಯಾಗ್ರಹ ನಡೆಸಬಹುದು ಹಾಗೂ ಅವರ ಬಂದೂಕಿಗೆ ಎದೆಯೊಡ್ಡಲು ಮುಂದಾಗಬೇಕು. ಅರಬ್ಬರು ತಮ್ಮನ್ನು ಮತ ಸಮುದ್ರಕ್ಕೆ ಎತ್ತಿ ಬಿಸಾಡಿದರೂ ಅದನ್ನು ಸ್ವೀಕರಿಸಬೇಕು ಹಾಗೂ ಅವರ ವಿರುದ್ಧ ಕಿರು ಬೆರಳನ್ನೂ ಎತ್ತಬಾರದು. ಹೀಗೆ ಮಾಡಿದರೆ ವಿಶ್ವದ ಅಭಿಪ್ರಾಯ ಅವರ ಪರವಾಗಿ ಬರುತ್ತದೆ.
ನಾನು ಅರಬ್ಬರ ಅತಿರೇಕಗಳನ್ನು ಸಮರ್ಥಿಸುತ್ತಿಲ್ಲ. ಆದರೆ ತಮ್ಮ ದೇಶವನ್ನು ಆಕ್ರಮಿಸಲು ಪ್ರಯತ್ನಗಳು ನಡೆದಿವೆ ಎಂಬ ಅಭಿಪ್ರಾಯಕ್ಕೆ ಅರಬ್ಬರು ಬಂದಿದ್ದರೆ ಅದು ಸರಿಯಾಗಿಯೇ ಇದೆ. ಅದನ್ನು ವಿರೋಧಿಸಲು ಅವರು ಅಹಿಂಸಾ ಕ್ರಮಕ್ಕೆ ಮುಂದಾಗಿದ್ದರೆ ಚೆನ್ನ. ಆದರೆ, ಸ್ವೀಕತ ತಪ್ಪು-ಒಪ್ಪುಗಳ ಮಾನದಂಡದ ಆಧಾರದಲ್ಲಿ, ಪ್ರಸಕ್ತ ನಡೆಯುತ್ತಿರುವ ಅಸಹಜ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅರಬ್ ಪ್ರತಿರೋಧವನ್ನು ಟೀಕಿಸಲು ಸಾಧ್ಯವಾಗದು.
ತಮ್ಮನ್ನು ದೇವರ ಆಯ್ದ ಜನಾಂಗ ಎಂಬುದಾಗಿ ಬಣ್ಣಿಸಿಕೊಳ್ಳುವ ಯಹೂದಿಗಳು ಜಗತ್ತಿನಲ್ಲಿ ತಮ್ಮ ಸ್ಥಾನವನ್ನು ಪಡೆಯಲು ಅಹಿಂಸಾ ಹಾದಿಯಲ್ಲಿ ಸಾಗಲಿ. ಫೆಲೆಸ್ತೀನ್ ಸೇರಿದಂತೆ ಪ್ರತಿ ದೇಶವೂ ಅವರ ಮನೆ; ಆಕ್ರಮಣದಿಂದಲ್ಲ, ಪ್ರೀತಿಯ ಸೇವೆಯಿಂದ.
ಸೆಗಾಂವ್
ನವೆಂಬರ್ 20, 1938

No comments:

Post a Comment