Thursday, May 22, 2014

‘ಗಾಂಧೀಜೀ’ಗೆ ‘ಮೋದೀಜೀ’ ಪತ್ರ...

ಇದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಗುರುವಾರ ಪ್ರಕಟವಾದ ಬೊಳುವಾರು ಮಹಮ್ಮದ್  ಕುನ್ಜಿ ಅವರ ಬರಹ 

ಕಳೆದೆರಡು ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ವಿಪರೀತ ಸದ್ದು ಮಾಡುತ್ತಿರುವ ಶ್ರೀ ಗೋಪಾಲಕೃಷ್ಣ ಗಾಂಧಿಯವರು ದಿನ ಪತ್ರಿಕೆಯೊಂದರಲ್ಲಿ ಶ್ರೀ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಹಾಗೂ ಮೇ 20ರಂದು ಮೋದಿಯವರು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಮಾಡಿದ ಸಮಯೋಚಿತ ಭಾಷಣವನ್ನು ಕೇಳಿದಾಗ, ಹೊಳೆದ ಕಾಲ್ಪನಿಕ ಪತ್ರವಿದು. ದಿನಪತ್ರಿಕೆಗಳಲ್ಲಿ ನಾವು ಓದುವುದು, ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಆಲಿಸುವುದು, ಆ ಮಾತುಗಳನ್ನು ಬರೆದವರು ಅಥವಾ ಹೇಳಿದವರು ಯಾರು ಎಂಬ ಪ್ರಭಾವಳಿಯಲ್ಲಿ ಮಾತ್ರ. ನಮ್ಮ ಮಾತುಗಳನ್ನು ಅವರು ಬರೆದಾಗ, ಅಥವಾ ಹೇಳಿದಾಗ ಮಾತ್ರ ನಮಗದು ಸುಲಭಸಮ್ಮತವಾಗುತ್ತದೆ. ಶ್ರೀ ಗೊಪಾಲಕೃಷ್ಣ ಗಾಂಧಿಯವರ ಪತ್ರದ ಒಂದಕ್ಷರವನ್ನೂ ಬದಲಾಯಿಸದೆ, ನೀವು ಎಂಬಲ್ಲಿ ನಾನು ಎಂದಷ್ಟೇ ಬದಲಾಯಿಸಿಕೊಂಡು ಬರೆದ ಈ ಕಾಲ್ಪನಿಕ ಪತ್ರದ ಎಲ್ಲ ಮಾತುಗಳು, ನಮ್ಮ ಮಾತುಗಳೂ ಆದಾಗ, ಕೊನೆಯ ಪಾರಾದಲ್ಲಿರುವ ಕೆಲವು ಹೆಸರು ಸಲಹೆ ಇತ್ಯಾದಿಗಳನ್ನು ಹೊರತುಪಡಿಸಿ, ಶ್ರೀ ಮೋದಿಯವರ ಸ್ವಂತ ಮಾತುಗಳಂತೆಯೇ ಅನ್ನಿಸುತ್ತದಲ್ಲವೆ?- ಹಾಗಾದರೆ ಸಾರ್ವಜನಿಕವಾಗಿ ನಾವು ಆಡುವ ಮಾತುಳೆಲ್ಲವೂ ಬರಿಯ ಮಾತು ಮಾತ್ರವೇ?
- ಬೊಳುವಾರು ಮುಹಮ್ಮದ್ ಕುಂಞಿ


***
ಪ್ರೀತಿಯ ಗಾಂಧೀಜೀ,

ಹೃತ್ಪೂರ್ವಕ ಕೃತಜ್ಞತೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಆದರೆ, ಕೃತಜ್ಞತೆಗಳನ್ನು ಅಷ್ಟು ಸುಲಭದಲ್ಲಿ ಸಲ್ಲಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ನಾನು ಈಗ ತಲುಪಿರುವ ಈ ಅತ್ಯುನ್ನತ ಹುದ್ದೆಯಲ್ಲಿ ನನ್ನನ್ನು ಕಾಣಬಯಸದ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ನಾನು ಪ್ರಧಾನಿಯಾಗಿದ್ದೇನೆಂದು ಕೋಟ್ಯಂತರ ಮಂದಿ ಭಾವಪರವಶರಾಗಿದ್ದರೆ, ವಾಸ್ತವಿಕವಾಗಿ ಇನ್ನೂ ಹಲವು ಕೋಟ್ಯಂತರ ಮಂದಿ ದುಗುಡದಲ್ಲಿದ್ದಾರೆಂಬುದು ಎಲ್ಲರಿಗಿಂತ ಹೆಚ್ಚು ಚೆನ್ನಾಗಿ ನನಗೆ ಗೊತ್ತಿದೆ. ನಾನು ಇಲ್ಲಿಗೆ ತಲುಪುತ್ತೇನೆಂದು ಹಲವು ಮಂದಿ ಹೇಳಿದ್ದರಾದರೂ, ತೀರಾ ಇತ್ತೀಚಿನವರೆಗೂ ನಿಮಗದನ್ನು ನಂಬಲು ಸಾಧ್ಯವಾಗಿದ್ದಿರಲಾರದು. ಜವಾಹರಲಾಲ್ ನೆಹರೂ, ಲಾಲ್ ಬಹಾದೂರ್ ಶಾಸ್ತ್ರಿ ಹಾಗೂ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ವಿರುದ್ಧ ಐತಿಹಾಸಿಕ ಹೋರಾಟ ನಡೆಸಿದ ಇನ್ನೋರ್ವ ಗುಜರಾತಿ ಮೊರಾರ್ಜಿ ದೇಸಾಯಿ ಮತ್ತು ನನ್ನ ಅಚ್ಚುಮೆಚ್ಚಿನ ರಾಜಕೀಯ ಗುರುವಾದ ಅಟಲ್ ಬಿಹಾರಿ ವಾಜಪೇಯಿಯವರು ಆಸೀನರಾಗಿದ್ದ ಈ ಪೀಠದಲ್ಲಿಯೇ ನಾನು ಕುಳಿತುಕೊಳ್ಳಲಿದ್ದೇನೆ. ನಾನು ಈ ಸ್ಥಾನವನ್ನೇರುವುದನ್ನು ಬಯಸದವರೂ ನಾನು ಇಲ್ಲಿರುವೆನೆಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು.
ಈ ಅಪರೂಪದ ಸುಯೋಗವು ನನಗೆ ದೊರೆತಿರುವ ಬಗ್ಗೆ ನಿಮಗೆ ಭಾರೀ ಕಳವಳವಾಗಿರುವ ಹೊರತಾಗಿಯೂ ನನ್ನಂತಹ ಅತ್ಯಂತ ಅವಕಾಶವಂಚಿತ ಸಮುದಾಯ ಹಾಗೂ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ಭಾರತದ ಪ್ರಧಾನಿಯಾಗುವುದನ್ನು ನೀವು ಗೌರವಿಸಲೇಬೇಕು. ಇದು ಸಮಾನತೆಯನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ಆಶಯವನ್ನು ಅತ್ಯಂತ ಪರಿಪೂರ್ಣತೆಯೊಂದಿಗೆ ಈಡೇರಿಸುತ್ತದೆ. ನಾನೊಬ್ಬ ‘ಚಾಯ್ ವಾಲಾ’ ಆಗಿದ್ದೇನೆಂದು ಕೆಲವರು ಅಂತ್ಯಂತ ಒರಟಾಗಿ ಹಾಗೂ ಕೀಳಾಗಿ ಮಾತನಾಡಿದಾಗ ನಿಮಗೆ ಹೊಟ್ಟೆ ತೊಳಸಿದಂತಾಗಿರಬಹುದು. ಜೀವನೋಪಾಯಕ್ಕಾಗಿ ಚಾ ಮಾರಾಟ ಮಾಡಿ, ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಭಾರತ ಸರಕಾರದ ನೇತೃತ್ವ ವಹಿಸಲು ಸಮರ್ಥನಾಗುವುದು ಎಷ್ಟು ದೊಡ್ಡ ಅದ್ಭುತವೆಂದು ನಿಮ್ಮಲ್ಲೇ ನೀವು ಹೇಳಿಕೊಳ್ಳುತ್ತಿದ್ದಿರಿ. ಓರ್ವನ ‘ಚಮಚಾ’ ಆಗುವ ಬದಲು ಹಲವರಿಗೆ ‘ಚಹಾ ಪಾತ್ರೆ’ ಆಗುವುದು ಎಷ್ಟೋ ಒಳ್ಳೆಯದು.
ಆದರೆ, ನಾನು ಭಾರತದ ಅತ್ಯುನ್ನತ ಪದವಿಯನ್ನೇರಿದ್ದರಿಂದ ಕೋಟ್ಯಂತರ ಭಾರತೀಯರು ಯಾಕೆ ಆತಂಕಗೊಂಡಿದ್ದಾರೆ ಎಂಬ ವಿಷಯದೆಡೆಗೆ ಬರುತ್ತೇನೆ. 2014ರ ಚುನಾವಣೆಯಲ್ಲಿ ಮತದಾರರು ಮುಖ್ಯವಾಗಿ ನನ್ನ ಪರವಾಗಿ ಅಥವಾ ನನ್ನ ವಿರುದ್ಧವಾಗಿ ಎಂಬ ನಿಲುವಿನೊಂದಿಗೆ ಮತ ಚಲಾಯಿಸಿದ್ದರು. ನಾನು ದೇಶದ ಅತ್ಯುತ್ತಮ ಸಂರಕ್ಷಕ ಅಥವಾ ಅಲ್ಲವೇ? ಎಂಬುದೇ ಈ ಚುನಾವಣೆಯ ವಿಷಯವಾಗಿತ್ತು. ನಾನು ದೇಶದ ಅತ್ಯುತ್ತಮ ಸಂರಕ್ಷಕನೆಂಬುದಾಗಿ ನಮ್ಮ ಶೇ.31ರಷ್ಟು ಮತದಾರರು ಕಲ್ಪಿಸಿಕೊಳ್ಳುವಂತೆ ಮಾಡುವಲ್ಲಿ ನಾನು ಸಫಲನಾಗಿರುವುದರಿಂದ ಬಿಜೆಪಿಯು ಸ್ಥಾನಗಳನ್ನು ಗೆದ್ದಿತು. ಆದರೆ ಶೇ.69ರಷ್ಟು ಮತದಾರರು ನನ್ನನ್ನು ಅವರ ‘ರಖ್‌ವಾಲಾ’ನನ್ನಾಗಿ ನೋಡಬಯಸಲಿಲ್ಲ. ಏಕತೆ ಮತ್ತು ಸ್ಥಿರತೆ ಮಂತ್ರವನ್ನು ಜಪಿಸುವಾಗ ನಾನು ಆಗಾಗ್ಗೆ ಸರ್ದಾರ್ ಪಟೇಲರ ಹೆಸರು ಮತ್ತು ವ್ಯಕ್ತಿತ್ವದೆಡೆಗೆ ಹೊರಳುತ್ತಿದ್ದೆ. ತಮಗೆ ಗೊತ್ತಿರುವಂತೆ, ಸರ್ದಾರ್ ಪಟೇಲ್ ಅವರು ಸಂವಿಧಾನ ರಚನಾ ಅಸೆಂಬ್ಲಿಯ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಒಂದು ವೇಳೆ ಭಾರತದ ಸಂವಿಧಾನವು ಭಾರತದ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿರ್ಣಾಯಕವಾದ ಖಾತರಿಯನ್ನು ನೀಡುತ್ತಿದೆಯೆಂದಾದರೆ ಅದಕ್ಕಾಗಿ ಸರ್ದಾರ್ ಪಟೇಲ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ. ಹಾಗೆಯೇ ಸಮಿತಿಯ ಇತರ ಸದಸ್ಯೆಯಾದ ಕಪೂರ್‌ತಲಾದ ಸಿಖ್ಖ್ ಒಬ್ಬರ ಕ್ರೈಸ್ತ ಪುತ್ರಿಯಾದ ರಾಜ್‌ಕುಮಾರಿ ಅಮೃತ್ ಕೌರ್‌ಗೂ ಕೃತಜ್ಞತೆ ವ್ಯಕ್ತಪಡಿಸಬೇಕು. ಒಟ್ಟಾರೆಯಾಗಿ, ಅಲ್ಪಸಂಖ್ಯಾತರ ಬಗ್ಗೆ ಸಂವಿಧಾನದ ಆಶಯವನ್ನು ನಾನು ಬದಲಾಯಿಸಕೂಡದು, ತಿರುಚಬಾರದು ಅಥವಾ ಕಲಬೆರಕೆಗೊಳಿಸಬಾರದು ಎಂದು ನೀವು ಬಯಸುತ್ತೀರಿ. ಆ ಸಮಿತಿಯಲ್ಲಿ ಬಲಿಷ್ಠ ಸರ್ದಾರ್ ಪಟೇಲ್ ಏನು ಹೇಳಿದ್ದಾರೆಂಬುದನ್ನು ನಾನು ಗಮನಿಸುವೆ. ಯಾಕೆ ಅಲ್ಲಿ ಅಷ್ಟೊಂದು ಭಯ ಭೀತಿಗಳು ನೆಲೆಸಿವೆ? ಅವರಿಗೆ ಯಾಕೆ ತಮ್ಮ ಭಯದ ಬಗ್ಗೆ ಧ್ವನಿಯೆತ್ತಲು ಸಾಧ್ಯವಾಗುತ್ತಿಲ್ಲ? ಯಾಕೆಂದರೆ, ನಾನು ಸಭೆಗಳನ್ನುದ್ದೇಶಿಸಿ ಭಾಷಣ ಮಾಡುವಾಗ ಭಾರತದ ಜನತೆಯನ್ನು ತನ್ನೊಂದಿಗೆ ಕೊಂಡೊಯ್ಯುವಂತಹ ಪ್ರಜಾಪ್ರಭುತ್ವವಾದಿಯೊಬ್ಬನ ಮಾತನ್ನು ಕೇಳಲು ಅವರು ಬಯಸುತ್ತಿದ್ದಾರೆಯೇ ಹೊರತು ಕಟ್ಟಾಜ್ಞೆಗಳನ್ನು ವಿಧಿಸುವ ಚಕ್ರವರ್ತಿಯ ಭಾಷಣವನ್ನಲ್ಲ. ಅಭಿವೃದ್ಧಿ ಎಂಬ ಪದವು ಭದ್ರತೆಗೆ ಪರ್ಯಾಯವಲ್ಲ. ಅಲ್ಪಸಂಖ್ಯಾತರಲ್ಲಿ ಮರುಭರವಸೆಯನ್ನು ಮೂಡಿಸಬೇಕು. ‘ಒಂದು ಕೈಯಲ್ಲಿ ಕುರಾನ್, ಇನ್ನೊಂದು ಕೈಯಲ್ಲಿ ಲ್ಯಾಪ್ ಟಾಪ್’ ಬಗ್ಗೆ ಅಥವಾ ಅಂಥಹದೇ ಪರಿಣಾಮವನ್ನು ಬೀರುವ ಇನ್ನಿತರ ಮಾತುಗಳು, ಅಂಥ ದೃಶ್ಯಗಳು ಮರು ಭರವಸೆಗಳನ್ನು ಮೂಡಿಸುವುದಿಲ್ಲ. ಯಾಕೆಂದರೆ ಅದರ ವಿರುದ್ಧವಾದ ಇನ್ನೊಂದು ದೃಶ್ಯವು ಅವರನ್ನು ಭಯಗ್ರಸ್ತಗೊಳಿಸುತ್ತದೆ. ರೌಡಿಯೊಬ್ಬ ಒಂದು ಕೈಯಲ್ಲಿ ಹಿಂದೂ ಪೌರಾಣಿಕ ಡಿವಿಡಿ, ಇನ್ನೊಂದು ಕೈಯ್ಯಲ್ಲಿ ಆಯುಧವನ್ನು ಹಿಡಿದು ಅಡ್ಡಾಡುತ್ತಿರುವ ದೃಶ್ಯಗಳು ಅವರನ್ನು ಭೀತಿಗೊಳಿಸುತ್ತಿವೆ. ಹಿಂದೆಯೆಲ್ಲ, ಶಾಲಾ ಮುಖ್ಯೋಪಾಧ್ಯಾಯರು ತರಗತಿಯ ಕೊಠಡಿಯ ಮೂಲೆಯಲ್ಲಿ ಉಪ್ಪನ್ನು ಸವರಿಗೆ ಬೆತ್ತವನ್ನು ಇರಿಸುತ್ತಿದ್ದರು.

ಯಾವ ವಿದ್ಯಾರ್ಥಿಯನ್ನೂ ಬಯಸಿದಾಗ ಹೊಡೆಯಲು ತನಗೆ ಸಾಮರ್ಥ್ಯವಿದೆಯೆಂಬುದನ್ನು ನೆನಪಿಸುವ ಈ ದೃಶ್ಯವು ಮಕ್ಕಳಲ್ಲಿ ಭಯವನ್ನು ಹುಟ್ಟಿಸುತ್ತಿತ್ತು. ಕೆಲವು ತಿಂಗಳ ಹಿಂದೆ ನಡೆದ, ಕನಿಷ್ಠ 42 ಮಂದಿ ಮುಸ್ಲಿಮರು ಹಾಗೂ 20 ಮಂದಿ ಹಿಂದೂಗಳನ್ನು ಬಲಿ ತೆಗೆದುಕೊಂಡ ಹಾಗೂ 50 ಸಾವಿರಕ್ಕೂ ಅಧಿಕ ಮಂದಿಯ ಸ್ಥಳಾಂತರಕ್ಕೆ ಕಾರಣವಾದ ‘ಮುಝಪ್ಫರ್ ನಗರ ಗಲಭೆಯ ನೆನಪುಗಳು ಕೂಡ ಈ ಉಪ್ಪು ಸವರಿದ ಬೆತ್ತವನ್ನು ನೆನಪಿಸುತ್ತದೆ’. ಜಾಗ್ರತೆ. ಇದನ್ನು ನಾವು ನಿಮಗೂ ಮಾಡಬಹುದಾಗಿದೆ’ ಎಂಬ ಈ ಬೆದರಿಕೆಯು, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಬದುಕುತ್ತಿರುವ ಎಲ್ಲರನ್ನೂ ಭಯಗೊಳಿಸುತ್ತದೆ. ಕೇವಲ ಮುಸ್ಲಿಮರು ಮಾತ್ರವಲ್ಲ. ಕಾಶ್ಮೀರಿ ಪಂಡಿತರು ಸೇರಿದಂತೆ ಭಾರತದಲ್ಲಿರುವ ಎಲ್ಲ ಧಾರ್ಮಿಕ ಅಲ್ಪಸಂಖ್ಯಾತರು ಅಲ್ಲದೆ, ಭಾರತ ವಿಭಜನೆಯ ಸಂದರ್ಭದಲ್ಲಿ ಪಶ್ಚಿಮ ಪಂಜಾಬಿನಿಂದ ನಿರ್ವಸಿತರಾದ ಹಿಂದೂ ಹಾಗೂ ಸಿಖ್ಖರ ಮನಸ್ಸಿನಲ್ಲೂ ಭಯ ನೆಲೆಸಿದೆ. ನೈಜವಾದ ಅಥವಾ ಪೂರ್ವಯೋಜಿತವಾದ ಪ್ರಚೋದನೆಯಿಂದ ಹಠಾತ್ತನೆ ಗಲಭೆ ಸ್ಫೋಟಿಸಬಹುದೆಂಬ ಭೀತಿಯಿಂದಲೇ ಅವರು ದಿನಗಳೆಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಬದುಕಿನ ಪ್ರತಿ ನಿಮಿಷವನ್ನು ಅಪಮಾನ, ಶೋಷಣೆಯೊಂದಿಗೆ ಕಳೆಯುತ್ತಿದ್ದಾರೆ. ತಾರತಮ್ಯ, ಪೌರತ್ವವನ್ನು ತುಚ್ಚೀಕರಣಗೊಳಿಸುವುದು, ನೈತಿಕ ಸ್ಥೈರ್ಯವನ್ನು ಕೆಡಿಸುವ ಮೂಲಕ ನಿರಂತರವಾಗಿ ಅವರನ್ನು ಘಾಸಿಗೊಳಿಸಲಾಗುತ್ತಿದೆ. ಸಂವಿಧಾನದ 370ನೆ ವಿಧಿ, ಸಮಾನ ನಾಗರಿಕ ಸಂಹಿತೆ, ಅಯೋಧ್ಯೆಯಲ್ಲಿ ರಾಮ ಮಂದಿರದಂತಹ ಸವಕಲು ಹಾಗೂ ಆಧಾರರಹಿತ ಬೇಡಿಕೆಗಳ ಬಗ್ಗೆ ನನ್ನ ನಿಲುವುಗಳು ಹಾಗೂ ನಮ್ಮ ಉತ್ತರ ಹಾಗೂ ವಾಯವ್ಯ ಪ್ರಾಂತ್ಯದಲ್ಲಿರುವ ಹಿಂದೂ ನಿರಾಶ್ರಿತರ ಮತ್ತು ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿರುವ ಮುಸ್ಲಿಮ್ ನಿರಾಶ್ರಿತರ ಬಗ್ಗೆ ನಾನು ನೀಡಿರುವ ಹೇಳಿಕೆಗಳು ಭಯವನ್ನು ಹೊರತು ವಿಶ್ವಾಸವನ್ನು ಮೂಡಿಸಲಿಲ್ಲ. ಈ ಸಾಮೂಹಿಕ ಭಯವು ಭಾರತದ ಗಣರಾಜ್ಯಕ್ಕೆ ಶೋಭೆ ತರುವಂತದ್ದಲ್ಲ.
ಭಾರತದ ಅಲ್ಪಸಂಖ್ಯಾತರು ಭಾರತದ ಒಂದು ಪ್ರತ್ಯೇಕ ಭಾಗವಲ್ಲ. ಅವರು ಮುಖ್ಯವಾಹಿನಿಯಲ್ಲೇ ಮಿಳಿತವಾಗಿರುವವರು. ಯಾರೂ ಕೂಡ ಹಗ್ಗವನ್ನು ಸುಟ್ಟು ಬೂದಿ ಮಾಡಬಹುದು. ಆದರೆ, ಬೂದಿಯಿಂದ ಹೊಸ ಹಗ್ಗವನ್ನು ತಯಾರಿಸಲು ಸಾಧ್ಯವಿಲ್ಲ. ನಮಗೊಂದು ಐತಿಹಾಸಿಕ ವಿಜಯ ದೊರೆತಿದೆ. ಅದಕ್ಕಾಗಿ ನೀವು ಅಭಿನಂದಿಸಬೇಕು. ನನ್ನ ಬೆಂಬಲಿಗರಿಗೆ ಬೇಡದಿದ್ದರೂ, ಹಲವಾರು ಮಂದಿ ನಾನು ಅನಾವರಣಗೊಳ್ಳುವುದನ್ನು ಬಯಸುತ್ತಿದ್ದಾರೆ. ನಾನು ಅಪಾರ ಬುದ್ಧಿವಂತ ಹಾಗೂ ಹಿಂದಿನ ತಲೆಮಾರಿನ ವ್ಯಕ್ತಿಯೊಬ್ಬರಿಂದ ಆಸಕ್ತಿಕರವಲ್ಲದ ಹಾಗೂ ಅಪ್ರಿಯವಾದ ಸಲಹೆಯನ್ನು ನಾನು ಇಷ್ಟಪಡುವುದಿಲ್ಲ. ಆದರೆ, ನನ್ನನ್ನು ಬೆಂಬಲಿಸಿದವರ ಋಣ ಸಂದಾಯ ಮಾಡುವೆ. ಅಷ್ಟೇ ಸಮಾನವಾಗಿ ನನ್ನ ನನ್ನನ್ನು ಬೆಂಬಲಿಸದವರ ವಿಶ್ವಾಸವನ್ನೂ ಗೆದ್ದುಕೊಳ್ಳುವೆ. ಅಲ್ಪಸಂಖ್ಯಾತ ಆಯೋಗವನ್ನು ರಚಿಸುವಾಗ ನಾನು ಯೋಗ್ಯ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆ ಪ್ರತಿಪಕ್ಷಗಳನ್ನು ಕೇಳಿಕೊಳ್ಳುವೆ ಹಾಗೂ ಯಾವುದೇ ಬದಲಾವಣೆ ಮಾಡದೆ ಅದನ್ನು ಒಪ್ಪಿಕೊಳ್ಳುವೆ. ಪರಿಶಿಷ್ಟ ಜಾತಿ, ಬುಡಕಟ್ಟುಗಳು ಹಾಗೂ ಭಾಷಾ ಅಲ್ಪಸಂಖ್ಯಾತರ ಸಮಿತಿಯ ನೇಮಕದಲ್ಲೂ ಹಾಗೆಯೇ ನಡೆದುಕೊಳ್ಳುವೆ. ಮುಂದಿನ ಮಾಹಿತಿ ಆಯುಕ್ತ, ಸಿಎಜಿ, ಸಿವಿಸಿ ಮತ್ತಿತರ ಹುದ್ದೆಗಳ ನೇಮಕದಲ್ಲೂ ಆಯ್ಕೆ ಸಮಿತಿಯ ಸರಕಾರೇತರ ಸದಸ್ಯರ ಶಿಫಾರಸ್ಸುಗಳು ಪಕ್ಷಪಾತರಹಿತವಾಗಿದ್ದರೆ, ಅದನ್ನು ಕ್ರೀಡಾಸ್ಫೂರ್ತಿಯೊಂದಿಗೆ ಪುರಸ್ಕರಿಸುವೆ. ನಾನು ಗಟ್ಟಿಯಾಗಿರುವೆ ಹಾಗೂ ಅಂತಹ ಅಪಾಯಗಳನ್ನು ನಿರ್ವಹಿಸಲು ಸಮರ್ಥನಿರುವೆ. ನಮ್ಮ ಅಖಿಲ ಭಾರತ ಮಟ್ಟದ ವರ್ಚಸ್ಸಿನಲ್ಲಿ ದಕ್ಷಿಣ ಪ್ರಾಂತ್ಯದ ಕೊರತೆ ಎದ್ದು ಕಾಣುತ್ತಿದೆ. ನಮ್ಮ ವಿಜಯಕ್ಕೆ ಹಿಂದಿ ಬೆಲ್ಟ್ ಪ್ರದೇಶಗಳು ನೀಡಿದ ಕೊಡುಗೆಯು, ಉತ್ತರ ಭಾರತದ ನಡುವೆ ಕಂದರವನ್ನು ಸೃಷ್ಟಿಸದಂತೆ ನೋಡಿಕೊಳ್ಳುವೆ. ದಕ್ಷಿಣ ಭಾರತದಿಂದ ರಾಜಕೀಯ ಹಿನ್ನೆಲೆಯಿರದ, ಆದರೆ ಪರಿಣಿತ ಸಮಾಜ ವಿಜ್ಞಾನಿ, ಪರಿಸರವಾದಿ, ಅರ್ಥ ಶಾಸ್ತ್ರಜ್ಞ ಅಥವಾ ಜನಸಂಖ್ಯಾ ಶಾಸ್ತ್ರಜ್ಞರೊಬ್ಬರನ್ನು ಪರಿಗಣಿಸುವೆ. ನೆಹರೂ ಸಂಪುಟದಲ್ಲಿ ಷಣ್ಮುಖನ್ ಚೆಟ್ಟಿ, ಜಾನ್ ಮಥಾಯ್, ಸಿ.ಎ. ದೇಶಮುಖ್ ಹಾಗೂ ಕೆ.ಎಲ್.ರಾವ್ ಇದ್ದರು. ಅವರು ಕಾಂಗ್ರೆಸ್ಸಿಗರಾಗಿರಲಿಲ್ಲ. ಅಷ್ಟೇಕೆ, ಅವರು ರಾಜಕಾರಿಣಿಗಳೂ ಆಗಿದ್ದಿರಲಿಲ್ಲ. ಇಂದಿರಾ ಗಾಂಧಿ ಸಂಪುಟದಲ್ಲಿ ಎಸ್. ಚಂದ್ರಶೇಖರ್ ಹಾಗೂ ವಿ.ಕೆ.ವಿ.ಆರ್. ರಾವ್ ಇದ್ದರು. ‘ಯುಪಿಎ’ ಸರಕಾರದ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾದ ಪ್ರೊ. ಎಂ.ಎಸ್. ಸ್ವಾಮಿನಾಥನ್ ಅಥವಾ ಶ್ಯಾಮ್ ಬೆನೆಗಲ್ ಸದಸ್ಯರನ್ನಾಗಿ ಯಾಕೆ ನೇಮಿಸಲಿಲ್ಲವೆಂದು ನನಗಿನ್ನೂ ಅರ್ಥವಾಗಿಲ್ಲ.
ರಾಜ್ಯ ಸಭೆಯ ನಾಮ ನಿರ್ದೇಶಿತ ಸದಸ್ಯರಾಗಿದ್ದ ನೂರುಲ್ ಹುಸೇನ್, ಭಾರತ ಕಂಡ ಅತ್ಯುತ್ತಮ ಶಿಕ್ಷಣ ಸಚಿವರಲ್ಲೊಬ್ಬರಾಗಿದ್ದರು. ಸಾಮ್ರಾಜ್ಯವಾದಿ ಹಾಗೂ ಸೈಧಾಂತಿಕ ಅನುಕರಣೀಯತೆಗಳು ನನಗೆ ಇಷ್ಟವಾಗುತ್ತವೆ. ರಾಣಾ ಪ್ರತಾಪನಂತೆ ಹೋರಾಟ ನಡೆಸಿದರೂ ಆಡಳಿತದಲ್ಲಿ ಅಕ್ಬರನಂತಾಗುವೆ. ಹೃದಯದಲ್ಲಿ ‘ಸಾವರ್‌ಕರ್ ಆಗಿರುವ ನಾನು ಚಿಂತನೆಯಲ್ಲಿ ಅಂಬೇಡ್ಕರ್ ಆಗುವೆ.’ ಒಂದು ವೇಳೆ ನನ್ನ ‘ಡಿಎನ್‌ಎ’ನಲ್ಲಿ ಆರೆಸ್ಸೆಸ್ ಪ್ರಣೀತ ಹಿಂದುತ್ವವಿದ್ದರೂ, ನನಗೆ ಮತ ಚಲಾಯಿಸಿರದ ದೇಶದ ಶೇ.69ರಷ್ಟು ಮತದಾರರ ಪಾಲಿಗೆ ನಾನು ‘ವಝೀರ್ ಎ ಅಝಾಮ್’ ಕೂಡಾ ಆಗುವೆ. ನಮ್ಮ ದೇಶದ ಅತ್ಯುನ್ನತ ಸ್ಥಾನವನ್ನು ನಾನು ವಹಿಸಿಕೊಳ್ಳುವ ಸಂದರ್ಭದಲ್ಲಿ ನಿಮ್ಮ ಶುಭ ಹಾರೈಕೆಗಳನ್ನು ಕೋರುವೆ.
- ನರೇಂದ್ರ ಮೋದಿ

No comments:

Post a Comment