Tuesday, April 29, 2014

ಸುಖ ಮತ್ತು ಇತರ ಕತೆಗಳು

 ಬೆಂಕಿ-ನೀರು
ಅವನು ಅಗ್ನಿ ಶಾಮಕ ದಳದ ಸಿಬ್ಬಂದಿ.
ಮನೆ ಸೇರುವಾಗ ಒಡಲು ಬೆಂಕಿಯಂತೆ ಧಗಿಸುತ್ತಿರುತ್ತದೆ.
ಅವಳ ಒಂದು ಸಣ್ಣ ಮುಗುಳ್ನಗೆಗೆ ಧಗಿಸುವ ಬೆಂಕಿ ನಂದಿ ಹೋಗುವುದು.

ಸುಖ
ಹೆಂಡತಿ ಸದಾ ಗಂಡನಿಗೆ ಬಯ್ಯೋದು ರೂಢಿ.
ಬದುಕಿನುದ್ದಕ್ಕೂ ಆಕೆಯ ಬಯ್ಕಳನ್ನು ಕೇಳಿಯೇ ದಿನಗಳೆದ.
ಒಂದು ದಿನ ಪತ್ನಿ ತೀರಿ ಹೋದಳು.
ಅವನು ದಿಕ್ಕೆಟ್ಟ. ಮಗ ಕೇಳಿದ ‘‘ಏನಪ್ಪ...ಇದ್ದಷ್ಟು ದಿನ ಬೈಯ್ತೆನೆ ಇರ್ತಿದ್ಳು...ಯಾಕೇಂತ ಅಳ್ತೀಯಾ?’’
ಅಪ್ಪ ಉತ್ತರಿಸಿದ ‘‘ಅವಳಿಂದ ಬೈಸಿಕೊಳ್ಳೋ ಸುಖ ನಿನಗೇನು ಗೊತ್ತೋ?’’ ಎಂದು ಬಿಕ್ಕತೊಡಗಿದ.

ಕೊಲೆ
ನಕ್ಸಲರನ್ನು ನಿಯಂತ್ರಿಸಲೆಂದು ಪೊಲೀಸ್ ಪಡೆ ಹೋಯಿತು.
ಮೊದಲು ನಕ್ಸಲರನ್ನು ಕೊಂದರು. ಅವರಿಲ್ಲ ಎಂದಾಗ ಜನರನ್ನು ನಕ್ಸಲರೆಂದು ಅನುಮಾನಿಸಿ ಕೊಂದರು.
ಇದಾದ ಬಳಿಕ ತಮ್ಮದೇ ಸಹೋದ್ಯ್ಯೋಗಿಗಳನ್ನು ಕೊಂದರು.
ಕೊಲ್ಲುವುದು ಚಟದಂತೆ ಅಂಟಿಕೊಂಡಿತು.
ಯಾರೂ ಕೊಲ್ಲುವುದಕ್ಕೆ ಇಲ್ಲ ಎನ್ನುವುದು ಮನವರಿಕೆಯಾದಾಗ, ತಮ್ಮ ಹಣೆಗೇ ಗುಂಡಿಟ್ಟುಕೊಂಡರು.

ಕಳವು
ಧರ್ಮ ಗ್ರಂಥವೊಂದನ್ನು ಬಿಡಿಸಿಕೊಂಡು ಅವನು ಅದೇನೋ ಹುಡುಕುತ್ತಿದ್ದ.
ಸಂತ ಕೇಳಿದ ‘‘ಅದೇನು ಹುಡುಕುತ್ತಿದ್ದೀರಿ?’’
‘‘ಹಸಿದವನೊಬ್ಬ ಅನ್ನ ಕದ್ದು ಸಿಕ್ಕಿ ಬಿದ್ದಿದ್ದಾನೆ....ಧರ್ಮ ಏನು ಹೇಳುತ್ತದೆ ಎಂದು ಹುಡುಕುತ್ತಿದ್ದೇನೆ...’’
‘‘ಹಸಿದವನು ಕದ್ದ ಅನ್ನ ಅವನ ಸ್ವಂತದ್ದು. ಹೊಟ್ಟೆ ತುಂಬಿದವನ ಬಟ್ಟಲಲ್ಲಿ ಅನ್ನವಿದ್ದರೆ ಅದು ಕದ್ದದ್ದು....’’ ಹೀಗೆಂದು ಹೇಳಿ ಸಂತ ಮುಂದೆ ಹೋದ.

ಸುಳ್ಳು
ಭಗವದ್ಗೀತೆಯ ಮೇಲೆ ಕೈಯಿಟ್ಟು ಆತ ನ್ಯಾಯಾಲಯದಲ್ಲಿ ಸುಳ್ಳು ಹೇಳಿದ.
ಅವನು ತುಂಬಾ ಜಾಣ.
ಯಾಕೆಂದರೆ ಅವನ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯಾಗಿರಲಿಲ್ಲವಂತೆ.
ಹಾಗಾಗಿ ಸುಳ್ಳು ಹೇಳುವುದು ಅವನಿಗೆ ಸಲೀಸಾಯಿತಂತೆ.

ವಿಮಾನ
ಎಲ್ಲಿ ಕಳೆದು ಹೋಗಿದೆಯೋ ಅಲ್ಲೇ ಹುಡುಕಬೇಕು ಎನ್ನುವುದನ್ನು ಯಾವತ್ತೂ ಪಾಲಿಸಬೇಕಾಗಿಲ್ಲ.
ವಿಮಾನ ಆಕಾಶದಲ್ಲಿ ಕಳೆದು ಹೋಯಿತು ಎಂದು ಆಕಾಶದಲ್ಲಿ ಹುಡುಕಿದರೆ ಅದು ಸಿಗುತ್ತದೆಯೆ?
ಕೆಲವೊಮ್ಮೆ ಕಡಲಲ್ಲೂ ಹುಡುಕಬೇಕಾಗುತ್ತದೆ.

ಮುಟ್ಬೇಡ
ಹಿರಿಯರೊಬ್ಬರು ಹೇಳಿದ್ದು-
"ನಾನು ಸಣ್ಣ ಇರುವಾಗ ನನ್ನ ತಂದೆ ರೇಡಿಯೋ ತಂದರು. ಕುತೂಹಲದಿಂದ ಮುಟ್ಟಲು ಹೋದರೆ ತಂದೆ "ನಿಂಗೆ ಅದರ ಬಗ್ಗೆ ಏನೂ ಗೊತ್ತಿಲ್ಲ, ಮುಟ್ಬೇಡ" ಎಂದು ದಬಾಯಿಸಿದ. ಇದೀಗ ನನ್ನ ಮಗ ಮನೆಗೆ ಕಂಪ್ಯೂಟರ್ ತಂದಿದ್ದಾನೆ. ಕುತೂಹಲದಿಂದ ಮುಟ್ಟಲು ಹೋದರೆ ಅವನೂ ಕೂಡ "ನಿಂಗೆ ಅದರ ಬಗ್ಗೆ ಏನೂ ಗೊತ್ತಿಲ್ಲ ಮುಟ್ಬೇಡ" ಎಂದು ದಬಾಯಿಸುತ್ತಾನೆ"

1 comment: