Friday, October 18, 2013

‘ಬಲುತ’ ದಲಿತನ ಎದೆಯ ಧಗಿಸುವ ಕೆಂಡ

 ಸಾಹಿತ್ಯದ ಮಾರ್ದವತೆಯನ್ನು ಅಲುಗಾಡಿಸುವಂತೆ, ಬೆಚ್ಚಿ ಬೀಳಿಸುವ ಆತ್ಮಕಥನಗಳು ಬಂದಿರುವುದು ಮಹಾರಾಷ್ಟ್ರದಿಂದಲೇ ಎನ್ನುವುದರಲ್ಲಿ ಅನುಮಾನವಿಲ್ಲ. ಅದಕ್ಕೆ ಮುಖ್ಯ ಕಾರಣ, ಮರಾಠಿ ದಲಿತ ಲೇಖಕರು ಸಾಲು ಸಾಲಾಗಿ ಬರೆಯಲು ಶುರು ಹಚ್ಚಿದ್ದು, ಉಚಲ್ಯಾ, ಅಕ್ರಮ ಸಂತಾನದಂತಹ ಕೃತಿಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದವು. ಭಾರತದ ಭ್ರಮೆಗಳನ್ನು ಒಡೆದು ಹಾಕಿದವು. ಇಲ್ಲಿ, ಇನ್ನೋರ್ವ ಪ್ರಮುಖ ದಲಿತ ಬರಹಗಾರನ ಆತ್ಮಕಥನವೊಂದನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ದಯಾ ಪವಾರ ಅವರ ‘ಬಲುತ’ ಆತ್ಮ ಕಥನವನ್ನು ಪ್ರೊ. ಚಂದ್ರಕಾಂತ ಪೋಕಳೆ ಅವರು ಕನ್ನಡಕ್ಕಿಳಿಸಿದ್ದಾರೆ.

ಒಂದು ಆತ್ಮಕಥನ ಸಮಾಜದ ಮೇಲೆ ಬೀರುವ ಪ್ರಭಾವ, ಅದು ಸಮಾಜದಲ್ಲಿ ಸೃಷ್ಟಿಸುವ ಕೀಳರಿಮೆ ಹಾಗೆಯೇ ಆ ನೋವು ಸಂಕಟಗಳೇ ಮೇಲೆದ್ದು ನಿಲ್ಲುವುದಕ್ಕೆ ಇಂಧನವಾಗುವ ಪರಿಯನ್ನು ಲೇಖಕ ದಯಾ ಪವಾರ ಕೃತಿಯಲ್ಲಿ ತೋಡಿಕೊಳ್ಳುತ್ತಾರೆ. ಆತ್ಮಕಥನ ಬರೆಯುವ ಲೇಖಕನ ಬಿಕ್ಕಟ್ಟುಗಳನ್ನು ಅವರ ಮಾತುಗಳಲ್ಲಿ ನಾವು ಗಮನಿಸಬಹುದು. ಬೆನ್ನು ಡಿ ಹೇಳುವಂತೆ, ದಲಿತ ಸಮಾಜದ ಅವಸ್ಥೆಯನ್ನು ದಗಡೂ ಮಾರುತಿ ಪವಾರನಾಗಿ ಗುರುತಿಸುತ್ತಲೇ ಬಾಲ್ಯ ಕಳೆದು ಶಾಲೆಗೆ ಹೋಗುವ ಸೌಭಾಗ್ಯ ದೊರೆತು ವಿದ್ಯಾವಂತರಾಗಿ ‘ಬಲುತ’ ಬರೆಯುವ ದಯಾ ಪವಾರರಾಗಿ ರೂಪುಗೊಂಡು ಈ ಕೃತಿಯ ಹೂರಣ. ‘‘ಕೃತಿಯ ಹೊಚ್ಚ ಹೊಸ ಪ್ರತಿಯನ್ನು ಕೈಯಲ್ಲಿ ಹಿಡಿದಾಗ ಒಂದು ಕ್ಷಣ ಧಗಿಸುವ ಕೆಂಡವನ್ನು ಹಿಡಿದಂತಾಯಿತು’’ ಎನ್ನುವ ಲೇಖಕರ ಮಾತೇ ಈ ಕೃತಿಯ ಒಡಲಾಳದ ಬೆಂಕಿಯನ್ನು ವ್ಯಕ್ತಗೊಳಿಸುತ್ತದೆ. ಕೃತಿಯ ಮುಖಬೆಲೆ 125 ರೂ.

2 comments:

  1. ಉಜಲ್ಯಾ ಹಾಗು ಅಕ್ರಮ ಸಂತಾನ ಕೃತಿಗಳನ್ನು ಕನ್ನಡದಲ್ಲಿ ಓದಿದ್ದೇನೆ. ತುಂಬ ಆಘಾತಕಾರೀ ವೃತ್ತಾಂತಗಳಿವು. ಇನ್ನು ‘ಬಲುತ’ವನ್ನು ಓದಬೇಕಾಯಿತು.

    ReplyDelete
  2. ಬಲುತ ಒಂದು ಸಾಮಾಜಿಕ ಪರಿಸರದ ನಿರೂಪಣೆ ಅನಿಸಿತು. ದಲಿತ ಚಳುವಳಿಯ ವಿಭಿನ್ನ ಮುಖಗಳನ್ನು ನೇರವಾಗಿ ಹೇಳಿರುವುದು ಮತ್ತು ಹೆಚ್ಚು ಸತ್ಯವಂತಿಕೆಯಿಂದ ಆತ್ಮಕತೆಯ ಪುನರಾವಲೋಕನದಲ್ಲಿ ಕತೆ ಹೇಳಿರುವುದು ಬಹಳ ಹಿಡಿಸಿತು

    ReplyDelete