Thursday, October 10, 2013

ಪತ್ರಿಕೋದ್ಯಮದ ವಿದ್ಯಾರ್ಥಿಗಳು ಮತ್ತು ಸವಾಲು...

 ಒಂದು ಪತ್ರಿಕೆ ಹತ್ತು ಹಲವು ಬದ್ಧತೆ, ವೌಲ್ಯಗಳ ಚೌಕಟ್ಟಿನಲ್ಲಿ ಆರಂಭವಾಯಿತೆಂದರೂ, ಅದನ್ನು ಮುಂದೆ ತೆಗೆದುಕೊಂಡು ಹೋಗಬೇಕಾದವರು ಸಿಬ್ಬಂದಿಗಳು. ಒಂದು ಪತ್ರಿಕೆಯನ್ನು ರೂಪಿಸುವ ಮೆದುಳು ಸಿಬ್ಬಂದಿಗಳು. ಒಂದು ಬ್ಯಾಂಕಿಗೆ ಸಿಬ್ಬಂದಿಗಳನ್ನು ನೇಮಕ ಮಾಡಿದಂತಲ್ಲ, ಒಂದು ಪತ್ರಿಕೆಗೆ ಬೇಕಾದ ಉಪಸಂಪಾದಕರ ಆಯ್ಕೆ. ಅವರ ಆಲೋಚನೆಗಳ ಮೂಲಕ ಪ್ರತಿ ದಿನದ ಪುಟಗಳು ಸಿದ್ಧಗೊಳ್ಳುತ್ತವೆ. ಯಾವುದೇ ಒಂದು ಪತ್ರಿಕೆಗೆ ಕೆಲವು ಅಜೆಂಡಾಗಳಿರುತ್ತವೆ. ಜನಪರವಾದ, ರೈತಪರವಾದ, ಕಾರ್ಮಿಕ, ದಲಿತಪರವಾದ ಕಾಳಜಿಗಳೇ ಇರಬಹುದು. ಒಂದು ಪತ್ರಿಕೆ ಆ ಆಶಯದೊಂದಿಗೆ ಆರಂಭವಾಯಿತೆಂದೇ ಇಟ್ಟುಕೊಳ್ಳೋಣ. ಆದರೆ ಆಯ್ಕೆ ಮಾಡುವ ಸಿಬ್ಬಂದಿಗಳು ತಪ್ಪಾಗಿದ್ದರೆ ಇಡೀ ಪತ್ರಿಕೆಯ ಉದ್ದೇಶವೇ ನೆಲಕಚ್ಚಿ ಬಿಡಬಹುದು. ಅದನ್ನು ಹುತ್ತವಾಗಿಟ್ಟುಕೊಂಡು ಜನವಿರೋಧಿ ಹಾವುಗಳು ಆಶ್ರಯ ಪಡೆದುಕೊಳ್ಳಬಹುದು. ಯಾರದೋ ಹಣ, ಎಲ್ಲಮ್ಮನ ಜಾತ್ರೆ ಎನ್ನುವ ಗಾದೆ ಮಾತು ಇಂದಿನ ಹೆಚ್ಚಿನ ಪತ್ರಿಕೆಗಳಿಗೆ ಹೊಂದಿಕೆಯಾಗುತ್ತದೆ. ಒಂದು ಪತ್ರಿಕೆಗೆ ದುಡ್ಡು ಹೂಡುವವರೇ ಪತ್ರಿಕೆಯನ್ನು ಬಳಸಿಕೊಳ್ಳಬೇಕೆಂದಿಲ್ಲ, ಕೆಲವೊಮ್ಮೆ ಅದನ್ನು ಜನವಿರೋಧಿ ಹಿತಾಸಕ್ತಿ ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು.

 ಇದಕ್ಕೊಂದು ಉದಾಹರಣೆಯನ್ನು ನೀಡಬಹುದು. ರಾಜ್ಯಮಟ್ಟದ, ಖ್ಯಾತ ಪತ್ರಿಕೆಯೊಂದರ ಮುಖಪುಟದಲ್ಲಿ ಕೆಲವು ಗೊಂದಲಗಳು ಕಾಣಿಸಿಕೊಳ್ಳುತ್ತಿದ್ದವು. ಕೆಲವೊಮ್ಮೆ ಮುಖಪುಟಗಳನ್ನು ಕೆಲವು ಹಿತಾಸಕ್ತಿಗಳು ಬಳಸಿಕೊಳ್ಳುತ್ತಿರುವಂತೆ ಅನ್ನಿಸಿತು. ಕೆಲವೊಮ್ಮೆ ಆ ಪತ್ರಿಕೆ ಪಕ್ಕಾ ರೈತಪರ, ದಲಿತಪರ ಅನ್ನಿಸಿಕೊಳ್ಳುತ್ತಿತ್ತು. ಇದ್ಯಾಕೆ ಹೀಗೆ? ಎನ್ನುವುದು ತಲೆತಿನ್ನ ತೊಡಗಿತು. ಒಂದು ದಿನ ಅದರಲ್ಲಿರುವ ಹಿರಿಯರೊಬ್ಬರ ಜೊತೆ ನಾನು ನನ್ನ ಸಮಸ್ಯೆಯನ್ನು ಹಂಚಿಕೊಂಡೆ. ಆಗ ಅವರು ಹೇಳಿದ್ದು ಹೀಗೆ. ‘‘ನೋಡಿ, ನಮ್ಮ ಫ್ರಂಟ್ ಪೇಜ್‌ನ್ನು ಇಬ್ಬರು ಹಿರಿಯ ಸಂಪಾದಕರು ನೋಡಿಕೊಳ್ಳುತ್ತಾರೆ. ಅದರಲ್ಲಿ ಒಬ್ಬರು ದಲಿತರ ಪರ. ಇನ್ನೊಬ್ಬರು ಮೋದಿ ಪರ. ಅವರವರ ಶಿಪ್ಟ್‌ನಲ್ಲಿ ಪತ್ರಿಕೆಯನ್ನು ಅವರವರಿಗೆ ಬೇಕಾದಂತೆ ರೂಪಿಸಿಕೊಳ್ಳುತ್ತಾರೆ’’
ನಿಜಕ್ಕೂ ದಂಗಾಗಬೇಕಾದ ವಿಷಯ. ಒಂದು ರಾಜ್ಯಮಟ್ಟದ ಪತ್ರಿಕೆಗೆ ತನ್ನದೇ ಆದ ನಿಲುವು ಇಲ್ಲವೆ? ಅದಕ್ಕೆ ಅವರು ಹೇಳಿದ್ದು ಈ ಉತ್ತರವನ್ನು ‘‘ಇದೆ. ನಮ್ಮ ಪ್ರಧಾನ ಸಂಪಾದಕರು ತುಂಬಾ ಜನಪರ ಮನುಷ್ಯ. ಆದರೆ ಅವರೆಲ್ಲಿ ಪತ್ರಿಕೆಯನ್ನು ನೋಡುತ್ತಾರೆ. ನಿಮಗೆ ಗೊತ್ತಿರುವ ಹಾಗೆ ನಮ್ಮ ಪತ್ರಿಕೆ ಒಂದು ಸಾಗರ. ಒಂದೊಂದು ಎಡಿಶನ್‌ಗೂ ಒಂದೊಂದು ಮುಖಪುಟ ಇರುತ್ತೆ. ಹೀಗಿರುವಾಗ ಇದನ್ನೆಲ್ಲ ತಲೆಕೆಡಿಸಿಕೊಳ್ಳಲು ಅವರಿಗೆ ಹೇಗೆ ಸಾಧ್ಯ?’’ ಆದರೆ ಆ ಪತ್ರಿಕೆಯ ಒಟ್ಟು ಧೋರಣೆಗೆ ಜನ ಅವರನ್ನೇ ಹೊಣೆ ಮಾಡುತ್ತಾರೆ ಎನ್ನುವುದು ಮಾತ್ರ ಸುಳ್ಳಲ್ಲ. ‘ತಪ್ಪು ಸಿಬ್ಬಂದಿ’ಗಳ ಆಯ್ಕೆಯ ಪರಿಣಾಮ ಇದು.

ನಿಮಗೆ ನೆನಪಿರಬಹುದು. ಕರಾವಳಿಯಲ್ಲಿ ‘ಪಾಕಿಸ್ತಾನ ಧ್ವಜ’ದ ವಿವಾದ. ಖ್ಯಾತ ದಿನಪತ್ರಿಕೆಯೊಂದರಲ್ಲಿ ದರ್ಗಾದ ಹಸಿರು ಧ್ವಜವನ್ನು ಪಾಕಿಸ್ತಾನ ಧ್ವಜ ಎಂದು ಆ ಪತ್ರಿಕೆ ಬರೆಯಿತು. ಜೊತೆಗೆ ಜನರನ್ನು ಉದ್ರೇಕಗೊಳಿಸುವ ಅಡಿಬರಹ ಬೇರೆ. ಆದರೆ ಆ ಫೋಟೋಗೆ ಸಂಪೂರ್ಣ ಸಂಪಾದಕರು ಹೊಣೆಯಾಗಿರಲೇ ಇಲ್ಲ. ಅಂದು ರಾತ್ರಿ ಆ ಪುಟವನ್ನು ಮಾಡಿದ ಹಿರಿಯ ಉಪಸಂಪಾದಕನ ಪೂರ್ವಾಗ್ರಹ ಪೀಡಿತ ಮನಸ್ಸಿನಿಂದ ಆ ಪತ್ರಿಕೆ ಆ ಕಳಂಕವನ್ನು ಹೊತ್ತುಕೊಳ್ಳಬೇಕಾಯಿತು. ಪ್ರಧಾನ ಸಂಪಾದಕ ಕ್ಷಮೆಯನ್ನು ಯಾಚಿಸಬೇಕಾಯಿತು. ಸದ್ಯಕ್ಕೆ ಹೆಚ್ಚಿನ ಸಂದರ್ಭದಲ್ಲಿ ಪತ್ರಿಕೆಯೊಳಗೆ ನುಸುಳಿಕೊಂಡಿರುವ ಹಿತಾಸಕ್ತಿಗಳಿಂದ ಪತ್ರಿಕೆಗಳು ನಾಶವಾಗಬೇಕಾಗುತ್ತದೆ. ಅತ್ಯುತ್ತಮ ಉದಾಹರಣೆಯಾಗಿ ಮುಂಗಾರು ಪತ್ರಿಕೆಯನ್ನೇ ನೀಡಬಹುದು. ಯಾವ ಪತ್ರಿಕೆ, ಜಾತಿ ಭೇದ, ವರ್ಣಭೇದದ ವಿರುದ್ಧ ಹಗಲಿರುಳು ಸೆಣಸಾಡಿತೋ, ತನ್ನ ಕೊನೆಯ ದಿನಗಳಲ್ಲಿ ಆ ಹಿತಾಸಕ್ತಿಗಳ ಕೈಯೊಳಗೆ ಸಿಕ್ಕಿ ನಲುಗಿತು. ಎಂಸಿಜೆ ಮಾಡಿದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನೇ ಅರ್ಹತೆ ಎಂದು ಭ್ರಮಿಸಿಕೊಂಡು ಪತ್ರಿಕೋದ್ಯಮಕ್ಕೆ ಕಾಲಿಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಹೆಚ್ಚಿನ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ, ಸಾಹಿತ್ಯ, ಬರಹ ಇತ್ಯಾದಿಗಳ ಬಗ್ಗೆ ಪರಿಚಯವೇ ಇಲ್ಲ. ಬರೇ ಪದವಿಗಾಗಿ ಅವರು ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದು ಒಂದೆರಡು ಪ್ರಶ್ನೆಗಳನ್ನು ಅವರ ಮುಂದಿಟ್ಟಾಗ ಸ್ಪಷ್ಟವಾಗಿ ಬಿಡುತ್ತದೆ. ಸಾಧಾರಣವಾಗಿ ಸಂದರ್ಶನಕ್ಕೆ ಬಂದ ಹುಡುಗರ ಜೊತೆಗೆ ನಾವು ಮೊತ್ತ ಮೊದಲು ಕೇಳುವ ಪ್ರಶ್ನೆ, ನೀವು ಈವರೆಗೆ ಓದಿದ ಒಂದು ಹತ್ತು ಪುಸ್ತಕಗಳ ಹೆಸರನ್ನು ಹೇಳಿ ಎಂಬುದಾಗಿ. ಅದರಲ್ಲೇ ಅವರ ಮನಸ್ಥಿತಿ, ಅವರ ಪರಿಸ್ಥಿತಿ ಅರ್ಥವಾಗಿ ಬಿಡುತ್ತದೆ. ದಿಗ್ಭ್ರಮೆ ಹುಟ್ಟಿಸುವಂತಹ ಉತ್ತರ ಅವರಿಂದ ಬರುತ್ತದೆ. ಇಡೀ ಜೀವಮಾನದಲ್ಲಿ ಓದಿದ ಹತ್ತು ಪುಸ್ತಕಗಳ ಹೆಸರನ್ನು ಹೇಳಲು ಅವರು ತಡಕಾಡುತ್ತಾರೆ. ಕೆಲವರು ಪಿಯುಸಿಯಲ್ಲಿ, ಪದವಿಯಲ್ಲಿ ಪಠ್ಯವಾಗಿದ್ದ ಪುಸ್ತಕಗಳ ಹೆಸರನ್ನು ಹೇಳಿ ಬಿಡುತ್ತಾರೆ. ಕುವೆಂಪು ಬರೆದ ಎರಡು ಮಹಾಕಾದಂಬರಿಗಳ ಹೆಸರನ್ನು ಹೇಳಲಾಗದೆ ತಲೆಕೆರೆದುಕೊಳ್ಳುತ್ತಾರೆ. ‘ಪಥೇರ್ ಪಾಂಚಾಲಿ’ ಎನ್ನುವ ಸಿನಿಮಾದ ಹೆಸರನ್ನು ಜೀವಮಾನದಲ್ಲೇ ಕೇಳಿರುವುದಿಲ್ಲ. ಲಂಕೇಶ್, ತೇಜಸ್ವಿ ಹೆಸರೇನೋ ಗೊತ್ತು. ಆದರೆ ಅವರ ಒಂದೇ ಒಂದು ಕೃತಿ ಓದಿರುವುದಿಲ್ಲ. ಒಂದೆರಡು ವಿದ್ಯಾರ್ಥಿಗಳು ಪ್ರತಾಪ ಸಿಂಹರ ಕೃತಿಗಳ ಹೆಸರನ್ನು ಹೇಳುತ್ತಾರೆ. ಅದನ್ನು ಓದಲಿ. ಆದರೆ ಕೇವಲ ಆ ಲೇಖಕ ಬರೆದ ಪುಸ್ತಕವನ್ನಷ್ಟೇ ಓದಿ ಬಂದಿರುವ ಈ ಹುಡುಗನ ಮನಸ್ಥಿತಿ ಹೇಗಿರಬಹುದು ಮತ್ತು ಈತನ ಕೈಗೆ ಒಂದು ಪತ್ರಿಕೆಯ ಜವಾಬ್ದಾರಿ ಕೊಟ್ಟರೆ ಅದು ಎಂತಹ ಅಪಾಯಕಾರಿ ಕೃತ್ಯವಾಗಿ ಬಿಡಬಹುದು.


ಕನ್ನಡ ಪತ್ರಿಕೋದ್ಯಮ ಎಂದ ಮೇಲೆ ಕನಿಷ್ಟ ಶಿವರಾಮ ಕಾರಂತ, ಕುವೆಂಪು, ಅನಂತಮೂರ್ತಿ, ತೇಜಸ್ವಿ, ಭೈರಪ್ಪ, ವೈಎನ್‌ಕೆ, ಲಂಕೇಶ್, ಕಲಬುರ್ಗಿ...ಹೀಗೆ ಬೇರೆ ಬೇರೆ ಖ್ಯಾತನಾಮರನ್ನು ಒಂದಿಷ್ಟಾದರೂ ಓದಿ ತಿಳಿದುಕೊಳ್ಳಲೇ ಬೇಕು. ಆ ಮೂಲಕ ನಮ್ಮ ಭಾಷೆ, ತಿಳುವಳಿಕೆ, ಸತ್ವ ಇನ್ನಷ್ಟು ಪುಷ್ಟಿಗೊಳ್ಳುತ್ತದೆ. ನಮ್ಮ ಬರಹ ಇನ್ನಷ್ಟು ಗಟ್ಟಿಯಾಗುತ್ತದೆ. ಹಿರಿಯರನ್ನು ಓದಿದಂತೆ ನಮ್ಮಿಳಗೊಂದು ವಿನಯ ರೂಪುಗೊಳ್ಳುತ್ತದೆ. ಅದು ನಮ್ಮನ್ನು ಅತಿರೇಕಕ್ಕೆ ಹೋಗದಂತೆ ಕಾಪಾಡುತ್ತದೆ. ಆದರೆ ಎಂಸಿಜೆಯಿಂದ ಹೊರ ಬರುವ ಹೆಚ್ಚಿನ ವಿದ್ಯಾರ್ಥಿಗಳಲ್ಲಿ ಅಂತಹ ಯಾವುದೇ ಬದ್ಧತೆಗಳನ್ನು ಕಂಡಿದ್ದು ತೀರಾ ಕಡಿಮೆ. ಇನ್ನು ಒಂದಿಷ್ಟು ಹುಡುಗರಂತೂ ತೀರಾ ಭ್ರಮಾ ಲೋಕದಲ್ಲಿರುತ್ತಾರೆ. ಟಿವಿಗಳನ್ನು ನೋಡುತ್ತಾ ಅವರು ತಮ್ಮ ಪತ್ರಿಕೋದ್ಯಮದ ಕನಸುಗಳನ್ನು ಬೆಳೆಸಿರುತ್ತಾರೆ. ಅಲ್ಲಿನ ಓತಪ್ರೋತ ಮಾತುಗಾರಿಕೆಯೇ ಪತ್ರಿಕೋದ್ಯಮ ಎಂದು ತಿಳಿದು, ವಾಚಾಳಿಗಳಾಗಿ ಬಿಟ್ಟಿರುತ್ತಾರೆ ಮತ್ತು ಮಾತನಾಡುವ ಹಸಿವೆಯಿಂದ ತಹತಹಿಸುತ್ತಿರುತ್ತಾರೆ. ಇವರದು ಇನ್ನೊಂದು ಅಪಾಯಕಾರಿ ವ್ಯಕ್ತಿತ್ವ. 


ಇನ್ನೂ ಕೆಲವು ಎಂಸಿಜೆ ವಿದ್ಯಾರ್ಥಿಗಳಿರುತ್ತಾರೆ. ಮಹಾ ಮಹತ್ವಾಕಾಂಕ್ಷಿಗಳು. ಅವರಾಗಲೇ ತಾವೇನಾಗಬೇಕು ಎನ್ನುವುದನ್ನು ನಿರ್ಧರಿಸಿ ಬಿಟ್ಟಿರುತ್ತಾರೆ. ಬರುವ ಬಸ್‌ಗಾಗಿ ಕಾಯಲು ಒಂದು ಬಸ್‌ಸ್ಟಾಪ್ ಬೇಕು. ಅಂಥವರೂ ಸಂದರ್ಶನಕ್ಕೆ ಬರೋದಿದೆ. ಒಂದೆರಡು ಮಾತಿನಲ್ಲೇ ಅದು ಅರ್ಥವಾಗಿ ಬಿಡುತ್ತದೆ. ಬಂದವರು, ಎಲ್ಲಾ ರೀತಿಯ ಕೆಲಸವನ್ನು ಕಲಿತು ಒಂದು ದಿನ ಇದ್ದಕ್ಕಿದ್ದಂತೆಯೇ ಹಾರಿಹೋಗುತ್ತಾರೆ. ಸಾಧಾರಣವಾಗಿ ಪ್ರಾದೇಶಿಕ ಪತ್ರಿಕೆಗಳಿಗೆ, ಹೋರಾಟದಲ್ಲಿರುವ ಪತ್ರಿಕೆಗಳಿಗೆ ಇಂಥಹ ಸಮಸ್ಯೆ ತೀವ್ರವಾಗಿ ಕಾಡುತ್ತದೆ. ಅತ್ಯುತ್ತಮವಾದ ಅಭ್ಯರ್ಥಿಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ. ಬರಬೇಕು ಎಂದು ನಿರೀಕ್ಷಿಸುವುದೂ ತಪ್ಪಾಗುತ್ತೆ. ಹಾಗೆಂದು, ಕಳಪೆ ಅಭ್ಯರ್ಥಿಗಳನ್ನು ವರ್ಷವಿಡೀ ಸಹಿಸಿ, ಅವರಿಗೆ ತರಬೇತಿ ನೀಡಿ, ಅವರ ಭಾಷೆಯನ್ನು ತಿದ್ದಿ, ತೀಡಿ ಇನ್ನೇನು ನಮಗೆ ಉಪಯೋಗಕ್ಕೆ ಬಂದಾರು ಎನ್ನುವಾಗ ಅವರು ಇನ್ನೊಂದು ದೊಡ್ಡ ಪತ್ರಿಕೆಯನ್ನು ಸೇರಿ ಬಿಡುತ್ತಾರೆ.

 ಇಂತಹ ಸಂದರ್ಭದಲ್ಲಿ, ಕನ್ನಡದ ಸಾಹಿತ್ಯದಲ್ಲಿ, ಪತ್ರಿಕೋದ್ಯಮದಲ್ಲಿ ನಿಜಕ್ಕೂ ಆಸಕ್ತಿಯಿರುವ, ಒಂದಿಷ್ಟು ಕನ್ನಡ ಸಾಹಿತ್ಯವನ್ನು ಓದಿಕೊಂಡಿರುವ ಹಸಿವಿರುವ ಹುಡುಗರನ್ನು ತಯಾರು ಮಾಡುವ ಯೋಜನೆ ಪತ್ರಿಕೋದ್ಯಮದ ಪಾಲಿಗೆ ಅತ್ಯಂತ ಆಶಾದಾಯಕವಾಗಿದೆ. ಇವರು ಯಾವುದೇ ಎಂಸಿಜೆ ಮಾಡಿರುವುದಿಲ್ಲ. ಪದವಿಯನ್ನು ಅರ್ಧದಲ್ಲೇ ಕಾರಣಾಂತರಗಳಿಂದ ತೊರೆದಿರುತ್ತಾರೆ. ಆದರೆ ಒಬ್ಬ ಪತ್ರಕರ್ತನಿಗೆ ಇರಬೇಕಾಗಿರುವ ಮೂಲಭೂತವಾದ ಎಲ್ಲ ಗುಣಗಳೂ ಆತನಲ್ಲಿರುತ್ತವೆ. ಅಂತಹ ಹುಡುಗರನ್ನು ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಿ, ಅವರನ್ನು ಒಳ್ಳೆಯ ಪತ್ರಕರ್ತರನ್ನಾಗಿಸುವುದು. ಒಂದನ್ನು ತಿಳಿದುಕೊಳ್ಳಬೇಕು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಇಂತಹ ಸ್ಥಿತಿಯಲ್ಲೇ ಮೇಲೆ ಬಂದ ನೂರಾರು ಹಿರಿಯ ಪತ್ರಕರ್ತರು ನಮ್ಮ ಮುಂದಿದ್ದಾರೆ. ವಡ್ಡರ್ಸೆ ರಘುರಾಮ ಶೆಟ್ಟಿ ಕೂಡ ಹೀಗೆ, ಮಣ್ಣಿಂದಲೇ ಹುಟ್ಟಿ ಬಂದ ಪತ್ರಕರ್ತರು ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಪತ್ರಕರ್ತರಾಗುವುದಕ್ಕಾಗಿಯೇ ಹುಟ್ಟಿ ಬಂದ ಹಲವು ತರುಣರು, ಯಾವುದೇ ಅಂಕಪಟ್ಟಿ, ಪದವಿಗಳಿಲ್ಲದೆ ನಮ್ಮ ನಡುವೆ ಓಡಾಡುತ್ತಿದ್ದಾರೆ. ಅವರನ್ನು ಗುರುತಿಸಿ, ಬೆಳೆಸುವ ಕೆಲಸ ನಡೆದರೆ ನಮ್ಮ ಪತ್ರಿಕೋದ್ಯಮ ಇನ್ನಷ್ಟು ಸತ್ವಪೂರ್ಣವಾಗಬಹುದೇನೋ.
(ಮುಂದುವರಿಯುವುದು)

2 comments:

  1. ಈ ಬರಹಕ್ಕೆ ಪೂರಕವಾಗುವ ಒಂದು ಘಟನೆ ಇತ್ತೀಚೆಗೆ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆಯಿತು. ಒಂದು ಕನ್ನಡ ಚಾನೆಲ್'ನ ಹುಡುಗಿಯೊಬ್ಬಳು ದೇವನೂರು ಮಹಾದೇವರ ಬೈಟ್ ತೆಗೆದು ಕೊಳ್ಳುತ್ತಿದ್ದಳು. ಆ ಹುಡುಗಿಗೆ ದೇವನೂರು ಅವರ ಪರಿಚಯವೇ ಇರಲಿಲ್ಲ. ಅವರಲ್ಲೇ ತಮ್ಮ ಹೆಸರೇನೆಂದು ಕೇಳಿದ್ದಲ್ಲದೆ, ಕ್ಯಾಮೆರಾ ಮುಂದೆ ಯಾವ ರೀತಿ ಮಾತನಾಡಬೇಕೆಂದು ಅವರಿಗೇ ಪಾಠ ಮಾಡುತ್ತಿದ್ದಳು.!!! ಇದಕ್ಕೆ ದೇವನೂರು'ರವರು ವಿನೀತನಾಗಿ ನನ್ನ ಹೆಸರು ಮಹಾದೇವಪ್ಪ ಎಂದು ಮಾತು ಆರಂಭಿಸಿದರು. ಈ ಬೈಟ್ ಪ್ರಸಾರವಾಗಿದೆಯೆ, ಅಲ್ಲ ಸಂಕಲನದ ಸಮಯದಲ್ಲಾದರೂ ಅವರಿಗೆ ತಪ್ಪು ಅರಿವಾಗಿದೆಯೇ ಗೊತ್ತಿಲ್ಲ!!!

    ReplyDelete
  2. ತುಂಬ ಕಳಕಳಿಯ ಲೇಖನ. ಇತ್ತೀಚೆಗೆ ನಮ್ಮ ಕೆಲವೊಂದು ಪತ್ರಿಕೆಗಳಲ್ಲಿರುವ ತಪ್ಪು ಭಾಷೆಯನ್ನು ಓದುವಾಗ ಕಣ್ಣೀರು ಬರುತ್ತದೆ. ಒಂದು ವಿಷಯ: ನಿಮ್ಮ ಲೇಖನದಲ್ಲಿ ‘ಕನಿಷ್ಠ’ ಎನ್ನುವ ಪದವು ಅಚ್ಚಿನ ತಪ್ಪಿನಿಂದಾಗಿ ‘ಕನಿಷ್ಟ’ ಎಂದಾಗಿದೆ. ದಯವಿಟ್ಟು ಸರಿಪಡಿಸುವಿರಾ?

    ReplyDelete