Saturday, September 21, 2013

ಅಲೆಮಾರಿಯ ಅಂತರಂಗ

 ಹೋರಾಟಗಾರ, ಸಂಘಟಕ, ಲೇಖಕ ಕುಪ್ಪೆ ನಾಗರಾಜ ಅವರ ‘ಅಲೆಮಾರಿ ಅಂತರಂಗ’ ಕೃತಿಯನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಅಲಕ್ಷಿತ ಸಮುದಾಯದಿಂದ ಹೊರ ಬಂದಿರುವ ನಾಗರಾಜ್, ಅಲೆಮಾರಿ ಸಮುದಾಯವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರವಹಿಸಿದವರು. ಈ ಕೃತಿಯು ಒಬ್ಬ ವ್ಯಕ್ತಿಯ ಅಂತರಂಗವೂ ಹೌದು. ಹಾಗೆಯೇ ಒಂದು ಸಮುದಾಯದ ಕಥನವೂ ಹೌದು. ಲೇಖಕರೇ ಹೇಳುವಂತೆ ‘‘ಅವರ ಕಳ್ಳುಬಳ್ಳಿಯ ಸಂಬಂಧಗಳ ಬದುಕು ಮತ್ತು ಬವಣೆಗಳ ನಿವೇದನೆ’’ ಈ ಕೃತಿ. ದೊಂಬಿದಾಸರ ಅಲೆಮಾರಿ ಬದುಕಿನ ಹಿಂದೆ ಸಾಗುವ ಲೇಖಕರು ಆ ಮೂಲಕ, ತನ್ನ ಬದುಕನ್ನೇ ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳುತ್ತಾರೆ. ಒಂದು ರೀತಿಯಲ್ಲಿ ಈ ಕೃತಿಗೆ ಆತ್ಮಕಥನದ ಗುಣ ಇದೆ. ವೈಯಕ್ತಿಕ ವೈಭವೀಕರಣವಿಲ್ಲದೆಯೇ ತನ್ಮೂಲಕ ತನ್ನ ಸಮುದಾಯದ ಕತೆಯನ್ನು ಹೇಳುತ್ತಾರೆ ಲೇಖಕರು.
ಮರಾಠಿಯಲ್ಲಿ ಬಂದ ಉಚಲ್ಯಾದಂತಹ ಆತ್ಮಕಥನಗಳಿಗೆ ಸಮೀಪದಲ್ಲಿರುವ ಈ ಕೃತಿ, ತಳಸಮುದಾಯದ ಬದುಕಿನ ವಿವರಗಳನ್ನು ತೆರೆದಿಡುತ್ತದೆ. ನಮಗೆ ತಿಳಿದಿಲ್ಲದ, ಅರಿವಿಲ್ಲದ ಜಗತ್ತನ್ನು ಪರಿಚಯಿಸುತ್ತದೆ. ದೊಂಬಿದಾಸರ ಆಚಾರ, ವಿಚಾರ, ನಂಬಿಕೆ, ಮೂಢನಂಬಿಕೆಗಳ ಸಂಕಲನವಷ್ಟೇ ಅಲ್ಲ ಇದು. ಇಲ್ಲಿ ಅವರ ನೋವು, ಅಭಿವ್ಯಕ್ತಿಗಳಿವೆ. ಕಥನ ಶೈಲಿಯ ನಿರೂಪಣೆಗಳ ಮೂಲಕ ಅವೆಲ್ಲವನ್ನು ಮಂಡಿಸುತ್ತಾರೆ. ಏಕ ಸಂಸ್ಕೃತಿಯ ಭ್ರಮೆಯಲ್ಲಿರುವ ಮಂದಿಗಳಿಗೆ, ಅರ್ಥವಾಗದ ಹಲವು ಸಂಗತಿಗಳನ್ನು ಈ ಕಥನದ ಮೂಲಕ ಅರ್ಥ ಮಾಡಿಸಲು ಕುಪ್ಪೆ ನಾಗರಾಜ ಅವರು ಪ್ರಯತ್ನಿಸುತ್ತಾರೆ. ಕನ್ನಡಕ್ಕೆ ಇದೊಂದು ವಿಶಿಷ್ಟ ಕೃತಿ. ಸುಂದರ ಮುದ್ರಣ, ಸೃಜನ್ ರೇಖಾಚಿತ್ರ ಕೃತಿಯನ್ನು ಓದುಗರಿಗೆ ಇನ್ನಷ್ಟು ಹತ್ತಿರವಾಗಿಸುತ್ತದೆ.
ಕೃತಿಯ ಮುಖಬೆಲೆ 125 ರೂ. ಕೃತಿಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ-080-30578020

No comments:

Post a Comment