Wednesday, September 18, 2013

ಮೊಳಕೆ ಮತ್ತು ಇತರ ಕತೆಗಳು



ರಾಜಕೀಯ
ಅದೊಂದು ರಾಜಕಾರಣಿಗಳ ಕುಟುಂಬ.
ಒಂದು ದಿನ ಯಾರೋ ಕೇಳಿದರು ‘‘ಅಪ್ಪ ಮನೆಯಲ್ಲಿ ಇದ್ದಾರ...’’
ಮಗ ತಕ್ಷಣ ಹೇಳಿದ ‘‘ಇಲ್ಲ ಅಂತ ಹೇಳಲು ಹೇಳಿದ್ದಾರೆ. ಆದರೆ ಅವರು ಒಳಗೆ ಇದ್ದಾರೆ’’
‘‘ಅದ್ಯಾಕಪ್ಪ ಮಗನಾಗಿಯೂ ಅಪ್ಪನ ವಿರುದ್ಧ ಹೇಳುತ್ತಿದ್ದೀಯ?’’
‘‘ನಾನು ಭಿನ್ನಮತೀಯ’’


ಮನೆ
ಮನೆ ಹೇಗಿರಬೇಕು?
ಸಂತನ ಬಳಿ ಯಾರೋ ಕೇಳಿದರು.
ಸಂತ ಗಂಭೀರವಾಗಿ ಹೇಳಿದ ‘ಸೋರದಂತಿರಬೇಕು’’

ಮೊಳಕೆ
ಒಬ್ಬ ಬರಹಗಾರ ಅದೇನೋ ಬರೆದನೆಂದು ದುಷ್ಕರ್ಮಿಗಳು ಆತನ ಕೈ ಕತ್ತರಿಸಿದರು.
ಆದರೆ ಕೆಲವೇ ದಿನಗಳಲ್ಲಿ ಆ ಜಾಗದಲ್ಲಿ ನೂರು ಕೈಗಳು ಮೊಳಕೆ ಒಡೆದವು.

ಬಾಗಿಲು
‘‘ಯಾರೋ ಬಾಗಿಲು ತಟ್ಟುತ್ತಿದ್ದಾರೆ’’ ಹೆಂಡತಿ ಕೂಗಿ ಹೇಳಿದಳು.
‘‘ದುರದೃಷ್ಟವಾಗಿರಬಹುದು. ಬಾಗಿಲು ತೆಗೆಯಬೇಡ’’ ಗಂಡ ಉತ್ತರಿಸಿದ.
ಸರಿ ಮತ್ತೆ ವೌನ.
ಹೆಂಡತಿ ನಿರಾಸೆಯಿಂದ ಹೇಳಿದಳು ‘‘ಬಾಗಿಲು ತಟ್ಟಿದ್ದು ದುರದೃಷ್ಟವಲ್ಲ. ಅದೃಷ್ಟ’’
‘‘ನಿನಗೆ ಹೇಗೆ ಗೊತ್ತು?’’
‘‘ಯಾಕೆಂದರೆ ಅದೃಷ್ಟ ಮಾತ್ರ ಬಾಗಿಲು ತಟ್ಟಿ ಪ್ರವೇಶಿಸುತ್ತದೆ. ದುರದೃಷ್ಟ ಬಾಗಿಲನ್ನು ಒದ್ದು ಪ್ರವೇಶಿಸುತ್ತದೆ’’

ಸಹಾಯ
‘‘ಹುಡುಗಿ ನನಗೆ ಸಹಾಯ ಮಾಡುತ್ತೀಯ?’’
‘‘ಏನು ಸಹಾಯ...’’
‘‘ನನಗೆ ಆತ್ಮಹತ್ಯೆ ಮಾಡ್ಕೋಬೇಕಾಗಿದೆ...’’
‘‘ಆತ್ಮಹತ್ಯೆಗೆ ನನ್ನ ಸಹಾಯ..!?’’
‘‘ಹೌದು, ನಿನ್ನ ಕೆನ್ನೆಯ ಗುಳಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡ್ಕೋಬೇಕಾಗಿದೆ’’

ಈಜು
ಒಬ್ಬನಿಗೆ ಈಜು ಕಲಿಯುವ ಆಸೆ.
ಪುಸ್ತಕದ ಅಂಗಡಿಗೆ ತೆರಳಿ ಕೇಳಿದ ‘‘ಈಜು ಕಲಿಸುವ ಪುಸ್ತಕ ಇದೆಯ?’’
ಅಂಗಡಿಯಾತ ಕೊಟ್ಟ.
ಅದೊಂದು ನದಿಯ ಕುರಿತ ಪುಸ್ತಕ.
ಅಂಗಡಿಯಾತ ಹೇಳಿದ ‘‘ಈ ಪುಸ್ತಕದ ಓದಿನಲ್ಲಿ ಮುಳುಗು. ಈಜು ತನ್ನಷ್ಟಕ್ಕೆ ಬರುತ್ತದೆ’’

ಗೆಳೆಯರು
‘‘ಅಂತಹ ಕೆಟ್ಟ ಗೆಳೆಯನಲ್ಲಿ ಯಾಕೆ ಸ್ನೇಹ ಮಾಡಿದ್ದೀಯ?’’ ತಾಯಿ ಕೇಳಿದರು.
‘‘ಯಾಕೆಂದರೆ ಒಳ್ಳೆಯ ಗೆಳೆಯರು ನನ್ನ ಸ್ನೇಹ ಮಾಡಲು ಹಿಂಜಯುತ್ತಾರೆ, ಅದಕ್ಕೆ’’

ಕನಸು
ಒಬ್ಬ ಶ್ರೀಮಂತನಿಗೆ ಕನಸು ಬಿತ್ತು. ಅದರಲ್ಲಿ ಅವನು ತೀವ್ರ ನಷ್ಟ ಅನುಭವಿಸಿ, ದರಿದ್ರನಾಗುತ್ತಾನೆ.
ಅಂದಿನಿಂದ ಕನಸು ಎಂದರೆ ಭಯ.
ಕನಸಿಗೆ ಹೆದರಿ ಅವನು ನಿದ್ದೆ ಮಾಡುವುದನ್ನೇ ಬಿಟ್ಟು ಬಿಟ್ಟ.
ನಿದ್ದೆಗೆಟ್ಟವನ ಆರೋಗ್ಯ ಕೆಟ್ಟಿತು. ಆರೋಗ್ಯ ಕೆಟ್ಟ ಕಾರಣ ಅವನ ವ್ಯಾಪಾರವೂ ಕೆಟ್ಟಿತು.
ದಿನ ದಿನಕ್ಕೆ ಆರೋಗ್ಯ, ವ್ಯಾಪಾರ ಕುಸಿತ ಕಂಡಿತು.
ಒಂದು ದಿನ ಅವನು ನಿಜಕ್ಕೂ ದರಿದ್ರನಾಗಿಯೇ ಬಿಟ್ಟ.
ಈಗ ಅವನಿಗೆ ಕಣ್ತುಂಬ ನಿದ್ದೆ. ಕನಸಿನಲ್ಲಿ ದರಿದ್ರನಾಗುವ ಭಯವೇ ಇಲ್ಲ.

4 comments: