Thursday, April 18, 2013

ಈ ವಿಶ್ವದಲ್ಲಿರುವುದು ಎರಡೇ ಸಮುದಾಯ

 ಭಾರತದಲ್ಲಿ ಅಲ್ಪಸಂಖ್ಯಾತರು ಕೇವಲ ಬಿಜೆಪಿ ಯಿಂದ ಅಥವಾ ಮೋದಿಯಂತಹ ನಾಯಕರಿಂದಷ್ಟೇ ಆತಂಕವನ್ನು ಎದುರಿಸುತ್ತಾರೆ ಎನ್ನುವುದು ಎಷ್ಟು ಸತ್ಯ? ಸಿಖ್ ಹತ್ಯಾಕಾಂಡದಲ್ಲಿ ಕೇವಲ ಕಾಂಗ್ರೆಸಿಗರಷ್ಟೇ ಭಾಗವಹಿಸಿದ್ದರು ಎನ್ನುವುದು ಎಷ್ಟರಮಟ್ಟಿಗೆ ಸತ್ಯ? ಈ ಎರಡು ಪ್ರಶ್ನೆಗಳನ್ನು ನಾವು ಉಜ್ಜಿ ನೋಡಬೇಕಾಗಿದೆ. ಸಿಖ್ ಹತ್ಯಾಕಾಂಡ ಈ ದೇಶದಲ್ಲಿ ನಡೆದುದು ಇಂದಿರಾಗಾಂಧಿಯ ಹತ್ಯೆಯ ಕಾರಣಕ್ಕಾಗಿ ಯಷ್ಟೇ ಅಲ್ಲ, ಸಿಕ್ಖರು ಈ ದೇಶದಲ್ಲಿ ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೂ ಅವರ ಮೇಲೆ ಅಂದು ಆ ಪರಿಯ ಹಿಂಸೆ ನಡೆಯಿತು. ಆ ಹಿಂಸೆಯಲ್ಲಿ ಭಾಗವಹಿಸಿದ್ದು ಕೇವಲ ಕಾಂಗ್ರೆಸ್ ಕಾರ್ಯ ಕರ್ತರು ಅಥವಾ ಮುಖಂಡರು ಮಾತ್ರ ಎನ್ನುವುದು ಅತಿ ದೊಡ್ಡ ಸುಳ್ಳು. ಆಳದಲ್ಲಿ ಸಿಖ್ ಸಮು ದಾಯದ ಜೊತೆಗೆ ತೀವ್ರ ಅಸಮಾಧಾನವನ್ನು ಹೊಂದಿದ್ದ ಆರೆಸ್ಸೆಸ್ ನಾಯಕರೂ ಇದೇ ಸಂದರ್ಭವನ್ನು ಬಳಸಿಕೊಂಡು ತಮ್ಮ ಅಸಹನೆಯನ್ನು ತೀರಿಸಿ ಕೊಂಡರು. ಸಿಖ್ ಹತ್ಯಾಕಾಂಡ ದಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್ ಮುಖಂಡರಿದ್ದರೂ, ಆಳದಲ್ಲಿ ಆರೆಸ್ಸೆಸ್ ಮನಸ್ಸು ಭಾರೀ ಕೆಲಸ ವನ್ನು ಮಾಡಿತ್ತು. ಸಿಖ್ಖರು ಅಂದು ಆ ಪರಿಯ ಹಿಂಸೆಯನ್ನು ಎದುರಿಸಿದ್ದು ಯಾಕೆಂದರೆ, ಅವರು ಈ ದೇಶದ ಅಲ್ಪ ಸಂಖ್ಯಾತ ಸಮುದಾಯ ವಾಗಿದ್ದರು.

ವಿಶ್ವದಲ್ಲಿ ‘ಅಲ್ಪಸಂಖ್ಯಾತ’ ಎನ್ನುವುದೇ ಒಂದು ಸಮುದಾಯ. ಇವರು ಮುಸ್ಲಿಮರಾಗಿ ರಬಹುದು, ಹಿಂದೂಗಳಾಗಿರಬಹುದು, ಬೌದ್ಧ ರಾಗಿರಬಹುದು, ತಮಿಳರಾಗಿರಬಹುದು. ಭಾರತದಲ್ಲಿ ಮುಸ್ಲಿಮರ ಮೇಲೆ ಹೇಗೆ ಹಿಂಸೆ, ದಬ್ಬಾಳಿಕೆ ನಡೆಯುತ್ತಿದೆಯೋ ಹಾಗೆಯೇ ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೂ ನಡೆಯುತ್ತಿದೆ ಎನ್ನುವುದನ್ನು ನಾವು ಗಮನಿಸಬೇಕು. ಯಾಕೆಂದರೆ ಹಿಂದೂಗಳು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು. ಬಾಂಗ್ಲಾದಲ್ಲೂ ಹಿಂದೂಗಳ ಮೇಲೆ ಹಿಂಸಾಚಾರ ನಡೆಯುತ್ತಿದೆ. ಯಾಕೆಂದರೆ ಅಲ್ಲಿ ಅವರದು ಅಲ್ಪಸಂಖ್ಯಾತ ಸಮುದಾಯ. ಒಂದಾನೊಂದು ಕಾಲದಲ್ಲಿ ಭಾರತದಲ್ಲಿ ಬೌದ್ಧರ ಮೇಲೆ ಶಂಕರಾಚಾರ್ಯ ನೇತೃತ್ವದಲ್ಲಿ ಭಾರೀ ನರಮೇಧ ನಡೆಯಿತು. ಬೌದ್ಧರನ್ನು ಕಂಡ ಕಂಡಲ್ಲಿ ಅಟ್ಟಾಡಿಸಿ ಅವರನ್ನು ಕೊಂದು ಹಾಕಲಾಯಿತು. ಇಂದು ಅದೇ ಬೌದ್ಧರು ಶ್ರೀಲಂಕಾದಲ್ಲಿ, ಮ್ಯಾನ್ಮಾರ್‌ನಲ್ಲಿ ರಾಕ್ಷಸರಾಗಿ ಮೆರೆದಿರುವುದನ್ನು ನಾವು ಕಂಡಿದ್ದೇವೆ. ಬೌದ್ಧ ಧರ್ಮವನ್ನು ನಾವು ಅಹಿಂಸೆಯ ಸಂಕೇತ ಎಂದು ಕೊಂಡಾಡುತ್ತೇವೆ. ಜಗತ್ತಿನಲ್ಲಿ ಬೌದ್ಧರು ಬಹುಸಂಖ್ಯಾತರಾಗಿ ರುವಲ್ಲೆಲ್ಲ ಹಿಂಸೆ ಬರ್ಬರ ರೂಪವನ್ನು ತಾಳಿದೆ. ಥಾಯ್ಲೆಂಡ್‌ನಲ್ಲಿ 2004ರಲ್ಲಿ ನಡೆದ ಕೋಮು ಗಲಭೆಯಲ್ಲಿ ಒಂದೆರಡು ದಿನಗಳಲ್ಲಿ 200 ಮಂದಿ ಅಮಾಯಕ ಮುಸ್ಲಿಮರನ್ನು ಧರ್ಮದ ಹೆಸರಿನಲ್ಲಿ ಇದೇ ಬೌದ್ಧರು ಕೊಂದು ಹಾಕಿದ್ದರು. ಮ್ಯಾನ್ಮಾರ್‌ನಲ್ಲಿ ಬೌದ್ಧರು ಕ್ರೌರ್ಯ ಮೆರೆಯು ತ್ತಿರುವುದನ್ನು ಕಳೆದ ಕೆಲವು ತಿಂಗಳಿನಿಂದ ನೋಡುತ್ತಿದ್ದೇವೆ. ಜಗತ್ತಿನ ಅತಿ ಸಣ್ಣ ಧರ್ಮ ವಾಗಿರುವ ಬೌದ್ಧಧರ್ಮ ಅವಕಾಶ ಸಿಕ್ಕಿದಾಗ ಯಾವುದೇ ಬಹುಸಂಖ್ಯಾತ ಧರ್ಮಕ್ಕಿಂತ ಕಡಿಮೆ ಹಿಂಸೆಯನ್ನು ಎಸಗಲಿಲ್ಲ. ಶ್ರೀಲಂಕಾದ ಹಿಂಸೆಯಲ್ಲಿ ಬೌದ್ಧ ಸನ್ಯಾಸಿಗಳ ನೇರ ಪಾತ್ರವಿದೆ ಎನ್ನುವುದು ಈಗಾಗಲೇ ವರದಿಯಿಂದ ಬಯಲಾಗಿದೆ.

 ಆದುದರಿಂದಲೇ, ನಾವು ಭಾರತದ ಕೋಮು ಗಲಭೆಯನ್ನು ಬರೇ ಬಿಜೆಪಿಗಷ್ಟೇ ನಂಟು ಹಾಕುವುದಕ್ಕಾಗುವುದಿಲ್ಲ. ಬ್ರಾಹ್ಮಣ್ಯವೆನ್ನುವುದು ಮೈಗೂಡಿಸಿಕೊಂಡಿರುವುದು ಕೇವಲ ಬಿಜೆಪಿ ಮಾತ್ರವಲ್ಲ. ಇಲ್ಲಿನ ಕಾಂಗ್ರೆಸ್, ಎಡಪಕ್ಷಗಳ ನಾಯಕರ ಆಳದಲ್ಲೂ ಬ್ರಾಹ್ಮಣ ಹೆಡೆಯಾಡು ವುದನ್ನು ನಾವು ನೋಡುತ್ತಾ ಬಂದಿದ್ದೇವೆ. ಬಿಜೆಪಿ ಸರಕಾರಗಳೆಲ್ಲ ಅಳಿದು ಇಡೀ ದೇಶ ಕಾಂಗ್ರೆಸ್‌ಮಯವಾದರೆ ಇಲ್ಲಿ ಕೋಮುಗಲಭೆ ಶಾಶ್ವತವಾಗಿ ಅಳಿದು ಹೋಗುತ್ತದೆ ಎನ್ನುವುದು ಒಂದು ಭ್ರಮೆ ಮಾತ್ರ. ಈ ದೇಶದ ಇತಿಹಾಸ ವನ್ನು ಗಮನಿಸಿದರೆ, ಹೆಚ್ಚಿನ ಕೋಮುಗಲಭೆ ಗಳಲ್ಲಿ ಕೇವಲ ಬಿಜೆಪಿ ಮತ್ತು ಆರೆಸ್ಸೆಸ್ಸಿಗರು ಮಾತ್ರ ಭಾಗವಹಿಸಿರುವುದಲ್ಲ. ಆಳದಲ್ಲಿ ಕಾಂಗ್ರೆಸ್‌ನ ಬಹುತೇಕ ನಾಯಕರು ಬಿಜೆಪಿ ಯನ್ನು ಇಷ್ಟಪಡದಿದ್ದರೂ, ಅವರ ಕೋಮು ನಿಲುವನ್ನು ಇಷ್ಟಪಡುತ್ತಾರೆ. ಅನೇಕ ಕಾಂಗ್ರೆಸ್ ನಾಯಕರು ಆಳದಲ್ಲಿ ಆರೆಸ್ಸೆಸ್‌ನ ‘ದೇಶಭಕ್ತಿ’ ಯನ್ನು ಇಷ್ಟಪಡುತ್ತಾರೆ. ಯಾಕೆಂದರೆ, ಆ ದೇಶಭಕ್ತಿ, ಮುಸ್ಲಿಮರನ್ನು ಅಥವಾ ಅಲ್ಪಸಂಖ್ಯಾತ ರನ್ನು ದ್ವೇಷಿಸುತ್ತದೆ. 


ಈ ದೇಶದಲ್ಲಿ ಕೋಮುಗಲಭೆ ಸಂಭವಿಸಿದ ಇಸವಿ ಮತ್ತು ಆಗ ಯಾವ ಸರಕಾರವಿತ್ತು ಎನ್ನುವುದನ್ನು ಗಮನಿಸಿದರೆ ಇದು ಅರ್ಥ ವಾಗುತ್ತದೆ. 1990ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಭೀಕರ ಕೋಮುಗಲಭೆಗೆ ಸುಮಾರು 400 ಮಂದಿ ಮುಸ್ಲಿಮರು ಬಲಿಯಾದರು. ಈ ಸಂದರ್ಭದಲ್ಲಿ ಆಂಧ್ರದಲ್ಲಿ ಕಾಂಗ್ರೆಸ್ ಸರಕಾರ ವಿತ್ತು. ಚೆನ್ನಾರೆಡ್ಡಿ ಮುಖ್ಯಮಂತ್ರಿಯಾಗಿದ್ದರು. 1990ರಲ್ಲಿ ಅಲಿಘರ್‌ನಲ್ಲಿ ನಡೆದ ಕೋಮು ಗಲಭೆಗೆ ಸುಮಾರು 200 ಅಲ್ಪಸಂಖ್ಯಾತರು ಬಲಿಯಾದರು. ಆಗ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಇದ್ದುದು ಮುಲಾಯಂ ಸಿಂಗ್ ಯಾದವ್. 1992ರಲ್ಲಿ ಸೂರತ್‌ನಲ್ಲಿ ಕೋಮುಗಲಭೆ ಭುಗಿಲೆದ್ದಿತ್ತು. ಸುಮಾರು 200 ಮಂದಿ ಬಲಿಯಾದರು. ಆಗ ಅಲ್ಲಿ ಕಾಂಗ್ರೆಸ್ ಮೈತ್ರಿ ಸರಕಾರ ಆಳ್ವಿಕೆ ನಡೆಸುತ್ತಿತ್ತು. 1993ರಲ್ಲಿ ಮುಂಬೈಯಲ್ಲಿ ಭೀಕರ ಕೋಮುಗಲಭೆ ನಡೆಯಿತು. ಸುಮಾರು 1000 ಸಾವಿರ ಜನರು ಅದಕ್ಕೆ ಬಲಿಯಾದರು. ಆಗ ಅಲ್ಲಿದ್ದ ಸರಕಾರ ಕಾಂಗ್ರೆಸ್. ಸುಧಾಕರ ನಾಯ್ಕೆ ಮುಖ್ಯಮಂತ್ರಿ ಯಾಗಿದ್ದರು. ಆ ಸಾವು ನೋವಿನ ಗಾಯಗಳು ಇನ್ನೂ ಒಣಗಿಲ್ಲ. ಅಪರಾಧಿಗಳಿಗೆ ಇನ್ನೂ ಶಿಕ್ಷೆಯಾಗಿಲ್ಲ. ಎಲ್ಲ ಬಿಡಿ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗಲೇ ಬಾಬರೀ ಮಸೀದಿ ಕುಸಿದು ಬಿತ್ತು. ಆಗ ಈ ದೇಶದ ಪ್ರಧಾನಿ ಯಾಗಿದ್ದವರು ನರಸಿಂಹ ರಾವ್. ಈತ ಧರ್ಮದಲ್ಲಿ ಮಾತ್ರ ಬ್ರಾಹ್ಮಣನಲ್ಲ. ಮನಸ್ಸಿನಲ್ಲೂ ಬ್ರಾಹ್ಮಣ. ಕಾಂಗ್ರೆಸ್‌ನ ನಾಯಕನಾದಾಕ್ಷಣ ತನ್ನೊಳಗಿನ ಬ್ರಾಹ್ಮಣ್ಯವನ್ನು ಬಲಿಕೊಡ ಬೇಕೆಂದಿಲ್ಲ. ತನ್ನ ಅಧಿಕಾರಾವಧಿಯಲ್ಲಿ ಇದನ್ನೇ ಮಾಡಿದರು. ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ ಹೆಗ್ಗಳಿಕೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೇ ಸೇರಬೇಕು. ಒಬ್ಬ ಎಡಪಕ್ಷದ ನಾಯಕನ ಆಳದಲ್ಲೂ ಮುಸ್ಲಿಮ್ ದ್ವೇಷ ವಿರುವುದನ್ನು ನಾನು ನೋಡಿದ್ದೇನೆ. ಅಲ್ಪಸಂಖ್ಯಾತರ ಕುರಿತಂತೆ ಅವನೊಳಗೆ ವಿಚಿತ್ರ ದ್ವೇಷ ಮತ್ತು ಸೇಡನ್ನು ಅಲ್ಲಿ ಕಂಡಿದ್ದೆ. ಆಳವಾಗಿ ಬ್ರಾಹ್ಮಣ್ಯದ ವಿಚಿತ್ರ ರೂಪಾಂತರ ಅದು. ಅವನು ಎಡಪಕ್ಷದವನಾಗಿದ್ದರೂ ಅವನ ಆಳ ದಲ್ಲಿ ಬ್ರಾಹ್ಮಣ್ಯ ಇನ್ನೂ ಹೆಡೆಯಾಡುತ್ತಲೇ ಇತ್ತು. 

ಹೀಗಿರುವಾಗ ನಾವು ಮೋದಿಗೆ ಶಿಕ್ಷೆಯಾದಾಕ್ಷಣ ಅಥವಾ ಬಿಜೆಪಿ ಸರ್ವನಾಶ ವಾದಾಕ್ಷಣ ಇಲ್ಲಿ ಅಲ್ಪಸಂಖ್ಯಾತ ರಿಗೆ ಭದ್ರತೆ ಸಿಗುತ್ತದೆ ಎಂದು ನಂಬುವುದಾದರೂ ಹೇಗೆ. ಅಲ್ಪಸಂಖ್ಯಾತರು ಯಾವ ಧರ್ಮಕ್ಕೆ ಬೇಕಾದರೂ ಸೇರಿರಲಿ. ಅವರ ಭದ್ರತೆ ಸರಕಾರದ ಹೊಣೆ. ಆ ಕರ್ತವ್ಯದಲ್ಲಿ ದೌರ್ಬಲ್ಯಗಳು ಕಾಣಿಸಿಕೊಂಡಾಗ ಬಹು ಸಂಖ್ಯಾತರೊಳಗಿರುವ ದುಷ್ಕರ್ಮಿಗಳು ಚುರುಕಾಗು ತ್ತಾರೆ. ದೋಚುವುದಕ್ಕೆ, ಕೊಲ್ಲುವುದಕ್ಕೆ, ಅಕ್ರಮಗಳನ್ನು ನಡೆಸುವುದಕ್ಕೆ ಅವರಿಗೆ ಪರೋಕ್ಷವಾಗಿ ಕುಮ್ಮಕ್ಕು ಸಿಕ್ಕಿದಂತಾಗುತ್ತದೆ. ಆಗ ಸಂಭವಿಸುವುದು ಕೋಮುಗಲಭೆ. ಕೋಮು ಗಲಭೆಯಿಂದ ರಾಜಕೀಯ ಪಕ್ಷಗಳಿಗೆ ಲಾಭವಿದೆ. ಹಾಗೆಯೇ ಸ್ಥಳೀಯ ದರೋಡೆ ಕೋರರಿಗೆ, ಗೂಂಡಾಗಳಿಗೆ, ವ್ಯಾಪಾರಿಗಳಿಗೆ, ವಂಚಕರಿಗೆ, ದಲ್ಲಾಳಿಗಳಿಗೆ, ಪರಸ್ಪರ ಸ್ಪರ್ಧಿಗಳಿಗೆ...ಹೀಗೆ ಹಲವು ವರ್ಗಗಳಿಗೆ ಲಾಭವಿದೆ. ನಷ್ಟ ಕೇವಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ. ಇದೇ ಸಂದರ್ಭದಲ್ಲಿ ನಾನು ಆಗಾಗ ಮುಸ್ಲಿಮ್ ಗೆಳೆಯರ ಜೊತೆಗೆ ಕೇಳುತ್ತಿದ್ದ ಪ್ರಶ್ನೆ ಇದು. ‘‘ಈ ದೇಶದಲ್ಲಿ ಮುಸ್ಲಿಮರು ಶೇ. 80ರಷ್ಟಿದ್ದು, ಹಿಂದೂಗಳು ಶೇ. 20 ರಷ್ಟಿದ್ದರೆ ಅವರ ಸ್ಥಿತಿ ಏನಾಗುತ್ತಿತ್ತು?’’ ಇದಕ್ಕೆ ಸ್ಪಷ್ಟ ಉತ್ತರ ಕೊಡುವಲ್ಲಿ ಎಲ್ಲ ಗೆಳೆಯರೂ ಹಿಂಜರಿದಿದ್ದರು. ನಾನೇ ಉತ್ತರಿಸಬೇಕಾಯಿತು ‘‘ಹಿಂದೂಗಳು ಶೇ. 20 ರಷ್ಟಿದ್ದರೆ ಅವರ ಸ್ಥಿತಿ ತುಂಬಾ ಕೆಟ್ಟದಾಗಿರುತ್ತಿತ್ತು.’’.

  ಯಾಕೆಂದರೆ ಈ ವಿಶ್ವದಲ್ಲಿ ಎರಡೇ ಸಮುದಾಯ ಇರುವುದು. ಒಂದು ಬಹುಸಂಖ್ಯಾತ. ಇನ್ನೊಂದು ಅಲ್ಪಸಂಖ್ಯಾತ. ಒಂದು ಪ್ರಬಲ ಸಮುದಾಯ. ಇನ್ನೊಂದು ದುರ್ಬಲ ಸಮುದಾಯ. ಅಲ್ಪಸಂಖ್ಯಾತರು ಎಂದಾಕ್ಷಣ ನಾವು ಅವರನ್ನು ಮುಸ್ಲಿಮರು, ಕ್ರಿಶ್ಚಿಯನ್ನರು ಎಂಬ ಕಣ್ಣಿನಲ್ಲಿ ನೋಡಬೇಕಾಗಿಲ್ಲ. ಪಾಕಿಸ್ತಾನದ ಹಿಂದೂಗಳು, ಶ್ರೀಲಂಕಾದ ತಮಿಳರು, ಮ್ಯಾನ್ಮಾರ್‌ನ ಮುಸ್ಲಿಮರು ಎಲ್ಲರೂ ಅಲ್ಪಸಂಖ್ಯಾತರೇ. ಭಾರತದ ಅಲ್ಪಸಂಖ್ಯಾತರನ್ನು ಕೆಂಗಣ್ಣಿನಿಂದ ನೋಡುವವರಿಗೆ, ಪಾಕಿಸ್ತಾನದ ಅಲ್ಪಸಂಖ್ಯಾತರ ಕುರಿತಂತೆ ಮಾತನಾಡುವ ನೈತಿಕತೆಯಿರುವುದಿಲ್ಲ. ಅಲ್ಪಸಂಖ್ಯಾತರೆಂದರೆ ಯಾವುದೇ ಒಂದು ನಿರ್ದಿಷ್ಟ ಧರ್ಮವಲ್ಲ. ಅವೆಲ್ಲವನ್ನೂ ಮೀರಿದ ಒಂದು ದುರ್ಬಲ ಸಮುದಾಯ. ಅವರೆಲ್ಲಿದ್ದರೂ, ಹೇಗಿದ್ದರೂ ಅವರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯ. ಇದು ನನ್ನ ಮಾತಲ್ಲ. ಮಹಾತ್ಮಗಾಂಧೀಜಿಯ ಮಾತು.

28 comments:

  1. ಬಶೀರ್ ಅವರೇ,

    "ಭಾರತದ ಅಲ್ಪಸಂಖ್ಯಾತರನ್ನು ಕೆಂಗಣ್ಣಿನಿಂದ ನೋಡುವವರಿಗೆ, ಪಾಕಿಸ್ತಾನದ ಅಲ್ಪಸಂಖ್ಯಾತರ ಕುರಿತಂತೆ ಮಾತನಾಡುವ ನೈತಿಕತೆಯಿರುವುದಿಲ್ಲ. ಅಲ್ಪಸಂಖ್ಯಾತರೆಂದರೆ ಯಾವುದೇ ಒಂದು ನಿರ್ದಿಷ್ಟ ಧರ್ಮವಲ್ಲ. ಅವೆಲ್ಲವನ್ನೂ ಮೀರಿದ ಒಂದು ದುರ್ಬಲ ಸಮುದಾಯ. ಅವರೆಲ್ಲಿದ್ದರೂ, ಹೇಗಿದ್ದರೂ ಅವರ ರಕ್ಷಣೆ ಬಹುಸಂಖ್ಯಾತರ ಕರ್ತವ್ಯ" ಈ ಮಾತು ಹೇಳಿದಿರಲ್ಲ, ಇದು ನಿಜಕ್ಕೂ ಒಪ್ಪತಕ್ಕ ಮಾತು. ನಿಮ್ಮ ಈ ಕಳಕಳಿ ಮೆಚ್ಚತಕ್ಕದ್ದು. ಜಾತಿಯನ್ನೂ ಮೀರಿ, ಜಾತಿ ಸಂಕೇತಗಳನ್ನೂ ಮೀರಿ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವುದಿದೆಯಲ್ಲ, ಅದು ಇವತ್ತಿನ ನಮ್ಮ ಜರೂರು ಅಗತ್ಯಗಳಲ್ಲೊಂದು, ಅದು ನಮ್ಮ ಜನಕ್ಕೆ ಯಾವಾಗ ಬರುವುದೋ!

    ಇರಲಿ, ಆದರೆ ನಿಮ್ಮ ಲೇಖನದಲ್ಲಿ ತೀರ "ಖಾಲಿ"ಯೆಂಬಂತೆ ಕಂಡುಬಂದ ಕೆಲವು ವಿಷಯಗಳ ಬಗ್ಗೆ ತಕರಾರಿದೆ. ಯಾವುದನ್ನೂ ಕಪ್ಪುಬಿಳುಪಾಗಿ ನೋಡುವ (ಸುಲಭವಾದ) ಅಭ್ಯಾಸ ಇವತ್ತು ನಮ್ಮ ಹಿಂದೂ-ಮುಸ್ಲಿಂ ಜಾತ್ಯಂಧರಿಗಷ್ಟೇ ಸೀಮಿತವಾಗದೇ ಜಾತ್ಯತೀತರು, ಪ್ರಗತಿಪರರು, ಬುದ್ಧಿಜೀವಿಗಳು ಎಂದು ಹೇಳಿಕೊಳ್ಳುವ ಜನಾಂಗಕ್ಕೂ ಬಲವಾಗಿಯೇ ಅಂಟಿಬಿಟ್ಟಿರುವುದರಿಂದ, ನಾನೇನು ಹೇಳಹೊರಟಿದ್ದೇನೆ ಎಂಬುದನ್ನು ಈಗಾಗಲೇ ಕಪ್ಪು ಬಿಳುಪಿನಲ್ಲಿ ವಿಂಗಡಿಸಿ ಓದಹೊರಡುವ ಅಪಾಯವಿದ್ದೇ ಇದೆ. ಆದರೂ ನೀವು ಇದಕ್ಕೆ ಹೊರತು ಎಂಬ ಆಶೆಯಿಂದ ನನ್ನ ಕೆಲವು ಆಲೋಚನೆಗಳನ್ನು ಮುಂದಿಡುತ್ತೇನೆ.

    "ಅಲ್ಪಸಂಖ್ಯಾತರೆಂದರೆ ಯಾವುದೇ ಒಂದು ನಿರ್ದಿಷ್ಟ ಧರ್ಮವಲ್ಲ. ಅವೆಲ್ಲವನ್ನೂ ಮೀರಿದ ಒಂದು ದುರ್ಬಲ ಸಮುದಾಯ" ಎಂದಿರಿ, ನಿಜ. ಜಾತಿಯನ್ನೂ ಜಾತಿ ಸಂಕೇತಗಳನ್ನೂ ಮೀರಿ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವ ನಿಮ್ಮ ಕಳಕಳಿಯನ್ನು ನಾನೂ ಮೆಚ್ಚಿದೆ. ಆದರೆ ಸ್ವಾಮಿ, ಇದೇನು, ಈ "ಜಾತ್ಯತೀತ" ಕಾಣ್ಕೆಯ ಬೆನ್ನಲ್ಲೇ "ಈತ ಧರ್ಮದಲ್ಲಿ ಮಾತ್ರ ಬ್ರಾಹ್ಮಣನಲ್ಲ. ಮನಸ್ಸಿನಲ್ಲೂ ಬ್ರಾಹ್ಮಣ", "ಬ್ರಾಹ್ಮಣ ಹೆಡೆಯಾಡು ವುದನ್ನು ನಾವು ನೋಡುತ್ತಾ ಬಂದಿದ್ದೇವೆ", ಇತ್ಯಾದಿ ಕುರುಡು ಬಡಬಡಿಕೆ? ತಡೆಯಿರಿ ತಡೆಯಿರಿ, "ನಾನು ಬ್ರಾಹ್ಮಣ ಜಾತಿಯ ಬಗ್ಗೆ ಹೇಳಲಿಲ್ಲ, ಎಲ್ಲರನ್ನೂ ತುಳಿದು ಹಾಕುವ ಬ್ರಾಹ್ಮಣ್ಯದ ಮನಸ್ಥಿತಿಯ ಬಗ್ಗೆ ಹೇಳಿದ್ದು" ಅಂದೆಲ್ಲಾ ಸಮಜಾಯಿಶಿ ಕೊಡಲು ಹೊರಡಬೇಡಿ. ಇಂಥಾ ಸಮಜಾಯಿಶಿಯನ್ನು ನಿಮ್ಮ ಜನಾಂಗದಿಂದ (ಬುದ್ಧಿಜೀವಿ ಜನಾಂಗದಿಂದ) ಸಾಕಷ್ಟು ಕೇಳಿದ್ದೇನೆ. ಆದರೆ ಬ್ರಾಹ್ಮಣನನ್ನು ಜಾತಿಯೆಂದೇ ತಿಳಿಯುವ ಬಹುಸಂಖ್ಯಾತರು ನಿಮ್ಮ ಮಾತನ್ನು ತಪ್ಪಾಗಿ ತಿಳಿಯುತ್ತಾರಲ್ಲವೇ? ಎಲ್ಲರನ್ನೂ ತುಳಿದುಹಾಕುವ ಮನಸ್ಥಿತಿ ಕೆಟ್ಟದ್ದು ಎಂಬುದು ಯಾರೂ ಒಪ್ಪುವ ಮಾತು (ಒಬ್ಬ ಬ್ರಾಹ್ಮಣನಾಗಿಯೂ ನಾನೂ ನಂಬಿದ ಮಾತು) ಆದರೆ ಅದಕ್ಕೆ ಬ್ರಾಹ್ಮಣನ ಹೆಸರೇಕೆ ಇಡುತ್ತೀರಿ, ನಾನು ಯಾರನ್ನೂ ತುಳಿಯಲಿಲ್ಲವಲ್ಲ, ಬ್ರಾಹ್ಮಣನಾಗಿಯೂ! ಶತಶತಮಾನಗಳಿಂದ ಬ್ರಾಹ್ಮಣ ಎಲ್ಲರನ್ನೂ ತುಳಿದ, ಪುರೋಹಿತಶಾಹಿ... ಇವೆಲ್ಲ ಉತ್ತರ ಬರುತ್ತದೆ, ಸರಿ (ಅದರ ಐತಿಹಾಸಿಕ, stitistical ಸತ್ಯಗಳ ಚರ್ಚೆ ಒತ್ತಟ್ಟಿಗಿರಲಿ!). ಸರಿ ಸ್ವಾಮಿ, ಬ್ರಾಹ್ಮಣ (ಬ್ರಾಹ್ಮಣಶಾಹಿ) ಶತಮಾನಗಳಿಂದ ಉಳಿದವರನ್ನೆಲ್ಲಾ ತುಳಿದುಬಿಟ್ಟಿತೆಂದೇ ಅಂದುಕೊಳ್ಳೋಣ. ಯಾರೋ ಎಲ್ಲೋ ಮಾಡಿದ್ದಕ್ಕೆ ಇವತ್ತು ಇಲ್ಲಿ ಮತ್ತಾರನ್ನೋ ದೂಷಿಸುವುದೇ? ಇರಲಿ, ಅದಕ್ಕಾಗಿ ಬ್ರಾಹ್ಮಣ (ಅಥವ ಬ್ರಾಹ್ಮಣ್ಯ) ಅಂದರೆ ವಿಷ ಸರ್ಪದಂತೆ ಕಾಣುವುದೂ ಸರಿ ಎಂದುಕೊಳ್ಳೋಣ. ಹಾಗಿದ್ದರೆ ನೂರಾರು ವರ್ಷಗಳ ಹಿಂದೆ ಮುಸ್ಲಿಂ ದಾಳಿಕೋರರು ನಮ್ಮ ಮೇಲೆ ನುಗ್ಗಿ ಬಂದು ಇಲ್ಲಿದ್ದುದನ್ನೆಲ್ಲ ಕೊಳ್ಳೆಹೊಡೆದರಲ್ಲ, ಇಲ್ಲಿನ ಅದೆಷ್ಟೋ ಜನ ಹೆಂಗಸರ ಮೇಲೆ ಅತ್ಯಾಚಾರ ನಡೆಸಿದರಲ್ಲ, ಇಲ್ಲಿದ್ದ ದೇವಾಲಯಗಳನ್ನೆಲ್ಲಾ ಒಡೆದು ದೋಚಿದರಲ್ಲ, ಇದನ್ನೂ ನೀವು ಬ್ರಾಹ್ಮಣ್ಯದ ಬುಟ್ಟಿಗೇ ಹಾಕುವಿರೇನು? ಅದು ಬೇಡ, ಇವತ್ತು ಇಡೀ ಜಗತ್ತನ್ನೇ ತಮ್ಮ ಗನ್ನು, ಬಾಂಬುಗಳಿಂದ ಮಿಡುಕುವಂತೆ ಮಾಡಿದ್ದಾರಲ್ಲ, ಇದನ್ನ "ಮುಸ್ಲಿಂ ಮನಸ್ಥಿತಿ" ಎನ್ನಬಹುದೇ? ಇದೇ ಒಕ್ಕೂಟದಲ್ಲೇ ಇದ್ದೂ ಒಳಗೊಳಗೇ ದೇಶ ಒಡೆಯುವ ಕೆಲಸ ಮಾಡುತ್ತಾ ಇದ್ದಾರಲ್ಲ ಕೆಲವು ದಗಾಕೋರರು, ಅವರನ್ನೆಲ್ಲಾ "ಇವನು ಧರ್ಮದಲ್ಲಿ ಮಾತ್ರ ಮುಸ್ಲಿಮನಲ್ಲ, ಮನಸ್ಸಿನಲ್ಲೂ ಮುಸ್ಲಿಂ" ಅನ್ನೋಣವೇ? "ಎಲ್ಲೆಲ್ಲಿ ಜನರ ಗುಂಪು ಸೇರುತ್ತದೆಯೋ ಅಲ್ಲೆಲ್ಲಾ ಒಬ್ಬ ಮುಸ್ಲಿಂ ಹೆಡೆಯಾಡುವುದನ್ನು ನೋಡುತ್ತಾ ಬಂದಿದ್ದೇವೆ" ಅನ್ನೋಣವೇ? ನನ್ನಿಂದಂತೂ ಅದು ಸಾಧ್ಯವಿಲ್ಲ. ನಾನು ಚಿಕ್ಕ ಹುಡುಗನಾಗಿದ್ದಾಗ ನನ್ನನ್ನು ಎತ್ತಿ ಆಡಿಸಿ, ಚಾಕಲೇಟು ಪೆಪ್ಪರಮಿಂಟು ಕೊಟ್ಟು ಲಲ್ಲೆಯಾಡುತ್ತಿದ್ದ ರಹೀಮಣ್ಣನನ್ನಾಗಲಿ, ನಮ್ಮ ನೆರೆಯಲ್ಲೇ ಇದ್ದು, ಹಬ್ಬ-ಹರಿದಿನಗಳಲ್ಲೆಲ್ಲಾ ಸಿಹಿ ಹಂಚಿಕೊಳ್ಳುವ ಪ್ರೀತಿ ತುಂಬಿದ ಮುಸ್ಲಿಂ ಕುಟುಂಬವನ್ನಾಗಲೀ ಅಥವ ಶತಮಾನದಾಚೆಯಿಂದ ಎದ್ದು ಬಂದು ನನ್ನ ಎದೆಯಲ್ಲಿ ಅನುಭಾವದ ಮಿಂಚು ಮೂಡಿಸಿದ ಶರೀಪಜ್ಜನನ್ನಾಗಲೀ ಈ "ಹೆಡೆಯಾಡುವ ಮುಸ್ಲಿಂತನ"ದಡಿಯಲ್ಲಿ ಸೇರಿಸಲು ಮನಸು ಬರದಲ್ಲ! ನನ್ನ ಮಾತು, ಕೋಪವೆಲ್ಲ ಮತ್ತೊಬ್ಬ "ಆರ್ ಎಸ್ ಎಸ್ ದೇಶಭಕ್ತನ" ಆಟೋಪವೆಂದು ನೀವು ತಳ್ಳಿಹಾಕಬಹುದು (ಮೊದಲೇ ಹೇಳಿದಂತೆ ಅದು ಬುದ್ಧಿಗೆ ಸುಲಭ), ಆದರೆ ಇದೇ ಜಾತಿ ವಿಂಗಡಣೆಯ ಬಗೆಗೇ ದಿನಬೆಳಗಾದರೆ ಇವೆಲ್ಲ ಗುಂಪುಗಳೊಂದಿಗೆ ಬಡಿದಾಡುತ್ತಲೇ ಇರುತ್ತೇನೆಂದು ನಿಮಗೆ ಅರ್ಥವಾಗುವುದಾದರೂ ಹೇಗೆ?

    ಸಿಂಪಲ್ಲಾಗಿ ಹೇಳಿ, ಕೆಟ್ಟದ್ದನ್ನೆಲ್ಲಾ "ಬ್ರಾಹ್ಮಣ್ಯ"ವೆಂಬ ಹಣೆಪಟ್ಟಿ ಕಟ್ಟುವ ನಿಮ್ಮ ಮನಸ್ಥಿತಿ ಕೆಟ್ಟದ್ದನ್ನೆಲ್ಲಾ "ಮುಸ್ಲಿಮ್" ಎಂದು ಹಣೆಪಟ್ಟಿಕಟ್ಟುವ ಇನ್ನೊಂದು ಗುಂಪಿನ ಮನಸ್ಥಿತಿಗಿಂತ ಹೇಗೆ ಬೇರೆ? ನಿಮಗಿಂತ ಅವರು ಎಷ್ಟೋ ವಾಸಿ ಎನಿಸಹತ್ತಿದೆ ನನಗೆ. ಅವರ ಇಸ್ಲಾಂ ದ್ವೇಷವನ್ನು ಅವರು ನೇರವಾಗಿ ಕಾರಿಕೊಳ್ಳುತ್ತಾರೆ, ನಿಮ್ಮಂತೆ "ಮಾನವೀಯತೆ, ಜಾತ್ಯತೀತತೆ, ಪ್ರಗತಿಪರತೆ"ಗಳ ಸಕ್ಕರೆ ಸವರುವುದಿಲ್ಲ. ಆದ್ದರಿಂದ ಅಮಾಯಕರಾದರೂ ಒಳ್ಳೆಯತನವಿರುವವರಿಗೆ ಅವರ ವಿಚಾರಧಾರೆಗಳಿಂದ ದೂರವಿರುವುದು ಸಾಧ್ಯವಾಗುತ್ತದೆ, ಆದರೆ ನಿಮ್ಮಿಂದ ದೂರವಿರುವುದು?

    ReplyDelete
    Replies
    1. Shree manjunatha avaru helirodu noorakke nooru satya . nimage nanna bembalavide , Namma deshadalli dharmika swantra ashte alla dharmika swechchara ide , ivattina galabhege ide karana

      Delete
    2. Dear Manjunatha,

      Hats off to you Sir for having the patience to express Truth in a way that only you can. Your response to undeserving and useless writers like the owner of this blog is highly commendable.

      Regards,
      Srikanth V

      Delete
  2. ಬೇಡ ಸ್ವಾಮಿ, ಇದನ್ನ ಇನ್ನೊಂದು ರೀತಿ ನೋಡೋಣ. ನೀವು ದೊಡ್ಡ ಭೂತದಂತೆ ತೋರುತ್ತಿರುವ ಬ್ರಾಹ್ಮಣ್ಯದ ಮೂಲವಾದ ಬ್ರಾಹ್ಮಣರು ಎಷ್ಟು ಜನ ಸ್ವಾಮಿ? ಇಡೀ ಪ್ರಪಂಚದಲ್ಲಿ ಬೇಡ, ಬರೀ ದೇಶದ ಲೆಕ್ಕವನ್ನೇ ನೋಡೋಣ. ಶೇಕಡಾ ಎಷ್ಟು? ೩? ೫? ೮? ಖಂಡಿತಾ ಅದಕ್ಕಿಂತ ಹೆಚ್ಚಿಲ್ಲ. ಈಗ ನೀವು ಅಲ್ಪಸಂಖ್ಯಾತರು ಎನ್ನುವ ಎಲ್ಲ ಜನಾಂಗಗಳ ಒಟ್ಟು ಶೇಕಡಾ ಹೇಳಿ? ಬೇಡ, ಕೊನೆಯ ಪಕ್ಷ, "ಬಹುಸಂಖ್ಯಾತರ ಕೆಂಗಣ್ಣಿಗೆ ಗುರಿಯಾಗಿರುವ" ಮುಸ್ಲಿಮರ ಸಂಖ್ಯೆ ಎಷ್ಟು ಹೇಳಿ? ೨೦? ೧೬? ೧೩? ಖಂಡಿತಾ ಅದಕ್ಕಿಂತ ಕಡಿಮೆಯಿಲ್ಲ. "ಭಾರತದ ಅಲ್ಪಸಂಖ್ಯಾತರನ್ನು ಕೆಂಗಣ್ಣಿನಿಂದ ನೋಡುವವರಿಗೆ, ಪಾಕಿಸ್ತಾನದ ಅಲ್ಪಸಂಖ್ಯಾತರ ಕುರಿತಂತೆ ಮಾತನಾಡುವ ನೈತಿಕತೆಯಿರುವುದಿಲ್ಲ" ಎಂದೆಲ್ಲಾ ಢೋಂಗಿ ಬಿಡುವ ನೀವು, ನೀವು ಹೇಳುತ್ತಿರುವ ಅಲ್ಪಸಂಖ್ಯಾತರಿಗಿಂತಾ ಅಲ್ಪಸಂಖ್ಯೆಲ್ಲಿರುವ ಬಡಪಾಯಿಗಳ ಮೇಲೆ ಇಷ್ಟು ಭಯಂಕರವಾಗಿ ಕೆಂಗಣ್ಣು ಬಿಡುತ್ತಿದ್ದೀರಲ್ಲ, ಅಲ್ಪಸಂಖ್ಯಾತ, ಜಾತ್ಯತೀತ, ಪ್ರಗತಿಪರ ಇತ್ಯಾದಿ ಮುಸುಕಿನಡಿಯಲ್ಲಿ ಏನು ಮಾಡಿದರೂ ನಡೆಯುತ್ತದೆಯೋ?!

    ನಿಮ್ಮ ಅತೀವ ಕಳಕಳಿಯ ಬರಹದಲ್ಲಿ ಮತ್ತೊಂದು out of place ಅನ್ನಿಸಿದ್ದು. "ಶಂಕರಾಚಾರ್ಯ ನೇತೃತ್ವದಲ್ಲಿ ಭಾರೀ ನರಮೇಧ ನಡೆಯಿತು. ಬೌದ್ಧರನ್ನು ಕಂಡ ಕಂಡಲ್ಲಿ ಅಟ್ಟಾಡಿಸಿ ಅವರನ್ನು ಕೊಂದು ಹಾಕಲಾಯಿತು" ಹೌದೇ? ಅದೇನೋ ನನಗೆ ಗೊತ್ತಿಲ್ಲ, ಏಕೆಂದರೆ ಸಾವಿರ ವರ್ಷಕ್ಕೂ ಹಿಂದೆ ನಾನಂತು ಹುಟ್ಟಿರಲಿಲ್ಲ. ತಾವು ಇದನ್ನೆಲ್ಲ ಪೂರ್ವಜನ್ಮದಲ್ಲಿ ಕಂಡು ಹೇಳುತ್ತಿರಬಹುದೇನೋ, ಆದರೆ ನನಗೆ ಪೂರ್ವಜನ್ಮದಲ್ಲಿ ನಂಬಿಕೆಯೂ ಇಲ್ಲ, ಅದಿದ್ದ ನೆನಪೂ ಇಲ್ಲ. ಆದ್ದರಿಂದ ಐತಿಹಾಸಿಕ ವಿಷಯಗಳನ್ನು ಮಾತಾಡುವಾಗ ನಾನು ತುಸು ಅಳುಕುತ್ತೇನೆ, ಜೊತೆಗೆ ಅದರ "ನಿಜವಲ್ಲದಿರಬಹುದಾದ" ಅಂಶಗಳಿಗೆ ಸ್ವಲ್ಪ ಪ್ರಾವಿಶನ್ ಮಾಡುತ್ತೇನೆ. Let me clarify, ನನಗೆ ಶಂಕರರ ಬಗೆಗೆ ಅಪಾರ ಅಭಿಮಾನವಿದೆ, ಹಾಗೆಯೇ ಭಿನ್ನಾಭಿಪ್ರಾಯವೂ ಕೂಡ, ಆದರೆ ಈ ಮಾತನ್ನು ಅವರ ಮೇಲಿನ ಅಭಿಮಾನದಿಂದ ಹೇಳುತ್ತಿಲ್ಲ. ಸಾಮಾನ್ಯವಾಗಿ, ಶಂಕರರಾಗಲಿ, ಬುದ್ಧನಾಗಲಿ, ಯೇಸುವಾಗಲಿ ಲೋಕಕ್ಕೆ ಮಾದರಿಯಾಗಲು ಒಂದು ಮುಖ್ಯ ಕಾರಣ ಗೊತ್ತಾ? ನುಡಿದಂತೆ ನಡೆಯುವ, ಯಾವುದೇ ಕಾರಣಕ್ಕೂ ಆತ್ಮಕ್ಕೆ ವಿರುದ್ಧವಾಗಿ ನಡೆಯದ ಅವರ ಸ್ಥೈರ್ಯ. ಇವರು ಒಂದು ಬಲವಾದ ಪರಂಪರೆಯಾಗಿ ಬೆಳೆಯಲು ಇದು ಕಾರಣ. ಆಗದವರನ್ನು ಕೊಂದುಹಾಕುವ ಯಾರೂ ಜನಮಾನಸದಲ್ಲಿ ಉಳಿಯುವುದಿಲ್ಲ. ಆದ್ದರಿಂದ ಎಲ್ಲವನ್ನೂ ಬ್ರಹ್ಮನೆಂಬ ದೃಷ್ಟಿಯಿಂದ ನೋಡಿದ ಶಂಕರರು ತಮ್ಮ ವಿರೋಧಿಗಳನ್ನು ಕೊಲ್ಲಿಸಲು ನೇತೃತ್ವ ವಹಿಸಿದರೆಂದರೆ ಜೀರ್ಣಿಸಲು ಕಷ್ಟ, ಯೇಸುವು ತನ್ನ ವಿರೋಧಿಗಳನ್ನು ಶಿಲುಬೆಗೇರಿಸಿದನೆಂದೋ, ಬುದ್ಧನು ತನ್ನ ಕಾಲದ ಕರ್ಮಠ ಬ್ರಾಹ್ಮಣರನ್ನು ಕೊಲ್ಲಿಸಿ ತನ್ನ ಮತಪ್ರಚಾರ ಮಾಡಿದನೆಂದೋ ತಿಳಿಯುವಂತೆಯೇ! ಏಕೆಂದರೆ, ನಾನು ಮೊದಲೇ ಹೇಳಿದಂತೆ, ಈ ಮಹಾತ್ಮರನ್ನೆಲ್ಲ ನಾವು ಅವರ ಉಪದೇಶಗಳ ಮೂಲಕ ನೋಡಿದವರೇ ಹೊರತು ವ್ಯಕ್ತಿತಃ ಅಲ್ಲ. ಅವರ ಉಪದೇಶಗಳು, ಅವರು ಕಟ್ಟಿ ಬೆಳೆಸಿದ ಪರಂಪರೆ, ನೀವು ಹೇಳುವುದಕ್ಕಿಂತ ಬೇರೆಯೇ ಕತೆ ಹೇಳುತ್ತದೆ. ಇರಲಿ, ಇದು ಕತೆಯೇ ಇರಬಹುದು, ಆದರೆ ಒಳ್ಳೆಯ ಕತೆ. ನೀವು ತೋರಿಸುವ "ವಾಸ್ತವ"ವನ್ನು ನಂಬಲು ಬಲವಾದ, ತೀರ ಬಲವಾದ ಸಾಕ್ಷ್ಯಾಧಾರಗಳು ಬೇಕಾಗುತ್ತವೆ. ತಮ್ಮ ಬಳಿ ಇದೆಯೇ? ಅವು ಸಿಕ್ಕರೆ, ನಾನೇನೋ ನನ್ನ ನಂಬಿಕೆಗೇ ಜೋತುಬೀಳುವವನಲ್ಲ. ದಯೆಯೇ ಧರ್ಮದ ಮೂಲವಯ್ಯಾ ಎಂದು ಉಪದೇಶಿಸಿದ ಬಸವಣ್ಣನ ಅನುಯಾಯಿಗಳು ಬಿಜ್ಜಳನ ದುರಾಡಳಿತಕ್ಕೆ ಬೇಸತ್ತು ಕೊನೆಕೊನೆಗೆ ಹಿಂಸಾಚಾರದಲ್ಲಿ ತೊಡಗಿದ್ದು ಚರಿತ್ರೆಯ ಪುಟಗಳಿಂದ ತಿಳಿದುಬರುತ್ತದೆ. ಅವರ ಸಂದರ್ಭ ಹಾಗಿರಬಹುದು, ಆದರೆ ಅದು ಬಸವಣ್ಣನ ನೇತೃತ್ವದಲ್ಲೇ ನಡೆಯಿತು ಎಂದರೆ ಹೇಗೆ? ಆದರೆ, ತಾನು ನಂಬಿದ ತತ್ವಗಳಿಂದ ಎಂದೂ ವಿಚಲಿತನಾಗದ ಬಸವಣ್ಣ ಬಿಜ್ಜಳನನ್ನು ಕೊಲ್ಲಿಸಿದ ಎಂದು ಪ್ರಚಾರ ಮಾಡಿಬಿಟ್ಟರೆ ಅದನ್ನು ನಂಬುವುದು ಸುಲಭವೇ? ನೀವು ಹೇಳಿದ ವಿಷಯ ಹೀಗಾಯಿತು.

    ಪತ್ರ ಸಾಕಷ್ಟು ಉದ್ದವಾಯಿತು. ಕೊನೆಯದಾಗಿ ಒಂದು ಮಾತು. ಹೀಗೆ ಇನ್ನೊಂದು ಧಾರ್ಮಿಕ ನೆಲೆಯನ್ನು ನಂಬಿಕೆಗಳನ್ನು ಯಾವುದೋ ಒಂದು ಕೆಟ್ಟ ಅಂಶವನ್ನೇ ಎತ್ತಿ ಹೀಗಳೆಯುವುದರ ಬದಲು, ಇದೇ ಉಪದೇಶವನ್ನು ನಿಮ್ಮ ಮದ್ರಸಾಗಳಲ್ಲಿ ಒಮ್ಮೆ ಮಾಡಿ ನೋಡಿ? ನಿಮ್ಮದೇ ಸಮುದಾಯದ ಅಂತಸ್ಸಾಕ್ಷಿಯಂತೆ ಕೆಲಸ ಮಾಡುವುದು ನಿಮ್ಮ ಮೊದಲ ಕರ್ತವ್ಯ ಎಂದು ನಿಮಗನಿಸುವುದಿಲ್ಲವೇ? ನಾನಂತೂ ಈ ಕೆಲಸ ಮಾಡುತ್ತಾ, ದಿನಬೆಳಗಾದರೆ ಮೂಲಭೂತವಾದಿಗಳೊಡನೆ ತಿಕ್ಕಾಟದಲ್ಲೇ ಇದ್ದೇನೆ. ನೀವೂ ಒಮ್ಮೆ ಇದನ್ನು ಪ್ರಯತ್ನಿಸಿ ನೋಡಿ.

    ಅದೇನೇ ಇರಲಿ, ಮೊದಲೇ ಹೇಳಿದಂತೆ ಅಲ್ಪಸಂಖ್ಯಾತರನ್ನು, ದುರ್ಬಲರನ್ನು ರಕ್ಷಿಸಿಕೊಳ್ಳುವುದು ಬಹುಸಂಖ್ಯಾತರ, ಶಕ್ತಿಯುಳ್ಳವರ ಕರ್ತವ್ಯ ಎಂಬ ನಿಮ್ಮ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ, ಅದು ಗಾಂಧೀಜಿಯವರ ಮಾತಿರಲಿ, ಇಲ್ಲದಿರಲಿ!

    ನಮಸ್ಕಾರ
    ಕೊಳ್ಳೇಗಾಲ ಮಂಜುನಾಥ

    ReplyDelete
  3. ಬ್ರಾಹ್ಮಣ (ಅಥವ ಬ್ರಾಹ್ಮಣ್ಯ)

    ------ಇವುಗಳು ಬೇರೆ, ಬ್ರಾಹ್ಮಣ್ಯ ವೈಚಾರಿಕ ಮನೋಭಾವವಿರುವವರಿಗೆ ಸದಾ ಖಂಡನೀಯ.

    ReplyDelete
    Replies
    1. ಶ್ರೀಕಾಂತರೇ, ವ್ಯಾಸರ ಬ್ರಹ್ಮಸೂತ್ರದಂತಿರುವ ತಮ್ಮ one liner, ಏನೂ ತಿಳಿಯಲಿಲ್ಲ. ವೈಚಾರಿಕತೆಯುಳ್ಳವನು ತನ್ನ ವಿಚಾರವನ್ನು ತಿಳಿಯಾಗುವಂತೆ ಮಂಡಿಸುತ್ತಾನೆ, ಧರ್ಮಗುರುಗಳಂತೆ ಹುಕುಂ ಹೊರಡಿಸುವುದಿಲ್ಲ. "ಬ್ರಾಹ್ಮಣ (ಅಥವ ಬ್ರಾಹ್ಮಣ್ಯ). ಇವುಗಳು ಬೇರೆ, ಬ್ರಾಹ್ಮಣ್ಯ ವೈಚಾರಿಕ ಮನೋಭಾವವಿರುವವರಿಗೆ ಸದಾ ಖಂಡನೀಯ" ಈ ಒಂದು ಸಾಲಿನ ಮಾತು ಒಂದೋ ಹುಕುಮಿನಂತೆ, ಇಲ್ಲ ಗಿಣಿಪಾಠದಂತೆ ಕಾಣುತ್ತಿದೆ.

      ನಾನು ಮೇಲೆ ಎಳೆಯೆಳೆಯಾಗಿ ವಿವರಿಸಿ ಬರೆದೆನಲ್ಲ, ಅದರಲ್ಲಿ ವೈಚಾರಿಕತೆ (ವಿಚಾರ ಮಾಡುವ ಗುಣ) ಇಲ್ಲವೇ? ಮತ್ತೂ ಬ್ರಾಹ್ಮಣ್ಯಕ್ಕೂ ವೈಚಾರಿಕತೆಗೂ ವಿರೋಧ ಎನ್ನುತ್ತೀರಲ್ಲ. ನಿಮ್ಮ one liner ನಾನು ಎತ್ತಿರುವ ಸಮಸ್ಯೆಗಳನ್ನು ಮುಟ್ಟಿಯೂ ನೋಡಲಿಲ್ಲವಲ್ಲ ಸ್ವಾಮಿ! ಪ್ರಗತಿಪರ/ಬುದ್ಧಿಜೀವಿ ಅನ್ನಿಸಿಕೊಳ್ಳಬೇಕಾದರೆ ಬ್ರಾಹ್ಮಣನನ್ನು ಛೀಕರಿಸಬೇಕು ಅನ್ನೋದು ಇವತ್ತಿನ fasion ಆಗಿಬಿಟ್ಟಿದೆ. ಯಾಕೆ ಅಂದ್ರೆ ನಿಜಕ್ಕೂ ವಿಚಾರಪರತೆಯನ್ನು ಬೆಳೆಸಿಕೊಳ್ಳುವುದು ತುಂಬ ಕಷ್ಟದ ದಾರಿಯಾಯಿತಲ್ಲ. ಆದ್ದರಿಂದ ಹೆಸರಿಗಾದರೂ ಪ್ರಗತಿಪರ ಅನ್ನಿಸಿಕೊಳ್ಳಬೇಕು ಎನ್ನುವವನ ವಿಚಾರಧಾರೆ ಹೀಗೆ: ವೈಚಾರಿಕ ಮನೋಭಾವ ಅತ್ಯುನ್ನತವಾದದ್ದು (ಸರಿ), ಆದರೆ ಬ್ರಾಹ್ಮಣ್ಯ (ಮತ್ತು ಬ್ರಾಹ್ಮಣ) ಅತಿ ಕೀಳಾದದ್ದು (???), ಮತ್ತು ಎರಡೂ ಒಂದಾಗಿ ಇರಲು ಸಾಧ್ಯವಿಲ್ಲ. ವೈಚಾರಿಕತೆ ತಲೆಗೆ ಕಸರತ್ತು ಕೊಡುವ ವಿಷಯ, ಕಷ್ಟ, ನನ್ನಿಂದಂತೂ ಆಗದು. ಆದರೆ ಸುಲಭವಾಗಿ ನಾನು ವಿಚಾರಪರ, ಪ್ರಗತಿಪರ ಆಗುವ ಬಗೆ ಹೇಗೆ? ಈಗಾಗಲೇ ವೈಚಾರಿಕತೆ vs ಬ್ರಾಹ್ಮಣ ಅನ್ನೋ ಸೂತ್ರ ರೂಪಿಸಿ ಆಯಿತಲ್ಲ. ತಗೋ, ಬ್ರಾಹ್ಮಣನಿಗೆ ಕಲ್ಲು ಹೊಡಿ, ಬ್ರಾಹ್ಮಣತ್ವಕ್ಕೆ ದಿಕ್ಕಾರ ಕೂಗು. ನಾನು ಈಗ ವಿಚಾರಪರ, ಪ್ರಗತಿಪರ. ವೈಚಾರಿಕತೆ ಎಷ್ಟು ಸುಲಭ!!

      ಕಟಕಿ ಅತ್ತ ಇರಲಿ. ನಿಮ್ಮ ಮಾತಿನಲ್ಲೂ ಹುರುಳಿರಬಹುದು, ತಿಳಿದುಕೊಳ್ಳುವ ಆಸೆ ನನಗೆ. ನೀವು ಹೇಳುವ "ಬ್ರಾಹ್ಮಣ್ಯ/ಬ್ರಾಹ್ಮಣ" ಅಂದರೆ ಏನು ಸ್ವಾಮಿ? ದಯವಿಟ್ಟು ತಿಳಿಸಿ.

      Delete
    2. ಬೌದ ಧರ್ಮದ ಒಂದು ಗಟ್ಟಿ ನೆಲೆಯಾಗಿದ್ದ ನಾಗಾರ್ಜುನಕೊಂಡವನ್ನು ತನ್ನ ಅಸಂಖ್ಯಾತ ಅನುಯಾಯಿಗಳ ಜೊತೆಯಾಗಿ ಸ್ವಂತ ಮೇಲ್ವಿಚಾರಣೆಯಲ್ಲಿ ಶಂಕರಾಚರ್ಯನು ದ್ವಂಸಪಡಿಸಿದನು ಎಂಬುದಾಗಿ ಭೂ ಶೋಧನೆ ನಡೆಸಿದ ಭಾರತ ಮತ್ತು ಸಿಲೋನಿನ ಪ್ರಾಚ್ಯ ಶಾಸ್ತ್ರ ಇಲಾಖೆಯ ಮಹಾನಿರ್ದೇಶಕ ಎ ಹೆಚ್ ಲಾಂಗ್‘ಹಸ್ಟ್ ದಾಖಲಿಸಿದ್ದಾರೆ. ಅಂತೆಯೇ ಶಂಕರಾಚರ್ಯನು ತನ್ನ ಹಿಂಬಾಲಕರ ಹಿಂಡಿನೊಡನೆ ಬಂದು ಬೌದ ಸ್ಮಾರಕಗಳನ್ನು ನಾಶಪಡಿಸಿದನೆಂದು ಸ್ಥಳೀಯ ಸಾಹಿತ್ಯ ಹೇಳುತ್ತದೆ.
      ಬ್ರಾಹ್ಮಣತ್ವ ಎಂದರೆ ಚಾತುರ್ವಣೀಯತೆಯನ್ನು ಪುರಸ್ಕರಿಸುವುದು ಅಂತಲೇ ಅದು ಜನವಿರೋಧಿ. ಬ್ರಾಹ್ಮಣರೆಲ್ಲರೂ ಬ್ರಾಹ್ಮಣತ್ವವನ್ನು ಪಾಲಿಸುತ್ತಾರೆ ಎಂದು ತಿಳಿಯಬೇಕಿಲ್ಲ. ಕರ್ನಾಡು ಸದಾಶಿವರಾಯರ ಬಾಳ್ವೆ ಯಾವ ಮಹಾ ಪುರುಷನಿಂತಲೂ ಕಡಿಮೆಯಿಲ್ಲ.

      Delete
    3. ಮಿಖಾಯೆಲ್ ಅವರೇ, ಇರಬಹುದೇನೋ. ಆ ಕಾಲಕ್ಕೆ ನಾನಂತೂ ಹುಟ್ಟಿರಲಿಲ್ಲ. ಮೊದಲೇ ಹೇಳಿದಂತೆ ಚಾರಿತ್ರಿಕ ಸಂಗತಿಗಳಬಗ್ಗೆ ನಿಮ್ಮಷ್ಟು ಕರಾರುವಾಕ್ಕಾಗಿ ಹೇಳುವುದಕ್ಕೆ ಅಳುಕುತ್ತೇನೆ. ಅದರಲ್ಲೂ ಯಾವುದಾದರು ದುರಭಿಪ್ರಾಯಗಳನ್ನು ಹೇಳುವಾಗ ಎಷ್ಟು ಪರಿಶೀಲಿಸಿದರೂ ಸಾಲದು:

      "ಬೌದ ಧರ್ಮದ ಒಂದು ಗಟ್ಟಿ ನೆಲೆಯಾಗಿದ್ದ ನಾಗಾರ್ಜುನಕೊಂಡವನ್ನು ತನ್ನ ಅಸಂಖ್ಯಾತ ಅನುಯಾಯಿಗಳ ಜೊತೆಯಾಗಿ ಸ್ವಂತ ಮೇಲ್ವಿಚಾರಣೆಯಲ್ಲಿ ಶಂಕರಾಚರ್ಯನು ದ್ವಂಸಪಡಿಸಿದನು ಎಂಬುದಾಗಿ ಭೂ ಶೋಧನೆ ನಡೆಸಿದ ಭಾರತ ಮತ್ತು ಸಿಲೋನಿನ ಪ್ರಾಚ್ಯ ಶಾಸ್ತ್ರ ಇಲಾಖೆಯ ಮಹಾನಿರ್ದೇಶಕ ಎ ಹೆಚ್ ಲಾಂಗ್‘ಹಸ್ಟ್ ದಾಖಲಿಸಿದ್ದಾರೆ" - ಭೂಶೋಧನೆಯಲ್ಲಿ ಶಂಕರಾಚಾರ್ಯರು ಬಂದು ದ್ವಂಸಗೊಳಿಸಿದ್ದಕ್ಕೆ ಸಾಕ್ಷ್ಯ ದೊರೆತಿದೆ ಎಂದರೆ ಇದು ನಿಜಕ್ಕೂ interesting. ಬಹುಶಃ ಅಲ್ಲಿ ಶಂಕರಾಚಾರ್ಯರ ಹೆಜ್ಜೆ ಗುರುತೋ, ಬೆರಳು ಗುರುತೋ ಸಿಕ್ಕಿರಬೇಕು ಎಂದುಕೊಳ್ಳುತ್ತೇನೆ. ಶಂಕರಾಚಾರ್ಯರ ಮಾತಂತು ರೆಕಾರ್ಡ್ ಆಗಿರುವ ಸಾಧ್ಯತೆಯಿಲ್ಲ :) ಎ ಹೆಚ್ ಲಾಂಗ್ ಹಸ್ಟರು ಯಾವ ಸಾಕ್ಷಿಯ ಆಧಾರದಮೇಲೆ ಈ ನಿರ್ಧಾರಕ್ಕೆ ಬಂದರೆಂಬುದು ನಿಮಗೆ ಖಂಡಿತಾ ಅರ್ಥವಾಗಿರಲೇ ಬೇಕು. ದಯವಿಟ್ಟು ಅದನ್ನು ನನ್ನೊಡನೆ ಹಂಚಿಕೊಳ್ಳುತ್ತೀರಾ? ಕುತೂಹಲಕ್ಕಾಗಿ.

      ಮತ್ತೆ "ಶಂಕರಾಚರ್ಯನು ತನ್ನ ಹಿಂಬಾಲಕರ ಹಿಂಡಿನೊಡನೆ ಬಂದು ಬೌದ ಸ್ಮಾರಕಗಳನ್ನು ನಾಶಪಡಿಸಿದನೆಂದು ಸ್ಥಳೀಯ ಸಾಹಿತ್ಯ ಹೇಳುತ್ತದೆ" ಎಂದು ಹೇಳಿದಿರಿ. ನೀವು ಹೇಳುವ ಧೃಢತೆ ನೋಡಿದರೆ ನಿಮಗೆ ಅದರ ಬಗೆಗೆ ಅನುಮಾನವೇ ಇಲ್ಲವೆಂದು ತಿಳಿಯುತ್ತದೆ. ಅದು ಯಾವ ಸಾಹಿತ್ಯ, ಯಾವಾಗ ಸೃಷ್ಟಿಯಾಯಿತು, ನೀವದನ್ನು ಇಷ್ಟು ಧೃಢವಾಗಿ ನಂಬಿರಬೇಕಾದರೆ ಅದಕ್ಕೆ ಆಧಾರವಾದ ಬೇರೆ ಯಾವುದಾದರೂ ಸ್ವತಂತ್ರ ಉಲ್ಲೇಖ ಎಲ್ಲಾದರು ದೊರೆತಿದೆಯೇ ದಯವಿಟ್ಟು ಈ ವಿವರಗಳನ್ನೂ ಹಂಚಿಕೊಳ್ಳಿ.

      ಇವೆಲ್ಲಾ ವಿವರಗಳೊಡನೆ ಶಂಕರಾಚಾರ್ಯರ ಬಗೆಗಿನ ಗೌರವ ನನಗೆ ಕಡಿಮೆಯಾಗುವುದಾಗಲೀ ನಿಮಗೆ ಹೆಚ್ಚಾಗುವುದಾಗಲೀ ಇಲ್ಲ, ಆದರೂ ನಮ್ಮಂಥಾ ಐತಿಹಾಸಿಕ ಪ್ರಜ್ಞೆಯಿಲ್ಲದ ಜನ ಒಬ್ಬ ಧರ್ಮಾಂಧ ಗುರುವನ್ನು ನಂಬುವುದನ್ನು ತಪ್ಪಿಸಿದ ಯಶಸ್ಸಾದರೂ ನಿಮಗೆ ದಕ್ಕುತ್ತದಲ್ಲ, ಈ ಅವಕಾಶ ಕಳೆದುಕೊಳ್ಳಬೇಡಿ :)

      "ಬ್ರಾಹ್ಮಣತ್ವ ಎಂದರೆ ಚಾತುರ್ವಣೀಯತೆಯನ್ನು ಪುರಸ್ಕರಿಸುವುದು ಅಂತಲೇ ಅದು ಜನವಿರೋಧಿ" - ಭಪ್ಪರೇ, ಚಾತುರ್ವರ್ಣೀಯತೆಯನ್ನು ಪುರಸ್ಕರಿಸುವ ಈ ಪದ್ಧತಿಯನ್ನು ಬ್ರಾಹ್ಮಣತ್ವ ಎಂದೇ ಏಕೆ ಕರೆಯುವಿರಿ, ಕ್ಷತ್ರಿಯತ್ವ, ವೈಶ್ಯತ್ವ ಅಥವ ಶೂದ್ರತ್ವ ಎಂದು ಕರೆಯಲು ಹಿಂಜರಿಕೆಯೇ? ಅಥವ ಚಾತುರ್ವರ್ಣ ಎಂದರೆ ಬ್ರಾಹ್ಮಣವರ್ಣವೊಂದೇಯೋ?!

      Delete
    4. @Michael, stop your missionary tactics...we have been seeing these tricks...cant fool us any more

      Delete
    5. ಹೆಚ್ಹಿನ ವಿವರಗಳಿಗೆ ಮತ್ತು ಅಧ್ಯಯನಕ್ಕೆ ಎ ಹೆಚ್ ಲಾಂಗ್‘ಹಸ್ಟ್ ರವರು ಬರೆದ "Memories of the Archaelogical Suryvey of India,The Buddihist Antiquities of Nagaarjunakond” ಎಂಬ ಗ್ರಂಥವನ್ನು ಪರೀಶಿಲಿಸಬಹುದು. ನಾನಂತೂ ಅಧ್ಯಯನಕಾರನಲ್ಲ. ಓದಿದ್ದನ್ನು ತಿಳಿಸಿದ್ದೇನೆ ಅಷ್ಟೇ. ಅಲ್ಲದೆ
      ನಾನೊಬ್ಬ ಸಮಾಜವಾದಿ, ಸಕ್ರೀಯ ವಿಚಾರವಾದಿ ಸಂಘಟನೆಯ ಸ್ಥಾಪಕ ಸದಸ್ಯ. ಮತೀಯ ಚಟುವಟಿಕೆಗಳಿಂದ ದೂರ ಇರುವವ. ಯಾವುದೇ ಮತ ಪ್ರಚಾರಕನಲ್ಲ.

      Delete
    6. ಗುರುಗಳೇ, ನೀವು ಎ ಹೆಚ್ ಲಾಂಗ್ ಹಸ್ಟ್ ಅಂತ ಬರೆದಾಕ್ಷಣವೇ ನೀವು ಹೇಳಿದ ಆಕರವನ್ನು ಗೂಗಲಿಸಿ ಓದುವಷ್ಟು ಸೌಲಭ್ಯ ಇವತ್ತಿದೆ, ಆದ್ದರಿಂದ ನೀವು ಆಕರಗಳನ್ನು ಸೂಚಿಸುವ ಉಪಕಾರ ಮಾಡಬೇಕಿಲ್ಲ. ನೀವು ಹೇಳಿದ್ದೆಲ್ಲಾ ಲಾಂಗ್ ಹಸ್ಟ್ ಹೇಳಿದ್ದಾನೆ ಎಂದು ಹೇಳಿ ಸುಮ್ಮನಾಗಿದ್ದರೆ ಅದು ಬೇರೆ ಮಾತು, ಆದರೆ ಅದರಲ್ಲಿ ನಿಮ್ಮ ಅನುಮೋದನೆಯಿತ್ತು ಅಲ್ಲವೇ? ಆದ್ದರಿಂದ ಲಾಂಗ್ ಹಸ್ಟ್ *ನಿಮ್ಮ ವಿಚಾರವನ್ನು* ಹೇಗೆ ರೂಪಿಸಿದ್ದಾನೆ ಅನ್ೋದು ಇಲ್ಲಿ ಮುಖ್ಯ. ಲಾಂಗ್ ಹಸ್ಟನ ಆಕರವನ್ನು ನೀವಿಲ್ಲಿ ತೆಗೆದುಕೊಂಡರೂ ಶಂಕರಾಚಾರ್ಯರು ಅಷ್ಟೆಲ್ಲಾ ದುರಾಚಾರಗಳನ್ನು ಮಾಡಿದರು ಎಂದು ಹೇಳಿದವರು *ನೀವು*. ಆದ್ದರಿಂದ ನಿಮ್ಮ ಮಾತನ್ನು *ನೀವು* ಸಮರ್ಥಿಸಿಕೊಳ್ಳಿ, ಸುಮ್ಮನೇ ಲಾಂಗ್ ಹಸ್ಟನ ಪುಸ್ತಕದ ಹೆಸರು ಹಾಕಿ ನುಣುಚಿಕೊಳ್ಳಬೇಡಿ. ಸುಮ್ಮನೇ ಎಲ್ಲೋ ಓದಿದ್ದನ್ನು ನನ್ನದೇ ಅಭಿಪ್ರಾಯವೆಂದು ಹೇಳಿ, ಚರ್ಚೆಗೆ ಬಂದಾಗ ಮೂಲ ಲೇಖಕನ ಮೇಲೆ ಗೂಬೆ ಕೂಡಿಸುವುದು; ಪ್ರಿಂಟಿನಲ್ಲಿ ಬಂದದ್ದನ್ನೆಲ್ಲಾ ಕಣ್ಣು ಮುಚ್ಚಿಕೊಂಡು ವಿಚಾರವಾದಿಯ ಲಕ್ಷಣವಲ್ಲ (ವಿಚಾರವಾದಿ ಸಂಘಟನೆಯ ಸ್ಥಾಪಕ ಸದಸ್ಯನ ಲಕ್ಷಣವಂತೂ ಮೊದಲೇ ಅಲ್ಲ). ಮತ್ತೊಮ್ಮೆ ನನ್ನ ಮೂಲ ಪ್ರಶ್ನೆಗಳನ್ನು ಚೆನ್ನಾಗಿ ಓದಿ, *ನಿಮ್ಮದೇ* ಉತ್ತರ ಕೊಡಿ. ಅದು ಲಾಂಗ್ ಹಸ್ಟನ ಅಭಿಪ್ರಾಯವೇ ಇರಬಹುದು, ಆದರೆ ಅದನ್ನು ನಂಬಲು, ನಿಮ್ಮದೇ ಅಭಿಪ್ರಾಯವೆಂಬಂತೆ ಸಾರಲು ನೀವು ಅದರ ಬಗ್ಗೆ ನಡೆಸಿರುವ ಚಿಂತನೆಯೇನು, critical analysis ಏನು ಇವನ್ನೆಲ್ಲಾ ಹಂಚಿಕೊಳ್ಳಿ - ಉತ್ತರಿಸುತ್ತೀರಲ್ಲ? :)

      Delete
    7. ಮಿಖಾಯಿಲ್ ಅವರೆ ಅಂಬೇಡ್ಕರ್ ಅವರ ಬದುಕು ಬರಹ ಲೇಖನವನ್ನು ಓದಿ ಬೌದ್ಧರನ್ನು ಭಾರತದಿಂದ ಓಡಿಸಿದ್ದು ಯಾರು ಎಂದು ಗೊತ್ತಾಗುತ್ತದೆ. ಬಶಿರ್ ಅವರೆ ನಿಮ್ಮ ವಿರುದ್ಧದ ಕಮೆಂಟುಗಳನ್ನು ಪ್ರಕಟಿಸುತ್ತಿರುವ ನಿಮಗೆ ಧನ್ಯವಾದಗಳು ನಿಜವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ಕೊಡುವವರು ನೀವು. ಲಡಾಯಿಯಂತಲ್ಲ. ನಿಜವಾಗಿ ನೀವು ಗ್ರೇಟ್.

      Delete
  4. "ನಾನು ಆಗಾಗ ಮುಸ್ಲಿಮ್ ಗೆಳೆಯರ ಜೊತೆಗೆ ಕೇಳುತ್ತಿದ್ದ ಪ್ರಶ್ನೆ ಇದು. ‘‘ಈ ದೇಶದಲ್ಲಿ ಮುಸ್ಲಿಮರು ಶೇ. 80ರಷ್ಟಿದ್ದು, ಹಿಂದೂಗಳು ಶೇ. 20 ರಷ್ಟಿದ್ದರೆ ಅವರ ಸ್ಥಿತಿ ಏನಾಗುತ್ತಿತ್ತು?" ಅವರೇ ಹೇಳುವಂತೆ "ಪಾಕಿಸ್ಥಾನದಲ್ಲಿನ ಹಿಂದುಗಳು, ಬಾಂಗ್ಲಾದ ಹಿಂದೂಗಳು ಭಾರತದಲ್ಲಿನ ಮುಸ್ಲಿಮರು ಅನುಭವಿಸಿದಂತೆ ದೌರ್ಜನ್ಯವನ್ನು ಅನುಭವಿಸಿದ್ದಾರೆ ಭಾರತದ ಅಲ್ಪಸಂಖ್ಯಾತರ ಬಗ್ಗೆ ಕರುಣೆ ತೋರದವರಿಗೆ ಪಾಕಿಸ್ಥಾನದ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ..?" ಎಲ್ಲವೂ ಒಪ್ಪಿಕೊಳ್ಳುವ ಮಾತು ಅಂತ ನನಗನ್ನಿಸುವುದಿಲ್ಲ.., ಯಾಕೆಂದರೆ ಪಾಕಿಸ್ತಾನದ ಅಲ್ಪಸಂಖ್ಯಾತರಾದ ಹಿಂದುಗಳಿಗೂ ಭಾರತದ ಅಲ್ಪ ಸಂಖ್ಯಾತರಾದ ಮುಸ್ಲಿಮರಿಗೂ ಅಜಗಜಾಂತರ ವ್ಯತ್ಯಾಸವಿದೆ. ಹೋಲಿಕೆಗೆ ಸಲ್ಲದಷ್ಟೂ ವ್ಯತ್ಯಾಸವಿದೆ., ಪಾಕಿಸ್ತಾನದಲ್ಲಿ ಹುಟ್ಟಿ ಬೆಳೆದ ಹಿಂದುಗಳು ತಮ್ಮ ತಾಯಿನಾಡೆಂಬ ಮಮಕಾರ ಆಸ್ತೆಯಲ್ಲಿ ಅಲ್ಲೇ ನಿಂತು ಕಷ್ಟಗಳನ್ನು ಅನುಭವಿಸಿದರು., ಆದರೆ ಭಾರತದ ಅಲ್ಪಸಂಖ್ಯಾಕ ಮುಸ್ಲಿಮರು ಮಾಡಿದ್ದೇನು..? ಇಲ್ಲಿಗೆ ವ್ಯಾಪರಕ್ಕೆಂದು ಇಲ್ಲೆಗೆ ಆಗಮಿಸಿ ಇಲ್ಲಿನ ದೇವಸ್ಥಾನಗಳನ್ನು ನಾಶ ಮಾಡಿ ಅಲ್ಲಿ ಮಸೀದಿಗಳನ್ನು ಕಟ್ಟಿ. ಇಲ್ಲಿನ ಹಿಂದೂ ತಾಯಿಯಂದಿರ ಮೇಲೆ ಅತ್ಯಾಚಾರ ಮಾಡಿ ಮತಾಂತರ ಮಾಡಿ., ಎಷ್ಟೋ ಹಿಂದೂ ಕುಟುಂಬಗಳನ್ನು, ರಾಜ ಕುಟುಂಬಗಳನ್ನು ನಾಶ ಮಾಡಿ, ಹಿಂದೂ ಹೆಣ್ಣು ಮಕ್ಕಳನ್ನು ವೇಶ್ಯೆಯರಂತೆ ಬಳಸಿದ ಮುಸ್ಲಿಂ ರಾಜರುಗಳು ದೌರ್ಜನ್ಯ ಮಾಡಿದ್ದು ಯಾರ ಮೇಲೆ..? ಇಲ್ಲಿನ ಬಹುಸಂಖ್ಯಾತರ ಮೇಲೆ ಅಲ್ಲವೇ..? ಇಲ್ಲಿ ಅಲ್ಪ ಸಂಖ್ಯಾತರು ಮಾಡಿದ ಅನ್ಯಾಯ ಉಪದ್ರವಗಳು.. ಅಲ್ಲಿನ ಅಲ್ಪಸಂಖ್ಯಾತರುಗಳಾದ ಹಿಂದುಗಳು ಮಾಡಿದ ಸತ್ಯವಾದ ಉದಾಹರಣೆಗಳಿವೆಯೇ ನಿಮ್ಮ ಬಳಿ..?
    ಅಲ್ಲಾಹನು ಸರ್ವಶಕ್ತನು ಆತನನ್ನು ಬಿಟ್ಟು ಯಾವದೇವರೂ ಪೂಜೆಗೆ ಅರ್ಹರಲ್ಲ ಎಂದು ಯಾವ ಹಿಂದೂಗಳಾದರೂ ಇಲ್ಲಿನ ಮುಸ್ಲಿಮರ ಮೇಲೆ ಒತ್ತಡ ಹೇರಿದ್ದಾರೆಯೇ..? ಅದೆಲ್ಲ ಬಿಡುವ ಹಳೇ ವಿಷಯಗಳು., ಈಗಿನವರು ಮಾಡುವುದೇನು..? ಪಾಕಿಸ್ತಾನದಿಂದ ಖೋಟಾ ನೋಟುಗಳು ಭಾರತಕ್ಕೆ ಹೇಗೆ ಬರುತ್ತಿವೆ..? ಯಾರೋ ಪಾಕಿಸ್ತಾನದ ಉಗ್ರಗಾಮಿಯನ್ನು ಗಲ್ಲಿಗೇರಿಸಿದ್ದಕ್ಕೆ ಇಲ್ಲಿನ ಮುಸ್ಲಿಮರೇಕೆ ವ್ಯಗ್ರರಾಗುತ್ತಾರೆ.? ಹೈದರಾಬಾದ್ ನಲ್ಲಿ ಯಾಕೆ ಬಾಂಬ್ ಸಿಡಿಯುತ್ತದೆ.. ಅದಕ್ಕೆ ಭಾರತೀಯನೇ ಆದ ಯಾಸಿನ್ ಭಟ್ಕಳ್ ಯಾಕೆ ಕಾರಣವಾಗುತ್ತಾನೆ..? ಹಿಂದೂಗಳು ಮಸೀದಿ ಒಡೆದರೆ ಅದು ಮುಸ್ಲಿಮರು ಒಡೆದು ಕಟ್ಟಿದ ಮಂದಿರಗಳನ್ನು ಪುನಃ ಪಡೇಯುವ ಬಯಕೆ ಎಂದು ನಿಮಗೇಕೆ ಅನ್ನಿಸುವುದಿಲ್ಲ..?? ಇನ್ನು ಅಹಂ ಬ್ರಹ್ಮಾಸ್ಮಿ ಎಂದು ಪ್ರತಿಯೊಬ್ಬರಲ್ಲೂ ದೇವರನ್ನು ಕಂಡ ಶಂಕರಾಚಾರ್ಯರ ನೇತೃತ್ವದಲ್ಲಿ ಮಾರಣ ಹೋಮಗಳಾಗಿದ್ದು ನನಗಂತೂ ಗೊತ್ತಿಲ್ಲ. ಆತ್ಮ , ಪರಮಾತ್ಮನು ಒಂದೇ ಎಂದಿದ್ದು ನಿಮಗಾಗಲಿಲ್ಲ ಎಂದು ಈರೀತಿ ಶಂಕರಾಚಾರ್ಯರ ತೇಜೋವಧೆ ಮಾಡುವ ಪ್ರಯತ್ನ ಮಾಡುವ ಹೀನ ಕೆಲಸಕ್ಕಿಳಿಯಬೇಡಿ... ಸತ್ಯ ವಿಶಯವೇನೆಂದರೆ. ಇಲ್ಲಿನ ಅಲ್ಪಸಂಖ್ಯಾತರು ತಮ್ಮ ತಪ್ಪುಗಳನ್ನು ಸಮರ್ಥಿಸುತ್ತಲೇ.. ಇಲ್ಲಿನ ಬಹುಸಂಖ್ಯಾರ ಮೇಲೆ ಮಾಡಿದ ಕಿರುಕುಳಗಳ ಎಳ್ಳಿನಷ್ಟು ಪಾಕಿಸ್ಥಾನದ ಹಿಂದೂಗಳು ಅಲ್ಲಿನ ಮುಸ್ಲಿಮರ ಮೇಲೆ ಮಾಡಿದ್ದಾರೆಯೆ..? ಇನ್ನು ಬ್ರಾಹ್ಮಣ್ಯವೆಂದರೆ ನೀವು ಏನಂದುಕೊಂಡಿದ್ದೀರಿ..? ಕೋಮುಗಲಭೆ, ರಕ್ತಪಾತಗಳನ್ನು ಬ್ರಾಹ್ಮಣ್ಯವೆಂದು ನೀವು ಹೇಗೆ ಅಂದುಕೊಳ್ಳುತ್ತೀರಿ.., ಬ್ರಾಹ್ಮಣ್ಯವೆಂಬುದು ಒಂದು ಮನೋಧರ್ಮ ಅದು ನೀವಂದುಕೊಂಡಂತ ಮನೋಧರ್ಮವಲ್ಲ., ಸಾತ್ವಿಕತೆ ಈ ಮನೋಧರ್ಮದ ಮೈಗಟ್ಟು., ಇನ್ನು ನೀವು ಕೊಲೆ ರಕ್ತಪಾತ, ಕುಟಿಲತೆಗಳನ್ನು ಬ್ರಾಹ್ಮಣ್ಯತೆ ಅಂದುಕೊಂಡರೆ.. ಈ ಬಲಾತ್ಕಾರದ ಮತಾಂತರತೆ., ಮಂದಿರಗಳನ್ನು ನಾಶಗೊಳಿಸುವುದು, ಅತ್ಯಾಚಾರ,ಬಾಂಬ್ ಇಟ್ಟು ಮುಗ್ಧರನ್ನು ಕೊಲ್ಲುವ ಉಗ್ರವಾದಗಳನ್ನು ನಾವು ಇಸ್ಲಾಮಿಕ್ ಅಂದುಕೊಂಡರೆ ತಪ್ಪೇನು..?? ಅಂದ ಹಾಗೇ ನೀವೇ ಒಪ್ಪಿಕೊಂದಿದ್ದೀರಲ್ಲವೇ ‘‘ಈ ದೇಶದಲ್ಲಿ ಮುಸ್ಲಿಮರು ಶೇ. 80ರಷ್ಟಿದ್ದು, ಹಿಂದೂಗಳು ಶೇ. 20 ರಷ್ಟಿದ್ದರೆ ಅವರ ಸ್ಥಿತಿ ಏನಾಗುತ್ತಿತ್ತು?’’ ಇದಕ್ಕೆ ಸ್ಪಷ್ಟ ಉತ್ತರ ಕೊಡುವಲ್ಲಿ ಎಲ್ಲ ಗೆಳೆಯರೂ ಹಿಂಜರಿದಿದ್ದರು. ನಾನೇ ಉತ್ತರಿಸಬೇಕಾಯಿತು ‘‘ಹಿಂದೂಗಳು ಶೇ. 20 ರಷ್ಟಿದ್ದರೆ ಅವರ ಸ್ಥಿತಿ ತುಂಬಾ ಕೆಟ್ಟದಾಗಿರುತ್ತಿತ್ತು.’’. ಮತ್ತಿನ್ನೇನು.. ಶೇಕಡಾ ಇಪ್ಪತ್ತರಷ್ಟಿದ್ದು ಇಲ್ಲಿನ ಅನ್ನ ಉಂಡು ಇಲ್ಲಿನವರಿಗೇ ದ್ರೋಹ ಮಾಡುವವರು ಶೇಕಡಾ ಎಂಭತ್ತರಷ್ಟಿದ್ದರೆ ನಮ್ಮ ಇಲ್ಲಿನ ಹಿಂದೂಗಳ ಸ್ತಿತಿ ತುಂಬಾ ಕೆಟ್ಟದಾಗಿರುತ್ತಿತ್ತು ಶೋಚನೀಯವಾಗಿರದೇ ಮತ್ತಿನ್ನೇನಾದೀತು.. ಅಲ್ಲವೇ ಬಶೀರ್ ಅವರೇ..?? ಮತ್ತೆ ಕೊನೆಗೆ ಮಹಾತ್ಮಾ ಗಾಂಧಿಯವರ ಮಾತೆಂದು ಬರೆದ್ದೀರಲ್ಲವೇ ಇಲ್ಲಿನ ಬಹುಸಂಖ್ಯಾತರಿಗೆ ಹೇಳುವ ಅವಶ್ಯಕತೆ ಇಲ್ಲ., ಯಾಕೆಂದರೆ ಇಲ್ಲಿ ಅಲ್ಪಸಂಖ್ಯಾರ ಮೇಲೆ ನಡೆದ ಪ್ರತಿಯೊಂದು ದೊರ್ಜನ್ಯಗಳೂ ಕೂಡ ಅಲ್ಪಸಂಖ್ಯಾತರು ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳ ನಂತರ ನಡೆದುದೇ ಆಗಿದೆ., ಕಾರಣವನ್ನು ಇಲ್ಲಿನ ಅಲ್ಪಸಂಖ್ಯಾತರುಗಳೇ ಅವಲೋಕನ ಮಾಡಿಕೊಳ್ಲಬೇಕು..

    ReplyDelete
  5. "...ವಾಗ್ವೈಭವ ಅಪಾಯಕಾರಿ. ಅದು ಸಮೂಹವನ್ನು ಉದ್ರೇಕಗೊಳಿಸೋದಕ್ಕಾಗಿ ರೂಪಿತವಾದದ್ದು. ಸುಳ್ಳುಗಳ ಕೇಳಿಸಿಕೊಳ್ಳುತ್ತಾ ಬದುಕೋದು ಸಾಮಾನ್ಯವಾಗಿ ಎಲ್ಲರಿಗೂ ಕ್ಷೇಮವೆನಿಸುತ್ತದೆ. ಹಿತವೆನಿಸುತ್ತದೆ. ಆದರೂ ಜನರ ಆತ್ಮ ಸತ್ಯಕ್ಕಾಗಿ ಹಸಿದಿರುತ್ತದೆ. ಆದ್ದರಿಂದ ನಾವು ನಮ್ಮ ಅತ್ಯಂತ ಏಕಾಂಗಿತನದಲ್ಲಿ ನಾವೇ ನಂಬಿದ್ದನ್ನು ಹೇಳುವ ಧೈರ್ಯ ಮಾಡಬೇಕು...."

    the author seems to have just followed this great thoughts of leftist communal thinker UR Ananta Mootri !! and hence the artilcle is full of loose talks & thougts

    whole article has nothing thought provoking....it only shows how your mind has been polluted with communist thinking .....

    spitting venom against Brahmans seems to be the only intention of this article.

    ReplyDelete
  6. Nimma gujari lekhanakke gujari beleyaste sigabahudu... stop this nonsense of saying brahmanya and blaming brahmins.. Nimma samudayada moghalaru maadida athyachara haagu anacharagalige holisidare bere yava samudayavu astondu neechathana pradarshisilla..

    ReplyDelete
  7. we can speak to the persons who have the capacity to digest and understand matters... its waste to discus such thing with the persons who doesnt have the ability to even listen ....ha ha ha

    ReplyDelete
  8. Dear B.M.BASHEER

    In 1951, Hindus constituted 22 percentage of the Pakistani population (this includes East Pakistan, modern day Bangladesh) Today, the share of Hindus are down to 1.7 percent in Pakistan, and 9.2 percent in Bangladesh. (In 1951, Bangladesh alone had 22% Hindu population)( In 1941 the Hindus formed about 28% of the population, which declined to 22.05% in 1951 and in 2001 its only about 9.6 there is a Declining in Hindu population in Bangladesh)
    Since time immemorial countless temples were destroyed in india, Pakistan and Bangladesh…because of mainly Islamic rulers / government orders, Even today Destruction of temples is daily news in both Pakistan and Bangladesh.
    Are u aware of this….. BASHEER

    ReplyDelete
  9. @ Basheer, what is your view on Owaisi brother talks?

    ReplyDelete
  10. dear narendra p sastry...pls read....
    http://vbnewsonline.com/Writer/112331/
    http://vbnewsonline.com/Editorial/112916/

    ReplyDelete
    Replies
    1. ವಿಚಾರಪೂರ್ಣ ಲೇಖನ. ಸಂಪೂರ್ಣ ಒಪ್ಪುವಂಥದ್ದು

      Delete
  11. it is either foolishness or dirty trick to compare indian muslims and hindus in paakistan. in india muslims are much safer than pak hindus. ok, are muslims safe in pakistan? no , why? are muslims safe in iraq? in bangla? in kashmir? no. why? please think of it dear basheer.... and if u can find the same answer that it is because of the "brahmanas " there in those countries or kashmir , we are fortunate enough to be enlightened by ur answer again !!!

    ReplyDelete
  12. now there is no reality of the writer and philosopher every body do it only for self group same as it is continued in future total human community is spoil .

    nithish manju
    mudnakudu

    ReplyDelete
  13. ಬ್ರಾಹ್ಮಣ್ಯ ಅಲ್ಲ ಇಸ್ಲಾಮೀಯ. ಜಗತ್ತಿನ ಎಲ್ಲ ಕೆತ್ತದಕ್ಕೂ ಇದೇ ಕಾರಣ.

    ReplyDelete
  14. Mr Basheer. Now i came to know u are fit for gujari shop. stop writing and join there

    ReplyDelete