Wednesday, April 24, 2013

ಬೆಂಗಳೂರು ಸ್ಫೋಟ: ಬಂಧಿತರು ‘ತಕ್ಷಣ’ದ ಆರೋಪಿಗಳು’?

‘‘ಒಂದಲ್ಲ ಒಂದು ಪ್ರಕರಣದಲ್ಲಿ ವಿಚಾರಣೆಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಪೊಲೀಸರು ಆತನನ್ನು ಕರೆದೊಯ್ಯುತ್ತಾರೆ. ಎಲ್ಲಿಯಾದರೂ ಬಾಂಬ್ ಸ್ಫೋಟ ಸಂಭವಿಸಿದರೆ ನನ್ನ ಮಗ ತಕ್ಷಣದ ಶಂಕಿತನಾಗುತ್ತಾನೆ. ಆದರೆ, ಆತನ ವಿರುದ್ಧ ಪುರಾವೆಯಿಲ್ಲ ಎಂದು ಹೇಳಿ ಬಳಿಕ ಪೊಲೀಸರು ಆತನನ್ನು ಬಿಟ್ಟುಬಿಡುತ್ತಾರೆ. ಈ ಬಾರಿಯೂ ನನ್ನ ಮಗ ನಿರಪರಾಧಿ ಎಂಬುದು ಸಾಬೀತಾಗುತ್ತದೆ’’
ಬಂಧಿತ ಮಹಮ್ಮದ್ ಬುಹಾರಿಯ ತಾಯಿ

 ಒಬ್ಬ ಅತ್ಯಾಚಾರಿ ಆರೋಪಿ ಅಥವಾ ಕಳವು ಆರೋಪಿಯನ್ನು ಬಂಧಿಸಲು ವರ್ಷಾನುಗಟ್ಟಳೆ ದೂಡುವ ಪೊಲೀಸರಿಗೆ ಸ್ಫೋಟಕ್ಕೆ ಸಂಬಂಧಿಸಿದ ಅಪರಾಧಿಗಳನ್ನು ಬಂಧಿಸುವುದು ನೀರು ಕುಡಿದಷ್ಟೇ ಸುಲಭ. ಬೆಂಗಳೂರಿನಲ್ಲಿ ಸ್ಫೋಟ ನಡೆದ ಬೆನ್ನಿಗೇ ಅದರ ಹೊಣೆಯನ್ನು ಮುಸ್ಲಿಮ್ ಮೂಲಭೂತವಾದಿ ಸಂಘಟನೆ ಅಲ್‌ಉಮ್ಮಾ ಎನ್ನುವ ಗುಮ್ಮನನ್ನು ತೋರಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಈ ಮೂವರು ನಿಜವಾದ ಅಪರಾಧಿಗಳೇ ಎಂಬ ಸಂಶಯವನ್ನು ಕೆಲವು ಮಾಧ್ಯಮಗಳು ವ್ಯಕ್ತಪಡಿಸಿವೆ. ಬರೇ ಅನುಮಾನದ ಮೇರೆಗೆ ಇವರನ್ನು ಬಂಧಿಸಲಾಗಿದೆ. ಯಾವುದೇ ಬಲವಾದ ಆಧಾರಗಳು ಪೊಲೀಸರ ಬಳಿ ಇಲ್ಲ ಎಂದು ಫಸ್ಟ್‌ಪೋಸ್ಟ್ ತನ್ನ ವರದಿಯಲ್ಲಿ ತಿಳಿಸಿದೆ.

ಎಪ್ರಿಲ್ 17ರಂದು ಬೆಂಗಳೂರಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಶಾಮೀಲಾಗಿರುವ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ. ಈ ಬಂಧನ ಭಯೋತ್ಪಾದಕರೊಂದಿಗೆ ನಂಟು ಹೊಂದಿರುವ ಗುಂಪುಗಳು ಮರುಸಂಘಟಿತವಾಗಿವೆಯೇ ಹಾಗೂ ಪ್ರಕರಣವನ್ನು ದಡಕ್ಕೆ ಸೇರಿಸುವಲ್ಲಿ ತನಿಖಾ ಸಂಸ್ಥೆಗಳು ಈಗಲೂ ಪರದಾಡುತ್ತಿವೆಯೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯಾಕೆಂದರೆ ಅಲ್‌ಉಮ್ಮಾನ ಎನ್ನುವ ಸಂಘಟನೆ ಎಂದೋ ವಿಸರ್ಜನೆಗೊಂಡಿದೆ. ಹಾಗಾದರೆ ಪೊಲೀಸರು ಏನನ್ನು ಸಾಬೀತು ಮಾಡಲು ಹೊರಟಿದ್ದಾರೆ? ಎಂದು ಫಸ್ಟ್‌ಪೋಸ್ಟ್ ಪ್ರಶ್ನಿಸಿದೆ.

38 ವರ್ಷದ ಸೈಯದ್ ಮುಹಮ್ಮದ್ ಬುಹಾರಿ ಯಾನೆ ಕಿಚನ್ ಬುಹಾರಿ, 39 ವರ್ಷದ ಪೀರ್ ಮೊಹಿದ್ದೀನ್ ಮತ್ತು 30 ವರ್ಷದ ಬಶೀರ್ ಯಾನೆ ಸುನ್ನತ್ ಬಶೀರ್ ಅವರನ್ನು ಬಂಧಿಸಲಾಗಿದೆ. ಬುಹಾರಿಯನ್ನು ಈ ಹಿಂದೆ ಕೋಯಂಬತ್ತೂರು ಬಾಂಬ್ ಸ್ಫೋಟದಲ್ಲಿ ಆರೋಪಿ ಎಂದು ಪೊಲೀಸರು ಗುರುತಿಸಿದ್ದರು. ಆದರೆ ಆತ ವಿಚಾರಣೆಯ ಬಳಿಕ ದೋಷಮುಕ್ತ ಎಂದು ನ್ಯಾಯಾಲಯ ಹೇಳಿತ್ತು.

ಬಂಧಿತರು ಸ್ಫೋಟದಲ್ಲಿ ಯಾವ ಪಾತ್ರ ವಹಿಸಿರಬಹುದು ಎಂಬ ಬಗ್ಗೆ ವಿವರಗಳನ್ನು ಪೊಲೀಸರು ಇನ್ನಷ್ಟೆ ನೀಡಬೇಕಾಗಿದೆ. ಮೋಟರ್ ಸೈಕಲಿನ ವ್ಯವಸ್ಥೆ ಮಾಡುವ ಮೂಲಕ ಬಂಧಿತರು ಸ್ಫೋಟ ನಡೆಸಿದವರಿಗೆ ವಸ್ತು ರೂಪದಲ್ಲಿ ನೆರವು ನೀಡಿರಬಹುದು ಎಂಬುದಾಗಿ ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಬೆಂಗಳೂರಿನಲ್ಲಿ ಬೈಕ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಿಸಿತ್ತು. ಶಂಕಿತನೊಬ್ಬ ಬೈಕನ್ನು ವೆಲ್ಲೂರಿನಲ್ಲಿ ಖರೀದಿಸಿದ ವೇಳೆ ದ್ವಿಚಕ್ರ ವಾಹನ ವ್ಯಾಪಾರಿಗೆ ಮಾಡಿದ್ದ ಮಿಸ್ಡ್ ಕಾಲ್‌ನ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎನ್‌ಐಎ ಹೇಳಿದೆ ಎಂಬುದಾಗಿ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಆದರೆ, ಸ್ಫೋಟ ಸ್ಥಳದಿಂದ ಕರೆಗಳನ್ನು ಮಾಡಲು ಪೀರ್ ತನ್ನ ನೆರೆಯವನ ಫೋನ್ ಬಳಸಿದ್ದ ಎಂಬುದನ್ನು ಪೊಲೀಸರು ಪತ್ತೆಹಚ್ಚಿದ ಬಳಿಕ, ಚೆನ್ನೈ ಮೂಲದ ಸಂಖ್ಯೆಗಳನ್ನು ಹೊಂದಿರುವ ಸೆಲ್ ಫೋನ್‌ಗಳ ಬಳಕೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ‘ಡೆಕ್ಕನ್ ಕ್ರಾನಿಕಲ್’ ವರದಿ ಮಾಡಿದೆ.

 ಬುಹಾರಿಯನ್ನು 1998ರ ಫೆಬ್ರವರಿಯಲ್ಲಿ ನಡೆದ ಕೊಯಂಬತ್ತೂರ್ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದರು. ಆದರೆ ಆತ ಕೊಯಂಬತ್ತೂರ್ ಸ್ಫೋಟ ಪ್ರಕರಣದಲ್ಲಿ ಆಗ ದೋಷಮುಕ್ತನಾಗಿದ್ದ.
‘‘ಒಂದಲ್ಲ ಒಂದು ಪ್ರಕರಣದಲ್ಲಿ ವಿಚಾರಣೆಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ಪೊಲೀಸರು ಆತನನ್ನು ಕರೆದೊಯ್ಯುತ್ತಾರೆ. ಎಲ್ಲಿಯಾದರೂ ಬಾಂಬ್ ಸ್ಫೋಟ ಸಂಭವಿಸಿದರೆ ನನ್ನ ಮಗ ತಕ್ಷಣದ ಶಂಕಿತನಾಗುತ್ತಾನೆ. ಆದರೆ, ಆತನ ವಿರುದ್ಧ ಪುರಾವೆಯಿಲ್ಲ ಎಂದು ಹೇಳಿ ಬಳಿಕ ಪೊಲೀಸರು ಆತನನ್ನು ಬಿಟ್ಟುಬಿಡುತ್ತಾರೆ. ಈ ಬಾರಿಯೂ ನನ್ನ ಮಗ ನಿರಪರಾಧಿ ಎಂಬುದು ಸಾಬೀತಾಗುತ್ತದೆ’’ ಎಂದು ಆತನ ತಾಯಿ ರಮ್‌ಝಾದ್ ಹೇಳಿರುವುದಾಗಿ ವರದಿಯಾಗಿದೆ. ಆಕೆಯದು ಬೀಡಿ ಕಟ್ಟುವ ದುಡಿಮೆ. ‘‘ನನ್ನ ಮಗನನ್ನು ಕೋಯಂಬತ್ತೂರು ಬಾಂಬ್ ಸ್ಫೋಟದ ಆರೋಪದಲ್ಲಿ ಆರು ವರ್ಷ ಜೈಲಿನೊಳಗೆ ಹಾಕಿದರು. ವಿಚಾರಣೆಯ ಬಳಿಕ ಅವನನ್ನು ನಿರಪರಾಧಿ ಎಂದು ಬಿಟ್ಟು ಬಿಟ್ಟರು. ಆರು ವರ್ಷ ಅನ್ಯಾಯವಾಗಿ ಅವನು ಜೈಲಲ್ಲಿ ಕಳೆದ. ಜೈಲಿನಿಂದ ಬಿಡುಗಡೆಯಾಗಿ ಬಂದು ಅವನು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾನೆ. ಸ್ವಂತವಾಗಿ ಒಂದು ವ್ಯಾಪಾರ ನಡೆಸುತ್ತಿದ್ದಾನೆ. ಆದರೆ ಪೊಲೀಸರು ಅವನ ಬೆನ್ನು ಬಿಡುತ್ತಿಲ್ಲ’’ ಎಂದು ತಾಯಿ ಅಳಲು ವ್ಯಕ್ತಪಡಿಸುತ್ತಾರೆ.

ಆತನ ಹೆಂಡತಿ ಈಗಾಗಲೇ ಮದರಾಸು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಬಾಂಬ್ ಸ್ಫೋಟ ಪ್ರಕರಣದಲ್ಲಿ ವಕೀಲರಿಗೆ ನೆರವು ನೀಡುತ್ತಿದ್ದ ತನ್ನ ಗಂಡನನ್ನು 2011ರಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿಯನ್ನು ಗುರಿಯಾಗಿರಿಸಿದ ಪೈಪ್ ಬಾಂಬ್ ದಾಳಿಯ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವೊಂದು ವಿಚಾರಣೆಗಾಗಿ ಕರೆದಿತ್ತು ಹಾಗೂ ತಂಡದ ಸಿಬ್ಬಂದಿ ತನ್ನ ಗಂಡನಿಗೆ ಬೆದರಿಕೆ ಹಾಕಿದ್ದರು ಎಂದು ತನ್ನ ದೂರಿನಲ್ಲಿ ಬುಹಾರಿ ಹೆಂಡತಿ ಆರೋಪಿಸಿದ್ದಾರೆ.

 ಆದಾಗ್ಯೂ, ನಿಷೇಧಿತ ಗುಂಪು ಅಲ್ ಉಮ್ಮಾ ಜೊತೆಗೆ ಬುಹಾರಿ ಹೊಂದಿರುವ ಸಂಪರ್ಕದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಹಾಗೂ ಈ ಗುಂಪು ಬೆಂಗಳೂರು ಸ್ಫೋಟದ ರೂವಾರಿಗಳಿಗೆ ನೆರವು ನೀಡಿರಬಹುದು ಎಂಬುದಾಗಿ ಅನಾಮಧೇಯ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಗಳು ಹೇಳಿವೆ.ಕೊಯಂಬತೋರ್ ಸ್ಫೋಟದಲ್ಲಿ ಬಳಸಲಾಗಿದ್ದ ಸ್ಫೋಟಕಗಳನ್ನೇ ಬೆಂಗಳೂರು ಸ್ಫೋಟದಲ್ಲಿ ಬಳಸಿರುವುದು ಪೊಲೀಸರು ಬುಹಾರಿಯ ಮೇಲೆ ಸಂಶಯ ಪಡಲು ಪ್ರಮುಖ ಕಾರಣವಾಗಿದೆ ಎಂದು ಹೆಸರಿಸದ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿಯೊಂದು ಹೇಳಿದೆ.
‘‘ಕೊಯಂತೋರ್ ಸ್ಫೋಟದಲ್ಲಿ ಬಳಸಲಾದ ಸ್ಫೋಟಕಗಳನ್ನೇ ಬೆಂಗಳೂರು ಸ್ಫೋಟದಲ್ಲೂ ಬಳಸಿರುವುದು ನಮ್ಮ ಗಮನಕ್ಕೆ ಬಂದಿದೆ. ಆದಾಗ್ಯೂ, ಅಲ್-ಉಮ್ಮಾ ಹಲವು ವರ್ಷಗಳ ಹಿಂದೆಯೇ ಬರ್ಖಾಸ್ತುಗೊಂಡಿದೆ. ಗುಂಪಿನ ಸದಸ್ಯರು ಮರುಸಂಘಟಿತರಾಗುತ್ತಿದ್ದಾರೆ ಹಾಗೂ ಬೆಂಗಳೂರು ಸ್ಫೋಟ ಅವರ ದಾಳಿಯಾಗಿದೆ ಎಂಬುದು ನಮ್ಮ ಶಂಕೆ. ಹಲವು ನಿಷೇಧಿತ ಸಂಘಟನೆಗಳ ಸದಸ್ಯರು ಮರುಸಂಘಟಿತರಾಗುತ್ತಿರುವ ಬಗ್ಗೆ ವರದಿಗಳಿವೆ. ಅದರಲ್ಲಿ ಇದೂ ಒಂದಾಗಿರಬಹುದು’’ ಎಂದು ಅಧಿಕಾರಿಯನ್ನು ಉಲ್ಲೇಖಿಸಲಾಗಿದೆ.

ಅದೇ ವೇಳೆ, ಬುಹಾರಿ ಇತ್ತೀಚಿನ ವರ್ಷಗಳಲ್ಲಿ ಸಂಶಯಾಸ್ಪದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿಲ್ಲ ಎಂದು ಪೊಲೀಸರೇ ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಆತನನ್ನು ಕಣ್ಗಾವಲಿನಿಂದ ಹೊರಗಿಡಲಾಗಿದೆ ಎಂದು ಅದೇ ಅಧಿಕಾರಿ ಹೇಳುತ್ತಾರೆ.

5 comments:

 1. http://www.udayavani.com/news/286779L15-21-%E0%B2%AA-%E0%B2%8E%E0%B2%AB-%E0%B2%90-%E0%B2%95-%E0%B2%B0-%E0%B2%AF%E0%B2%95%E0%B2%B0-%E0%B2%A4%E0%B2%B0-%E0%B2%B8-%E0%B2%B0----%E0%B2%AC--%E0%B2%AC---%E0%B2%B5%E0%B2%B6.html

  ReplyDelete
 2. ಬಿ ಎಂ ಬಶೀರ್ರವರೆ , ನಿಮ್ಮ ಬರಹ ಗುಜರಿಯಾಗಿರಲಿ ಆದರೆ ಭಯೋತ್ಪಾದಕರಿಗೆ ಪ್ರೋತ್ಸಾಹ ಕೊಡುವನ್ತಹುದು ಅಗಿರದಿರಲಿ! ಹೀಗೆ ಬಾಂಬು ಇಟ್ಟ ಭಯೋತ್ಪಾದಕರಿಗೆ ಕರುಣೆ ತೋರಿಸೋ ಮೂಲಕ ಅವರನ್ನು ಬೆಂಬಲಿಸದಿರಿ ಪ್ಲೀಸ್ ,ಇದು ನಿಮಗೂ ನಮಗೂ ಮತ್ತು ಇಡೀ ಭಾರತದ ಜನರಿಗೆ ಒಳ್ಳೇದಲ್ಲ! ನಿಮ್ಮಾ ಹಾಗೆಯೇ ಅಮೇರಿಕಾ "ತಾಲೀಬಾನಿಗೆ" ಎಲ್ಲಾ ರೀತಿಯ ಬೆಂಬಲವನ್ನೂ ಗುಟ್ಟಾಗಿ ಕೊಟ್ಟು ತಲೀಬನನ್ನು ಬೆಳೆಸಿತು ಆದರೆ ಅದೇ ತಾಲೆಬನೆ ಉಗ್ರರು ಅಮೆರಿಕಾಕ್ಕೆ ಬಾಂಬ್ ಇಟ್ಟು ಉಡಾಯಿಸಿದರು !!! ನಾವು ಇನ್ನೂ ಹೀಗೆ ಭಯೋತ್ಪಾದಕರಿಗೆ ಕರುಣೆ ತೋರಿಸುತ್ತಾ ಇದ್ದುದೇ ಆದರೆ ನಮಗೆ ಆಪತ್ತು ಕಟ್ಟಿಟ್ಟ ಬುತ್ತಿ! ಈಗಲೇ ಎಚ್ಚೆತ್ತುಕೊಂಡರೆ ಒಳ್ಳೆಯದು ಅದಲ್ಲದೆ ಮೈಮರೆತು ಅವರಿಗೆ ಕರುಣೆ ಅಥವಾ ಬೆಂಬಲ ಕೊಟ್ಟರೆ ನಮ್ಮನ್ನು ಆ ದೇವರೂ ಕಾಪಾಡಲಾರ ! ಕ್ಲೂ ಗಳನ್ನ ನಾವು ಕೊಟ್ಟರೆ ನಮ್ಮ ಭವಿಷ್ಯ ಒಳ್ಳೆದಾಗುತ್ತದೆ ,ಇಲ್ಲವಾದರೆ ಇಂತಹ ಸ್ಪೋಟಗಳು ದಿನೇ ದಿನೇ ಹೆಚ್ಚಿ ನಾವೇ ತೊಂದರೆಗೆ ಸಿಳುಕುತೇವೆ ,ನಿಧಾನವಾಗಿ ಯೋಚಿಸಿ .

  ReplyDelete
 3. http://epaper.udayavani.com/Display.aspx?Pg=H&Edn=MN&DispDate=4/26/2013

  ಬಿ ಎಂ ಬಶೀರ್ರವರೆ ,ನಿಮ್ಮ ಬರಹ ಗುಜರಿ.

  ReplyDelete
 4. ಬಾಂಬ್ ಸ್ಪೋಟದಲ್ಲಿ ಗಾಯಗೊಂಡವರ ಬಗ್ಗೆ ಇಲ್ಲದ ಕರುಣೆ, ಬಂಧಿತರ ಬಗ್ಗೆ ತೋರಿಸುತ್ತಿರುವುದು ದುರಾದೃಷ್ಟಕರ. ಇಂಥ ಮನಸ್ಥಿತಿ ಬದಲಾಗಾಬೇಕು.

  ReplyDelete
 5. Ee ella spotagala hinde Hindu nayakara kaiwadavide, amayaka muslimarannu aropigalannagi madutthiddare...

  ReplyDelete