Wednesday, March 6, 2013

ಶಾಲೆಯೆಂಬ ಸರ್ವಜನಾಂಗದ ತೋಟ

ಪ್ರಾಥಮಿಕ ಶಾಲೆಯ ಬಾಗಿಲು ತೆರೆದುಕೊಳ್ಳುವುದೆಂದರೆ, ಮಕ್ಕಳಿಗೆ ಹೊರಗಿನ ಸಮಾಜದ ಮೊದಲ ಬಾಗಿಲು ತೆರೆದುಕೊಂಡಂತೆ. ಅದೊಂದು ಅದ್ಭುತವಾದ, ಸುಂದರವಾದ, ವಿಸ್ಮಯವಾದ ಲೋಕ. ಈವರೆಗೆ ಮನೆಯೊಳಗೆ ಇಲ್ಲದ ಹೊಸ ಭಾಷೆ, ಹೊಸ ಸಂಸ್ಕೃತಿ, ವೈವಿಧ್ಯಮಯ ವಾತಾವರಣವನ್ನು ನಾವು ಮೊದಲು ಕಂಡುಕೊಳ್ಳುವುದೇ ಶಾಲೆಯ ಮೆಟ್ಟಿಲು ತುಳಿದಾಗ. ಬಹುಶಃ ಮನುಷ್ಯ ಸಮಾಜಕ್ಕೆ ತೆರೆದುಕೊಳ್ಳುವುದು ಈ ಶಾಲೆಯ ಮೂಲಕವೇ. ಆವರೆಗೆ ನನಗೆ ಗೊತ್ತಿದ್ದುದು ಮನೆಭಾಷೆ ಮಾತ್ರ. ಶಾಲೆಯೊಳಗೆ ತುಳು ಭಾಷೆ, ಹವ್ಯಕ, ಕನ್ನಡ ಹೀಗೆ....ವೈವಿಧ್ಯಮಯ ಭಾಷೆಯ ಪರಿಚಯವಾಗುತ್ತದೆ. ನಮ್ಮ ಬಡತನ, ನಮ್ಮ ಶ್ರೀಮಂತಿಕೆ ತೆರೆದುಕೊಳ್ಳುವುದೂ ಇಲ್ಲಿಯೇ. ಕುಂಕುಮವಿಟ್ಟವರು, ಟೋಪಿ ಧರಿಸಿದವರು, ತಲೆವಸ್ತ್ರ ಸುತ್ತಿಕೊಂಡವರು, ಬಳೆತೊಟ್ಟವರು...ಹೀಗೆ ವಿವಿಧ ಮಕ್ಕಳನ್ನು ನಾವು ಯಾವ ಭೇದವೂ ಇಲ್ಲದೆ, ಯಾವ ಅಡ್ಡಿ ಆತಂಕಗಳೂ ಇಲ್ಲದೆ ಸ್ವೀಕರಿಸುವುದೂ ಇಲ್ಲಿಯೆ. ಒಟ್ಟಿಗೆ ಆಡುತ್ತಾ, ಜಗಳ ಮಾಡುತ್ತಾ, ಓದುತ್ತಾ, ಪರಸ್ಪರ ನೆರವಾಗುತ್ತಾ, ಠೂ ಬಿಡುತ್ತಾ ನಾವು ನಮಗೆ ತಿಳಿಯದ ಹಾಗೆಯೇ ಎಲ್ಲರಲ್ಲೂ ಒಂದಾಗಿ ಬಿಡುತ್ತೇವೆ. ಭಾರತದ ಆದರ್ಶ ಬೇರು ಬಿಟ್ಟು ನಿಲ್ಲುವುದು ಈ ಹಂತದಲ್ಲಿಯೇ. ಯಾವುದೂ ನಮಗೆ ಅನ್ಯವಲ್ಲ. ಎಲ್ಲವನ್ನೂ ಸ್ವೀಕರಿಸುತ್ತಾ ಹೋಗುವ ಮನಸ್ಥಿತಿಯನ್ನು ಹೊಂದಿರುತ್ತೇವೆ ಈ ಹಂತದಲ್ಲಿ. ಶಾಲೆಯಲ್ಲಿ ಹೀಗೆ ಒಂದಾಗಿ ಬೆಳೆಯುತ್ತಾ ಬೆಳೆಯುತ್ತಾ ಸಮಾಜದ ನಾಗರಿಕ ಎಂದು ಕರೆಸಿಕೊಳ್ಳುವ ಹೊತ್ತಿನಲ್ಲಿ ನಮಗೆ ಅಪರಿಚಿತವಾದುದು ಯಾವುದೂ ಇರುವುದಿಲ್ಲ. ಎಲ್ಲರನ್ನೂ ನಮ್ಮವರು ಎಂದು ಸ್ವೀಕರಿಸುವ ಮನಸ್ಥಿತಿಯನ್ನು ತಲುಪಿ ಬಿಟ್ಟಿರುತ್ತೇವೆ. ನಾನು ಶಾಲೆ ಕಲಿತದ್ದು, ಬೆಳೆದದ್ದು ಇಂತಹ ವಾತಾವರಣದಲ್ಲಿ. ಇಂದು ವೈವಿಧ್ಯಮಯ ಸಂಸ್ಕೃತಿ, ಆಚರಣೆಗಳುಳ್ಳ ಈ ಸಮಾಜವನ್ನು ನನಗೆ ಮುಕ್ತವಾಗಿ, ಹಾರ್ದಿಕವಾಗಿ ಸ್ವೀಕರಿಸಲು ಸಾಧ್ಯವಾದುದೂ ಇದೇ ಕಾರಣಕ್ಕೆ.

  ಮೊನ್ನೆ ನನ್ನ ಸಂಬಂಧಿ ಹುಡುಗನೊಬ್ಬನಲ್ಲಿ ಕೇಳಿದೆ ‘‘ನಿಮ್ಮ ಶಾಲೆಯಲ್ಲಿ ಒಟ್ಟು ಎಷ್ಟು ಮಕ್ಕಳಿದ್ದಾರೆ?’’. ಆತ ಹೇಳಿದ. ಮುಂದೆ ವಿಚಾರಿಸಿದಾಗ ನನಗೆ ತಿಳಿದದ್ದೇನೆಂದರೆ, ಆ ಶಾಲೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮೇತರ ವಿದ್ಯಾರ್ಥಿಯಿಲ್ಲ. ಅದೊಂದು ಮುಸ್ಲಿಮ್ ಶಾಲೆ. ಮುಸ್ಲಿಮ್ ಧಾರ್ಮಿಕ ಹಿನ್ನೆಲೆಯೂ ಅದಕ್ಕಿದೆ. ಇಂಗ್ಲಿಷ್ ಮಾಧ್ಯಮವನ್ನು ಹೊಂದಿ ರುವ ಆ ಶಾಲೆಯಲ್ಲಿ ಹುಡುಗನಿಗೆ ಎಲ್ಲವನ್ನು ಚೆನ್ನಾಗಿಯೇ ಕಲಿಸಲಾಗುತ್ತದೆ. ಎಲ್‌ಕೆಜಿ ಯಿಂದ ಅವನು ಅಲ್ಲೇ ಓದುತ್ತಿದ್ದಾನೆ. ಸುಮಾರು ಹತ್ತನೆ ತರಗತಿಯವರೆಗೂ ಅವನು ಅಲ್ಲೇ ಓದುವ ಸಾಧ್ಯತೆಯಿದೆ. ಇತ್ತೀಚಿನ ದಿನಗಳಲ್ಲಿ ಶಾಲೆಯೆಂದರೆ ಒಂದು ರೀತಿಯ ದಿಗ್ಬಂಧನ. ಮನೆಯಿಂದ ನೇರವಾಗಿ ಶಾಲೆಗೆ ಹೋದರೆ, ಶಾಲೆಯಿಂದ ಮರಳಿ ಮನೆಗೆ. ಮನೆಯಲ್ಲಿ ಹೋಮ್‌ವರ್ಕ್ ಗದ್ದಲ. ಮತ್ತೆ ಮರುದಿನ ಎದ್ದು ಶಾಲೆಗೆ. ಹೊರ ಸಮಾಜದ ಯಾವ ಸಂಪರ್ಕವೂ ವಿದ್ಯಾರ್ಥಿಗಳಿಗಿಲ್ಲ. ಶಾಲೆಯೇ ಅವರ ಸಮಾಜ. ಅವರ ವಿಶ್ವ. ಆದರೆ ದುರದೃಷ್ಟವಶಾತ್ ಈ ವಿಶ್ವದಲ್ಲಿ ಆತನಿಗೆ ಬೇರೆ ಬೇರೆ ಧರ್ಮ, ಆಚರಣೆ, ಸಂಸ್ಕೃತಿ ಇರುವುದರ ಪರಿಚಯವೇ ಇಲ್ಲ. ಒಂದು ವೇಳೆ ಅವರಿಗೆ ಅದರ ಕುರಿತಂತೆ ಅರಿವಿದ್ದರೂ ಅದು ಅವರ ಪಾಲಿಗೆ ಅನ್ಯವಾದುದು. ಅನಗತ್ಯವಾದುದು. ನಾಳೆ ಈ ಶಾಲೆಯ ಜಗತ್ತಿನಿಂದ ಸಮಾಜಕ್ಕೆ ಕಾಲಿಟ್ಟಾಗ ಅವನಿಗೆ ಎಲ್ಲವೂ ಅನ್ಯವಾಗಿ ಬಿಡುವುದರಲ್ಲಿ ಸಂಶಯವಿಲ್ಲ. ಸಮಾಜಕ್ಕೆ ಕಾಲಿಟ್ಟಾಗ ಕಣ್ಣಿಗೆ ಕಟ್ಟಿದ ಪಟ್ಟಿ ಬಿಚ್ಚಿದಂತೆ, ಹುಡುಗ ಗೊಂದಲಗೊಳ್ಳುತ್ತಾನೆ. ಅಪರಿಚಿತ ಜಗತ್ತನ್ನು ನೋಡುವಂತೆ ಎಲ್ಲವನ್ನು ನೋಡುತ್ತಾನೆ. ಆದರೆ ಅವು ಅವನದಾಗಿರುವುದಿಲ್ಲ.


 ಕರಾವಳಿಯಲ್ಲಿ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್ಟರ ನೇತೃತ್ವದ ಶಾಲೆಗಳಿವೆ. ಸಾಧಾರಣವಾಗಿ ಈ ಶಾಲೆಗಳಿಗೆ ಮುಸ್ಲಿಮರು, ಕ್ರಿಶ್ಚಿಯನ್ನರು, ಬಹುತೇಕ ದಲಿತರು ತಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ. ಪ್ರಭಾಕರ ಭಟ್ಟರ ಶಾಲೆಯೆಂದ ಮೇಲೆ ಅಲ್ಲಿ ವರ್ಷವಿಡೀ ಏನನ್ನು ಕಲಿಸಬಹುದು ಎನ್ನುವುದನ್ನು ಸುಲಭವಾಗಿ ಊಹಿಸಬಹುದು. ವರ್ಷಕ್ಕೊಮ್ಮೆ ಈ ಶಾಲೆಗಳ ಉತ್ಸವ ನಡೆಯುತ್ತದೆ. ಆಗ ಈ ಶಾಲೆಯಲ್ಲಿ ನಡೆಯುವ ಮಲ್ಲಕಂಬ, ಕುಸ್ತಿಗಳು ಪತ್ರಿಕೆಗಳಲ್ಲಿ ಆಹಾ ಓಹೋ ಎಂದು ಸುದ್ದಿಯಾಗುತ್ತವೆ. ಆದರೆ ಈ ಶಾಲೆಯಲ್ಲಿ ತನ್ನ ಬದುಕನ್ನು ಕಳೆದ ವಿದ್ಯಾರ್ಥಿ, ಸಮಾಜಕ್ಕೆ ಕಾಲಿಡುವಾಗ ಆತ ಉಳಿದ ಸಮುದಾಯವನ್ನು ನೋಡುವ ಬಗೆ ಹೇಗಿರಬಹುದು? ಎನ್ನುವುದನ್ನು ಕಲ್ಪಿಸಿದರೆ ಮೈ ಜುಮ್ಮೆನ್ನುತ್ತದೆ. ಸಂಸ್ಕೃತಿ, ಧರ್ಮದ ಹೆಸರಿನಲ್ಲಿ ವೈದಿಕತೆಯನ್ನು, ಕೋಮುದ್ವೇಷವನ್ನು ಬಿತ್ತಿ, ಅದಕ್ಕೆ ಗೊಬ್ಬರ ಸುರಿಯುವ ಈ ಶಾಲೆಗಳಲ್ಲಿರುವ ವಿದ್ಯಾರ್ಥಿಗಳ ಜಗತ್ತು ತೀರಾ ಸಣ್ಣದು. ಅವರನ್ನು ಹೊರ ಸಮಾಜಕ್ಕೆ ತಂದು ಕಣ್ಣು ಪಟ್ಟಿ ಬಿಚ್ಚಿದಾಗ ಎದುರಿನಲ್ಲಿರುವ ಮುಸ್ಲಿಮ್ ಹುಡುಗನ ಕುರಿತಂತೆ, ದಲಿತ ಹುಡುಗನ ಕುರಿತಂತೆ ಯಾವ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಬಹುದು?
 

ಮುಸ್ಲಿಮ್ ಸಂಘಟನೆಯೊಂದು ನಡೆಸುವ ಶಾಲೆಯಲ್ಲಿ ವಿಚಾರಿಸಿದಾಗ ‘‘ಬೇರೆ ಸಮುದಾಯದ ಮಕ್ಕಳು ನಮ್ಮ ಶಾಲೆಗೆ ಬರುತ್ತಿಲ್ಲ. ನಾವೇನು ಮಾಡುವುದು?’’ ಎಂದು ಹೇಳಿದರು. ಆ ಶಾಲೆಯ ಪಕ್ಕದಲ್ಲೇ ಇರುವ ಕುಟುಂಬದ ಒಬ್ಬ ವಿದ್ಯಾರ್ಥಿ ದೂರದ ಇನ್ನೊಂದು ಶಾಲೆಯಲ್ಲಿ ಕಲಿಯುತ್ತಿದ್ದ. ‘‘ಇಷ್ಟು ಹತ್ತಿರ ಶಾಲೆ ಇರುವಾಗ ಅಷ್ಟು ದೂರ ಯಾಕೆ ಕಳುಹಿಸುತ್ತೀರಿ?’’ ಎಂದು ಕೇಳಿದೆ. ಅವನು ಥಟ್ಟನೆ ಹೇಳಿ ಬಿಟ್ಟ ‘‘ಅದು ಮುಸ್ಲಿಮರ ಶಾಲೆಯಲ್ವ?’’ ಹಿಂದೆ ಹೀಗಿರಲಿಲ್ಲ. ನನ್ನ ಶಾಲೆಯ ಬಹುಮುಖ್ಯ ಭಾಗವನ್ನು ನಾನು ಕಲಿತದ್ದು ಕ್ರಿಶ್ಚಿಯನ್ನರ ಶಾಲೆಯಲ್ಲಿ. ಚರ್ಚ್ ಶಾಲೆ ಎಂದೇ ಅದು ಆಸುಪಾಸಿನಲ್ಲಿ ಪ್ರಸಿದ್ಧವಾಗಿತ್ತು. ಆ ಶಾಲೆಯ ಪಕ್ಕದಲ್ಲೇ ಚರ್ಚ್ ಇತ್ತು. ಹಾಗೆಯೇ ಕ್ರಿಶ್ಚಿಯನ್ ವಿದ್ಯಾರ್ಥಿಗಳ ಅನಾಥಾಶ್ರಮವಿತ್ತು. ಅವೆಲ್ಲದರ ನಡುವೆಯೇ ನಾವು ನಮ್ಮ ವಿದ್ಯಾಭ್ಯಾಸವನ್ನು ಪೂರ್ತಿಗೊಳಿಸಿದೆವು. ನನಗೆ ಪ್ರಾಥಮಿಕ ಶಿಕ್ಷಣವನ್ನು ನೀಡಿದ ಹೆಚ್ಚಿನ ಶಿಕ್ಷಕಿಯರು ಕ್ರಿಶ್ಚಿಯನ್ನರಾಗಿದ್ದರು. ಮಗ್ಗಿ ಟೀಚರ್, ಲೂಸಿ ಟೀಚರ್, ಪ್ರೆಸ್ಸಿ ಟೀಚರ್, ರೂಫಿನಾ ಟೀಚರ್....ಅವರನ್ನೆಲ್ಲ ನೆನೆವಾಗ ನನ್ನ ಎದೆಯಲ್ಲಿ ಗೌರವ, ಪ್ರೀತಿ ಉಕ್ಕಿ ಬರುತ್ತದೆ. ಆದರೆ ಇಂದು ಅದೇ ಪರಿಸ್ಥಿತಿ ನಮ್ಮ ನಡುವೆ ಇಲ್ಲ. ನಗರ ಪ್ರದೇಶದಲ್ಲಿ ವಿದ್ಯಾರ್ಥಿಗಳನ್ನು ಈಗ ಕ್ರಿಶ್ಚಿಯನ್ ಶಾಲೆಗಳಿಗೆ ಕಳುಹಿಸುವಾಗ ಹಲವು ಲೆಕ್ಕಾಚಾರಗಳು ಎದುರಾಗುತ್ತವೆ. ಮುಸ್ಲಿಮರು ಮಾತ್ರವಲ್ಲ, ಬ್ರಾಹ್ಮಣರು, ಬಿಲ್ಲವರು, ಬಂಟರು ಹೀಗೆ ಎಲ್ಲರಿಗೂ ಒಂದು ರೀತಿಯ ಅನುಮಾನ ಕಾಡುತ್ತದೆ. ಮಕ್ಕಳಿಗೆ ಬೈಬಲ್ ಬೋಧಿಸುತ್ತಾರೆ, ಕ್ರಿಶ್ಚಿಯನ್ ಆಚರಣೆಗಳನ್ನು ಕಲಿಸುತ್ತಾರೆ ಎನ್ನುವುದೇ ಅವರ ಭಯ. ಆದುದರಿಂದಲೇ, ಇಂದು ಕ್ರಿಶ್ಚಿಯನ್ ಮಕ್ಕಳು ಕ್ರಿಶ್ಚಿಯನ್ ಶಾಲೆಗಳಿಗೆ, ಬ್ರಾಹ್ಮಣ ಮಕ್ಕಳು ಶಾರದಾ ವಿದ್ಯಾಲಯದಂತಹ ಶಾಲೆಗಳಿಗೆ, ಮುಸ್ಲಿಮ್ ಮಕ್ಕಳು ಮುಸ್ಲಿಮ್ ಸಂಘಟನೆ ನಡೆಸುವ ಶಾಲೆಗಳಿಗೆ ಹೋಗುವ ವಾತಾವರಣ ಸೃಷ್ಟಿಯಾಗಿದೆ.

ಹಾಗೆಂದು ಆಯಾ ಸಮುದಾಯದವರ ಶಾಲೆಗಳಲ್ಲಿ ಅವರಿಗೆ ರಿಯಾಯಿತಿ ಸಿಗುತ್ತದೆಯೆನ್ನುವ ಭರವಸೆಯೇನೂ ಇಲ್ಲ. ಒಂದು ಮುಸ್ಲಿಮ್ ಸಂಘಟನೆ ನಡೆಸುವ ಎಲ್‌ಕೆಜಿ, ಯುಕೆಜಿ ಶಾಲೆಯ ಶುಲ್ಕ ನೋಡಿಯೇ ತಲೆ ಧಿಂ ಎಂದಿತು. ಅಲ್ಪಸಂಖ್ಯಾತರಿಗೆ ಶಿಕ್ಷಣ ನೀಡಲು ನಾವು ಶಾಲೆಗಳನ್ನು ತೆರೆದಿದ್ದೇವೆ ಎಂಬ ಫೋಸು ನೀಡುವ ಸಂಘಟಕರು, ಶುಲ್ಕವನ್ನು ಮಾತ್ರ ಯಾವ ರಿಯಾಯಿತಿ, ಮುಲಾಜು ಇಲ್ಲದೆ ವಸೂಲಿ ಮಾಡುತ್ತಾರೆ. ಬಡ ಮುಸ್ಲಿಮ್ ಮಕ್ಕಳಿಗೆ ಈ ಶಾಲೆಯ ಬಾಗಿಲು ತೆರೆದುಕೊಳ್ಳುವುದೇ ಇಲ್ಲ. ನಮ್ಮ ನಮ್ಮ ಸಮುದಾಯಗಳಲ್ಲಿ ಶಿಕ್ಷಣವನ್ನು ಜಾಗೃತಿಗೊಳಿಸಲು ಶಾಲೆಗಳನ್ನು ತೆರೆಯುತ್ತಿದ್ದೇವೆ ಎನ್ನುವ ಹುಸಿ ಮಾತುಗಳಲ್ಲಿ ಮರುಳುಗೊಳಿಸುವ ಶಾಲೆಗಳು, ತಮ್ಮ ಸಮುದಾಯದ ಬಡವರನ್ನು ಹುಡುಕಿ ತಮ್ಮ ಶಾಲೆಗಳಿಗೆ ಸೇರಿಸಿದ ಉದಾಹರಣೆ ತೀರಾ ಕಡಿಮೆ. 


ಅದೇನೇ ಇರಲಿ. ಇಂದು ಶಾಲೆಗಳು ಎಲ್ಲ ಧರ್ಮ, ಜಾತಿ, ವರ್ಗಗಳ ವಿದ್ಯಾರ್ಥಿಗಳು ಒಟ್ಟಾಗಿ ಓದುವ, ಉಣ್ಣುವ, ಆಡುವ ತೋಟಗಳಾಗಬೇಕು. ಅದಕ್ಕಾಗಿ ಎಲ್ಲ ಧರ್ಮ, ಸಮುದಾಯದ ಶಾಲೆಗಳೂ ಪ್ರಯತ್ನಿಸಬೇಕು. ಮುಸ್ಲಿಮರು ಕಟ್ಟಿದ ಶಾಲೆಗಳು ಕೇವಲ ಮುಸ್ಲಿಮರಿಗೇ ಸೀಮಿತವಾಗಬೇಕಾಗಿಲ್ಲ. ಕ್ರಿಶ್ಚಿಯನ್ನರ ಶಾಲೆಗಳು ಕ್ರಿಶ್ಚಿಯನ್ನರಿಗಷ್ಟೇ ಸೀಮಿತವಾಗಬೇಕಾಗಿಲ್ಲ. ಹಾಗೆಯೇ ಬ್ರಾಹ್ಮ ಣರ ಶಾಲೆಗಳು ಬ್ರಾಹ್ಮಣರಿಗಷ್ಟೇ ಅಲ್ಲದೆ, ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೂ ಆದ್ಯತೆಯ ಅವಕಾಶವನ್ನು ನೀಡಬೇಕು. ಪಾಠವೆಂದರೆ ಕೇವಲ ಪುಸ್ತಕದ ಬದನೆಕಾಯಿ ಮಾತ್ರವಲ್ಲ. ಪಾಠವೆಂದರೆ ನಮ್ಮ ಸಮಾಜವನ್ನು, ನಮ್ಮ ನಡುವಿನ ಜನರನ್ನು ಅರ್ಥ ಮಾಡಿಕೊಳ್ಳು ವುದು. ಎಲ್ಲರ ಮನೆ ಭಾಷೆಗಳು ಅಲ್ಲಿ ಪರಸ್ಪರ ವಿನಿಮಯವಾಗಬೇಕು. ಧರ್ಮ, ಸಂಸ್ಕೃತಿಗಳು ಪರಸ್ಪರ ಪರಿಚಯವಾಗಬೇಕು. ಧಾರ್ಮಿಕ ಸಂಘಟನೆಗಳು ನಡೆಸುವ ಶಾಲೆಗಳು, ತಮ್ಮ ತಮ್ಮ ಧರ್ಮಗಳ ವಿದ್ಯಾರ್ಥಿಗಳಿಗೆ ಮಾತ್ರವೆಂದು ಗೋಡೆ ಕಟ್ಟಿದರೆ, ಅದು ಶಾಲೆಯಾಗುವುದಿಲ್ಲ. ಅದು ದ್ವೀಪವಾಗುತ್ತದೆ. ಅದರಿಂದ ಹೊರ ಬಂದ ಮಕ್ಕಳೇ ಮುಂದೆ, ಸಮಾಜದಲ್ಲಿ ಅನ್ಯತೆಯನ್ನು ಮೈಗೂಡಿಸಿಕೊಂಡು ಬದುಕತೊಡಗುತ್ತಾರೆ. ಕೋಮುವಾದಿ ನಾಯಕರು ಇಂತಹ ಮಕ್ಕಳನ್ನು ಬಹಳ ಸುಲಭವಾಗಿ ತಮ್ಮ ಬಲೆಗೆ ಬೀಳಿಸುತ್ತಾರೆ. ಸಮಾಜ ಒಡೆಯುವುದಕ್ಕೆ ಇದು ಕಾರಣವಾಗುತ್ತದೆ.

ಇದು ಕ್ರಿಶ್ಚಿಯನ್ನರ ಶಾಲೆ, ಇದು ಮುಸ್ಲಿಮರ ಶಾಲೆ, ಇದು ಬ್ರಾಹ್ಮಣರ ಶಾಲೆ ಎಂಬ ಭೇದ ಅಳಿಯಬೇಕಾಗಿದೆ. ಬರೇ ಶಾಲೆ ಎನ್ನುವ ಶಬ್ದವಷ್ಟೇ ಉಳಿಯಬೇಕಾಗಿದೆ. ಅಂತಹ ಶಾಲೆಯಲ್ಲಿ ಕಲಿತ ಮಕ್ಕಳು ಮಾತ್ರ ಭವಿಷ್ಯದ ನಿಜವಾದ ಭರವಸೆಯಾಗುತ್ತಾರೆ. ಆದುದರಿಂದ ಅಂತಹ ಶಾಲೆಗಳು ಹೆಚ್ಚಲಿ. ಅಂತಹ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಲಿ ಎನ್ನುವುದು ಹಾರೈಕೆ.


7 comments:

 1. ಪ್ರಿಯ ಬಶೀರ್, ನಿಮ್ಮ ಚಿಂತನೆಯನ್ನು ಮುಂದುವರೆಸಿ- ಶಾಲೆ ದಾಟಿ ವಿಶ್ವವಿದ್ಯಾನಿಲಯಕ್ಕೆ ಬನ್ನಿ. ನೀವು ವಿಶ್ವವಿದ್ಯೆಯನ್ನು ಕ್ರಿಶ್ಚಿಯನ್ ವಿಶ್ವವಿದ್ಯಾಲಯ, ಜೈನ ವಿಶ್ವವಿದ್ಯಾಲಯ ಹಿಂದೂ ವಿಶ್ವವಿದ್ಯಾಲಯಗಳಲ್ಲಿ ಪಡೆಯಬೇಕಾಗಿರುವಂತೆ ಇನ್ನು ಮುಂದೆ ಮುಸ್ಲಿಂ ವಿಶ್ವವಿದ್ಯಾಲಯದಿಂದಲೂ ಪಡೆಯುವ ವ್ಯವಸ್ಥೆಯನ್ನು ಬದಲಾಯಿಸದೆ ಮುಂದುವರೆಸಬೇಕೆ? ಈ ಬಗ್ಗೆ ಗಂಭೀರವಾಗಿ ಯೋಚಿಸಿ ಎಂದು ಮನವಿ ಮಾಡಿದ ನನ್ನ ಪತ್ರವನ್ನು ನಿಮ್ಮ ಪತ್ರಿಕೆ ನನ್ನ ಹೆಸರನ್ನೇ ಬದಲಾಯಿಸಿ ಪ್ರಕಟಿಸುವಷ್ಟು ನನ್ನ ಕಳಕಳಿ ಆಶೈಕ್ಷಣಿಕವೆ? ಈ ಬಗ್ಗೆ ನಿಮ್ಮ ಸಂಪಾದಕರಿಗೆ ಸ್ಪಷ್ಟಪಡಿಸಲು ಮನವಿಮಾಡಿದರೂ ಕೇಳಿಸಿಕೊಳ್ಳದ ಕಿವುಡುತನ ನಟಿಸುವುದಕ್ಕೆ ಏನು ಹೇಳುವುದು?

  ReplyDelete
 2. ಪ್ರಿಯ ಪಂಡಿತಾರಾಧ್ಯ ಅವರಿಗೆ...ಬಾಲ್ಯದ ಶಾಲೆ ಅಡಿಗಲ್ಲು....ವಿಶ್ವ ವಿದ್ಯಾಲಯದಲ್ಲಿ ಕಲಿಯುವ ವಿದ್ಯಾರ್ಥಿಗೂ, ಎಲ್ ಕೆ ಜಿಯಲ್ಲಿ ಕಲಿಯುವ ವಿದ್ಯಾರ್ಥಿಗೂ ವ್ಯತ್ಯಾಸವಿದೆ. ಮುಸ್ಲಿಂ ವಿಶ್ವ ವಿದ್ಯಾಲಯ ಎನ್ನುದನ್ನು ಯಾವ ಅರ್ಥದಲ್ಲಿ ಹೇಳಿದಿರಿ ಎನ್ನೋದು ನನಗೆ ಗೊತ್ತಿಲ್ಲ...ಬಹುಷಃ ಟಿಪ್ಪು ವಿವಿ ಯನ್ನು ಉದಾಹರಿಸಿ ಹೇಳಿದ್ದಾದರೆ...ಅದು ಮುಸ್ಲಿಂ ವಿ ವಿ ಅಲ್ಲ...ಅಲ್ಪಸಂಖ್ಯಾತ ವಿವಿ...ಮುಸ್ಲಿಮರಿಗೆ...ಪಾರ್ಸಿ,.ಜೈನ...ಬೌದ್ಧ...ಕ್ರೈಸ್ತ...ದಲಿತ...ಹೀಗೆ ಎಲ್ಲ ವರ್ಗಕ್ಕೆ ಸಂಬಂದಿಸಿದ್ದು....ಹಾಗೆ...ಶೇ.೫೦ ಉಳಿದವರಿಗೂ ಮೀಸಲಾಗಿದೆ....ಅದು ಸರಕಾರೀ ವಿಶ್ವ ವಿದ್ಯಾಲಯ....ಅದರ ಹಿಂದೆಯೂ ಸಮಾನತೆಯ ಉದ್ದೇಶ ಇದೆ...
  ಹಾಗೆಯೇ ನೀವು ಬರೆದ ಪತ್ರ ಬೇರೆ ಹೆಸರಲ್ಲಿ ಪ್ರಕಟವಾಗಿದೆ ಎನ್ನೋದು...ನನಗೆ ಈಗ ನಿಮ್ಮಿಂದ ತಿಳಿದಿದೆ...ಆ ಬಳಿಕ ನೀವು ಬರೆದ ನಿಮ್ಮ ಯಾವ ಪತ್ರವೂ ನಮಗೆ ಸಿಕ್ಕಿಲ್ಲ....ಯಾವ ಕಾರಣಕ್ಕೂ ಇನ್ಥಹದ್ದು ನಮ್ಮಲ್ಲಿ ಸಂಭವಿಸೂದಿಲ್ಲ....ಪತ್ರಿಕೆಯ ಧೋರಣೆಗೆ ವಿರುದ್ಧ ಅಭಿಪ್ರಾಯ ಇದ್ರೂ ಅದು, ಯಾವ ತಡೆಯೂ ಇಲ್ಲದೆ ಪ್ರಕಟವಾಗುತ್ತದೆ....ಈ ಭರವಸೆಯನ್ನು ನಾನು ಕೊಡಬಲ್ಲೆ....
  ನಿಮ್ಮ ಪತ್ರ...ನಂತರ ನೀವು ಸಂಪಾದಕರಿಗೆ ಬರೆದ ಪತ್ರ bmbasheer12@gmail.com ಕಳಿಸಿ...ನಿಮಗೆ ತಕ್ಷಣ ಉತ್ತರಿಸುವೆ...

  ReplyDelete
 3. ಸಮಾಜದಲ್ಲಿ ಹುಟ್ಟಿಕೊಂಡಿರುವ ಒಂದು ಹೊಸರೋಗವನ್ನು ಪರಿಚಯಿಸಿದ್ದೀರಿ. ವಾಸ್ತವವಾಗಿಯು ಇದೊಂದು ಬಹಳ ಕಳವಳಕಾರಿ ಬೆಳವಣಿಗೆ. ಈ ಬೆಳವಣಿಗೆಗೆ ಕೋಮುವಾದಿ ವೈರಸ್ ಎಷ್ಟು ಕಾರಣವೋ ಅಲ್ಪಸಂಖ್ಯಾತರ (ಮುಖಂಡರ/ವಿದ್ವಾಂಸರ) ಅಜ್ನ್ಯಾನವೂ ಕೂಡಾ ಅಷ್ಟೇ ಕಾರಣವೆಂದು ನನ್ನ ಅನಿಸಿಕೆ. "ಸಬಲೀಕರಣ"ದ ನೆಪವನ್ನಿಟ್ಟುಕೊಂಡು ವ್ಯಾಪಕ ಶಾಲೆಗಳನ್ನು ತೆರೆಯುವ ಭರಾಟೆಯಲ್ಲಿ ಮುಂದಿನ ತಲೆಮಾರು ದುರ್ಬಲವಾಗುತ್ತಿರುವುದನ್ನು ಯಾರೂ ಕೂಡಾ ಮುಂದಾಲೋಚಿಸಲಿಲ್ಲ. ಗಾಯದ ಮೇಲೆ ಬರೆಯೆಂಬಂತೆ, ಸಾಮಾಜಿಕ ದೂರದರ್ಶಿತ್ವವಿಲ್ಲದ ಸರಕಾರದ ನೀತಿಗಳು ಖಾಸಗಿ ಶಾಲೆಗಳಿಗೆ ಅನುಮತಿ ನೀಡುತ್ತಾ ಈ ಧ್ರುವಿಕರಣವನ್ನು ಇನ್ನಷ್ಟು ಹೆಚ್ಚಿಸಿದವು. ಸರಕಾರಿ ಶಾಲೆಗಳ ವ್ಯವಸ್ಥೆ ಬಲವಾಗಿರುತ್ತಿದ್ದರೆ ಇಂತಹ ದುರಂತಮಯ ಸನ್ನಿವೇಶ ಉಂಟಾಗುತ್ತಿರಲಿಲ್ಲ ಎಂದನಿಸುತ್ತದೆ. ಸುಮಾರು ಒಂದುವರೆ ದಶಕಗಳ ಹಿಂದೆ ಎ ಎಸ್ ಪುತ್ತಿಗೆಯವರು ಬಂಡವಾಳಶಾಹಿ ಮತ್ತು ಕೋಮುವಾದವನ್ನು ಪರಸ್ಪರ ಮಿತ್ರರೆಂದು ಬಣ್ಣಿಸುತ್ತಾ ಹೇಳಿದ ಮಾತು- ಇವುಗಳು ಜೊತೆಯಾದಾಗ ಜನರ ಗಮನವನ್ನು ನೈಜ ಸಮಸ್ಯೆಗಳಿಂದ ವಿಚಲಿತಗೊಳಿಸಿ, ಯಾರ ಗಡ್ಡವೆಷ್ಟು ಉದ್ದವಿದೆ, ಯಾರ ಶೆಂಡಿಯೆಷ್ಟು ಉದ್ದವಿದೆ ಎಂಬುವುದರಲ್ಲಿ ಕೇಂದ್ರಿಕರಿಸುತ್ತದೆ- ನೆನಪಾಗುತ್ತಿದೆ.

  ~ಇಷ್ತಿಯಾಕ್

  ReplyDelete
 4. ಬಷೀರ್,
  ನಿಮ್ಮ ಯೋಚನೆಗೇ ತುಕ್ಕು ಹಿಡಿದಂತೆ ಭಾಸವಾಗುತ್ತಿದೆ. ಯಾರೆ೦ದರು ನಿಮಗೆ ಪ್ರಭಾಕರ ಭಟ್ಟರ ಶಾಲೆಯಲ್ಲಿ ಕೋಮುವಾದವನ್ನೋ ಪುರೋಹಿತವಾದವನ್ನೋ ಅಥವಾ ವೈದಿಕತೆಯನ್ನೋ ಕಲಿಸಲಾಗುತ್ತಿದೆ ಎ೦ದು ? ? ಶಾಲೆಗೆ ಹೋದವ ನಾನು .ಹೇಳುವವರು ಉಪ್ಪಿಂಗಡಿಯಲ್ಲಿ ಕಲಿತ ನೀವೋ ???
  ಅನೇಕ ಬಾರಿ ನಿಮ್ಮ ಕವಿತೆಯ , ಕವಿತೆ ಕಟ್ಟುವ ಪರಿಯ ಬಗೆಗೆ ವಿಸ್ಮಯಗೊಡವ ನಾನು.ಅಗ ನನಗೆ ನೀವು ಮುಸ್ಲಿಮನಾಗಿ ಕ೦ಡದ್ದಿಲ್ಲ... ಬಷೀರ್!
  ಆದರೆ ನೀವು ಕಾಣದ್ದನ್ನು , ನಾವು ಕ೦ಡದ್ದನ್ನು ನಿಮಗೆ ಬರುವ ಅದ್ಭುತ ಅಕ್ಷರ ಕುಸುರಿಯಲ್ಲಿ ಪೋಣಿಸಿ ಉಣಿಸುತ್ತೀರಲ್ಲಾ.. . ಇದು ಬಶೀರರ ಬರೆಹವೆಬ ಕಾರಣಕ್ಕೆ ಮಾನ್ಯತೆ ಪಡೆಯುತ್ತಲ್ಲಾ ಆಗ ನೋವಾಗುತ್ತದೆ.. ಸಾಮಾನ್ಯ ಹಿ೦ದೂ , ಮುಸ್ಲಿಂ ಯಾವತ್ಹೂ ಎಲ್ಲೂ ಸಮಸ್ಯೆ ಯಾಗಿಲ್ಲ ಬಶೀರಣ್ಣಾ ..ಆದರೆ ಅತಿಯಾಗಿ ಅಕ್ಷರ ಕಲಿತ ನೀವು, ನಿಜಕ್ಕೂ ಈ ಸಮಾಜದ ಹುಣ್ಣು! ಮಅದನಿಯವರ ಎಲ್ಲ ಅತಿರೇಕ ದೇಶದ ವಿರೂದವೇ ನಿಲ್ಲ ಬಹುದಾದ ಮಾತುಗಳನ್ನು ಉಲ್ಲೇಖಿಸುವ ನೀವು ಬಹುವಚನ ಪ್ರಯೋಗಿಸುತ್ತೇರಿ.ಽಅದರೆ, ನೀವನ್ನುವ೦ತೆ, ಪ್ರಪಚಕ್ಕೆ, ಸುತ್ತಲ ಜಗತ್ತಿಗೆ ಕಣ್ಣು ತೆರೆಯುವ ಪ್ರಾಥಮಿಕ ಶಾಲೆಗಾಗಿ ಪ್ರಭಾಕರ ಭಟ್ಟರ ಶಾಲೆಗೇ ಹೋದ ನನಗೆ ನನ್ನ ಪ್ರೀತಿಯ ಹಮೀದ್, ಮಮ್ಮದ್, ಇಬ್ರಾಹಿಮ್ , ನಜೀರ್ ನನ್ನು ಇವತ್ತಿಗೂ ನನ್ನೋದಿಗಿರಿಸಲು ಸಮಸ್ಯೆ ಯಾಗಿಲ್ಲ..ಪೆರ್ನಾಲ್ ನ ಖುಷಿ ಆನುಭಾವಿಸಲು ಕ್ಷ್ತವಾಗಿಲ್ಲ.ಽಅದರೆ ನಿಮ್ಮ ಅತಿ ತಿಳುವಳಿಕೆಯ , ಪಾಂಡಿತ್ಯದ ಒಳ ಟೊಳ್ಳನ್ನು ಗ್ರಹಿಸಿದಾಗ ನಾಚಿಕೆಯಾಗುತ್ತದೆ, ಕವಿಯಲ್ಲದ , ಪತ್ರ ಕರ್ತನಲ್ಲದ ನಾನು ವಾಸಿಯೆನ್ನಿಸುತ್ತದೆ... !!

  ನಿಮಗೆಲ್ಲಾದರೂ ಶಿಕ್ಷಣ ಕ್ಷೇತ್ರದ ಕಿ೦ಚಿತ್ ಜ್ಣ್ಜಾನ ವಿರುತ್ತಿದ್ದರೆ ಹೀಗೆ ನೇವು ಬರೆಯುವುದು ಸಾಧ್ಯವಿರುತ್ತಿರಲಿಲ್ಲ..ಸ್ವಾಮೇ ಬಶೇರರೇ, ಈ ಮೈನಾರಿಟಿ ಎ೦ಬ ಕಲ್ಪನೆಯನ್ನು ವಾಸ್ತವದ ಹುಣ್ಣಾಗಿಸಿ, ಅಲ್ಪಸಖ್ಯಾಕ ಶಾಲೆಗಳನ್ನು ಹುಟ್ಟು ಹಾಕಿದ್ದೇ ಮುಸ್ಲಿಮ ನಾಯಕರು ಮಾತು ರಾಜಕಾರಣಿಗಳು..ಭಟ್ಟರ ಶಾಲೆಗೇ ಎಷ್ಟೋ ಕಾಲಕ್ಕೆ ಮುನ್ನ! ಅದನ್ನು ಸಮಾನತೆಯ ಯತ್ನ ಎನ್ನುವ ನೀವು ಮೊದಲು, ಮುಸ್ಲಿಮರ ಹೊರತಾಗಿ ಇನ್ಯಾರೋ ಕಲಿಯಲು ಸಾಧ್ಯವೇ ಇಲ್ಲದ ಕುರಾನ್ ಹೊರತಾಗಿ ಬೇರೆ ಪಠ್ಯಕ್ರಮವಿಲ್ಲದ, .."ಆದರೆ , ಸರಕಾರೀ ಅನುದಾನ ತೆಗೆದುಕೊಳ್ಳುವ " ಮದ್ರಸಾ ಶಾಲೆ(?) ಗಳ ಮೇಲೋ೦ದು ಲೇಖನ ಮಾಲೆ ಯಾಕೆ ಮಾಡ ಬಾರದು? ಇವನ್ನು ನಿಲ್ಲಿಸಿ, ಸಾಮಾನ್ಯ ಶಾಲೆಗಳು - ಎಲ್ಲರಿಗಾಗಿ..ಅಲ್ಲಿ ಕುರಾನ್, ಗೀತೆ ಬೈಬಲ್, ಶಾಲು , ಟೊಪ್ಪಿ, ಸ್ಕಾರ್ಪ್ ಅಥವಾ ಗುರಾಣ ಇಎಲ್ಲವೋ ಒಟ್ಟೊಟ್ಟಿಗೆ ಇದ್ದು ಒಳ್ಳೆಯ, ಸಮಾನತೆಯ - ಸಹಿಷ್ಣುತೆಯ ಮಗುವಿನ ನಿರ್ಮಾಣಕ್ಕೆ ಕಾರಣವಾಗುವ ಶಾಲೆಗಳ ನಿರ್ಮಾಣಕ್ಕಾಗಿ ಅಕ್ಷರ ಚಳುವಳಿಯನ್ನು ಯಾಕೆ ಮಾಡಬಾರದು?

  ಮೊನ್ನೆ ಮುಬಯಿಗೆ ಕಾರ್ಯನಿಮಿತ್ತ ಹೋಗಿದ್ದಾಗ, ಖ್ಯಾತ ಕವಿ, ಜಯ೦ತ ಕಾಯ್ಕಿಣಿಯವರು ಮುಬಯಿಯ ಮಹಿಳಾ ಲೇ ಖಕಿಯ ರ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ಅಲ್ಲಿ ನಿಮ್ಮ ಬಗ್ಗೆ ಉಲ್ಲೇಖ ಬ೦ತು ಬಶೇರ್..(ನೀವು ಹಿ೦ದೆ ಬಹುಕಾಲ ಮುಬಯಿಯಲ್ಲಿ ಇದ್ದೀ ರಂತೆ ..) "ಬಹಳ ಸೂಕ್ಷ್ಮವಾಗಿ, ಸೃಜನವಾಗಿ ಬರೆಯುತ್ತಿದ್ದ ಬಶೀರರು ಕೋಮು ಪತ್ರಿಕೆ ಸೇರಿಕೊಡ ಬಳಿಕ ತಮ್ಮ ನೋಟಗಳನ್ನೋ ಹಸಿರು ಗಾಜಿನಲ್ಲೇ ನೋಡುತ್ತಿರುವ೦ತೆ ಕಾಣುತ್ತಿದೆ...ಆ ಪತ್ರಿಕೆ ಯ ಲೇಖನಗಳೆಲ್ಲ ಕೇವಲ ಮುಸ್ಲಿಂಮರು ಮಾತ್ರ ಓದುಗರೆನ್ನುವ೦ತೆ, ಭಾಸವಾಗುತ್ತಿದೆ " ಎ೦ದು ಲೇಖಕಿಯೊಬ್ಬರು ಅ೦ದದ್ದು ) ಅದಕ್ಕೆ ಕಾರ್ಯ ನಿಮಿತ್ತ ಮುಬಯಿಗೆ ಹೋದ ನಾನೂ ಸಾಕ್ಷಿಯಾದದ್ದು ..ಇವತ್ತು ನನಗೆ ಸಹಜ ಮತ್ತು ಸತ್ಯದ ವಿಚಾರವಾಗಿ ಕಾಣಿಸುತ್ತಿದೆ..!
  ಬಷೀರ್, ಸುಮ್ಮನೆ ನಿಮಗೆ ಇಲ್ಲದ ಬುರ್ಖಾ ಹೊದ್ದುಕೊಳ್ಳಬೇಡೀ.. ಬಿಟ್ಟ ಕಣ್ಣಿ೦ದ ಜಗತ್ತನ್ನು ನೋಡಿ...ಸಾಧ್ಯವಾದರೆ, ಇಡೀ ಮುಸ್ಲಿಂ ಜಗತ್ತು ಮುಳುಗಿ ಹೋಗಿದೆಯಲ್ಲಾ ಮೌಡ್ಯದಿ೦ದ ಆದರಿದ ನನ್ನ ಮುಸ್ಲಿಂ ಗೆಳೆಯರನ್ನು ಹೊರಗೆಳೆಯಲು ಪ್ರಯತ್ನ ಮಾಡಿ... ಮತ್ತು ಇನ್ನೂ ಸಾಧ್ಯವಾದರೆ, ಕಲ್ಲಡ್ಕದ ಶಾಲೆಗೊಮ್ಮೆ ಬ೦ದು ನೋಡೀ.. ಕಣ್ಣ ಮೇಲಿನ ಪೊರೆ ಸರಿದೇತು.. ಆ ಪ್ರಯತ್ನವನ್ನಾದರೂ ಮಾಡಿ. ಆರು ತಿಗಳ ಬಳಿಕ ನಾನೇ ಆಫ್ರಿಕಾಡಿದ ಮರಳುತ್ತೇನೆ ..ನಾನೇ ನಿಮ್ಮನ್ನು ಸ್ವಾಗತಿಸುವೆನ೦ತೆ !!

  ಸುಶಾ೦ತ್ ನಾಯ್ಕ, ವಿಟ್ಲ ,

  ReplyDelete
 5. Kshamisi...

  nanage kannada Taipisalu tumbaane font samasye aaddarinda ee melina lekhana dalli halavu kaagunitha haagoo vaakya-shabda doshagau nasulive...Last sentense nalli Afrika antha odikolli..Pls

  Sushant Nayka, Vittal

  ReplyDelete
 6. ಮುಂಬೈ, ಜಯಂತ್ ಮೊದಲಾದ ಪ್ರಸ್ತಾಪ ನಿಮ್ಮ ಪ್ರತಿಕ್ರಿಯೆಯನ್ನು ಎಲ್ಲೋ ಆಪ್ತವಾಗಿಸಿತು. ನನ್ನ ಲೇಖನದ ಉದ್ದೇಶ ದ ಕುರಿತು ನೀವು ಮೌನವಾಗಿ, ಪ್ರಭಾಕರ ಭಟ್ಟರ ಶಾಲೆಯ ಪರ ವಾದಕ್ಕೆ ಇಳಿದದ್ದು ಸೋಜಿಗ ಎನ್ನಿಸಿತು. ಪ್ರಭಾಕರ ಭಟ್ಟ ನನ್ನ ಉಪ್ಪಿನಂಗಡಿಗೆ ಬಂದು ಅನಾಹುತ ಮಾಡಿ ಹೋದದ್ದು, ಆತನ ದ್ವೇಷ ಪೂರಿತ ಭಾಷಣ ಕರಾವಳಿಗೆ ಮಾಡಿರುವ ಅನ್ಯಾಯ ಇವೆಲ್ಲ ಗೊತ್ತಿದ್ದೂ ನೀವು ಈ ಪ್ರತಿಕ್ರಿಯೆ ನೀಡಿದ್ದೀರಿ ಎಂದಾದರೆ...(ಈತನ ಶಾಲೆ ಇದೀಗ ಉಪ್ಪಿನಂಗದಿಯಲ್ಲೂ ತೆರೆದಿದೆ...) ನಿಮ್ಮದು ಪ್ರಜ್ಞಾ ಪೂರ್ವಕ ಪ್ರತಿಕ್ರಿಯೆ. ಮತ್ತು ಆಳದಲ್ಲಿ ಮುಸ್ಲಿಮರ ಕುರಿತ ಅಸಹನೆ ನಿಮ್ಮ ಬರಹದಲ್ಲಿ ಎದ್ದು ಕಾಣುತ್ತಿದೆ. ಅದನ್ನು ಮುಚ್ಚಿಡುವ ಪ್ರಯತ್ನವೂ ವಿಫಲವಾಗಿದೆ. ಆದುದರಿಂದಲೇ ನನ್ನ ಬರಹ ಹಸಿರಾಗಿ ಕಾಣುತ್ತಿದೆ. ಭಟ್ಟರನ್ನು ದ್ವೇಷಿಸದೆ ನೀವು ಮುಲ್ಲಗಳನ್ನೂ ದ್ವೇಷಿಸುವ ಹಕ್ಕನ್ನು ಕಳ್ಕೋತೀರಿ. ಕೋಮುವಾದಿ ಪತ್ರಿಕೆ...ಎನ್ನುವ ಶಬ್ದವೇ ಇಲ್ಲಿ ಅತ್ಯಂತ ಹಾಸ್ಯಾಸ್ಪದ...ಇಲ್ಲಿ ವಿವರಿಸಲಾಗದಷ್ಟು ಕುಲಗೆಟ್ಟು ಹೋಗಿರುವ ಮಾಧ್ಯಮಗಳ ನಡುವೆ...ಈಗ ನಾನು ಏನಾಗಿದ್ದೇನೆಯೋ ಅದುವೇ ಈ ಕ್ಷಣದ ನನ್ನ ಸತ್ಯ....ನಿಮ್ಮ ಸತ್ಯ ಬೇರೆ ಇರಬಹುದು..

  ReplyDelete
 7. "ಭಟ್ಟರನ್ನು ದ್ವೇಷಿಸದೆ ನೀವು ಮುಲ್ಲಗಳನ್ನೂ ದ್ವೇಷಿಸುವ ಹಕ್ಕನ್ನು ಕಳ್ಕೋತೀರಿ" ಹಾಗೆಯೇ, (ಕುಲ ಭಾಂಧವರೇ ಆದ) ಮುಲ್ಲಾ-ಮದ್ರಸಾ-ಬುರ್ಕಾ-ತಲಾಖ್^೩ ಗಳನ್ನು ವಿರೋಧಿಸದೇ ಪ್ರ.ಭಟ್ಟ ಇತ್ಯಾದಿಗಳನ್ನು ವಿರೋಧಿಸುವ ಹಕ್ಕು ನಿಮಗೂ ಇಲ್ಲ. ಈ ಥರಹದ ಜಾಣ ಕುರುಡಿನ ಆತ್ಮವಂಚನೆಯ ಪ್ರತಿಕ್ರಿಯೆ ವಿಚಾರಶಕ್ತಿಯುಳ್ಳ ಬಶೀರರಿಂದ ಬರುತ್ತಿರುವುದು ಆಶ್ಚರ್ಯ. ಸಣ್ಣಮಕ್ಕಳು ತಮ್ಮ ಸಮಾಧಾನಕ್ಕೆ ಅನುಕೂಲವಾಗಿ ತಮ್ಮ ಬಗ್ಗೆ ತಾವೇ ಎನೇನೋ ತಪ್ಪು ಕಲ್ಪನೆಗಳನ್ನ ಇಟ್ಟುಕೊಂಡ ಹಾಗೆ ಬಾಲಿಶವಾಗಿದೆ ನಿಮ್ಮ ಈ "ಸಮರ್ಥನೆ". ಮದ್ರಸ-ಮುಲ್ಲಗಳು ಮೊದಲು ಬಂದವರೋ ಪ್ರಭಾಕರಭಟ್ಟ ಮೊದಲು ಹುಟ್ಟಿದ್ದೋ? ಸುಧಾರಣೆಯನ್ನು ವಿರೋಧಿಸುವ ಒಂದು ಸಮುದಾಯವನ್ನ ಒಳಗಿನಿಂದ ತಿದ್ದೋದು ಬಿಟ್ಟು ಹೊರಗಿನವರನ್ನು ದೂರಿ ಏನು ಪ್ರಯೋಜನ ಬಶೀರರೇ? ದುಃಖದ ಸಂಗತಿಯೆಂದರೆ ನಿಮ್ಮ ಇತ್ತೀಚಿನ ಲೇಖನಗಳು ಪರ್ದಾ-ಬುರ್ಖಾ-ಸ್ಕಾರ್ಫ್ ಎಲ್ಲದಕ್ಕೂ ಪ್ರೊತ್ಸಾಹ ನೀಡುವ ಧೋರಣೆಯದ್ದಾಗಿರುವುದು.. ಮುಸ್ಲಿಮರಿಗೆ ನಿಜವಾದ ನಾಯಕರಾಗಬೇಕಾದ ಮಾದರಿಯಾಗಿ ತಿದ್ದಬೇಕಾದ ಮುಸ್ಲಿಮರಲ್ಲಿಯ ನಿಮ್ಮಂಥಾ ಪ್ರಜ್ನಾವಂತರೇ ಮುಸ್ಲಿಮರನ್ನು ಹೀಗೆ ಹಾದಿ ತಪ್ಪಿಸೋದಾ?

  ReplyDelete