Thursday, March 14, 2013

ಜಾಗೃತವಾಗಲಿ ಮಹಿಳಾ ಜಾತಿಯ ಓಟ್ ಬ್ಯಾಂಕ್!

 ಅದು ವಿ.ಪಿ. ಸಿಂಗ್ ತಮ್ಮ ಚಕ್ರ ಓಡಿಸುತ್ತಿದ್ದ ಕಾಲ. ದೇಶಾದ್ಯಂತ ಜನತಾದಳ ಹೊಸ ಗಾಳಿ ಯನ್ನು ಬೀಸುತ್ತಿತ್ತು. ಇಡೀ ದೇಶ ಮತ್ತೆ ತೃತೀಯ ಶಕ್ತಿಯೊಂದರ ಉದಯದ ಆಗಮನದಲ್ಲಿತ್ತು. ನನ್ನ ತಂದೆ ಅಪ್ಪಟ ಕಾಂಗ್ರೆಸ್. ಇಂದಿರಾಗಾಂಧಿಯ ಭೂಸುಧಾರಣೆಯಲ್ಲಿ ತನ್ನ ಭೂಮಿಯನ್ನೆಲ್ಲ ಕಳೆದುಕೊಂಡವರು ಕೂಡ ನನ್ನ ಅಪ್ಪನೇ. ಆದರೆ ಕಾಂಗ್ರೆಸ್‌ನಿಂದ ಅವರು ಕದಲಿರಲಿಲ್ಲ. ಇಂದಿರಾ ಗಾಂಧಿಯ ಅಪ್ಪಟ ಅಭಿಮಾನಿ. ಆಗ ಹೊಸ ತಲೆಮಾರಿನ ನಾವು ಮೆಲ್ಲಗೆ ಚಕ್ರದ ಮೇಲೆ ಭರವಸೆ ತಾಳಿದ್ದೆವು. ಮನೆಯಲ್ಲಿ ತಾಯಿಯೊಂದಿಗೆ ಹೇಳಿದೆ “ಅಮ್ಮ ನಿನ್ನ ಓಟು ಯಾರಿಗೆ?”
ತಾಯಿ ನಕ್ಕು ಹೇಳಿದ್ದಳು “ಮತ್ಯಾರಿಗೆ? ಇಂದಿರಾಗಾಂಧಿಗೆ”
“ಇಂದಿರಾಗಾಂಧಿ ಸತ್ತು ಎಷ್ಟೋ ವರ್ಷ ಆಗಿದೆ...ನೀನು ಓಟು ಹಾಕಿದರೂ ಇಂದಿರಾ ಗಾಂಧಿ ಪ್ರಧಾನಿಯಾಗುವುದಿಲ್ಲ. ಈಗ ಇರುವುದು ಅವಳ ಮಗ”
“ತಾಯಿ ಸತ್ತಳೆಂದು ಅವಳ ಅನಾಥ ಮಗುವನ್ನು ಕೈ ಬಿಡುವುದಕ್ಕಾಗುತ್ತದ?” ಅಮ್ಮ ಕೇಳಿದಳು. ಅವಳ ಮಾತಿನ ಧ್ವನಿಯಲ್ಲಿ ಆತಂಕವಿತ್ತು. ಒಬ್ಬ ತಾಯಿ ಆಡಬಹುದಾದ ಮಾತನ್ನೇ ಅವಳು ಆಡಿದ್ದಳು.
“ಅವರೆಲ್ಲ ಕಳ್ಳರು. ಈ ಬಾರಿ ನೀನು ಕೈಗೆ ಓಟು ಹಾಕ್ಬೇಡ. ಚಕ್ರಕ್ಕೆ ಹಾಕು” ಎಂದೆ.
“ನಿನ್ನ ಅಪ್ಪ ಯಾವುದಕ್ಕೆ ಹಾಕು ಅಂತ ಹೇಳ್ತಾರ, ಅದಕ್ಕೆ ಹಾಕ್ತೇನೆ” ಎಂದಳು ಅಮ್ಮ.
“ಅಪ್ಪನಿಗೆ ಎಂತ ಗೊತ್ತುಂಟು. ಅಕ್ಕಿಯ ರೇಟು ಎಷ್ಟೂಂತ ಗೊತ್ತುಂಟಾ...ನಾಳೆ ನಾನು ಕಾಲೇಜು ಮುಗಿಸಿ ಒಳ್ಳೆಯ ಉದ್ಯೋಗಕ್ಕೆ ಸೇರಬೇಕಾದ್ರೆ ನೀನು ಚಕ್ರಕ್ಕೆ ಓಟು ಹಾಕಬೇಕು. ಕೈಗೆ ಓಟು ಹಾಕಿದರೆ, ನಿನ್ನ ಮಗ ಬೀದಿ ಯಲ್ಲಿರಬೇಕಾಗುತ್ತದೆ...” ನಾನು ಸೆಂಟಿಮೆಂಟ್ ಮಾತನಾಡಿದೆ.
ಅಂತೂ ಇಂತೂ ಇಡೀ ದಿನ ತಲೆ ತಿಂದು ಅವಳನ್ನು ಚಕ್ರಕ್ಕೆ ಮತ ಹಾಕಲು ಒಪ್ಪಿಸಿದೆ.
ಅಂದು ಓಟು ಹಾಕಿ ಬಂದ ರಾತ್ರಿ ತಾಯಿಯಲ್ಲಿ ಕೇಳಿದೆ “ಸತ್ಯ ಹೇಳು, ಯಾವುದಕ್ಕೆ ಓಟು ಹಾಕಿದ್ದು”
ಅಮ್ಮ ಮೌನವಾಗಿ ಅವಳ ಅಡುಗೆ ಕೆಲಸದಲ್ಲಿ ತಲ್ಲೀನಳಾಗಿದ್ದಳು.
“ಓಹೋ...ಕೈಗೆ ಓಟು ಹಾಕಿದ್ದು ಅಲ್ವಾ?” ಕೇಳಿದೆ.
ಅಮ್ಮ ಬಾಯಿ ಬಿಟ್ಟಳು. “ಓಟಿನ ಪೇಪರ್ ಬಿಡಿಸಿದೆ. ಅಲ್ಲಿ ನಿನ್ನ ಚಕ್ರ ನನಗೆ ಕಾಣಲೇ ಇಲ್ಲ....ತುಂಬಾ ಹುಡುಕಿದೆ. ನನಗೆ ಕೈ ಎದ್ದು ಕಂಡಿತು. ಅದಕ್ಕೇ ಒತ್ತಿದೆ. ಎಷ್ಟಿದ್ರೂ ಪಾಪ ಇಂದಿರಾಗಾಂಧಿಯ ಮಗ ಅಲ್ಲ...” ಎಂದು ಬಿಟ್ಟಳು.
ನಾನು ಬಾಯಿ ಮುಚ್ಚಿ ತೆಪ್ಪಗಾದೆ.

***
ಈ ದೇಶದಲ್ಲಿ ಎಲ್ಲ ಜಾತಿಗಳೂ ತಮ್ಮದೇ ಆದ ಓಟ್ ಬ್ಯಾಂಕ್‌ಗಳನ್ನು ಹೊಂದಿವೆ. ಲಿಂಗಾಯತ ಲಾಬಿ, ಒಕ್ಕಲಿಗ ಲಾಬಿ, ಅಲ್ಪಸಂಖ್ಯಾತ ಲಾಬಿ, ಬ್ರಾಹ್ಮಣ ಲಾಬಿ ಹೀಗೆ ಬೇರೆ ಬೇರೆ ಲಾಬಿಗಳು ಓಟಿನ ಸಂದರ್ಭದಲ್ಲಿ ನಿರ್ಣಾಯಕ ಪಾತ್ರವಹಿಸು ತ್ತವೆ. ಆದರೆ ಅತಿ ದೊಡ್ಡ ಓಟ್ ಬ್ಯಾಂಕ್ ಆಗಬಹುದಾದ ಮಹಿಳೆಯರು ಮಾತ್ರ ಯಾಕೆ ಇನ್ನೂ ಲಾಬಿ ನಡೆಸುವಷ್ಟು ಸಮರ್ಥವಾಗಿ ದೇಶದಲ್ಲಿ ಬೆಳೆದಿಲ್ಲ? ಅದಕ್ಕೆ ಸುಲಭವಾದ ಉತ್ತರವೆಂದರೆ, ಮಹಿಳೆಯೆನ್ನುವ ಪ್ರತ್ಯೇಕ ಲಾಬಿ ಅಗತ್ಯವಿಲ್ಲ.ಒಕ್ಕಲಿಗ, ಲಿಂಗಾಯತ, ಮುಸ್ಲಿಮ್, ಬ್ರಾಹ್ಮಣ ಲಾಬಿಗಳಲ್ಲಿ ಪರೋಕ್ಷವಾಗಿ ಮಹಿಳೆಯೂ ಸೇರ್ಪಡೆಯಾಗಿ ಬಿಡುತ್ತಾಳೆ ಎನ್ನುವುದಾಗಿದೆ. ಆದರೆ ಜಾತಿ ಲಾಬಿಗಳಲ್ಲಿ ಮಹಿಳೆ ಹೊರಗುಳಿ ಯುತ್ತಾಳೆ ಎನ್ನುವ ಸತ್ಯ ತಿಳಿಯದವರು ಯಾರೂ ಇಲ್ಲ. ಇಲ್ಲಿ ಲಿಂಗಾಯತ, ಬ್ರಾಹ್ಮಣ, ಮುಸ್ಲಿಮ್, ದಲಿತ ಎನ್ನುವುದೆಲ್ಲ ಪುರುಷರಿಗೆ ಸಂಬಂಧಿಸಿದ್ದು.ಅದು ಖಂಡಿತವಾಗಿಯೂ ಮಹಿಳೆಯನ್ನು ಪ್ರತಿನಿಧಿಸಲಾರವು. ಯಾಕೆಂದರೆ ಇಲ್ಲಿ ಹತ್ತು ಹಲವು ಜಾತಿಗಳಿರಬಹುದು, ಧರ್ಮಗಳಿರ ಬಹುದು. ಆದರೆ ಅಂತಿಮವಾಗಿ ಮಹಿಳೆಯ ಸ್ಥಿತಿ ಎಲ್ಲ ಜಾತಿಗಳಲ್ಲೂ  ಒಂದೇ ಥರವಾಗಿರುತ್ತದೆ. ಬ್ರಾಹ್ಮಣ ಮಹಿಳೆ, ಒಕ್ಕಲಿಗ ಮಹಿಳೆ, ಲಿಂಗಾಯತ ಮಹಿಳೆ, ಮುಸ್ಲಿಮ್ ಮಹಿಳೆ, ದಲಿತ ಮಹಿಳೆ ಇವರೆಲ್ಲರದೂ ಸಮಾನ ಸ್ಥಾನಮಾನ.ಮನುಧರ್ಮ ವ್ಯವಸ್ಥೆಯಲ್ಲಿ ಹೆಣ್ಣು ಬ್ರಾಹ್ಮಣ ಧರ್ಮದಲ್ಲಿ ಹುಟ್ಟಿದರೂ ಆಕೆ ಶೂದ್ರಳೇ. ಭಾರತದಲ್ಲಿ ಮಹಿಳೆಯರೆಲ್ಲರೂ ದಲಿತರೇ. ಆದ್ದರಿಂದ, ಈ ಸ್ಥಿತಿಯಿಂದ ಪಾರಾಗಬೇಕಾದರೆ ಮಹಿಳೆಯರ ಓಟ್ ಬ್ಯಾಂಕ್ ಒಂದು ಭಾರತದಲ್ಲಿ ಸೃಷ್ಟಿಯಾಗಲೇ ಬೇಕು. ಅಥವಾ ಈಗ ಇರುವ ಮಹಿಳಾ ಮತಗಳನ್ನು ಗುರುತಿಸುವ ಕೆಲಸವನ್ನು ರಾಜಕಾರಣಿಗಳು ಮಾಡಬೇಕು. ಮಹಿಳೆಯರಿಗೂ ಪ್ರತ್ಯೇಕ ಅಸ್ತಿತ್ವವಿದೆ. ಪುರುಷ ಒಂದು ಪಕ್ಷಕ್ಕೆ ಬೆಂಬಲ ಕೊಟ್ಟಾಕ್ಷಣ ಮಹಿಳೆ ಅದೇ ಪಕ್ಷವನ್ನು ಹಿಂಬಾಲಿಸ ಬೇಕಾಗಿಲ್ಲ. ಈ ದೇಶದ ಸಮಸ್ಯೆಗಳು, ಬೆಲೆಯೇರಿಕೆ, ವರ್ಗ, ಜಾತಿ ಸಮಸ್ಯೆ ಪುರುಷ ರಿಗಿಂತಲೂ ಹೆಚ್ಚು ಘಾಸಿಗೊಳಿಸುವುದು ಮಹಿಳೆಯನ್ನು. ಆದುದರಿಂದ ತನ್ನ ಸ್ಥಾನಮಾನ ವನ್ನು ಕಾಪಾಡಿಕೊಳ್ಳಬೇಕಾದರೆ ಈ ದೇಶದಲ್ಲಿ ಮಹಿಳಾ ಲಾಬಿ, ಮಹಿಳಾ ಓಟ್ ಬ್ಯಾಂಕ್ ಸೃಷ್ಟಿಯಾಗಲೇ ಬೇಕಾಗಿದೆ.

ಕಾಂಗ್ರೆಸ್‌ನ ಸಾಂಪ್ರದಾಯಿಕ ಮತದಾರರೆಲ್ಲ ಬಹಳಷ್ಟು ಮಹಿಳೆಯರು. ಅದಕ್ಕೆ ಮುಖ್ಯ ಕಾರಣ ಇಂದಿರಾಗಾಂಧಿ. ನನ್ನ ಊರಿನಲ್ಲಿ ಒಬ್ಬ ಅಜ್ಜಿಯಿದ್ದಳು. ಆಕೆ ಇಂದಿರಾಗಾಂಧಿಯ ಅಪ್ಪಟ ಅಭಿಮಾನಿ. ಮಾತು ಮಾತಿಗೆ ಇಂದಿರಾ ಗಾಂಧಿಯ ಕುರಿತು ಮಾತನಾಡುವವರು. ಅದಕ್ಕೊಂದು ಕಾರಣವಿದೆ. ಇಂದಿರಾಗಾಂಧಿ ಕೊಕ್ಕಡ ಎನ್ನುವ ಪ್ರದೇಶಕ್ಕೆ ಬಂದಿದ್ದರಂತೆ. ಅಂದು ಇಂದಿರಾಗಾಂಧಿಗೆ ಈ ಅಜ್ಜಿ ಹಾರವನ್ನು ಹಾಕಿದ್ದರು. ಆ ಬಳಿಕ ಬಿಜೆಪಿ, ದಳ, ಜೆಡಿಎಸ್ ಯಾರೇ ಬರಲಿ ಆಕೆ ಉಗಿದು ಕಳಿಸುವವಳು. ಇಂದಿರಾಗಾಂಧಿ ಆಕೆಯ ಸರ್ವಸ್ವವಾಗಿದ್ದಳು. ಗ್ರಾಮೀಣ ಪ್ರದೇಶದಲ್ಲಿ ನೀವು ಹಳೆಯ ಮನುಷ್ಯರ ಜೊತೆ ವಾಜಪೇಯಿ, ಲಾಲ್‌ಬಹದೂರ್ ಶಾಸ್ತ್ರಿ, ಅಡ್ವಾಣಿ ಎಂದು ಮಾತನಾಡಿ. ಅವರಿಗೆ ಅದು ಅರ್ಥವಾಗುವು ದಿಲ್ಲ. ಒಮ್ಮೆ ಇಂದಿರಾಗಾಂಧಿಯ ಹೆಸರನ್ನು ಕೇಳಿ ನೋಡಿ. ಅವರ ಮುಖ ಅರಳಿ ಬಿಡುತ್ತದೆ. ಈ ದೇಶವನ್ನು ಇಂದಿಗೂ ಆಳುತ್ತಿರುವುದು ಇಂದಿರಾಗಾಂಧಿಯೇ ಎಂದು ತಿಳಿದುಕೊಂಡ ಅಜ್ಜಿಯಂದಿರು ಎಷ್ಟೋ ಇದ್ದಾರೆ.

ಒಬ್ಬ ಮಹಿಳೆ ಈ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರ ಮೇಲೆ ಬೀರಿದ ಪ್ರಭಾವವನ್ನು ನೆನೆದಾಗ ಅಚ್ಚರಿಯಾಗುತ್ತದೆ. ತಿಳಿದೋ ತಿಳಿಯದೆಯೋ ಮಹಿಳೆಯರ ಓಟ್ ಬ್ಯಾಂಕ್‌ನ್ನು ಇಂದಿರಾ ಗಾಂಧಿ ದೋಚಿದ್ದರು. ಆದರೆ ಇಂದಿರಾ ಗಾಂಧಿಯ ಬಳಿಕ ಅದು ಯಾರಿಗೂ ಸಾಧ್ಯ ವಾಗಲಿಲ್ಲ. ಆ ಬಳಿಕ ಈ ದೇಶದಲ್ಲಿ ಗಂಡ ಹೇಳಿದ ಪಕ್ಷಕ್ಕೆ ಒತ್ತಿದ್ದೇ ಹೆಚ್ಚು.ಕರಾವಳಿಯಲ್ಲಿ ಅಳಿಯ ಕಟ್ಟು ವ್ಯವಸ್ಥೆಯ ಕುಟುಂಬ ಪದ್ಧತಿಯಿದೆ. ಇಲ್ಲಿ ಆಸ್ತಿಯ ಹಕ್ಕು ಹೆಣ್ಣಿಗೆ ಮತ್ತು ಅಳಿಯನಿಗೇ ಹೋಗುತ್ತದೆ. ಬಂಟ ಸಮಾಜದಲ್ಲಿ ಹೆಣ್ಣು ಪ್ರಾಬಲ್ಯವನ್ನು ಮೆರೆದಿದ್ದಾಳೆ. ಆದರೂ ರಾಜಕೀಯ ವ್ಯವಸ್ಥೆ ಮಹಿಳೆಯನ್ನು ಓಟಾಗಿ ಗುರುತಿಸಿದ್ದು ಕಡಿಮೆ. ಅವಳನ್ನು ಪುರುಷರಿಂದ ಪ್ರತ್ಯೇಕವಾಗಿ ನೋಡಿ, ಅವರಲ್ಲಿ ಜಾಗೃತಿಯನ್ನು ಮೂಡಿಸಿ ತಮ್ಮ ಪಕ್ಷದ ಓಟ್ ಬ್ಯಾಂಕಾಗಿ ಪರಿವರ್ತಿಸುವ ಆಸಕ್ತಿ ಯಾರಲ್ಲೂ ಕಾಣುತ್ತಿಲ್ಲ.

ಬಹುಶಃ ಇಂದಿನ ರಾಜಕೀಯ ವ್ಯವಸ್ಥೆಯ ಸೋಲು ಇದು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿಗೆ ಹೋರಾಟ ನಡೆಯುತ್ತಿದೆ ನಿಜ. ಆದರೆ ಅದು ಗ್ರಾಮೀಣ ಪ್ರದೇಶದಲ್ಲಿ ಎಷ್ಟು ಮಹಿಳೆಯರಿಗೆ ತಿಳಿದಿದೆ.  ಅದು ತಮ್ಮ  ಆವಶ್ಯಕ ಗಳಲ್ಲಿ ಒಂದು ಎಂದು ಎಷ್ಟು ಮಹಿಳೆಯರು ಭಾವಿಸಿದ್ದಾರೆ? ಇಲ್ಲವೇ ಇಲ್ಲ ಎನ್ನಬಹುದು. ಬೆಲೆಯೇರಿಕೆ, ಗುಡಿಕೈಗಾರಿಕೆಗಳ ನಾಶ, ಕೋಮುಗಲಭೆ, ಜಾತೀಯತೆ ಇವೆಲ್ಲವುಗಳ ಮೊದಲ ಸಂತ್ರಸ್ತೆ ಮಹಿಳೆ. ಯಾವ ಜಾತಿಯಲ್ಲೇ ಇರಲಿ, ಧರ್ಮದಲ್ಲೇ ಇರಲಿ. ಇಂದು ಬೀಡಿ ಇಲ್ಲವಾಗಿ ನೂರಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಬೀಡಿಯನ್ನು ನೆಚ್ಚಿಕೊಂಡವರಲ್ಲಿ ಬಹುತೇಕ ಮಹಿಳೆಯರೇ ಆಗಿದ್ದಾರೆ.
ಗಂಡನ ಹಂಗಿಲ್ಲದೆ ಬೀಡಿಯನ್ನು ನಂಬಿ ಬದುಕು ಕಟ್ಟಿಕೊಂಡ ನೂರಾರು ಮಹಿಳೆಯರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅವರನ್ನು ಜಾಗೃತಗೊಳಿಸಿದರೆ ಇಂದು ಮಹಿಳೆ ಪ್ರಬಲ ಓಟ್ ಬ್ಯಾಂಕ್ ಆಗುತ್ತಾಳೆ ಮಾತ್ರವಲ್ಲ, ಯಾವ ಸರಕಾರ ಆರಿಸಿ ಬರಬೇಕು ಎನ್ನುವುದರಲ್ಲಿ ಮಹಿಳೆ ನಿರ್ಣಾಯಕ ಪಾತ್ರ ವಹಿಸುತ್ತಾಳೆ.

ಉಳ್ಳಾಲದ ಗಲಭೆಯ ಸಂದರ್ಭದಲ್ಲಿ ಹಲವು ಅಮಾಯಕ ಮುಸ್ಲಿಮರನ್ನು ಮನೆಮನೆಯಿಂದ ಎತ್ತಿ ಬಳ್ಳಾರಿ ಜೈಲಿಗೆ ಹಾಕಲಾಯಿತು. ಆ ಸಂದರ್ಭದಲ್ಲಿ ಒಂದು ಮನೆಗೆ ಭೇಟಿ ಮಾಡಿದ್ದೆ. ಅಲ್ಲಿನ ಇಬ್ಬರು ಗಂಡಸರೂ ಜೈಲು ಪಾಲಾಗಿ ದ್ದರು. ಮುಸ್ಲಿಮ್ ಮಹಿಳೆ ಆಕ್ರೋಶದಿಂದ ಹೇಳಿದ್ದರು “...ಮಕ್ಕಳು ಓಟು ಕೇಳಲು ಬರುತ್ತಾರಲ್ಲ...ಆಗ ಕಲಿಸುತ್ತೇವೆ....ಹಿಡಿಸೂಡಿ ರೆಡಿ ಮಾಡಿ ಇಟ್ಟಿದ್ದೇನೆ...” ಅವಳ ಆಕ್ರೋಶದ ಹಿಂದೆಯೇ ಒಂದು ರಾಜಕೀಯ ನಿರ್ಧಾರ ಗಟ್ಟಿಗೊಳ್ಳುತ್ತಿರುವುದನ್ನು ನಾನು ಕಂಡಿದ್ದೆ. ಇಂದಿಗೂ ಮಹಿಳಾ ಪ್ರಾಬಲ್ಯವಿರುವ ಕಾಲನಿಗಳಿಗೆ ಹೋಗಲು ರಾಜಕಾರಣಿಗಳು ಹೆದರುತ್ತಾರೆ. ಯಾಕೆಂದರೆ ಅವರು ಮುಖಕ್ಕೆ ಹೊಡೆದಂತೆ ಮಾತನಾಡುತ್ತಾರೆ ಎಂಬ ಭಯ.

ಸ್ಥಳೀಯ ಚುನಾವಣೆಯಲ್ಲಿ ತಮ್ಮ ತಮ್ಮ ಕ್ಷೇತ್ರದಲ್ಲಿ ಯಾರು ಆರಿಸಿಬರಬೇಕು ಎನ್ನುವುದನ್ನು ಬಹುತೇಕ ನಿರ್ಧರಿಸುವುದು ಮಹಿಳೆಯರೇ ಆಗಿದ್ದಾರೆ. ಬಾವಿ, ನೀರು, ರೇಶನ್ ಕಾರ್ಡ್ ವೊದಲಾದ ಸಮಸ್ಯೆಗಳಿಗೆ ಯಾವ ಸ್ಥಳೀಯ ಸ್ಪಂದಿಸುತ್ತಾನೆ ಎನ್ನುವುದು ಪುರುಷರಿಗಿಂತ ಜಾಸ್ತಿ ಮಹಿಳೆಯರಿಗೆ ಗೊತ್ತು. ದುರದೃಷ್ಟವಶಾತ್ ಇದನ್ನು ಆರೆಸ್ಸೆಸ್ ಮನಗಂಡಿದೆ. ಇಂದು ತನ್ನ ಪರಿವಾರದಲ್ಲಿ ದುರ್ಗಾವಾಹಿನಿ ಸೇರಿದಂತೆ ಮಹಿಳೆಯರ ವಿವಿಧ ಶಾಖೆಗಳನ್ನು ಕಟ್ಟಿಕೊಂಡು ಮಹಿಳೆಯರಲ್ಲಿ ಕೋಮುವಾದವನ್ನು ತುಂಬುವಲ್ಲಿ ಯಶಸ್ವಿಯಾಗುತ್ತಿದೆ. ಮಹಿಳೆಯರನ್ನು ಸತ್ಯನಾರಾಯಣ ಪೂಜೆ, ಬೇರೆ ಬೇರೆ ವ್ರತಗಳ ಹೆಸರಿನಲ್ಲಿ ದೇವಸ್ಥಾನಗಳಿಗೆ ಕರೆಸಿ, ಅಲ್ಲಿ ಅವರಲ್ಲಿ ಕೋಮುವಾದಿ ವಿಚಾರಗಳನ್ನು ತುಂಬುವಲ್ಲಿ ಸಂಘಪರಿವಾರ ಯಶಸ್ವಿಯಾಗುತ್ತಿದೆ. ಕರಾವಳಿಯಲ್ಲಿ ಬಿಜೆಪಿಯ ಗೆಲುವಿಗೆ ಇದೂ ಒಂದು ಕಾರಣ. ಧರ್ಮಸ್ಥಳದ ಗ್ರಾಮೀಣಾಭಿವೃದ್ಧಿ ಯೋಜನೆ ಎಲ್ಲೆಲ್ಲ ವಿಸ್ತರಿಸಿದೆಯೋ ಅಲ್ಲೆಲ್ಲ ಬಿಜೆಪಿ ಮತ್ತು ಆರೆಸ್ಸೆಸ್ ಮಹಿಳೆಯರ ಬ್ರೈನ್ ವಾಶ್ ಮಾಡಿಸು ತ್ತಿದೆ.  ಇದರಿಂದಾಗಿಯೇ, ಅದೆಷ್ಟು ಭ್ರಷ್ಟಾಚಾರ ನಡೆಯಲಿ, ಭಿನ್ನಮತ ಮೆರೆಯಲಿ ಬಿಜೆಪಿಯ ಮತಗಳು ಅಲುಗಾಡುವುದು ಕಷ್ಟಕರವಾಗುತ್ತಿದೆ.

ಎಲ್ಲ ಜಾತಿ, ಧರ್ಮದಿಂದ ಪ್ರತ್ಯೇಕಿಸಿ ಮಹಿಳೆಯನ್ನೇ ಒಂದು ಜಾತಿ ಎಂದು ಪರಿಗಣಿಸಿ ಅವರನ್ನು ಓಟ್ ಬ್ಯಾಂಕಾಗಿ ರಾಜಕೀಯ ಪಕ್ಷಗಳು ಪರಿವರ್ತಿಸಬೇಕು. ಮಹಿಳೆಯರು ರಾಜಕೀಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವಂತಾಗಬೇಕು. ಆಗ ಮಹಿಳೆಯರ ಬದುಕಿನಲ್ಲೂ ಸುಧಾರಣೆಯಾಗುತ್ತೆ. ಸಮಾಜ ದಲ್ಲೂ ಸುಧಾರಣೆಯಾಗತ್ತೆ. ಇದರ ಬಳಿಕ ನಾವು ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ.30 ಮೀಸಲಾತಿ ಕೊಡಬೇಕೋ ಅಥವಾ ಶೇ.೫೦ ಕೊಡಬೇಕೋ ಎನ್ನುವುದನ್ನು ನಿರ್ಣಯಿಸಬಹುದಾಗಿದೆ.

1 comment:

  1. ಬಶೀರ್, ಮಹಿಳೆಯರ ಬಗೆಗಿನ ನಿಮ್ಮ ಕಾಳಜಿ ಬಹಳ ಮೆಚ್ಚುವಂಥದ್ದೇ. ಬಹುಶಃ ಈ ಸಂದರ್ಭದಲ್ಲಿ ನೀವು ಜಾಣ ಮರೆವಿಗೆ ಒಳಗಾಗಿದ್ದೀರೆಂದೆನಿಸುತ್ತಿದೆ. ಈ ಪ್ರಪಂಚದಲ್ಲಿ ಮಹಿಳೆಯರನ್ನು ಅತಿ ಹೆಚ್ಚು ಶೋಷಿಸುತ್ರಿರುವ ಒಂದು ವರ್ಗವಿದೆಯೆಂದಾದರೆ, ಅದು ಕೇವಲ ಮತ್ತು ಕೇವಲ ಮುಸ್ಲಿಂ ಗಂಡಸರದ್ದು. ಇದು ಧಾರ್ಮಿಕ ವಿಷಯಕ್ಕಾಗಿ ಹೇಳುತ್ತಿರುವುದಲ್ಲ, ಆದರೆ ಮಹಿಳೆಯನ್ನು ಕೇವಲ ತನ್ನ ಅಡಿಯಾಳಾಗಿ ಬಳಸುತ್ತಿರುವ ಇತರ ಧರ್ಮವನ್ನು ನಾನು ಕಂಡಿಲ್ಲ. ಮೊದಲು ನಿಮ್ಮ ಸಹೋದರರಿಗೆ ಈ ವಿಷಯವನ್ನು ಮನಗಾಣಿಸುತ್ರೀರಾ? ನಾವು ಸಮಾಜವನ್ನು, ದೇಶ, ಪ್ರಪಂಚವನ್ನು ಶುಚಿಗೊಳಿಸುವುದಕ್ಕಿಂತ ನಮ್ಮ ಮನೆಯನ್ನು ಸ್ವಚ್ಛಗೊಳಿಸಲು ಸಾಧ್ಯ. ಅದು ಸುಲಭ ಕೂಡಾ. ನಂತರವಷ್ಟೇ ಇತರ ಸಂಗತಿಗಳತ್ತ ಗಮನಹರಿಸಿದರೆ ಅದಕ್ಕೊಂದು ಸಾರ್ಥಕ್ಯವಿರುತ್ತದೆ. ಏನಂತೀರಿ?
    -Ramesh Kaikamba

    ReplyDelete