Tuesday, December 18, 2012

ಬೆಂಕಿ ಮತ್ತು ಇತರ ಕತೆಗಳು

ಕಣ್ಣು
ತನ್ನ ಕುರುಡ ಮಗನಲ್ಲಿ ತಾಯಿ ಹೇಳಿದಳು
‘‘ನಾನು ಬೇಗ ಸಾಯ್ತೇನೆ. ಸತ್ತ ಬಳಿಕ ನನ್ನೆರಡು ಕಣ್ಣುಗಳನ್ನು ನೀನು ತೆಗೆದುಕೊ...’’
ಕುರುಡು ಮಗ ವಿಷಾದದಿಂದ ಹೇಳಿದ
‘‘ನನ್ನ ತಾಯಿಯನ್ನು ಕೊಟ್ಟು ಎರಡು ಕಣ್ಣುಗಳನ್ನು ಖರೀದಿಸುವಷ್ಟು ಕುರುಡುತನ ನನ್ನದಲ್ಲ...ಈಗಾಗಲೇ ನಿನ್ನ ಕಣ್ಣಿನ ಮೂಲಕ ನಾನು ಜಗತ್ತನ್ನು ನೋಡುತ್ತಿದ್ದೇನೆ...’’

ಬೆಂಕಿ
ಗ್ಯಾಸ್ ಸಿಲಿಂಡರ್‌ಗೆ ಸಬ್ಸಿಡಿ ನಿರಾಕರಣೆಯಾದದ್ದೇ...ಒಬ್ಬ ಅಸಹಾಯಕನಾಗಿ ಗೊಣಗಿದ ‘‘ಇನ್ನು ನಾನು ಗಂಜಿ ಬೇಯಿಸುವುದು ಯಾವುದರಿಂದ?’’
ಪಕ್ಕದಲ್ಲೇ ಇದ್ದ ಶ್ರೀ ಸಾಮಾನ್ಯ ನಿಟ್ಟುಸಿರಿಟ್ಟು ಉತ್ತರಿಸಿದ ‘‘ಒಡಲೊಳಗೆ ಧಗಿಸುತ್ತಿರುವ ಬೆಂಕಿಯಿಂದ’’

ಊಟ
ಸಚಿವೆ ಹೇಳಿದಳು ‘‘600 ರೂಪಾಯಿ ಇದ್ದರೆ ಐದು ಜನರಿರುವ ಕುಟುಂಬ ಒಂದು ತಿಂಗಳು ಊಟ ಮಾಡಬಹುದು’’
ಮರುದಿನ ಬೆಳಗ್ಗೆ ಶಾಲೆಗೆ ಹೋಗುವ ತನ್ನ ಪುಟಾಣಿ ಮಗಳಿಗೆ ‘ಒಂದು ಸಾವಿರ ರೂಪಾಯಿಯನ್ನು’ ಪಾಕೆಟ್ ಮನಿ ಎಂದು ಕೊಟ್ಟಳು.

ಬದುಕು
‘‘ಬದುಕುವ ಕಲೆ’’ ಎಂಬ ಪುಸ್ತಕವನ್ನು ತಂದು ಅವನು ಓದ ತೊಡಗಿದ.
ಪುಸ್ತಕದಲ್ಲಿ ಮೊದಲ ಪುಟದಲ್ಲೇ ಸಲಹೆಯಿತ್ತು ‘‘ಬದುಕನ್ನು ಪುಸ್ತಕ ಓದಿ ಕಲಿಯಬೇಡಿ, ಬದುಕಿ ಕಲಿಯಿರಿ’’

ಜಾಮೀನು
ಅದು ಜನಾರ್ದನ ಪೂಜಾರಿಯವರು ಹಣಕಾಸು ಸಚಿವರಾಗಿದ್ದ ಕಾಲ.
ಸಾಲಮೇಳ ಘೋಷಣೆಯಾಗಿದ್ದೂ ಅದೇ ಕಾಲದಲ್ಲಿ. ಜನಸಾಮಾನ್ಯರಿಗೆ ಬ್ಯಾಂಕ್‌ನ ಮೆಟ್ಟಿಲು ಏರುವ ಸ್ವಾತಂತ್ರ ಸಿಕ್ಕಿದ್ದು ಆಗ.
ರೈತನೊಬ್ಬ ದನ ಕೊಳ್ಳಲು ಸಾಲ ಕೇಳಲು ಬ್ಯಾಂಕ್‌ಗೆ ಹೋದ.
ಮ್ಯಾನೇಜರ್ ಗುರಾಯಿಸಿ ಕೇಳಿದರು ‘‘ಜಾಮೀನು ಯಾರು ಕೊಡ್ತಾರೆ?’’
ರೈತ ಹೇಳಿದ ‘‘ಜನಾರ್ದನ ಪೂಜಾರಿ’’

ಕುರುಡ
ಕುರುಡ ಮಗುವೊಂದು ಸಂತೆಯಲ್ಲಿ ಕಳೆದು ಹೋಯಿತು.
ತಾಯಿ ಎಲ್ಲೆಡೆ ಹುಡುಕ ತೊಡಗಿದಳು.
ಊಹುಂ...ಪತ್ತೆಯಿಲ್ಲ.
ಕಟ್ಟ ಕಡೆಗೆ ತನ್ನೆರಡು ಕಣ್ಣುಗಳನ್ನು ಮುಚ್ಚಿಕೊಂಡಳು.
ದಟ್ಟ ಕತ್ತಲೆ....
ನೋಡು ನೋಡುತ್ತಿದ್ದಂತೆಯೇ ಆ ದಟ್ಟ ಕತ್ತಲೆಯನ್ನು ಸೀಳಿಕೊಂಡು ಮಗ ನಡೆದು ಬರುತ್ತಿರುವುದನ್ನು ಅವಳು ಕಂಡಳು.

ವರ್ಚಸ್ಸು
ಅವನು ಕಚೇರಿಗೆ ಬಂದ ಹೊಸ ಎಂಡಿ
‘‘ಕೋಣೆಗೆ ಎಸಿ ಯಾಕೆ ಹಾಕಿಲ್ಲ’’ ಎಂದು ಸಹಾಯಕನಲ್ಲಿ ಕೇಳಿದ.
‘‘ಗಾಳಿ, ಬೆಳಕು ಕಿಟಕಿಯಿಂದ ಚೆನ್ನಾಗಿ ಬರುತ್ತದೆಯೆಂದು ಹಳೆ ಎಂಡಿ ಕಿಟಕಿಯನ್ನು ಹಾಕಿಲ್ಲ’’ ಎಂದು ಸಹಾಯಕ ಉತ್ತರಿಸಿದ.
‘‘ಗಾಳಿ, ಬೆಳಕಿಗಿಂತ ನನಗೆ ನನ್ನ ವರ್ಚಸ್ಸು ಮುಖ್ಯ’’ ಹೊಸ ಎಂಡಿ ಆದೇಶಿಸಿದ.
ಕಿಟಕಿಯನ್ನು ಮುಚ್ಚಿ ಕೋಣೆಗೆ ಎಸಿ ಹಾಕಲಾಯಿತು.

ವ್ಯಾಪಾರ
 ಅವಳು ತನ್ನ ಆಗಷ್ಟೇ ಹುಟ್ಟಿದ ಕೂಸನ್ನು ಹಿಡಿದು ಕೇಳಿದಳು ‘‘ಸ್ವಾಮಿ, ಒಂದು ಸಾವಿರ ರೂಪಾಯಿ ಕೊಡಿ...ಕೂಸು ಕೊಡ್ತೇನೆ...’’
‘‘ತುಂಬಾ ಜಾಸ್ತಿಯಾಯಿತು’’
‘‘ಹಾಗಾದ್ರೆ 500 ರೂ. ಕೊಡಿ ಸಾಮಿ’’
‘‘ಅದೂ ಜಾಸ್ತಿಯಾಯಿತು...’’
‘‘ನೂರು ರೂ. ಕೊಡಿ ಸಾಮಿ’’
‘‘ಊಹುಂ...ಅದೂ ಜಾಸ್ತಿಯಾಯಿತು...’’
‘‘ಹಾಗಾದ್ರೆ...ಮಧ್ಯಾಹ್ನ ಊಟ ಕೊಡಿ...ಮಗು ಕೊಡ್ತೀನಿ...’’
‘‘ಊಹುಂ....’’
‘‘ಸರಿ...ಹಂಗಾರೆ...ಈ ಮಗುವಿಗಾದರೂ ಹಾಲು ಕುಡಿಸಿ...ತಗೊಂಡೋಗಿ...’’

ನಿರ್ಮಾಪಕ
ನಿರ್ಮಾಪಕ ಹೇಳಿದ ‘‘ನಾನು ‘ಬಡವ’ರ ಬದುಕನ್ನು ಅನುಭವಿಸಿ ಬಡವರ ಕುರಿತಂತೆ ಒಂದು ಹೊಸ ಚಿತ್ರವನ್ನು ತೆಗೆದಿದ್ದೇನೆ’’
‘‘ಹೌದಾ, ಏನಾಯ್ತು’’
‘‘ನಾನೀಗ ಬಡವನಾಗಿ ಅನುಭವಿಸುತ್ತಿದ್ದೇನೆ’’

ನನ್ನ ಕತೆ, ಕವಿತೆ ಬರಹಗಳಿಗೆ ಬಳಸಿರುವ ಹೆಚ್ಚಿನ ಚಿತ್ರಗಳು, ಪೇಂಟಿಂಗ್‌ಗಳು ಗೂಗಲ್ ಇಮೇಜ್‌ನ ಅನ್ವೇಷನೆಯಾಗಿದೆ. ನನ್ನ ಸರಕುಗಳ ತೂಕವನ್ನು ಹೆಚ್ಚಿಸಿದ ಆ ಎಲ್ಲ ಅನಾಮಿಕ ಕಲಾವಿದರಿಗೆ ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

1 comment:

  1. 'ಕುರುಡ' ಮತ್ತು 'ನಿರ್ಮಾಪಕ' ಚೆನ್ನಾಗಿವೆ..
    ಇತ್ತೀಚಿಗೆ sullivan's travels (1941)ಫಿಲ್ಮ್ ನೋಡಿದ್ದೆ. u might like it...('ನಿರ್ಮಾಪಕ' ಓದಿ ನೆನಪಾಗಿದ್ದು)
    malathi S

    ReplyDelete