Friday, July 13, 2012

ನನ್ನನ್ನು ಕಾಡಿದ ‘ಈಗ’

ಕಳೆದ ವಾರ ‘ಈಗ(ನೊಣ)’ ಎನ್ನುವ ಸುದೀಪ್ ನಟಿಸಿದ ತೆಲುಗು ಚಿತ್ರ ನೋಡಿ ಬಂದೆನಲ್ಲ.
ಆ ಗುಂಗು ಇನ್ನೂ ನನ್ನೊಳಗೆ ಹಾಗೆ ಉಳಿದಿತ್ತೇನೋ...
ಸತ್ಯ ಹೇಳುತ್ತೇನೆ...ನೀವು ನಂಬಲೇಬೇಕು....
ಇದು ನಿನ್ನೆ ರಾತ್ರಿ ನಡೆದಿದ್ದು....

ಬೆಳಗಾದದ್ದೇ ಇದನ್ನು ನಿಮ್ಮಲ್ಲಿ ಯಾವಾಗ ಹಂಚಿಕೊಂಡೇನು ಎಂದು ಓಡೋಡಿ ಬಂದು ಫೇಸ್‌ಬುಕ್ ಮುಂದೆ ಕೂತಿದ್ದೇನೆ....
ವಿಷಯ ಹೀಗಿದೆ....

ರಾತ್ರಿ 12 ಗಂಟೆಗೆ ಪತ್ರಿಕೆ ಕೆಲಸ ಮುಗಿಸಿ
ಮನೆ ಸೇರಿದ್ದೆ...
ತುಸು ಹೊತ್ತು ಟಿ.ವಿ. ನೋಡಿ ಬಳಿಕ
ಕೋಣೆಯ ಟ್ಯೂಬ್‌ಲೈಟ್ ಹಚ್ಚಿ
ಜಯಂತ ಕಾಯ್ಕಿಣಿಯ ‘ಒಂದು ಜಿಲೇಬಿ’
ಕವನ ಸಂಕಲನ ಬಿಡಿಸಿ ಕೂತೆ...

ನಂಬಿದರೆ ನಂಬಿ...ಬಿಟ್ಟರೆ ಬಿಡಿ...
ಒಂದು ನೊಣ...
ನಾನು ‘ಈಗ’ ಸಿನಿಮಾದಲ್ಲಿ ನೋಡಿದೆನಲ್ಲ
ಅಂತಹದೇ ದೊಡ್ಡ ‘ಈಗ’
ಮೂತಿಯಲ್ಲಿ ಎರಡು ಕೆಂಪು ಕಣ್ಣುಗಳು
ಗಾಜಿನ ಎರಡು ಸೀಳಿನಂತೆ
ಹೊಳೆಯುತ್ತಿರುವ ಎರಡು ರೆಕ್ಕೆಗಳು...
ನನ್ನ ಪುಸ್ತಕದ ಮೇಲೆಯೇ ಬಂದು ಕೂತಿತು...

ನಾನು ಅದೇ ಮೊತ್ತ ಮೊದಲ ಬಾರಿ
ಒಂದು ನೊಣವನ್ನು ನೋಡುತ್ತಿದ್ದೇನೆ ಎಂಬ ಭಾವನೆ...
ಬೆರಳು ಹತ್ತಿರ ತಂದರೂ ಅದು ಹಾರುತ್ತಿಲ್ಲ...
ಯಾಕಿರಬಹುದು...ಏನಿರಬಹುದು..
ಎಂದು ಒಮ್ಮೆಲೆ ಭಯಭೀತನಾದೆ

ಒಮ್ಮೆ ಅದು ತನ್ನ ಮುಂಗೈಯಿಂದ
ಮುಖ ಉಜ್ಜಿಕೊಂಡಿತು
ಮತ್ತೆ ಮೂಗಿನ ಹೊಳ್ಳೆಗೆ ಕೈ ಹಾಕಿ
ತನ್ನ ರೆಕ್ಕೆಗೆ ಅದನ್ನು ಉಜ್ಜಿಕೊಂಡಿತು
ಆಮೇಲೆ ತನ್ನೆರಡು ಕೈಗಳನ್ನು ಮುಗಿದಂತೆ ಮಾಡಿತು
ನನ್ನ ಬಳಿ ಏನನ್ನಾದರೂ ಹೇಳುವುದಕ್ಕೆ
ಪ್ರಯತ್ನಿಸುತ್ತದೆಯೇ...ಎಂದೆನಿಸಿ
ಸುಮ್ಮನೆ ಕೇಳಿದೆ ‘‘ಏನಾದರೂ ಹೇಳುವುದಕ್ಕಿದೆಯೆ, ಯಾರು ನೀನು?’’

ಅದು ಗಮನಿಸಿದಂತೆ ಕಾಣಲಿಲ್ಲ
ನನಗೆ ಕುಂಡೆ ಹಾಕಿ ಪಕ್ಕದ ಟೇಬಲ್‌ಗೆ ನೆಗೆಯಿತು.
ಆದರೂ ನನ್ನ ಸುತ್ತಲೇ ಓಡಾಡುತ್ತಿತ್ತು...

ತಲೆಯೊಳಗೆ ಗುಂಯ್ ಎಂದು ನೊಣದ ಹಾಡು...
ಯಾರಿರಬಹುದು...
ಸತ್ತು ಹೋದ ನನ್ನ ತಂದೆ, ತಾಯಿ, ಅಣ್ಣ ಯಾರೂ ಆಗಿರಲಿಕ್ಕಿಲ್ಲ...
ಈ ಹಿಂದೆ ನೊಣವಾಗಿ ಬಂದಿರುವ
ಸಾಧ್ಯತೆಯಿದ್ದರೂ ನಾನು ಗಮನಿಸಿರಲಿಕ್ಕಿಲ್ಲ..
ಆದರೆ ಇಷ್ಟು ಸಮಯದ ಬಳಿಕ ಬರುವ ಸಾಧ್ಯತೆಯೇನಿಲ್ಲ..

ಎರಡು ತಿಂಗಳ ಹಿಂದೆ ಜಗಳ ಮಾಡಿ, ಸುನಾಮಿಯಂತೆ ಸಿಡಿದೆದ್ದು
ತವರು ಬಿಟ್ಟು ಹೋದ ತಂಗಿ
ನೊಣದ ರೂಪದಲ್ಲಿ ಬಂದಿರಬಹುದೆ?
ಎಂಬ ಅನುಮಾನ...
ಬಂದರು ಬಂದಾಳು...
ನನ್ನನ್ನು ಮರೆತೇ ಬಿಟ್ಟು ವೈಭವದಿಂದ
ಬಾಳುತ್ತಿದ್ದಾನೆಯೋ ಎಂಬ ಗೂಢಚಾರಿಕೆಗಾಗಿ...

ಕಪಾಟಿನಲ್ಲಿ ನಿಧಿಯಂತೆ ನನ್ನ ಅಣ್ಣ ಬಚ್ಚಿಟ್ಟಿದ್ದ
ಪುಸ್ತಕಗಳನ್ನೆಲ್ಲ ರಾಜಾರೋಷದಿಂದ ತೆರೆದು
ಓದುತ್ತಿದ್ದೇನಲ್ಲ...ಉಳಿಸಿ ಹೋದ

ಅವನ ಹಳೆಯ ಅಂಗಿಯನ್ನೆಲ್ಲ ಧರಿಸಿಕೊಳ್ಳುತ್ತಿದ್ದೇನಲ್ಲ....
ಅದನ್ನು ನೋಡುವುದಕ್ಕಾಗಿಯೇ
ಅಣ್ಣ ನೊಣವಾಗಿ ಬಂದಿರಬಹುದೆ...
ಸಿಟ್ಟಿಗೆದ್ದಿದ್ದರೆ ‘ಈಗ’ದಂತೆ ದಾಳಿ ಮಾಡುತ್ತಿದ್ದ
ಒಂದೋ ಅವನಾಗಿರಲಿಕ್ಕಿಲ್ಲ...
ಅವನಾಗಿದ್ದರೂ ಪುಸ್ತಕ ಮುಟ್ಟಿದ್ದಕ್ಕೆ
ಅವನಿಗೆ ಸಿಟ್ಟಿಲ್ಲ ಎಂಬ ಸಮಾಧಾನ

ಸುಮಾರು ವರ್ಷಗಳ ಹಿಂದೆ
ನಾನು ಸಣ್ಣವನಾಗಿದ್ದಾಗ
ಪಕ್ಕದ ಗೆಳೆಯನ ಕಂಪಾಸುಪೆಟ್ಟಿಗೆಯಿಂದ
ನೆಲ್ಲಿಕಾಯಿ ಕದ್ದು ತಿಂದಿದ್ದೆ...
ಅವನಿಗದು ಈಗ ತಿಳಿದಿರಬಹುದೆ..
ಯಾಕೆ ತಿಂದೆಯೆಂದು ಕೇಳುವುದಕ್ಕೆ
ನೊಣದ ರೂಪದಲ್ಲಿ ಬಂದಿರಬಹುದೆ?

ಕೆಲವು ತಿಂಗಳ ಹಿಂದೆ
ತನ್ನನ್ನು ತಾನು ಖ್ಯಾತ ಕತೆಗಾರನೆಂದು,
ಕವಿಯೆಂದು ಸುಮ್ಮನೆ ನಂಬಿ
ಬರೆಯುತ್ತಿದ್ದ ಒಬ್ಬ ಹಿರಿಯನನ್ನು
ಫೋನಿನಲ್ಲಿ ಸಿಕ್ಕಾಪಟ್ಟೆ ಜಾಲಾಡಿಸಿದ್ದೆ
ಅವನೇ ಈಗ ನೊಣದ ರೂಪದಲ್ಲಿ
ಬಂದಿದ್ದಾನೆಯೆ? ನನ್ನನ್ನೇ ಹೊಂಚಿ ನೋಡುತ್ತಿದ್ದಾನೆಯೆ?

ಫೇಸ್‌ಬುಕ್ಕಿನ ನನ್ನ ಗೆಳೆಯರಲ್ಲಿ
ಒಬ್ಬ ಸುಮ್ಮನೆ ತನ್ನ ಪ್ರೊಫೈಲ್‌ನಿಂದ
ನೊಣವಾಗಿ ನೆಗೆದು
ನನ್ನ ತನಿಖೆಗೆಂದು ಬಂದಿರಬಹುದೆ?
ಅಥವಾ ಯಾವನಾದರೂ ಪ್ರೊಫೈಲ್ ಹ್ಯಾಕರ್?

ಒಮ್ಮೆಲೆ ಗಂಭೀರವಾಗಿ ಯೋಚಿಸ ತೊಡಗಿದೆ
ಬಹುಶಃ
ನನ್ನುಸಿರಿನ ಮೂಲಕ ನೊಣದ
ರೂಪದಲ್ಲಿ ಹಾರಿ ಹೋದ ನನ್ನ ಆತ್ಮ
ಇದೀಗ ನನ್ನನ್ನು ನೋಡುತ್ತಿರುವುದೇ...
ಹಾಗಾದರೆ ಆ ನೊಣವನ್ನು ನೋಡುತ್ತಿರುವ ನಾನು ಯಾರು...
ಬರೆ ಹೆಣವೆ?

್ಠಹೀಗೆಲ್ಲ ಆ ಈಗವನ್ನು
ನೋಡುತ್ತಾ ನೋಡುತ್ತಾ ನಿದ್ದೆ ಹೋದೆ
ಮೊದಲ ಜಾವ ಇದ್ದಕ್ಕಿದ್ದಂತೆಯೇ ಎಚ್ಚರ
ಹಚ್ಚಿದ ಬೆಳಕು ಹಾಗೇ ಇತ್ತು
ಈಗ ಮಾತ್ರ ಅಲ್ಲೇಲ್ಲೂ ಕಾಣಲೇ ಇಲ್ಲ...
ಅದರ ಹೆಜ್ಜೆಗುರುತುಗಳೂ ಇರಲಿಲ್ಲ
ಮಡಿಲಲ್ಲಿ ಕಾಯ್ಕಿಣಿಯವರ ‘ಒಂದು ಜಿಲೇಬಿ’
ಪಾಪ ನೊಣ ನಿಜಕ್ಕೂ ಜಿಲೇಬಿಯೆಂದು
ಹತ್ತಿರ ಬಂದು ಮೋಸ ಹೋಯಿತೆ?
ಅಂದರೆ ಅದಕ್ಕೆ ಕನ್ನಡ
ಓದುವುದಕ್ಕೆ ಬರುತ್ತಿತ್ತೆ?

್ಠಹಾಗಾದರೆ ಅದು ಯಾವುದಾದರೂ ಕನ್ನಡದ ಹಿರಿಯ ವಿಮರ್ಶಕ, ಕವಿ ಯಾಕಾಗಿರಬಾರದು?
ಕೀರ್ತಿನಾಥ ಕುರ್ತಕೋಟಿಯೇ
ನೊಣವಾಗಿ ಬಂದು ಆ ಕವಿತೆಯ ಸಾಲುಗಳನ್ನು
ಓದಿ ಮರಳಿ ಹೋಯಿತೆ?

ಅಥವಾ ಜಯಂತ ಕಾಯ್ಕಿಣಿಯೇ ನೊಣ ರೂಪದಲ್ಲಿ ಬಂದು
ತನ್ನ ಕವಿತೆಗಳನ್ನು ಓದುವುದನ್ನು ನೋಡಿ
ಖುಷಿ ಪಟ್ಟು ಹೋದರೆ?

ಇರಲಿ...ನಾಳೆ ರಾತ್ರಿ ಅದೇ ಈಗ
ಮತ್ತೆ ಬಂದರೆ ನನ್ನೊಂದಿಗೆ
ಮಾತನಾಡುತ್ತದೆ ಎನ್ನುವ ನಂಬಿಕೆ ನನಗಿದೆ....
ಹಾಗೆಂದಾದರೂ ಮಾತನಾಡಿದರೆ
ಖಂಡಿತವಾಗಿಯೂ ನಿಮ್ಮಂದಿಗೆ ಹಂಚಿಕೊಳ್ಳುವೆ!

8 comments:

 1. HA HA HA SOGASAGIDE

  ReplyDelete
 2. neevu eega chitra nodida taruvaya,nimage kaadiruva nenapugalu 'eega'roopadalli kanisikondiruvudu channagide. chitrada bagge heluvudadre 'eega' ondu kshana kapka,marquez,galivarayana mattu maleyalam vykam avra krutigallalina patragalannu kanmunde tandu nillisuttade.

  ReplyDelete
 3. ನಿಮ್ಮ ಬ್ಲಾಗ್ ಚನ್ನಾಗಿದೆ.

  ReplyDelete
 4. ಇದು ಯಾರು ಬರೆದದ್ದು? ಎಲ್ಲೋ ಈಗಾಗಲೇ ಓದಿದ ನೆನಪಾಗುತ್ತಿದೆಯಲ್ಲ. ಮಂಗಳೂರಿನ ಶೀಲಾ ಅವರದ್ದೇ? ಶೀಲಾ ಅವರ ಬ್ಲಾಗ್ ಅಡ್ರೆಸ್ ಇದ್ದರೆ ದಯಮಾಡಿ ಕಳಿಸಿ.
  ತುರುವೇಕೆರೆ ಪ್ರಸಾದ್-೯೪೪೮೬ ೭೭೫೬೦

  ReplyDelete
 5. ಮಂಗಳೂರಿನ ಶೀಲ? ನೊಣದ ರೂಪದಲ್ಲೇನಾದರು ನಿಮ್ಮ ಕನಸಲ್ಲಿ ಬಂದಿದ್ದಾರೆ....:))

  ReplyDelete
 6. EEGU Unte??? Basheer sahebre :) Lekhana tumba chennagide :)

  ReplyDelete
 7. ತುಂಬಾ ಚೆನ್ನಾಗಿ ಬರೀತೀರಿ ಸಾರ್... ಕುಶೀ ಆಯ್ತು......ಬಿ. ಎ. ಮಹಮದಾಲಿ

  ReplyDelete