Thursday, July 12, 2012

‘ಪೊನ್ನ ಕಂಠಿ’ಯೆಂಬ ‘ವಿವೇಕ’ದೊಳಗೆ ಸೇರಿಕೊಂಡ ನಕಲಿ ಮಣಿ

ಈ ಲೇಖನವನ್ನು ನಾನು ಬರೆದಿರೋದು 5 ವರ್ಷಗಳ ಹಿಂದೆ.  ಡಿಸೆಂಬರ್ 14, 2007: ರಂದು. ಯಾಕೋ ಇದು ಇಂದಿಗೂ ಪ್ರಸ್ತುತ ಅನ್ನಿಸಿ ಗುಜರಿ ಅಂಗಡಿಗೆ ಹಾಕಿದ್ದೇನೆ.  

74ನೆ ಕನ್ನಡ ಸಾಹಿತ್ಯ ಸಮ್ಮೇಳನದ ಗದ್ದಲ, ಭಜನೆಗಳು ದಿನಪತ್ರಿಕೆಗಳಲ್ಲಿ ವರದಿಯಾಗುತ್ತಿರುವ ಸಂದರ್ಭದಲ್ಲೇ ಆಕಸ್ಮಿಕವಾಗಿ ಒಂದು ಗ್ರಂಥ ನನ್ನ ಕೈ ಸೇರಿತು. ಈ ಗ್ರಂಥದ ಹೆಸರು ‘ಪೊನ್ನಕಂಠಿ’. ಅಖಿಲ ಭಾರತ 66ನೆ ಕನ್ನಡ ಸಾಹಿತ್ಯ ಸಮ್ಮೇಳನ ಮಂಗಳೂರಿನಲ್ಲಿ ನಡೆದಾಗ ಹೊರತಂದ ಸುಮಾರು 450 ಪುಟಗಳ ಸ್ಮರಣಿಕೆ ಇದು. ಕಯ್ಯಿರ ಕಿಂಞಣ್ಣ ರೈ ಸಮ್ಮೇಳನದ ಅಧ್ಯಕ್ಷರಾಗಿದ್ದುದು ಈ ಸ್ಮರಣಿಕೆಗೆ ವಿಶೇಷ ಮಹತ್ವ ತಂದಿತ್ತು. ಸ್ಮರಣಿಕೆಯ ಪ್ರಧಾನ ಸಂಪಾದಕರು ಡಾ.ಬಿ.ಎ.ವಿವೇಕ ರೈ. ಅವರೀಗ ಹಂಪಿ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. (ಈ ಲೇಖನ ಬರೆಯುವ ಸಂದರ್ಭದಲ್ಲಿ)
ಈ ಪೊನ್ನಕಂಠಿ ಕೆಲವು ಕಾರಣಗಳಿಗಾಗಿ ಮುಖ್ಯವಾಗುತ್ತದೆ. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹೊರತಂದ ಸ್ಮರಣ ಸಂಚಿಕೆ ಇದಾದರೂ, ಇದರ ಸಂಪಾದಕೀಯ ಬಳಗದಲ್ಲಿರುವ ಲೇಖಕರು, ಚಿಂತಕರ ಹೆಸರುಗಳು ಹಾಗೂ ಈ ಗ್ರಂಥಕ್ಕೆ ಲೇಖನಗಳನ್ನು ಬರೆದವರ ಹೆಸರುಗಳು ‘ಪೊನ್ನಕಂಠಿ’ಯನ್ನು ಮುಖ್ಯವಾಗಿಸುತ್ತದೆ. ಹೊರನಾಡು ಮತ್ತು ಒಳನಾಡಿನ ಕನ್ನಡ ಚಟುವಟಿಕೆಗಳ ಕುರಿತು, ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು, ಸಮ್ಮೇಳನಾಧ್ಯಕ್ಷ ಕಯ್ಯಿರ ಕಿಂಞಣ್ಣ ರೈಗಳ ಕುರಿತು, ಸಮ್ಮೇಳನ ನಡೆಯುವ ನೆಲವಾದ ಕರಾವಳಿಯ ಕುರಿತಂತೆ ಈ ಗ್ರಂಥದಲ್ಲಿ ಲೇಖನಗಳಿವೆ. ಒಂದು ರೀತಿಯಲ್ಲಿ ಗ್ರಂಥವನ್ನು ‘ದಾಖಲೆ’ಯಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ ವಿವೇಕ ರೈ. ಈ ಹಿನ್ನೆಲೆಯಲ್ಲೇ ಅವರು ಪುಸ್ತಕದ ಪರಿವಿಡಿಗೆ ‘ಪೊನ್ನಕಂಠಿ’ಯ ಮಣಿಗಳು ಎಂದು ಹೆಸರಿಟ್ಟಿದ್ದಾರೆ. ಕುತೂಹಲದಿಂದ ನಾನು ಪೊನ್ನಕಂಠಿಯ ಒಂದೊಂದೇ ಮಣಿಗಳನ್ನು ತಡವುತ್ತಾ ಹೋದೆ.
 ಈ ಮಣಿಗಳಲ್ಲಿ ‘ದಕ್ಷಿಣ ಕನ್ನಡ ಜಿಲ್ಲೆಯ ಈ ಶತಮಾನದ ನೋಟ’ ಎನ್ನುವ ಪ್ರಮುಖ ಅಧ್ಯಾಯವೊಂದಿದೆ. ಒಬ್ಬ ಪತ್ರಕರ್ತ, ಲೇಖಕನಾಗಿ ಆ ಅಧ್ಯಾಯದಲ್ಲಿ ನನ್ನ ಗಮನ ಸೆಳೆದ ಲೇಖನ ‘ಪತ್ರಿಕೋದ್ಯಮ’. ಇದನ್ನು ಬರೆದವರು ಖ್ಯಾತ ಪತ್ರಕರ್ತ ಈಶ್ವರ ದೈತೋಟ. ಕರಾವಳಿಯ ಪತ್ರಿಕೆ ಎಂದರೆ ಕರಾವಳಿಯ ಹಿಂಸೆ, ಕರಾವಳಿಯ ಕೋಮುಗಲಭೆ, ಕರಾವಳಿಯ ಜಾತೀಯತೆ, ಕರಾವಳಿಯ ಬದುಕು. ಕರಾವಳಿಯ ಪತ್ರಿಕೆಗಳನ್ನು ಹೊರತುಪಡಿಸಿ ಕರಾವಳಿಯ ಬದುಕನ್ನು ಚರ್ಚಿಸಲು ಸಾಧ್ಯವೇ ಇಲ್ಲ ಎಂಬ ವಾತಾವರಣದಲ್ಲಿ ನಾವಿದ್ದೇವೆ. ಆದುದರಿಂದ ಸಮ್ಮೇಳನ ಹೊರತಂದ ‘ಪೊನ್ನಕಂಠಿ’ಯಲ್ಲಿರುವ ‘ಪತ್ರಿಕೋದ್ಯಮ’ ಒಂದು ದಾಖಲೆಯಾಗಿ ಹಲವರಿಗೆ ಮಾರ್ಗದರ್ಶಿಯಾಗುತ್ತದೆ ಎಂಬ ಆಸಕ್ತಿಯಿಂದ ಆ ಲೇಖನವನ್ನು ಓದಿದೆ. ಆರೂವರೆ ಪುಟದ ಆ ಲೇಖನವನ್ನು ಒಂದೇ ದಮ್ಮಿನಲ್ಲಿ ಓದಿ ಮುಗಿಸಿದಾಗ ನನಗೆ ಆಘಾತವಾದುದ್ದು ಮಾತ್ರವಲ್ಲ. ಈ ಲೇಖನಕ್ಕೆ ಪೊನ್ನಕಂಠಿಯಲ್ಲಿ ಅವಕಾಶ ಕೊಟ್ಟ ಸಂಪಾದಕರ ಹೆಸರು ಡಾ.ವಿವೇಕ ರೈ ಆಗಿರಲಿಕ್ಕಿಲ್ಲ, ಬದಲಿಗೆ ಡಾ. ಅವಿವೇಕ ರೈ ಯಾಕಾಗಿರಬಹುದು ಎಂಬ ಅನುಮಾನ ಕಾಡಿತು.
ಈಶ್ವರ ದೈತೋಟರ ‘ಪತ್ರಿಕೋದ್ಯಮ’ ಲೇಖನದಲ್ಲಿ 19ನೆ ಶತಮಾನದ ‘ಮಂಗಳೂರು ಸಮಾಚಾರ’ದಿಂದ ಹಿಡಿದು ಸಿಂಡಿಕೇಟ್ ಬ್ಯಾಂಕಿನ ‘ಪಿಗ್ಮಿ’ ಎಂಬ ಉಚಿತ ಪತ್ರಿಕೆಗೂ ಸ್ಥಾನವಿದೆ. ಮಣಿಪಾಲದ ‘ಕಾಲೇಜು ಮ್ಯಾಗಸೀನ್’ ಇಲ್ಲಿ ದಾಖಲಿಸಲ್ಪಡುತ್ತದೆ. ಭುವನಾಭಿರಾಮ ಉಡುಪ ಎಂಬವರ ‘ಯುಗಪುರುಷ’ ಎಂಬ ಪತ್ರಿಕೆಗೂ ಇಲ್ಲಿ ಮನ್ನಣೆಯಿದೆ. ಬರೇ ಎರಡು ವರ್ಷ ಕಾಲ ಬದುಕಿದ್ದ ‘ಮೋರ್ನಿಂಗ್ ನ್ಯೂಸ್’ ಎಂಬ ಪತ್ರಿಕೆಯೂ ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಆದರೆ ಒಂದು ದಶಕಕ್ಕೂ ಅಧಿಕ ಕಾಲ ಕರಾವಳಿಯಲ್ಲಿ ಮಾತ್ರವಲ್ಲ, ರಾಜ್ಯದ ಏಕಸ್ವಾಮ್ಯ ಪತ್ರಿಕೋದ್ಯಮದ ನಡುವೆ, ಒಂದು ವಿರೋಧ ಪಕ್ಷವಾಗಿ ಕೆಲಸ ಮಾಡಿದ ಪತ್ರಿಕೋದ್ಯಮದ ಭಾಷೆ, ನೋಟಕ್ಕೆ ಹೊಸ ಹೊಳಪನ್ನು ನೀಡಿದ, ಇಂದಿಗೂ ರಾಜ್ಯದ ಹಿರಿಯ ಚಿಂತಕರು, ಲೇಖಕರು ಮೆಲುಕು ಹಾಕುವ ‘ಮುಂಗಾರು’ ದಿನ ಪತ್ರಿಕೆಯ ಹೆಸರು ಕಾಟಾಚಾರಕ್ಕೂ ಇಲ್ಲಿ ಉಲ್ಲೇಖವಾಗುವುದಿಲ್ಲ. ಪತ್ರಿಕೋದ್ಯಮವನ್ನು ಬಂದಣಿಕೆಯಂತೆ ಸುತ್ತಿಕೊಂಡಿದ್ದ ವರ್ಣೀಯ ರಾಜಕಾರಣದ ವಿರುದ್ಧ ಒಬ್ಬಂಟಿಯಾಗಿ ಇರುವಷ್ಟು ಕಾಲ ಹೋರಾಡಿ, ಜಾತೀಯತೆಯ ವಿರುದ್ಧ ಸಮರವನ್ನೇ ಸಾರಿ, ಅಪ್ಪಟ ‘ಜಾತ್ಯತೀತ’ ಪತ್ರಿಕೆಯಾಗಿ ಬಾಳಿ ಇದೀಗ ಕಣ್ಮುಚ್ಚಿದರೂ ಜನಮಾನಸದಲ್ಲಿ ‘ಸತ್ತು ಬದುಕಿ’ರುವ ‘ಮುಂಗಾರು’ ಪತ್ರಿಕೆಗೆ ಮಂಗಳೂರಿನಲ್ಲಿ ನಡೆದ 66ನೆ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಸ್ಥಾನವಿರಲಿಲ್ಲ. ಈಶ್ವರ ದೈತೋಟ ಅವರಿಗೆ ಮುಂಗಾರು ಎನ್ನುವ ಪತ್ರಿಕೆಯ ಬಗ್ಗೆ ಯಾವುದೇ ಮಾಹಿತಿ ಇದ್ದಿರಲಿಲ್ಲವೆ? ಅಥವಾ ಅದು ಉಲ್ಲೇಖಿಸಬಹುದಾದ ಪತ್ರಿಕೆ ಅನ್ನಿಸಲಿಲ್ಲವೆ? ಆಗ ಉದಯವಾಣಿಯಲ್ಲಿ ಅಂಕಣವನ್ನೂ ಬರೆಯುತ್ತಿದ್ದ ದೈತೋಟ ಈ ಮೂಲಕ ಮಣಿಪಾಲದ ಪೈಗಳಿಗೆ ತಮ್ಮ ಕಪ್ಪವನ್ನು ಸಲ್ಲಿಸಿದರೆ? ಅಥವಾ ವೈಯಕ್ತಿಕವಾಗಿಯೂ ಅವರಿಗೆ ಮುಂಗಾರು ಕುರಿತಂತೆ ಅಸಹನೆಯಿತ್ತೆ? ಮೊದಲಾದ ಪ್ರಶ್ನೆಗಳು ಸಾಲು ಸಾಲಾಗಿ ಮೊದಲಿಟ್ಟಿತು. ಸಾಹಿತ್ಯ ಸಮ್ಮೇಳನದ ‘ಮೇಲ್ವರ್ಣ’ ಚರಿತ್ರೆಯ ಕುರಿತು ಅರಿವಿರುವ ಯಾರೂ ಈ ಸ್ಮರಣ ಸಂಚಿಕೆಯಲ್ಲಿ ‘ಮುಂಗಾರು’ ಮತ್ತು ವಡ್ಡರ್ಸೆ ರಘುರಾಮ ಶೆಟ್ಟಿಯವರಿಗೆ ಸ್ಥಾನ ಸಿಕ್ಕೀತು ಎಂದು ನಿರೀಕ್ಷಿಸಲಾರರು. ಆದರೆ ದುರದೃಷ್ಟಕ್ಕೆ ಈ ಪೊನ್ನಕಂಠಿ ಸ್ಮರಣ ಸಂಚಿಕೆಯ ಸಂಪಾದಕರಾಗಿದ್ದವರು ‘ಡಾ.ವಿವೇಕ ರೈ’. ಅಷ್ಟೇ ಅಲ್ಲ ಸಂಪಾದಕೀಯ ಬಳಗದಲ್ಲಿ ಡಾ.ಸಿ.ಹೊಸಬೆಟ್ಟು, ಡಾ.ಕೆ.ಚಿನ್ನಪ್ಪ ಗೌಡ, ಡಾ.ವಾಮನ ನಂದಾವರ ಮೊದಲಾದ ತುಳು ಸಂಸ್ಕೃತಿಯ ವಕ್ತಾರರಿದ್ದರು. ಅವರಾರಿಗೂ ಈ ಅಚಾತುರ್ಯವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ ಎನ್ನುವುದು ಪ್ರಶ್ನಾರ್ಹ.
 ಯಾವ ಕಾರಣಕ್ಕೂ ಈ ಅಚಾತುರ್ಯ ಒಂದು ಆಕಸ್ಮಿಕ ಅಲ್ಲ. ಮುಂಗಾರು ಜೀವಂತವಿದ್ದಾಗ ಅದರ ಕಗ್ಗೊಲೆಗೆ ನಡೆದ ಸಂಚು ಒಂದೆರಡಲ್ಲ. ಕೊನೆಗೂ ಮುಂಗಾರು ಮತ್ತು ವಡ್ಡರ್ಸೆ ಆ ಸಂಚಿಗೆ ಬಲಿಯಾದರು. ಇದೀಗ ‘ಮುಂಗಾರು’ ಪತ್ರಿಕೆಯನ್ನು ಕರಾವಳಿಯ ಇತಿಹಾಸದಿಂದಲೇ ಅಳಿಸುವ ಪ್ರಯತ್ನ ನಡೆದಿದೆ. ಆ ಪ್ರಯತ್ನಕ್ಕೆ ಪೊನ್ನಕಂಠಿಯಲ್ಲಿ ವಿವೇಕ ರೈಯಂತಹ ಶೂದ್ರ ಚಿಂತಕನನ್ನೇ ಬಳಸಿರುವುದು ದುರಂತ. ಪೊನ್ನಕಂಠಿ ವಿಶ್ವವಿದ್ಯಾನಿಲಯಗಳ ಲೈಬ್ರರಿಗಳಲ್ಲಿ, ವಿವಿಧ ಶಾಲಾ ಕಾಲೇಜುಗಳಲ್ಲಿ ಹರಿದಾಡುತ್ತಿದೆ. ಎಂ.ಫಿಲ್, ಪಿಎಚ್‌ಡಿ ಎಂದು ಹೊರಡುವವರು, ಸಂಶೋಧನಾ ವಿದ್ಯಾರ್ಥಿಗಳು ಕರಾವಳಿ ಪತ್ರಿಕೋದ್ಯಮದ ಕುರಿತು ಬರೆಯುವಾಗ ‘ಪೊನ್ನಕಂಠಿ’ಯನ್ನೇನಾದರೂ ಆಧಾರವಾಗಿಟ್ಟುಕೊಂಡರೆ ಅದರ ಪರಿಣಾಮ ಏನಾಗುತ್ತದೆ ಎನ್ನುವುದು ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
  ವಿವೇಕ ರೈಗೆ ‘ಮುಂಗಾರು’ ಜೊತೆಗೆ ಕರುಳ ಬಳ್ಳಿಯ ಸಂಬಂಧವಿತ್ತು. ಕೆಲವು ವರ್ಷಗಳ ಕಾಲ ಅವರು ಮುಂಗಾರು ಪತ್ರಿಕೆಯಲ್ಲಿ ಅಂಕಣ ಬರೆಯುತ್ತಿದ್ದರು. ಶೂದ್ರ ಸಂವೇದನೆಗೆ ಹೊಸ ಜೀವವನ್ನು ಕೊಟ್ಟ ಮುಂಗಾರು ಪತ್ರಿಕೆಗೆ ವಿವೇಕ ರೈ ಸಂಪಾದಕತ್ವದ ಕೃತಿಯಲ್ಲಿ ಸ್ಥಾನವಿಲ್ಲ ಎನ್ನುವುದು ಬರೇ ಮುಂಗಾರುವಿನ ದುರಂತವನ್ನಷ್ಟೇ ಹೇಳುತ್ತದೆಯೆ? ಕನಿಷ್ಠ ಆ ಲೇಖನವನ್ನು ಪೊನ್ನಕಂಠಿಯಿಂದ ಹೊರಗಿಡುವ ಧೈರ್ಯವಿಲ್ಲದೇ ಇದ್ದರೆ, ತನ್ನ ಸಂಪಾದಕತ್ವಕ್ಕಾದರೂ ರಾಜೀನಾಮೆ ನೀಡಬೇಕಾಗಿತ್ತು. ಆ ಲೇಖನವನ್ನು ಕಸದ ಬುಟ್ಟಿಗೆ ಹಾಕದಂತೆ ವಿವೇಕ ರೈಯವರನ್ನು ತಡೆದ ಕೈಗಳಾದರೂ ಯಾವುವು?
ಮುಂಗಾರು ಬರೇ ಪತ್ರಿಕೆ ಮಾತ್ರವಾಗಿರಲಿಲ್ಲ. ಪ್ರತಿಭಾನ್ವಿತರ ಆವಾಸ ಸ್ಥಾನವಾಗಿತ್ತು ಅದು. ದಲಿತರು, ಶೂದ್ರರನ್ನು ಕರೆ ಕರೆದು ಕೆಲಸ ಕೊಡುತ್ತಿದ್ದವರು ವಡ್ಡರ್ಸೆ. ಇಂದು ಕನ್ನಡದಲ್ಲಿ ಗುರುತಿಸಿಕೊಂಡಿರುವ ಖ್ಯಾತ ಪತ್ರಕರ್ತರೆಲ್ಲ ಮುಂಗಾರುವಿನಿಂದ ಹೊರ ಬಂದವರೆನ್ನುವುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ಇಂದೂಧರ ಹೊನ್ನಾಪುರ, ದಿನೇಶ್ ಅಮೀನ್ ಮಟ್ಟು, ಟಿ.ಕೆ.ತ್ಯಾಗರಾಜ್, ಬಿ.ಎಂ.ಹನೀಫ್, ವಿಜು ಪೂಣಚ್ಚ, ಪಿ. ಮಹಮ್ಮದ್, ಚಿದಂಬರ ಬೈಕಂಪಾಡಿ, ಲೋಲಾಕ್ಷ, ಬಿ.ಬಿ.ಶೆಟ್ಟಿಗಾರ್ ಹೀಗೆ...ಒಂದು ದೊಡ್ಡ ಪತ್ರಕರ್ತರ ದಂಡೇ ಮುಂಗಾರು ಹೆಸರಿನ ಜೊತೆಗೆ ತಳಕು ಹಾಕಿಕೊಳ್ಳುತ್ತದೆ. ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ‘ಮುಂಗಾರು’ವಿಗೆ ಇಂತಹದೊಂದು ದೈನೇಸಿ ಸ್ಥಿತಿ ಒದಗಿದಾಗ ಅದರ ಕುರಿತಂತೆ ಈ ಎಲ್ಲ ಪತ್ರಕರ್ತರು ಒಂದೊಂದು ಸಾಲಿನ ಖಂಡನೆ ಹೇಳಿಕೆ ನೀಡಿದ್ದರೂ ಆ ಸ್ಮರಣ ಸಂಚಿಕೆ ಮಾರುಕಟ್ಟೆಗೆ ಬರುತ್ತಿರಲಿಲ್ಲ. ಬಂದರೂ ತಿದ್ದುಪಡಿಯಾಗಿ ಬರುತ್ತಿತ್ತು. ದುರಂತವೆಂದರೆ ಮುಂಗಾರುವಿನ ಉಪ್ಪು ತಿಂದ, ಮುಂಗಾರುವಿನಲ್ಲಿ ಹುಟ್ಟಿ ಪತ್ರಕರ್ತರೆಂದು ಗುರುತಿಸಿಕೊಂಡು ನಾಡಿನಾದ್ಯಂತ ಬೆಳೆದ ಪತ್ರಕರ್ತರು ಬಾಯಿ ಮುಚ್ಚಿ ಕೂತರು. ‘ಮುಂಗಾರು’ ನಿಜಕ್ಕೂ ಸತ್ತದ್ದು ಆಗ. ತಮ್ಮನ್ನು ಬೆಳೆಸಿದ ಮುಂಗಾರುವನ್ನು ಕರಾವಳಿ ಇತಿಹಾಸದಿಂದಲೇ ಅಳಿಸಿ ಹಾಕುವ ಹುನ್ನಾರದ ವಿರುದ್ಧ ಪ್ರತಿಭಟಿಸಲಾಗದೆ ಮುಂಗಾರುವಿನ ಮಾಜಿ ಪತ್ರಕರ್ತರು, ಅದರ ಅಂಕಣಕಾರರು, ಲೇಖಕರು, ಕರಾವಳಿಯ ಶೂದ್ರ, ದಲಿತರು ಬಾಯಿ ಮುಚ್ಚಿ ಕೂತರಲ್ಲ, ಆಗ ನಿಜವಾದ ಅರ್ಥದಲ್ಲಿ ‘ಮುಂಗಾರು’ ದಿನ ಪತ್ರಿಕೆ ಸತ್ತು ಹೋಯಿತು.

(ಡಿಸೆಂಬರ್ 14, 2007: ಶುಕ್ರವಾರ)

No comments:

Post a Comment