Wednesday, March 7, 2012

ಖಾಲಿ ಹಾಳೆ ಮತ್ತು ಇತರ ಕತೆಗಳು

ಖಾಲಿ ಹಾಳೆ
ಆತ ಮಹಾಕಾವ್ಯವೊಂದನ್ನು ಬರೆದು ವಿಮರ್ಶಕನಿಗೆ ಕೊಟ್ಟು ಹೇಳಿದ...‘‘ಗುರುಗಳೇ ಓದಿ ಅಭಿಪ್ರಾಯ ತಿಳಿಸಿ...’’
ಒಂದು ವಾರ ಬಿಟ್ಟು ಆತ ವಿಮರ್ಶಕನಲ್ಲಿಗೆ ತೆರಳಿ ‘‘ಗುರುಗಳೇ, ನನ್ನ ಕಾವ್ಯದಲ್ಲಿ ನಿಮಗೆ ಯಾವ ಅಧ್ಯಾಯ ಇಷ್ಟವಾಯಿತು’’
ವಿಮರ್ಶಕ ನುಡಿದ ‘‘ಕೃತಿಯ ಕೊನೆಯಲ್ಲಿ ಒಂದು ಖಾಲಿ ಹಾಳೆಯನ್ನು ಉಳಿಸಿದ್ದೀಯಲ್ಲ...ಅದು ನನಗೆ ತುಂಬಾ ಇಷ್ಟವಾಯಿತು...’’

ಆಯಸ್ಸು....
‘‘ಒಂದು ಚಿಟ್ಟೆಯ ಆಯಸ್ಸು ಬರೇ ಒಂದು ವಾರವಂತೆ ಹೌದೆ...?’’
‘‘ಹೌದು. ಮನುಷ್ಯರ ಪಾಲಿಗೆ ಬರೇ ಒಂದು ವಾರ. ಆದರೆ ಚಿಟ್ಟೆಯ ಪಾಲಿಗಲ್ಲ’’

ಬಿತ್ತು
‘‘ಗುರುಗಳೇ ನಮ್ಮ ರಸ್ತೆಯ ಕೊನೆಯಲ್ಲಿರುವ ಪುರಾತನ ಮರವೊಂದು ಬಿತ್ತು...’’
ಖೇದದಿಂದ ನುಡಿದ.
‘‘ಸರಿ ಬಿತ್ತು...’’ ಸಂತ ನಿಶ್ಚಿಂತೆಯಿಂದ ಹೇಳಿದ.
‘‘ಗುರುಗಳೇ ಆ ಬೃಹತ್ ಮರ ಬಿತ್ತು’’ ಮತ್ತೆ ಶಿಷ್ಯ ಆತಂಕದಿಂದ ಒತ್ತಿ ಹೇಳಿದ.
‘‘ಸರಿ ಬಿತ್ತು ಎಂದೆ’’ ಸಂತ ಪುನರುಚ್ಚರಿಸಿದ.

ದರೋಡೆ
ಕುಖ್ಯಾತ ದರೋಡೆಕೋರ.
ಅವನಲ್ಲಿ ಸಂದರ್ಶಕನೊಬ್ಬ ಕೇಳಿದ ‘‘ಮಾಡಬಾರದಿತ್ತು ಅನ್ನಿಸಿದ ಯಾವುದಾದರೂ ಒಂದು ದರೋಡೆಯನ್ನು ನೀನು ಮಾಡಿದ್ದೆಯ?’’
ದರೋಡೆಕೋರ ಒಂದು ಕ್ಷಣ ವೌನವಾದ. ಬಳಿಕ ಹೇಳಿದ ‘‘ಹೌದು. ಅದು ನಾನು ಹತ್ತುವರ್ಷದವನಿದ್ದಾಗ ಮಾಡಿದ ದರೋಡೆ. ಅಮ್ಮ ತನ್ನ ಸಂಚಿಯಲ್ಲಿ ಒಂದಿಷ್ಟು ದುಡ್ಡು ಮಡಗಿ, ಸೊಂಟಕ್ಕೆ ಕಟ್ಟಿ ಮಲಗಿದ್ದಳು. ನಾನು ಅದನ್ನು ಸೊಂಟದಿಂದ ಕತ್ತರಿಸಿ, ದುಡ್ಡನ್ನು ಕದ್ದು ಸಿನಿಮಾ ನೋಡಿ ಮಜಾ ಮಾಡಿ ಬಂದೆ. ಮನೆಗೆ ಬಂದಾಗ ಅಮ್ಮ ಅಳುತ್ತಿದ್ದಳು ‘‘ಅಯ್ಯೋ...ನನ್ನ ಮಗನ ಇಸ್ಕೂಲಿನ ಪೀಸು ಕಟ್ಟುವುದಕ್ಕೆಂದು ಇಟ್ಟ ಹಣವನ್ನು ಯಾರೋ ಕದ್ದು ಬಿಟ್ರಲ್ಲಪ್ಪ....ನನ್ನ ಮಗ ಸಾಲೆಗೆ ಹೋಗದೆ ಬೀದಿ ಪಾಲಾದ್ನಲ್ಲಪ್ಪ...ನನ್ನ ಮಗನ ಬದುಕು ಹಾಳು ಮಾಡಿದೋರು ಹಾಳಾಗಿ ಹೋಗ್ಲಿ...ಸರ್ವನಾಸವಾಗಿ ಹೋಗ್ಲಿ....’ಎಂದು ಶಾಪ ಇಡುತ್ತಿದ್ದಳು’’

ಆಗ್ರಹ
ಅಲ್ಲಿ ಇಲ್ಲಿ ಎಂದು ಸಿಕ್ಕಿದಲ್ಲಿ ಡೇರೆ ಊರಿ ಬದುಕುತ್ತಿದ್ದ ಸಮುದಾಯದ ಜನರು ಅವರು.
ಉಳಿದುಕೊಳ್ಳುವುದಕ್ಕೆ ನೆಲೆಯಿರಲಿಲ್ಲ. ಇಲ್ಲಿಂದ ಎಬ್ಬಿಸಿದರೆ ಅಲ್ಲಿಗೆ. ಅಲ್ಲಿಂದ ಎಬ್ಬಿಸಿದರೆ ಇಲ್ಲಿಗೆ.
ಹೀಗೆ ಬದುಕು ನಡೆಸುತ್ತಿದ್ದರು. ಆದರೆ ಅವರಿಗೆ ಒಂದು ದೊಡ್ಡ ಸಮಸ್ಯೆ ಎದುರಾಯಿತು.
ಒಂದು ದಿನ ಎಲ್ಲರೂ ಸಂಘಟಿತರಾದರು.
ಸರಕಾರದ ಮುಂದೆ ಪ್ರತಿಭಟನೆಗಿಳಿದರು. ಒಕ್ಕೊರಲಲ್ಲಿ ಕೇಳಿದರು ‘‘ನಮ್ಮ ಸಮುದಾಯಕ್ಕೊಂದು ಸ್ಮಶಾನ ಕೊಡಿ’’

ಐದಡಿ ಜಾಗ
ಆತ ಮಸೀದಿಯೊಂದಕ್ಕೆ ಅರ್ಜಿ ಹಾಕಿದ.
‘‘ನನ್ನ ಅಪ್ಪ ಮರಣಕ್ಕೆ ಸಿದ್ಧರಾಗಿದ್ದಾರೆ...ಗೋರಿ ತೋಡುವುದಕ್ಕೆ ಐದಡಿ ಉದ್ದ, ಮೂರು ಅಂಗುಲ ಅಗಲದ ಜಾಗ ಬೇಕಿತ್ತು’’
ಮಸೀದಿಯ ಅಧ್ಯಕ್ಷ ಹೇಳಿದ ‘‘ಇಂಚಿಗೆ 5 ಸಾವಿರ ರೂ. ಕೊಡಬೇಕಾಗುತ್ತದೆ....ಮಸೀದಿಯ ಪಕ್ಕದಲ್ಲಾದರೆ ರೇಟು ಜಾಸ್ತಿ...ಯಾಕೆಂದರೆ ನಮಾಝ್ ಮಾಡುವ ಕುರಾನ್ ಶಬ್ದಗಳು ಗೋರಿಗೆ ಕೇಳಿಸುತ್ತಾ ಇರುತ್ತದೆ...ಮದರಸದ ಪಕದಲ್ಲಿರುವ ಗೋರಿಗಾದರೆ ಅದಕ್ಕಿಂತ ಒಂದು ಚೂರು ಕಡಿಮೆ...ಅಲ್ಲಿ ಮದರಸದ ವಿದ್ಯಾರ್ಥಿಗಳು ಕುರಾನ್ ಓದುವುದು ಕೇಳಿಸುತ್ತಾ ಇರುತ್ತದೆ....ಯಾವುದಾಗಬಹುದು...?’’
‘‘ನನ್ನಲ್ಲಿ ಅಷ್ಟು ದುಡ್ಡಿಲ್ಲ....ಇದು ತುಂಬಾ ಜಾಸ್ತಿಯಾಯಿತು...’’
‘‘ಹಾಗಾದರೆ ನೀನು ಯಾವುದಾದರೂ ರಿಯಲ್ ಎಸ್ಟೇಟ್ ಬ್ರೋಕರ್‌ಗಳ ಹತ್ರ ಹೋಗಿ ನೋಡು...ಕಡಿಮೆಯಲ್ಲಿ ಬೇರೆ ಮಸೀದಿಯಲ್ಲೆಲ್ಲಾದರೂ ಸಿಕ್ಕಿದರೂ ಸಿಕ್ಕೀತು...ಈಗೀಗ ಮನೆ ಕಟ್ಟುವುದಕ್ಕಾದರೂ ಐದು ಸೆನ್ಸ್ ಜಾಗ ಸಿಗುತ್ತದೆ. ಆದರೆ ದಫನ ಮಾಡುವುದಕ್ಕೆ ಜಾಗ ಸಿಗುವುದು ಕಷ್ಟ’’

ಅದೃಷ್ಟ
ಹಕ್ಕಿಗಳದು ಅದೆಷ್ಟು ಅದೃಷ್ಟ.
ಸತ್ತರೆ ಸಂಸ್ಕಾರ ಮಾಡಲು ಪೂಜಾರಿಗಳ ಅಗತ್ಯವೇ ಇಲ್ಲ

ಸಂದರ್ಶನ
ನೀನು
ರೇ೦ಕ್
ಗಳಿಸಿದ್ದಿ ನಿಜ.
ಪ್ರತಿಭಾವಂತನೂ ಹೌದು.
ಪತ್ರಕರ್ತನಾಗಲು ಎಲ್ಲ ಅರ್ಹತೆಯೂ ಇದೆ.
ಆದರೆ...
ನಮ್ಮ ಕಚೇರಿಯ ಮುಖ್ಯ ಜ್ಯೋತಿಷಿಗಳು ಹೇಳುವಂತೆ
ನಿನ್ನ ಜಾತಕ ಈ ಕಚೇರಿಗೆ ಹೊಂದುತ್ತಿಲ್ಲ.
ಆದ್ದರಿಂದ ನಿನಗೆ ಕೆಲಸವಿಲ್ಲ.

5 comments:

  1. ಅಹ್! ಒಂದೊಂದೂ ಅದ್ಭುತವಾಗಿದೆ!

    ReplyDelete
    Replies
    1. ಇದು ಮತ್ತೂ ಅದ್ಭುತ ಕಣ್ಣಾಡಿಸಿ...
      http://www.gujariangadi.blogspot.in/2012/03/blog-post_15.html#comment-form

      Delete
  2. ಶರತ್ ಕಪ್ಪನಹಳ್ಳಿMarch 7, 2012 at 7:16 AM

    ಹಾಯ್ ಸರ್ ನಿಮ್ಮ ಬ್ಲಾಗ್ ಿತ್ತಿಚೆಗೆ ಒದಲು ಶುರು ಮಾಡಿದ್ದಿದೆ. someting diffrent ಅನಸ್ತು.. ಮದ್ಲು ನಮ್ಮ ಬಗ್ಗೆ ಕೆಳ್ಳಿದ್ದೆ ತುಂಬ ವಿಭಿನ್ನ ಅಂತ, ಆದು ನಿಮ್ಮ ಬ್ಲಾಗ್ ನೋಡಿದ ಮೇಲೆ ನನಿಗೆ ನೀಜ ಻ನ್ಸತ್ತು. ಬಹುಶ ನನಿಗೆ ಕೆಲಸ್ ಸಿಗಲಿಲ್ಲ ಻ಂದ್ರೆ ನಿಮ್ಮ ಬಳಿ ಬರತ್ತ ಇದ್ದೆ ಅನುಸ್ಸುತ್ತೆ ಅಷ್ಟರಲ್ಲಿ ನನಿಗೆ ಪಬ್ಲಿಕ್ ಟಿವಿಯಲ್ಲಿ ಕೆಲಸ ಸಿಕ್ತು, any way ಸರ್ ಮುಂದೆ ಒಂದಸ್ರಾರಿ ನಿಮ್ಮ ಹತ್ರ ಸಾದ್ಯವಾದ್ರೆ ಕೆಲಸ ಮಾಡಬೇಕು ಇನ್ನು ನಾನು ತುಂಬ ಕಲೆಯೋದಿದೆ ಅದು ನಿಮ್ಮ ಬಳಿ ಕಲಿಯಬೇಕೆಂಬ ಹಬಂಲ ಅದು ನನ್ನ ಗೆಳಯ ನಿಮ್ಮ ಬಗ್ಗೆ ಹೇಳಿದ್ದ ಮಾತಿನಿಂದ ಈಗ್ಲೂ ಅನ್ಸುತ್ತೆ. ನೋಡೋಣ ಅದ್ರೆ ನಿಮ್ಮ ಹತ್ರ ಬರತ್ತಿನಿ. ಅಂದ ಹಾಗೇ ಈಗ ಬರದಿರೋ ಖಾಲಿ ಹಾಳೆ ಆಯಸ್ಸು ನಮ್ಮ ಮನುಷ್ಯ ಜೀವಿಗಳಿಗೆ ಒಪ್ಪುವಂತಿತ್ತು...

    ReplyDelete
    Replies
    1. ಇಲ್ಲೂ ಒಂದು ಸಲ ಕಣ್ಣಾಡಿಸಿ...
      http://www.gujariangadi.blogspot.in/2012/03/blog-post_15.html#comment-form

      Delete