Sunday, March 18, 2012

ಬ್ಯಾರಿ ಚಿತ್ರ ಮತ್ತು ಸಾರಾ ಅಬೂಬಕರ್ ಕುರಿತಂತೆ ಕೆಲವು ಮಾತುಗಳು....

 ಇತ್ತೀಚಿಗೆ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಬ್ಯಾರಿ ಚಿತ್ರದ ಕುರಿತಂತೆ ಸಾರಾ ಅಬುಬಕ್ಕರ್ ಒಂದು ಲೇಖನವನ್ನು ಬರೆದಿದ್ದರು. ಅದರಲ್ಲಿ "ನನ್ನ ಕತೆಯನ್ನು ಕದ್ದಿದ್ದಾನೆ'' ಎಂದು ಬ್ಯಾರಿ ಚಿತ್ರದ ನಿರ್ಮಾಪಕರ ಬಗ್ಗೆ ಸಾರ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಈ ಲೇಖನವನ್ನು ಬರೆದಿದ್ದೇನೆ. ಮಾರ್ಚ್ 28 , 2012 ರ ಸಂಚಿಕೆಯ ಗೌರಿ ಲಂಕೆಶ್ನಲ್ಲಿ ಇದು ಪ್ರಕಟವಾಗಿದೆ.

ಬೆಳಗ್ಗೆ ಸುಮಾರು ಎಂಟು ಗಂಟೆಯ ಹೊತ್ತು. ನಿದ್ದೆಯಿಂದ ಎದ್ದು ಮೊಬೈಲ್ ನೋಡಿದರೆ ಒಂದು ಮಿಸ್ಡ್ ಕಾಲ್. ಇನ್ನೊಂದು ಮೆಸೇಜ್. ನೋಡಿದರೆ ಬೊಳುವಾರು ಮುಹಮ್ಮದ್ ಕುಂಞಿ ಅವರದು. ಮೆಸೇಜ್ ತೆರೆದು ನೋಡಿದರೆ ‘‘ಬ್ಯಾರಿ’’ ಚಿತ್ರಕ್ಕೆ ಸ್ವರ್ಣಕಮಲ ಎಂಬ ಒಂದು ಸಾಲು. ಮನಸ್ಸು ಜುಂ ಎಂದಿತು. ಎದ್ದು ಟಿ.ವಿ. ಆನ್ ಮಾಡಿದೆ. ಗಿರೀಶ್ ಕಾಸರವಳ್ಳಿಯವರ ‘ಕೂರ್ಮಾವತಾರ’ ಶ್ರೇಷ್ಠ ಕನ್ನಡ ಚಿತ್ರವಾಗಿ ಗುರುತಿಸಿಲ್ಪಟ್ಟರೆ, ಬ್ಯಾರಿ ಚಿತ್ರ ಸ್ವರ್ಣಕಮಲ ಗಳಿಸಿದೆ. ದಿಲ್ಲಿ ಅದೇ ಮೊದಲ ಬಾರಿಗೆ ಒಂದು ಸಿನಿಮಾದ ಮೂಲಕ ಬ್ಯಾರಿ ಎನ್ನುವ ಶಬ್ದವನ್ನು ಕೇಳಿರಬೇಕು. ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯೂ ಸೇರಿದಂತೆ ಆಸುಪಾಸಿನ ಮುಸ್ಲಿಮರ ಒಂದು ಗುಂಪು, ಹಾಗೂ ಬೆಳ್ಚಡ, ಬೋವಿ ಜನಾಂಗದ ಒಂದಿಷ್ಟು ಜನರು ಆಡುವ ಭಾಷೆ ಬ್ಯಾರಿ. ಇಂತಹ ಒಂದು ಪುಟ್ಟ ಭಾಷೆ, ರಾಷ್ಟ್ರ ಭಾಷೆಗೆ ಮಾತ್ರವಲ್ಲ, ಕನ್ನಡ, ತುಳು, ಕೊಂಕಣಿ, ಕೊಡವ ಎಲ್ಲಾ ಭಾಷೆಗಳನ್ನು ಹಿಂದಿಕ್ಕಿ ಸರ್ವಶ್ರೇಷ್ಠ ಸ್ವರ್ಣ ಕಮಲ ಪ್ರಶಸ್ತಿ ಪಡೆದದ್ದು ನನ್ನ ಮಟ್ಟಿಗೆ ಸಣ್ಣ ವಿಷಯ ಆಗಿರಲೇ ಇಲ್ಲ.
ಅಂದು ಸಂಜೆ ಬೆಂಗಳೂರಿನಿಂದ ನನ್ನ ಪತ್ರಕರ್ತ ಮಿತ್ರ ಫೋನ್ ಕರೆ ಮಾಡಿದ್ದ. ಆತನಿಗೆ ಈ ‘ಬ್ಯಾರಿ’ ಎನ್ನುವುದು ಒಂದು ಸಮಸ್ಯೆಯಾಗಿ ಬಿಟ್ಟಿತ್ತು. ಇದಾವ ಭಾಷೆ? ಮಲಯಾಳವೆ? ಇವರಿರುವುದು ಎಲ್ಲಿ? ಇದು ಕನ್ನಡಕ್ಕೆ ಸಿಕ್ಕಿದ ಪ್ರಶಸ್ತಿಯೋ ಅಥವಾ ಕೇರಳಕ್ಕೆ ಸಿಕ್ಕಿದ ಪ್ರಶಸ್ತಿಯೋ? ಹಲವು ಗೊಂದಲಗಳನ್ನು ಇಟ್ಟುಕೊಂಡು ಫೋನ್ ಕರೆ ಮಾಡಿದ್ದ.
‘‘ಅಲ್ಲ ಮಾರಾಯ...ಈ ಬ್ಯಾರಿ ಎಂದರೆ ಯಾರು ಮಾರಾಯ?’’ ಕೇಳಿದ.
‘‘ಈ ಬ್ಯಾರಿ ಅಂದರೆ ನಾನೇ’’ ಅವನಿಗೆ ಉತ್ತರಿಸಿದ.
‘‘ನೀನು ಮುಸ್ಲಿಂ ಅಲ್ವಾ? ಹಾಗಾದ್ರೆ...’’
‘‘ನಾನು ಮುಸ್ಲಿಮನೂ ಹೌದು. ಜೊತೆಗೆ ಬ್ಯಾರಿಯೂ ಹೌದು...ನಾನು ಮಾತನಾಡುವ ಭಾಷೆ ಬ್ಯಾರಿ’’ ಎಂದೆ.
ಅವನ ಸಮಸ್ಯೆ ಇನ್ನಷ್ಟು ಜಟಿಲವಾಯಿತು ‘‘ಅದು ಹೇಗೆ? ನೀನು ಮುಸ್ಲಿಮ್ ಎಂದ ಮೇಲೆ ನಿನ್ನ ಭಾಷೆ ಉರ್ದು ಆಗಿರಬೇಕಲ್ಲ...’’
‘‘ನನಗೆ ಉರ್ದು ಗೊತ್ತಿಲ್ಲ ಮಾರಾಯ’’ ಉತ್ತರಿಸಿದೆ.
‘‘ಮುಸ್ಲಿಮರಿಗೆ ಉರ್ದು ಗೊತ್ತಿಲ್ಲ ಎಂದರೆ ನಾನು ನಂಬುವುದು ಹೇಗೆ? ತಮಾಷೆ ಮಾಡ್ಬೇಡ...’’
‘‘ನನಗೆ ಉರ್ದು ಗೊತ್ತಿಲ್ಲ. ಆ ಕುರಿತಂತೆ ನನಗೆ ಹೆಮ್ಮೆಯೇನೂ ಇಲ್ಲ. ಯಾಕೆಂದರೆ ಉರ್ದು ಗೊತ್ತಿಲ್ಲದೆ ನಾನು ತುಂಬಾ ಮಿಸ್ ಮಾಡ್ಕೊಂಡಿದ್ದೇನೆ. ಆದರೆ ನನ್ನದು ಬ್ಯಾರಿ ಮಾತೃಭಾಷೆ. ಮನೆಭಾಷೆ. ಬ್ಯಾರಿ ಬಿಟ್ರೆ ನಾನು ಕಲಿತ ಎರಡನೆ ಭಾಷೆ ತುಳು. ಅದು ಬಿಟ್ರೆ ಶಾಲೆಯ ಒಂದನೆ ತರಗತಿಯಿಂದ ಕಲಿತದ್ದು ಕನ್ನಡ’’
‘‘ಬ್ಯಾರಿ ಎಂದರೆ ಮುಸ್ಲಿಮರೊಳಗೆ ಇರುವ ಜಾತಿಯೋ...’’
‘‘ಅಲ್ಲ... ಎಲ್ಲ ಜಾತಿ ಧರ್ಮಗಳಲ್ಲಿರುವಂತೆಯೇ ಮುಸ್ಲಿಮರಲ್ಲೂ ಪ್ರಾದೇಶಿಕ ಭಿನ್ನತೆಗಳಿವೆ... ಬ್ಯಾರಿ ಎಂದರೆ ಪ್ರಾದೇಶಿಕ ಭಿನ್ನತೆ. ಮುಖ್ಯವಾಗಿ ಈ ಭಾಷೆಯನ್ನು ಆಡುವವರು ಬರೇ ಮುಸ್ಲಿಮರು ಮಾತ್ರವಲ್ಲ. ಬೋವಿ ಜನಾಂಗ, ಬೆಳ್ಚಡ ಜನಾಂಗದವರೂ ಈ ಭಾಷೆಯನ್ನೇ ಆಡ್ತಾರೆ... ಆದರೆ ಬಹುಸಂಖ್ಯಾತ ಬ್ಯಾರಿಗಳು ಮುಸ್ಲಿಮರು...ಅಮೃತ ಸೋಮೇಶ್ವರರ ಮನೆ ಭಾಷೆಯೂ ಇದೇ ಬ್ಯಾರಿ ಭಾಷೆಗೆ ಸಮೀಪದಲ್ಲಿದೆ. ಒಂದು ರೀತಿಯಲ್ಲಿ ಅವರಾಡುವ ಭಾಷೆಯೂ ಬ್ಯಾರಿಯೇ...’’
ಅವನ್ಯಾವುದೋ ಶಾಕ್‌ನಲ್ಲಿದ್ದಂತೆ ನನ್ನಲ್ಲಿ ಮಾತನಾಡುತ್ತಿದ್ದ.
***
 ನನ್ನ ಶಾಲಾ ಕಾಲದಲ್ಲಿ ‘ಬ್ಯಾರಿ’ ಎನ್ನುವ ಐಡೆಂಟಿಟಿ ನನ್ನ ಪಾಲಿಗೆ ಅವಮಾನವಷ್ಟೇ ತರುತ್ತಿತ್ತು. ಆ ಶಬ್ದ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ನನ್ನ ಸಮುದಾಯಕ್ಕೆ ಹಿಡಿದ ಕನ್ನಡಿ ಮಾತ್ರವಾಗಿತ್ತು. ಈ ‘ಬ್ಯಾರಿ’ ಶಬ್ದದಿಂದ ನಾನು ನನ್ನ ಸಮುದಾಯದ ಎಲ್ಲ ತರುಣರು ಬೆನ್ನು ಹಾಕಿ ಓಡುತ್ತಿದ್ದೆವು. ಆಗೆಲ್ಲ ನಮ್ಮನ್ನು ಕಂಡಾಕ್ಷಣ ಇತರ ಹುಡುಗರು ‘‘ದಾನೆಂಬೆ ಬ್ಯಾರಿ(ಏನೋ ಬ್ಯಾರಿ?’’) ಎಂದು ಕರೆಯುತ್ತಿದ್ದರು. ಅಥವಾ ‘‘ಬ್ಯಾರಿ ಬತ್ತೆ(ಬ್ಯಾರಿ ಬಂದ) ಎಂದು ಹೇಳುತ್ತಿದ್ದರು. ನಮಗೋ ಸಿಟ್ಟು ಉಕ್ಕಿ ಬರುತ್ತಿತ್ತು. ‘‘ಇನ್ನೊಮ್ಮೆ ಬ್ಯಾರಿ ಅಂದ್ರೆ ಜಾಗೃತೆ’’ ಎಂದು ಎಚ್ಚರಿಸುತ್ತಿದ್ದೆವು. ಬ್ಯಾರಿ ಎಂದು ಕರೆದದ್ದಕ್ಕಾಗಿಯೇ ನಮ್ಮ ನಡುವೆ ಅದೆಷ್ಟೋ ಗಲಾಟೆಗಳಾಗಿವೆ. ಬ್ಯಾರಿ ಎನ್ನುವುದು ಅಂದು ನಮ್ಮ ಪಾಲಿಗೇ ಅಷ್ಟರ ಮಟ್ಟಿಗೆ ಅಸ್ಪಶ್ಯವಾಗಿತ್ತು.

ಯಾರಾದರೂ ನಿಮ್ಮ ಮನೆ ಭಾಷೆ ಯಾವುದು ಎಂದು ಕೇಳಿದರೆ ‘‘ಮಲಯಾಳಂ’’ ಎನ್ನುತ್ತಿದ್ದೆವು. ಆದರೆ ಮಲಯಾಳಿಗಳು ನಮ್ಮ ಭಾಷೆಯನ್ನು ಮಲಯಾಳಂ ಎಂದು ಒಪ್ಪುತ್ತಿರಲಿಲ್ಲ. ನಾವೇ ಸಣ್ಣದೊಂದು ಟಿಪ್ಪಣಿಯನ್ನೂ ನೀಡುತ್ತಿದ್ದೆವು ‘‘ಮಲಯಾಳಂ ಎಂದರೆ ಮಲಯಾಳಂ ಅಲ್ಲ. ಮಲಯಾಳಂ ಹಾಗೆ ಇರುವ ಭಾಷೆ. ಸ್ವಲ್ಪ ಬೇರೆ’’ ಇಷ್ಟೆಲ್ಲ ಸಮರ್ಥನೆ ನೀಡುವಷ್ಟರಲ್ಲಿ ಸುಸ್ತಾಗುತ್ತಿದ್ದೆವು. ವಿಚಿತ್ರವೆಂದರೆ ನಮ್ಮ ಭಾಷೆಯನ್ನು ನಾವು ‘ನಕ್ಕ್-ನಿಕ್ಕ್’ ಎಂದು ಕರೆಯುತ್ತಿದ್ದೆವು. ‘ನಕ್ಕ್-ನಿಕ್ಕ್’ ಎಂದರೆ ‘ನನಗೆ-ನಿನಗೆ’ ಎಂದರ್ಥ. ನನಗೂ-ನಿನಗೂ ಮಾತ್ರ ಈ ಭಾಷೆ. ಹೊರಗೆ ತುಳು, ಇನ್ನೂ ತುಸು ಹೊರಗೆ ಹೋದರೆ ಕನ್ನಡ ಭಾಷೆಯನ್ನು ಬಳಸುತ್ತಿದ್ದವರು ನಾವು. ಮದರಸದಲ್ಲಿ ಮುಸ್ಲಿಯಾರ್‌ಗಳು ಕೇರಳದಿಂದಲೇ ಬರುತ್ತಿದ್ದರು. ಅವರು ಮಲಯಾಳಂನಲ್ಲಿ ಅರಬಿಯನ್ನು ಕಲಿಸುತ್ತಿದ್ದರು. ಅತ್ತ ಮಲಯಾಳಂನ್ನೂ ಜೀರ್ಣಿಸದೆ, ಇತ್ತ ಅರೆಬಿಕ್‌ನ್ನೂ ಕಲಿಯಲಾಗದೆ ನಾವು ನಡು ನೀರಲ್ಲಿ ಮುಳುಗುತ್ತಿದ್ದೆವು. ಜಮಾಅತ್‌ನ ಲೆಕ್ಕ ಪುಸ್ತಕಗಳೆಲ್ಲ ಕನ್ನಡದಲ್ಲೇ ಇರುತ್ತಿತ್ತು. ಪತ್ರ ವ್ಯವಹಾರಗಳೂ ಕನ್ನಡ ಭಾಷೆಯಲ್ಲೇ ಇರುತ್ತಿತ್ತು. ಬ್ಯಾರಿ ವೌಖಿಕ ಭಾಷೆ. ಅದಕ್ಕೆ ಲಿಪಿ ಇದ್ದಿರಲೇ ಇಲ್ಲ. ಲಿಪಿಯ ಅಗತ್ಯ ಬಿದ್ದರೆ ನಾವು ಕನ್ನಡವನ್ನು ಬಳಸುತ್ತಿದ್ದೆವು.

ಒಂದಾನೊಂದು ಕಾಲದಲ್ಲಿ ನನ್ನಜ್ಜನಜ್ಜನಜ್ಜನವರೆಲ್ಲ ಬ್ಯಾರಿಗಳೆಂದೇ ದರ್ಬಾರು ನಡೆಸಿದವರು. ಆದಂ ಬ್ಯಾರಿ, ಪೊಡಿಯ ಬ್ಯಾರಿ, ಯೂಸುಫ್ ಬ್ಯಾರಿ ಹೀಗೆ ನೂರಾರು ಹೆಸರುವಾಸಿಯಾದ ಬ್ಯಾರಿಗಳು ಆಗಿ ಹೋಗಿದ್ದರು. ಒಂದಾನೊಂದು ಕಾಲದ ಯಾವುದೇ ಕಡತ ಬಿಡಿಸಿ ನೋಡಿದರೂ ಹೆಸರಿನ ಮುಂದೆ ‘ಬ್ಯಾರಿ’ ಎನ್ನುವ ಪದವನ್ನು ಒಂದು ಬಿರುದಿನಂತೆ ಧರಿಸುತ್ತಿದ್ದರು. ಆದರೆ 70ರ ದಶಕದ ನಂತರ ಈ ಸಮುದಾಯಕ್ಕೆ ಅದಾವ ಗ್ರಹಣ ಬಡಿಯಿತೋ ಗೊತ್ತಿಲ್ಲ. ಬ್ಯಾರಿ ಎನ್ನುವ ಶಬ್ದಕ್ಕೆ, ನೆರಳಿಗೆ ಅಂಜುತ್ತಾ ಬದುಕತೊಡಗಿತು. ನಿಧಾನಕ್ಕೆ ಈ ಸಮುದಾಯದಲ್ಲಿ ಬಿ.ಎಂ. ಇದಿನಬ್ಬ, ಬಿ.ಎ. ಮೊಯ್ದಿನ್, ಮುಹಮ್ಮದ್ ಕಮಾಲ್, ಬಿ.ಎ. ಉಮರಬ್ಬ, ಬಿ.ಎ. ಹಸನಬ್ಬ... ಬೊಳುವಾರು, ಫಕೀರ್ ಮೊದಲಾದವರ ಪ್ರವೇಶವಾದಂತೆ ಬ್ಯಾರಿಗಳು ಕನ್ನಡದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಂಡರು. ಇದು ಸಹಜವಾಗಿಯೇ ಬ್ಯಾರಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬತೊಡಗಿತು. ಬ್ಯಾರಿ ಸಾಹಿತ್ಯ, ಸಾಂಸ್ಕೃತಿಕ ಚಳವಳಿ ಆರಂಭವಾಯಿತು. ಬ್ಯಾರಿ ಹೆಸರಲ್ಲಿ ಸಂಘಟನೆ ಹುಟ್ಟಿಕೊಂಡಿತು. ನನ್ನಂತಹ ವಿದ್ಯಾವಂತನಿಗೇ ಇದು ತಮಾಷೆಯಾಗಿ ಕಾಣುತ್ತಿತ್ತು. ಆದರೂ ಒಂದು ರೀತಿ ಹಿತ ಅನ್ನಿಸುತ್ತಿತ್ತು. ಈ ಚಳವಳಿಯ ಪರಿಣಾಮವಾಗಿಯೇ ಮೂರು ವರ್ಷಗಳ ಹಿಂದೆ ಬ್ಯಾರಿ ಅಕಾಡೆಮಿ ದೊರಕಿತು.

ತನ್ನ ಇದ್ದ ಬಿದ್ದ ಶಕ್ತಿಯೊಂದಿಗೆ ಒಂದು ಸಣ್ಣ ಭಾಷೆ, ಸಂಸ್ಕೃತಿ ಸಿನಿಮಾ ರೂಪ ಪಡೆದು ಹಿಂದಿ ಸೇರಿದಂತೆ ರಾಜ್ಯದ ಎಲ್ಲ ಭಾಷೆಗಳಿಗೆ ಸೆಡ್ಡು ಹೊಡೆದು ಸ್ವರ್ಣಕಮಲವನ್ನು ತನ್ನದಾಗಿಸುವುದು ಸಣ್ಣ ವಿಷಯ ಅಲ್ಲವೇ ಅಲ್ಲ. ಅದು ಈ ದೇಶದ ಬಹುಸಂಸ್ಕೃತಿಯನ್ನು ನಾಶಮಾಡಿ ಏಕ ಸಂಸ್ಕೃತಿಯನ್ನು ಪ್ರತಿಷ್ಠಾಪನೆ ಮಾಡುವವರಿಗೆ ಹಾಕಿದ ಸವಾಲು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೀರಾ ಹಿಂದುಳಿದ ಸಮುದಾಯಕ್ಕೆ ಸಣ್ಣದೊಂದು ಅವಕಾಶ ಕೊಟ್ಟರೆ ಯಾವ ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಉದಾಹರಣೆ.

***
ಬ್ಯಾರಿ ಭಾಷೆಯಲ್ಲಿ ಒಂದು ಚಿತ್ರ ಬರುತ್ತದೆ ಎಂದು ನನಗೆ ಗೊತ್ತಾದುದೇ ಸಾರಾ ಅಬೂಬಕರ್ ಅವರು ದೂರವಾಣಿ ಕರೆ ಮಾಡಿದಾಗ. ‘‘ಅಲ್ತಾಫ್ ಎಂಬಾತ ‘ಬ್ಯಾರಿ’ ಎಂಬ ಚಿತ್ರ ಮಾಡುತ್ತಿದ್ದಾನಂತೆ. ಅದು ನನ್ನ ಕತೆಯನ್ನು ಆಧರಿಸಿದೆ ಎಂದು ಟಿವಿ ಸಂದರ್ಶನವೊಂದರಲ್ಲಿ ಕೇರಳದ ನಟ ಮಮ್ಮುಕೋಯ ಹೇಳಿದ್ದಾರೆ. ಈ ಹಿಂದೆ ಈತ ನನ್ನ ಮನೆಗೆ ಬಂದಿದ್ದ. ನಾನು ಅದರ ಹಕ್ಕನ್ನು ಕೊಡುವುದಿಲ್ಲ ಎಂದೂ ಹೇಳಿದ್ದೆ. ಮುಖ್ಯವಾಗಿ ಅದರ ಹಕ್ಕು ಎನ್‌ಎಫ್‌ಡಿಸಿ ಕೈಯಲ್ಲಿದೆ. ಎರಡನೆಯದಾಗಿ ಅದನ್ನು ಚಿತ್ರ ಮಾಡುವುದಾಗಿ ಜಯಮಾಲ ಅವರು ನನ್ನೊಂದಿಗೆ ಹೇಳಿದ್ದಾರೆ. ಇದೀಗ ನನ್ನ ಅನುಮತಿ ಇಲ್ಲದೆ ಚಿತ್ರೀಕರಣಕ್ಕೆ ಇಳಿದಿದ್ದಾನೆ...’’

ನಾನು ವಿಚಿತ್ರವಾದ ಸಂದಿಗ್ಧಕ್ಕೆ ಬಿದ್ದಿದೆ. ಅವರ ಮಾತು ಕೇಳಿದಾಕ್ಷಣ ನನಗೆ ನೋವಾಗಿರಲಿಲ್ಲ. ಬದಲಿಗೆ ಒಂದು ರೀತಿಯ ಖುಷಿಯಾಗಿತ್ತು. ಅದಕ್ಕೆ ಎರಡು ಮುಖ್ಯ ಕಾರಣಗಳಿತ್ತು. ಒಂದು ಕಾಲದಲ್ಲಿ ಸಾರಾ ಅಬೂಬಕರ್ ಕಾದಂಬರಿ ‘ಚಂದ್ರಗಿರಿ ತೀರದಲ್ಲಿ’’ ಕೃತಿಯನ್ನು ನನ್ನ ಸಮುದಾಯದ ಕೆಲ ಜನರು ತೀವ್ರವಾಗಿ ವಿರೋಧಿಸಿದ್ದರು. ಇದೀಗ ಅವರು ಕದ್ದಾದರೂ ಸರಿ, ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದರಲ್ಲಿ ನನಗೆ ಸಂತೋಷ ಪಡಬೇಕಾದದ್ದು ಬಿಟ್ಟರೆ ಬೇರೇನೂ ಕಂಡಿರಲಿಲ್ಲ. ಇನ್ನೊಂದು ಮುಖ್ಯ ಕಾರಣ, ಬ್ಯಾರಿ ಭಾಷೆಯಲ್ಲಿ ಆತ ಸಿನಿಮಾ ಮಾಡಲು ಹೊರಟಿದ್ದಾನೆ. ಅದೇನೂ ಆತನಿಗೆ ಲಾಭ ಕೊಡುವ ವಿಷಯವಾಗಿರಲಿಲ್ಲ. ಹೆಚ್ಚೆಂದರೆ ಆತನಿಗೆ ನಟಿಸುವ ತೆವಲಿರಬಹುದು. ಅದಕ್ಕಾಗಿ ಆತ ಕನ್ನಡ ಭಾಷೆಯನ್ನೇ ಆಯ್ಕೆ ಮಾಡಿಕೊಳ್ಳಬಹುದಿತ್ತು. ಆದರೆ ಬ್ಯಾರಿ ಭಾಷೆಯನ್ನು ಆಯ್ಕೆ ಮಾಡಿಕೊಂಡು ಮೊತ್ತ ಮೊದಲ ಬಾರಿಗೆ ಚಿತ್ರ ಮಾಡಲು ಹೊರಟಿದ್ದಾನೆೆ. ಆದರೆ ನೋವು ಕೊಡುವ ವಿಚಾರವೆಂದರೆ, ಆತ ಸಾರಾ ಅಬೂಬಕರ್ ಕತೆಯನ್ನು ಕದ್ದಿದ್ದಾನೆ. ಸಾರಾ ಅಬೂಬಕರ್ ತುಂಬಾ ಸಿಟ್ಟು ಮತ್ತು ನೋವಿನಿಂದ ಮಾತನಾಡುತ್ತಿದ್ದರು. ಯಾವ ರೀತಿಯಲ್ಲಾದರೂ ಅವರನ್ನು ಸಮಾಧಾನಿಸಬಹುದೋ ಎಂದು ದೂರವಾಣಿಯಲ್ಲಿ ಸಣ್ಣದೊಂದು ಪ್ರಯತ್ನ ಮಾಡಿದ್ದೇ...‘‘ಪರವಾಗಿಲ್ಲ ಮೇಡಂ... ಈ ರೀತಿಯಲ್ಲಾದರೂ ನಿಮ್ಮ ಕಾದಂಬರಿ ನಮ್ಮ ಜನರಿಗೆ ತಲುಪುತ್ತಲ್ಲ...’’ ಎಂದಿದ್ದೆ. ‘‘ಅದು ತಲುಪುವುದೆಲ್ಲ ತಲುಪಿಯಾಗಿದೆ. ಇವನು ನನಗೆ ಮೋಸ ಮಾಡಿ ತಲುಪಿಸುವ ಅಗತ್ಯವಿಲ್ಲ...’’ ಎಂದು ಕಿಡಿಯಾಗಿದ್ದರು.
‘‘ಸರಿ, ಅದರ ಬಗ್ಗೆ ನಾನು ವಿಚಾರಿಸಿ ಹೇಳುತ್ತೇನೆ ಮೇಡಂ...’’ ಎಂದಿದ್ದೆ.
ನನಗೆ ಆಗಲೂ ಈಗಲೂ ಈ ಅಲ್ತಾಫ್ ಚೊಕ್ಕಬೆಟ್ಟು ಎಂಬವರ ಬಗ್ಗೆ ಒಂದಕ್ಷರವೂ ಗೊತ್ತಿಲ್ಲ. ವೈಯಕ್ತಿಕವಾಗಿ ಇವರನ್ನು ನೋಡಿಯೂ ಇಲ್ಲ. ಫೋನ್‌ನಲ್ಲಿ ಮಾತನಾಡಿಯೂ ಇಲ್ಲ. ಕೆಲವರಿಂದ ದೊರಕಿದ ಮಾಹಿತಿಯನ್ನು ಸಾರಾ ಅಬೂಬಕರ್ ಅವರಿಗೆ ನೀಡಿದೆ ‘‘ಈಗಾಗಲೇ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ.’’
‘‘ಏನು ಮಾಡೋದು...ಪತ್ರಿಕಾಗೋಷ್ಠಿ ಕರೀಲಾ?’’ ಎಂದು ಕೇಳಿದ್ದರು.
‘‘ಬೇಡ... ಇದರಿಂದ ಸುಮ್ಮನೆ ಆ ಚಿತ್ರಕ್ಕೆ ನೀವೇ ಪ್ರಚಾರ ಕೊಟ್ಟ ಹಾಗೆ ಆಗುತ್ತೆ. ಸಾಧ್ಯವಾದರೆ ಇಂಡಸ್ಟ್ರಿಗೆ ಪತ್ರ ಬರೆಯಿರಿ. ಎನ್‌ಎಫ್‌ಡಿಸಿ ಕೈಯಲ್ಲಿರುವ ಹಕ್ಕುಗಳ ಕುರಿತ ದಾಖಲೆಗಳನ್ನು ಜೊತೆಗಿಡಿ. ಜಯಮಾಲ ಸೇರಿದಂತೆ ಉದ್ಯಮದ ಎಲ್ಲ ಗಣ್ಯರಿಗೂ ಪತ್ರ ಬರೆಯಿರಿ. ಜೊತೆಗೆ ಒಳ್ಳೆಯ ನ್ಯಾಯವಾದಿಯನ್ನು ಹಿಡಿದು, ಚಿತ್ರ ಪ್ರದರ್ಶನವಾಗದಂತೆ... ಅದಕ್ಕೆ ತಡೆ ತನ್ನಿ... ಇದರಾಚೆಗೆ ಈ ಬಗ್ಗೆ ಏನೂ ಮಾಡುವುದು ಅಷ್ಟು ಸರಿಯಲ್ಲ’’ ಎಂದಿದ್ದೆ.
ಆಮೇಲೆ ಈ ಬಗ್ಗೆ ಹಲವು ಬಾರಿ ನನ್ನಲ್ಲಿ ಮಾತನಾಡಿದ್ದರು. ನನ್ನ ಸಲಹೆಗಳನ್ನು ಕೊಟ್ಟಿದ್ದೆ. ಇದೇ ಸಂದರ್ಭದಲ್ಲಿ ವಾರ್ತಾಭಾರತಿ ಪತ್ರಿಕೆಯಲ್ಲೂ ಸಾರಾ ಅಬೂಬಕರ್ ಅವರ ನೋವುಗಳನ್ನು ಬರೆದಿದ್ದೆ. ಅವರ ಹೇಳಿಕೆಗಳನ್ನೂ ಹಾಕಿದೆ. ಹಾಗೆಯೇ ಅಲ್ತಾಫ್ ಎನ್ನುವ ಅಪರಿಚಿತ ತರುಣನ ಸಾಧನೆಯ ಕುರಿತಂತೆಯೂ ಜೊತೆ ಜೊತೆಗೆ ಮೆಚ್ಚುಗೆಯ ಮಾತುಗಳನ್ನು ಹಾಕಿದ್ದೆ. ಯಾಕೆಂದರೆ ಆತನ ಸಾಹಸವನ್ನು ಮೆಚ್ಚದೇ ಇರುವುದಕ್ಕೆ ನನ್ನಲ್ಲಿ ಕಾರಣವೇ ಇರಲಿಲ್ಲ. ಬಳಿಕ ತುಂಬಾ ಸಮಯ ಸಾರಾ ಅಬೂಬಕರ್ ಸಂಪರ್ಕದಲ್ಲೇ ಇರಲಿಲ್ಲ. ಚಿತ್ರ ಬಿಡುಗಡೆಯಾಯಿತು. ಆಗಲೂ ಚಿತ್ರದ ಸಾಧನೆಯ ಬಗ್ಗೆ ಮೆಚ್ಚ್ಚುಗೆ ವ್ಯಕ್ತಪಡಿಸಿ ಪುಟ್ಟ ಲೇಖನ ಬರೆದಿದ್ದೆ. ಜೊತೆಗೆ ಅದು ಸಾರಾ ಅಬೂಬಕರ್ ಅವರ ಕದ್ದ ಕತೆ ಎನ್ನುವುದನ್ನೂ ಉಲ್ಲೇಖಿಸಿದ್ದೆ.

***
ಆದರೆ ಇದೇ ಸಂದರ್ಭದಲ್ಲಿ ಒಂದು ಮುಖ್ಯ ಬದಲಾವಣೆಯನ್ನು ನಾವು ಗಮನಿಸಬೇಕು. ಒಂದು ಕಾಲದಲ್ಲಿ ‘ಚಂದ್ರಗಿರಿಯ ತೀರದಲ್ಲಿ’ ಕೃತಿಯನ್ನು ವಿರೋಧಿಸಿ ನನ್ನ ಜನರಲ್ಲಿ ಒಂದು ಸಣ್ಣ ಗುಂಪು ಪ್ರತಿಭಟನೆ ನಡೆಸಿತ್ತು. ಅಭಿವ್ಯಕ್ತಿ ಸ್ವಾತಂತ್ರ ಆಗ ಚರ್ಚೆಗೊಳಗಾಯಿತು. ಎಲ್ಲಕ್ಕಿಂತ ಮುಖ್ಯವಾಗಿ, ಆ ಕೃತಿಯ ಮೂಲಕ ಮುಸ್ಲಿಮ್ ಮಹಿಳೆ ವ್ಯಾಪಕ ಚರ್ಚೆಗೊಳಗಾದಳು.


ಇಂದು ಅದೇ ಸಮುದಾಯ ‘ಚಂದ್ರಗಿರಿಯ ತೀರದಲ್ಲಿ’ ಕೃತಿಯನ್ನು ಸಿನಿಮಾ ಮಾಡಿದೆ. ಲೇಖಕಿ ಒಪ್ಪಿಗೆ ಕೊಡದ ಕಾರಣಕ್ಕಾಗಿ ಅದನ್ನು ಕದ್ದು ಸಿನಿಮಾ ಮಾಡಿದೆ. ಇದು ಆರೋಗ್ಯಕರ ಬದಲಾವಣೆ ಎನ್ನುವುದನ್ನು ನಾವು ಗಮನಿಸಬೇಕು. ಚಂದ್ರಗಿರಿಯ ತೀರದಲ್ಲಿ ಕಾದಂಬರಿ ಎತ್ತಿದ ಪ್ರಶ್ನೆಗಳಿಗೆ ಸಿಕ್ಕಿದ ಉತ್ತರ ಇದು. ಆ ಕೃತಿಯನ್ನು ಸಮುದಾಯ ಸ್ವೀಕರಿಸುವ ಮನಸ್ಸನ್ನು ಹೊಂದಿದೆ. ಇಂತಹ ಸಂದರ್ಭದಲ್ಲಿ ಲೇಖಕಿ ಅದರ ಮೇಲೆ ಹಕ್ಕುಗಳನ್ನು ಸಾಧಿಸುತ್ತಾ, ಅವರನ್ನು ಟೀಕೆ ಮಾಡುವುದು ನನಗೆ ಕಾಲದ ವ್ಯಂಗ್ಯವಾಗಿ ಕಾಣುತ್ತದೆ. ಬ್ಯಾರಿ ಸಿನಿಮಾದ ನಿರ್ದೇಶಕ ಒಂದು ಸಣ್ಣ ಮಾರುಕಟ್ಟೆಯ ಭರವಸೆಯೂ ಇಲ್ಲದೆ ಲಕ್ಷಗಟ್ಟಲೆ ಹಣ ಹೂಡಿ ಆ ಸಿನಿಮಾವನ್ನು ಮಾಡಿದ್ದಾನೆ. ಯಾರೋ ಹೇಳಿದಂತೆ ಆತ ಸಾಲ ಸೋಲದಲ್ಲಿ ಮುಳುಗಿದ್ದಾನೆ. ಯಾವುದೋ ಹುಚ್ಚು, ತೆವಲು, ಆಸೆ, ಕನಸು ಆತನನ್ನು ಆ ಕೃತ್ಯಕ್ಕೆ ಪ್ರೇರೇಪಿಸಿರಬಹುದು. ಸಾರಾ ಅಬೂಬಕರ್ ಹಕ್ಕು ಕೊಡಲಿಲ್ಲವೆಂದು ಅವನು ಕೈ ಚೆಲ್ಲಲಿಲ್ಲ. ಕದ್ದಾದರೂ ಅದನ್ನು ಮಾಡಿಯೇ ತೀರುತ್ತೇನೆ ಎಂದು ಹೊರಟ ಅವನ ಹುಂಬ ಸಾಹಸ ನನಗೆ ತುಂಬಾ ಹಿತವಾಗಿ ಕಾಣಿಸುತ್ತದೆ. (ಒಂದು ವೇಳೆ ಇದಕ್ಕೆ ಸ್ವರ್ಣಕಮಲ ಸಿಗದೇ ಇದ್ದಿದ್ದರೆ ಶಾಶ್ವತವಾಗಿ ಕಸದ ಬುಟ್ಟಿ ಸೇರುತ್ತಿತ್ತೇನೋ. ಯಾಕೆಂದರೆ ಮಂಗಳೂರಿನ ಥಿಯೇಟರ್‌ಗಳಲ್ಲೇ ಈ ಚಿತ್ರ ಎರಡು ವಾರ ಓಡಿಲ್ಲ.) ಇಂತಹ ಕಳವುಗಳು ವ್ಯಾಪಕವಾಗಿ ನಡೆಯಬೇಕಾಗಿದೆ. ಸಾರಾ, ಫಕೀರ್, ಬೊಳುವಾರರಂತಹ ಅಪರೂಪದ ಕತೆಗಾರರ ಕೃತಿಗಳು ಒಂದು ಸಮುದಾಯಕ್ಕೆ ಬೆಳಕು ನೀಡುವ ಕಿಟಕಿಗಳು ಕೂಡ. ಅದು ನನ್ನ ಕಿಟಕಿ. ನನಗೆ ಮನಸು ಬಂದಾಗ ತೆರೆಯುತ್ತೇನೆ, ಮುಚ್ಚುತ್ತೇನೆ ಎನ್ನುವ ಲೇಖಕ ನನಗೆ ಪ್ರಶ್ನಾರ್ಹವಾಗಿ ಕಾಣುತ್ತಾನೆ. ಇಂತಹ ಸಂದರ್ಭದಲ್ಲಿ ಅದನ್ನು ಕದಿಯುವುದನ್ನು ನಾನು ಖಂಡಿತವಾಗಿ ಒಪ್ಪುತ್ತೇನೆ. ಫಕೀರ್, ಕಟ್ಬಾಡಿ ವಿಚಾರಗಳನ್ನು ಕದ್ದಾದರೂ, ಅದನ್ನು ತಲುಪಬೇಕಾದವರಿಗೆ ತಲುಪಿಸಿ ಎನ್ನುತ್ತೇನೆ. ಅನಾರೋಗ್ಯ ಪೀಡಿತ ಜನರಿರುವ ಸಮಾಜದಲ್ಲಿ ಒಬ್ಬ ಒಂದು ಔಷಧವನ್ನು ಕಂಡು ಹಿಡಿದಿದ್ದಾನೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ, ಅದರ ಹಕ್ಕುಗಳು ತನ್ನದು ಮತ್ತು ತಾನು ಬಯಸಿದರೆ ಮಾತ್ರ ಅದನ್ನು ಕೊಡಬಲ್ಲೆ ಎನ್ನುವ ಸಂದರ್ಭದಲ್ಲಿ ಅದನ್ನು ಕದ್ದಾದರೂ ಅಗತ್ಯವಿರುವವರಿಗೆ ತಲುಪಿಸುವುದನ್ನು ಮನುಷ್ಯರೆನಿಸಿಕೊಂಡವರೆಲ್ಲರೂ ಸ್ವಾಗತಿಸುತ್ತಾರೆ ಎಂದು ತಿಳಿದಿದ್ದೇನೆ. ಇಂದು ಫಕೀರ್, ಬೊಳುವಾರು, ಸಾರಾ ಮೊದಲಾದವರ ಕತೆಗಳು ಬ್ಯಾರಿ ಭಾಷೆಯಲ್ಲಿ ನಾಟಕ, ಸಿನಿಮಾ, ಟಿ.ವಿ. ಧಾರಾವಾಹಿಯಾಗಿ ಬರಬೇಕು. ಅದಕ್ಕಾಗಿ ಅವರೊಂದಿಗೆ ಅನುಮತಿಯನ್ನು ಕೇಳಬೇಕು. ಕೊಡದಿದ್ದಲ್ಲಿ ಅವರ ಬೆನ್ನು ಬೀಳಬೇಕು. ಮತ್ತೂ ಕೊಡದಿದ್ದಲ್ಲಿ ಅದನ್ನು ಕದಿಯಬೇಕು.

 ***
ಇದೇ ಸಂದರ್ಭದಲ್ಲಿ ಒಬ್ಬ ಸೃಜನಶೀಲ ಲೇಖಕಿಗೆ ತಕ್ಕುದಲ್ಲದ ಕೆಲವು ಸಾಲುಗಳನ್ನು ಕಳೆದ ವಾರ ಲಂಕೇಶ್ ಪತ್ರಿಕೆಯಲ್ಲಿ ಸಾರಾ ಅಬೂಬಕರ್ ಬರೆದಿದ್ದಾರೆ. ಅದರಲ್ಲಿ ಮುಖ್ಯವಾದುದು ಬ್ಯಾರಿ ಸಾಹಿತ್ಯ ಅಕಾಡೆಮಿ ಒಬ್ಬ ಮುಸ್ಲಿಮನಿಗೆ ಅದರ ಡಿಟಿಪಿ ವರ್ಕ್‌ಗಳನ್ನು ಕೊಡಲಿಲ್ಲ ಎನ್ನುವ ಆರೋಪ. ಮತ್ತು ಅದರ ಹಿಂದೆಯೂ ಹತ್ತು ಹಲವು ಸಂಚುಗಳನ್ನು ಹುಡುಕಲು ಪ್ರಯತ್ನಿಸಿದ್ದಾರೆ.
 ತಿಂಗಳ ಹಿಂದೆ ಬ್ಯಾರಿ ಅಕಾಡೆಮಿ ಒಂದು ಸಮಾರಂಭ ಮಾಡಿತ್ತು. ಅದರಲ್ಲಿ ಸಾರಾ ಅಬೂಬಕರ್ ಭಾಗವಹಿಸಬೇಕಾಗಿತ್ತು. ಕೊನೆಯ ಕ್ಷಣದಲ್ಲಿ ಅವರು ಭಾಗವಹಿಸುವುದಿಲ್ಲ ಎನ್ನುವ ಸುದ್ದಿ ನನಗೆ ಸಿಕ್ಕಿತು. ಸಂಘಟಕರಲ್ಲಿ ‘‘ಸಾರಾ ಅವರು ಯಾಕೆ ಭಾಗವಹಿಸುತ್ತಿಲ್ಲ?’’ ಎಂದು ನಿಷ್ಠುರವಾಗಿ ಕೇಳಿದ್ದೆ. ಆಗ ಅವರು ಹೇಳಿದ ಮಾತು ನನ್ನಲ್ಲಿ ಯಾಕೋ ಮುಜುಗರ ಸೃಷ್ಟಿಸಿತ್ತು. ಯಾಕೋ ನನಗೆ ನನ್ನ ಕುರಿತಂತೆಯೇ ನಾಚಿಕೆಯಾಯಿತು. ‘‘ಸಾರಾ ಅಬೂಬಕರ್ ಫೋನ್ ಮಾಡಿದ್ದರು ‘‘ಈಗ ಅಕಾಡೆಮಿಯ ಜಾಬ್‌ವರ್ಕ್ ನನ್ನ ಮಗನಿಗೆ ಕೊಡುತ್ತಿಲ್ಲ ಯಾಕೆ? ಮಗ ಸಮಾರಂಭಕ್ಕೆ ಹೋಗ್ಬೇಡಾ ಎಂದು ಹೇಳಿದ್ದಾನೆ’’ ಎಂದು ಫೋನಲ್ಲಿ ಹೇಳಿದ್ದಾರೆ ಎಂದರು’’. ಅಕಾಡೆಮಿಯವರ ಈ ಉತ್ತರ ನನಗೆ ನಂಬುವುದಕ್ಕೆ ಕಷ್ಟವಾಯಿತು. ಆದರೆ ಲಂಕೇಶ್‌ನಲ್ಲಿ ಸ್ವತಃ ಅವರೇ ಇದನ್ನು ಬರೆದಾಗ ನಾನು ನಂಬಲೇಬೇಕಾಯಿತು. ಅಕಾಡೆಮಿಯವರು ಇದಕ್ಕೆ ತಮ್ಮದೇ ಆದ ಸ್ಪಷ್ಟೀಕರಣವನ್ನೂ ನೀಡುತ್ತಾರೆ. ‘ಅಕಾಡೆಮಿ ಆಗುವ ಮೊದಲು ನಾವು ಸಾರಾ ಅಬೂಬಕರ್ ಅವರ ಮಗನಿಗೇ ಎಲ್ಲ ಜಾಬ್‌ವರ್ಕ್‌ಗಳನ್ನು ನೀಡುತ್ತಿದ್ದೆವು. ಆದರೆ ಅಕಾಡೆಮಿ ಆದ ಮೇಲೆ ನಮಗೆ ಇಚ್ಛಿಸಿದ ಹಾಗೆ ಮಾಡುವುದಕ್ಕೆ ಸಾಧ್ಯವಿಲ್ಲ. ಯಾವುದೇ ಜಾಬ್‌ವರ್ಕ್‌ಗಳನ್ನು ಕೊಟೇಶನ್ ಕರೆದು ಆ ಮೂಲಕವೇ ಕೊಡಬೇಕಾಗುತ್ತದೆ. ಹಾಗೂ ಪುಸ್ತಕಗಳನ್ನು ಅತ್ಯಂತ ಸುಂದರವಾಗಿ ಮುದ್ರಿಸುವ ಜವಾಬ್ದಾರಿಯೂ ಅಕಾಡೆಮಿಯ ಮೇಲಿರುತ್ತದೆ. ಈಗ ಆಕೃತಿ ಪ್ರಕಾಶನದ ನಾಗೇಶ್ ಕಲ್ಲೂರು ಎಂಬವರಿಗೆ ನೀಡುತ್ತಿದ್ದೇವೆ. ಈವರೆಗೆ ಬಂದ ಎಲ್ಲ ಕೃತಿಗಳನ್ನು ನಮ್ಮ ಅಕಾಡೆಮಿಗೆ ತಕ್ಕುದಾಗಿ ಸುಂದರವಾಗಿ ಮುದ್ರಿಸಿ ಕೊಟ್ಟಿದ್ದಾರೆ. ಇದರಲ್ಲಿ ಬ್ಯಾರಿ ಅಕಾಡೆಮಿ ಎನ್ನುವ ಕಾರಣಕ್ಕಾಗಿ ತನ್ನ ಮಗನಿಗೇ ಕೊಡಬೇಕು, ಮುಸ್ಲಿಮೇತರನಿಗೆ ಕೊಡಬಾರದು ಎನ್ನುವ ಸಾರಾ ಅಬೂಬಕರ್ ಮಾತು ಎಷ್ಟರಮಟ್ಟಿಗೆ ಸರಿ’ ಎಂದು ಅಕಾಡೆಮಿಯ ಸದಸ್ಯರು ಕೇಳುತ್ತಾರೆ.
ಬ್ಯಾರಿ ಅಕಾಡೆಮಿ ಸುಮಾರು 20 ಪುಸ್ತಕಗಳನ್ನು ಈ ಮೂರು ವರ್ಷಗಳ ಅವಧಿಯಲ್ಲಿ ಹೊರ ತಂದಿದೆ. ಮುದ್ರಣ ಮತ್ತು ಮುಖಪುಟಗಳು ಅತ್ಯದ್ಭುತವಾಗಿ ಮೂಡಿ ಬಂದಿವೆ. ನಾಗೇಶ್ ಪ್ರತಿಭಾವಂತ, ಸೃಜನಶೀಲ ತರುಣ. ಅವನ ಪ್ರಾಮಾಣಿಕತೆಯ ಬಗ್ಗೆ ಯಾವ ಆಧಾರವೂ ಇಲ್ಲದೆ ಸಾರಾ ಅಬೂಬಕರ್ ಸಂಶಯಿಸಿದ್ದು ನನಗೆ ನೋವು ತಂದಿದೆ.

***
ಇಷ್ಟೆಲ್ಲ ಹೇಳಿದ ಬಳಿಕವೂ ಬ್ಯಾರಿ ಸಿನಿಮಾ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯನ್ನು ಕದ್ದದ್ದು ಎನ್ನುವುದರಲ್ಲಿ ನನಗೆ ಯಾವ ಅನುಮಾನವೂ ಇಲ್ಲ. ಇದರಲ್ಲಿ ಸಾರಾ ಅಬೂಬಕರ್‌ಗೆ ಅನ್ಯಾಯವಾಗಿರುವುದು ನೂರಕ್ಕೆ ನೂರರಷ್ಟು ನಿಜ. ಆದರೆ ಅದರಿಂದ ಒಂದು ಸಮುದಾಯ ಪಡೆದ ಲಾಭಕ್ಕೆ ಹೋಲಿಸಿದರೆ ಸಾರಾ ಅಬೂಬಕರ್‌ಗೆ ಆದ ಅನ್ಯಾಯವನ್ನು ನಾನು ಸಹಿಸಿಕೊಳ್ಳಬಲ್ಲೆ. ಮತ್ತು ಇಷ್ಟು ದೊಡ್ಡ ಲಾಭವಾಗುವುದಾದರೆ ಆಗಾಗ ಇಂತಹ ಸಣ್ಣ ಪುಟ್ಟ ಅನ್ಯಾಯಗಳು ನಡೆದರೂ ಪರವಾಗಿಲ್ಲ ಅನ್ನಿಸುತ್ತದೆ ನನಗೆ. ಇದೊಂದು ರೀತಿ ಕೆರೆಯ ನೀರು, ಕೆರೆಗೆ ಚೆಲ್ಲಿದಂತೆ. ಸಾರಾ, ಬೊಳುವಾರು, ಫಕೀರ್ ಮೊದಲಾದವರೆಲ್ಲ ಬರೆದದ್ದು ತಮ್ಮ ಸಮುದಾಯದ ಹೆಣ್ಣು ಮಕ್ಕಳ ಕಣ್ಣೀರನ್ನು. ಆ ಕಣ್ಣೀರಿನ ಹಕ್ಕುಗಳು ಯಾರದ್ದು ಎನ್ನುವುದನ್ನು ತೀರ್ಮಾನಿಸಬೇಕಾದವರು ಸೃಜನಶೀಲ ಲೇಖಕರಾದ ನಾವುಗಳಲ್ಲ. ಆ ಸಮುದಾಯದ ಹೆಣ್ಣು ಮಕ್ಕಳೇ ಅದನ್ನು ನಿರ್ಧರಿಸಬೇಕು. ಮತ್ತು ಅತಿ ಬೇಗನೇ ನಿರ್ಧರಿಸುತ್ತಾರೆ ಕೂಡ.

10 comments:

 1. ಇಂಥ ವಿಚಾರಗಳನ್ನು ಕದ್ದಾದರೂ ಜನಗಳಿಗೆ ತಲುಪಿಸಬೇಕು..! Hats off Basheer Bm BmBhai ! Namaskara Shakuntala Iyer Ma'm ! Society needs writers like Basheer Bhai !

  ReplyDelete
 2. ತಮಾಷೆ ಎಂದರೆ ಮೂಲತಃ ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಕತೆ ಒರಿಜಿನಲ್ಲಾ? ಕೆಲವು ವರ್ಷಗಳ ಹಿಂದೆ ನೀನಾಸಂ ನಾಟಕತಂಡದವರು ಮೊದಲಗಿತ್ತಿ ಎನ್ನುವ ಒಂದು ನಾಟಕವನ್ನು ಬಂಗಾಳಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿ ಆಡಿದರು. ಚಂದ್ರಗಿರಿಯ ತೀರದಲ್ಲಿ ಕಾದಂಬರಿಯ ಕತೆ ಯಥಾವತ್ ಮೊದಲಗಿತ್ತಿಯ ಕತೆಯೇ ಆಗಿರುವುದು (ಅದರಲ್ಲಿ ನಾಯಕಿ ಆತ್ಮಹತ್ಯೆ ಮಾಡಿಕೊಳ್ಳದೆಯೇ, ಮರುವಿವಾಹವನ್ನೂ ಮಾಡಿಕೊಳ್ಳದೆ ಒಂಟಿಯಾಗಿಯೇ ಬದುಕನ್ನು ಎದುರಿಸುತ್ತಾಳೆ ಎನ್ನುವುದನ್ನು ಬಿಟ್ಟರೆ) ಕಾಕತಾಳೀಯ ನ್ಯಾಯವೆ!

  ReplyDelete
 3. ನಿಮ್ಮ ಲೇಖನ ಓದಿ ತುಂಬಾ ಸಂತೋಷ ಆಯಿತು...ಬ್ಯಾರಿ ಭಾಷೆಯ ಮೂಲಕ ಸಮುದಾಯವನ್ನು ಎಚ್ಚರಿಸುವ ಕೆಲಸ ಮಾಡಿದ್ದಿರಿ...ನಿಮ್ಮ ಲೇಖನವನ್ನು ನನ್ನ ಜ್ವರದ ಮಧ್ಯೆ ಓದಿ ಆನಂದಿಸಿದ್ದೇನೆ. ಇಂಥ ಲೇಖನ ಇನ್ನು ಬರೆಯಿರಿ...ಒಂದು ಕದ್ದ ಕಥೆ ಸಮುದಾಯದ ಅದೆಷ್ಟೋ ಜನರನ್ನು ಜಾಗೃತಿ ಗೊನಿಸಬಹುದು.
  M.Iqbal uchila

  ReplyDelete
 4. ತುಂಬಾ ಖುಷಿಯಾಗುತ್ತಿದೆ. ನಮ್ಮ ಸಂಸ್ಕೃತಿಯ ಆಂತಯ೵ದಲ್ಲಿ ನಡೆಯುತ್ತಿರುವ ಸೂಕ್ಷ್ಮ ಹರಿವೊಂದನ್ನು ತಿಳಿಸಿದ್ದೀರಿ. ನಿಜ ಬಶೀರ್, ಕದ್ದಾದರೂ ಒಳಿತನ್ನು ಸಮೂಹಕ್ಕೆ ಹಂಚಬೇಕು.
  ಚಂದ್ರಶೇಖರ್ ಮಂಡೆಕೋಲು

  ReplyDelete
 5. ತಾನು ಬರೆದ ಕಥೆಯ ಚುಂಗು ಹಿಡಿದು ಮತ್ತೊಂದು ಸೃಜನಶೀಲ ಕೆಲಸ ನಡೆದಿದೆಯಲ್ಲ ಎಂದು ಸಾರಾ ಸಂತಸ ಪಡಬೇಕು, ಹೆಮ್ಮೆ ಪಡಬೇಕು. ಸಾರಾ ಅವರ ವಯಸ್ಸು ಮತ್ತು ಅನುಭವದ ಹಿರಿತನಗಳು ಈ ಪ್ರಸಂಗವನ್ನು ಸಕಾರಾತ್ಮಕವಾಗಿ ನೋಡುವಂತೆ ಮಾದಬೇಕು. ಸಾವಿರಾರು ಪ್ರತಿಗಳು ಮಾರಾಟವಾಗಿರುವ, ಪ್ರಶಸ್ತಿಗಳನ್ನೂ ತಂದು ಕೊಟ್ಟಿರುವ ಕೃತಿಯ ವ್ಯಾಪಕತೆಗೆ ಈ ರೀತಿ ಬೇಲಿ ಹಾಕುವುದು ಸರಿಯಲ್ಲ.

  ReplyDelete
 6. ನಿಜಕ್ಕೂ ನಿಮ್ಮ ಭಾವನೆಗೆ ಗೌರವ ತುಂಬಿಕೊಳ್ಳುತ್ತದೆ. ನಾವು ಬಾಲ್ಯದಲ್ಲಿ ತಪ್ಪು ತಪ್ಪಾಗಿಯಾದರೂ ಬ್ಯಾರಿ ಭಾಷೆ ಮಾತಾಡಿ ಅಭ್ಯಾಸ ಮಾಡಿಕೊಳ್ಳುತ್ತಿದ್ದ ನೆನಪು. ಬ್ಯಾರಿ ಭಾಷೆ ಎಂದರೆ ಮುಸ್ಲಿಮರಿಗಷ್ಟೇ ಸೀಮಿತ ಎಂದು ತಿಳಿದಿದ್ದೆ.. ಕೇರಳದ ಹಲವು ಮಲಯಾಳಂ ಚಿತ್ರಗಳಲ್ಲಿ ಕಾಸರಗೋಡು ಪರಿಸರದ ಬ್ಯಾರಿ ಭಾಷೆಯನ್ನು ಕಂಡಿದ್ದೇನೆ .. ಹಾಗೆ ಮಂಗಳೂರು ಪರಿಸರದ ಭಾಷೇಗೂ ಸಾಮ್ಯತೆ ಇದ್ದರೂ ಹಲವು ವೆತ್ಯಾಸಗಳನ್ನೂ ಕಂಡಿದ್ದೇನೆ. ಏನಿದ್ದರು ನಿಮ್ಮ ಅನಿಸಿಕೆ ಮತ್ತು ಲೇಖನ ಬಹಳ ಮೆಚ್ಚೆಕೆಯಾಯಿತು

  ReplyDelete
 7. ನಮಸ್ತೆ ಸರ್,
  ಈ ಬರಹ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಓದಿದೆ. ಮೊದಮೊದಲು ನೀವು ಸಾರಾ ಮೇಡಂ ಬೆನ್ನಿಗೆ ನಿಂತು ನಂತರ ಬ್ಯಾರಿ ಚಿತ್ರದ ನಿರ್ದೇಶಕನ ಕಳ್ಳತನವನ್ನು ಬೆಂಬಲಿಸಿದ್ದು, ನಿಮ್ಮಲ್ಲಿನ ಬಂಡಾಯದ ಗುಣದಂತೆ ನನಗೆ ಕಂಡಿತು. ನೀವು ಒಬ್ಬ ಬ್ಯಾರಿಯಾದುದರಿಂದ ಆ ಭಾಷೆಯ ಬಗಿಗಿನ ನಿಮ್ಮ ಮೋಹ ಮಾನ್ಯವಾದುದು. ಆ ಕಾರಣದಿಂದಲೆ ನೀವು ಬ್ಯಾರಿಯಲ್ಲಿ ಬಂದ ಎಲ್ಲ ಸಾಹಿತಿಗಳು ಮತ್ತು ಸಾಹಿತ್ಯವನ್ನು ಮೆಚ್ಚುತ್ತಲೆ ಬಂದಿದ್ದಿರಿ. ಅದರಂತೆಯೇ ಸಾರಾ ಅಬೂಬಕರ್ ಮತ್ತು ಅವರ ಸಾಹಿತ್ಯವನ್ನು ಕೂಡ.
  ಆದರೆ, ಈಗಿನ ಕಾಲಕ್ಕನುಗುಣವಾಗಿ ಬ್ಯಾರಿ ಕೃತಿಯೊಂದು ಕದ್ದು ಸಿನೇಮಾ ಆಗುತ್ತಿರುವುದನ್ನು ಬೆಂಬಲಿಸಬೇಕೋ ಬೇಡವೋ ಎಂದು ಆರಂಭದಲ್ಲಿ ನೀವು ತೋಳಲಾಟದಲ್ಲಿ ಸಿಲುಕಿಕೊಂಡರೂ ನಂತರದಲ್ಲಿ ನಿರ್ದೇಶಕರನ್ನೆ ಬೆಂಬಲಿಸುವ, ಜೊತೆಗೆ ಬ್ಯಾರಿಗಳ ಇನ್ನಿತರ ಕೃತಿಗಳು ಕದ್ದಾದರೂ ಸರಿ ಸಿನೆಮಾ ಅಗಬೇಕೆಂಬ ದಿಟ್ಟ ನಿರ್ದಾರಕ್ ನಿಮ್ಮಲ್ಲಿನ ಬಂಡಾಯಗಾರನನ್ನು ಪರಿಚಯಿಸುತ್ತದೆ. ಸಾರಾ ಅವರು ತಮ್ಮ ಕೃತಿಯ ಮೇಲಿನ ಹಕ್ಕು ಸಾಧಿಸುತ್ತಿರುವುದನ್ನು ಈ ಕಾಲದ ವ್ಯಂಗ್ಯವಾಗಿರುವುದು ನನಗೂ ಕೂಡ ಸತ್ಯ ಏನಿಸಿತು.
  ಹಿರಿಯ ಸಾಧಕರು ಮುಸ್ಸಂಜೆಯ ದಿನಗಳಲ್ಲಿ ತಮ್ಮ ಕುಟುಂಬದ ಸ್ವಾರ್ಥಕ್ಕೆ ಜೋತು ಬೀಳುವುದು ಬಹುಶಃ ಅವರ ವೃದ್ಧಾಪ್ಯದ ಮನೋದೌರ್ಬಲ್ಯವಾಗಿರಬಹುದು ಎಂಬುದು ನನ್ನ ಅನಿಸಿಕೆ. ಸಾರಾ ಅವರು ಕೂಡಾ ಇದಕ್ಕೆ ಹೊರತಾಗಿಲ್ಲ.

  ReplyDelete
 8. ತಾನು ಬರೆದ ಕಥೆಯಿಂದ ಮತ್ತೊಂದು ಸೃಜನಶೀಲ ಕೆಲಸನಡೆದಿದೆಯಲ್ಲ ಎಂದು ಹೆಮ್ಮೆ ಪಡುವ ಕಾಲದಲ್ಲಿ ಸಾರ ಯಾಕೆ ಹೀಗಾಡುತಿದ್ದಾರೆ ? ಸಾರಾ ಸಂತಸ ಪಡಬೇಕು, ಹೆಮ್ಮೆ ಪಡಬೇಕು.
  lokesh mosale

  ReplyDelete
 9. ondu sanna thappu ide Director ondastu amount kottiddare adannu oppa bahudithu mathu nimma baraha thumba chennagide ee kadiyuvudu ideyall oh bidri nananthu kadiyuthale iruthene

  ReplyDelete