Saturday, February 4, 2012

ನಮ್ಮನ್ನು ನಾವೇ ಅರಿಯುವ ಪ್ರಯತ್ನ ‘ಕಾಸ್ಮಿಕ್ ಡಿಟೆಕ್ಟಿವ್’

ವರ್ತಮಾನ ಡಾಟ್ ಕಾಮ್ ಹೊರತಂದಿರುವ ಸಾಕ್ಷಚಿತ್ರ ‘ಭೂಮಿ ಹುಟ್ಟಿದ್ದು ಹೇಗೆ’ ಎಂಬ ಸಿಡಿಯನ್ನು ವೀಕ್ಷಿಸಿದಾಗ ವರ್ಷದ ಹಿಂದೆ ನಾನು ಓದಿದ ಮಣಿ ಭೌಮಿಕ್ ಅವರ ‘ಕಾಸ್ಮಿಕ್ ಡಿಟೆಕ್ಟಿವ್’ ನೆನಪಿಗೆ ಬಂತು. ಇದನ್ನು ಕೆ. ಪುಟ್ಟಸ್ವಾಮಿಯವರು ಸರಳವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಅಭಿನವ ಪ್ರಕಾಶನ ಇದನ್ನು ಬೆಳಕಿಗೆ ತಂದಿದೆ. ಈ ಕೃತಿಯನ್ನು ಓದಿದ ಖುಷಿಯನ್ನು ನಾನು ಕೃತಿಯ ಪರಿಚಯ ರೂಪದಲ್ಲಿ ಹಂಚಿಕೊಂಡಿದ್ದೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಬರೆದ ಆ ಕೃತಿ ಪರಿಚಯ ಇಲ್ಲಿದೆ.

‘‘ನಾನು ಪಡೆಯುವ ಅತ್ಯಂತ ಸುಂದರವಾದ ಅನುಭವ, ನಿಗೂಢತೆ’’ ಆಲ್ಬರ್ಟ್ ಐನ್‌ಸ್ಟೀನ್ ಅವರ ಮಾತುಗಳೊಂದಿಗೆ ಮಣಿ ಭೌಮಿಕ್ ಅವರ ‘ಕಾಸ್ಮಿಕ್ ಡಿಟೆಕ್ಟಿವ್’ ತೆರೆದುಕೊಳ್ಳುತ್ತದೆ. ನಿಜ, ಈ ಪುಸ್ತಕದ ಸಬ್ ಎಡ್ಡಿಂಗ್ ‘ನಮ್ಮ ವಿಶ್ವದ ನಿಗೂಢಗಳ ಅನ್ವೇಷಣೆ’ ಎಂದು ಹೇಳುತ್ತದೆಯಾದರೂ, ಅನ್ವೇಷಣೆ ಮಾಡು ತ್ತಲೇ ನಾವು ನಿಗೂಢತೆಯ ಇನ್ನಷ್ಟು ಆಳಕ್ಕೆ ಇಳಿಯುತ್ತಾ ಹೋಗುತ್ತೇವೆ. ಕೆ. ಪುಟ್ಟಸ್ವಾಮಿಯವರು ಅನುವಾದಿಸಿರುವ ಕಾಸ್ಮಿಕ್ ಡಿಟೆಕ್ಟಿವ್ ಕನ್ನಡದ ಪುಸ್ತಕ ಲೋಕಕ್ಕೆ ಒಂದು ಅಪ ರೂಪದ ಕೊಡುಗೆ ಎನ್ನುವುದಕ್ಕೆ ಯಾವ ಅಡ್ಡಿಯೂ ಇಲ್ಲ.

ಪುಟ್ಟಸ್ವಾಮಿಯವರು ಈ ಹಿಂದೆ ಮಣಿ ಭೌಮಿಕ್ ಅವರ ‘ಕೋಡ್ ನೇಮ್ ಗಾಡ್’ ಕೃತಿಯನ್ನು ಅನುವಾದಿಸಿದ್ದರು. ವಿಜ್ಞಾ ನಗಳ ಪರಿಕಲ್ಪನೆಗಳ ಮೂಲಕ ದೇವರ ವಿನ್ಯಾಸವನ್ನು ಅರಿ ಯುವ, ಆಧ್ಯಾತ್ಮ ಮತ್ತು ವಿಜ್ಞಾನವನ್ನು ಬೆಸೆಯುವ ಪ್ರಯತ್ನ ಈ ಕೃತಿಯಲ್ಲಿ ನಡೆದಿತ್ತು. ಹಾಗೆ ನೋಡಿದರೆ, ಕಾಸ್ಮಿಕ್ ಡಿಟೆಕ್ಟಿವ್ ಕೃತಿಯೂ ಇದಕ್ಕೆ ಭಿನ್ನವಾದುದೇನೂ ಅಲ್ಲ. ವಿಶ್ವದ ರಹಸ್ಯವನ್ನು ಭೇದಿಸುವ ಪತ್ತೇದಾರಿ ಕೆಲಸವನ್ನು ಮಾಡುತ್ತಲೇ ಈ ಕೃತಿ ಅಂತಿ ಮವಾಗಿ ಹೋಗಿ ನಿಲ್ಲುವುದು ನಾವೆಲ್ಲರೂ ಒಂದೇ ಮೂಲ ದಿಂದ ಉಗಮವಾಗಿದ್ದೇವೆ ಎನ್ನುವ ಅಂಶದ ಬಳಿಗೆ. ಹೇಗೆ ಒಂದು ಮರದ ನಕ್ಷೆಯು ಅದರ ಬೀಜದಲ್ಲಿಯೇ ಅಡಗಿರುತ್ತದೆ ಯೋ ಹಾಗೆ ಜೀವ ಉಗಮವಾಗುವ ಸಾಧ್ಯತೆಯು ವಿಶ್ವದ ನೀಲ ನಕಾಶೆಯಲ್ಲಿತ್ತು ಎನ್ನುವ ಅಂಶವನ್ನು ಅತ್ಯಂತ ಸರಳ ಭಾಷೆ ಯಲ್ಲಿ ನಿರೂಪಿಸಲು ಈ ಕೃತಿ ಪ್ರಯತ್ನಿಸುತ್ತದೆ. ಅಂದರೆ, ಮನು ಷ್ಯನಿಗಾಗಿ ಒಂದು ವೇದಿಕೆ ಸೃಷ್ಟಿಸುವ ಉದ್ದೇಶ ಅದರ ಮೂಲ ದಲ್ಲೇ ಇತ್ತು. ಈ ಅಂಶದೊಂದಿಗೇ ಕೃತಿ ಮುಕ್ತಾಯವಾಗುತ್ತದೆ. ಅಂದರೆ ನಿಗೂಢತೆಯ ಅನ್ವೇಷಣೆಗೆ ಹೊರಟ ಮನುಷ್ಯ, ಅದರಾ ಚೆಗಿನ ಇನ್ನೊಂದು ನಿಗೂಢತೆಯ ಮುಂದೆ ದಿಗ್ಮೂಢನಾಗಿ ನಿಲ್ಲಬೇಕಾಗುತ್ತದೆ.

ಪುಸ್ತಕವನ್ನು ಕುತೂಹಲ ಮನಸ್ಸಿನ ಜಗತ್ತಿನ ಎಲ್ಲ ಮಕ್ಕಳಿಗೆ ಅರ್ಪಿಸಲಾಗಿದೆ. ಅದರರ್ಥ ಇದು ಮಕ್ಕಳಿಗಾಗಿ ಮಾಡಿರುವ ಪುಸ್ತಕವೆಂದಲ್ಲ. ಇಡೀ ಪುಸ್ತಕವನ್ನು ಓದಿ ಮುಗಿಸಿದಾಗ, ಈ ಬ್ರಹ್ಮಾಂಡದ ಮುಂದೆ ನಾವೆಲ್ಲ ಅಂಬೆಗಾಲಿಕ್ಕುವ ಪುಟ್ಟ ಮಕ್ಕಳು ಎಂಬ ಅನುಭವವನ್ನು ನಮಗೆ ಕೊಡುತ್ತದೆ. ಬಹುಶಃ ಈ ಕಾರ ಣಕ್ಕಾಗಿ ಕೃತಿಯನ್ನು ಲೇಖಕರು ಮಕ್ಕಳಿಗಾಗಿ ಅರ್ಪಿಸಿರಬಹುದು. ಹಾಗೆ ನೋಡಿದರೆ, ಇಡೀ ಕೃತಿಯ ನಿರೂಪಣೆಯಲ್ಲಿ ಮಣಿ ಭೌಮಿಕ್ ಅವರ ಮಕ್ಕಳ ಮನಸ್ಸೊಂದು ಕೆಲಸ ಮಾಡಿದೆ. ಅವರು ಖಗೋಳ ವಿಜ್ಞಾನ ಮತ್ತು ಕಾಸ್ಮಾಲಜಿಯನ್ನು ಅಧ್ಯಯನ ಮಾಡಿರುವುದು ಒಂದು ರೀತಿಯ ವಿರಾಗಿ ಸನ್ನಿವೇಶದಲ್ಲಿ. ಬಡತನದಲ್ಲಿ ಹುಟ್ಟಿ ಬೆಳೆದ ಭೌಮಿಕ್ ರಾತ್ರಿ ಆಕಾಶವನ್ನು ನೋಡುತ್ತಾ ಅಲ್ಲಿರುವ ನಕ್ಷತ್ರ ಮಣಿಗಳನ್ನು ಕಂಡು ‘‘ಅಪ್ಪಾ ಅದೇ ದೇವರೇನು?’’ ಎಂದು ಕೇಳುತ್ತಿದ್ದರಂತೆ. ಭೂಮಿಯ ಜಂಜಡ ಗಳಿಂದ ಪಾರಾಗುವುದಕ್ಕೆ ಅವರು ಕಂಡು ಕೊಂಡದ್ದು ರಾತ್ರಿಯ ಆಕಾಶ. ಅಷ್ಟೇ ಅಲ್ಲ, ಆಕಾಶವನ್ನು ಅಧ್ಯಯನ ಮಾಡುತ್ತಾ ಮಾಡುತ್ತಾ ತಾನು ಕಂಡುಕೊಂಡ ಸಂಗತಿಗಳನ್ನೆಲ್ಲ ಇತರ ರೊಡನೆ ಮಕ್ಕಳ ಮನಸ್ಸಿನೊಂದಿಗೆ ಹಂಚಿಕೊಳ್ಳುತ್ತಾರೆ. ಅತ್ಯಂತ ಸರಳವಾದುದನ್ನು ಹೇಳುತ್ತಿದ್ದೇನೆ ಎಂಬ ಅನುಭ ವವನ್ನು ಕೊಡುತ್ತಲೇ ಅವರು ಅತ್ಯಂತ ನಿಗೂಢವಾದು ದರ ಕಡೆಗೆ ನಮ್ಮನ್ನು ಕೊಂಡೊಯ್ದು ನಿಲ್ಲಿಸುತ್ತಾರೆ.

 ವಿಶ್ವದ ರಹಸ್ಯವನ್ನು ಅರಿಯುವುದಕ್ಕೆ ಅವರು ನಮ್ಮನ್ನು ಸಿದ್ಧಗೊಳಿಸುವುದರಲ್ಲೇ ಒಂದು ಆಕರ್ಷಕ, ಜನಪ್ರಿಯ ವಿಧಾನವಿದೆ. ನಮ್ಮನ್ನವರು ಮರಿ ಪತ್ತೇದಾರರು ಎಂದು ಕರೆದು ವಿಶ್ವದ ರಹಸ್ಯಗಳನ್ನು ಪತ್ತೆ ಮಾಡುವ ಒಂದೊಂ ದೇ ಹೊಣೆಗಾರಿಕೆಯನ್ನು ವಹಿಸುತ್ತಾ ಹೋಗುತ್ತಾರೆ. ಅದಕ್ಕಾಗಿ ಒಂದು ಪ್ರವಾಸವನ್ನು ಸಜ್ಜುಗೊಳಿಸುತ್ತಾರೆ. ಆಕಾಶವೆಂದರೆ ದೂರದಿಂದ ನೋಡುವಾಗ ನಮ್ಮಲ್ಲಿ ರೊಮ್ಯಾಂಟಿಕ್ ಭಾವನೆಯೊಂದು ಹುಟ್ಟುತ್ತದೆ. ಫ್ಯಾಂಟಸಿ ಜಗತ್ತೊಂದು ತೆರೆದುಕೊಳ್ಳುತ್ತದೆ. ಆರಂಭದಲ್ಲಿ ಭೌಮಿಕ್ ಆಕಾಶವನ್ನು ಕಂಡದ್ದೇ ಆ ಕಣ್ಣಿನಲ್ಲಿ. ಬಳಿಕ ನಿಧಾನಕ್ಕೆ ಆ ಫ್ಯಾಂಟಸಿ ಜಗತ್ತಿನಿಂದ ನಮ್ಮನ್ನು ಹೊರಕ್ಕೆ ತಂದು, ಅಲ್ಲಿರುವ ವಾಸ್ತವಗಳನ್ನು ತೆರೆದುಕೊಡುತ್ತಾರೆ. ಆರಂಭದಲ್ಲಿ ಗ್ಯಾಲಕ್ಸಿಗಳು, ನಕ್ಷತ್ರಗಳು, ಅದರ ಹುಟ್ಟು ಸಾವು, ಸೂರ್ಯ ಮತ್ತು ಅದರ ಪರಿವಾರ, ಒಂದೊಂದೇ ಗ್ರಹಗಳು ಮತ್ತು ಅದರೊಳಗಿರುವ ವಿಸ್ಮಯಗಳನ್ನು ಪರಿಚಯಿಸುತ್ತಾ ಸೃಷ್ಟಿಯ ಮೂಲದವರೆಗೆ ತಂದು ನಿಲ್ಲಿಸುತ್ತಾರೆ. ನಾವೇನೋ ಬ್ರಹ್ಮಾಂಡದ ಕುರಿತಂತೆ ಭಾರೀ ಭಾರೀ ವಿವರಗಳನ್ನು ಕಂಡುಕೊಂಡಿದ್ದೇವೆ ಎಂಬ ಭ್ರಮೆ ನಮ್ಮಲ್ಲಿ ಹುಟ್ಟುತ್ತಿರುವಾಗಲೇ, ಅವರು ಈ ವಿಶ್ವದ ಅತಿ ದೊಡ್ಡ ಇನ್ನೊಂದು ಪ್ರಶ್ನೆಯ ಮುಂದೆ ನಮ್ಮನ್ನು ನಿಲ್ಲಿಸಿ ಪುಸ್ತಕವನ್ನು ಮುಗಿಸುತ್ತಾರೆ.

    ಬ್ರಹ್ಮಾಂಡದ ಕುರಿತಂತೆ ಅವರು ತಿಳಿಸುವ ಮಾಹಿತಿಗಳೋ ನಮ್ಮ ಎದೆಯನ್ನು ಧಗ್ಗೆನಿಸುವಂತೆ ಮಾಡುತ್ತದೆ. ಇಲ್ಲಿ ಯಾವ ಲೆಕ್ಕಗಳೂ ಸಣ್ಣಪುಟ್ಟದಾಗಿರುವುದಿಲ್ಲ. 4.6 ಬಿಲಿಯನ್ ವರ್ಷಗಳ ಹಿಂದೆ ನಮ್ಮ ಸೂರ್ಯ, ನಕ್ಷತ್ರಗಳು ಸೃಷ್ಟಿಯಾದ ವಿಸ್ಮಯದ ಬಗ್ಗೆ, ಇನ್ನು ಐದು ಬಿಲಿಯನ್ ವರ್ಷಗಳಲ್ಲಿ ಈ ಸೂರ್ಯ ನಾಶವಾಗುವುದನ್ನು ಅತ್ಯಂತ ರೋಚಕವಾಗಿ ಭೌಮಿಕ್ ಕಟ್ಟಿ ಕೊಡುತ್ತಾರೆ. ಈ ಸೂರ್ಯ ಉರಿಯುತ್ತಿರುವು ದಾದರೂ ಯಾವ ಇಂಧನದಿಂದ ಬಲದಿಂದ? ತನ್ನ ಬೆಂಕಿ ಯನ್ನು ಆರದಂತೆ ಉಳಿಸಲು ಸೂರ್ಯ ಸೆಕೆಂಡಿಗೆ 600 ಮಿಲಿಯನ್ ಟನ್ ಜಲಜನಕವನ್ನು ಉರಿಸುತ್ತಾನೆ. ಆದರೂ ಮುಂದಿನ ಐದು ಬಿಲಿಯನ್ ವರ್ಷಗಳಷ್ಟು ಕಾಲ ಉರಿಸು ವಷ್ಟು ಜಲಜನಕ ದಾಸ್ತಾನು ಅವನಲ್ಲಿದೆ. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಕೋಟಿ ಕೋಟಿ ವರ್ಷಗಳಿಂದ ಬೆಳಗುತ್ತಿರುವ ಸೂರ್ಯನ ಸಾವಿನ ಕುರಿತ ವರದಿಯೇ ನಮ್ಮನ್ನು ಒಂದು ಕ್ಷಣ ಬೆಚ್ಚಿ ಬೀಳಿಸುವುದಿಲ್ಲವೆ?
ಖಗೋಳ ಶಾಸ್ತ್ರದ ಕುರಿತಂತೆ ಕುತೂಹಲವುಳ್ಳವರು ಮಾತ್ರವಲ್ಲ, ತಮ್ಮನ್ನು ತಾವು ಅರಿಯುವ ಕುತೂಹಲವುಳ್ಳ ವರೂ ಓದ ಬೇಕಾದ ಕೃತಿ ಇದು. ವಿಷಯಕ್ಕೆ ಪೂರಕವಾಗಿ ಫೋಟೋಗಳನ್ನು ನೀಡಲಾಗಿದೆ. ಇದು ಆಕಾಶವನ್ನು ಅರ್ಥ ಮಾಡಿಕೊಳ್ಳಲು ನಮಗೆ ಇನ್ನಷ್ಟು ಸಹಾಯವನ್ನು ಮಾಡುತ್ತವೆ. ಚಂದ್ರನ ಮೇಲೆ ಕಾಲಿರಿಸಿದ ಆರನೇ ಮಾನವ ಎಂಬ ಹೆಗ್ಗಳಿಕೆ ಯನ್ನು ಪಡೆದಿರುವ ಎಡ್ಗರ್ ಮಿಶೆಲ್ ಅವರ ಅಪರೂಪದ ಮುನ್ನುಡಿಯು ಈ ಪುಸ್ತಕದ ತೂಕವನ್ನು ಹೆಚ್ಚಿಸಿದೆ. ‘‘ವಿಜ್ಞಾನ ಮತ್ತು ತಂತ್ರಜ್ಞಾನದ ಮಹಾ ಸಂಶೋಧನೆಗಳಿಂದ ನಮಗೆ ದೊರಕಿರುವ ಬ್ರಹ್ಮಾಂಡದ ಗಹನತೆ ಮತ್ತು ಸೌಂದರ್ಯ ಗಳನ್ನು ನಮ್ಮ ಪೂರ್ವಿಕರು ಕನಸು ಮತ್ತು ಕಲ್ಪನೆಗಳಲ್ಲಿ ಮಾತ್ರ ಕಾಣುವುದು ಸಾಧ್ಯವಿತ್ತು. ನಮ್ಮ ತಂತ್ರಜ್ಞಾನಗಳು ವಿನಾಶಕ್ಕೆ ಮತ್ತು ಸಂಘರ್ಷಕ್ಕೆ ಕಾರಣವಾಗುವ ಆಯುಧಗಳನ್ನು ನೀಡಿವೆ. ಆದರೆ ಕಿತ್ತಾಟ, ಹಿಂಸೆಗಳಿಗೆ ಬದಲು ನಮ್ಮ ಭೂಮಿಯ ನಾಗರಿಕತೆಯನ್ನು ಹೆಚ್ಚಿನ ಸಹಕಾರ, ಸೌಹಾರ್ದ, ಶಾಂತಿಯತ್ತ ಮುನ್ನಡೆಸುವುದು ನಮ್ಮ ಹೊಣೆ. ಎಳೆಯ ಓದುಗರ ದೃಷ್ಟಿ ಯಿಂದ ಮಣಿ ಭೌಮಿಕ್ ಬರೆದಿರುವ ಈ ಕೃತಿಯು, ನಕ್ಷತ್ರಗಳ ಕರೆಗೆ ಓಗೊಟ್ಟು ಸೂಕ್ತವಾದ ಆಯ್ಕೆ ಮಾಡಿಕೊಂಡರೆ ಈ ಬ್ರಹ್ಮಾಂಡದ ಸಾಮರ್ಥ್ಯ ಮತ್ತು ಸೌಂದರ್ಯಗಳನ್ನು ಅರಿಯಲು ಸಾಧ್ಯ ಎಂಬ ದರ್ಶನ ನೀಡುತ್ತದೆ’’ ಮಿಶೆಲ್ ಅವರ ಈ ಮಾತು, ಬಾಹ್ಯಾಕಾಶ ವಿಜ್ಞಾನದ ಉದ್ಧೇಶಗಳನ್ನು ಇನ್ನಷ್ಟು ಹಿರಿದುಗೊಳಿಸುತ್ತದೆ. ಅದು ಭೌತಿಕ ಜ್ಞಾನವನ್ನು ಮಾತ್ರವಲ್ಲ ನಮ್ಮ ಅಂತರಂಗದ ಜ್ಞಾನ, ಸೌಂದರ್ಯವನ್ನೂ ವಿಕಾಸಗೊಳಿಸುವಂತಹದ್ದು ಎನ್ನುವುದನ್ನು ಹೇಳುತ್ತದೆ.

ಮಕ್ಕಳು, ಹಿರಿಯರು ಜೊತೆಕೂತು ಓದಬೇಕಾದ ಕೃತಿ ಇದು. ಕನ್ನಡದಲ್ಲಿ ವಿಜ್ಞಾನ ಬರಹಗಳ ಕೊರತೆಯನ್ನು ತುಂಬಿಕೊಡುವಂತಹದ್ದು ಮಾತ್ರವಲ್ಲ, ಬಾಹ್ಯಾಕಾಶದ ಕುರಿತಂತೆ ಹೊಸ ಒಳನೋಟವನ್ನು ನೀಡುವಂತಹ ಪುಸ್ತಕ ಇದು. ಇದನ್ನು ಸರಳ ಕನ್ನಡದಲ್ಲಿ, ಸಮರ್ಥವಾಗಿ ಅನುವಾದಿಸಿರುವ ಕೆ. ಪುಟ್ಟಸ್ವಾಮಿ ಅವರು ಅಭಿನಂದನೀಯರು. ಅವರಿಂದ ಇಂತಹ ಇನ್ನಷ್ಟು ಕೃತಿಗಳ ನಿರೀಕ್ಷೆಯಲ್ಲಿದೆ ಕನ್ನಡ ಜಗತ್ತು.

1 comment:

  1. ನನಗೆ 9ನೇ ತರಗತಿಯ ವಿಜ್ಞಾನ ಪುಸ್ತಕದಲ್ಲಿ ಆಕಾಶಕಾಯಗಳ ಬಗ್ಗೆ ಪಾಠವಿತ್ತು. ಭೂಮಿ, ನಕ್ಷತ್ರಗಳು ಹೇಗೆ ಹುಟ್ಟುತ್ತವೆ. ಗ್ರಹಗಳಿಗೂ ನಕ್ಷತ್ರಗಳಿಗೂ ಇರುವ ವ್ಯತ್ಯಸವೇನು? ಇನ್ನೂ ಹಲವು ಅಂಶಗಳು ಈ ಪಾಠದಲ್ಲಿ ಸೇರಿಸಲಾಗಿತ್ತು. ನಾನು ಮತ್ತು ನನ್ನ ಸ್ನೇಹಿತರು ಪ್ರತಿದಿನ ನಕ್ಷತ್ರಗಳ ಬಗ್ಗೆ, ಅವುಗಳ ಗಾತ್ರಗಳ ಬಗ್ಗೆ ಅಚ್ಚರಿಯಿಂದ ಮಾತನಾಡುತ್ತಿದ್ದೇವು. ಹಾಗೂ ಭಾರತದ ಪುರಾಣಗ್ರಂಥವೆಂದು ಕರೆಸಿಕೊಂಡಿರುವ ಮಹಾಭಾರತ, ರಾಮಾಯಣದಲ್ಲಿ ಚಂದ್ರ ಹಾಗೂ ಸೂರ್ಯರು ಮನುಷ್ಯಾಕೃತಿಯ ದೇವರಾಗಿ ಕಾಣಿಸುತ್ತಾರಲ್ಲಾ ಎಂದು ನಮ್ಮೊಳಗೆನೇ ಗೊಂದಲ ಶುರುವಾಗುತ್ತಿತ್ತು. ಈ ಗೊಂದಲವನ್ನು ಬಗೆ ಅರಿಸಲು ನಮ್ಮ ವಿಜ್ಞಾನ ಮೇಷ್ಟ್ರನ್ನು
    ಕೇಳಬೇಕಾಗಿತ್ತು. ಅವರೂ ಸಖತ್ ಶಿಸ್ತು, ಅವರನ್ನು ನೋಡಿದರೆ ನಮಗೆ ನಡುಕ. ಅವರು ಒಮ್ಮೆ ಕೂಡ ನಗು ಬೀರಿದನ್ನು ಕಂಡಿಲ್ಲ. ಹಾಗಾಗಿ ನಾವು ಈ ವಿಷಯವನ್ನು ಅಲ್ಲಿಗೆ ಬಿಟ್ಟೆವು. ಇದಾದ ನಂತರ ಈ ವಿಷಯಕ್ಕೆ ಸಂಬಂಧ ಪಟ್ಟಂತೆ ಎಲ್ಲಿಯೂ ಪಾಠ ಇಲ್ಲ.
    ಇನ್ನೂ ಪತ್ರಿಕೆಗಳಲ್ಲಿಯೂ ಕೂಡ ಖಗೋಳ ಕಾಯಗಳ ಬಗ್ಗೆ ಬರಿಯುವುದು ಕಡಿಮೆ. ನಗೇಶ್ ಹೆಗ್ಡೆ ಅಂತಹ ಬೆರೆಳೆಣಿಕೆ ವ್ಯಕ್ತಿಗಳು ಮಾತ್ರ ಬರಿಯುತ್ತಾರೆ. ಹಾಗಾಗಿ ನೀವು ಬರಿದಿರುವ ಈ ಲೇಖನವು ಮಾಹಿತಿ ಪೂರ್ಣವಾಗಿದೆ. ವೈಜ್ಞಾನಿಕತೆಯಿಂದ ಕೂಡಿದೆ ಸಾರ್. ಇಂತಹ ವಿಷಯಕ್ಕೆ ಸಂಬಂಧ ಪಟ್ಟಂತೆ ಹೆಚ್ಚು ಹೆಚ್ಚು ಬರಿರಿ ಸಾರ್.
    ಮಂಜುನಾಥ ದಾಸನಪುರ

    ReplyDelete