Wednesday, October 26, 2011

ಸಂಜೆಯ ಹೆಗಲಲ್ಲಿ ಹೆಣ

ಕವಿತೆಯನ್ನು ತುಂಬಾ ಅಂದರೆ ತುಂಬಾ ಹಿಂದೆ ಬರೆದಿದ್ದೆ. ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ನಿನ್ನೆ ಕತ್ತಲ ಶಿಲುಬೆಯಲ್ಲಿ
ತೂಗುತ್ತಿದ್ದವರು ಇದೀಗ
ರಕ್ತ ಸಿಕ್ತ ಮೂಡಣದಿಂದ
ಎದ್ದು ಬಂದರು!

ಉಂಡ ಎಲೆಯಿಂದ ಬೇರ್ಪಡುವಂತೆ
ಅವರು ಪರಸ್ಪರ ಕಳಚಿಕೊಂಡರು
ಅವನ ಮುಷ್ಟಿಯಿಂದ
ಮೊಲೆಯನ್ನು ಬಿಡಿಸಿಕೊಂಡ ಅವಳು
ಕಳಚಿಟ್ಟ ಇಸ್ತ್ರಿ ಪೆಟ್ಟಿಗೆ ತುಂಬಾ
ಮತ್ತೆ ಸುರಿವಳು ಕೆಂಡ

ಅಡುಗೆ ಮನೆಯಲ್ಲಿ
ಟಿಫಿನ್‌ಬಾಕ್ಸ್‌ಗಳು ಬಾಯಿತೆರೆದು
ಪಿಸುಗುಟ್ಟತೊಡಗಿದವು...
ಅತ್ತಿಂದಿತ್ತ ಚಲಿಸತೊಡಗಿದವು
ಮಹಾಸಾಗರದ ದಿಕ್ಸೂಚಿಯಂತೆ
ಗಡಿಯಾರ ಮುಳ್ಳುಗಳು!

ಬಿದ್ದ ವೌನದ ಬೀಗಕ್ಕೆ
ಇಬ್ಬರಲ್ಲೂ ನಕಲಿ ಕೀಗಳು

ಫ್ರಿಜ್ಜಿನಲ್ಲಿಟ್ಟ ತರಕಾರಿಯಂತೆ
ಅಕ್ಕಪಕ್ಕ ಕುಳಿತ ಕಣ್ಣುಗಳು
ಚಲಿಸುತ್ತಿರುವುದಾದರೂ ಏನು?
ಬದುಕೋ, ರೈಲಿನ ಚಕ್ರವೋ,
ಬಂಡಿಯೋ, ಹಳಿಯೋ...
ತಿಳಿದುಕೊಳ್ಳಲಾರದವರಂತೆ
ಈ ನಿಲ್ದಾಣದಲ್ಲಿ ಅವಳು
ಮತ್ತು ಅಲ್ಲಿ ಅವನು...

ಅದೋ ಕುದುರೆಯ ಖುರಪುಟ ಸದ್ದು
ಧಾವಿಸಿ ಬರುವ ಸಂಜೆ
ಹೆಗಲಲ್ಲಿ ಹೆಣ
ನಿಮ್ಮ ನಿಮ್ಮ ಕತೆಗಳು ಜೋಪಾನ
ಮುರಿಯಲಿ ವಿಕ್ರಮಾದಿತ್ಯನ ವೌನ
ಸಾಗುತಿರಲಿ ಹೀಗೆ ಪಯಣ....

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

2 comments:

  1. ಎಷ್ಟೊಂದು ಸೊಗಸಾಗಿ ಬರೆದಿದ್ದೀರಿ ಬಷೀರ‍್. ತುಂಬ ಮನ ತಟ್ಟುವಂಥ ಕವಿತೆ. ಕವನ ಓದುತ್ತಿದ್ದಂತೆ ಸಾವಿರಾರು ಚಿತ್ರಗಳು ಕಣ್ಮುಂದೆ ಸುಳಿದುಹೋಗುತ್ತವೆ. ನೆನಪೆಂಬ ಗುಜರಿ ಅಂಗಡಿಯ ಸಾವಿರಾರು ಬಚ್ಚಿಟ್ಟ ಸರಕುಗಳು ಮೈಹೊರಳಿಸುತ್ತವೆ. ಹೊಸ ನೋಟಗಳನ್ನು ನೀಡುತ್ತವೆ.

    ಮತ್ತೆ ಮತ್ತೆ ಓದಿದರೆ, ಮತ್ತೆ ಮತ್ತೆ ಬೇರೆ ಬೇರೆಯದೇ ಆದ ಅರ್ಥಗಳು. ಅದ್ಭುತ ಕವಿತೆ.

    ತುಂಬ ಧನ್ಯವಾದಗಳು ನಿಮಗೆ.

    ReplyDelete
  2. ಧನ್ಯವಾದಗಳು ಸವಡಿಯವರೇ. thank u

    ReplyDelete