Wednesday, October 19, 2011

ನಿಧಿ ಮತ್ತು ಇತರ ಕತೆಗಳು

ಅವಮಾನ
ಬಡವನೊಬ್ಬ ರಾಷ್ಟ್ರಧ್ವವನ್ನು ಲಂಗೋಟಿಯಾಗಿ ಬಳಸಿಕೊಂಡಿದ್ದ.
ಅದನ್ನು ಕಂಡ ದೇಶಭಕ್ತರು ಅವನ ಮೇಲೆ ಮುಗಿಬಿದ್ದರು.
‘‘ರಾಷ್ಟ್ರ ಧ್ವಜವನ್ನು ಲಂಗೋಟಿಯಾಗಿ ಧರಿಸಿದ್ದೀಯಲ್ಲ, ಭಾರತ ಮಾತೆಗೆ ಅವಮಾನ’’ ಅಬ್ಬರಿಸಿದರು.
ಬಡವ ತಣ್ಣಗೆ ಹೇಳಿದ ‘‘ನಾನು ಬೆತ್ತಲೆಯಾಗಿ ತಿರುಗಾಡುವುದರಿಂದ ನಿಮ್ಮ ಭಾರತಮಾತೆಗೆ ಅವಮಾನವಾಗುವುದಿಲ್ಲವೆಂದಾದರೆ, ನಾನು ಬಟ್ಟೆಯಿಲ್ಲದೆ ಓಡಾಡುವುದಕ್ಕೆ ಸಿದ್ಧ’’

ಕಾರಣ
‘‘ವಿಶ್ವ ಇಷ್ಟು ಶ್ರೀಮಂತವಾಗಿದೆ. ಆದರೂ ಈ ವಿಶ್ವದಲ್ಲಿ ಯಾಕೆ ಇಷ್ಟು ಬಡವರಿದ್ದಾರೆ?’’ ಶಿಷ್ಯ ಕೇಳಿದ.
‘‘ಯಾಕೆಂದರೆ ವಿಶ್ವವನ್ನು ದೇವರು ಸೃಷ್ಟಿಸಿದ್ದಾನೆ. ಬಡವನನ್ನು ಮನುಷ್ಯ ಸೃಷ್ಟಿಸಿದ್ದಾನೆ’’ ಸಂತ ಉತ್ತರಿಸಿದ.

ಭಂಗ
ಮಧ್ಯಾಹ್ನದ ಹೊತ್ತು.
ಗದ್ದೆಯಲ್ಲಿ ಕೆಲಸ ಮಾಡಿ ಬಂದಿದ್ದ ಸಂತ ತುಂಬಾ ಹಸಿದಿದ್ದ.
ಅಡುಗೆಯನ್ನು ಬಡಿಸಿದ್ದೇ, ಸಂತ ಉಣ್ಣುವುದರಲ್ಲಿ ತಲ್ಲೀನನಾದ.
ಅಷ್ಟರಲ್ಲಿ ಅವನ ತಲ್ಲೀನತೆಯನ್ನು ಶಿಷ್ಯನೊಬ್ಬ ಭಂಗ ಮಾಡಿದ
‘‘ಗುರುಗಳೇ...ಅಧ್ಯಾತ್ಮ ಎಂದರೆ ಏನು?’’
ಊಟ ಮಾಡುತ್ತಿದ್ದ ಸಂತ ಒಂದು ಕ್ಷಣ ಶಿಷ್ಯನನ್ನು ನೋಡಿದವನೇ ಹೇಳಿದ ‘‘ಅಧ್ಯಾತ್ಮವೆಂದರೆ, ಉಣ್ಣುತ್ತಿರುವಾಗ ಊಟದಲ್ಲಿ ಸಿಗುವ ಕಲ್ಲು’’

ಮಗು
ಅವನು ಸಂತನ ಬಳಿ ಬಂದು ನುಡಿದ
‘‘ಗುರುಗಳೇ, ನನ್ನ ಮಗನನ್ನು ಹೇಗೆ ಬೆಳೆಸಬೇಕೆಂದೇ ನನಗೆ ತಿಳಿಯುತ್ತಿಲ್ಲ. ನಾನು ಹೇಳಿದ ಹಾಗೆ ಅವನು ಕೇಳುತ್ತಿಲ್ಲ’’
ಸಂತ ನಕ್ಕು ನುಡಿದ ‘‘ಮಗುವನ್ನು ನಾನು ಬೆಳೆಸುತ್ತಿದ್ದೇನೆ ಎಂಬ ದುರಹಂಕಾರ ಬಿಡು. ಮಗು ಹುಟ್ಟಿರುವುದು ನಿನ್ನನ್ನು ಬೆಳೆಸುವುದಕ್ಕೆ. ಮೊದಲು ಮಗುವಿನ ಮೂಲಕ ನೀನು ಬೆಳೆ’’

ಭಯ
‘‘ನಾನು ಅತಿ ಹೆದರುವುದು ಸ್ವಾತಂತ್ರಕ್ಕೆ’’
‘‘ಯಾಕೆ?’’
‘‘ಯಾಕೆಂದರೆ ಸ್ವಾತಂತ್ರ ನನ್ನ ಆಲೋಚನೆ, ಕೃತ್ಯಗಳಿಗೆ ನನ್ನನ್ನೇ ಹೊಣೆ ಮಾಡುತ್ತದೆ. ಪಾರತಂತ್ರದಲ್ಲಿ ಇನ್ನೊಬ್ಬರ ಮೇಲೆ ಹೊಣೆ ಹಾಕಿ ನಾವು ‘ಸ್ವತಂತ್ರ’ವಾಗಿರುವ ಅವಕಾಶವಿರುತ್ತದೆ’’

ಜೈಲು
ಅಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿತ್ತು.
‘ಜೈಲು’ ಇದರ ಬಗ್ಗೆ ಎರಡು ವಾಕ್ಯಗಳಲ್ಲಿ ಬರೆಯಿರಿ ಎಂಬ ಪ್ರಶ್ನೆಯಿತ್ತು.
‘‘ನಾನೀಗ ಅದರೊಳಗೇ ಕುಳಿತು ಪರೀಕ್ಷೆ ಬರೆಯುತ್ತಿದ್ದೇನೆ’’ ವಿದ್ಯಾರ್ಥಿನಿ ಒಂದು ವಾಕ್ಯದಲ್ಲಿ ಉತ್ತರ ಪೂರ್ತಿಗೊಳಿಸಿದಳು.

ಅತ್ಯುತ್ತಮ
ಇಬ್ಬರು ತಪಸ್ಸು ಮಾಡುತ್ತಿದ್ದರು. ಅವರ ಜೊತೆಗೆ ಒಬ್ಬ ಕಳ್ಳನೂ ಸೇರಿ ತಪಸ್ಸು ಮಾಡತೊಡಗಿದ.
ಹಲವು ಸಮಯದ ಬಳಿಕ ದೇವರು ಪ್ರತ್ಯಕ್ಷನಾದ.
ಮೊದಲನೆಯವನ ಬಳಿ ದೇವರು ಕೇಳಿದ ‘‘ನಿನಗೇನು ಬೇಕು?’’

ಆತನು ‘‘ನನಗೆ ಜ್ಞಾನ ಬೇಕು’’ ಎಂದ.
ಎರಡನೆಯ ಭಕ್ತ ‘‘ನನಗೆ ಚಿನ್ನ, ಹಣ, ಸಂಪತ್ತು ಬೇಕು’’ ಎಂದ.
ಮೂರನೆಯ ಕಳ್ಳನ ಬಳಿ ದೇವರು ‘‘ನಿನಗೇನು ಬೇಕು?’’ ಎಂದು ಕೇಳಿದ.
‘‘ದೇವರೇ ನನಗೆ ಎರಡನೆಯವನ ಮನೆಯ ವಿಳಾಸ ಬೇಕು’’ ಕಳ್ಳ ನುಡಿದ.
ಈ ಕತೆಯನ್ನು ಮುಗಿಸಿದ ಸಂತ ಶಿಷ್ಯರ ಬಳಿ ಕೇಳಿದ ‘‘ಈ ಮೂವರು ಭಕ್ತರಲ್ಲಿ ಅತ್ಯುತ್ತಮನು ಯಾರು?’’
ಎಲ್ಲ ಶಿಷ್ಯರು ಒಕ್ಕೊರಲಲ್ಲಿ ಹೇಳಿದರು ‘‘ಜ್ಡಾನವನ್ನು ಕೇಳಿದ ಮೊದಲನೆಯವನು’’
ಸಂತ ಅದನ್ನು ಅಲ್ಲಗಳೆದ ‘‘ನಿಜಕ್ಕೂ ಮೂರನೆಯವನಾದ ಕಳ್ಳನೇ ಅತ್ಯುತ್ತಮನು. ಅವನು ತನ್ನ ಶ್ರಮದ ಮೇಲೆ ನಂಬಿಕೆಯಿಟ್ಟಿದ್ದಾನೆ’’

ನಿಧಿ
ಸಂತನ ಶಿಷ್ಯರು ಗದ್ದೆಯಲ್ಲಿ ಕೆಲಸ ಮಾಡುವಾಗ ಅವರಿಗೆ ನಿಧಿ ಸಿಕ್ಕಿತು. ಓಡಿ ಸಂತನಿಗೆ ವಿಷಯ ತಿಳಿಸಿದರು. ಸಂತ ಅದನ್ನು ಹೊರ ತೆಗೆಯಲು ಹೇಳಿದ. ಬಳಿಕ ಊರ ಜನರಿಗೆ ಹಂಚಿ ಬಿಟ್ಟ.
ಶಿಷ್ಯರು ಕೇಳಿದರು ‘‘ಆಶ್ರಮದ ಗದ್ದೆಯಲ್ಲಿ ಸಿಕ್ಕಿದ ನಿಧಿ. ಆಶ್ರಮದ ಕೆಲಸಕ್ಕೆ ಬಳಸುವುದಕ್ಕಾಗುತ್ತಿರಲಿಲ್ಲವೆ?’’
‘‘ಗದ್ದೆಯಲ್ಲಿ ನಿಧಿಗಳು ಭತ್ತ, ರಾಗಿಯ ತೆನೆಗಳಲ್ಲಿ ಬಚ್ಚಿಟ್ಟುಕೊಂಡಿರುತ್ತವೆ. ನಮಗೆ ಸಿಕ್ಕಿರುವುದು ಜಿಪುಣನೊಬ್ಬ ಜೋಪಾನವಾಗಿ ಬಚ್ಚಿಟ್ಟ ತನ್ನ ದಾರಿ
ದ್ರ್ಯ’’

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

2 comments:

  1. ಬಷೀರ್,ತತ್ವಶಾಸ್ತ್ರವನ್ನು ಓದುತ್ತಿದ್ದೇನೇನೋ ಅನ್ನಿಸಿತು. ನಿಮ್ಮ ಈ ಮಾತುಗಳು ಸಮಾಜವನ್ನು ತಿದ್ದುವಂತಿದ್ದರೆ ಅದು ದೊಡ್ಡ ಭಾಗ್ಯ.

    ReplyDelete
  2. ಸುಮ್ನೆ ಕೆಲವು ಜ್ಹಲಕ್ ಗಳು. ತತ್ವಶಾಸ್ತ್ರದ ಮುಂಡಾಸು ತುಂಬಾ ಭಾರವಾದೀತು ರವಿ ಅವರೇ. thank u

    ReplyDelete