Tuesday, July 26, 2011

ಹುಂಜದ ಜಂಬ ಮತ್ತು ಇತರ ಕತೆಗಳು....



ಹುಂಜದ ಜಂಬ

ಹುಂಜವೊಂದು ಜಂಬದಿಂದ ಆ ಓಣಿಯಲ್ಲಿ ಸಾಗುತ್ತಿತ್ತು. ಸಂತನೂ ಅದೇ ದಾರಿಯಲ್ಲಿ ಮುಂದೆ ನಡೆಯುತ್ತಿದ್ದನು. ಕೋಳಿಗೆ ಸಂತನ ಕಾವಿ ವಸ್ತ್ರ, ಗಡ್ಡ ಎಲ್ಲ ನೋಡಿ ನಗು ಬಂತು. ಸಂತನನ್ನು ಕೋಳಿ ಅಣಕಿಸ ತೊಡಗಿತು.
‘ಮಹನೀಯರೇ, ಒಂದು ಒಳ್ಳೆಯ ಬಟ್ಟೆಯನ್ನಾದರೂ ಹಾಕಿಕೊಳ್ಳಬಾರದೆ...?’
ಸಂತ ನಕ್ಕು ಮುಂದೆ ಹೋಗುತ್ತಿದ್ದ.
ಕೋಳಿ ಹಿಂಬಾಲಿಸಿತು ‘ನೋಡಿ, ನನ್ನನ್ನಾದರೂ ನೋಡಿ ಕಲಿಯಬಾರದೆ. ಹೊಳೆಯುವ ಗರಿಗಳಿಂದ ಹೇಗೆ ಕಾಣುತ್ತೇನೆ ನೋಡಿ...’
‘ನನ್ನ ಜುಟ್ಟು ನೋಡಿ. ಕಿರೀಟದ ಹಾಗಿದೆ. ನೀವು ತಲೆಗೊಂದು ಮುಂಡಾಸನ್ನಾದರೂ ಕಟ್ಟಬಾರದಿತ್ತೆ ’
ಸಂತ ಮುಂದೆ ನಡೆಯುತ್ತಲೇ ಇದ್ದ.
‘ನನ್ನ ಕಾಲುಗಳನ್ನು ನೋಡಿ. ಪಾದ ನೋಡಿ. ನಾನು ನಡೆಯುವ ಠೀವಿ ನೋಡಿ. ರಾಜಗಾಂಭೀರ್ಯದಿಂದ ನಡೆಯುತ್ತಿದೇನೆ. ನೀವೇಕೆ ಹಾಗೆ ಠೀವಿಯಿಂದ ನಡೆಯಬಾರದು...’
ಅಷ್ಟರಲ್ಲಿ ಒಂದು ಮನೆ ಕಂಡಿತು. ಸಂತ ಆ ಮನೆಯತ್ತ ನಡೆದ.
ಕೋಳಿಗೆ ಮತ್ತೂ ಜಂಬ ‘ಅದು ನನ್ನ ಯಜಮಾನನ ಮನೆ. ಅಲ್ಲಿಗೆ ಭಿಕ್ಷೆಗೆ ಹೋಗುತ್ತಿದ್ದೀರಾ. ಹೋಗಿ... ಹೋಗಿ...’

ಸಂತನನ್ನು ಕಂಡದ್ದೇ ಮನೆಯ ಯಜಮಾನ ಆದರದಿಂದ ಸ್ವಾಗತಿಸಿದ. ಮಧ್ಯಾಹ್ನದ ಊಟಕ್ಕೆ ಕುಳ್ಳಿರಿಸಿದ. ಮನೆಯಲ್ಲಿ ಸಂತನಿಗೆ ಭೂರಿ ಭೋಜನ.
ಯಜಮಾನ ಅಂಗಳದಲ್ಲಿ ಠೀವಿಯಿಂದ ತಿರುಗಾಡುತ್ತಿದ್ದ ಕೋಳಿಯನ್ನು ಹಿಡಿದು ಕತ್ತರಿಸಿದ.
ಸಂತನಿಗೆ ಊಟದ ಬಟ್ಟಲನ್ನು ತಂದಿಡಲಾಯಿತು. ಮಸಾಲೆಯಿಂದ ಘಮಘಮಿಸುವ ಕೋಳಿಯನ್ನೂ ತಂದಿಡಲಾಯಿತು.
ಸಂತ ಈಗ ನಗುತ್ತಿರಲಿಲ್ಲ. ಅವನ ತುಟಿಯಲ್ಲಿ ವಿಷಾದವಿತ್ತು. ಯಜಮಾನನಲ್ಲಿ ಕೇಳಿದ ‘ಈ ಹುಂಜದ ಜಗಮಗಿಸುವ ಗರಿಗಳಿತ್ತಲ್ಲ, ಅದೇನಾಯಿತು?’
ಯಜಮಾನ ವಿನೀತನಾಗಿ ಹೇಳಿದ ‘ಕಸದ ತೊಟ್ಟಿಗೆ ಎಸೆದೆ ಗುರುಗಳೇ’
‘ಈ ಹುಂಜದ ಕಿರೀಟದಂತಹ ಜುಟ್ಟಿತ್ತಲ್ಲ, ಅದೇನಾಯಿತು?’
ಯಜಮಾನ ನುಡಿದ ‘ಅದನ್ನೂ ಕಸದ ತೊಟ್ಟಿಗೆ ಎಸೆದೆ ಗುರುಗಳೇ’
‘ರಾಜಠೀವಿಯಿದ್ದ ಅದರ ಕಾಲುಗಳು?’
‘ಅದನ್ನೂ ಎಸೆದೆ ಗುರುಗಳೇ’
‘ಇದೀಗ ಈ ಕೋಳಿ ತಿನ್ನಲು ಅರ್ಹವಾಯಿತು’ ಎನ್ನುತ್ತಾ ಸಂತ ಅದರ ತೊಡೆ ಭಾಗವನ್ನು ಬಾಯಲ್ಲಿ ಹಾಕಿ ಕರಗಿಸ ತೊಡಗಿದ.

ಕವಿಯ ಊರು
ಯಾವುದೋ ಬೆಟ್ಟ, ಗುಡ್ಡ, ದಟ್ಟ ಕಾಡುಗಳಲ್ಲಿ ಮುಚ್ಚಿ ಹೋದ ಕುಗ್ರಾಮದಲ್ಲಿ ಕುಳಿತು ಕಾವ್ಯ ಬರೆದ ಆ ಶ್ರೇಷ್ಟ ಕವಿ ಮೃತಪಟ್ಟ. ಕವಿ ಸತ್ತಾಗ, ಸತ್ತ ಜನರು ಜೀವ ಪಡೆದರು. ಕವಿಯ ಮನೆಯೆಡೆಗೆ ಅಧಿಕಾರಿಗಳ, ಪಂಡಿತರ ಹಿಂಡು ಸಾಗಿತು. ಭಾಷಣಗಳ ಮೇಲೆ ಭಾಷಣಗಳು. ಸಂತಾಪದ ಮೇಲೆ ಸಂತಾಪ. ಕವಿಯ ಮನೆಯನ್ನು ಐತಿಹಾಸಿಕ ಸ್ಮಾರಕವಾಗಿಸಲು ನಿರ್ಧರಿಸಲಾಯಿತು. ಸರಕಾರ ಲಕ್ಷಾಂತರ ರೂ.ವನ್ನು ಬಿಡುಗಡೆ ಮಾಡಿತು.
ಸರಿ, ಮನೆಯನ್ನು ಸ್ಮಾರಕ ಮಾಡಿ ಪ್ರವಾಸಿಗರು ಅಲ್ಲಿಗೆ ಸಂದರ್ಶನ ನೀಡಬೇಕೆಂದರೆ ಕವಿಯ ಮನೆಗೆ ಹೆದ್ದಾರಿಯಾಗಬೇಕು. ಹೆದ್ದಾರಿಯನ್ನು ಮಾಡಲಾಯಿತು. ದಟ್ಟ ಕಾಡುಗಳನ್ನು ಕಡಿದು ಹಾಕಲಾಯಿತು. ಮನೆಯನ್ನು ಪುನರ್ ನವೀಕರಿಸಲಾಯಿತು. ಪ್ರವಾಸಿಗರು ಆ ದಾರಿಯಾಗಿ ಬರಲಾರಂಭಿಸಿದರು. ಹೊಟೇಲುಗಳು, ಅಂಗಡಿಗಳು ತೆರೆದವು. ಗುಡ್ಡ ಬೋಳಾಯಿತು. ಹಕ್ಕಿಗಳು ವಲಸೆ ಹೋದವು. ಸೂರ್ಯೋದಯ, ಸೂರ್ಯಾಸ್ತ ಮರೆಯಾದವು. ವಸತಿ ಸಂಕೀರ್ಣಗಳು ಮೇಲೆದ್ದವು.

ಆ ದಾರಿಯಲ್ಲಿ ಸಂತ ಒಂದು ದಿನ ನಡೆಯುತ್ತಾ ಬಂದ. ಅವನಿಗೆ ಮೃತನಾದ ಮಹಾ ಕವಿಯ ಕಾವ್ಯದಲ್ಲಿ ಬರುವ ಕಾಡುಗಳನ್ನು, ಹಕ್ಕಿಗಳನ್ನು ನೋಡಬೇಕಾ
ಗಿತು.
ಮಹಾಕವಿಯ ಮನೆ ಹುಡುಕುತ್ತಾ, ಹುಡುಕುತ್ತಾ ಬಂದ. ಎಲ್ಲೂ ಸಂತನಿಗೆ ಮಹಾಕವಿಯ ಊರು, ಮನೆ ಕಾಣುತ್ತಿಲ್ಲ. ಒಬ್ಬನಲ್ಲಿ ಕೇಳಿದ ‘‘ಮಹಾಕಾವ್ಯವನ್ನು ಬರೆದ ಆ ಮಹಾಕವಿಯ ಊರೆಲ್ಲಿದೆ’’
ವ್ಯಕ್ತಿ ನಗುತ್ತಾ ‘ಇದೇ ಸ್ವಾಮಿ ಆ ಊರು. ಅಷ್ಟು ಗೊತ್ತಾಗಲ್ವಾ’ ಎಂದು ವ್ಯಂಗ್ಯವಾಡಿದ. ಸಂತ ವಿಷಾದದಿಂದ ಗೊಣಗಿದ ‘‘ಈ ಊರಲ್ಲಿ ಕವಿ ಹುಟ್ಟಲು ಸಾಧ್ಯವೇ ಇಲ್ಲ. ಇಲ್ಲಿ ಕವಿಯ ಮನೆಯಿರಲು ಸಾಧ್ಯವಿಲ್ಲ. ಇಲ್ಲಿ ಕವಿಯನ್ನು ಮಣ್ಣು ಮಾಡುವ ಸ್ಮಶಾನವಷ್ಟೇ ಇರಲು ಸಾಧ್ಯ’’

ಕೆಟ್ಟ ತಂದೆ
ಆತ ತಂದೆ. ತನ್ನ ಮಗನನ್ನು ತನ್ನ ಕನಸಿನಂತೆಯೇ ಸಾಕಿದ. ಮಗ ತನ್ನಂತೆಯೇ ಕುದುರೆ ಸವಾರನಾಗಬೇಕು ಎಂಬುದು ಅವನ ಆಸೆಯಾಗಿತ್ತು. ಮಗ ಅವನ ಕನಸನ್ನು ನನಸು ಮಾಡಿದ. ಪಂಡಿತನಾಗಬೇಕೆನ್ನುವುದು ತಂದೆಯ ಆಸೆಯಾಗಿತ್ತು. ಮಗ ಅದನ್ನೂ ನನಸು ಮಾಡಿದ. ಮಗ ವ್ಯಾಪಾರಿಯಾಗಿ ಕೈತುಂಬ ಗಳಿಸಬೇಕೆನ್ನುವುದು ತಂದೆಯ ಕನಸಾಗಿತ್ತು.
ಮಗ ಅದನ್ನೂ ನನಸು ಮಾಡಿದ. ತಂದೆ ಆಸೆಯಂತೆ ಸಮಾಜದಲ್ಲಿ ಸದ್ಗುಣಿಯಾಗಿ ಬೆಳೆದ. ಎಲ್ಲರಿಂದ ತಂದೆಗೆ ತಕ್ಕ ಮಗ ಎನ್ನುವ ಪ್ರಶಂಸೆಗಳಿಸಿದ.
ಆ ಮನೆಗೆ ಒಂದು ದಿನ ಸಂತ ಬಂದ. ತಂದೆ - ಮಗ ಜತೆ ಸೇರಿ ಸಂತನನ್ನು ಸತ್ಕರಿಸಿದರು. ತಂದೆ ತನ್ನ ಮಗನನ್ನು ತೋರಿಸಿ, ಆಶೀರ್ವದಿಸಬೇಕು ಎಂದು ಹೇಳಿದ. ಮಗ ಸಂತನಿಗೆ ಬಾಗಿದ.
ಸಂತ ಮಗನ ಮುಖವನ್ನು ಬೊಗಸೆಯಿಲ್ಲಿ ತುಂಬಿಕೊಂಡ. ಅವನ ಕಣ್ಣಿಗೆ ಕಣ್ಣಿಟ್ಟು ನೋಡಿದ.
ಬಳಿಕ ವಿಷಾದದಿಂದ, ದುಃಖದಿಂದ ತಂದೆಗೆ ಹೇಳಿದ ‘‘ಛೆ...ಎಷ್ಟು ಕೆಟ್ಟದಾಗಿ ಮಗನನ್ನು ಬೆಳೆಸಿದೆ’’
ತಂದೆಯ ಎದೆ ಧಕ್ ಎಂದುತು.
‘‘ನಿನ್ನ ಮಗನ ಕಣ್ಣುಗಳನ್ನು ನೋಡಿದೆಯಾ? ಅಲ್ಲೊಂದು ಹೆಣ ತೇಲುತ್ತಾ ಇದೆ’’ ಸಂತ ಹೇಳಿದ.
‘‘ಯಾರ ಹೆಣ?’’ ತಂದೆ ಆತಂಕದಿಂದ ಕೇಳಿದ.
‘‘ನಿನ್ನ ಮಗನ ಹೆಣ’’

ಓದು!
ಸಂತನಿಗೆ ಓದು ಎಂದರೆ ಉಣ್ಣುವಷ್ಟೇ ಸಹಜ. ಸಂತ ಓದದ ಪುಸ್ತಕಗಳಿಲ್ಲ ಎನ್ನುವುದು ಸಂತನ ಶಿಷ್ಯರ ಒಮ್ಮತದ ಅಭಿಪ್ರಾಯ.
ಇದು ದೊಡ್ಡ ಪಂಡಿತನೋರ್ವನಿಗೆ ತಿಳಿಯಿತು. ಅವನಿಗೆ ಸಂತನೊಂದಿಗೆ ಸವಾಲು ಹಾಕಬೇಕೆನಿಸಿತು. ತನ್ನ ಪುಸ್ತಕ ಭಂಡಾರದೊಂದಿಗೆ ಸಂತನಿದ್ದಲ್ಲಿಗೆ ನಡೆದ.
ಸಂತ ಮನೆಯ ಅಂಗಳವನ್ನು ಆವರಿಸಿದ್ದ ಮರದ ನೆರಳನ್ನು ಆಸ್ವಾದಿಸುತ್ತಿದ್ದ.
ಸಂತನನ್ನು ಕಂಡವನೇ ಪಂಡಿತ ಕೇಳಿದ ‘‘ಗುರುಗಳೇ, ನಾನು ಇದುವರೆಗೆ ಮೂರು ಸಾವಿರದ ಆರುನೂರು ಪುಸ್ತಕಗಳನ್ನು ಓದಿದ್ದೇನೆ. ಹೇಳಿ, ನೀವು ಓದಿದ ಪುಸ್ತಕಗಳೆಷ್ಟು?’’
ಸಂತ ನಕ್ಕು ಉತ್ತರಿಸಿದ ‘‘ನಾನು ಪುಸ್ತಕಗಳನ್ನು ಓದುವುದಿಲ್ಲ’’
ಪಂಡಿತ ಆವಕ್ಕಾದ ‘‘ನೀವು ಪುಸ್ತಕ ಓದುವುದಿಲ್ಲ ಎನ್ನುವುದು ನಂಬಲಸಾಧ್ಯವಾದುದು. ಹಾಗಾದರೆ ಶಿಷ್ಯರು ಹೇಳುತ್ತಿರುವುದು ಸುಳ್ಳೆ?’’
ಸಂತನ ನಗು ಮೊಗದಗಲ ವಿಸ್ತರಿಸಿತು ‘‘ಪುಸ್ತಕಗಳು ಇರುವುದು ಓದುವುದಕ್ಕಲ, ಅನುಭವಿಸುವುದಕ್ಕೆ. ಓದಿದ್ದನ್ನು ಲೆಕ್ಕವಿಡಬಹುದು. ಅನುಭವಿಸಿದ್ದನ್ನು ಲೆಕ್ಕವಿಡುವುದು ಹೇಗೆ?’’

ಒಂದು ಪುಟ್ಟ ಮೋಡ!
ಹರಡಿ ನಿಂತ ಅನಂತ ಆಕಾಶದಲ್ಲಿ ಒಂದು ಪುಟ್ಟ ಮೋಡ ತೇಲುತ್ತಿತ್ತು. ಆಸುಪಾಸಿನಲ್ಲಿ ಬೃಹದಾಕಾರದ ಮೋಡಗಳು ಬಿರುಸಿನಿಂದ ಓಡಾಡುತ್ತಿದ್ದವು. ಈ ಪುಟಾಣಿ ಮೋಡಕ್ಕೆ ಅಳು. ‘ನಾನೆಷ್ಟು ಸಣ್ಣವ’ ಎಂದು ಭಯವಾಯಿತು. ಜೋರಾಗಿ ಅಳ ತೊಡಗಿತು. ದೇವರಿಗೆ ಆ ಅಳು ಕೇಳಿಸಿತು.
ಪುಟ್ಟ ಮೋಡ ಇದೀಗ ತೇಲುತ್ತಾ ತೇಲುತ್ತಾ ಹಿರಿದಾದ ಮೋಡದೊಂದಿಗೆ ಸೇರಿಕೊಂಡು ಇನ್ನಷ್ಟು ಹಿರಿದಾಯಿತು. ‘ಓಹೋ, ನಾನೆಷ್ಟು ದೊಡ್ಡವನು, ನನಗಾರು ಸಾಟಿ...’ ಅಹಂಕಾರದಿಂದ ಮೆರೆಯಿತು. ಜೋರಾಗಿ ತೇಲುತ್ತಾ ಇನ್ನೊಂದು ಮೋಡಕ್ಕೆ ‘ಢೀ’ ಕೊಟ್ಟಿತು. ಅಷ್ಟೇ...ಮೋಡ ಹನಿ ಹನಿಯಾಗಿ ಉದುರತೊಡಗಿತು. ‘ಅರೇ...ಅಷ್ಟು ದೊಡ್ಡವನಾಗಿದ್ದ ನಾನು ಅದೆಷ್ಟು ಸಣ್ಣ ಹನಿಯಾದೆ...’ ಎನ್ನುತ್ತಿರುವಾಗಲೇ ಹನಿಯು ತೊರೆಯೊಂದನ್ನು ಸೇರಿ, ಕಲ್ಲು ಮುಳ್ಳು, ಗುಡ್ಡಗಳ ಸೆರೆಯಲ್ಲಿ ಹರಿಯತೊಡಗಿತು.
‘ದೇವರೇ...ನನಗ್ಯಾಕೆ ಈ ಶಿಕ್ಷೆ’ ಎಂದು ಹನಿ ಗೋಳು ತೋಡಿಕೊಳ್ಳುತ್ತಿರುವಾಗಲೇ ತೊರೆ ನದಿಯನ್ನು ಸೇರಿತು. ನದಿ ಕಡಲನ್ನು ಸೇರಿತು. ‘ಆಹಾ...ನಾನೀಗ ನಿಜವಾಗಿಯೂ ಏನಾಗಿದ್ದೇನೋ ಅದೇ ಆಗಿದ್ದೇನೆ....ಇನ್ನು ನನ್ನನ್ನು ಮೀರಿಸುವವರಿಲ್ಲ’ ಎಂದು ಯೋಚಿಸಿತು. ಯೋಚಿಸುತ್ತಿರುವಾಗಲೇ ಆಕಾರವೇ ಇಲ್ಲದ ಆವಿಯಾಯಿತು. ನಿಧಾನಕ್ಕೆ ಆಗಸವನ್ನು ಸೇರಿ ಒಂದು ಪುಟ್ಟ ಮೋಡವಾಯಿತು.

ವಿಚಿತ್ರ!
ಆತ ಶವ ಪೆಟ್ಟಿಗೆಯನ್ನು ನಿರ್ಮಿಸುವವನು. ಅದೆಷ್ಟು ಸುಂದರವಾಗಿ ಶವದ ಪೆಟ್ಟಿಗೆಯನ್ನು ತಯಾರಿಸುತ್ತಾನೆಂದರೆ, ತನ್ನ ಸರ್ವ ಪ್ರತಿಭೆಗಳನ್ನು ಆ ಶವಪೆಟ್ಟಿಗೆಗೆ ಧಾರೆಯೆರೆಯುತ್ತಾನೆ. ವಿವಿಧ ಬಣ್ಣಗಳಿಂದ ಹೂಬಳ್ಳಿಗಳನ್ನು ಅದರ ನಾಲ್ಕು ಅಂಚುಗಳಲ್ಲಿ ಬಿಡಿಸುತ್ತಾನೆ. ಅದರ ಮುಚ್ಚಳವನ್ನು ವಿವಿಧ ಝರಿ ಕಾಗದಗಳಿಂದ ಅಲಂಕರಿಸುತ್ತಾನೆ. ಚಿಟ್ಟೆಗಳು, ದುಂಬಿಗಳು, ನಕ್ಷತ್ರಗಳು, ಪ್ರಕೃತಿಯ ಸುಂದರ ವಸ್ತುಗಳನ್ನೆಲ್ಲಾ ಆ ಪೆಟ್ಟಿಗೆಯ ಮೇಲೆ ಬಿಡಿಸುತ್ತಾನೆ. ಸರ್ವಾಲಂಕೃತಳಾಗಿ ಹಸೆಮಣೆಯೇರಲು ಸಿದ್ಧಳಾಗಿರುವ ಮದುಮಗಳಂತೆ ಆ ಶವಪೆಟ್ಟಿಗೆ ಭಾಸವಾಗುತ್ತದೆ.
ಆದರೆ ವಿಚಿತ್ರ ನೋಡಿ! ಅಷ್ಟು ಸುಂದರವಾಗಿ ಮಾಡಿದ್ದರೂ, ಒಬ್ಬರಿಗೂ ಅದರೊಳಗೆ ಮಲಗಬೇಕೆಂಬ ಬಯಕೆ ಮೂಡುವುದಿಲ್ಲ. ಆ ಪೆಟ್ಟಿಗೆಯನ್ನು ನೋಡಿ, ಹಾವು ಕಂಡವರಂತೆ ಬೆಚ್ಚಿ ಬೀಳುತ್ತಾರೆ!

ಕವಿತೆಯ ಅಂಗಡಿ
ಆತ ಕವಿ. ಬದುಕುವುದಕ್ಕಾಗಿ ಒಂದು ಅಂಗಡಿಯಿಟ್ಟ. ಕವಿತೆಗಳ ಅಂಗಡಿಯದು. ಅಲ್ಲಿ ಬಗೆ ಬಗೆಯ ಕವಿತೆಗಳು ಮಾರಾಟಕ್ಕಿದ್ದವು. ವಿಷಾದ ಕವಿತೆಗಳು, ಪ್ರಕೃತಿ ಕವಿತೆಗಳು, ಪ್ರೇಮ ಕವಿತೆಗಳು, ವಿರಹ ಕವಿತೆಗಳು....ಹೀಗೆ. ತರುಣರು, ತರುಣಿಯರು ಬರುತ್ತಿದ್ದರು. ಗ್ರೀಟಿಂಗ್ಸ್‌ಗಾಗಿ, ಪ್ರೇಮಪತ್ರಗಳಿಗೆ ಜೋಡಿಸುವುದಕ್ಕಾಗಿ, ಯಾರನ್ನೋ ಮೆಚ್ಚಿಸುವುದಕ್ಕಾಗಿ, ಪ್ರಶಸ್ತಿ ಪಡೆಯಲಿಕ್ಕಾಗಿ ಅಲ್ಲಿಂದ ಕವಿತೆಗಳನ್ನು ಕೊಂಡು ಕೊಳ್ಳುತ್ತಿದ್ದರು. ಕೊಂಡುಕೊಂಡ ಬಳಿಕ ಆ ಕವಿತೆಯ ಹಕ್ಕು ಸಂಪೂರ್ಣ ಹಣಕೊಟ್ಟುಕೊಂಡವರದೇ ಆಗಿರುತ್ತಿತ್ತು.
ಒಂದು ದಿನ ನಾಡಿನ ಶ್ರೇಷ್ಟ ಪಂಡಿತ, ವಿಮರ್ಶಕ ಬಂದವನೇ ಕವಿಯಲ್ಲಿ ‘‘ಹೀಗೆ ಮಾಡುವುದು, ವೇಶ್ಯಾವಾಟಿಕೆ ಮಾಡುವುದು ಒಂದೇ. ಹಣದಿಂದ ಕಾವ್ಯದ ಸ್ಫೂರ್ತಿ ಪಡೆಯುವುದನ್ನು ನಾನು ಕಂಡದ್ದು ನಿನ್ನೊಬ್ಬನಲ್ಲಿ ಮಾತ್ರ. ಕವಿ ಸಂಕುಲಕ್ಕೆ ನಾಚಿಕೆಯ ವಿಷಯ’’ ಎನ್ನುತ್ತಾ ಛೀಮಾರಿ ಹಾಕಿದ.
ಕವಿ ಹಸನ್ಮುಖಿಯಾಗಿ ನುಡಿದ ‘‘ಇಲ್ಲ, ನನ್ನ ಗುರುವಿನ ಅಪ್ಪಣೆಯ ಮೇರೆಗೇ ಈ ಅಂಗಡಿಯನ್ನಿಟ್ಟಿದ್ದೇನೆ’’
‘‘ಯಾರು ನಿನ್ನ ಆ ಗುರು?’’ ಪಂಡಿತ ಕೇಳಿದ.
‘‘ಹೊರಗಡೆ ನಾಮಫಲಕ ನೋಡಿಲ್ಲವೆ? ನನ್ನ ಗುರುವಿನ ಹೆಸರನ್ನೇ ಈ ಅಂಗಡಿಗಿಟ್ಟಿದ್ದೇನೆ’’
ಪಂಡಿತ ಹೊರಗಡೆ ಬಂದು ಅಂಗಡಿಯ ನಾಮಫಲಕ ನೋಡಿದ. ನಾಮಫಲಕದಲ್ಲ್ಲಿ ‘‘ಹಸಿವು’’ ಎಂದು ಬರೆದಿತ್ತು.

2 comments: