Saturday, July 23, 2011

ಅಂಗಡಿ

ನನ್ನ ಈ ಕತೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನಿರಬಹುದು ಎಂಬ ಕುತೂಹಲ ನನಗಿದೆ.


ಆ ಬಸ್ ನಿಲ್ದಾಣದ ತುಸು ದೂರದಲ್ಲಿರುವ ಒಂಟಿ ಮರವೊಂದರ ಕೆಳಗೆ ಆತ ಕುಳಿತಿದ್ದ. ದಷ್ಟಪುಷ್ಟನಾಗಿದ್ದರೂ, ಹರಿದ ಅಂಗಿ, ಕುರುಚಲು ಗಡ್ಡ, ಸ್ನಾನ ಕಾಣದ ತಲೆ ಇತ್ಯಾದಿಗಳೆಲ್ಲ ಆತ ಒಬ್ಬ ಪರದೇಶಿಯೆಂದು ಪರಿಚಯಿಸುತ್ತಿದ್ದವು. ಅಲ್ಲಿಯವರೆಗೆ ಮಲಗಿದ್ದವನು, ಎದ್ದು ಕೂತು ಆಕಳಿಸತೊಡಗಿದ. ಹೊಟ್ಟೆ ಚುರ್ರೆನ್ನುತ್ತಿತ್ತು. ನಿನ್ನೆ ರಾತ್ರಿಯೂ ಉಣ್ಣದಿರುವುದು ಆತನಿಗೆ ನೆನಪಾಯಿತು. ತನ್ನ ಮುಂದೆ ಹಾದು ಹೋಗುತ್ತಿರುವವರನ್ನು ಯಾವುದೋ ನಿರೀಕ್ಷೆಯಲ್ಲಿ ಸುಮ್ಮಗೆ ನೋಡತೊಡಗಿದ. ಆಗಾಗ ತನ್ನ ಹರಿದ ಲುಂಗಿಯ ಒಳಗಿರುವ ದೊಗಳೆ ಚಡ್ಡಿಗೆ ಕೈ ಹಾಕಿ ‘ಅದನು’್ನ ಮುಟ್ಟಿ ನೋಡುತ್ತಿದ್ದ. ಅದೊಂದು ಹವ್ಯಾಸ ಅವನಿಗೆ. ರಾತ್ರಿ ನಿದ್ದೆ ಮಾಡುವಾಗ ‘ಅದನ್ನು’ ಹಿಡಿದುಕೊಂಡೇ ಅವನು ಆ ಮರದ ಕೆಳಗೆ ನಿದ್ರಿಸುವುದು.

ಮಧ್ಯಾಹ್ನ ನಿಧಾನಕ್ಕೆ ಬಾಡಿ, ಸಂಜೆಯ ಬಣ್ಣವನ್ನು ಪಡೆಯುತ್ತಿತ್ತು. ಅಷ್ಟರಲ್ಲಿ ಒಬ್ಬ ಗುಂಗುರು ಕೂದಲಿನ, ದಪ್ಪ ಮುಖದ, ಕುಳ್ಳು ಶರೀರದ, ಬಿಳಿ ಬಣ್ಣದ ಮಧ್ಯವಯಸ್ಕ ಅವನ ಕೈಗೆ ಅದೇನನ್ನೋ ಕೊಟ್ಟು, ಮುಂದೆ ನಡೆದ. ‘‘ರೊಟ್ಟಿಯಿರಬಹುದೆ?’’ ಎಂದು ಆತ ಅದನ್ನು ಮೂಗಿನ ಬಳಿಗೆ ತಂದ. ರೊಟ್ಟಿಯ ವಾಸನೆಯಿತ್ತಾದರೂ ಅದೊಂದು ಪುಸ್ತಕವಾಗಿತ್ತು. ಕುಳಿತಲ್ಲೇ ಸುಮ್ಮಗೆ ಅದನ್ನು ಹಿಂದೆ ಮುಂದೆ ಮಾಡಿದ. ಅವನಿಗೆ ಅಕ್ಷರ ಗೊತ್ತಿರಲಿಲ್ಲ. ಚಂದದ ಬಣ್ಣ ಬಣ್ಣದ ಪುಸ್ತಕ. ‘ಏನಿರಬಹುದು? ನನಗೇಕೆ ಇದನ್ನು ಕೊಟ್ಟ?’ ಎಂದೆಲ್ಲ ಯೋಚಿಸುತ್ತಾ ಅದನ್ನು ಕಣ್ಣ ಮುಂದೆ ತಂದ. ನೀಳ ಗಡ್ಡವನ್ನು ಧರಿಸಿದ ಒಬ್ಬನ ಫೋಟೋ ಅದರಲ್ಲಿತ್ತು. ಅದರ ಪಕ್ಕದಲ್ಲೇ ದೊಡ್ಡದೊಂದು ‘ಕೂಡಿಸು’ ಚಿಹ್ನೆ. ಜೊತೆಗೆ ಆ ಚಿಹ್ನೆಯ ಮೇಲೆ ಅದೇ ಗಡ್ದದ ಮನುಷ್ಯ ನೇತಾಡುತ್ತಿದ್ದ. ಕೈಯಿಂದ, ಕಾಲಿಂದ ರಕ್ತ ಒಸರುತ್ತಿತ್ತು.
ಸಮಯ ಕಳೆಯುವುದಕ್ಕೆಂದು ಆ ಪುಸ್ತಕವನ್ನು ಬಿಡಿಸಿದ. ಅದೇ ಗಡ್ಡದ ಸ್ವಾಮಿ. ಆತನ ಕೈಯಲ್ಲೊಂದು ಕೋಲು. ಸುತ್ತಲೂ ಕುರಿಗಳು. ಒಂದೊಂದೇ ಪುಟ ಬಿಡಿಸತೊಡಗಿದ. ಮತ್ತೆ ಅದೇ ಗಡ್ಡದ ಸ್ವಾಮಿಯ ಚಿತ್ರ, ಪ್ರತಿ ಪುಟಗಳಲ್ಲೂ. ಅವನ ಸುತ್ತ ಜನರು ಸೇರಿದ್ದಾರೆ. ಮಹಿಳೆಯೊಬ್ಬಳು ಅವನ ಮುಂದೆ ಅಳುತ್ತಾ ಬಾಗಿದ್ದಾಳೆ. ಹೀಗೆ...ಆ ಪುಸ್ತಕವನ್ನು ಬಿಡಿಸುತ್ತಾ ಬಿಡಿಸುತ್ತಾ ಆ ಸಂಜೆಯನ್ನು ಕಳೆಯ ತೊಡಗಿದ. ಆಗಾಗ ತನ್ನ ಹರಿದ ಚಡ್ಡಿಯ ಒಳಗೆ ಕೈ ಹಾಕಿ ‘ಅದನ್ನು’ ಮುಟ್ಟಿ ನೋಡುವುದನ್ನು ಮರೆಯುತ್ತಿರಲಿಲ್ಲ.
ಮರುದಿನ ಮಧ್ಯಾಹ್ನದ ಹೊತ್ತಿಗೂ ಅವನು ಆ ಮರದಡಿಯಲ್ಲಿ ಕುಳಿತಿದ್ದ. ಪುಸ್ತಕ ಮಣ್ಣಿಂದ ಮಸುಕಾಗಿ, ಅನಾಥವಾಗಿ ಅವನ ಕಾಲ ಬುಡದಲ್ಲಿ ಚೆಲ್ಲಿತ್ತು. ಅಷ್ಟರಲ್ಲಿ ಅದೇ ಗುಂಗುರು ಕೂದಲಿನ ವ್ಯಕ್ತಿ ಆತನ ಬಳಿ ಬಂದ. ಅವನ ಹೆಗಲಲ್ಲಿ ಚೀಲವಿತ್ತು. ಅವನು ಕೇಳಿದ ‘‘ಊಟ ಮಾಡಿದೆಯ?’’
ಆತನಿಗೆ ಆಶ್ಚರ್ಯವಾಯಿತು. ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅವನ ಬಳಿ ಇಂತಹದೊಂದು ಪ್ರಶ್ನೆಯನ್ನು ಕೇಳಿದ್ದರು. ಯಾವುದೋ ಒಂದು ಕಾಲದಲ್ಲಿ ಅವನ ಪತ್ನಿಯಾಗಿದ್ದವಳೂ ಈ ಪ್ರಶ್ನೆಯನ್ನು ಅವನಲ್ಲಿ ಕೇಳಿರಲಿಲ್ಲ. ತಲೆಯೆತ್ತಿ ನೋಡಿದ. ತಮಾಷೆ ಮಾಡುತ್ತಿರಬಹುದೆಂದು ತಲೆಯನ್ನು ಬಸ್ ನಿಲ್ದಾಣದ ಕಡೆಗೆ ಹೊರಳಿಸಿದ.
ಗುಂಗುರು ಕೂದಲಿನಾತ ಕೇಳಿದ ‘‘ಪುಸ್ತಕ ಓದಿದೆಯ?’’
ಇವನಲ್ಲಿ ಉತ್ತರವಿಲ್ಲ. ಆತನ ಪಾದದ ಬಳಿ ಬಿದ್ದಿರುವ ಪುಸ್ತಕವನ್ನು ನೋಡುತ್ತಾ ಗುಂಗುರು ಕೂದಲಿನಾತ ಹೇಳಿದ ‘‘ನೋಡು...ಈ ಸರವನ್ನು ಕುತ್ತಿಗೆಯಲ್ಲಿ ಧರಿಸಿಕೋ...ನಿನ್ನ ಸಂಕಷ್ಟವೆಲ್ಲ ಪರಿಹಾರವಾಗುತ್ತದೆ....’’ ಆತ ಆ ಮಣಿ ಸರವನ್ನು ಕೈಗೆ ತೆಗೆದುಕೊಂಡ. ಅದರ ತುದಿಯಲ್ಲಿ ಮರದಲ್ಲಿ ಮಾಡಿದ ಒಂದು ‘ಕೂಡಿಸು’ ಚಿಹ್ನೆ. ಪುಸ್ತಕದಲ್ಲಿ ಕಂಡಂತಹದೆ. ‘‘ಆದರೆ ಇದಕ್ಕೆ ಕೊಡಲು ನನ್ನಲ್ಲಿ ದುಡ್ಡಿಲ್ಲ’’ ಆತ ಹೇಳಿದ.
ಗುಂಗುರು ಕೂದಲಿನಾತ ನಕ್ಕ ‘‘ಪ್ರಭು ಕೊಡುತ್ತಾನೆ. ಚಿಂತೆ ಮಾಡಬೇಡ. ಕೊರಳಿಗೆ ಹಾಕಿಕೊ’’ ಎಂದವನೇ ಅವನ ಕೈಗೆ ಐದು ರೂ. ಕೊಟ್ಟ. ಈತನಿಗೋ ಆಶ್ಚರ್ಯ! ತನ್ನ ಕೈಯಲ್ಲಿ ಅನಾಯಾಸವಾಗಿ ಐದು ರೂ. ಬಂದು ಸೇರಿದೆ. ಆ ನೋಟನ್ನು ಗಟ್ಟಿಯಾಗಿ ಕೈಯಲ್ಲಿ ಮುಚ್ಚಿಕೊಂಡು ಗುಂಗುರು ಕೂದಲಿನ ವ್ಯಕ್ತಿಗೆ ಕೈ ಮುಗಿಯಬೇಕೆಂದರೆ ಅವನು ಎದ್ದು ಮುಂದೆ ನಡೆದಾಗಿತ್ತು.

ಮರುದಿನ ಮಧ್ಯಾಹ್ನದ ಹೊತ್ತಿಗೆ ಅದೇ ಮರದ ಕೆಳಗೆ ಕೂತಿದ್ದ ಆತನ ಕಣ್ಣು ಯಾರದೋ ನಿರೀಕ್ಷೆಯಲ್ಲಿತ್ತು. ಆಗಾಗ ಮಲಗುತ್ತಾ, ಏಳುತ್ತಾ ಮಾಡುತ್ತಿದ್ದ. ಆಕಳಿಕೆ ತೆಗೆಯುತ್ತಿದ್ದ. ಪಕ್ಕದಲ್ಲೇ ಇದ್ದ ಪುಸ್ತಕವನ್ನು ಬಿಡಿಸಿ ಅದರಲ್ಲಿರುವ ನೀಳ ಗಡ್ಡದ ಸ್ವಾಮಿಯ ಚಿತ್ರ ನೋಡುತ್ತಿದ್ದ. ಅಷ್ಟರಲ್ಲಿ ಅವನು ಬಂದ. ಈತನ ಕೈಯಲ್ಲಿ ಪುಸ್ತಕ ಕಂಡು ಅವನು ಹಸನ್ಮುಖಿಯಾದ. ಬಂದವನೇ ‘‘ಊಟ ಆಯ್ತಿ?’’ ಎಂದು ಕೇಳಿದ. ಈತ ಮಾತನಾಡಲಿಲ್ಲ. ತುಸು ಹೊತ್ತಿನ ಬಳಿಕ ಗುಂಗುರು ಕೂದಲಿನವ ಹೇಳಿದ ‘‘ನೀನ್ಯಾಕೆ ಚರ್ಚಿಗೆ ಬರಬಾರದು...ನಾಳೆ ರವಿವಾರ...ಅಲ್ಲಿ ನಾವೆಲ್ಲ ದೇವರೊಟ್ಟಿಗೆ ಪ್ರಾರ್ಥನೆ ಮಾಡುತ್ತೇವೆ...ಇಲ್ಲೇ ಬಸ್ ನಿಲ್ದಾಣದ ಹಿಂದೆ ಚರ್ಚಿದೆ....’’
‘‘ಆದರೆ....’’ಇವನೇನೋ ಹೇಳುವುದಕ್ಕೆ ಮುಂದಾದಾಗ ಗುಂಗುರು ಕೂದಲಿನಾತ ಅವನ ಮಾತನ್ನು ತಡೆದು ಕಿಸೆಗೇನೋ ಹಾಕಿದ. ಇಣುಕಿ ನೋಡಿದರೆ ನೂರು ರೂಪಾಯಿಯ ನೋಟು! ಅವನು ದಂಗಾಗಿ ಗುಂಗುರು ಕೂದಲಿನವನನ್ನು ನೋಡಿದ. ‘‘ಬರ್ತೀಯ?’’ ಕೇಳಿದ.
‘‘ಬರ್ತೇನೆ...ಆದರೆ ಯಾಕೆ?’’ ಎಂದ.
‘‘ಅಲ್ಲಿ ಪ್ರಾರ್ಥನೆಯಾದ ಮೇಲೆ ಬ್ರೆಡ್ ಮತ್ತು ಹಾಲು ಕೊಡುತ್ತಾರೆ, ಬಡವರಿಗಾಗಿ’’ ಎಂದ. ಎದ್ದು ನಿಂತು ಗುಂಗುರು ಕೂದಲಿನವನಿಗೆ ಆತ ಕೈ ಮುಗಿದ. ಗುಂಗುರು ಕೂದಲಿನವ ಹೋದದ್ದೆ, ಆತ ತನ್ನ ಕಿಸೆಯಲ್ಲಿದ್ದ ನೂರು ರೂ. ನೋಟನ್ನು ಬಿಡಿಸಿ ಕಣ್ಣ ಮುಂದೆ ತಂದ. ಆತನ ಕೈ ಸಣ್ಣಗೆ ಕಂಪಿಸುತ್ತಿತ್ತು.

ಮರುದಿನ ಬೆಳಗ್ಗೆ ಚರ್ಚಿನ ಬಳಿ ಹೋದ. ತುಸು ಹೊತ್ತಲ್ಲೇ ಅವನಿಗೆ ಆ ಗುಂಗುರು ಕೂದಲಿನವ ಎದುರಾದ. ‘‘ಬಾ...ಪ್ರಾರ್ಥನೆಯ ಸಮಯವಾಯಿತು’’ ಎಂದ. ಈತ ಅವನೊಂದಿಗೆ ಆ ವಿಶಾಲ ಭವನದ ಒಳಗೆ ನಡೆದ. ಎಲ್ಲರೂ ಜೊತೆಯಾಗಿ ಹಾಡುತ್ತಿದ್ದರು. ಆತನು ತುಟಿ ಅಲ್ಲಾಡಿಸತೊಡಗಿದ. ಪ್ರಾರ್ಥನೆ ಮುಗಿದ ಬಳಿಕ ಗುಂಗುರು ಕೂದಲಿನವ 5 ರೂ. ಕೊಟ್ಟು ‘‘ಯಾವುದಾದರೂ ಹೊಟೇಲಿನಲ್ಲಿ ಚಹಾ ಕುಡಿ. ಮುಂದಿನ ರವಿವಾರ ನೆನಪಲ್ಲಿ ಬಾ’’ ಎಂದ. ಈತ ಅದನ್ನು ಜೋಪಾನ ಮಡಚಿ, ನಿಲ್ದಾಣದ ಪಕ್ಕದ ತನ್ನ ಮರದ ಬಳಿಗೆ ನಡೆದ.

ಎರಡು ರವಿವಾರವೂ ಆತ ಪ್ರಾರ್ಥನೆಗೆ ಹೋದ. ಅಲ್ಲಿ ಗುಂಗುರು ಕೂದಲಿನವನ ಜೊತೆಗೆ ಅದೇನೋ ಹಾಡಿದ. ಒಂದು ದಿನ ಗುಂಗುರುಕೂದಲಿನವ ಆತನೊಂದಿಗೆ ಕೇಳಿದ ‘‘ನೀನು ಕ್ರಿಶ್ಚಿಯನ್ ಧರ್ಮಕ್ಕೆ ಯಾಕೆ ಬರಬಾರದು? ಅದೇ ಪ್ರಭುವಿನ ನಿಜವಾದ ಧರ್ಮ. ನೀನು ನಿನ್ನ ಧರ್ಮವನ್ನು ಬದಲಿಸು’’
ಆತನಿಗೆ ಅರ್ಥವಾಗಲಿಲ್ಲ. ‘‘ಧರ್ಮವನ್ನು ಬದಲಿಸುವುದು ಹೇಗೆ?’’ ಕೇಳಿದ.
‘‘ಆ ಕೆಲಸವನ್ನು ನಮ್ಮ ಧರ್ಮಗುರುಗಳು ಮಾಡುತ್ತಾರೆ’’
‘‘ಧರ್ಮವನ್ನು ಬದಲಿಸಿದಾಗ ನನಗೆ ಏನಾಗುತ್ತದೆ? ಧರ್ಮ ಬದಲಾಗಿದೆ ಎಂದು ನನಗೆ ಗೊತ್ತಾಗುವುದು ಹೇಗೆ?’’ ಆತ ಕೇಳಿದ.
‘‘ನಿನ್ನಲ್ಲಿ ಬದಲಾವಣೆಯಾಗುತ್ತದೆ’’ ಗುಂಗುರು ಕೂದಲಿನವ ಹೇಳಿದ.
ಆತನಿಗೆ ಅಚ್ಚರಿಯಾಯಿತು ‘‘ನನ್ನಲ್ಲಿ ಬದಲಾವಣೆಯಾಗುತ್ತದೆಯೆ?’’
‘‘ಹೌದು, ನಿನ್ನ ಒಳಗೂ ಹೊರಗೂ ಬದಲಾವಣೆಯಾಗುತ್ತದೆ’’
ಈತ ಒಮ್ಮೆಲೆ ಕಂಪಿಸಿದ. ಅಂದರೆ ಹೊರಗೂ...ಒಳಗೂ...ಅಂದರೆ ಒಳಗೂ ಬದಲಾವಣೆಯಾಗುತ್ತದೆಯೇ? ಅವನಲ್ಲೇನೋ ಒಂದು ಆಸೆ ಮಿಂಚಿತು. ಒಳಗೆ ಅಂದರೆ ನನ್ನ ‘ಅದೂ’ ಬದಲಾವಣೆಯಾಗಬಹುದೆ?
ಅವನ ಚಡ್ಡಿಯೊಳಗಿನ ಅದು ಬಹಳ ಸಣ್ಣದು. ಮದುವೆಯಾದ ರಾತ್ರಿಯೇ ಅವಳು ಸಿಟ್ಟಿನಿಂದ ಒದರಿದ್ದಳು ‘‘ನಿಮ್ಮದು ಬರೇ ಸಣ್ಣದು’’. ಅವನು ಅವಮಾನದಿಂದ ಕುಗ್ಗಿ ಒಂದೇ ವಾರದಲ್ಲಿ ಮನೆ ಬಿಟ್ಟಿದ್ದ. ಅವಳು ಹೇಳಿದ್ದೂ ಸರಿಯಾಗಿಯೇ ಇತ್ತು. ‘ನನ್ನದು ಬರೇ ಸಣ್ಣದು’. ಆ ದಿನದಿಂದ ನೋವಿನ ಹಲ್ಲನ್ನು ನಾಲಿಗೆ ಮುಟ್ಟುವಂತೆ ಸದಾ ಅದನ್ನು ಮುಟ್ಟಿ ನೋಡುವುದು ಅವನಿಗೆ ಹವ್ಯಾಸವಾಗಿತ್ತು. ಇದೀಗ ಗುಂಗುರು ಕೂದಲಿನವ ‘ಒಳಗೂ ಬದಲಾವಣೆಯಾಗುತ್ತದೆ’ ಎಂದದ್ದು ಅವನಿಗೆ ಬದುಕುವುದಕ್ಕೆ ಹೊಸ ಸ್ಫೂರ್ತಿಯನ್ನು ನೀಡಿತ್ತು.
‘‘ಸರಿ, ನಾನು ಧರ್ಮ ಬದಲಿಸುತ್ತೇನೆ’’ ಅವನು ಘೋಷಿಸಿದ. ಅವನ ಧ್ವನಿಯಲ್ಲಿರುವ ದೃಢತೆಯನ್ನು ಕಂಡು ಗುಂಗುರು ಕೂದಲಿನವನಿಗೆ ಸಂತೋಷವಾಯಿತು. ‘‘ಹಾಗಾದರೆ ಮುಂದಿನ ರವಿವಾರ ನಾನು ವ್ಯವಸ್ಥೆ ಮಾಡುತ್ತೇನೆ’’ ಎಂದ.

ಅಂತೂ ರವಿವಾರ ಬಂತು. ನಿಲ್ದಾಣದ ಪಕ್ಕದಲ್ಲೇ ಹರಿಯುತ್ತಿರುವ ನದಿಯಲ್ಲಿ ಸ್ನಾನ ಮಾಡಿ, ಆತ ಚರ್ಚಿಗೆ ಬಂದ. ಅಲ್ಲಿ ಗುಂಗುರು ಕೂದಲಿನವ ಕಾಯುತ್ತಿದ್ದ. ಅವನ ಜೊತೆಗೆ ಇನ್ನೂ ಇಬ್ಬರಿದ್ದರು. ಈತನನ್ನು ಚರ್ಚಿನ ಒಳಗೆ ಒಯ್ದರು. ಅಲ್ಲಿ ಬಿಳಿ ಗವನ್ ಹಾಕಿದವರಿದ್ದರು. ಗಡ್ಡವಿದ್ದರೆ ಆ ಪುಸ್ತಕದಲ್ಲಿದ್ದ ಸ್ವಾಮಿಯಂತೆಯೇ ಕಾಣುತ್ತಿದ್ದರೇನೋ. ಅವರು ಅದೇನೋ ಪುಸ್ತಕದಲ್ಲಿದ್ದುದನ್ನು ಓದ ತೊಡಗಿದರು. ಈತನಿಗೂ ಓದಿಸಿದರು. ನೀರನ್ನು ತಲೆಯ ಮೇಲೆ ಪ್ರೋಕ್ಷಿಸಿದರು. ಮಧ್ಯಾಹ್ನದವರೆಗೂ ಕೆಲಸ ನಡೆಯಿತು. ಎಲ್ಲವೂ ಆದ ಬಳಿಕ ಗುರುಗಳು ಆಶೀರ್ವದಿಸಿ ಅಲ್ಲಿಂದ ತೆರಳಿದರು.
‘‘ನಾನು ಧರ್ಮವನ್ನು ಬದಲಿಸುವುದು ಯಾವಾಗ?’’ ಆತ ಕೇಳಿದ.
ಗುಂಗುರು ಕೂದಲಿನವ ನಕ್ಕು ‘‘ನೀನೀಗ ಕ್ರೈಸ್ತನಾಗಿದ್ದೀಯ. ನಿನ್ನ ಧರ್ಮ ಬದಲಾಗಿದೆ’’ ಎಂದು ಘೋಷಿಸಿದ.
ಅವನಿಗೆ ಆಶ್ಚರ್ಯ. ‘‘ಹೌದೆ, ನಾನೀಗ ಬದಲಾಗಿದ್ದೇನೆಯೆ?’’
‘‘ಹೌದು...ನೀನೀಗ ಬದಲಾಗಿದ್ದೀಯ’’
‘‘ನನ್ನ ಹೊರಗೂ, ಒಳಗೂ ಬದಲಾಗಿದೆಯೆ?’’
‘‘ಹೌದು ಬದಲಾಗಿದೆ’’
‘‘ಒಳಗೂ ಬದಲಾಗಿದೆಯೆ?’’
‘‘ಹೌದು, ಬದಲಾಗಿದೆ’’ ಗುಂಗುರು ಕೂದಲಿನವ ಒತ್ತಿ ಹೇಳಿದ.
ಆತನಿಗೇನೋ ಗೊಂದಲ. ‘‘ನಾನೀಗ ಟಾಯ್ಲೆಟ್ಟಿಗೆ ಹೋಗಿ ಬರಬಹುದೆ?’’ ಎಂದ. ಅವರು ಅನುಮತಿ ನೀಡಿದರು.
ಟಾಯ್ಲೆಟ್ಟಿಗೆ ಹೋದವನೇ ಅವಸರವಸರವಾಗಿ ತನ್ನ ದೊಗಳೆ ಚಡ್ಡಿಯನ್ನು ಬಿಚ್ಚಿ ಬಗ್ಗಿ ನೋಡಿದ. ನೋಡಿದರೆ ‘ಅದು’ ಅಷ್ಟೇ ಸಣ್ಣದಿತ್ತು. ಎಳೆದು ಉದ್ದವಾಗುತ್ತದೆಯೋ ಎಂದು ನೋಡಿದ. ಊಹುಂ...ಯಾವುದೇ ಬದಲಾವಣೆ ಕಾಣುತ್ತಿಲ್ಲ. ಆದರೆ ಅವರ ಬಳಿ ‘‘ಒಳಗೆ ಬದಲಾವಣೆ ಆಗಿಲ್ಲ’’ ಎಂದು ಹೇಗೆ ಹೇಳುವುದು? ಅವನಿಗೆ ಸಂಕಟವಾಯಿತು. ಬಹುಶಃ ಹೊರಗೆ ಮಾತ್ರ ಬದಲಾವಣೆಯಾಗಿದ್ದು, ಒಳಗೆ ಬದಲಾವಣೆಯಾಗುವುದಕ್ಕೆ ಏನೋ ಸಮಸ್ಯೆಯಾಗಿದೆ ಎಂದುಕೊಂಡ. ಅಥವಾ ಕೆಲವು ದಿನ ಕಳೆದ ಮೇಲೆ ಬದಲಾವಣೆಯಾಗಬಹುದೋ? ಚಡ್ಡಿಯನ್ನು ಧರಿಸಿ, ತನಗೆ ತಾನೆ ಅತ್ತ. ಬಳಿಕ ಮುಖತೊಳೆದು ಹೊರಬಂದ. ಟಾಯ್ಲೆಟ್ಟಿನಿಂದ ಹೊರ ಬಂದ ಅವನು ಮಂಕಾಗಿರುವುದು ಗುಂಗುರು ಕೂದಲಿನವನ ಗಮನಕ್ಕೆ ಬಂತು. ನೂರು ರೂ. ನೋಟನ್ನು ಅವನ ಕಿಸೆಗೆ ಹಾಕಿ ‘‘ಪ್ರತಿ ರವಿವಾರ ಚರ್ಚಿಗೆ ಪ್ರಾರ್ಥನೆಗೆ ಬರಬೇಕು’’ ಎಂದ.
ಆತ ‘‘ಆಯಿತು’’ ಎಂದ. ಆದರೆ ನೂರು ರೂ.ವನ್ನು ಕಂಡು ಎಂದಿನ ಉತ್ಸಾಹದಿಂದ ಅವನು ಪ್ರತಿಕ್ರಿಯಿಸಿರಲಿಲ್ಲ.

***
ಇದಾಗಿ ಎರಡು ವಾರ ಕಳೆದಿದೆ. ಅವನು ಆ ಬಳಿಕ ಚರ್ಚಿಗೆ ಕಾಲಿಟ್ಟಿರಲಿಲ್ಲ. ಅವನನ್ನು ಹುಡುಕಿಕೊಂಡು ಗುಂಗುರು ಕೂದಲಿನವನೂ ಬರಲಿಲ್ಲ. ಕೊರಳಲ್ಲಿ ಮಾತ್ರ ಕೂಡಿಸು ಚಿಹ್ನೆ ಇರುವ ಸರ ನೇತಾಡುತ್ತಿತ್ತು. ಅವನು ತನ್ನ ಚಡ್ಡಿಯೊಳಗಿರುವ ‘ಅದನ್ನು’ ಆಗಾಗ ಮುಟ್ಟಿ ನೋಡುತ್ತಾ ಸಮಯ ಕಳೆಯುತ್ತಿದ್ದ. ಅವನ ಹೊಟ್ಟೆ ಚುರ್ರೆನ್ನುತ್ತಿತ್ತು. ಬೆಳಗ್ಗೆ ಏನೂ ತಿಂದಿರಲಿಲ್ಲ. ಮಧ್ಯಾಹ್ನ ಏನಾದರೂ ಸಿಗುತ್ತದೆ ಎಂಬ ಭರವಸೆ ಅವನಿಗಿರಲಿಲ್ಲ. ನಾಲಗೆ ಒಣಗಿತ್ತು. ನೀರು ಕುಡಿಯ ಬೇಕೆನಿಸಿತು. ಆದರೆ ಹೊಟೇಲಿಗೆ ಹೋದರೂ ಅವನಿಗೆ ನೀರು ಕೊಡುವವರಾರೂ ಇದ್ದಿರಲಿಲ್ಲ.

ಅಷ್ಟರಲ್ಲಿ ಅಲ್ಲಿಗೆ ಇಬ್ಬರು ಬಂದರು. ಒಬ್ಬ ತಲೆಗೆ ಟೊಪ್ಪಿ ಹಾಕಿಕೊಂಡಿದ್ದ. ಪರಿಚಿತರಂತೆ ನಕ್ಕು ಅವನ ಪಕ್ಕ ಕೂತರು. ಟೊಪ್ಪಿಯವ ಕೇಳಿದ ‘‘ಭಯಂಕರ ಬಿಸಿಲಲ್ಲವ?’’ ಆತನಿಗೆ ಅದು ಅರ್ಥವಾಗಲಿಲ್ಲ. ಅದನ್ನು ಈತ ನನ್ನ ಬಳಿ ಯಾಕೆ ಹೇಳುತ್ತಿದ್ದಾನೆ?
‘‘ಊಟ ಆಯ್ತ?’’ ಟೊಪ್ಪಿ ಧರಿಸಿದಾತ ಮತ್ತೆ ಕೇಳಿದ.
‘‘ಇಲ್ಲ’’ ಆತನ ಬಾಯಿಯಿಂದ ಉತ್ತರ ಜಾರಿ ಬಿತ್ತು.
‘‘ಮತ್ತೆ ಒಟ್ಟಿಗೆ ಊಟ ಮಾಡುವ. ನನ್ನ ಸಂಬಂಧಿಕರ ಮದುವೆ ಉಂಟು ಹೋಗುವ. ಬಿರಿಯಾನಿ ಊಟ...’’ ಎಂದ.
ಆತನಿಗೆ ಅಚ್ಚರಿ. ಇವನ ಸಂಬಂಧಿಕರ ಮದುವೆಗೆ ನನ್ನನ್ನೇಕೆ ಕರೆಯುತ್ತಿದ್ದಾನೆ?
ತುಸು ಹೊತ್ತು ವೌನ.
ಇದ್ದಕ್ಕಿದ್ದಂತೆಯೇ ಟೊಪ್ಪಿ ಧರಿಸಿದಾತ ಕೇಳಿದ ‘‘ಅಲ್ಲಾ ಇವ್ರೆ...ನೀವು ಧರ್ಮ ಬದಲಿಸುತ್ತೀರಿ ಅಂತಾದ್ರೆ ನಮ್ಮತ್ರ ಒಂದು ಮಾತು ಹೇಳುವುದಲ್ವಾ...? ಹೋಗಿ ಹೋಗಿ ಆ ಹಂದಿ ತಿನ್ನುವವರ ಧರ್ಮಕ್ಕೆ ಸೇರುವುದಾ...?’’
ಆತ ಒಮ್ಮೆಲೆ ಚುರುಕಾದ. ಆದರೆ ಏನೂ ಉತ್ತರಿಸಲಿಲ್ಲ.
‘‘ನೋಡಿ ಇವ್ರೆ...ಅವ್ರ ಧರ್ಮಕ್ಕೆ ಸೇರಿದಿರಿ. ಆದರೆ ಏನಾದರೂ ಬದಲಾವಣೆಯಾಯಿತಾ ನಿಮ್ಮಲ್ಲಿ?’’ ಟೊಪ್ಪಿ ಧರಿಸಿದಾತ ಕೇಳಿದ.
ಈ ಪ್ರಶ್ನೆ ಮಾತ್ರ ಅರ್ಥವುಳ್ಳದ್ದು. ನನ್ನಲ್ಲಿ ಬದಲಾವಣೆಯಾಗಲಿಲ್ಲ ಎನ್ನುವುದು ಇವನಿಗೆ ಹೇಗೆ ಗೊತ್ತಾಯಿತು? ಟೊಪ್ಪಿಯವನ ಮಾತಿನ ಕಡೆಗೆ ತುಸು ಆಕರ್ಷಿತನಾದ.
‘‘ಕ್ರಿಸ್ತನನ್ನು ಮುಸ್ಲಿಮರೂ ನಂಬುತ್ತಾರೆ. ಆದರೆ ಇವರೆಲ್ಲ ಕ್ರಿಸ್ತನ ಹಾದಿಯಲ್ಲಿಲ್ಲ. ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸ್ಸಲ್ಲಂ ಕ್ರೈಸ್ತ ಬೋಧಿಸಿದ ನಿಜವಾದ ತತ್ವವನ್ನು ಹೇಳುವುದಕ್ಕಾಗಿಯೇ ಭೂಮಿಗೆ ಬಂದದ್ದು. ಛೆ...ನಾನು ಇದನ್ನೆಲ್ಲ ನಿಮಗೆ ಮೊದಲೇ ಹೇಳಬೇಕು ಅಂತ ಇದ್ದೆ. ಅಷ್ಟರಲ್ಲಿ ನೀವು ಆ ಹಂದಿ ತಿನ್ನುವವರ ಜಾತಿ ಸೇರಿದ್ದಾ?’’ ಅವನು ಹಣೆಗೆ ಕೈ ಚಚ್ಚಿಕೊಂಡ.
‘‘ನೀವು ಇಸ್ಲಾಂ ಧರ್ಮಕ್ಕೆ ಬದಲಾಗುವುದಾದರೆ ನಾನು ಈಗಲೇ ಅದಕ್ಕೆ ವ್ಯವಸ್ಥೆ ಮಾಡುತ್ತೇನೆ...ಹೇಳಿ ಧರ್ಮ ಬದಲಿಸುತ್ತೀರಾ....?’’ ಕೇಳಿದ.
ಆತನೊಳಗೆ ಸಣ್ಣದೊಂದು ಸುಂಟರಗಾಳಿ ಬೀಸತೊಡಗಿತು ‘‘ಆದರೆ.....’’
‘‘ಆದರೆ ಗೀದರೆ ಎಂತದು ಇಲ್ಲ....’’ ಎನ್ನುತ್ತಾ ಟೊಪ್ಪಿಯವ ಆತನ ಕಿಸೆಗೆ ನೋಟೊಂದನ್ನು ತುರುಕಿಸಿದ. ಆತ ತನ್ನ ಕಿಸೆಗೆ ಇಣುಕಿ ನೋಡಿದ ‘ನೂರು...!’ ಅಪ್ರಯತ್ನವಾಗಿ ಅವನ ಬಾಯಿಯಿಂದ ಉದ್ಗಾರ ಹೊರಟಿತು.
‘‘ಬನ್ನಿ ಬನ್ನಿ ಹೊತ್ತಾಯಿತು...ನನ್ನ ಹತ್ತಿರದ ನೆಂಟನ ಮದುವೆ...ಮೊದಲು ಬಿರಿಯಾನಿ ತಿಂದು ನಂತರ ಮಾತನಾಡುವ...’’ ಎಂದು ಎಬ್ಬಿಸಿದ. ಆತ ಯಂತ್ರದಂತೆ ಎದ್ದು ನಿಂತ.

ಮರುದಿನ ಮಧ್ಯಾಹ್ನ ಆತ ಅದೇ ಮರದ ನೆರಳಲ್ಲಿ ಕುಳಿತಿದ್ದ. ಅವರು ನಗುತ್ತಾ ಬಂದರು ‘‘ಭಾರೀ ಬಿಸಿಲಲ್ವಾ...?’’
‘‘ಹೌದೌದು ಬಿಸಿಲು...’’ ಆತ ಉತ್ತರಿಸಿದ. ನಿನ್ನೆಯ ನೂರರ ನೋಟು ಪುಡಿಯಾಗಿ 50 ರೂ. ನೋಟಿನ ರೂಪವನ್ನು ತಾಳಿತ್ತು.
ಅವನು ನೇರ ವಿಷಯಕ್ಕೆ ಬಂದ ‘‘ಹೇಳಿ ಧರ್ಮ ಬದಲಿಸುತ್ತೀರಾ?’’
ಆತ ತನ್ನ ಸಮಸ್ಯೆಯನ್ನು ಮುಂದಿಟ್ಟ ‘‘ನನ್ನ ಧರ್ಮ ಬದಲಾಗಿದೆ ಎಂದು ನನಗೆ ಗೊತ್ತಾಗುವುದು ಹೇಗೆ?’’
ಈ ಪ್ರಶ್ನೆಗೆ ಇಬ್ಬರೂ ಕಕ್ಕಾಬಿಕ್ಕಿಯಾದರು. ಆದರೆ ಟೊಪ್ಪಿಯವ ತಕ್ಷಣ ಚೇತರಿಸಿಕೊಂಡ ‘‘ನಿಮ್ಮ ‘ಅದು’ ಕಟ್ ಮಾಡುತ್ತೇವಲ್ಲ...ಅದರಿಂದ ನೀವು ಮುಸ್ಲಿಂ ಆಗುತ್ತೀರಿ’’
ಇದನ್ನು ಕೇಳಿದ್ದೇ ಆತನ ಪ್ರಾಣ ಬಾಯಿಗೆ ಬಂದಂತಾಯಿತು ‘‘ಅದು ಅಂದರೆ ‘ಅದನ್ನು’ ಕಟ್ ಮಾಡುವುದೇ?’’
ಟೊಪ್ಪಿ ಧರಿಸಿದಾತ ಸಹಜವೆಂಬಂತೆ ಹೇಳಿದ ‘‘ಹೌದು, ಮುಸ್ಲಿಂ ಆಗುವ ಮೊದಲು ನಾವು ‘ಅದರ’ ತುದಿಯನ್ನು ಕಟ್ ಮಾಡುತ್ತೇವೆ’’
ಆತ ಕುಳಿತಲ್ಲಿಂದ ಥಕ್ಕನೆ ಎದ್ದು ನಿಂತು ಹೇಳಿದ ‘‘ಅದನ್ನು ಮುಟ್ಟುವುದಕ್ಕೆ ನಾನು ಬಿಡುವುದಿಲ್ಲ. ಅದನ್ನು ಕಟ್ ಮಾಡುವುದಾದರೆ ನಾನು ಧರ್ಮ ಬದಲಿಸುವುದೇ ಇಲ್ಲ...ಬೇಕಾದರೆ ನಿಮ್ಮ ದುಡ್ಡು ನಿಮಗೇ ಇರಲಿ...’’ ಎಂದವನೇ ಕಿಸೆಯಲ್ಲಿ ಉಳಿದಿದ್ದ 50ರ ನೋಟನ್ನು ಅವರ ಮುಂದೆ ಚಾಚಿದ.
ಆತನ ನಡವಳಿಕೆಯಿಂದ ಅವರೂ ಆವಕ್ಕಾದರು. ‘‘ಸರಿ, ನಾವು ನಮ್ಮ ಗುರುಗಳತ್ರ ಕೇಳಿ ಹೇಳ್ತೇವೆ. ಅದನ್ನು ಕಟ್ ಮಾಡಬೇಕಾಗಿಲ್ಲ ಅಂದ್ರೆ ನೀನು ಮುಸ್ಲಿಂ ಆಗುವುದಕ್ಕೆ ರೆಡಿಯಾ?’’
ಆತನಿಗೆ ತುಸು ಸಮಾಧಾನವಾಯಿತು ‘‘ಅದನ್ನು ಏನೂ ಮಾಡಬಾರದು. ಅದನ್ನು ಮುಟ್ಟುವುದಾದರೆ ಧರ್ಮ ಬದಲಿಸುವ ಪ್ರಶ್ನೆಯೇ ಇಲ್ಲ. ಕಟ್ ಮಾಡಬೇಕಾಗಿಲ್ಲ ಅಂದ್ರೆ ನೋಡುವ’’ ಆತ ಪಕ್ಕಾ ವ್ಯವಹಾರಿಯಂತೆ ಮಾತನಾಡಿದ.
ಅವರಿಗೂ ಸಮಾಧಾನವಾಯಿತು. ‘‘ಗುರುಗಳತ್ರ ಚರ್ಚೆ ನಡೆಸಿ, ನಾಳೆ ಬರ್ತೇವೆ’’ ಎಂದವರೇ ಅಲ್ಲಿಂದ ಹೊರಟರು.

ಮರುದಿನ ಮಧ್ಯಾಹ್ನ ಆತ ಅವರ ನಿರೀಕ್ಷೆಯಲ್ಲಿ ಕುಳಿತಿರುವಾಗಲೇ ಅವರು ಗಲಗಲನೆ ನಗುತ್ತಾ ಬಂದರು. ಟೊಪ್ಪಿ ಧರಿಸಿದಾತ ಓಡಿ ಬಂದು ಆಲಂಗಿಸಿದ ‘‘ಶುಕ್ರಿಯಾ, ಅದನ್ನು ಕಟ್ ಮಾಡುವುದು ಕಡ್ಡಾಯ ಅಲ್ಲವಂತೆ. ನೀನು ಧರ್ಮ ಬದಲಿಸುವುದಕ್ಕೆ ಯಾವ ಅಡ್ಡಿಯೂ ಇಲ್ಲ...’’ ಹೀಗೆಂದು ಅವನ ಕಿಸೆಗೆ ಒಂದು ನೋಟನ್ನು ತುರುಕಿಸಿದ. ಇಣುಕಿದರೆ ಮತ್ತೆ ನೂರರ ನೋಟು!
ಆದರೆ ಅವನಿಗೆ ಕೆಲವು ಪ್ರಶ್ನೆಗಳನ್ನು ಕೇಳುವುದಿತ್ತು. ‘‘ಧರ್ಮ ಬದಲಿಸಿದರೆ ನನಗೆಂತದು ಲಾಭ?’’
ಅವನ ಪ್ರಶ್ನೆಗೆ ಕಕ್ಕಾಬಿಕ್ಕಿಯಾದರು. ಆದರೆ ಟೊಪ್ಪಿಯವ ಪಕ್ಕನೆ ಚೇತರಿಸಿದ ‘‘ನಾವೆಲ್ಲ ಸಹೋದರರು. ನಮ್ಮ ಮದುವೆ, ಸಮಾರಂಭಕ್ಕೆ ನೀನು ಬರಬಹುದು. ಬಿರಿಯಾನಿ ತಿಂದು ಹೋಗಬಹುದು’’
‘‘ಮತ್ತೆ?’’
ಮತ್ತೆ!? ಟೊಪ್ಪಿಯವ ಹೇಳಿದ ‘‘ಪ್ರತಿ ಶುಕ್ರವಾರ ನಮ್ಮ ಮಸೀದಿಯ ಅಂಗಳದಲ್ಲಿ ನಿನಗೆ ಭಿಕ್ಷೆ ಬೇಡಲು ಅವಕಾಶ ಮಾಡಿ ಕೊಡುತ್ತೇವೆ. ಅಷ್ಟೇ ಅಲ್ಲ...ಮಸೀದಿಯಲ್ಲೇ ಮಲಗುವುದಕ್ಕೂ ವ್ಯವಸ್ಥೆ ಮಾಡುತ್ತೇವೆ...’’
ಶುಕ್ರವಾರ ಮಸೀದಿಯ ಅಂಗಳದಲ್ಲಿ ಭಿಕ್ಷೆ ಬೇಡಬಹುದು ಎನ್ನುವುದು ಆತನಿಗೆ ತುಸು ಲಾಭದಾಯಕವಾಗಿ ಕಂಡಿತು. ದೇವಸ್ಥಾನದ ಪಕ್ಕ ಭಿಕ್ಷೆ ಬೇಡಿದರೆ ಎಂಟಾನೆಗಿಂತ ಜಾಸ್ತಿ ಗಿಟ್ಟುವುದಿಲ್ಲ. ಆದರೆ ಶುಕ್ರವಾರ ಮಸೀದಿ ಪಕ್ಕ ಬೇಡಿದರೆ ಹತ್ತೂ, ಇಪ್ಪತ್ತರ ನೋಟುಗಳು ಬೀಳುತ್ತವೆ. ಹಲವು ಮಸೀದಿಗಳಲ್ಲಿ ಆತನಿಗೆ ಬೇಡಿ ಅನುಭವವಿದೆ. ಆದರೆ ಒಂದು ಮಸೀದಿಯಲ್ಲಿ ಆತ ಮುಸ್ಲಿಮನಲ್ಲ ಎನ್ನುವುದು ಗೊತ್ತಾಗಿ ಹೋಯಿತು. ಅವರು ಹೇಳಿದರು ‘‘ಇಲ್ಲಿ ಮಸೀದಿಯ ಅಂಗಳದಲ್ಲಿ ಮುಸ್ಲಿಮರಿಗೆ ಮಾತ್ರ ಭಿಕ್ಷೆ ಬೇಡುವುದಕ್ಕೆ ಅವಕಾಶ...’’
ಒಂದು ವೇಳೆ ತಾನು ಧರ್ಮ ಬದಲಿಸಿದರೆ ಮಸೀದಿಯ ಅಂಗಳದಲ್ಲಿ ಯಾವ ಭಯವೂ ಇಲ್ಲದೆ ಭಿಕ್ಷೆ ಬೇಡಬಹುದು ಎನ್ನುವುದು ಅವನಿಗೆ ಬಹಳ ನೆಮ್ಮದಿಯನ್ನು ಕೊಟ್ಟಿತು. ‘‘ಸರಿ, ನಾನು ಧರ್ಮ ಬದಲಿಸುತ್ತೇನೆ’’ ಘೋಷಿಸಿದ. ಅವನ ಕೊರಳಲ್ಲಿದ್ದ ಕೂಡಿಸು ಚಿಹ್ನೆಯ ಸರವನ್ನು ತೆಗೆದು ಹಾಕಿದರು. ಬಳಿಕ ‘ಅಲ್ಲಾಹು ಅಕ್ಬರ್’ ಎಂದು ತಕ್ಬೀರ್ ಹೇಳಿದರು.
‘‘ಸರಿ, ಮುಂದಿನ ಶುಕ್ರವಾರ ನಿನ್ನನ್ನು ಕರೆದುಕೊಂಡು ಮಸೀದಿಗೆ ಹೋಗುತ್ತೇವೆ. ಬರುವಾಗ ಹೊಸ ಬಿಳಿ ಬಟ್ಟೆ, ಲುಂಗಿ, ಎಲ್ಲ ತರುತ್ತೇವೆ...ನೀನು ಸ್ನಾನ ಮಾಡಿ ಸಿದ್ಧವಾಗಿರು’’ ಎಂದು ಹೊರಡುವುದಕ್ಕೆ ಸಿದ್ಧತೆ ನಡೆಸಿದರು.
ಅಷ್ಟರಲ್ಲಿ ಅವನು ಕೇಳಿದ ‘‘ಧರ್ಮ ಬದಲಿಸಿದರೆ ನನ್ನಲ್ಲಿ ಬದಲಾವಣೆಯಾಗುತ್ತದೆಯೆ?’’
ಅರ್ಥವಿಲ್ಲದ ಪ್ರಶ್ನೆಗೆ ಅವರು ‘‘ಹೌದು, ಬದಲಾವಣೆಯಾಗುತ್ತದೆ’’ ಎಂದರು.
‘‘ಒಳಗೂ ಬದಲಾವಣೆಯಾಗುತ್ತದೆಯೆ?’’
‘‘ಹೌದು, ಒಳಗೂ ಬದಲಾವಣೆಯಾಗುತ್ತದೆ’’ ಎಂದು ಹೊರಟೇ ಬಿಟ್ಟರು.
ಒಳಗೆ ಬದಲಾವಣೆಯಾಗದೇ ಇದ್ದರೂ ಪರವಾಗಿಲ್ಲ, ಪ್ರತಿ ಶುಕ್ರವಾರ ಮಸೀದಿಯ ಅಂಗಳದಲ್ಲಿ ಭಿಕ್ಷೆ ಬೇಡಬಹುದಲ್ಲ ಎಂದು ಅವನು ಮನದೊಳಗೆ ಹಿರಿ ಹಿರಿ ಹಿಗ್ಗಿದ. ಅಭ್ಯಾಸ ಬಲದಂತೆ ಒಳಗೆ ಕೈ ಹಾಕಿ ಅದನ್ನೊಮ್ಮೆ ಮುಟ್ಟಿ ನೋಡಿದ.

***
ಅವನು ಕ್ರೈಸ್ತ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಬದಲಾಗಿ ಒಂದು ತಿಂಗಳೇ ಆಗಿರಬಹುದು. ಪ್ರತಿ ಶುಕ್ರವಾರ ಮಸೀದಿಗೆ ಭಿಕ್ಷೆ ಬೇಡುವುದಕ್ಕೆ ಹೋಗುತ್ತಾನೆ. ಆದರೆ ಇವನು ತುಂಬಾ ದಷ್ಟಪುಷ್ಟನಾಗಿರುವುದರಿಂದ ಭಿಕ್ಷೆ ಬೀಳುವುದು ತೀರಾ ಕಡಿಮೆ. ಬುರ್ಖಾ ಹಾಕಿದ ಮಹಿಳೆಯರಿಗೆ, ಅಂಗವಿಕಲರಿಗೇ ದೊಡ್ಡ ದೊಡ್ಡ ನೋಟು ಬೀಳುವುದು ಕಂಡು ಅಸಹನೆಯಿಂದ ಮಸೀದಿಗೆ ಭಿಕ್ಷೆ ಬೇಡುವುದಕ್ಕೆ ಹೋಗುವುದನ್ನೇ ನಿಲ್ಲಿಸಿದ.

ಅವನೀಗ ಮತ್ತೆ ಅದೇ ಮರದ ನೆರಳಲ್ಲಿ ಯಾರದೋ ನಿರೀಕ್ಷೆಯಲ್ಲೆಂಬಂತೆ ಕುಳಿತಿದ್ದಾನೆ. ಗುಂಗುರು ಕೂದಲಿನವನ ಪತ್ತೆಯೂ ಇಲ್ಲ. ಟೊಪ್ಪಿ ಧರಿಸಿದವನೂ ಇಲ್ಲ. ಹೊಟ್ಟೆ ಚುರ್ರೆನ್ನುತ್ತಿತ್ತು. ಮೊದಲೆಲ್ಲ ಹಸಿವೆಯನ್ನು ತಡೆದುಕೊಳ್ಳುವ ಶಕ್ತಿಯಿತ್ತು. ಈಗ ಆ ಶಕ್ತಿಯೂ ಇಲ್ಲ. ಕುಳಿತಲ್ಲೇ ಹೊರಳಾಡ ತೊಡಗಿದ. ಅದರ ಜೊತೆಗೇ ಮಧ್ಯಾಹ್ನ ಸಂಜೆಗೆ ಹೊರಳಿತು.
ಅಷ್ಟರಲ್ಲಿ ಒಂದು ಗುಂಪು ಅಲ್ಲಿಗೆ ಆಗಮಿಸಿತು. ಅವರೆಲ್ಲ ಕೇಸರಿ ಶಾಲು ತೊಟ್ಟಿದ್ದರು. ಬಂದವರೇ ಇವನೆಡೆಗೆ ಕೈ ಮಾಡಿ ‘‘ಜೈ ಶ್ರೀರಾಂ’’ ಎಂದರು.
ಇವನಿಗೋ ಅರ್ಥವಾಗಲಿಲ್ಲ. ಆದರೆ ಅವರನ್ನು ನೋಡಿದಾಗ, ಒಳ್ಳೆಯ ಉದ್ದೇಶಕ್ಕೆ ಬಂದವರಂತೆ ಕಾಣಲಿಲ್ಲ. ಅವನ ಎದೆ ಸಣ್ಣಗೆ ನಡುಗಿತು.
ಹಣೆಗೆ ದೊಡ್ಡ ಕುಂಕುಮವನ್ನು ಎಳೆದಾತ ಅವನೆದುರು ಬಂದು ನಿಂತು ಕೇಳಿದ ‘‘ನಿನ್ನನ್ನು ಕಳೆದ ತಿಂಗಳು ಶುಕ್ರವಾರ ಮಸೀದಿಯಲ್ಲಿ ಬಲವಂತವಾಗಿ ಮತಾಂತರ ಮಾಡಿದರಂತೆ ಹೌದೆ?’’
ಕುಂಕುಮಧಾರಿ ಏನು ಹೇಳುತ್ತಿದ್ದಾನೆ ಎನ್ನುವುದೇ ಆತನಿಗೆ ಅರ್ಥವಾಗಲಿಲ್ಲ.
‘‘ಹೆದರಬೇಡ. ನಿನ್ನ ಜೊತೆಗೆ ಕೋಟಿ ಕೋಟಿ ಹಿಂದೂಗಳಿದ್ದಾರೆ. ಬಲವಂತವಾಗಿ ಮತಾಂತರ ಮಾಡಿದ್ದು ಹೌದೋ ಅಲ್ಲವೋ....’’
ಬಲವಂತ ಮತ್ತು ಮತಾಂತರ ಇದು ಎರಡೂ ಆತನಿಗೆ ಹೊಸ ಶಬ್ದಗಳು. ಆದುದರಿಂದ ಏನು ಹೇಳಬೇಕೆಂದು ಹೊಳೆಯದೆ ಆತ ತೊದಲ ತೊಡಗಿದ.
ಅಷ್ಟರಲ್ಲಿ ಇನ್ನಷ್ಟು ಜೋರಾಗಿ ಕುಂಕುಮಧಾರಿ ಕೇಳಿದ ‘‘ಅದನ್ನು ‘ಕಟ್’ ಮಾಡಿದ್ದಾರ...?’’
ಆತ ಮತ್ತೆ ತಡವರಿಸತೊಡಗಿದ. ತಕ್ಷಣ ಕುಂಕುಮಧಾರಿ ಆದೇಶ ನೀಡಿದ ‘‘ಅವನ ಚಡ್ಡಿ ಜಾರಿಸಿ ನೋಡಿ...ಸೂ...ಮಕ್ಕಳು ಅದನ್ನು ಕಟ್ ಮಾಡಿದ್ದಾರ ಅಂತ ನೋಡಿ...’’ ಉಳಿದ ಕೇಸರಿ ಧರಿಸಿದ ಯುವಕರು ಆತನನ್ನು ಹಿಡಿದುಕೊಂಡರು. ಒಬ್ಬ ಆತನ ಚಡ್ಡಿ ಅರ್ಧ ಜಾರಿಸಿದ. ಮೆಲ್ಲಗೆ ಕೈ ಹಾಕಿ ತಪಾಸಣೆ ಮಾಡತೊಡಗಿದ. ‘‘ಕಾಣ್ತಾ ಇಲ್ಲ...ತುಂಬಾ ಸಣ್ಣದಿದೆ...’’ ಎಂದ.
ಕುಂಕುಮಧಾರಿ ಆರ್ಭಟಿಸಿದ ‘‘ಸೂ...ಮಕ್ಕಳು...ಹಾಗಾದರೆ ಕಟ್ ಮಾಡಿರಬೇಕು....’’
ಅಷ್ಟರಲ್ಲಿ ಆತ ಚೇತರಿಸಿ ಬೊಬ್ಬೆ ಹಾಕ ತೊಡಗಿದ ‘‘ಇಲ್ಲ...ಇಲ್ಲ...ಕಟ್ ಮಾಡಿಲ್ಲ....ಕಟ್ ಮಾಡುವುದಕ್ಕೆ ಬಿಡಲಿಲ್ಲ....ನನ್ನದು ಇರುವುದೇ ಅಷ್ಟು.....’’
ಮತ್ತೆ ತಪಾಸಣೆ ನಡೆಯಿತು. ‘‘ಇಲ್ಲ...ಕಟ್ಟಾಗಿಲ್ಲ....ಅವನದು ತುಂಬಾ ಸಣ್ಣದು’’
ಎಲ್ಲರೂ ದೀರ್ಘ ನಿಟ್ಟುಸಿರೊಂದನ್ನು ಬಿಟ್ಟರು. ಅವರೆಲ್ಲರ ಮುಖದಲ್ಲಿ ಮಂದಸ್ಮಿತ ಲಾಸ್ಯವಾಡತೊಡಗಿದವು.
ಈ ‘ಸಾಬರಿಗೆ’ ಹುಟ್ಟಿದವರು ‘ಅದನ್ನು’ ‘ಕಟ್’ ಮಾಡುವುದು ಅವರೆಲ್ಲರಿಗೂ ಒಂದು ದೊಡ್ಡ ಸಮಸ್ಯೆಯಾಗಿತ್ತು. ‘ಮರಳಿ ಮಾತೃ ಧರ್ಮಕ್ಕೆ’ ಅಭಿಯಾನಕ್ಕೆ ‘ಅದು’ ಒಂದು ದೊಡ್ಡ ತೊಡಕಾಗಿತ್ತು. ಇದನ್ನು ಕುಂಕುಮಧಾರಿ ತನ್ನ ಸ್ವಾಮೀಜಿಯ ಬಳಿ ತೆರೆದಿಟ್ಟಿದ್ದ ‘‘ಸ್ವಾಮೀಜಿ...ಕ್ರೈಸ್ತರನ್ನು ತರುವುದು ತುಂಬಾ ಸುಲಭ. ಆದರೆ ಈ ಸಾಬರುಗಳ ‘ಅದನ್ನು’ ಏನು ಮಾಡುವುದು? ಹಿಂದೂ ಧರ್ಮಕ್ಕೆ ಮರಳುವಾಗ ಅದು ‘ಕಟ್’ ಆಗಿರುತ್ತದಲ್ಲ?’’
ಸ್ವಾಮೀಜಿಗಳಿಗೂ ‘ಅದು’ ಧರ್ಮಸೂಕ್ಷ್ಮದ ಪ್ರಶ್ನೆಯಾಗಿಯೇ ಕಂಡಿತು. ‘ಅದನ್ನು’ ಏನು ಮಾಡುವುದು? ಹಿರಿ ಸ್ವಾಮೀಜಿಗಳ ಜೊತೆಗೆ ‘ಅದರ’ ಕುರಿತಂತೆ ಗಂಭೀರವಾಗಿ ಚರ್ಚೆ ನಡೆಸಿ, ಅದನ್ನು ಕೇವಲ ಶಸ್ತ್ರಕ್ರಿಯೆ ಎಂದು ಭಾವಿಸಬೇಕು ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಅಪಘಾತವಾದಾಗ ದೇಹದ ಯಾವುದಾದರೂ ಅಂಗ ತುಂಡಾಗುವುದಿಲ್ಲವೆ? ಹಾಗೆಂದೇ ಇದನ್ನೂ ಪರಿಭಾವಿಸಬೇಕು ಎಂಬ ಅಂತಿಮ ನಿರ್ಣಯಕ್ಕೆ ಬರಲಾಗಿತ್ತು. ಆದರೂ ಕುಂಕುಮಧಾರಿಗೆ ತೃಪ್ತಿಯಾಗಿರಲಿಲ್ಲ. ಇದೀಗ ಈತನ ‘ಅದನ್ನು’ ಕಟ್ ಮಾಡದೇ ಇರುವುದು ಅವನಿಗೆ ಸಂತೋಷವನ್ನು, ನೆಮ್ಮದಿಯನ್ನು ತಂದಿತ್ತು. ಮುಂದಿನ ಕಾರ್ಯಕ್ಕೆ ‘ಅದು’ ತುಂಬಾ ಅನುಕೂಲವನ್ನು ಮಾಡಿಕೊಟ್ಟಿತ್ತು.
‘‘ಸರಿ, ನೀನು ಮಾತೃಧರ್ಮಕ್ಕೆ ಮರಳಬೇಕು...’’ ಕುಂಕುಮಧಾರಿ ಘೋಷಿಸಿದ.
‘‘ಆದರೆ....’’ ಅವನು ತಡವರಿಸಿದ. ಒಬ್ಬ ಕೇಸರಿಧಾರಿ ಸಣ್ಣದೊಂದು ನೋಟನ್ನು ಅವನ ಕಿಸೆಗೆ ತುರುಕಿದ. ಇಣುಕಿದರೆ ಬರೇ ‘ಹತ್ತು ರೂ.’. ನಿರಾಶೆಯಾಯಿತು. ಆದರೆ ಸದ್ಯಕ್ಕೆ ಇದನ್ನು ಇಟ್ಟುಕೊಳ್ಳುವುದೇ ಸರಿ ಎಂದು ಅವನಿಗೆ ಕಂಡಿತು.
‘‘ಹಿಂದೂ ಸಂಸ್ಕೃತಿ ಎಷ್ಟು ಹಿರಿದಾದುದು...ಎಷ್ಟು ಭವ್ಯವಾದುದು...’’ ಎಂದು ಕುಂಕುಮಧಾರಿ ಭಾಷಣವನ್ನು ಮಾಡಿದ. ಎಲ್ಲರೂ ‘ಜೈ ಶ್ರೀರಾಂ’ ಎಂದು ಘೋಷಣೆ ಕೂಗಿದರು. ಅವನನ್ನು ಸ್ವಾಮೀಜಿಯ ಬಳಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯುವುದಕ್ಕೆ ವಾಹನ ಸಿದ್ಧವಾಯಿತು.
ಮರುದಿನ ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ‘ಮರಳಿ ಮಾತೃ ಧರ್ಮಕ್ಕೆ’ ಎಂಬ ತಲೆಬರಹದಲ್ಲಿ ಸುದ್ದಿ ಪ್ರಕಟವಾಯಿತು.

***
ಇದೆಲ್ಲ ಕಳೆದು ತಿಂಗಳು ಉರುಳಿದೆ. ಅದೇ ಮಧ್ಯಾಹ್ನ, ಅದೇ ಮರ ಮತ್ತು ಮಲಗಿದ ಅವನು. ಹೊಟ್ಟೆ ಚುರ್ರೆನ್ನುತ್ತಿತ್ತು. ಯಾರಾದರೂ ಬರಬಹುದು ಎಂಬ ನಿರೀಕ್ಷೆಯಲ್ಲಿ ಕಾದು ಆತನ ಕಣ್ಣುಗಳು ಬಳಲಿದ್ದವು. ಗುಂಗುರು ಕೂದಲಿನವನಾಗಲಿ, ಟೊಪ್ಪಿ ಧರಿಸಿದವನಾಗಲಿ, ಕುಂಕುಮಧಾರಿಯಾಗಲಿ...ಯಾರೂ ಇವನತ್ತ ತಿರುಗಿಯೂ ನೋಡುತ್ತಿರಲಿಲ್ಲ. ಯಾವುದೋ ಕನಸಿನಲ್ಲಿ ಬಂದು ಇಳಿದಂತೆ ನೂರರ ನೋಟು...ಅವನ ನಿದ್ದೆಯನ್ನು ಕಸಿಯ ತೊಡಗಿತ್ತು. ಇತ್ತೀಚೆಗೆ ಅಲ್ಪಸ್ವಲ್ಪ ಅನುಕಂಪ ತೋರಿಸುತ್ತಿರುವವರೂ ದೂರ ಮಾಡಿದ್ದರು. ಕೈ ಚಾಚಿದರೆ ದೂರ ಓಡಿಸುತ್ತಿದ್ದರು. ಇನ್ನು ಈ ಮರದಡಿಯಲ್ಲಿ ಹೀಗೆ ಮಲಗಿ ದಿನ ದೂಡುವುದು ಕಷ್ಟ ಎಂದೆನಿಸಿತು. ಹೊಟ್ಟೆ ಹೊರೆಯುವುದಕ್ಕಾಗಿ ಏನಾದರೂ ಮಾಡಬೇಕು....ಸೋಮಾರಿಯಾಗಿ ಕಾಲ ಕಳೆಯಬಾರದು...ಎಂದೆಲ್ಲ ಯೋಚಿಸತೊಡಗಿದ. ಒಂದು ಸಣ್ಣ ಅಂಗಡಿಯಿಟ್ಟರೆ ಹೇಗೆ ಎಂಬ ಅಲೋಚನೆಯೊಂದು ಅವನ ತಲೆಯಲ್ಲಿ ಸುಳಿಯಿತು. ಹೊಟ್ಟೆ ಅನ್ನ ಕೇಳುತ್ತಿದ್ದುದರಿಂದ, ತಲೆ ಚುರುಕಾಗಿ ಕೆಲಸ ಮಾಡತೊಡಗಿತು. ಪಕ್ಕದಲ್ಲೇ ಒಂದು ರಟ್ಟಿನ ಹಾಳೆ ಬಿದ್ದಿತ್ತು. ಅದನ್ನು ಎತ್ತಿಕೊಂಡ. ಅಂಗಡಿಗೊಂಡು ಬೋರ್ಡ್ ಬೇಡವೆ? ಯಾರಲ್ಲಿ ಬರೆಸುವುದು? ಅಕ್ಷರ ಗೊತ್ತಿರುವವರನ್ನು ಹುಡುಕತೊಡಗಿದ.

ಮರುದಿನ ಆ ಮರದಲ್ಲೊಂದು ಬೋರ್ಡ್ ನೇತಾಡುತ್ತಿತ್ತು ‘‘ಇಲ್ಲಿ ಯಾವುದೇ ಧರ್ಮಕ್ಕೆ ಮತಾಂತರವಾಗುವುದಕ್ಕೆ ಜನರು ಲಭ್ಯವಿದ್ದಾರೆ. ಕೇವಲ ನೂರು ರೂ. ಚಾರ್ಜು ಕೊಟ್ಟರೆ ಸಾಕು’’. ಅವನು ಆ ಮರದ ಕೆಳಗೆ ಕೂತು ಗಿರಾಕಿಗಳಿಗಾಗಿ ಕಾಯ ತೊಡಗಿದ.

16 comments:

  1. Superrrrrrrrrr.... can u tell which is the religion of hungry

    ReplyDelete
  2. ಬರವಣಿಗೆಯನ್ನೇ ಧರ್ಮವನ್ನಾಗಿಸಿ, ಯಾವುದೇ ನಿಸ್ಪಾಕ್ಷಪಾತವಿಲ್ಲದೇ ಬರೆದ ಕಥೆ ಅದ್ಭುತವಾಗಿದೆ ಬಶೀರ್.
    ಮನುಷ್ಯನ ಹಸಿವು ನೀಗುವ ವರೆಗೂ ಧರ್ಮಾಂದತೆಗೆ ಕೊನೆ ಇಲ್ಲ. ಆಭಿನಂದನೆಗಳು.

    ReplyDelete
  3. ಬೊಳುವಾರರ ದೇವರುಗಳ ರಾಜ್ಯದಲ್ಲಿ ಕತೆ ನೆನಪಾಯಿತು!
    ಬಾನಾಡಿ

    ReplyDelete
  4. ನೀವು ಹೇಳಿದ್ದು ಸರಿ. ಬೊಳುವಾರರ ದೇವರುಗಳ ರಾಜ್ಯದಲ್ಲಿ ಎಲ್ಲೋ ತನ್ನ ಪ್ರಭಾವವನ್ನು ಬೀರಿರುವ ಸಾಧ್ಯತೆ ಇದೆ ಎಂಬ ಅನುಮಾನ ನನಗೂ ಬರ್ತಾ ಇದೆ. ಅದಂತೂ ಅದ್ಭುತ ಕತೆ. ಇದಕ್ಕಿಂತ ಹೆಚ್ಚು ಸಮೃದ್ಧವಾಗಿದೆ.

    ReplyDelete
    Replies
    1. ಅಭಿನಂದನೆಗಳು ಬಸಿರ್ ಅವರಿಗೆ ಇಷ್ಟೊಂದು ಚಂದದ ಕತೆ ಬರೆದಿದ್ದಕ್ಕೆ.

      Delete
  5. ತುಂಬಾ ಚೆನ್ನಾಗಿದೆ.ಇಷ್ಟ ಆಯಿತು..

    ReplyDelete
  6. ೧. ಎಲ್ಲಾ ಧರ್ಮಗಳನ್ನು ನಿರಾಕರಿಸಿ ಮನುಷ್ಯ ತನ್ನ ಧರ್ಮ ಕಂಡುಕೊಳ್ಳುವುದೇ ನಿಜ ಧರ್ಮ

    ೨. ಆತ್ಮ ಸ್ಥೈರ್ಯ ವಿಲ್ಲದವಿನಿಗೆ ಯಾವ ಧರ್ಮವು ಫಲಿಸುವುದಿಲ್ಲ

    ೩. faith can move mountain... can't make 'it' grow?

    Nice story...

    ReplyDelete
  7. Channagide! MATANTARA MAADUVA POLLU FUNDAMENTALIST VAADIGALIGE ODISA BEKU NEEVU.
    ...Vishala manasinava!

    ReplyDelete
  8. ಬಶೀರ್ ಸರ್... ಮತಾಂತಂತರದ ಕುರುಡುತನವನ್ನು ಇದಕ್ಕಿಂತ ಅದ್ಭತವಾಗಿ, ಕಟು ವ್ಯಂಗ್ಯವಾಗಿ ಹೇಳಲು ಸಾಧ್ಯವಿಲ್ಲ. ಸೂಪರ್..

    ReplyDelete
  9. ಚೆನ್ನಾಗಿ ಮೂಡಿ ಬಂದಿದೆ, ಮನುಜನ ಹಸಿವು - ಕಾಮ ಇವೆರಡರ ಪ್ರಶ್ನೆಗಳಿಗೆ ಅರ್ಥ ಹುಡುಕಲು ಮುಂದಾದ ಮನುಜನ ಅಂತರಾತ್ಮಕ್ಕೆ - ಹೊರ ಆತ್ಮಗಳು ತಮ್ಮ ಮತಾಂದತೆಯ ರೋಷಾವೇಶದಲ್ಲಿ ಅವನ ನಿಜ ನೋವನ್ನು ಹೇಗೆ ಅರಿಯದಾದವು ಇಂದು ಧರ್ಮಗಳು ಯಾಕೆ ಮನುಜನ ನಿಜ ನೋವಿಗೆ ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ಬಹಳ ಅರ್ಥವತ್ತಾಗಿ ತಿಳಿಸಿ ಬರೆದಿರುತ್ತೀರಿ ಧನ್ಯವಾದಗಳು ಭಷೀರ್

    ReplyDelete
  10. hasivaadavanige anna kodalaagada dharmakkashtu benkihaaka!

    ReplyDelete
  11. ನಿಮ್ಮ ಕತೆಯ ವ್ಯಂಗ್ಯ ಚೆನ್ನಾಗಿದೆ ಬಷೀರ್‍. ಆದರೆ ಅದು ಕಥೆಯಾಗುವಲ್ಲಿ ಒಂದು ರೀತಿಯ ಕಪ್ಪು ಬಿಳಪಿನ ಛಾಯೆ, ನಾಟಕದ ಶೈಲಿ ಬಂದು ಬಿಟ್ಟಿದೆ. ಅವನ ತಳಮಳವನ್ನು ಇನ್ನಿಷ್ಟು ಪರಿಣಾಮಕಾರಿಯಾಗಿ ಕಟ್ಟಿಕೊಡಬಹುದಿತ್ತು. ಆದರೂ ಕತೆ ಇಷ್ಟ ಆಯಿತು.

    ReplyDelete
  12. ಐವನ್ ಡಿಸಿಲ್ವ ಮಂಗಳೂರುJanuary 18, 2013 at 5:10 AM

    ಕಥೆಯ ವ್ಯಂಗ್ಯ ಚೆನ್ನಾಗಿದೆ ಬಶೀರ್ ! ಕೂಡಿಸು ಗುರ್ತಿನ ಧರ್ಮದವರ ಆಚರಣೆ... ಓದಿ ನಗು ಬಂತು.... !!! ಸ್ವಲ್ಪ ಹಸಿ ಇದ್ದರೂ... ಉತ್ತಮವಾಗಿದೆ....

    ReplyDelete
  13. ಚೆನ್ನಾಗಿದೆ ಕತೆ. "ಅದರ"ಬಗ್ಗೆ ಹೇಳುತ್ತಾ ಒಬ್ಬ ಮುಗ್ಧ ಅಮಾಯಕನನ್ನು ಧರ್ಮದ ಹೆಸರಿನಲ್ಲಿ ಹೇಗೆ ಸಮಾಜ ಫೂಟ್ಬಾಲ್ ಆಡುತ್ತದೆ ಎಂಬುದ್ದನ್ನು ಚೆನ್ನಾಗಿ ಹೇಳಿದ್ದಿರ. ಕಥೆಯ ಓಘವನ್ನು ಕಾಪಾಡಿಕೊಂಡಿದ್ದು ನಿಮ್ಮ ಜಾಣ್ಮೆ. ಮೊದಲೆರಡು ಧರ್ಮಗಳನ್ನು ಹೇಳಿದ ರೀತಿಗೂ ಕೊನೆಯದನ್ನು ಹೇಳಿದ ರೀತಿಗೂ, ನೀವು ಯಾವುದರ ವಿರೋಧ ಎಂಬುದು ಎಲ್ಲೋ ಒಂದು ಎಳೆ ಸ್ಪಷ್ಟಪಡಿಸಿದಂತಾಯ್ತು. ಅದು ನನ್ನ ವೈಯುಕ್ತಿಕ ಅಭಿಪ್ರಾಯವಷ್ಟೇ. ಕತೆ ನನಗೆ ಇಷ್ಟವಾಯಿತು.

    ReplyDelete
  14. Nimma Katheginthalu, Adhannu mechi Nimmannu Protsahisuthiruva Prathikriyegalannu Odi thumba santhosha ayithu... Jothege Nimma bali naanu kooda Gujari hekkuthidde Yemba Hemme Sadhaa Iruthade....
    Fayaz N.

    ReplyDelete
  15. ಆ ಹೊತ್ತಿನ ಹಸಿವು ನೀಗಿಸಿಕೊಳ್ಳುವುದು ಆತನ ಅಗತ್ಯವಾಗಿತ್ತು.ಆದರೆ ಅವನಿಥ೯ವಾಗದ ಧಮಿ೯ಷ್ಟರ ಬಣ್ಣದ ನುಡಿಗಳು ಪರೋಕ್ಷವಾಗಿ ಅದು ಬದಲಾಗಬಹುದು ಅನ್ನೋ ಮರೀಚಿಕೆಯ ಬೆನ್ನು ಬೀಳುವಂತೆ ಮಾಡಿಬಿಟ್ಟವು.ವಾಸ್ತವದಲ್ಲಿ ಅವನಿಗೂ ಕತೆಯ ಮೂವರು ಧಮ೯ಭೀರುಗಳಿಗೂ ವ್ಯತ್ಯಾಸವೇನಿಲ್ಲ. ಇವರಿಗೂ ತಮ್ಮದೇ ಆದ ಹಸಿವು ಇದೆ. ಧಮ೯ ಮರೀಚಿಕೆಗಳ ಬೆನ್ನು ಬೀಳಿಸಿದೆ. ಈ ಹಾದಿ ಹಿಡಿದು ಬಳಿಕ ಬೋಡ್೯ ಹಾಕಿಕೊಂಡು ಬಾಚಲು ಕೂತಿದ್ದಾರೆ.

    ReplyDelete