Saturday, February 26, 2011

ಬಸ್ ನಂ. 312

ಸತ್ಯ ಸುಂದರವೂ ಹೌದು ಎನ್ನುವುದಾದರೆ ಮುಂಬಯಿಯಲ್ಲಿ ನಾವು ನೋಡಬೇಕಾಗಿರುವ ಒಂದೇ ಒಂದು ಸುಂದರ ಸತ್ಯ ಧಾರಾವಿ. ಮತ್ತು ಮುಚ್ಚಿಟ್ಟ ಹೊಲಸುಗಳನ್ನೆಲ್ಲ ಮೇಲೆತ್ತಿ ಅಣಕಿಸುವ ಧಾರಾವಿಯ ಮಳೆ. ವಿಶೇಷವೆಂದರೆ ಅದೆಂತಹ ಮಳೆ ಸುರಿದರೂ ಈ ಧಾರಾವಿಯ ಹೊಲಸುಗಳು ಕೊಚ್ಚಿ ಹೋಗುವುದಿಲ್ಲ. ತೇಲುತ್ತಾ ತೇಲುತ್ತಾ ನೀರಿಳಿಯುವ ಹೊತ್ತಿಗೆ ಮತ್ತೆ ಯಥಾಸ್ಥಾನದಲ್ಲೇ ಇರುತ್ತವೆ. ಅಂತಹ ಸುಂದರ ಧಾರಾವಿಯ 90 ಫೀಟ್ ರೋಡ್‌ನಲ್ಲಿ ನಮ್ಮ ಪತ್ರಿಕಾ ಕಚೇರಿಯಿತ್ತು. ಇತ್ತೀಚೆಗೆ ನಿಧನರಾದ ಮಲ್ಲಿಕಾರ್ಜುನಯ್ಯ ಮುಂಬಯಿಯಲ್ಲಿ ಆರಂಭಿಸಿದ್ದ ‘ಕರ್ನಾಟಕ ಮಲ್ಲ’ದಲ್ಲಿ ಸುಮಾರು ಐದು ವರ್ಷ ನಾನು ಆಶ್ರಯ ಪಡೆದಿದ್ದೆ. ಅಲ್ಲೇ ಇದ್ದು ಕನ್ನಡ ಎಂ. ಎ. ಮುಗಿಸಿದ್ದೆ. ಬದುಕನ್ನು ಅರಸುತ್ತಾ ಈ ಪತ್ರಿಕಾ ಕಚೇರಿಯನ್ನು ತಲುಪಿದ ಬಹುತೇಕ ದಕ್ಷಿಣ ಕನ್ನಡದವರೇ ಆದ ತರುಣರು ‘ಕರ್ನಾಟಕ ಮಲ್ಲ’ದ ಮೂಲಕ ಮುಂಬಯಿಯಲ್ಲಿ ಕನ್ನಡದ ದೀಪಕ್ಕೆ ಎಣ್ಣೆ ಹೊಯ್ಯುವ ಕೆಲಸವನ್ನು ಮಾಡುತ್ತಿದ್ದಾರೆ. ಮುಂಬಯಿಯ ಹೊಟೇಲ್ ಕಾರ್ಮಿಕರು, ರಾತ್ರಿ ಶಾಲೆಯ ಹುಡುಗರನ್ನೇ ಬಹುಸಂಖ್ಯೆಯ ಓದುಗರನ್ನಾಗಿ ಪಡೆದುಕೊಂಡಿರುವ ಈ ಪತ್ರಿಕೆಗೆ ಸೆಡ್ಡು ಹೊಡೆಯಲು ಈವರೆಗೆ ಉದಯವಾಣಿ, ಪ್ರಜಾವಾಣಿಯಂತಹ ಪತ್ರಿಕೆಗಳಿಗೇ ಸಾಧ್ಯವಾಗಿಲ್ಲ. ಉದಯವಾಣಿಯಂತಹ ಪತ್ರಿಕೆಗಳನ್ನು ಮುಂಬಯಿಯ ಕಾರ್ಮಿಕ ಹುಡುಗರು ಈವರೆಗೂ ತಮ್ಮದೆಂದು ಸ್ವೀಕರಿಸಿಯೇ ಇಲ್ಲ. ಇಂದು ಕರ್ನಾಟಕ ಮಲ್ಲ ಪತ್ರಿಕೆಯ ಮಾಲಕತ್ವ ಅರವಿಂದ ಶಿಂಗೋಟೆ ಎಂಬ ಮರಾಠಿ ಉದ್ಯಮಿಯ ಕೈಯಲ್ಲಿದೆ. ಕಳೆದ 20 ವರ್ಷಗಳಿಂದ ನನ್ನ ಊರಿನವರೇ ಆಗಿರುವ ಚಂದ್ರಶೇಖರ ಪಾಲೆತ್ತಾಡಿಯವರು ಸಂಪಾದಕರಾಗಿ ಇದನ್ನು ಮುನ್ನಡೆಸುತ್ತಾ ಬರುತ್ತಿದ್ದಾರೆ. ಪತ್ರಿಕೆ ಲಾಭದಲ್ಲಿ ನಡೆಯುತ್ತಿದೆ ಎನ್ನುವ ಒಂದೇ ಒಂದು ಕಾರಣಕ್ಕಾಗಿ ಶಿಂಗೋಟೆ ಕೈಯಲ್ಲಿ ಈ ಪತ್ರಿಕೆ ಇನ್ನೂ ಉಳಿದಿದೆ. ಮಲ್ಲಿಕಾರ್ಜುನಯ್ಯರ ಕೈಯಲ್ಲಿರುವವರೆಗೆ ಧಾರಾವಿಯಲ್ಲಿದ್ದ ಪತಿಕಾ ಕಚೇರಿ, ಈಗ ಅಲ್ಲಿಂದ ಸ್ಥಳಾಂತರಗೊಂಡಿದೆ.
ಸಂಜೆ ಐದು ಗಂಟೆಯ ಹೊತ್ತಿಗೆ ಮೊಣಕಾಲವರೆಗೆ ನಿಂತ ನೀರಿನಲ್ಲಿ ದಾರಿ ಮಾಡುತ್ತಾ ನಾನು 312 ನಂಬರ್ ಬಸ್ ಹಿಡಿಯಲು ಧಾರಾವಿಯಿಂದ ಸಯನ್ ಕಡೆಗೆ ಧಾವಿಸುತ್ತಿದೆ. ನಾನು ಏದುಸಿರು ಬಿಡುತ್ತಾ ಈ ಬಸ್ ಹಿಡಿಯುವ ಹೊತ್ತಿನಲ್ಲಿ ವಿದ್ಯಾನಗರಿಯ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ತಾಳ್ತಜೆ ವಂಸತಕುಮಾರರ ಕಾವ್ಯ ಮೀಮಾಂಸೆ ಉಪನ್ಯಾಸ ಆರಂಭವಾಗಿರುತ್ತಿತ್ತು. ಪ್ರತಿ ದಿನ ಆ ತರಗತಿಗೆ ತಡವಾಗಿಯೇ ತಲುಪುತ್ತಿದ್ದೆ. ಅದು ನನಗೆ ಇಷ್ಟವಾಗಿದ್ದ ಪಠ್ಯ. ನನ್ನ ಎಂ. ಎ. ವ್ಯಾಸಂಗದಲ್ಲಿ ಆ ತರಗತಿ ನನಗೆ ತೀರಾ ದುರ್ಲಭವಾಗಿತ್ತು. ಬೆರಳೆಣಿಕೆಯ ಪಾಠಗಳಿಗಷ್ಟೇ ನಾನು ಹಾಜರಾಗಿದ್ದೆ.
ನಮ್ಮೂರಿನ ಜನರಿಗೆ ಮುಂಬೈ ಅನ್ನುವುದು ಕೊಲ್ಲಿ ರಾಷ್ಟ್ರಗಳಿಗೆ ಹೋಗುವುದಕ್ಕಿರುವ ಕೈಮರ. ನಮ್ಮೂರಲ್ಲಿ ಯಾರಾದರೂ ಮುಂಬೈಗೆ ಗಂಟುಮೂಟೆ ಕಟ್ಟಿದರೆಂದರೆ, ಮುಂದೆ ಸೌದಿಗೋ, ದುಬಾಯಿಗೋ ಹೋಗಿ ಉದ್ಧಾರ ಆದರೆಂದೇ ಅರ್ಥ. ಅಂತಹದರಲ್ಲಿ ನಾನು ಮುಂಬಯಿಗೆ ಹೊರಟಾಗ ಹಲವರಿಗೆ ಅದು ಅರ್ಥವಾಗದ ವಿಷಯವಾಗಿ ಹೋಯಿತು.
‘ಬೊಂಬಾಯಿಯಲ್ಲಿ ಕೆಲಸ ಎಂತಹದು?’
‘ಅಲ್ಲಿ ಕನ್ನಡದಲ್ಲಿ ಎಂ. ಎ. ಮಾಡ್ಲಿಕ್ಕೆ ಹೊರಟಿದ್ದೇನೆ...’ ಉತ್ತರಿಸುತ್ತಿದ್ದೆ.
‘ಕನ್ನಡದಲ್ಲಿ ಎಂ.ಎ. ಮಾಡ್ಲಿಕ್ಕೆ ಬೊಂಬಾಯಿಗಾ? ಕೆಲಸ ಮಾಡುವುದಕ್ಕಲ್ವಾ?’ ಹುಬ್ಬು ಗಂಟಿಕ್ಕಿ ಪ್ರಶ್ನಿಸುತ್ತಿದ್ದರು.
‘ಕೆಲಸ ಮಾಡ್ತಾ ಎಂ. ಎ. ಮಾಡ್ಲಿಕ್ಕೆ....’ ನನ್ನ ಉತ್ತರ ಅವರಿಗೆ ಸಮಾಧಾನ ಕೊಡುತ್ತಿರಲಿಲ್ಲ.
‘ಬೊಂಬಾಯಿಯಲ್ಲಿ ಕನ್ನಡ ಕಲಿಯುವುದು ಎಂಥದು...’ ಎಂದು ಅವರಷ್ಟಕ್ಕೇ ಅವರು ಗೊಣಗಿದ್ದರು.
ಬಂಧುಗಳಿಲ್ಲದ, ಮಿತ್ರರಿಲ್ಲದ ಬೊಂಬಾಯಿಗೆ ಆತ್ಮೀಯರೊಬ್ಬರ ಧೈರ್ಯದ ಮೇಲೆ ಹೊರಟಿದ್ದೆ. ಎಂ. ಎ. ಮಾಡುವುದಕ್ಕಿಂತ ನನಗೆ ಅಪ್ಪನ ಗುಜರಿ ಅಂಗಡಿಯಿಂದ ಕಳಚಿಕೊಳ್ಳುವುದು ಅತ್ಯವಶ್ಯವಾಗಿತ್ತು. ಇಲ್ಲವಾದರೆ ಈ ಗುಜರಿ ಅಂಗಡಿಯೊಳಗೇ ನಾನು ಕಳೆದು ಹೋಗಿ ಬಿಡುತ್ತೇನೆ ಎಂಬ ಭಯ ನನ್ನನ್ನು ಆವರಿಸಿತ್ತು. ಎಲ್ಲರೂ ‘ಬೇಡ ಬೇಡ’ ಎಂದರೂ ಮುಂಬಯಿಯ ಬಸ್ಸನ್ನೇರಿದ್ದೆ. ಮುಂಬಯಿಯ ಹತ್ತಿರ ಬರುವಾಗ ಬಸ್ಸಲ್ಲಿ ಅಬ್ದುರ್ರಹ್ಮಾನ್ ಎನ್ನುವ ವ್ಯಕ್ತಿಯ ಪರಿಚಯವಾಯಿತು. ವಿಶೇಷವೆಂದರೆ ಈತನೂ ಧಾರಾವಿಯಲ್ಲೇ ಒಂದು ಅಂಗಡಿಯನ್ನಿಟ್ಟಿದ್ದ. ನನ್ನನ್ನು ಧಾರಾವಿಯಲ್ಲಿರುವ ‘ಕರ್ನಾಟಕ ಮಲ್ಲ’ ಕಚೇರಿಯವರೆಗೆ ತಲುಪಿಸಿದ ಈತನನ್ನು ಮತ್ತೆ ಭೇಟಿಯಾಗುವ ಅವಕಾಶವೇ ನನಗೆ ಒದಗಿ ಬರಲಿಲ್ಲ. ಅವನ ಮುಖವನ್ನು ಸ್ಪಷ್ಟ ಮಾಡಿಕೊಳ್ಳಲು ಅದೆಷ್ಟೋ ಪ್ರಯತ್ನ ಪಟ್ಟಿದ್ದೇನೆ. ಈವರೆಗೂ ಸಾಧ್ಯವಾಗಿಲ್ಲ. ನನ್ನನ್ನು ಅಲ್ಲಿಯವರೆಗೆ ತಲುಪಿಸುವುದಕ್ಕಾಗಿಯೇ ಆತ ಆ ಬಸ್ಸನ್ನೇರಿದ್ದನೋ ಎಂಬ ಅನಿಸಿಕೆ ಬಹಳ ಸಮಯದವರೆಗೂ ನನ್ನಲ್ಲಿ ಉಳಿದು ಬಿಟ್ಟಿತ್ತು. ಅಂತೂ ನನಗಾಗಿ ಮಾಡಬೇಕಾಗಿದ್ದ ಅವನ ಪಾಲಿನ ಕೆಲಸವನ್ನು ನಿರ್ವಹಿಸಿ ವಿದಾಯಹೇಳಿದ್ದರೂ, ಇಂದಿಗೂ ಅವನೊಂದು ಅವ್ಯಕ್ತ ಪ್ರತಿಮೆಯಾಗಿ ನನ್ನೊಳಗೆ ನೆಲೆಸಿದ್ದಾನೆ.
ಅಚಾನಕ್ಕಾಗಿ ದೇವರ ಸಂದೇಶದಂತೆ ಇಂತಹ ಹಲವು ಕೈಗಳು ನನ್ನೆಡೆಗೆ ಚಾಚಲ್ಪಟ್ಟಿವೆ. ನಾನು ‘ಥ್ಯಾಂಕ್ಸ್’ ಹೇಳುವ ಮುನ್ನವೇ ಯಾವ ಸುಳಿವೂ ಇಲ್ಲದಂತೆ ಕಣ್ಮರೆಯಾಗಿವೆ.
ಒಮ್ಮೆ 312 ನಂಬರ್ ಬಸ್ಸಲ್ಲಿಯೂ ಹೀಗೆಯೇ ಆಯಿತು.
ಎಂ. ಎ. ತರಗತಿ ಮುಗಿಸಿ ಹೊರಟಿದ್ದೆ. ರಾತ್ರಿ ಒಂಭತ್ತು ಗಂಟೆ. ಮತ್ತೆ ರೂಂ ತಲುಪುವ ಧಾವಂತ. ತುಂಬಿ ಹೋಗಿದ್ದ 312 ಬಸ್ಸನ್ನೇರಿದ್ದೆ. ಬಸ್ ಒಂದು ಕಿ. ಮೀ. ಹೋಗಿರಬೇಕು. ಕಿಸೆಗೆ ಕೈ ಹಾಕಿದರೆ ಪರ್ಸ್ ಮಾಯ.! ತಿಂಗಳ ಕೊನೆ. ಆ ಹರಿದ ಪರ್ಸ್‌ನಲ್ಲಿ ಇದ್ದದ್ದೇ ಒಂದು ರೂಪಾಯಿಯ ಮೂರು ನಾಣ್ಯ. ಬಸ್ಸಿಗೆ ಕೊಡಲೆಂದೇ ಇರಿಸಿದ್ದೆ. ಯಾವನೋ ದುರ್ದೈವಿ ಅದನ್ನು ಎಗರಿಸಿದ್ದ.
ಕಂಡಕ್ಟರ್ ಹತ್ತಿರವಾಗುತ್ತಿದ್ದ. ನನ್ನೆದೆ ಢವಢವಿಸತೊಡಗಿತು. ಬಸ್ಸಿನಿಂದ ಇಳಿಸಿದರೆ ಕುರ್ಲಾದಿಂದ ಧಾರಾವಿಯವರೆಗೆ ನಡೆಯುವುದಕ್ಕೇನೋ ನಾನು ಸಿದ್ಧನಿದ್ದೆ. ಆದರೆ ಬಸ್ಸಿನಲ್ಲಿ ಆಗಬಹುದಾದ ಅವಮಾನವನ್ನು ನೆನೆದುಕೊಂಡು ನಿಂತಲ್ಲೇ ತಲ್ಲಣಿಸಿದೆ. ಕಂಡಕ್ಟರ್ ಬಂದವನೇ ನನ್ನೆದುರು ನಿಂತು ‘ಟಿಕೆಟ್’ ಅಂದು ಬಿಟ್ಟ. ನಾನು ತಡವರಿಸತೊಡಗಿದೆ. ಒಮ್ಮೆ ಪ್ಯಾಂಟಿನ ಜೇಬಿಗೂ, ಇನ್ನೊಮ್ಮೆ ಶರ್ಟಿನ ಜೇಬಿಗೂ ಕೈ ಹಾಕಿದೆ. ಇಲ್ಲದ ದುಡ್ಡನ್ನು ಸುಮ್ಮನೆ ಹುಡುಕಾಡ ತೊಡಗಿದೆ. ನನ್ನ ಕೈಯಲ್ಲಿದ್ದ ಪುಸ್ತಕಗಳಿಂದ, ಧರಿಸಿದ್ದ ಬಟ್ಟೆಗಳಿಂದ ಕಂಡಕ್ಟರ್ ನನ್ನನ್ನು ನಿಧಾನಕ್ಕೆ ಅರ್ಥ ಮಾಡಿಕೊಳ್ಳುತ್ತಿದ್ದನೇನೋ...ಅಷ್ಟರಲ್ಲಿ ಅದ ಬಸ್ಸಲ್ಲಿ ಮುಂದಿನ ಸಾಲಿನಲ್ಲಿದ್ದ, ಕೊಳಕು ಬಟ್ಟೆ ಧರಿಸಿದ್ದ ಒಣಗಿದ ಮುಖದವನೊಬ್ಬ ತನ್ನ ಒರಟು ಹಿಂದಿಯಲ್ಲಿ ‘ಕ್ಯಾರೇ ಕ್ಯಾರೇ...ನಾಟಕ ಮಾಡ್ತಿಯೇನೋ...’ ಎನ್ನುತ್ತಾ ನನ್ನ ಹತ್ತಿರ ಬರ ತೊಡಗಿದ. ಬಸ್ಸು, ಮುಂಬಯಿ, ಜಗತ್ತು ಎಲ್ಲವೂ ಒಂದು ಕ್ಷಣ ನನ್ನ ಪಾಲಿಗೆ ಸ್ತಬ್ಧವಾಯಿತು. ಇದ್ದಕ್ಕಿದ್ದಂತೆಯೇ ನಾನು ನಿಂತುಕೊಂಡ ಪಕ್ಕದ ಸೀಟಿನಿಂದ ಒಂದು ವೃದ್ಧ ಕೈ ನನ್ನನ್ನು ಪಕ್ಕನೆ ಎಳೆದು ತನ್ನ ಹತ್ತಿರ ಕೂರಿಸಿಕೊಂಡಿತು. ‘ಎಲ್ಲಿಗೆ ಹೋಗಬೇಕು?’ ಕೇಳಿತು. ‘ಸಯನ್’ ಅಂದೆ. ಕಂಡಕ್ಟರನಿಗೆ ಟಿಕೆಟಿನ ದುಡ್ಡು ಕೊಟ್ಟಿತು.
ಆಮೇಲೆ ಮಾತಿಲ್ಲ, ಕತೆಯಿಲ್ಲ. ಎಲ್ಲೋ ಒಂದೆಡೆ ಆ ವೃದ್ಧ ಜೀವ ಇಳಿಯಿತು. ನಾನು ಒಂದು ಥ್ಯಾಂಕ್ಸನ್ನೂ ಆತನಿಗೆ ಹೇಳಿರಲಿಲ್ಲ. ಇಳಿದು ಹೋದ ಬಳಿಕ ನನಗೆ ತಪ್ಪಿನ ಅರಿವಾಯಿತು. ಆ ಕತ್ತಲಲ್ಲಿ ಆತನ ಮುಖವನ್ನೂ ಸರಿಯಾಗಿ ಗಮನಿಸಿರಲಿಲ್ಲ.
ಮುಖವೇ ಇಲ್ಲದ ಒಂದು ಕೈ! ಧರ್ಮ, ಜಾತಿ, ದೇಶ, ರಕ್ತಸಂಬಂಧ ಇತ್ಯಾದಿಗಳ ಹಂಗಿಲ್ಲದ ಆ ಕೈಯ ಸ್ಪರ್ಶವನ್ನು ನಾನು ‘ದೇವರ ಸ್ಪರ್ಶ’ ಎಂದು ಕರೆಯುತ್ತೇನೆ.

2 comments:

  1. ಬಷೀರ್ ಅವರೇ,

    ನಿಮಗಾದ ಅನುಭವ ಹಲವಾರು ಸಂದರ್ಭಗಳಲ್ಲಿ ನನಗೂ ಆಗಿದೆ. ಅಗೋಚರ ವ್ಯಕ್ತಿಗಳು ಅದೃಶ್ಯವಾಗಿಯೇ ನೆರವು ನೀಡಿ, ಅಷ್ಟೇ ಅನಾಮಧೇಯರಾಗಿ ಹೊರಟುಹೋಗಿದ್ದಾರೆ. ಇವತ್ತು ಕೂತು ನೆನಪಿಸಿಕೊಂಡರೆ ನನಗೇ ನಂಬಲು ಆಗುವುದಿಲ್ಲ. ನೀವಂದಿದ್ದು ಅಕ್ಷರಶಃ ಸತ್ಯ. ಅದು ದೇವರ ಸ್ಪರ್ಶವೇ ಸರಿ.

    ReplyDelete
  2. ನಿಮ್ಮ ಭಾವಶುದ್ಧ ಬರವಣಿಗೆ ನಮಗಿಷ್ಟ.

    ReplyDelete