ಬೇರೇನೋ ಬರೆಯುವ ಅವಸರದಲ್ಲಿದ್ದಾಗ ನನ್ನ ಪೆನ್ನಿಂದ ಉದುರಿದ ಕೆಲವು ಹನಿಗಳು ಇಲ್ಲಿವೆ. ಓದಿ ಇಷ್ಟವಾದರೆ ತಿಳಿಸಿ.
ಅಮ್ಮ
ಗುಲಾಬಿಯೆಂದರೆ
ಅಮ್ಮನಿಗೆ ಇಷ್ಟ
ಗೊತ್ತು ಅವಳಿಗೆ ಮುಳ್ಳಲ್ಲಿ
ಅರಳುವ ಕಷ್ಟ!
ಸ್ನೇಹ
ನಿನ್ನ ಕಂಡಾಗಲೆಲ್ಲ
ದ್ವೇಷಿಸಬೇಕೆಂದು
ಅನ್ನಿಸುತ್ತದೆ
ದ್ವೇಷಕ್ಕೂ ಹೀಗೊಂದು
ಸ್ನೇಹದ ಮುಖ ಇದೆ
ಎಂದು ತಿಳಿದಿರಲಿಲ್ಲ ನನಗೆ!
ದೇವರಾಣೆ
ಮೂರು ಕಾಸಿನ ಲಾಭವಿಲ್ಲದ
ನಿನ್ನ ಸ್ನೇಹದಿಂದ ಬಿಡಿಸಿಕೊಳ್ಳಲು ಅದೆಷ್ಟೋ
ಪ್ರಯತ್ನ ಮಾಡಿದ್ದೇನೆ
ಲಾಭವಿಲ್ಲ
ಎನ್ನುವ ಒಂದೇ ಒಂದು
ಕಾರಣಕ್ಕೆ
ಈ ಸ್ನೇಹ ಉಳಿದುಕೊಂಡಿದೆ
ಕೊಳಲು
ಅವನಿಂದ
ಕೊಂಡ ಕೊಳಲಿಗೆ
ತುಟಿ ಸೇರಿಸಿದೆ
ದನಿಯೇ ಇಲ್ಲ
ಕೊಳಲನ್ನು ಮಾತ್ರ ಕೊಳ್ಳುವ
ನನ್ನ ಹಣ
ಅವನ ಉಸಿರ ಕೊಳ್ಳಲಾಗದ
ಅವಮಾನದಿಂದ ತಲೆತಗ್ಗಿಸಿತು!
ಭಾಗ್ಯರೇಖೆ
ಮದಿರಂಗಿ ಹಚ್ಚಿದ
ಅವನ ಬೊಗಸೆಯಿಂದ
ಬಿಡಿಸಿಕೊಂಡ ನನ್ನ ರಕ್ತಸಿಕ್ತ ಕೈಗಳು!
ಮದುವೆಯ ಚಪ್ಪರದಿಂದ
ಕಣ್ಣೀರಿನಂತೆ ಇಳಿಯುತ್ತಿದ್ದ
ಮಳೆ ನೀರಿನಲ್ಲಿ ತೊಳೆದುಕೊಂಡೆ
ಓ ದೇವರೇ...
ನನ್ನ ಅಂಗೈಯ ಭಾಗ್ಯರೇಖೆ?
ಅವನ ಬೊಗಸೆಯೊಳಗೇ ಉಳಿದು ಬಿಟ್ಟಿದೆ!
ಧ್ಯಾನ
ನೀನು ಹೇಳುವುದೂ ಸರಿ
ಇದು ಪ್ರಾರ್ಥನೆಯ ಹೊತ್ತು
ಅವನನ್ನು ಎಬ್ಬಿಸಬೇಕು
ಆದರೆ
ಈಗಷ್ಟೇ ದೇಗುಲವೊಂದನ್ನು
ಕಟ್ಟಿ ಮುಗಿಸಿದ
ಅವನು ದಣಿದಿದ್ದಾನೆ
ನನ್ನ ಧ್ಯಾನ
ಅವನ ನಿದ್ದೆಯಿಂದ
ಸ್ಫೂರ್ತಿ ಪಡೆದಿದೆ
ಕೆಡಿಸಬೇಡ
ಕಾಗದದ ದೋಣಿ
ಹರಿಯುತ್ತಿರುವುದು
ಬೆಂಕಿಯ ನದಿ
ತೇಲುತ್ತಿರುವುದು ಕಾಗದದ ದೋಣಿ!
ಈಗಷ್ಟೇ ಹುಟ್ಟಿದಂತಹ ಹುಡುಗ
ಕೈಯಲ್ಲಿ ಹುಟ್ಟೊಂದನ್ನು
ಹಿಡಿದು
ದೋಣಿಯನ್ನು ಏರ ಹೊರಟಿದ್ದಾನೆ!
ಆ ತೀರವನ್ನು ತಲುಪುವೆ ಎನ್ನುತ್ತಿದ್ದಾನೆ!
namaskara- nimma blog link kannadablogkondi.blogspot.com- nodi
ReplyDeletemupadhyahiri.blogspot.com
muraleedhara upadhya
tumbaa chennagide ee padyagalu
ReplyDeleteಗಟ್ಟಿ ಪದಗಳೊಳಗೆ ಇಳಿದಾಗ ಗೊತ್ತಾಯಿತು,ಹಳೆ ಕಬ್ಬಿಣಗಳೂ ತುಕ್ಕು ಹಿಡಿದ ಬದುಕಿಗೆ ಆಸರೆಯಾಗುತ್ತದೆ.ಇಲ್ಲಿನ ಪ್ರತಿಯೊಂದು ಹಾಯ್ಕುಗಳು ಬದುಕಿಗೆ ಆಯ್ದುಕೊಳ್ಳುವಂತವು.ಕೆಲವಂತೂ ಚುಚ್ಚುದರೂ ನೋವಿನಲ್ಲಿ ಸುಖವ ಕಾಣುವಂತದ್ದು.ಅದ್ಭುತವಾದ ಹನಿಗಳು ಜೇನ ಹನಿಯಂತೆ ಸ್ವಾಧಿಷ್ಟವಾದವು.
ReplyDelete