Tuesday, June 11, 2013

ಒಂದಿಷ್ಟು ಸಾಲುಗಳು

1
ರಾತ್ರಿ ಕನಸಲ್ಲಿ
ಬಂದವಳು
ಇಲ್ಲೇ ಕೋಣೆಯಲ್ಲೆಲ್ಲೋ
ಬಚ್ಚಿಟ್ಟು ಕೊಂಡಂತೆ

ಅವಳ ಕಾಲ ಗೆಜ್ಜೆಯ
ಉದುರಿದ ಮಣಿ
ಇಲ್ಲೇ ಎಲ್ಲೋ ಅನುರಣಿಸಿದಂತೆ

ರಾತ್ರಿ ಕಂಡದ್ದು
ಕನಸೇ ಆಗಿರಬೇಕು ಏಕೆ?
 

2
ನಾನು ಬರೆಯುತ್ತೇನೆ
ನೀವು ಒಪ್ಪಬೇಕು ಎಂದಲ್ಲ...
ನಾನು ಬರೆಯುತ್ತೇನೆ
ನೀವು ತಿರಸ್ಕರಿಸಬೇಕೆಂದೂ ಅಲ್ಲ...
ಶಾಂತ ಸಾಗರದಂತೆ ನಿದ್ರಿಸುವ
ನಿಮ್ಮ ಎದೆಗಡಲಲ್ಲಿ
ನಾನು ಬೀಳಿಸುವ ಸಣ್ಣದೊಂದು ಉಂಗುರ
ಮುಂದೊಂದು ದಿನ
ಮೀನ ಗರ್ಭ ಹರಿದು
ಶಕುಂತಲೆಯ ಕತೆಯಾಗಿ
ಹೊರಬರಬಹುದೆನ್ನುವ
ಸಣ್ಣ ಆಸೆಯಷ್ಟೇ ನನ್ನದು

3
ಬಾಣ ಎಸೆದದ್ದು
ಶತ್ರುವಿನ ಕಡೆಗೆ
ಆದರೆ ನನ್ನ ದುರ್ವಿಧಿಯೇ
ಅದು ಇರಿಯುತ್ತಾ
ಹೋದದ್ದು ನನ್ನ
ಮಿತ್ರರ ಎದೆಯನ್ನೇ....

4

ಒಂದು ಪುಸ್ತಕ
ಬೇಕಾಗಿತ್ತು..
ಇಡೀ ದಿನ ಹುಡುಕುತ್ತಿದ್ದೆ

ಕೊನೆಗೂ ಸಿಕ್ಕಿತು
ಆದರೆ ಹುಡುಕುತ್ತಿದ್ದ  ಪುಸ್ತಕವಲ್ಲ

ಕಳೆದವಾರ ಹುಡುಕಿ
ಸುಸ್ತಾಗಿ ಕೈ ಬಿಟ್ಟ
ಪುಸ್ತಕ ಇಂದು ನನ್ನೆದುರು
ಹಲ್ಲು ಕಿರಿಯುತ್ತಿತ್ತು

ಬಹುಷಃ ನಮಗೇನು
ಬೇಕು ಎನ್ನುದನ್ನು
ಕಾಲನ ಕೈಯಲ್ಲಿ ಕೊಟ್ಟ ವಿಧಿ
ಪುಸ್ತಕದ ರೂಪದಲ್ಲೇ ನನ್ನ ಅಣಕಿಸಿದಂತೆ

ಬೇಡವೆಂದರೂ ಅದನ್ನು
ಕೈಗೆತ್ತಿ ಸುಮ್ಮಗೆ ಬಿಡಿಸಿ
ನಕ್ಕು ಕಪಾಟಿನೊಳಗಿಡುತ್ತೇನೆ

Saturday, June 8, 2013

ನಾಝಿ ಸಾಮ್ರಾಜ್ಯವಾದದ ವಿರುದ್ಧ ಹೋರಾಡಿ, ಮಡಿದ ಟಿಪ್ಪು ಸುಲ್ತಾನ್ ಕುಡಿ

ಟಿಪ್ಪು ವೀರ ಮರಣದ  ಬಳಿಕ ಅವರ ವಂಶಸ್ಥರು ಎಲ್ಲಿ ಹೋದರು? ಹಲವರು ಬೀದಿ ಪಾಲಾದರು ನಿಜ. ಆದರೆ ಟಿಪ್ಪುವಿನ ಬದುಕು ಅಲ್ಲಿಗೆ ಮುಗಿಯಲಿಲ್ಲ. ವಿಧಿ ವಿಪರ್ಯಾಸವೆಂದರೆ  ಇದೆ ಟಿಪ್ಪುವಿನ ಒಂದು ಹೆಣ್ಣು ಕುಡಿ ಬ್ರಿಟಿಷರ ಪರವಾಗಿ ಜರ್ಮನ್ ನಾಝಿಗಳ ವಿರುದ್ಧ ಹೋರಾಡಿ ಹುತಾತ್ಮವಾಯಿತು. ಅದೇ ತಾತನ ಧೀರೋದ್ಧಾತತೆಯನ್ನು ಮೆರೆದು ಬದುಕಿ, ಮರಣವಪ್ಪಿದ ಹೆಣ್ಣು ಮಗಳ ಹೆಸರು ನೂರ್ ಇನಾಯತ್. ಈಕೆ ಟಿಪ್ಪುವಿನ ಮೂರನೇ ತಲೆಮಾರಿನ ಕುಡಿ. 

'ಮೈಸೂರಿನ ಹುಲಿ' ಎಂದೇ ವಿಶ್ವವಿಖ್ಯಾತನಾಗಿರುವ ಸುಲ್ತಾನ್ ಫತೇ ಅಲಿ ಟಿಪ್ಪು, ಬ್ರಿಟಿಶರ ವಿರುದ್ಧ ದಿಟ್ಟ ಹೋರಾಟ ನಡೆಸಿ ಪ್ರಾಣಾರ್ಪಣೆ ಮಾಡಿದ ಮಹಾನ್ ದೇಶಭಕ್ತ. ಶ್ರದ್ಧಾವಂತ ಮುಸ್ಲಿಮನಾಗಿದ್ದ ಟಿಪ್ಪು, ತನ್ನ ಜೀವಿತದುದ್ದಕ್ಕೂ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿದಿದ್ದ.ಟಿಪ್ಪು ಸುಲ್ತಾನ್‌ನ ವಂಶಸ್ಥ ಇನಾಯತ್ ಖಾನ್‌ಗೆ ಜನಿಸಿದ ನೂರ್ ಎಂಬ ಹೆಣ್ಣು ಮಗಳೊಬ್ಬಳ ಬಗ್ಗೆ ನಾವು ತಿಳಿದಿರೂದು ತೀರ ಕಡಿಮೆ. ಲಂಡನ್ ಈಕೆಗೆ ಚಿರ ಋಣಿಯಾಗಿ ಪ್ರತಿವರ್ಷ ನೆನೆಯುತ್ತಿದೆ.  ಎರಡನೆ ವಿಶ್ವಮಹಾಯುದ್ಧದ ಸಂದರ್ಭದಲ್ಲಿ ಬೇಹುಗಾರ್ತಿಯಾಗಿ ದುಡಿದು ಬಲಿದಾನ ಮಾಡಿದ ಈಕೆಯ ಶೌರ್ಯ,  ದುರಂತದ  ಕತೆ ಟಿಪ್ಪುವಿನ ಕತೆಯಂತೆಯೇ ಮೈ ನವಿರೇಳಿಸುವಂಥಹದ್ದು.


 ಇನಾಯತ್ ಖಾನ್‌ರ ತಾಯಿ ಟಿಪ್ಪುಸುಲ್ತಾನ್ ವಂಶದವಳು. ಸೂಫಿ ಸಂಪ್ರದಾಯದ ಬಗ್ಗೆ ಅಪಾರ ಶ್ರದ್ಧೆಯನ್ನು ಹೊಂದಿದ್ದ ಇನಾಯತ್ ಖಾನ್ 1910ರಲ್ಲಿ ಭಾರತವನ್ನು ತೊರೆದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಚರಿಸುತ್ತಾ, ಸೂಫಿ ತತ್ವಗಳ ಪ್ರಸಾರ ಮಾಡತೊಡಗಿದರು.ಅಮೆರಿಕದಲ್ಲಿ ತನ್ನ ಸುದೀರ್ಘ ವಾಸ್ತವ್ಯದ ಸಂದರ್ಭದಲ್ಲಿ ಇನಾಯತ್ ನ್ಯೂಮೆಕ್ಸಿಕೊದ ಯುವತಿ ಓರಾ ರೇ ಬೇಕರ್ ಎಂಬವರನ್ನು ವಿವಾಹವಾದರು. ಮದುವೆಯ ನಂತರ ಓರಾ ತನ್ನ ಹೆಸರನ್ನು ಪಿರಾನಿ ಅಮೀನಾ ಬೇಗಂ ಎಂಬುದಾಗಿ ಬದಲಾಯಿಸಿಕೊಂಡರು.ಇನಾಯತ್ ಖಾನ್ ಹಾಗೂ ಪಿರಾನಿ ಅಮೀನಾ ಬೇಗಂ ದಂಪತಿಗೆ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದರು. ಇವರಲ್ಲಿ ನೂರುನ್ನೀಸಾ ಯಾನೆ ನೂರ್ ಇನಾಯತ್ ಖಾನ್ ಎಲ್ಲರಿಗಿಂತಲೂ ದೊಡ್ಡವಳು.


1913ರಲ್ಲಿ ಇನಾಯತ್ ಖಾನ್ ರಶ್ಯದ ತ್ಸಾರ್ ದೊರೆ ಎರಡನೆ ನಿಕೋಲಾಸ್‌ನ ಅತಿಥಿಯಾಗಿ ಕ್ರೆಮ್ಲಿನ್‌ನಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಇನಾಯತ್ ಜನಿಸಿದ್ದಳು. ಅಂತರ್‌ಕಲಹ ಹಾಗೂ ಯುದ್ಧದ ಭೀತಿಯನ್ನು ಎದುರಿಸುತ್ತಿದ್ದ ನಿಕೋಲಾಸ್ ದೊರೆಯು ಇನಾಯತ್‌ರ ಧಾರ್ಮಿಕ ಮಾರ್ಗದರ್ಶನವನ್ನು ಕೋರಿದ್ದ.

1914ರಲ್ಲಿ ಮೊದಲ ಮಹಾಯುದ್ಧವು ಭುಗಿಲೆದ್ದಾಗ, ಇನಾಯತ್ ಖಾನ್ ಕುಟುಂಬವು ರಶ್ಯವನ್ನು ತೊರೆದು ಲಂಡನ್‌ಗೆ ತೆರಳಿತು. 1920ರಲ್ಲಿ ಫ್ರಾನ್ಸ್‌ನಲ್ಲಿ ಆಗಮಿಸಿದ ಇನಾಯತ್ ಕುಟುಂಬವು ಅಲ್ಲಿನ ಸೂಫಿ ಚಳವಳಿಯ ಬೆಂಬಲಿಗರೊಬ್ಬರು ಕೊಡುಗೆಯಾಗಿ ನೀಡಿದ್ದ ಮನೆಯಲ್ಲಿ ವಾಸವಾಗಿತ್ತು. 1927ರಲ್ಲಿ ತನ್ನ ತಂದೆಯ ಅಕಾಲಿಕ ನಿಧನದ ಬಳಿಕ ನೂರ್, ಶೋಕತಪ್ತ ಕುಟುಂಬಕ್ಕೆ ಆಸರೆಯಾಗುವ ಹೊಣೆ ಹೊರಬೇಕಾಯಿತು. ತನ್ನ ಶೋಕತಪ್ತ ತಾಯಿ ಹಾಗೂ ಒಡಹುಟ್ಟಿದವರನ್ನು ಸಲಹುವ ಜವಾಬ್ದಾರಿ ಆ ಹದಿಹರೆಯದ ಬಾಲಕಿಯ ಹೆಗಲೇರಿತು.
ಫ್ರಾನ್ಸ್‌ನ ಸೊರ್ಬೊನ್‌ನಲ್ಲಿ ಶಿಶು ಮನಶಾಸ್ತ್ರವನ್ನು ಅಧ್ಯಯನ ಮಾಡಿದ ನೂರ್‌ಗೆ ಸಂಗೀತದಲ್ಲಿಯೂ ಅಪಾರ ಅಸಕ್ತಿಯಿತ್ತು. ಆಕೆ ಪ್ರಸಿದ್ಧ ಪಾಶ್ಚಾತ್ಯ ಸಂಗೀತಗಾರ್ತಿ ನಾಡಿಯಾ ಬೌಲೆಂಜರ್‌ರಿಂದ ಪ್ಯಾರಿಸ್‌ನಲ್ಲಿ ಪಿಯಾನೊ ಹಾಗೂ ಹಾರ್ಪ್ ವಾದನವನ್ನು ಕಲಿತರು.ಈ ಸಮಯದಲ್ಲಿ ನೂರ್ ಮಕ್ಕಳ ಕತೆಗಳನ್ನು ಹಾಗೂ ಕವನಗಳನ್ನು ಬರೆಯುವ ಕಾಯಕದಲ್ಲಿ ತೊಡಗಿದರು.ಫ್ರಾನ್ಸ್‌ನ ಮಕ್ಕಳ ಪತ್ರಿಕೆಗಳಲ್ಲಿ ಆಕೆಯ ಕಥೆ, ಕವನಗಳು ಆಗಾಗ್ಗೆ ಪ್ರಕಟವಾಗುತ್ತಿದ್ದವು.
ಫ್ರೆಂಚ್ ರೇಡಿಯೋದಲ್ಲೂ ಆಕೆ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.1939ರಲ್ಲಿ ಆಕೆ ಬುದ್ಧನ ಜಾತಕ ಕಥೆಗಳನ್ನು ಆಧರಿಸಿ ರಚಿಸಿದ ‘20 ಜಾತಕ ಟೇಲ್ಸ್’ ಕೃತಿಯು ಲಂಡನ್‌ನಲ್ಲಿ ಪ್ರಕಟವಾಯಿತು.

ಎರಡನೆ ವಿಶ್ವಮಹಾಯುದ್ಧದ ಸ್ಫೋಟಗೊಂಡಾಗ 1940ರಲ್ಲಿ ಫ್ರಾನ್ಸ್ ದೇಶವನ್ನು ಹಿಟ್ಲರನ ನಾಜಿ ಪಡೆಗಳು ಆಕ್ರಮಿಸಿದವು.ಆಗ ನೂರ್ ತನ್ನ ಕುಟುಂಬದೊಂದಿಗೆ ಲಂಡನ್‌ಗೆ ಪಲಾಯನ ಮಾಡಿದಳು. ಶಾಂತಿಯನ್ನು ಪ್ರತಿಪಾದಿಸುವ ತನ್ನ ತಂದೆಯ ಬೋಧನೆಗಳಿಂದ ನೂರ್ ಪ್ರಭಾವಿತಳಾಗಿದ್ದರೂ, ನಾಜಿ ಸೇನೆಯ ದಬ್ಬಾಳಿಕೆಯ ವಿರುದ್ಧ ಹೋರಾಡಲು ಆಕೆ ದೃಢ ಸಂಕಲ್ಪ ಮಾಡಿದಳು. ಆಕೆಯ ಸಹೋದರ ವಿಲಾಯತ್ ಇನಾಯತ್ ಖಾನ್ ಕೂಡಾ ಆಕೆಯೊಂದಿಗೆ ಕೈಜೋಡಿಸಿದ.

1940ರ ನವೆಂಬರ್ 19ರಂದು ಆಕೆ ಬ್ರಿಟಿಶ್ ಸೇನೆಯ ಮಹಿಳಾ ಆಕ್ಸಿಲರಿ ಏರ್‌ಪೋರ್ಸ್ (ಡಬ್ಲುಎಎಎಫ್)ಗೆ ಸೇರ್ಪಡೆಗೊಂಡಳು.ದ್ವಿತೀಯ ದರ್ಜೆಯ ವೈಮಾನಿಕ ಯೋಧೆಯಾಗಿ ನೇಮಕಗೊಂಡ ಆಕೆಯನ್ನು ವಯರ್‌ಲೆಸ್ ಆಪರೇಟರ್ ತರಬೇತಿಗಾಗಿ ಕಳುಹಿಸಲಾಯಿತು. ತರಬೇತಿಯ ಬಳಿಕ ನೂರ್‌ಳನ್ನು ಬ್ರಿಟನ್‌ನ ವಿಶೇಷ ಕಾರ್ಯಾಚರಣೆಗಳಿಗಾಗಿನ ವಿಭಾಗದಲ್ಲಿ (ಎಸ್‌ಓಇ) ನೇಮಕಗೊಳಿಸಲಾಯಿತು.

1943ರಲ್ಲಿ ಆಕೆಯನ್ನು ವಾಯುಪಡೆ ಸಚಿವಾಲಯದ,ವೈಮಾನಿಕ ಬೇಹುಗಾರಿಕೆ ನಿರ್ದೇಶನಾಲಯದಲ್ಲಿ ನಿಯೋಜನೆ ಮಾಡಲಾಯಿತು. ತರಬೇತಿಯ ಅವಧಿಯಲ್ಲಿ ಆಕೆ ತನ್ನ ಹೆಸರನ್ನು ನೂರಾ ಬೇಕರ್ ಎಂದು ಬದಲಾಯಿಸಿಕೊಂಡಳು. ಫ್ರೆಂಚ್ ಭಾಷೆಯಲ್ಲಿ ಪಾಂಡಿತ್ಯ ಹಾಗೂ ವಯರ್‌ಲೆಸ್ ಕಾರ್ಯಾಚರಣೆಯಲ್ಲಿ ಆಕೆ ಹೊಂದಿರುವ ದಕ್ಷತೆಯು ನೂರ್‌ಗೆ ನಾಝಿ ಆಕ್ರಮಿತ ಫ್ರಾನ್ಸ್‌ನಲ್ಲಿ ಬ್ರಿಟಿಶ್ ಬೇಹುಗಾರ್ತಿಯಾಗುವ ಅವಕಾಶವನ್ನು ದೊರಕಿಸಿಕೊಟ್ಟಿತು.


1943ರ ಜೂನ್ ತಿಂಗಳ 16-17ರ ಮಧ್ಯರಾತ್ರಿಯಂದು ನೂರ್ ನಾಜಿಪಡೆಗಳಿಂದ ಆಕ್ರಮಿತವಾದ ಫ್ರಾನ್ಸ್ ದೇಶದೊಳಗೆ ನುಸುಳಿದಳು. ಈಗ ಆಕೆ ತನ್ನ ಹೆಸರನ್ನು ಜೀಯಾನ್ ಮೇರಿ ರೆಜಿನರ್ ಎಂದು ಬದಲಾಯಿಸಿಕೊಂಡಳು.ಇತರ ಎಸ್‌ಓಇ ಮಹಿಳಾ ಬೇಹುಗಾರ್ತಿಯರ ಜೊತೆ ನೂರ್, ಫ್ರಾನ್ಸಿಸ್ ಸ್ಯುಟಿಲ್ ಎಂಬ ವೈದ್ಯನ ತಂಡವನ್ನು ಸೇರಿಕೊಂಡಳು. ಫ್ರಾನ್ಸ್‌ನಲ್ಲಿ ನಾಜಿಗಳ ಚಲನವಲನಗಳ ಬಗ್ಗೆ ಮಾಹಿತಿಯನ್ನು ರವಾನಿಸುವುದೇ ಆಕೆಯ ಕರ್ತವ್ಯವಾಗಿತ್ತು.

ಆದರೆ ಒಂದೂವರೆ ತಿಂಗಳುಗಳಲ್ಲಿ ನೂರ್‌ಳನ್ನು ಹೊರತುಪಡಿಸಿ, ಉಳಿದ ಎಲ್ಲಾ ರೇಡಿಯೋ ಅಪರೇಟರ್‌ಗಳ ಜಾಲವನ್ನು ನಾಜಿ ಪಡೆಗಳು ಬಂಧಿಸಿದವು. ಆದರೆ ನಾಜಿ ಸೇನೆಯಿಂದ ತಪ್ಪಿಸಿಕೊಂಡ ನೂರ್, ಫ್ರಾನ್ಸ್‌ನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುತ್ತಾ ಬೇಹುಗಾರಿಕಾ ಮಾಹಿತಿಗಳನ್ನು ರವಾನಿಸತೊಡಗಿದಳು. ಬ್ರಿಟನ್‌ಗೆ ವಾಪಸಾಗಬಹುದು ಎಂಬ ತನ್ನ ಇಲಾಖೆಯ ಸಲಹೆಯನ್ನು ತಿರಸ್ಕರಿಸಿ, ಆಕೆ ನಾಜಿ ಪಡೆಗಳ ಚಲನವಲನಗಳ ಬಗ್ಗೆ ಮಾಹಿತಿಯನ್ನು ಲಂಡನ್‌ಗೆ ಕಳುಹಿಸುತ್ತಲೇ ಇದ್ದಳು.
ಆದರೆ ನಾಜಿಗಳ ಪರ ಡಬ್ಬಲ್ ಏಜೆಂಟ್ ಆಗಿ ಕೆಲಸ ಮಾಡಿದ್ದ ಫ್ರೆಂಚ್ ವಾಯುಪಡೆಯ ಪೈಲಟ್‌ನ ವಿಶ್ವಾಸದ್ರೋಹದಿಂದಾಗಿ ಇನಾಯತ್ ಖಾನ್ ಜರ್ಮನ್ ಪಡೆಗಳಿಗೆ ಸಿಕ್ಕಿಬೀಳಬೇಕಾಯಿತು.1943ರ ಅಕ್ಟೋಬರ್ 13ರಂದು ಇನಾಯತ್‌ ಖಾನ್‌ಗಳನ್ನು ನಾಜಿ ಸೈನಿಕರು ಬಂಧಿಸಿದರು ಹಾಗೂ ಪ್ಯಾರಿಸ್‌ನಲ್ಲಿ ನಾಝಿಗಳ ಭದ್ರತಾ ಸೇವೆಗಳ ಮುಖ್ಯ ಕಾರ್ಯಾಲಯ(ಎಸ್‌ಡಿ)ದಲ್ಲಿ ಬಂಧನದಲ್ಲಿಡಲಾಯಿತು.

ಬಂಧಿತ ನೂರ್‌ಳನ್ನು ಅತ್ಯಂತ ಅಪಾಯಕಾರಿ ಕೈದಿಗಳ ಸಾಲಿಗೆ ಸೇರಿಸಲಾಯಿತು.ವಿಚಾರಣೆಯ ಸಂದರ್ಭದಲ್ಲಿ ನೂರ್‌ಗೆ ಅತ್ಯಂತ ಅಮಾನುಷವಾದ ಚಿತ್ರಹಿಂಸೆಯನ್ನು ನೀಡಿದರೂ ಆಕೆ ಒಂದೇ ಒಂದು ಮಾಹಿತಿಯನ್ನು ಕೂಡಾ ಬಾಯಿ ಬಿಡಲಿಲ್ಲವೆಂದು, ನಾಜಿ ಸೇನೆಯ ಗೂಢಚರ್ಯೆ ವಿಭಾಗ ಗೆಸ್ಟಪೋದ ಪ್ಯಾರಿಸ್ ಘಟಕದ ಮಾಜಿ ಮುಖ್ಯಸ್ಥ ಹ್ಯಾನ್ಸ್ ಎರಡನೆ ಮಹಾಯುದ್ಧದ ಬಳಿಕ ಬಹಿರಂಗಪಡಿಸಿದ್ದನು.1943ರ ನವೆಂಬರ್ 25ರಂದು ಇನಾಯತ್, ಇನ್ನಿಬ್ಬ ಎಸ್‌ಓಇ ಏಜೆಂಟರ ಜೊತೆಗೆ ಬಂಧನದಿಂದ ತಪ್ಪಿಸಿಕೊಂಡಳು. ಆದರೆ ದುರದೃಷ್ಟವಶಾತ್ ಅವರೆಲ್ಲಾ ಕೆಲವೇ ತಾಸುಗಳಲ್ಲಿ ಸಿಕ್ಕಿಬಿದ್ದರು.

ತರುವಾಯ, ನೂರ್‌ಳನ್ನು 1943ರ ನವೆಂಬರ್ 27ರಂದು ಜರ್ಮನಿಗೆ ಕೊಂಡೊಯ್ಯಲಾಯಿತು. ಅಲ್ಲಿ ಫೊರ್‌ಜೆಮ್ ಎಂಬಲ್ಲಿ ಆಕೆಯನ್ನು ಏಕಾಂತ ಬಂಧನದಲ್ಲಿ ಇಡಲಾಯಿತು.ಆಕೆಗೆ ಹೊರಜಗತ್ತಿನ ಯಾವುದೇ ಸಂಪರ್ಕವನ್ನೂ ನಿರಾಕರಿಸಲಾಯಿತು. ದಿನದ ಹೆಚ್ಚಿನ ಸಮಯದಲ್ಲಿ ಆಕೆಯ ಕೈಕಾಲುಗಳನ್ನು ಸರಪಳಿಯಲ್ಲಿ ಕಟ್ಟಿಹಾಕಲಾಗುತ್ತಿತ್ತು. ಇಲ್ಲಿಯೂ ಎಂತಹ ಚಿತ್ರಹಿಂಸೆಗೂ ಬಗ್ಗದ ನೂರ್ ತನ್ನ ಹಾಗೂ ತನ್ನ ಸಹಚರರ ಕಾರ್ಯಾಚರಣೆಗಳ ಬಗ್ಗೆ ಯಾವುದೇ ಸುಳಿವನ್ನು ನೀಡಲೂ ನಿರಾಕರಿಸಿದಳು.

1944ರ ನೂರ್ ಹಾಗೂ ಇತರ ಮೂವರು ಎಸ್‌ಓಇ ಏಜೆಂಟರಾದ ಯೊಲಾಂಡ್ ಬೀಕ್‌ಮ್ಯಾನ್, ಎಲಿಯಾನ್ ಪ್ಲೂಮ್ಯಾನ್ ಹಾಗೂ ಮೇಡಲಿನ್‌ರನ್ನು ಡಕಾಯು ಯಾತನಾ ಶಿಬಿರಕ್ಕೆ ಕಳುಹಿಸಲಾಯಿತು.1944ರ ಸೆಪ್ಟಂಬರ್ 13ರಂದು ಕೈಕೋಳಗಳಿಂದ ಬಂಧಿಸಲಾದ ಈ ನಾಲ್ವರು ಮಹಿಳೆಯರನ್ನು ಮರಣದಂಡನೆ ವಿಧಿಸಲಾಯಿತು.ನಾಲ್ವರನ್ನೂ ಮೈದಾನದಲ್ಲಿ ಮೊಣಕಾಲೂರುವಂತೆ ಮಾಡಿ, ಅವರಿಗೆ ಗುಂಡಿಕ್ಕಲಾಯಿತು.ಪ್ರತ್ಯಕ್ಷದರ್ಶಿಗಳು ಹೇಳುವಂತೆ ಸಾಲಾಗಿ ನಿಂತ ಟ್ರೂಪರ್‌ಗಳು ಒಬ್ಬರಾದ ಮೇಲೆ ಒಬ್ಬರಂತೆ ಯೊಲಾಂಡ್ ಬೀಕ್‌ಮ್ಯಾನ್, ಎಲಿಯಾನ್ ಪ್ಲೂಮ್ಯಾನ್ ಹಾಗೂ ಮೇಡಲಿನ್‌ರನ್ನು ಗುಂಡಿಕ್ಕಿ ಕೊಂದರು.

ನೂರ್‌ಗೆ ಗುಂಡಿಕ್ಕುವ ಸರದಿ ಬಂದಾಗ, ಹಂತಕ ಪಡೆಯ ನೇತೃತ್ವ ವಹಿಸಿದ್ದ ಫ್ರೆಡ್ರಿಕ್ ವಿಲ್‌ಹೆಮ್ ರ್ಯೂಪರ್ಟ್ ಗುಂಡಿಕ್ಕುವುದನ್ನು ನಿಲ್ಲಿಸುವಂತೆ ಆದೇಶಿಸಿದ. ಆತ ತನ್ನ ಬಂದೂಕಿನ ಹಿಡಿಯಿಂದ ನೂರ್‌ಳ ತಲೆಗೆ ಬಡಿದ. ಆಕೆಯ ತಲೆಯಿಂದ ರಕ್ತದ ಕೋಡಿಯೇ ಹರಿಯಿತು. ಆದರೂ ನೂರ್ ಎದ್ದೇಳಲು ಯತ್ನಿಸಿದಳು. ಆಗ ವಿಲ್‌ಹೆಮ್, ನೂರ್‌ಳ ತಲೆಯ ಹಿಂಭಾಗಕ್ಕೆ ಗುಂಡಿಕ್ಕಿದ. ಅಲ್ಲಿಗೆ ನೂರ್‌ಳ ಪ್ರಾಣಪಕ್ಷಿ ಹಾರಿ ಹೋಯಿತು.‘ಲಿಬರ್ಟೆ’ (ಫ್ರೆಂಚ್‌ನಲ್ಲಿ ಸ್ವಾತಂತ್ರ ಎಂದರ್ಥ) ಎಂದು ಆಕೆ ಸಾವಿಗೆ ಮುನ್ನ ಹೇಳಿದ ಕೊನೆಯ ಪದವಾಗಿತ್ತು.

ರಾಜವಂಶಸ್ಥೆ, ಗೂಢಚಾರಿಣಿ, ಯೋಧೆಯಾಗಿ  ನೂರ್ ಇನಾಯತ್ ಖಾನ್‌ರ ಬದುಕು 30ರ ಸಣ್ಣ ವಯಸ್ಸಿನಲ್ಲಿಯೇ ಬಾಡಿಹೋಯಿತು.ಟಿಪ್ಪು ಸುಲ್ತಾನ್ ಬ್ರಿಟಿಶ್ ಸಾಮ್ರಾಜ್ಯದ ವಿರುದ್ಧ ಹೋರಾಡಿದರೆ, ಇನಾಯತ್ ಖಾನ್ ನಾಝಿ ಸಾಮ್ರಾಜ್ಯವಾದದ ವಿರುದ್ಧ ಹೋರಾಡಿ ಮಡಿದಳು. ವೀರ ವನಿತೆ ನೂರ್ ಇನಾಯತ್ ಖಾನ್‌ಗೆ ಮರಣೋತ್ತರ ಬ್ರಿಟನ್, ಶೌರ್ಯ ಪುರಸ್ಕಾರ ಜಾರ್ಜ್ ಕ್ರಾಸ್ ಹಾಗೂ ಚಿನ್ನದ ನಕ್ಷತ್ರ ಪದಕವನ್ನು ನೀಡಿ,  ಗೌರವವನ್ನು ಅರ್ಪಿಸಿದೆ. ನೂರ್ ಇನಾಯತ್‌ ಖಾನ್‌ಳ ಬದುಕು ರೋಚಕವಷ್ಟೇ ಅಲ್ಲ, ಆಕೆಯ ಶೌರ್ಯ, ಕರ್ತವ್ಯ ನಿಷ್ಠೆಗಳು ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯವೂ ಆಗಿವೆ

Friday, June 7, 2013

ಹುಡುಕು

ಒಂದು ಪುಸ್ತಕ 
ಬೇಕಾಗಿತ್ತು 
ಅದೆಷ್ಟೋ ಹೊತ್ತು ಹುಡುಕಿದ ಬಳಿಕ 
ಕಳೆದವಾರ ಇಡೀ  ದಿನ 
ಹುಡುಕಿ ಸಿಗದ ಪುಸ್ತಕ 
ಇಂದು ನನ್ನೆದುರು 
ಹಲ್ಲು ಕಿರಿಯುತ್ತಿತ್ತು 
ಹುಡುಕಿದ್ದು ಕೊನೆಗೂ ಸಿಗಲೇ ಇಲ್ಲ 

ಹುಡುಕುವ ಆಟ 
ಹೀಗೆ ಬಹಳ ಮಜವಾಗಿರುತ್ತದೆ 
ಎಂದೋ ಹುಡುಕಿ ಬೇಸತ್ತು 
ಕೈ ಬಿಟ್ಟದ್ದು ಒಮ್ಮೆಲೇ 
ಉದ್ಭವವಾಗುವ 
ಅನಿರೀಕ್ಷಿತತೆಗಾದರು ಹುಡುಕುತ್ತಿರಬೇಕು 

ಇಂದು ಹುಡುಕಿದ್ದು 
ಸಿಗದಿದ್ದರೇನಂತೆ 
ಬದುಕುತ್ತಿರಬೇಕು 
ಎಂದರೆ 
ಸುಮ್ಮನೆ ಹುಡುಕು

ಬಹುಷಃ ನಮಗೇನು 
ಬೇಕು ಎನ್ನುದನ್ನು 
ಕಾಲನ ಕೈಯಲ್ಲಿ ಕೊಟ್ಟ ವಿಧಿ 
ಪುಸ್ತಕದ ರೂಪದಲ್ಲೇ ನನ್ನ ಅಣಕಿಸಿದಂತೆ 
ಬೇಡವೆಂದರೂ ಅದನ್ನು 
ಕೈಗೆತ್ತಿ ಸುಮ್ಮಗೆ ಬಿಡಿಸಿ 
ನಕ್ಕು ಕಪಾಟಿನೊಳಗಿಡುತ್ತೇನೆ 

ಅಂದ ಹಾಗೆ 
ನಾನೇನು ಹುಡುಕುತ್ತಿದ್ದೆ?



Thursday, June 6, 2013

ಬಣ್ಣದ ಲೋಕದ ಕಪ್ಪು ಗುಲಾಬಿ-ರೋಸಿ

ಕೆ. ಪಿ. ರೋಸಿ.
ಇತ್ತೀಚೆಗೆ ನಾನು ಮಲಯಾಳಂ ಚಿತ್ರ ‘ಸೆಲ್ಯುಲಾಯ್ಡ’ ನೋಡಿದೆ. ಇದನ್ನು ನೋಡುವುದಕ್ಕೆ ಮುಖ್ಯ ಕಾರಣ, ಈ ಚಿತ್ರವನ್ನು ನಿರ್ದೇಶಿಸಿರುವುದು ಮಲಯಾಳಂನ ಖ್ಯಾತ ನಿರ್ದೇಶಕ ಕಮಲ್. ಕಮರ್ಶಿಯಲ್ ಮತ್ತು ಕಲಾತ್ಮಕತೆಯ ನಡುವೆ ಸಮನ್ವಯತೆಯನ್ನು ಸಾಧಿಸಿದ ನಿರ್ದೇಶಕ ಕಮಲ್. ಬದುಕಿನ ತಳಮಟ್ಟದ ಸೂಕ್ಷ್ಮಗಳನ್ನು ಹಿಡಿದಿಡುವ ಶಕ್ತಿ ಕಮಲ್‌ಗಿರುವ ಕಾರಣದಿಂದಲೇ, ನಾನು ಇವರ ಹೆಚ್ಚಿನ ಚಿತ್ರಗಳನ್ನು ನೋಡಿದ್ದೇನೆ. ‘ಸೆಲ್ಯುಲಾಯ್ಡ’ ಚಿತ್ರ ನೋಡುವುದಕ್ಕೆ ಇನ್ನೂ ಒಂದು ಕಾರಣವಿತ್ತು. ಪರೋಕ್ಷವಾಗಿ ಇದೊಂದು ಸಾಕ್ಷ ಚಿತ್ರವೂ ಹೌದು. ಜೊತೆಗೆ ಚಿತ್ರರಂಗವನ್ನೇ ಆಧರಿಸಿದ ಅದರೊಳಗಿನ, ರಾಜಕೀಯ ಮತ್ತು ದುರಂತಗಳ ಕಡೆಗೆ ಬೆಳಕು ಚೆಲ್ಲುವ ಉದ್ದೇಶದಿಂದ ಮಾಡಿದ ಚಿತ್ರ ಇದು.

ಕಮಲ್ ಅವರ ಈ ಚಿತ್ರದ ವಸ್ತು ಮಲಯಾಳಂ ಚಿತ್ರರಂಗದ ಪಿತಾಮಹ ಜೆ. ಸಿ. ಡೇನಿಯಲ್‌ನ ದುರಂತ ಬದುಕು. ಮಲಯಾಳಂ ಚಿತ್ರೋದ್ಯಮ ಕುಡಿಯೊಡೆದದ್ದು ಜೆ. ಸಿ. ಡೇನಿಯಲ್ ಮಡಿಲಿನಲ್ಲಿ. ಈತ ಮಲಯಾಳಂನ ಮೊತ್ತ ಮೊದಲ ಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ನಟ. ಈತ ಮಲಯಾಳಂಗೆ ಕೊಟ್ಟಿರುವುದು ಒಂದೇ ಒಂದು ಚಿತ್ರ. ಅದರ ಹೆಸರು ವಿಗದ ಕುಮಾರನ್. ಇದೊಂದು ಮೂಕಿ ಚಿತ್ರ. ಬಳಿಕ ಡೇನಿಯಲ್ ಬದುಕು ಕೂಡ ಒಂದು ಮೂ
ಕ ಚಿತ್ರವಾಯಿತು. ಈ ಚಿತ್ರದ ಜೊತೆಗೆ ಅವರು ನಡೆಸಿದ ಹೋರಾಟ, ಒಂದೇ ಒಂದು ಕಾಪಿ ಇಟ್ಟುಕೊಂಡು ಅದನ್ನು ಜನರೆಡೆಗೆ ತಲುಪಿಸಲು ಅವನು ನಡೆಸಿದ ಪ್ರಯತ್ನ, ಪಟ್ಟಭದ್ರ ಹಿತಾಸಕ್ತಿಗಳಿಂದ ಎದುರಾದ ವಿರೋಧ ಇವೆಲ್ಲವನ್ನು ಸೆಲ್ಯುಲಾಯ್ಡಿ ಚಿತ್ರ ಕಟ್ಟಿಕೊಡುತ್ತದೆ. ಎಲ್ಲಕ್ಕಿಂತ ದುಃಖದ ಸಂಗತಿಯೆಂದರೆ, ಇಷ್ಟೆಲ್ಲ ಮಾಡಿ ಬಿಕಾರಿಯಾದ ಡೇನಿಯಲ್‌ನನ್ನು ಮಲಯಾಳಂನ ಮೊತ್ತ ಮೊದಲ ನಿರ್ದೇಶಕ, ನಿರ್ಮಾಪಕ, ನಟ ಎಂದು ಗುರುತಿಸುವುದಕ್ಕೂ ಕೇರಳ ಸರಕಾರ ಹಿಂಜರಿಯುತ್ತದೆ. ಅದಕ್ಕೆ ಕುಂಟು ನೆಪಗಳನ್ನು ಒಡ್ಡುತ್ತದೆ. ಜೀವನದಲ್ಲಿ ಸೋತು ಸುಣ್ಣವಾದ ಡೇನಿಯಲ್ ತಮಿಳುನಾಡಲ್ಲಿ ಅಜ್ಞಾತವಾಗಿ ಬದುಕುತ್ತಿರುತ್ತಾನೆ. ಆತ ತಮಿಳ, ಕ್ರಿಶ್ಚಿಯನ್ ಎಂಬ ಕಾರಣ ಒಡ್ಡಿ, ಸರಕಾರ ಮನವಿಯನ್ನು ತಿರಸ್ಕರಿಸುತ್ತದೆ. ವೃದ್ಧಾಪ್ಯ ಕಾಲದಲ್ಲಿ ಪಿಂಚಣಿಗಾಗಿ ಕೇರಳ ಸರಕಾರದೆಡೆಗೆ ಬೊಗಸೆಯೊಡ್ಡಿದಾಗಲೂ ಸರಕಾರ ಕೈ ಚೆಲ್ಲಿತು. ‘‘ನಿಮ್ಮ ವ್ಯಾಪ್ತಿ ನಮಗೆ ಬರುವುದಿಲ್ಲ. ನೀವು ತಮಿಳು ನಾಡು ಸರಕಾರದೊಂದಿಗೆ ಕೇಳಿ’’ ಎಂದಿತು. 1975ರಲ್ಲಿ ಡೇನಿಯಲ್ ಮೃತಪಟ್ಟರು. ಇದಾದ ಬಳಿಕ ಸರಕಾರ ‘ವಿಗದಕುಮಾರನ್’ ಚಿತ್ರ ಮಲಯಾಳಂನ ಮೊತ್ತ ಮೊದಲ ಚಿತ್ರವೆಂದು ಒಪ್ಪಿಕೊಂಡಿತು. ಜೊತೆಗೆ ಡೇನಿಯಲ್‌ನನ್ನು ಕೇರಳ ಚಿತ್ರರಂಗದ ಪಿತಾಮಹ ಎಂದು ಘೋಷಿಸಿತು.

ನಾನು ಹೇಳಲು ಹೊರಟಿರುವುದು ಡೇನಿಯಲ್ ಕತೆಯನಲ್ಲ. ಡೇನಿಯಲ್ ಕತೆಯನ್ನು ಅರಸುತ್ತಾ ಹೋಗುವ ನಿರ್ದೇಶಕನಿಗೆ ಇನ್ನೊಂದು ಕಪ್ಪುಗುಲಾಬಿಯ ಪರಿಚಯವಾಗುತ್ತದೆ. ಆಕೆ ಇನ್ನಾರೂ ಅಲ್ಲ. ಕೇರಳ ಚಿತ್ರರಂಗದ ಮೊತ್ತ ಮೊದಲ ನಟಿ ಕೆ. ಪಿ. ರೋಸಿ. ನಿರ್ದೇಶಕ ಡೇನಿಯಲ್ ಅವರ 'ವಿಗದ ಕುಮಾರನ್' ಚಿತ್ರದ ನಾಯಕಿಯಾಗಿ ನಟಿಸಿ, ಬಳಿಕ ಇದ್ದಕ್ಕಿದ್ದಂತೆಯೇ ಕಣ್ಮರೆಯಾದ ರೋಸಿ ಮಲಯಾಳಂ ಚಿತ್ರರಂಗದ ಆರಂಭ ಕಾಲದ ಒಡೆದ ಕನ್ನಡಿ. ಅವಳನ್ನು ಬದುಕನ್ನು ಮುಟ್ಟ ಹೋದರೆ ನಮ್ಮ ಕೈತುಂಬಾ ಗಾಯಗಳು. ಕಮಲ್ ಅವರ
‘ಸೆಲ್ಯುಲಾಯ್ಡ’ ಚಿತ್ರದಲ್ಲಿ ನಮ್ಮನ್ನು ಡೇನಿಯಲ್‌ಗಿಂತ ಹೆಚ್ಚು ರೋಸಿ ಕಾಡುತ್ತಾಳೆ.

 ಸುಮಾರು 1928ರ ಕಾಲಘಟ್ಟದಲ್ಲಿ ತನ್ನೆಲ್ಲ ಜಮೀನನ್ನು ಮಾರಿ, ‘ವಿಗದಕುಮಾರನ್’ ಚಿತ್ರವನ್ನು ಮಾಡಲು ಹೊರಡುತ್ತಾರೆ ಡೇನಿಯಲ್. ಆಗ ಅವರಿಗೆ ಎದುರಾದ ಅತಿ ದೊಡ್ಡ ಸಮಸ್ಯೆಯೆಂದರೆ ನಟಿಯದು. ನಾಟಕ, ಚಿತ್ರದಲ್ಲಿ ನಟಿಸುವವರ ಕುರಿತಂತೆ ಅತ್ಯಂತ ಕೀಳುಭಾವನೆ ಹೊಂದಿದ ಕಾಲಘಟ್ಟವದು. ಕೇರಳದಲ್ಲಂತೂ ಮೇಲ್ವರ್ಣೀಯರ ದಬ್ಬಾಳಿಕೆ ತನ್ನ ಗರಿಷ್ಠ ಹಂತಕ್ಕೆ ತಲುಪಿದ್ದ ಸಂದರ್ಭ. ನಟಿಗಾಗಿ ಹಲವು ತಿಂಗಳುಗಳ ಕಾಲ ಹುಡುಕಾಡಿದ ಅವರಿಗೆ ಪರಿಚಯವಾದುದು ರಾಜಮ್ಮ ಎನ್ನುವ ಪುಲೆಯ ಹುಡುಗಿ. ಅಂದಿನ ಕಾಲದಲ್ಲಿ ಕೇರಳದಲ್ಲಿ ಪುಲೆಯ ಅಂದರೆ ಹೊಲೆಯ. ಕೂಲಿ ಕೆಲಸ ಮಾಡುತ್ತಾ ಬದುಕು ನಡೆಸುವ ಈ ದಲಿತ ಹುಡುಗಿಗೆ ನಾಟಕದಲ್ಲಿ ನಟಿಸುವ ಚಟವಿತ್ತು. ಒಂದೆರಡು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಳು. ಈಕೆಯ ತಂದೆ ಕೂಲಿಕೆಲಸ ಮಾಡುತ್ತಾ ಜೀವನ ಮಾಡುತ್ತಿದ್ದ. ಇನ್ನೊಬ್ಬ ದೊಡ್ಡಪ್ಪ ಒಂದು ಆಸ್ಪತ್ರೆಯಲ್ಲಿ ಶೌಚಾಲಯದಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರನ್ನು ಒಲಿಸಿದ ಡೇನಿಯಲ್, ರಾಜಮ್ಮನನ್ನು ಕೇರಳದ ಮೊತ್ತ ಮೊದಲ ನಟಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಡೇನಿಯಲ್ ಕೈಯಲ್ಲಿ ರಾಜಮ್ಮ ರೋಸಿಯಾದರು. ಶೂಟಿಂಗ್ ಸಂದರ್ಭದಲ್ಲಿ ಅವಳ ಊಟವನ್ನು ಅವಳೇ ತಂದು ಪ್ರತ್ಯೇಕವಾಗಿ ಉಣ್ಣಬೇಕಾಗಿತ್ತು. ನಟಿಸಿದ ಬಳಿಕ, ಸಂಜೆ ಕೂಲಿಕೆಲಸಕ್ಕೆ ತೆರಳಬೇಕಾಗಿತ್ತು. ಈಕೆಯ ಪಾಲಿಗೆ ನಟಿಸುವುದರ ಜೊತೆಗೆ ಸಿನಿಮಾದಲ್ಲಿ ಇನ್ನೊಂದು ರೋಮಾಂಚನ ತರುವ ವಿಷಯವಿತ್ತು. ಆಕೆ ಚಿತ್ರದಲ್ಲಿ ನಟಿಸಲಿರುವುದು ಮೇಲ್ಜಾತಿಯ ನಾಯರ್ ಹೆಣ್ಣು ಸರೋಜಾಳ ಪಾತ್ರ. ಆದರೆ ಅದೇ ಪಾತ್ರ ತನ್ನ ಬದುಕಿಗೆ ಕುತ್ತಾಗುತ್ತದೆ ಎಂದು ಅವಳು ಭಾವಿಸಿರಲಿಲ್ಲ.


 ಎಲ್ಲ ಸಂಕಷ್ಟಗಳ ನಡುವೆ ಮೊತ್ತ ಮೊದಲ ಮಲಯಾಳಂ ಮೂಕಿ ಚಿತ್ರ ಬಿಡುಗಡೆಗೆ ಸಿದ್ಧವಾಯಿತು. ದೀಪ ಹಚ್ಚುವ ಕೆಲಸಕ್ಕೆ ಹಿರಿಯ ಬ್ರಾಹ್ಮಣರೊಬ್ಬರನ್ನು ಕರೆಸಲಾಗಿತ್ತು. ತನ್ನ ಮೊತ್ತ ಮೊದಲ ಚಿತ್ರವನ್ನು ನೋಡಲು ರೋಸಿ ಸಂಭ್ರದಿಂದ ಸಿದ್ಧಳಾಗಿ ಬಂದಿದ್ದಳು. ಆದರೆ, ಕಾರ್ಯಕ್ರಮ ಉದ್ಘಾಟಿಸುವ ಹಿರಿಯರು ರೋಸಿಯನ್ನು ನೋಡಿ ಬಿಟ್ಟರು. ಆಕೆ ದಲಿತ ಹೆಣ್ಣು ಎನ್ನುವುದು ಅವರಿಗೆ ಗೊತ್ತಿತ್ತು. ಡೇನಿಯಲ್‌ನನ್ನು ಕರೆಸಿದವರೇ ‘ತಕ್ಷಣ ಆಕೆಯನ್ನು ಹೊರಗೆ ಕಳುಹಿಸಿ. ಅವಳು ಇಲ್ಲಿದ್ದರೆ ನಾನು ದೀಪಬೆಳಗಿಸುವುದಿಲ್ಲ’’ ಎಂದು ಬಿಟ್ಟರು. ಡೇನಿಯಲ್ ತಬ್ಬಿಬ್ಬಾದರು. ಸಾಲಸೋಲ ಮಾಡಿ ತಯಾರಿಸಿದ ಮೊತ್ತ ಮೊದಲ ಚಿತ್ರ. ಹೇಗಾದರೂ ಬಿಡುಗಡೆಯಾದರೆ ಸಾಕು ಎಂಬ ಸ್ಥಿತಿಯಲ್ಲಿ ಅವರಿದ್ದರು. ತಾನು ನಟಿಸಿದ ಚಿತ್ರವನ್ನು ನೋಡಲು ಹಂಬಲಿಸಿದ್ದ ರೋಸಿಯನ್ನು ಬಲವಂತವಾಗಿ ಹೊರ ಹಾಕಲಾಯಿತು. ಕೊನೆಗೂ ಹಿರಿಯರು ದೀಪ ಬೆಳಗಿಸಿದರು. ಉದ್ಘಾಟನೆಗೊಂಡು ಚಿತ್ರ ಆರಂಭವಾಯಿತು. ಮೂಕಿ ಚಿತ್ರವಾದುದರಿಂದ, ಡೇನಿಯಲ್ ಅವರೇ ಸಂದರ್ಭಗಳನ್ನು ವಿವರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ರೋಸಿ ಪಾತ್ರ ಪ್ರವೇಶವಾಯಿತು. ರೋಸಿ ನಟಿಸಿರುವುದು ಮೇಲ್ವರ್ಣದ ನಾಯರ್ ಪಾತ್ರದಲ್ಲಿ ಎನ್ನೋದು ದೀಪಬೆಳಗಿಸಿದ ಹಿರಿಯರಿಗೆ ತಿಳಿದದ್ದೇ ಕೆಂಡಾಮಂಡಲವಾದರು. ‘ದಲಿತ ಹೆಣ್ಣು ಮೇಲ್ಜಾತಿಯವರ ಪಾತ್ರ ನಿರ್ವಹಿಸುವುದೇ?’ ಚಿತ್ರ ನಿಲ್ಲಿಸಿ ಎಂದು ಅಬ್ಬರಿಸಿದರು. ಅವರೊಂದಿಗಿದ್ದ ಬೆಂಬಲಿಗರು ಗದ್ದಲವೆಬ್ಬಿಸಿದರು. ಅನಿವಾರ್ಯವಾಗಿ ಡೇನಿಯಲ್ ಪ್ರದರ್ಶನವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಹಿರಿಯರು ಅಲ್ಲಿಂದ ಎದ್ದು ಹೊರ ನಡೆದರು.
ಡೇನಿಯಲ್
 


ಇಷ್ಟರಲ್ಲೇ ದಲಿತ ಹೆಣ್ಣು ನಾಯರ್ ಪಾತ್ರವನ್ನು ನಿರ್ವಹಿಸಿರುವುದು ಬೆಂಕಿಯಂತೆ ಹರಡತೊಡಗಿತು. ರೋಸಿಯ ತಂದೆಗೆ ಬೆದರಿಕೆ ಹಾಕಲಾಯಿತು. ಪುಂಡು ಪೋಕರಿಗಳು ಆಕೆಯ ಮನೆಗೆ ಕಲ್ಲು ತೂರಾಟ ನಡೆಸುವುದು ಸಾಮಾನ್ಯವಾಯಿತು. ಮೂರನೆ ದಿನ ಮತ್ತೆ ಚಿತ್ರ ಪ್ರದರ್ಶಿಸಲು ಡೇನಿಯಲ್ ಹೊರಟರು. ಚಿತ್ರ ಪ್ರದರ್ಶನವೂ ಆಯಿತು. ಆದರೆ ಅಂದೇ ರಾತ್ರಿ ಮೇಲ್ವರ್ಣೀಯರ ಒಂದು ತಂಡ ರೋಸಿಯ ಮನೆಗೆ ಬೆಂಕಿ ಹಚ್ಚಿತ್ತು. ಆಕೆಯನ್ನು ಜೀವಂತ ದಹಿಸುವುದು ಅವರ ಉದ್ದೇಶವಾಗಿತ್ತು. ಆದರೆ ಆ ಕಾಳ ಕತ್ತಲೆಯಲ್ಲಿ ತನ್ನ ಇಬ್ಬರು ತಂಗಿಯರು ಹಾಗೂ ತಮ್ಮನ ಜೊತೆಗೆ ಪರಾರಿಯಾದಳು. ಮಲಯಾಳಂ ಚಿತ್ರರಂಗದ ರೋಸಿ ಅಲ್ಲಿಗೆ ಮುಗಿದು ಹೋದಳು. ಈ ಬಳಿಕ ಆಕೆಯನ್ನು ಮಲಯಾಳಂ ಚಿತ್ರರಂಗ ಸಂಪೂರ್ಣ ಮರೆತೇ ಬಿಟ್ಟಿತು.

ಆದರೆ ಅಂದು ಕಾಳಕತ್ತಲೆಯಲ್ಲಿ ತನ್ನ ಸೋದರಿಯರೊಂದಿಗೆ ಪರಾರಿಯಾದ ರೋಸಿ, ಹೆದ್ದಾರಿಗೆ ಬಂದಳು. ಆ ದಾರಿಯಲ್ಲಿ ಬಂದ ಒಂದು ಲಾರಿಗೆ ಕೈ ತೋರಿಸಿದಳು. ಅವಳನ್ನು ಲಾರಿಗೆ ಹತ್ತಿ ಕುಳ್ಳಿರಿಸಿದ ಲಾರಿ ಡ್ರೈವರ್ ಕೇಶವನ್ ಪಿಳ್ಳೈ ಅವಳ ಬದುಕಿನ ಉದ್ದಕ್ಕೂ ಆಸರೆಯಾದ. ರೋಸಿಯ ಕತೆ ಕೇಳಿ ಕೇಶವನ್ ಪಿಳ್ಳೈ ಆಕೆಯನ್ನು ವರಿಸಿದ. ತಮಿಳುನಾಡಿನಲ್ಲಿ ಯಾವ ಸದ್ದುಗದ್ದಲವೂ ಇಲ್ಲದ ಒಂದು ಮೂಕಿ ಚಿತ್ರದಂತೆ ತನ್ನ ಬದುಕನ್ನು ಮುಗಿಸಿದರು ರೋಸಿ. ಪದ್ಮಾ, ನಾಗಪ್ಪನ್ ಇಬ್ಬರು ಮಕ್ಕಳು ತನ್ನ ತಾಯಿಯ ಬದುಕಿಗೆ ಸಾಕ್ಷಿಯಾಗಿ ತಮಿಳುನಾಡಿನಲ್ಲಿ ಬೆಳೆಯುತ್ತಿದ್ದಾರೆ. ವಿಷಾದನೀಯ ಸಂಗತಿಯೆಂದರೆ, ಡೇನಿಯಲ್‌ನನ್ನು ಮಾನ್ಯ ಮಾಡಿದ ಕೇರಳ ಸರಕಾರ ರೋಸಿಯನ್ನು ಕೊನೆಯವರೆಗೂ ಒಪ್ಪಿಕೊಳ್ಳಲೇ ಇಲ್ಲ. ಮಲಯಾಳಂ ಚಿತ್ರರಂಗದ ಮೊತ್ತ ಮೊದಲ ಕಲಾವಿದೆ ಎನ್ನುವ ಗೌರವವನ್ನು ನೀಡಲು ಅದು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಆದರೆ ಸೆಲ್ಯುಲಾಯ್ಡಿ ತಂಡದ ಕೆಲಸದಿಂದಾಗಿ ಅದೂ ಸಾಧ್ಯವಾಯಿತು. ಮಲಯಾಳಂ ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ರೋಸಿಯ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ನೀಡಲು ಸರಕಾರ ಮುಂದಾಗಿದೆ. ಚಿತ್ರದಲ್ಲಿ ನಟಿಸಿದ ಸುಮಾರು 90 ವರ್ಷಗಳ ಬಳಿಕ ಕೇರಳ ಸರಕಾರ ರೋಸಿಯನ್ನು ಪ್ರಪ್ರಥಮ ಮಲಯಾಳಂ ನಟಿ ಎನ್ನುವುದನ್ನು ಮಾನ್ಯ ಮಾಡಿದೆ.


ಸೆಲ್ಯುಲಾಯ್ಡನಲ್ಲಿ ಹೊಸ ಮುಖವಾಗಿರುವ ಚಾಂದಿನಿ ರೋಸಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸೆಲ್ಯುಲಾಯ್ಡಾ ಚಿತ್ರ ಕೇರಳದ ಏಳು ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಬಹುಶಃ ಇದನ್ನು ನೋಡಿ ಡೇನಿಯಲ್ ಮತ್ತು ರಾಜಮ್ಮ ಯಾನೆ ರೋಸಿಯ ಆತ್ಮಗಳು ನಿಟ್ಟುಸಿರು ಬಿಟ್ಟಿರಬಹುದು.

Saturday, June 1, 2013

ಗದ್ದೆ ಮತ್ತು ಇತರ ಕತೆಗಳು

 ಹಬ್ಬ
ಇಬ್ಬರು ಪುಟಾಣಿಗಳು ಶಾಲೆಗೆ ಹೋಗುತ್ತಾ ಮಾತನಾಡಿಕೊಳ್ಳುತ್ತಿದ್ದವು.
‘‘ನಮ್ಮ ಮನೆಯಲ್ಲಿ ಇವತ್ತು ಹಬ್ಬ’’
‘‘ಏನು ಅಡುಗೆ ಮಾಡಿದ್ರು...’’
‘‘ಗಂಜಿ ಮತ್ತು ಚಟ್ನಿ...’’
‘‘ಹಬ್ಬ ಅಂದೆ...’’
‘‘ಹೌದು...ಮನೆಯಲ್ಲಿ ಗಂಜಿ ಮಾಡಿದ ದಿನ ನಮಗೆ ಹಬ್ಬ’’

ಸೂರ್ಯ
ಮಗ ಕೇಳಿದ ‘‘ಸೂರ್ಯನೇಕೆ ಅಷ್ಟು ದೂರದಲ್ಲಿದ್ದಾನೆ?’’
‘‘ಹತ್ತಿರದಲ್ಲಿದ್ದರೆ ಮನುಷ್ಯ ಅದಕ್ಕೇನಾದರೂ ಕೇಡು ಮಾಡಿಯಾನು ಎಂಬ ಭಯದಲ್ಲಿ ದೇವರು ಅಷ್ಟು ದೂರದಲ್ಲಿಟ್ಟಿದ್ದಾನೆ ಮಗಾ’’ ತಂದೆ ಹೇಳಿದ. 


ಯುವಕ
ಯುವಕನೊಬ್ಬ ರಸ್ತೆ ದಾಟುವುದಕ್ಕೆ ಹೆದರುತ್ತಿದ್ದ.
ಅಲ್ಲಿಗೆ ಬಂದ ತುಸು ಪ್ರಾಯದ ಮುದುಕನೊಬ್ಬ ಅವನನ್ನು ಕೈ ಹಿಡಿದು ರಸ್ತೆ ದಾಟಿಸಿದ.
ಯಾರೋ ಯುವಕನ ಬೆನ್ನು ತಟ್ಟಿದರು ‘‘ಮುದುಕನನ್ನು ರಸ್ತೆ ದಾಟಿಸಿದ ನಿನ್ನದು ಒಳ್ಳೆಯ ಮನಸ್ಸು’’

ಬರ
ಬರಗಾಲ.
ಆದರೂ ರೈತ ಉಳುತ್ತಿದ್ದ.
ಯಾರೋ ಕೇಳಿದರು ‘‘ಭೂಮಿ ಆಕಾಶ ಬತ್ತಿ ಹೋಗಿದೆ....ಹೊಲ ಉಳುತ್ತಿದ್ದೀಯಲ್ಲ...’’
‘‘ಆದರೆ ಎದೆಯಲ್ಲಿ ಒಂದಿಷ್ಟು ಜಲ ಬತ್ತದೇ ಉಳಿದಿದೆ. ಅಲ್ಲಿಯವರೆಗೆ ಉಳುತ್ತೇನೆ’’ ರೈತ ಹೇಳಿದ.


ಗದ್ದೆ
ಹಸಿರಾಗಿ ಹರಡಿಕೊಂಡಿತ್ತು ರೈತನ ಗದ್ದೆ.
ಕೈಗಾರಿಕಾ ಉದ್ಯಮಿ ಅದನ್ನು ನೋಡಿ ಹೇಳಿದ ‘‘ಛೇ...ಅದೆಷ್ಟು ಜಾಗ ವ್ಯರ್ಥವಾಗಿ ಬಿದ್ದುಕೊಂಡಿದೆ’’

ಕನಸು
ರೈಲಿನಲ್ಲಿ ಪ್ರತಿ ದಿನ ನನ್ನ ಎದುರುಗಡೆ ಬಂದು ಕೂರುತ್ತಿದ್ದ ಹುಡುಗಿ.
ಸಮಯ ಕಳೆಯುವುದಕ್ಕೆಂದು ಅದೇನೋ ಹೆಣೆಯುತ್ತಿದ್ದಳು.
ಸ್ವೆಟರ್ ಆಗಿರಬಹುದು. ಅಥವಾ ಕುಲಾವಿ....
ಪ್ರತಿ ದಿನ ನಡೆಯುತ್ತಲೇ ಇತ್ತು. ಒಂದು ದಿನ ಹಾಗೇ ಹೆಣೆಯುತ್ತಿದ್ದವಳು, ತನ್ನ ಕೆಲಸ ಮುಗಿಸಿದ್ದೇ ಎದ್ದು ನಿಂತಳು.
ನನ್ನಡೆಗೆ ಬಾಗಿ ಹೇಳಿದಳು ‘‘ಇದು ನಿಮಗಾಗಿ ನಾನು ಹೆಣೆದ ನನ್ನ ಕನಸು. ಅಳತೆ ಸರಿಯಾಗಿದೆಯೋ ನೋಡಿ...’’

ಹಸಿವು
ಆತನಿಗೆ ತುಂಬಾ ಹಸಿವಾಗುತ್ತಿತ್ತು.
ಮನೆಯಲ್ಲೇನೂ ಇಲ್ಲ.
ಸೀದಾ ಗೆಳೆಯನ ಮನೆಗೆ ಹೋದರೆ ಹೇಗೆ? ಯೋಚಿಸದವನೇ ಅಲ್ಲಿಗೆ ನಡೆದ.
ಗೆಳೆಯ ಆಗಷ್ಟೇ ಉಂಡು ಕೈ ತೊಳೆಯುತ್ತಿದ್ದ. ಬಂದ ಗೆಳೆಯನನ್ನು ನೋಡಿದ್ದೇ ‘‘ಏನೋ...ಊಟ ಆಯ್ತ?’’ ಕೇಳಿ ಬಿಟ್ಟ.
ಗೆಳೆಯ ಮರಳಿದ.

ನೀರು ಕುಡಿದು ಮಲಗಿದ.

Monday, May 20, 2013

ನನ್ನ ಅತ್ತಿಗೆ ಮತ್ತು ಅವರ ಗೋಸಾಕಣೆ

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ಮಾಜಿ ಶಾಸಕ ದಿವಂಗತ ಬಿ. ಎಂ. ಇದಿನಬ್ಬರ ಹಿರಿಯ ಸೊಸೆ) ತನ್ನ ಗಂಡನ ಮನೆಗೆ ಕಾಲಿಡುವಾಗ ಅವರ ಜೊತೆಯಾಗಿ ಬಂದದ್ದು ಒಂದು ಹಸು. ನನ್ನ ಅತ್ತಿಗೆಯ ತಂದೆಯ ಪ್ರಧಾನ ವೃತ್ತಿಯೇ ಗೋಸಾಕಣೆ, ಹೈನುಗಾರಿಕೆಯಾಗಿತ್ತು. ಆದುದರಿಂದ ಅತ್ತಿಗೆ ಬಾಲ್ಯದಿಂದಲೂ ಹಸುಗಳ ಜೊತೆಗೆ ಒಡನಾಟವಿಟ್ಟುಕೊಂಡಿದ್ದರು. ತನ್ನ ಮಗಳನ್ನು ಪತಿಯ ಮನೆಗೆ ಕಳುಹಿಸುವಾಗ ಒಂದು ಹಸುವನ್ನೇ ಮಗಳಿಗೆಂದು ಕೊಟ್ಟಿದ್ದರಂತೆ ಅವರ ತಂದೆ. ತವರು ಮನೆ ಕೊಟ್ಟ ಹಸುವಿನ ಜೊತೆಗೆ ಅವರು ಕವಿ ಇದಿನಬ್ಬರ ಮನೆಯ ಸೊಸೆಯಾದರು.

   ನಾನು ಕಂಡಂತೆ ಅತ್ತಿಗೆ ಶ್ರಮಕ್ಕೆ ಇನ್ನೊಂದು ಹೆಸರು.(ಅವರ ಹೆಸರು ಆಯಿಶಾ ಎಂದು. ಇದಿನಬ್ಬರ ಹಿರಿಯ ಮಗ ಬಿ. ಎಂ. ಭಾಷಾ ಅವರ ಪತ್ನಿ) ತನ್ನ ಬದುಕಿನಲ್ಲಿ ಎದುರಾದ ಕಷ್ಟ ಪರಂಪರೆಯನ್ನೆಲ್ಲ ಹಸುಗಳ ಜೊತೆಗೇ ಹಂಚಿಕೊಂಡು ಕಳೆದವರು. ಗಂಡನ ಮನೆಗೆ ಬಂದ ಆರಂಭದಲ್ಲಿ ಅವರಿಗೆ ಒಂಟಿತನ ಕಾಡಿದಾಗೆಲ್ಲ ಅಪ್ಪ ಕೊಟ್ಟ ಹಸುವೇ ಜೊತೆಯಾಗಿತ್ತಂತೆ. ಆಗ ಇದಿನಬ್ಬರು ಶಾಸಕರಾಗಿರುವ ಆರಂಭ. ಶಾಸಕರ ಪುತ್ರನಾಗಿದ್ದರೂ ಪತಿಯೂ ಆರಂಭದ ಜೀವನವನ್ನು ಸಂಕಷ್ಟದಲ್ಲೇ ಕಳೆದವರು. ಇಂತಹ ಸಂದರ್ಭದಲ್ಲಿ ಅತ್ತಿಗೆ ತನ್ನ ಮನೆಯ ಹಿಂಭಾಗದಲ್ಲಿರುವ ಮೂವತ್ತು ಸೆಂಟ್ಸ್ ಜಾಗದಲ್ಲಿ ಗೋ ಸಾಕಾಣೆಯ ಕನಸು ಕಂಡರು. ಹೇಗೂ ತಂದೆ ಕೊಟ್ಟಿದ್ದ ಒಂದು ಹಸು ಇತ್ತು. ಇದರ ಜೊತೆಗೆ ಇನ್ನಷ್ಟು ಹಸುಗಳನ್ನು ತಂದು ಸಾಕಿದರೆ ಹೇಗೆ ಎಂದು ಯೋಚಿಸಿದರಂತೆ. ಹಾಗೆ ಭೂಮಿಗಿಳಿಯಿತು ಅವರ ಗೋಸಾಕಣೆಯ ಕನಸು. ಇದು ಸುಮಾರು 30-40 ವರ್ಷಗಳ ಹಿಂದಿನ ಕತೆ. ಅವರ ಕನಸು ನಿಧಾನಕ್ಕೆ ಭೂಮಿಯಿಂದೆದ್ದು ಗಿಡವಾಗಿ ಮರವಾಗಿ ಫಸಲು ಬಿಡತೊಡಗಿತು. ಮನೆಯ ಹಿತ್ತಲ ಆ 30 ಸೆಂಟ್ಸ್ ಜಾಗದಲ್ಲಿ ಸುಮಾರು 50 ವಿವಿಧ ತಳಿಯ ಹಸುಗಳನ್ನು ಸಾಕಿ ಉಳ್ಳಾಲದ ಆಸುಪಾಸಿನಲ್ಲಿ ಒಂದು ಕ್ರಾಂತಿಯನ್ನೇ ಮಾಡಿದರು. ಒಂದು ಹಂತದಲ್ಲಿ ಪತಿಗೆ ಆರ್ಥಿಕ ಸಂಕಟಗಳು ಎದುರಾದಾಗ ಇವರ ಗೋಸಾಕಾಣೆಯೇ ಇಡೀ ಕುಟುಂಬಕ್ಕೆ ಆಧಾರವಾಗಿದ್ದುದನ್ನು ಅಣ್ಣ ಭಾಷಾ ಅವರು ಹಂಚಿಕೊಳ್ಳುತ್ತಾರೆ.ಇದಿನಬ್ಬರು ಮಂಗಳೂರಿನ ಒಮೆಗಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅಲ್ಲಿನ ಖ್ಯಾತ ವೈದ್ಯರೊಬ್ಬರು ದೊಡ್ಡಪ್ಪನೊಂದಿಗೆ ಹಂಚಿಕೊಂಡಿದ್ದರು ‘‘ನಾನು ನಿಮ್ಮ ಮನೆಯ ಹಾಲು ಕುಡಿದು ಬೆಳೆದಿದ್ದೇನೆ ಸಾರ್’’ ಎಂದು. ಅತ್ತಿಗೆಯ ಹಟ್ಟಿಯ ಹಾಲು ಸುತ್ತಮುತ್ತಲೆಲ್ಲ ಅತ್ಯುತ್ತಮ ಹಾಲು ಎಂದು ಹೆಸರಾಗಿದೆ. ಅತ್ಯುತ್ತಮ ಹಾಲೆಂದೂ, ಔಷಧಿಗೆಂದೂ, ನೀರು ಬೆರಸದ ಹಾಲೆಂದೂ ಹೀಗೆ ವಿವಿಧ ಕಾರಣವನ್ನು ಮುಂದಿಟ್ಟು ಹಾಲು ಕೊಳ್ಳುವವರಿದ್ದಾರೆ.


  ಈ ದನಗಳ ಜೊತೆಗೆ ಅತ್ತಿಗೆ ನಡೆಸಿದ ಹೋರಾಟ ಸಣ್ಣದೇನೂ ಅಲ್ಲ. ಅತ್ತಿಗೆಯ ಅತಿ ದೊಡ್ಡ ಸಮಸ್ಯೆಯೆಂದರೆ ಜಾಗದ ಕೊರತೆಯಾಗಿತ್ತು. ಅಷ್ಟು ಸಣ್ಣ ಜಾಗದಲ್ಲಿ 60 ಹಸುಗಳನ್ನು ಸಾಕುವುದು ಎಂದರೆ ಸಣ್ಣ ವಿಷಯವಲ್ಲ. ಅದರಲ್ಲೂ ವಿದೇಶಿ ತಳಿಯ ಹಸುಗಳೂ ಇದ್ದವು. ಹಟ್ಟಿಯನ್ನು ಸಂಪೂರ್ಣ ಆಧುನಿಕೀಕರಣಗೊಳಿಸಲಾಗಿತ್ತು. ನಳ್ಳಿ ನೀರು, ಬೆಳಕು ಇತ್ಯಾದಿಗಳೂ ಇದ್ದವು. ಸೆಗಣಿ, ಮೂತ್ರಗಳನ್ನು ಸಂಗ್ರಹಿಸಲು ಪ್ರತ್ಯೇಕ ವ್ಯವಸ್ಥೆ ಇದ್ದವು. ಆದರೂ ಸೆಗಣಿಯ ವಾಸನೆ ಅಲ್ಪಸ್ವಲ್ಪ ನೆರೆಹೊರೆಗೆ ತೊಂದರೆ ನೀಡುವುದು ಸಹಜ. ಮುಖ್ಯವಾಗಿ ಅತ್ತಿಗೆ ಗೋಸಾಕಾಣೆಯಲ್ಲಿ ಯಶಸ್ವಿಯಾಗಿ ಕೈತುಂಬಾ ಸಂಪಾದಿಸುತ್ತಿರುವುದೂ ಕೆಲವರಲ್ಲಿ ಹೊಟ್ಟೆ ಕಿಚ್ಚು ಸೃಷ್ಟಿಸಿತ್ತು. ಪರಿಣಾಮವಾಗಿ ಸ್ಥಳೀಯ ಪಂಚಾಯತ್‌ಗಳಿಗೆ, ಪುರಸಭೆಗಳಿಗೆ, ಪರಿಸರ ಮಾಲಿನ್ಯ ವಿಭಾಗಕ್ಕೆ ತಳ್ಳಿ ಅರ್ಜಿಗಳು, ಗುಪ್ತ ದೂರುಗಳು ಹೋಗುವುದು ಹೆಚ್ಚಾಯಿತು. ಆಗಾಗ ಮನೆಗೆ ಅಧಿಕಾರಿಗಳು ದಾಳಿ ನಡೆಸುವುದು ಹಾಗೂ ವ್ಯವಸ್ಥಿತವಾದ ಹಟ್ಟಿಯನ್ನು ನೋಡಿ ಅಧಿಕಾರಿಗಳು ಮೆಚ್ಚಿ ಮರಳಿ ಹೋಗುವುದು ನಡೆದೇ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯೊಬ್ಬರು ಮನೆಯಲ್ಲೇ ಇಷ್ಟರ ಮಟ್ಟಿಗೆ ಹೈನುಗಾರಿಕೆ ನಡೆಸುವುದನ್ನು ತಡೆಯಲು ಯಾವ ಅಧಿಕಾರಿಗಳೂ ಸಿದ್ಧರಿರಲಿಲ್ಲ.


  ಎಲ್ಲೂ ಯಶಸ್ವಿಯಾಗದೇ ಇದ್ದಾಗ ಕಿಡಿಗೇಡಿಗಳು ಆಗ ಶಾಸಕರಾಗಿದ್ದ ಇದಿನಬ್ಬರಿಗೇ ಅನಾಮಿಕ ಹೆಸರಿನಲ್ಲಿ ಪತ್ರ ಬರೆಯತೊಡಗಿದರು. ತನ್ನ ಮನೆಯವರಿಂದ ಇತರರಿಗೆ ತೊಂದರೆಯಾಗುವುದನ್ನು ಇದಿನಬ್ಬರು ಯಾವತ್ತೂ ಸಹಿಸುತ್ತಿರಲಿಲ್ಲ. ಇದಿನಬ್ಬ ಮತ್ತು ಅವರ ಪುತ್ರ ಭಾಷಾ ಅವರ ಮನೆ ಅಕ್ಕಪಕ್ಕ. ಹಾಗೆ ನೋಡಿದರೆ, ಹಟ್ಟಿಯ ಸೆಗಣಿಯ ವಾಸನೆ ಇದಿನಬ್ಬರ ಮೂಗಿಗೂ ಬಡಿದಿರಬಹುದು. ಆದರೆ, ಶ್ರಮಕ್ಕೆ ಅಗಾಧ ಬೆಲೆ ನೀಡುತ್ತಿದ್ದವರು ದೊಡ್ಡಪ್ಪ. ಆದುದರಿಂದ ಅವರು ಅದನ್ನು ಮೆಚ್ಚುಗೆಯಿಂದಲೇ ನೋಡುತ್ತಿದ್ದರು. ಆದರೆ ಮನೆಗೇ ತಳ್ಳಿಅರ್ಜಿಗಳು, ದೂರು ಅರ್ಜಿಗಳು ಬಂದರೆ ಏನು ಮಾಡುವುದು? ಆಗ ಸ್ವತಃ ಇದಿನಬ್ಬರೇ ಹಿರಿಯ ಮಗನನ್ನ ಕರೆದು ಹಟ್ಟಿಯ ಕುರಿತಂತೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದರಂತೆ. ಈಗ ಮಗನಿಗೆ ಧರ್ಮ ಸಂಕಟ. ಇಂತಹ ಸಂದರ್ಭದಲ್ಲಿ ಇದಿನಬ್ಬರನ್ನು ಮೆಚ್ಚಿಸುವುದು ಹೇಗೆ? ಎನ್ನುವ ಸಮಸ್ಯೆ ಎದುರಾಯಿತು. ಆಗ ಅಣ್ಣ ನನ್ನನ್ನು ಕರೆದರು. ‘ಯಾವುದಾದರೂ ಹಿರಿಯ ಕವಿಗಳು ಗೋವುಗಳ ಕುರಿತಂತೆ ಬರೆದ ಕವಿತೆ ಇದೆಯ?’’ ಎಂದು ಕೇಳಿದರು.
ನಾನೂ ಆಲೋಚಿಸಿದೆ. ಅಣ್ಣನ ಸಮಸ್ಯೆ ನನಗೆ ಅರ್ಥವಾಯಿತು. ತಕ್ಷಣ ನಾನು ಕುವೆಂಪು ಬರೆದಿರುವ ‘ಗೊಬ್ಬರ’ ಕವಿತೆಯನ್ನು ಅಣ್ಣನಿಗೆ ನೀಡಿದೆ. ಅದರ ವಾಕ್ಯಗಳ ಅರ್ಥಗಳನ್ನು ಕೂಡ ಅದರಲ್ಲಿ ಅಣ್ಣನಿಗೆ ವಿವರಿಸಿದ್ದೆ. ಅಣ್ಣನಿಗೋ ತುಂಬಾ ಸಂತೋಷವಾಯಿತು. ಮುಖ್ಯವಾಗಿ, ಗೊಬ್ಬರದ ಕುರಿತಂತೆ ಹೀನಾಯವಾಗಿ ನೋಡುವ ಜನರನ್ನು ಉದ್ದೇಶಿಸಿ ಕುವೆಂಪು ಬರೆದ ಮೊದಲ ಕವಿತೆ ಅದು. ಒಂದು ರೀತಿಯ ಮೊದಲ ಬಂಡಾಯ ಕವಿತೆ. ಗೊಬ್ಬರದ ಬಗ್ಗೆ ಹೀನಾಯವಾಗಿ ನೋಡುವ ಎಲ್ಲರೂ ಒಂದಲ್ಲ ಒಂದು ದಿನ ಗೊಬ್ಬರವಾಗಲೇ ಬೇಕು ಎನ್ನುತ್ತಾ, ಗೊಬ್ಬರದ ಪ್ರಯೋಜನಗಳನ್ನು ಕುವೆಂಪು ಆ ಕವಿತೆಯಲ್ಲಿ ಎತ್ತಿ ಹಿಡಿಯುತ್ತಾರೆ. ಅಣ್ಣ ಒಂದು ಪತ್ರದ ಮೂಲಕ ಆ ಕವಿತೆಯನ್ನು ತಂದೆಗೆ ಕಳುಹಿಸಿಕೊಟ್ಟರಂತೆ. ದೊಡ್ಡಪ್ಪನಿಗೆ ಆ ಕವಿತೆ ನೋಡಿ ತುಂಬಾ ಖುಷಿಯಾಯಿತಂತೆ. ಆದರೂ ಆ ಕವಿತೆಯ ಹಿಂದೆ ನಾನೂ ಇದ್ದೇನೆ ಎನ್ನುವ ಅನುಮಾನ ಅವರಿಗೆ ಕಾಡಿತ್ತು ಎಂದು ನನಗೂ ಗೊತ್ತು. ಆದರೆ ನನ್ನಲ್ಲಿ ಅದನ್ನು ಯಾವತ್ತೂ ಅವರು ಪ್ರಶ್ನಿಸಿರಲಿಲ್ಲ. ಇದಿನಬ್ಬರು ಅಲ್ಲಿಂದ ಯಾರ ದೂರನ್ನೂ ಕಿವಿಗೆ ಹಾಕುತ್ತಿರಲಿಲ್ಲವಂತೆ. ಇದಿನಬ್ಬರಿಗೆ ತನ್ನ ಸೊಸೆಯ ಕೆಲಸದ ಕುರಿತಂತೆ ಯಾವಾಗಲೂ ಹೆಮ್ಮೆಯಿತ್ತು. ನನ್ನಲ್ಲಿ ಹಲವು ಬಾರಿ ಹೇಳಿದ್ದರು ‘‘ನನ್ನ ಹಿರಿಯ ಸೊಸೆ ಇದ್ದಾಳಲ್ಲ. ಅವಳು ನನ್ನ ಹೆಂಡತಿಯ ಹಾಗೆ, ಬಹಳ ಶ್ರಮಗಾರ್ತಿ. ಸ್ವಾಭೀಮಾನಿ. ನನ್ನ ಹಿರಿಯ ಮಗ ಸುಧಾರಣೆಯಾಗುವುದಕ್ಕೆ ಹಿರಿ ಸೊಸೆಯ ಕೊಡುಗೆ ತುಂಬಾ ದೊಡ್ಡದು’’ ಇದಿನಬ್ಬರ ಪತ್ನಿ ಅಂದರೆ ನನ್ನ ದೊಡ್ಡಮ್ಮನೂ ಶ್ರಮದ ಮೇಲೆ ಅಗಾಧ ನಂಬಿಕೆಯಿಟ್ಟವರು. ಸೋಮಾರಿಗಳನ್ನು, ತಿಂದುಂಡು ಒರಗುವ ಹೆಂಗಸರನ್ನು ಕಂಡರೆ ಅವರಿಗಾಗುತ್ತಿರಲಿಲ್ಲ. ಮೊದಲ ಚುನಾವಣೆಯಲ್ಲಿ ಇದಿನಬ್ಬರು ಸೋತರು. ಅತ್ತ ಸೊಸೈಟಿಯ ಕೆಲಸಕ್ಕೂ ರಾಜೀನಾಮೆ ನೀಡಿದ್ದರು. ಆಗ ತೆಂಗಿನ ನಾರಿನಿಂದ ಹಗ್ಗ ಮಾಡಿ ಮಾರಿ ಇಡೀ ಕುಟುಂಬವನ್ನು ಸಾಕಿ ಬೆಳೆಸಿದವರು ಇದಿನಬ್ಬರ ಪತ್ನಿ. ಅಂದರೆ ನನ್ನ ದೊಡ್ಡಮ್ಮ.

 ಅಂತೆಯೇ ಅತ್ತಿಗೆಯ ಬದುಕಿನಲ್ಲಿ ಗೋಸಾಕಣೆ ಅವಿನಾಭಾವವಾಗಿ ಬೆಸೆದಿತ್ತು. ಹಣ ಸಿಗುತ್ತದೆ ಎನ್ನುವುದು ಅವರಿಗೆ ಎಂದೂ ಮುಖ್ಯವಾಗಿರಲಿಲ್ಲ. ಅದು ಅವರ ಕುಟುಂಬದಿಂದ ಬಂದ ಬಳುವಳಿ. ಇಬ್ಬರು ಕೆಲಸಗಾರರನ್ನು ಇಟ್ಟುಕೊಂಡು ಅವರು ಆ ಹಟ್ಟಿಯನ್ನು ನಡೆಸುತ್ತಿದ್ದಾರೆ. ಇಂದಿಗೂ. ‘ಗೋವುಗಳನ್ನು ಸಂಬಾಳಿಸಬಹುದು. ಕೆಲಸಗಾರರನ್ನು ಸಂಬಾಳಿಸುವುದು ಕಷ್ಟ’ ಎನ್ನುತ್ತಾರೆ ಅತ್ತಿಗೆ. ಯಾಕೆಂದರೆ, ಕೆಲಸಗಾರರು ಈ ಕಷ್ಟದ, ಸೆಗಣಿ ಬಳಿಯುವ ಕೆಲಸಕ್ಕೆ ಹೆಚ್ಚು ಸಮಯ ನಿಲ್ಲುವುದಿಲ್ಲವಂತೆ. ಅದಕ್ಕಾಗಿ ದೂರದ ಊರಿಂದ ಅಂದರೆ ಬಿಜಾಪುರ ಆ ಕಡೆಯ ಕೆಲಸಗಾರರನ್ನು ಬಳಸಿಕೊಳ್ಳುತ್ತಿದ್ದರು. ಅವರೂ ಹೆಚ್ಚು ಸಮಯ ನಿಲ್ಲುತ್ತಿರಲಿಲ್ಲ. ಅತ್ತಿಗೆಯ ಅತಿ ದೊಡ್ಡ ಸಮಸ್ಯೆಯೆಂದರೆ ಗೋವುಗಳಿಗೆ ಹುಲ್ಲುಗಳನ್ನು ಸಂಗ್ರಹಿಸುವುದು. ಹುಲ್ಲು ಬೆಳೆಸಲು ಅವರ ಹಿತ್ತಲಲ್ಲಿ ಹೆಚ್ಚು ಜಾಗವಿಲ್ಲ. ಗದ್ದೆಯಿಲ್ಲ. ದೂರದಿಂದ ಲೋಡ್‌ಗಟ್ಟಳೆ ಹುಲ್ಲನ್ನು ಕ್ರಯಕ್ಕೆ ತೆಗೆದುಕೊಂಡು ಬರಬೇಕಾಗಿತ್ತು. ಹುಲ್ಲನ್ನು ಹಣಕೊಟ್ಟೇ ತೆಗೆದುಕೊಳ್ಳಬೇಕು. ಅದನ್ನು ಮನೆಯಲ್ಲಿ ಸಂಗ್ರಹಿಸಿಡಬೇಕು. ಸುಮಾರು 50 ದನಗಳಿಗೆ ಅದೆಷ್ಟು ಲೋಡು ಹುಲ್ಲುಗಳನ್ನು ಕೊಂಡರೂ ಸಾಕಾಗುವುದಿಲ್ಲ. ಹಾಗೆಯೇ ಅವರ ಪತಿಯ ಮೂಲಕ ಬೇರೆ ತರಕಾರಿ ಅಂಗಡಿಗಳ ವೇಸ್ಟ್ ತರಕಾರಿಗಳು, ಅದರ ಸಾಗಾಟದ ಹುಲ್ಲುಗಳು ಇವುಗಳನ್ನೆಲ್ಲ ಬಳಸಿಕೊಂಡು ಬೇರೆ ಬೇರೆ ರೀತಿಯಲ್ಲಿ ದನದ ಹೊಟ್ಟೆ ತುಂಬಿಸಬೇಕು. ಮುಂಜಾವು ನಾಲ್ಕು ಗಂಟೆಗೆ ಅತ್ತಿಗೆ ಏಳುತ್ತಾರೆ. ಕೆಲಸದವರನ್ನೂ ಎಬ್ಬಿಸಿ, ಈ ಹಟ್ಟಿಯ ಕೆಲಸ ಸಾಗುತ್ತದೆ. ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ಇದನ್ನು ಬಿಡದೆಯೇ ಪಾಲಿಸಿಕೊಂಡು ಬರುತ್ತಿದ್ದಾರೆ.
ನಾನು ಕೇಳಿದ್ದೆ ‘‘ನಿಮ್ಮ ಹಟ್ಟಿಯಲ್ಲಿ ಹೋರಿಗಳು ಹುಟ್ಟಿದರೆ ಏನು ಮಾಡುತ್ತೀರಿ?’’

ಅತ್ತಿಗೆ ಉತ್ತರಿಸುತ್ತಿದ್ದರು ‘‘ಏನು ಮಾಡಲಿಕ್ಕೆ ಆಗುತ್ತದೆ. ಹೋರಿಗಳನ್ನು ಇಟ್ಟುಕೊಂಡು ಗದ್ದೆ ಉಳುವುದಕ್ಕೆ ನಮ್ಮಲ್ಲಿ ಗದ್ದೆಯೂ ಇಲ್ಲ. ಈಗ ಯಾರೂ ಗದ್ದೆಗಳನ್ನು ಉಳುವುದಕ್ಕೆ ಹೋರಿಗಳನ್ನು ಬಳಸುವುದೂ ಇಲ್ಲ. ಹಟ್ಟಿಯಲ್ಲೇ ಎಷ್ಟು ಸಮಯ ಹೋರಿಗಳನ್ನಿಟ್ಟು ಹುಲ್ಲು ಹಾಕಿ ಸಾಕಬಹುದು? ಇರುವ ದನಗಳಿಗೇ ಇಲ್ಲಿ ಜಾಗವಿಲ್ಲ. ಒಂದು ಲೋಡ್ ಹುಲ್ಲಿಗೆ ಚಾರ್ಜ್ ಎಷ್ಟಾಗುತ್ತದೆ ಗೊತ್ತುಂಟಾ....? ಹೋರಿ ಕರು ದೊಡ್ಡದಾದ ಮೇಲೆ ಅದನ್ನು ಮಾರುತ್ತೇವೆ...ಹಾಗೆ ಮಾರಿ ಬಂದ ಹಣದಿಂದ ಇರುವ ದನಗಳನ್ನು ಚೆನ್ನಾಗಿ ಸಾಕಲು ಸಾಧ್ಯವಾಗುತ್ತದೆ’’ ‘‘ಹುಲ್ಲನ್ನೆಲ್ಲ ಕ್ರಯಕೊಟ್ಟು ತರಬೇಕಲ್ಲ, ದುಬಾರಿಯಾಗುವುದಿಲ್ಲವೆ?’’ ಎಂದರೆ ಅವರು ಇಲ್ಲ ಎನ್ನುತ್ತಾರೆ. ಅದರ ಹುಲ್ಲು, ಅದರ ಆಹಾರಕ್ಕೆ ಬೇಕಾದ ಉತ್ಪಾದನೆಯನ್ನು ಅವುಗಳೇ ಮಾಡುತ್ತವೆ. ಅದರ ಸೆಗಣಿ, ಮೂತ್ರ ಎಲ್ಲವೂ ಕೃಷಿಕರಿಗೆ ಬೇಕು. ಸೆಗಣಿ, ಮೂತ್ರಗಳನ್ನು ಸಂಗ್ರಹಿಸಿ, ಮಾರಿದರೆ ಬಂದ ಹಣ ಹಸುಗಳಿಗೆ ಬೇಕಾದ ಆಹಾರ ಒದಗಿಸಲು ಭಾಗಶಃ ಸಾಕಾಗುತ್ತದೆ.

ಈ ದನಗಳ ಜೊತೆಗೆ ಒಂದು ರೀತಿಯ ಬಾಂಧವ್ಯವನ್ನೂ ಅತ್ತಿಗೆ ಕಟ್ಟಿಕೊಂಡಿದ್ದಾರೆ. ಒಂದು ಹಸುವಿನ ಜೊತೆಗೆ ಅತ್ತಿಗೆ ತುಂಬ ಪ್ರೀತಿಯಿತ್ತಂತೆ. ಅದು ಅತ್ತಿಗೆ ಸ್ವತಃ ಆಹಾರ ಕೊಡದೇ ಇದ್ದರೆ ತಿನ್ನುತ್ತಲೇ ಇರುತ್ತಿರಲಿಲ್ಲವಂತೆ. ಅಂತಹ ಸಂದರ್ಭದಲ್ಲೇ, ಅತ್ತಿಗೆ ಕೆಲಸ ಮಾಡುತ್ತಿರುವಾಗ ಬಿದ್ದು ಕಾಲು ಮುರಿದುಕೊಂಡರು. ಆಸ್ಪತ್ರೆ ಸೇರಿದರು. ಸುಮಾರು ಒಂದು ತಿಂಗಳು ಆಸ್ಪತ್ರೆಯಲ್ಲೇ ಇರಬೇಕಾಯಿತು. ಈ ಸಂದರ್ಭದಲ್ಲೇ ಅತ್ತಿಗೆಯ ಆ ಪ್ರೀತಿ ಪಾತ್ರ ಹಸುವಿನ ಆರೋಗ್ಯ ಕೆಟ್ಟಿತು. ಅತ್ತಿಗೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗುವ ಹೊತ್ತಿಗೆ ಹಸು ಏನನ್ನೂ ತಿನ್ನದೇ ಸತ್ತೆ ಹೋಯಿತಂತೆ. ‘‘ಕೆಲಸಗಾರರಷ್ಟೇ ನೋಡಿಕೊಂಡರೆ ಸಾಕಾಗುವುದಿಲ್ಲ. ನಾನು ಜೊತೆ ಜೊತೆಯಾಗಿಯೇ ಇರಬೇಕಾಗುತ್ತದೆ. ಹಾಗಾದಲ್ಲಿ ಮಾತ್ರ ನನಗೂ, ಹಸುಗಳಿಗೂ ಸಮಾಧಾನ’’ ಎಂದು ಅತ್ತಿಗೆ ಒಮ್ಮೆ ನುಡಿದಿದ್ದರು. ತನ್ನ ಗೋಸಾಕಣೆಯ ಬದುಕಿನ ಬಗ್ಗೆ ನೀನೇನಾದರೂ ಬರೆಯಲು ಕೂತರೆ, ದೊಡ್ಡ ಕಾದಂಬರಿಯಾದೀತು ಎನ್ನುತ್ತಾರೆ ಅತ್ತಿಗೆ. ‘‘ಅಣ್ಣ ನಿಮ್ಮ ಗೋಸಾಕಣೆಯಲ್ಲಿ ಹೇಗೆ ಸಹಾಯ ಮಾಡಿದ್ದಾರೆ...’’ ಎಂದು ಅತ್ತಿಗೆಯನ್ನು ಕೇಳಿದರೆ ಅವರು ತುಂಟತನದಿಂದ ಹೇಳುತ್ತಾರೆ ‘‘ಪ್ರತಿ ತಿಂಗಳು ಹಾಲಿನಿಂದ ಬಂದ ದುಡ್ಡನ್ನು ಎಣಿಸುವುದಕ್ಕೆ ಸಹಾಯ ಮಾಡುವುದು ಅವರೇ’’ ಅತ್ತಿಗೆಯ ಗೋಸಾಕಣೆಯ ಕನಸಿನ ಹಿಂದೆ ಅಣ್ಣನ ಬಲವಾದ ಬೆಂಬಲವಿದೆ. ಅದನ್ನು ಒಂದು ಉದ್ಯಮ ರೂಪಕ್ಕೆ ತಂದದ್ದು ನಿನ್ನ ಅಣ್ಣನೇ ಎಂದು ಅವರು ಹೇಳುತ್ತಾರೆ.
 ಒಂದು ರೀತಿಯಲ್ಲಿ ಅತ್ತಿಗೆ ಎಂದೆಂದಿಗೂ ಸ್ವಾವಲಂಬಿಯಾಗಿಯೇ ಬದುಕಿದರು. ಇಂದಿಗೂ ಅವರು ಸ್ವಾವಲಂಬಿಯೇ ಆಗಿದ್ದಾರೆ. ಅದಕ್ಕೆ ಕಾರಣವೇ ಈ ಗೋಸಾಕಣೆ. ಕೆಲಸದವರ ಮೂಲಕ ಮೊದಲು ಹಾಲನ್ನು ಮನೆಮನೆಗೆ ಸಾಗಿಸುತ್ತಿದ್ದರು. ಈಗ ಹಾಲನ್ನು ಸಾಗಿಸುವುದಕ್ಕಾಗಿಯೇ ವಾಹನವಿದೆ. ಈ ಗೋಸಾಕಣೆಯಲ್ಲಿ ಬಂದ ದುಡ್ಡಿನಿಂದ ಅವರು ತಮ್ಮ ಕುಟುಂಬಿಕರಿಗೆ ಬಹಳಷ್ಟು ನೆರವಾಗಿದ್ದಾರೆ. ಪ್ರತಿ ರಮಝಾನ್‌ನಲ್ಲಿ ತಮ್ಮ ಹಣದಿಂದಲೇ, ಕುಟುಂಬಿಕರಿಗೆ ಝಕಾತ್ ನೀಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಬಡ ಕುಟುಂಬಸ್ಥರಿಗೆ ಬಟ್ಟೆಗಳನ್ನು ಹಂಚುತ್ತಾರೆ. ಈಗ ಅತ್ತಿಗೆಯ ಹಿರಿಯ ಮಗ ಅಮೀರ್ ಅಮೆರಿಕದಲ್ಲಿ ಒಳ್ಳೆಯ ಕಂಪೆನಿಯಲ್ಲಿ ಹುದ್ದೆಯಲ್ಲಿದ್ದಾನೆ. ಮಗ ಅಮೆರಿಕಕ್ಕೆ ಹೋಗಿ 15-20 ವರ್ಷಗಳಾಗಿವೆ. ಇನ್ನೊಬ್ಬ ಕಿರಿಯ ಮಗ ಹುರೈರ್ ಮಂಗಳೂರಲ್ಲೇ ಖ್ಯಾತ ಮೀನಿನ ಉದ್ಯಮಿ. ಪತಿಯೂ ಉದ್ಯಮಿ. ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥರೂ ಆಗಿದ್ದಾರೆ. ಈಗ ಅತ್ತಿಗೆಗೆ ವಯಸ್ಸಾಗಿದೆ. ಆರೋಗ್ಯವೂ ಮೊದಲಿನಂತಿಲ್ಲ. ಆದರೆ ಹಟ್ಟಿಯನ್ನು ಮುಚ್ಚುವುದಕ್ಕೆ ಅವರ ಮನಸ್ಸು ಒಪ್ಪುತ್ತಿಲ್ಲ.

‘‘ಕೆಲಸಗಾರರು ಸಿಕ್ಕುವುದಿಲ್ಲ. ದೊಡ್ಡ ಸಮಸ್ಯೆಯಾಗಿದೆ. ಹೀಗೆ ಆದರೆ ಇದ್ದ ಹಸುಗಳನ್ನು ಮಾರಿ, ಹಟ್ಟಿಯನ್ನು ಮುಚ್ಚಬೇಕಾಗುತ್ತದೆ’’ ಹೀಗೆಂದು ಹಲವು ಬಾರಿ ನನ್ನಲ್ಲಿ ಅತ್ತಿಗೆ ಹೇಳಿದ್ದರು. ಆದರೆ ಈವರೆಗೂ ಹಟ್ಟಿಯನ್ನು ಮುಚ್ಚುವುದಕ್ಕೆ ಅವರಿಂದಾಗಲಿಲ್ಲ. ಆದರೆ ಹಿಂದಿನ ದಿನಗಳಿಗೆ ಹೋಲಿಸಿದರೆ, ಹಟ್ಟಿಯಲ್ಲಿ ದನಗಳ ಸಂಖ್ಯೆ ಕಡಿಮೆಯಾಗಿದೆ. 60 ದನಗಳಿದ್ದಲ್ಲಿ ಇಂದು ಹೆಚ್ಚೆಂದರೆ 15 ದನಗಳಿವೆ. ಅತ್ತಿಗೆ ಅವರ ಆರೋಗ್ಯ ಮೊದಲಿನಂತಿಲ್ಲ. ವಯಸ್ಸೂ ಇದರ ಮೇಲೆ ದಾಳಿಯಿಟ್ಟಿದೆ. ಕೌಟುಂಬಿಕ ಸಮಸ್ಯೆಗಳೂ ಅವರನ್ನು ಕಾಡಿದೆ. ಇದೆಲ್ಲ ಕಾರಣದಿಂದ ಅವರು ಗೋಸಾಕಣೆಯನ್ನು ನಿಲ್ಲಿಸಬೇಕು ಎಂದು ಯೋಚಿಸುತ್ತಿದ್ದಾರೆ. ಮೊನ್ನೆ ಪತಿಯ ಜೊತೆಗೆ ಉಮ್ರಕ್ಕೆಂದು ಮಕ್ಕಾಕ್ಕೆ ಹೊರಟವರು ಫೋನ್‌ನಲ್ಲಿ ಹೇಳಿದ್ದರು ‘‘ಇಲ್ಲ ಇನ್ನು ನನ್ನಿಂದ ಸಾಧ್ಯವಿಲ್ಲ. ಕೆಲಸದವರು ಸರಿಯಾಗಿ ಸಿಗುವುದಿಲ್ಲ. ನೋಡಬೇಕು...ಸರಿಯಾಗದಿದ್ದರೆ ಮುಚ್ಚುವುದೇ...’’


 ಆದರೆ ಅತ್ತಿಗೆಯ ಮನಸ್ಸು ನನಗೆ ಗೊತ್ತು. ತಂದೆ ಕೊಟ್ಟ ಒಂದು ದನದೊಂದಿಗೆ ಮಾವನ ಮನೆಗೆ ಕಾಲಿಟ್ಟರು. ಮಾವ ಗಣ್ಯ ರಾಜಕಾರಣಿ, ಪತಿ ಎಂಎಲ್‌ಎ ಒಬ್ಬರ ಮಗ ಎನ್ನುವ ಯಾವ ಪ್ರತಿಷ್ಠೆಯೂ ಇಲ್ಲದೆ ಸೆಗಣಿ ಬಾಚಿ ತನ್ನ ಬದುಕನ್ನು ಕಟ್ಟಿಕೊಂಡವರು ಅತ್ತಿಗೆ. ಖಾಲಿ ಬದುಕಿಗೆ ಆಸರೆಯಾದ ಈ ಹಸುಗಳಿಲ್ಲದೆ ಸಮಯ ಕಳೆಯುವುದು ಅವರಪಾಲಿಗೆ ಅಷ್ಟು ಸುಲಭವಿಲ್ಲ. ಪ್ರತಿ ಕ್ಷಣವೂ ದುಡಿಮೆಯನ್ನೇ ಬದುಕಾಗಿಸಿಕೊಂಡ ಅತ್ತಿಗೆಗೆ ಎಲ್ಲಿ ಹೋದರು ನೆನಪು ‘‘ತನ್ನ ಹಸುಗಳದ್ದೇ...’’. ಅಮೆರಿಕದಲ್ಲಿ ಮಗನ ಜೊತೆಗೆ ಇರಲು ಹೋದವರು ‘‘ನನ್ನ ಹಸುಗಳನ್ನು ಬಿಟ್ಟು ತುಂಬ ಸಮಯವಾಯಿತು’’ ಚಿಂತೆ ಮಾಡುತ್ತಿದ್ದರು. ಹಜ್ಜ್‌ಗೆಂದು ಹೋದವರಿಗೂ ಹಸುಗಳದೇ ನೆನಪು. ಹೀಗಿರುವಾಗ ಅತ್ತಿಗೆ ತನ್ನ ಹಟ್ಟಿಯನ್ನು ಮುಚ್ಚುತ್ತಾರೆ ಎನ್ನುವುದನ್ನು ನನಗೆ ಕಲ್ಪಿಸುವುದಕ್ಕೂ ಸಾಧ್ಯವಿಲ್ಲ.

Saturday, May 4, 2013

ಡಾಕ್ಟರ್ ಮತ್ತು ಇತರ ಕತೆಗಳು

 ಗೆಳೆಯ
ಅವನು ನನ್ನ ಆತ್ಮೀಯ ಗೆಳೆಯ.
ತನ್ನ ಇನ್ನೊಬ್ಬ ಗೆಳೆಯನಿಗೆ ನನ್ನನ್ನು ಪರಿಚಯಿಸಿದ ‘‘ಇವನು ನನ್ನ ಆತ್ಮೀಯ ಗೆಳೆಯ. ಮುಸ್ಲಿಮನಾದರೂ ಎಲ್ಲ ಮುಸ್ಲಿಮರಂತಲ್ಲ. ತುಂಬಾ ಒಳ್ಳೆಯವನು’’

ಜಪ್ತಿ
ಬ್ಯಾಂಕ್‌ನಿಂದ ರೈತನಿಗೆ ಜಪ್ತಿ ನೋಟಿಸ್ ಬಂತು.
ಅಲ್ಲಿ ಜಪ್ತಿ ಮಾಡುವುದಕ್ಕೆ ರೈತನ ಮಾನ ಮರ್ಯಾದೆ, ಗೌರವ ಬಿಟ್ಟು ಬೇರೇನೂ ಇರಲಿಲ್ಲ.
ಬ್ಯಾಂಕ್‌ನಿಂದ ಬಂದವರು ಅದನ್ನೇ ಜಪ್ತಿ ಮಾಡಿದರು.
ರೈತ ಕುಟುಂಬ ಸಹಿತ ಆತ್ಮಹತ್ಯೆ ಮಾಡಿಕೊಂಡ.

ಡಾಕ್ಟರ್
ಪ್ರತಿ ದಿನ ಆ ತರುಣ ಡಾಕ್ಟರ್‌ನ್ನು ನೋಡಲು ಅವಳು ಬರುತ್ತಿದ್ದಳು.
ಡಾಕ್ಟರ್ ಎದೆಗೆ ಸ್ಕೆತೋಸ್ಕೋಪ್ ಇಟ್ಟು, ನಿಮಗೆ ಏನೂ ಆಗಿಲ್ಲ ಎಂದು ಹೇಳುತ್ತಿದ್ದರು.
ಒಂದು ದಿನ ಡಾಕ್ಟರ್ ಸ್ಕೆತೋಸ್ಕೋಪ್‌ನ್ನು ಅವಳ ಎದೆಗೆ ಒತ್ತಿ ಅವಳನ್ನು ನೋಡಿದರು.
ಸ್ಕೆತೋಸ್ಕೋಪ್ ಹೇಳದ್ದನ್ನು ಅವಳ ಕಣ್ಣಿನ ಮೂಲಕ ಅವರು ಕೇಳಿಸಿಕೊಂಡರು.
‘‘ಡಾಕ್ಟರ್, ಏನಾದರೂ ಗೊತ್ತಾಯಿತಾ?’’
‘‘ಗೊತ್ತಾಯಿತು...ಹೃದಯದ ಸಮಸ್ಯೆ ಕಣಮ್ಮಾ...’’ ಎಂದು ನಕ್ಕರು.

ಆಸೆ
ಚುನಾವಣೆ. ಹೇಳುತ್ತಿದ್ದ ‘‘ಊರಿನ ಸೇವೆ ಮಾಡಬೇಕು ಎನ್ನೋದು ನನ್ನ ಆಸೆ. ನನ್ನನ್ನು ಗೆಲ್ಲಿಸಿ’’
ಅವನನ್ನು ಸೋಲಿಸಿ ಅವನ ಆಸೆಯನ್ನು ಈಡೇರಿಸಿದರು.

ಕಕ್ಕಸು

ಮನೆಗೆ ಬಂದರೆ ಕಕ್ಕಸು ಬ್ಲಾಕ್ ಆಗಿತ್ತು.
ತಕ್ಷಣ ಅವನಿಗೆ ಊರ ದಲಿತರ ನೆನಪಾಯಿತು.
ಬೆಳ್ಳಂಬೆಳಗ್ಗೆ ಎದ್ದು ದಲಿತರ ಕೇರಿಗೆ ಹೊರಟ. ದಲಿತನೊಬ್ಬನಿಗೆ ಅಡ್ವಾನ್ಸ್ ಕೊಟ್ಟು ಮರಳಿ ಬರುವ ದಾರಿಯಲ್ಲಿ ಯಾರೋ ಮಾಡಿದ ಹೇಲನ್ನು ತುಳಿದ. ಅಷ್ಟಕ್ಕೇ ಅವನು ಬಸಬಸನೆ ವಾಂತಿ ಮಾಡಿಕೊಳ್ಳ ತೊಡಗಿದ.

ಸೇಡು
ಮತ ಹಾಕುತ್ತೇನೆಂದು ರಾಜಕಾರಣಿಯಿಂದ ನೂರು ರೂ. ಇಸ್ಕೊಂಡ ರೈತ. ಮತ ಹಾಕದೆ ಮನೆಯಲ್ಲೇ ಉಳಿದುಕೊಂಡ.
ಭರವಸೆಕೊಟ್ಟು ಮೋಸ ಮಾಡಿದ ರಾಜಕಾರಣಿಗಳಿಗೆ ಪ್ರತಿ ಮೋಸ ಮಾಡಿದ ತೃಪ್ತಿ ಅವನದು.

ಕಾಯಿಲೆ
ಪುಟ್ಟೂರು ಎನ್ನುವುದೊಂದು ಊರು.
ಆ ಊರಿನ ಸರಕಾರಿ ಆಸ್ಪತ್ರೆಗೆ ತರುಣಿ ವೈದ್ಯೆಯೊಬ್ಬಳು ಆಗಮಿಸಿದರು.
ಅಂದಿನಿಂದ ಊರಿನ ಯುವಕರಿಗೆಲ್ಲ ನಿಗೂಢ ಜ್ವರ ಕಾಡತೊಡಗಿದವು.
ಪತ್ರಿಕೆಗಳಲ್ಲಿ ವರದಿ ಬಂದವು. ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು.
ವಿಧಾನಸಭೆಯಲ್ಲಿ ಚರ್ಚೆಯಾಯಿತು. ಆ ಜ್ವರವನ್ನು ಪುಟ್ಟೂರು ಜ್ವರ ಎಂದೇ ಕರೆಯಲಾಯಿತು.
ಸರಿ, ತನಿಖೆಗೆ ತಜ್ಞರನ್ನು ಪುಟ್ಟೂರಿಗೆ ಕಳುಹಿಸಲಾಯಿತು.
ಒಂದು ತಿಂಗಳ ತನಿಖೆಯ ಬಳಿಕ ತಜ್ಞರು ‘‘ಸರಕಾರಿ ವೈದ್ಯೆಯನ್ನು ಬೇರೆ ಊರಿಗೆ ವರ್ಗಾವಣೆ ಮಾಡಲು’’ ಶಿಫಾರಸು ನೀಡಿದರು.