Wednesday, January 18, 2012

ದರೋಡೆ!

ಮಲ್ಟಿಪ್ಲೆಕ್ಸ್‌ನಲ್ಲಿ ಸಿನಿಮಾ ನೋಡಲು ಹೋದೆ.
‘‘ಟಿಕೆಟ್ ಬೆಲೆ 200’’ ಎಂದು ಆಕೆ ಇಂಗ್ಲಿಷ್‌ನಲ್ಲಿ ಹೇಳಿದಳು.
ನಗುತ್ತಾ ದುಡ್ಡು ಕೊಟ್ಟು, ನಾನೇ ಆಕೆಗೆ ‘‘ಥ್ಯಾಂಕ್ಸ್’’ ಎಂದೆ.
ಇಂಟರ್‌ವೆಲ್.
ಒಂದು ಟೀ ಕುಡಿದೆ. ‘‘ಎಷ್ಟು?’’ ಎಂದು ಕೇಳಿದೆ
‘‘40 ರೂ.’’ ಎಂದ.
ಜೋಳಪುರಿ ತೆಗೆದುಕೊಂಡೆ.
ಎಷ್ಟು ಎಂದು ಕೇಳಿದೆ.
‘‘70 ರೂ.’’ ಎಂದು ಇಂಗ್ಲಿಷ್‌ನಲ್ಲಿ ನುಡಿದ.
ನಾನು ನಗು ನಗುತ್ತಾ ಅವನಿಗೆ ಪಾವತಿಸಿದೆ.
ಚಿತ್ರ ಮುಗಿದ ಬಳಿಕ, ರಸ್ತೆಗೆ ಬಂದೆ.
ಆಟೋದವನನ್ನು ಕರೆದೆ.
ಮನೆ ತನಕ ಬಿಟ್ಟ.
ಮೀಟರ್ 28 ರೂ. ತೋರಿಸುತ್ತಿತ್ತು.
ಎರಡು ರೂ. ಚಿಲ್ಲರೆ ಇಲ್ಲ ಎನ್ನುತ್ತಿದ್ದಾನೆ.
ಈ ಆಟೋದವರ ನಾಟಕ ನನಗೆ ಚೆನ್ನಾಗಿ ಗೊತ್ತು
‘‘ಚಿಲ್ಲರೆ ಇಲ್ಲ ಅಂದರೆ ಯಾಕೆ ಆಟೋ ಇಟ್ಟಿದ್ದೀಯ?’’
ನಾನು ನನ್ನ ಹಕ್ಕಿಗಾಗಿ ಹೋರಾಡ ತೊಡಗಿದೆ.
ಪ್ರಶ್ನೆ 2 ರೂಪಾಯಿಯದ್ದಲ್ಲ. ಆಟೋ ಚಾಲಕರು ಮಾಡುತ್ತಿರುವ ದರೋಡೆಯದ್ದು..
ಕೊನೆಗೂ ಆತ ಯಾರಲ್ಲೋ  ಬೇಡಿ ಎರಡು ರೂ. ತಂದುಕೊಟ್ಟ.
ಒಂದು ದೊಡ್ಡ ದರೋಡೆಯಿಂದ ಪಾರಾದ ಸಂತಸ ನನಗೆ.
ವಿಸಿಲ್ ಹಾಕುತ್ತಾ ಮನೆಯ ಕಡೆ ನಡೆದೆ.

Tuesday, January 17, 2012

ಆತ್ಮಗಳೆಲ್ಲಿ?

ಅವನು ಚೂಡಿಧಾರಾಗಳ ಅಂಗಡಿಯ ಮುಂದೆ ನಿಂತಿದ್ದ
ಸಾಲು ಸಾಲಾಗಿ ಚೂಡಿಧಾರಗಳನ್ನು ನೇತು ಹಾಕಲಾಗಿತ್ತು.
ಎಲ್ಲವನ್ನು ಒಂದೊಂದಾಗಿ ಸ್ಪರ್ಶಿಸುತ್ತಾ ಬಂದ
ಅಂಗಡಿಯಾತ ಅನುಮಾನದಿಂದ ಕೇಳಿದ ‘‘ಏನು ಬೇಕು?’’
ಅವನು ಕಂಪಿಸುವ ಧ್ವನಿಯಲ್ಲಿ ಉತ್ತರಿಸಿದ ‘‘ಇದರೊಳಗಿನ ಆತ್ಮಗಳು ಎಲ್ಲಿ, ಹೇಗೆ ಹಾರಿಹೋದವು? ಎಂದು ನೋಡುತ್ತಿದ್ದೇನೆ’’

ವಿವೇಕ್ ಶಾನುಭಾಗ್ ಕಂಡ ಉದ್ಯಾನವೊಂದರ ಕನಸು


ವಿವೇಕ್ ಶಾನುಭಾಗ್ ಅವರ ಸಂಪಾದಕತ್ವದ ‘ದೇಶಕಾಲ’ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಒಂದು ಪುಟ್ಟ ಬರಹ.

ನನ್ನ ಕೈಗೆ ಮೊತ್ತ ಮೊದಲ ‘ದೇಶಕಾಲ’ ಸಂಚಿಕೆ ಸಿಕ್ಕಿದಾಗ ನಾನು ದಂಗಾಗಿದ್ದೆ. ನನ್ನಂಥವರು ‘ಕೈ ತೊಳೆದು’ ಮುಟ್ಟಬೇ
ಕಾದಷ್ಟು ಚೆಂದವಾಗಿತ್ತು, ಮುದ್ದಾಗಿತ್ತು, ಅದ್ದೂರಿಯಾಗಿತ್ತು ಮತ್ತು ಶ್ರೀಮಂತವಾಗಿತ್ತು. ಒಂದು ರೀತಿಯಲ್ಲಿ ಮೊತ್ತ ಮೊದಲ ಬಾರಿ ಮಾರ್ಬಲ್ ಹಾಸಿದ ಮನೆ(ಸಾಹಿತ್ಯದ)ಯೊಳಗೆ ಕಾಲಿಟ್ಟ ಸ್ಥಿತಿ ನನ್ನದು. ಪುಟಪುಟಗಳನ್ನು ಬಿಡಿಸುವಾಗ ಸಣ್ಣದೊಂದು ಅಳುಕು. ಒಳ್ಳ ಕೋಣೆಯ ವಿನ್ಯಾಸ, ಲೈಬ್ರರಿ ರೂಮ್, ಡೈನಿಂಗ್ ಹಾಲ್, ಬಾಲ್ಕನಿ...ಹೀಗೆ ಪ್ರತಿಯೊಂದು ಒಪ್ಪ ಓರಣ, ಅಚ್ಚುಕಟ್ಟು. ಹಾಗೆಯೇ ಅದರೊಳಗಿರುವ ಶ್ರೀಮಂತ ಬರಹಗಳನ್ನು, ಅದಕ್ಕೆ ಮಾಡಿರುವ ವಿನ್ಯಾಸಗಳನ್ನು ನೋಡಿದಾಗ....ಇದೆಲ್ಲ ಕನ್ನಡದಲ್ಲಿ ಸಾಧ್ಯವೆ ಅನ್ನಿಸಿತ್ತು. ಆದರೆ ಅದೇ ಸಂದರ್ಭದಲ್ಲಿ ಒಂದು ಸಂಚಿಕೆಗೆ ನೂರು ರೂಪಾಯಿಯೆ ಎಂದು ನಿಟ್ಟುಸಿರು ಚೆಲ್ಲಿದ್ದೆ. ಆದರೂ ಕೊಂಡುಕೊಂಡಿದ್ದೆ. ಈಚಿನ ತಲೆಮಾರಿಗೆ ವಿವೇಕ್ ಶಾನುಭಾಗ್, ಜಯಂತ್ ಕಾಯ್ಕಿಣಿ, ನಟರಾಜ್ ಹುಳಿಯಾರ್, ಮೊಗಳ್ಳಿ ಮೊದಲಾದ ತಲೆಗಳು ತೀರಾ ಚಿರಪರಿಚಿತ. ಜಯಂತ್‌ರ ಕತೆಗಳಂತೆಯೇ ವಿವೇಕ್ ಶಾನುಭಾಗ್ ಅವರ ಕತೆಗಳೂ ನನಗೆ ಇಷ್ಟ. ಇದೀಗ ಅವರು ಒಂದು ಪತ್ರಿಕೆಯ ನೇತೃತ್ವವಹಿಸಿದ್ದಾರೆನ್ನುವುದು ನನ್ನಲ್ಲಿ ನಿಜಕ್ಕೂ ಕುತೂಹಲವನ್ನು ಹುಟ್ಟಿಸಿತ್ತು.ಚಂದ್ರಶೇಖರ ಪಾಟೀಲರ ‘ಸಂಕ್ರಮಣ’ ಒಂದು ಕಾಲದಲ್ಲಿ ಹುಟ್ಟಿಸಿ ಹಾಕಿದ ಸಾಹಿತ್ಯಕ ಚರ್ಚೆಗಳನ್ನು ನಾನು ಅರಿತಿದ್ದೇನೆ. ಓದಿದ್ದೇನೆ. ರುಜುವಾತು ಕೂಡ ಹಲವು ಕಾರಣಗಳಿಗಾಗಿ ನನ್ನೊಳಗೆ ಉಳಿದುಕೊಂಡಿದೆ. ಇದೀಗ ಹೊಸತಲೆಮಾರಿನ ತಲ್ಲಣಗಳನ್ನು, ಆಲೋಚನೆಗಳನ್ನು ಹಿಡಿದಿಡುವಲ್ಲಿ ಈ ಪತ್ರಿಕೆಗೆ ಖಂಡಿತವಾಗಿಯೂ ಸಾಧ್ಯವಿದೆ ಅನ್ನಿಸಿತ್ತು. ಆದುದರಿಂದಲೇ ಪ್ರತಿ ಸಂಚಿಕೆಗಾಗಿ ಕಾದು ಕೊಂಡುಕೊಂಡಿದ್ದೇನೆ. ಕೆಲವೊಮ್ಮೆ ‘ಗೆಳೆಯರಿಂದಲೂ ಪಡೆದು’ ಓದಿದ್ದೇನೆ.
 ಕೆಲವು ಸಂಚಿಕೆಗಳ ಬಳಿಕ ನನ್ನೊಳಗೆ ದೇಶಕಾಲದ ಕುರಿತಂತೆ ಸಣ್ಣದೊಂದು ಅಸಹನೆ ಸಿಡಿಯತೊಡಗಿತು. ಜಗತ್ತಿನ ಶ್ರೇಷ್ಟವಾದುದೆಲ್ಲ ತನ್ನಲ್ಲಿರಬೇಕೆಂಬ ಹಟ ಈ ಪತ್ರಿಕೆಯೊಳಗಿದೆ ಅನ್ನಿಸಿತು. ಶ್ರೀಮಂತನೊಬ್ಬನ ಮನೆಯ ಪಳಪಳ ಹೊಳೆಯುವ ಶೋಕೇಸ್‌ನಂತೆ ಭಾಸವಾಗತೊಡಗಿತು. ಈ ಪತ್ರಿಕೆಗೆ ಒಂದು ಪ್ರತಿ ಆಲೋಚನೆಯನ್ನು ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಗೊತ್ತಾಗತೊಡಗಿತು. ಅದಕ್ಕೆ ಕಾರಣವೂ ಇದೆ. ತಿಳಿದೋ ತಿಳಿಯದೆಯೋ ಈ ‘ದೇಶ ಕಾಲ’ ತನ್ನ ಓದುಗರನ್ನು ಮೊದಲೇ ನಿರ್ಧರಿಸಿಟ್ಟುಕೊಂಡಿದೆ. ತನ್ನಲ್ಲಿ ಪ್ರಕಟವಾಗಬಹುದಾದ ಬರಹಗಳನ್ನೂ ಮೊದಲೇ ನಿರ್ಧರಿಸಿಟ್ಟುಕೊಂಡಿದೆ. ಅಲ್ಲಿ ಯಾವುದೂ ಹೊಸದಾಗಿ ಘಟಿಸುತ್ತಿಲ್ಲ. ಕಳಪೆಯೆನ್ನುವುದು ಇರಲೇ ಬಾರದು ಎಂದಾಗ ಹುಟ್ಟುವ ಸಮಸ್ಯೆಯಿದು.

ಈ ಸಂದರ್ಭದಲ್ಲಿ ನಾನು ‘ದೇಶಕಾಲ’ದ ಜೊತೆಗೆ ‘ಸಂಕ್ರಮಣ’ವನ್ನು ಇಡಲು ಇಷ್ಟ ಪಡುತ್ತೇನೆ. ಚಂಪಾ ‘ಸಂಕ್ರಮಣ’ವನ್ನು ಸಾಧ್ಯವಾದಷ್ಟು ಜನರ ಬಳಿಗೆ ಕೊಂಡೊಯ್ಯಲು ಪ್ರಯತ್ನ ಪಟ್ಟರು. ಚಂದಾ ಸಂಗ್ರಹಿಸುವ ಅನಿವಾರ್ಯತೆ ಅವರಿಗಿದ್ದುದರಿಂದ ಅವರು ಯಾವುದೇ ವರ್ಚಸ್ಸು ಇತ್ಯಾದಿಗಳಿಗೆ ಕಟ್ಟು ಬೀಳದೆ, ಪಕ್ಕಾ ಬ್ಯಾರಿಯೊಬ್ಬ ಸಂತೆಯಲ್ಲಿ ವ್ಯಾಪಾರ ನಡೆಸುವಂತೆ ಸಹಜವಾಗಿ ಸಂಕ್ರಮಣವನ್ನು ಸಾಹಿತ್ಯವಲಯದಲ್ಲಿ ನಡೆಸಿದರು. ಸಾಹಿತ್ಯ ಸಮ್ಮೇಳನದಲ್ಲಿ ಅಪರಿಚಿತರೊಂದಿಗೂ ಪರಿಚಿತರಂತೆ ಹಲ್ಲುಕಿರಿಯುತ್ತಾ, ಚಂದಾ ವಸೂಲಿ ಮಾಡುತ್ತಿದ್ದರು. ಸಾಹಿತಿಗಳು, ಶಿಕ್ಷಕರು, ವಿದ್ಯಾಥಿಗಳು, ಉದಯೋನ್ಮುಖ ಕವಿಗಳು, ಜೊತೆಗೆ ಚಿಂತಕರೂ ಬರೆದರು. ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಿದರು. ಒಂದು ರೀತಿ ಸಹಜವಾಗಿ ಅರಳುವ ಕಾಡಿನಂತೆ ಸಂಕ್ರಮಣ ಒಂದಾನೊಂದು ಕಾಲದಲ್ಲಿ ಓದುಗರಲ್ಲಿ ಹಬ್ಬತೊಡಗಿತು. ಅಲ್ಲಿ ಕಳಪೆ ಕಳೆಗಳು ಜಾಸ್ತಿಯಿರಬಹುದು ನಿಜ. ಆದರೆ ಅದರ ಜೊತೆಗೇ ಹೊಸ ಹೊಸ ವೈವಿಧ್ಯಗಳು ಸಂಕ್ರಮಣದ ಮೂಲಕ ಹುಟ್ಟಿಕೊಂಡವು. ತನ್ನಷ್ಟಕ್ಕೆ ಹುಟ್ಟಿ, ಸಾಯುವ ಗಿಡಮರಗಳಿದ್ದುದರಿಂದ ಸಂಕ್ರಮಣವನ್ನು ಕುಂಡದೊಳಗಿಟ್ಟು ಸಾಕುವ ಅನಿವಾರ್ಯತೆ ಚಂಪಾ ಅವರಿಗೆ ಒದಗಲಿಲ್ಲ. ಆದರೆ ಶಾನುಭಾಗ್ ಅರಲ್ಲಿ ಕಾಡು ಬೆಳೆಸುವ ಉದ್ದೇಶವಿರಲಿಲ್ಲ. ಕುಂಡದೊಳಗಿಟ್ಟು ಗಿಡಗಳನ್ನು ಸಾಕಿ ಒಂದು ಉದ್ಯಾನವನವನ್ನು ಮಾಡುವ ಪ್ರಯತ್ನ ಮಾಡಿದರು. ಸಂಜೆಯ ಹೊತ್ತು ಅವರದೇ ಬಳಗ, ಅವರದೇ ಆಲೋಚನೆ, ಅವರದೇ ಅಭಿರುಚಿ ಅಲ್ಲಿ ಉಸಿರಾಡತೊಡಗಿತು. ಕುಂಡದೊಳಗಿಟ್ಟು ಸಾಕಿದ ಗಿಡಗಳು ಬಹಳ ದುಬಾರಿ. ಅದನ್ನು ಸಹಜವಾಗಿ ಬಿಡುವಂತಿಲ್ಲ. ಪ್ರತಿದಿನ ಅದರೆಡೆಗೆ ಕಣ್ಣಾಯಿಸುತ್ತಿರಬೇಕು. ನೀರು ಹನಿಸುತ್ತಿರಬೇಕು. ತುಸು ಎತ್ತರ ಹುಲ್ಲು ಬೆಳೆದರೆ ಅಳತೆಗೋಲು ಇಟ್ಟು ತುದಿಗಳನ್ನು ಕತ್ತರಿಸಬೇಕು. ಉದ್ಯಾನವನವೆಂದರೆ ಸುಮ್ಮಗಾಗುವುದಿಲ್ಲ. ಅಲ್ಲಿ ಒಂದು ಗಿಡ ಸತ್ತರೂ, ಒಂದು ಹೊಸ ಗಿಡ ಬಂದರೂ ಲಾಭ-ನಷ್ಟಗಳ ವಿಷಯವಾಗುತ್ತದೆ. ಆದರೆ ಸಹಜವಾಗಿ ಹರಡಿದ ಕಾಡುಗಳಲ್ಲಿ ಆ ಸಮಸ್ಯೆಯಿಲ್ಲ. ಒಂದು ಸತ್ತರೆ ಹತ್ತು ಹುಟ್ಟಿರುತ್ತವೆ. ಅಲ್ಲಿ ಬರೇ ನೋಡುವುದಕ್ಕಷ್ಟೇ ಅಲ್ಲ, ಅಡ್ಡಾಡಬಹುದು, ಕಾಯಿ ಉದುರಿಸಬಹುದು, ಮರ ಹತ್ತಬಹುದು. ಶಿಸ್ತಿನ ಚೌಕಟ್ಟು ಅಲ್ಲಿಲ್ಲ.

ಬಹುಶಃ ಸಂಕ್ರಮಣ ಮತ್ತು ದೇಶಕಾಲದ ನಡುವೆ ಇರುವ ಮುಖ್ಯ ವ್ಯತ್ಯಾಸ ಇದು. ಒಂದು ಸಹಜವಾಗಿ ಹರಡಿಕೊಂಡ ಕಾಡಾದರೆ ಇನ್ನೊಂದು ಕಷ್ಟಪಟ್ಟು, ಶಿಸ್ತಿನಿಂದ ಬೆಳೆಸಿದ ಉದ್ಯಾನವನ. ಒಂದು ಭೂಮಿಯಿಂದ ಸಹಜವಾಗಿ ಸಿಡಿದೆದ್ದ ಮೊಳಕೆಯ ಗಿಡವಾದರೆ, ಇನ್ನೊಂದು ಹೂಕುಂಡದಲ್ಲಿ ಸಂಗ್ರಹಿಸಿಟ್ಟ ಗಿಡ. ಶ್ರಮದ ಮಟ್ಟಿಗೆ ಶಾನುಭಾಗ್ ತುಂಬಾ ಬೆವರು ಸುರಿಸಿದ್ದಾರೆ. ದೇಶಕಾಲ ಇರುವಷ್ಟು ದಿನ ಒಂದಿಷ್ಟು ಕನಸು ಕಂಡಿದ್ದಾರೆ. ಏನೋ ಕಟ್ಟಬೇಕೆಂದು ಪ್ರಯತ್ನಿಸಿ ಸುಸ್ತಾಗಿದ್ದಾರೆ. ಆದರೆ ಅವರ ದೇಶಕಾಲದ ಪ್ರಯತ್ನವನ್ನು ಯಾವ ಕಾರಣಕ್ಕೂ ನಿರಾಕರಿಸುವಂತಿಲ್ಲ. ಅದು ಸದಾ ಉಳಿಯುವಂತಹದ್ದು. ಅಪರೂಪದ ಕೆಲವು ಹೂವುಗಿಡಗಳನ್ನು ಎಲ್ಲೆಲ್ಲಿಂದಲೋ ತಂದು ತನ್ನ ಉದ್ಯಾನವನದಲ್ಲಿ ನಟ್ಟು, ಅದರಲ್ಲಿ ಒಂದು ಸಂಜೆಯನ್ನು ಕಳೆಯಲು ನಮಗೂ ಅವಕಾಶ ನೀಡಿದ್ದಕ್ಕಾಗಿ ವಿವೇಕ್ ಶಾನುಭಾಗರಿಗೆ ಮತ್ತು ಅವರ ಬಳಗಕ್ಕೆ ಹೃದಯ ತುಂಬಿದ ಕೃತಜ್ಞತೆಗಳು. ಇದೀಗ ದೇಶಕಾಲ ತಾತ್ಕಾಲಿಕವಾಗಿ ನಿಂತಿರಬಹುದು. ಹೊಸ ಉತ್ಸಾಹ, ಸ್ಫೂರ್ತಿ, ಜೀವಂತಿಕೆಯೊಂದಿಗೆ ಶಾನುಭಾಗ್ ಮತ್ತೆ ಬಂದೇ ಬರುತ್ತಾರೆ. ಕನ್ನಡದ ಎಲ್ಲ ಸಾಹಿತ್ಯ ಪ್ರಿಯರು ಅವರ ನಿರೀಕ್ಷೆಯಲ್ಲಿದ್ದಾರೆ.

Monday, January 16, 2012

ದೃಷ್ಟಿ




ಆತ ಅಪಘಾತವೊಂದರಲ್ಲಿ ತನ್ನೆರಡೂ ಕಣ್ಣುಗಳನ್ನು ಕಳೆದುಕೊಂಡ.
ಅವನು ಪ್ರೀತಿಸುತ್ತಿದ್ದ ಗೆಳತಿ ಅವನಿಂದ ದೂರವಾದಳು.
ಗೆಳೆಯರೂ ಒಬ್ಬೊಬ್ಬರಾಗಿ ದೂರ ಸರಿದರು.
ಹುಡುಗ ತನಗೆ ತಾನೇ ಜೋರಾಗಿ ಹೇಳಿಕೊಂಡ
‘‘ಕಣ್ಣಿದ್ದಾಗ ನನಗೇನು ಕಾಣುತ್ತಿರಲಿಲ್ಲ. ಈ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ. ಕೃತಜ್ಞತೆಗಳು ದೇವರೇ.....’’

Thursday, January 12, 2012

ಹುಚ್ಚ ಮತ್ತು ಇತರ ಕತೆಗಳು

ಹುಚ್ಚ
ಅವನೊಬ್ಬ ಹುಚ್ಚ. ಅಥವಾ ಅವನನ್ನು ಹಾಗೆಂದು ಕರೆಯುತ್ತಿದ್ದರು. 
ತನ್ನಷ್ಟಕ್ಕೆ ಮಾತನಾಡುತ್ತಿದ್ದ. ತನಗೆ ತಾನೆ ನಗುತ್ತಿದ್ದ. ಎಲೆ, ಸೊಪ್ಪುಗಳನ್ನು ವಿಚಿತ್ರವಾಗಿ ಅಚ್ಚರಿಯಿಂದ ನೋಡುತ್ತಿದ್ದ. ಮಣ್ಣನ್ನು ಏನೋ ಅಮೂಲ್ಯ ವಸ್ತುವೋ ಎಂಬಂತೆ ಪರೀಕ್ಷಿಸುತ್ತಿದ್ದ. ಬಟ್ಟೆಗಳು ಕೊಳಗಾಗಿದ್ದವು. ಹರಿದಿದ್ದವು. ಗಡ್ಡ ಕೂದಲನ್ನು ತೆಗೆಯದೆ ವರ್ಷ ಕಳೆದಿತ್ತು. ಅಂತಹ ಹುಚ್ಚನ ಜೊತೆಗೆ ಸಂತ ಪ್ರತಿ ದಿನ ಒಂದೆರಡು ಗಂಟೆ ಕಳೆಯುತ್ತಿದ್ದ. ಹುಚ್ಚನ ಹುಚ್ಚು ಮಾತುಗಳನ್ನು ಕಿವಿಗೊಟ್ಟು ಕೇಳುತ್ತಿದ್ದ. ಕೆಲವುಗಳಿಗೆ ಉತ್ತರಿಸಲು ಪ್ರಯತ್ನಿಸುತ್ತಿದ್ದ. ಅಧ್ಯಾತ್ಮದ ಬಗ್ಗೆಯೂ ಚರ್ಚಿಸುತ್ತಿದ್ದ. ಇದು ಶಿಷ್ಯರಿಗೆಲ್ಲ ಅಸಹನೀಯವೆನ್ನಿಸಿತು. ಆದರೆ ಸಂತನನ್ನು ಪ್ರಶ್ನಿಸುವ ಧೈರ್ಯ ಸಾಲದೆ ಸುಮ್ಮಗಿದ್ದರು.
ಒಂದು ದಿನ ಸಂತ ಹುಚ್ಚನ ಜೊತೆ ಕಳೆದು ಆಶ್ರಮದಲ್ಲಿ ಮಂಕಾಗಿ ಕುಳಿತಿದ್ದ. ಶಿಷ್ಯರು ಕೇಳಿದರು. ‘‘ಏನಾಯಿತು ಗುರುಗಳೇ?’’
ಸಂತ ಆಕಾಶ ನೋಡಿ ಉತ್ತರಿಸಿದ ‘‘ನಾನು ಅವನಂತಾಗಲು ಇನ್ನೂ ಅದೆಷ್ಟು ಸಾಧನೆ ಮಾಡಬೇಕೋ?’’

ಕಲಿಕೆ
‘‘ಗುರುಗಳೇ...ನಾನು ಈ ಆಶ್ರಮಕ್ಕೆ ಸೇರಿ ಇಂದಿಗೆ ಒಂದು ವರ್ಷವಾಯಿತು. ನೀವೇಕೆ ಏನನ್ನೂ ಕಲಿಸುತ್ತಿಲ್ಲ?’’
‘‘ನನ್ನದೂ ಅದೇ ಪ್ರಶ್ನೆ. ಈ ಆಶ್ರಮಕ್ಕೆ ಸೇರಿ ನೀನು ಒಂದು ವರ್ಷವಾಯಿತು. ನೀನೇಕೆ ಏನೂ ಕಲಿಯುತ್ತಿಲ್ಲ?’’ ಸಂತ ಮರು ಪ್ರಶ್ನಿಸಿದ.?

ದರೋಡೆ
ಕಳ್ಳ ಮದುವೆ ಮನೆಗೆ ನುಗ್ಗಿದ.
ಹಣದ ತಿಜೋರಿಯ ಕೋಣೆ ಹೊಕ್ಕಾಗ ಅಲ್ಲಿ ದಂಪತಿಗಳು ಬಂದು ಬಿಟ್ಟರು.
ಬಂದವರು ಮದುವೆ ಹೆಣ್ಣಿನ ತಂದೆ ತಾಯಿ.
ಅವರಿಬ್ಬರು ತುಂಬಾ ಹೊತ್ತು ಪರಸ್ಪರ ಮಾತನಾಡಿ, ಬಳಿಕ ಕಣ್ಣೊರೆಸುತ್ತಾ ಅಲ್ಲಿಂದ ತೆರಳಿದರು.
ಕಳ್ಳ ತನಗೆ ತಾನೆ ನಿರಾಸೆಯಿಂದ ನುಡಿದ ‘‘ಈ ಮನೆಯನ್ನು ಈಗಾಗಲೇ ದರೋಡೆಕೋರರು ದೋಚಿ ಬಿಟ್ಟಾಗಿದೆ’’

ಶುಚಿ
ದಲಿತನೊಬ್ಬ ದೇವಸ್ಥಾನದ ಆವರಣವನ್ನು ಪ್ರವೇಶಿಸುತ್ತಿದ್ದ.
ಪುರೋಹಿತ ಆತನನ್ನು ತಡೆದ ‘‘ನಿಲ್ಲು. ನೀನು ಪ್ರವೇಶಿಸುವಂತಿಲ್ಲ. ಅಪವಿತ್ರವಾಗುತ್ತದೆ’’
ದಲಿತ ವಿನೀತನಾಗಿ ನುಡಿದ ‘‘ನಾನು ದೇವಸ್ಥಾನದ ಆವರಣವನ್ನು ಶುಚಿಗೊಳಿಸುವುದಕ್ಕೆ ಬಂದಿದ್ದೇನೆ...’’
‘‘ಓಹೋ..ಶುಚಿಗೊಳಿಸುವುದಕ್ಕೆ ಬಂದಿದ್ದೀಯ? ಹಾಗಾದರೆ ಹೋಗು....ಬೇಗ ಕೆಲಸ ಮುಗಿಸು....’’

ಊರು
‘‘ಗುರುಗಳೇ ಕನಸುಗಳಿಲ್ಲದ ಊರಿದೆಯೆ?’’
‘‘ಇದೆ. ಆ ಊರಿಗೆ ಸ್ಮಶಾನ ಎಂದು ಹೆಸರು’’

ಅನ್ನ
‘‘ಕೃತಘ್ನ, ನನ್ನ ಅನ್ನ ತಿಂದು ನೀನು ಬೆಳೆದಿದ್ದೀಯ, ಅದನ್ನು ಮರೆತೆಯ?’’
ಅವನು ಅಬ್ಬರಿಸಿದ.
‘‘ನಿಮ್ಮ ಅನ್ನವನ್ನು ನಾನು ತಿಂದದ್ದು ನಿಜವಾದರೆ ನೀವು ಹುಲ್ಲು ತಿಂದು ಬೆಳೆದಿರಾ?’’
ಅವನು ತಣ್ಣಗೆ ಮರು ಪ್ರಶ್ನಿಸಿದ.

ಪುನರ್ಜನ್ಮ
‘‘ನಿಮಗೆ ಪುನರ್‌ಜನ್ಮದಲ್ಲಿ ನಂಬಿಕೆ ಇದೆಯೆ?’’ ಶಿಷ್ಯ ಕೇಳಿದ.
‘‘ಇದೆ. ಮನುಷ್ಯ ತಾಯಿಯ ಹೊಟ್ಟೆಯಿಂದ ಒಮ್ಮೆ ಹುಟ್ಟಿದರೆ ಪರಿಸ್ಥಿತಿಗಳ ಹೊಟ್ಟೆಯಿಂದ ಪ್ರತಿ ಬಾರಿ ಹುಟ್ಟುತ್ತಾ, ಸಾಯುತ್ತಾ ಇರುತ್ತಾನೆ. ನಾನು ಈಗಾಗಲೇ ಹಲವು ಬಾರಿ ಹುಟ್ಟಿ, ಹಲವು ಬಾರಿ ಸತ್ತಿದ್ದೇನೆ’’ ಸಂತ ಉತ್ತರಿಸಿದ.

Thursday, January 5, 2012

ಪಾತುಮ್ಮಜ್ಜಿಯ ದಾಹ!

ರಾತ್ರಿ ಹನ್ನೊಂದು ಗಂಟೆ ಇರಬಹುದು. ಅಮ್ಮ, ತಂಗಿಯರೆಲ್ಲ ಒಳಗೆ ಹೋಗಿದ್ದರು. ಕರೆಂಟ್ ಇಲ್ಲದ ಕಾರಣ ಚಿಮಿಣಿ ದೀಪ ಹಚ್ಚಿಟ್ಟು ನಾನು ಅದೇನೋ ಓದುತ್ತಿದ್ದೆ. ಹೊರಗೆ ಧಾರಾಕಾರ ಮಳೆ. ಅಂಗಳದ ತುಂಬಾ ನೀರು. ಆಗಲೇ ಇದಬೇಕು.... ಆ ಒದ್ದೆ ರಾತ್ರಿಯನ್ನು ಈಜಿಕೊಂಡು ಬಂದ ಕರೆ ನನ್ನನ್ನು ಬೆಚ್ಚಿ ಬೀಳಿಸಿದ್ದು. ಯಾರೋ ನನ್ನ ಹೆಸರಿಡಿದು ಕರೆಯುತ್ತಿದ್ದರು. ಬಾಗಿಲು ತಟ್ಟಿದ ಸದ್ದು ಬೇರೆ. ಒಳ ಹೊರಗೆ ಸುಳಿದಾಡುತ್ತಿದ್ದ ಚಳಿಗಾಳಿಗೆ ಚಿಮಿಣಿ ದೀಪ ಚಡಪಡಿಸುತ್ತಿತ್ತು. ನನ್ನಾಳದಲ್ಲಿ ಒಂದು ಬಗೆಯ ಭಯ ಭುಗ್ಗೆಂದು ಎದ್ದು, ತಳ ಸೇರಿತು. ಹೋಗಿ ಬಾಗಿಲು ತೆರೆದರೆ ಕೆಳಗಿನ ಅದ್ದು ಚಳಿಯೋ, ಭಯವೋ ನಡುಗುತ್ತಾ ನಿಂತಿದ್ದ. ಕೊಡೆ ಬಿಡಿಸಿ ನಿಂತಿದ್ದರೂ ಅವನ ಮುಖ, ಮೈಯೆಲ್ಲ ಒದ್ದೆಯಾಗಿತ್ತು. ಅವನು ನನ್ನನ್ನು ಕಂಡದ್ದೇ ಒಂದೇ ಉಸಿರಿಗೆ ಹೇಳಿದ ‘‘ನೀರು ಬೇಕಾಗಿತ್ತು...ಝಂಝಂ ನೀರು ಬೇಕಾಗಿತ್ತು''
ಅವನ ಧ್ವನಿ ಕಂಪಿಸುತ್ತಿರುವ ರೀತಿಗೇ ನನಗೆಲ್ಲ ಅರ್ಥವಾಗಿ ಹೋಯಿತು. ಅದ್ದುವಿನ ಮುತ್ತಜ್ಜಿ ಪಾತುಮ್ಮಾದ ಸಾವಿನ ಅಂಚನ್ನು ತಲುಪಿದ್ದಾರೆ. ನನ್ನ ಝಂಝಂ ನೀರಿಗಾಗಿ ಆಕೆ ಕೊನೆಯ ಉಸಿರನ್ನು ಹೊರದಬ್ಬದೇ ಹಾಗೆ ಕಾಯುತ್ತಾ ಮಲಗಿದ್ದಾಳೆ.
ಪಾತುಮ್ಮಾದ ನಮ್ಮೂರಿನ ಅತಿ ಹಿರಿಯ ಜೀವ. ವಯಸ್ಸು ನೂರು ದಾಟಿರಬಹುದು. ಆ ಊರಿನ ಹೆಚ್ಚಿನ ತರುಣರನ್ನು ತಾಯಿಯ ಗರ್ಭದಿಂದ ಹೊರಗೆಳೆದದ್ದು, ಹುಟ್ಟಿದ ಮಗುವನ್ನು ನಲವತ್ತು ದಿನ ಮೀಯಿಸಿದ್ದು, ಸಣ್ಣ ಪುಟ್ಟ ತುಂಟ ರೋಗಗಳಿಂದ ಮಕ್ಕಳನ್ನು ತನ್ನ ಹಳ್ಳಿ ಮದ್ದಿನ ಮೂಲಕ ರಕ್ಷಿಸಿದ್ದು  ಇದೇ ಪಾತುಮ್ಮಾದ. ನಾನು ತಾಯಿಯ ಹೊಟ್ಟೆಯಿಂದ ನೇರವಾಗಿ ಪಾತುಮ್ಮನ ಬೊಗಸೆಗೆ ಬೀಳಲಿಲ್ಲವಂತೆ. ತಲೆಯನ್ನು ಉಲ್ಟಾ ಮಾಡಿ, ತಾಯಿಯ ಗರ್ಭದಿಂದ ಬರಲಾರೆ ಎಂದು ಹಟ ಹಿಡಿದಿದ್ದೆನಂತೆ. ಇದೇ ಪಾತುಮ್ಮಜ್ಜಿ ತನ್ನೆಲ್ಲ ಶ್ರಮದಿಂದ, ತಾಯಿಯ ಗರ್ಭವನ್ನು ನೀವಿ ನೀವಿ ತಲೆಯನ್ನು ಉಲ್ಟಾ ಮಾಡಿ, ಮೆಲ್ಲಗೆ ತಾಯಿಯ ಗರ್ಭದಿಂದ ಹೊರಗೆ ಜಾರಿಸಿದರಂತೆ.
‘‘ನಿನ್ನ ಹಟ ನನ್ನಲ್ಲಿ ತೋರಿಸಬೇಡ. ನೀನು ಗರ್ಭದೊಳಗೆ ಇದ್ದಾಗಲೇ ನಿನ್ನ ಆಟಕ್ಕೆ ಹೆದರಲಿಲ್ಲ. ಈಗ ಹೆದರುತ್ತೇನಾ... ಹೆಚ್ಚಿಗೆ ಮಾತನಾಡಿದರೆ ಮತ್ತೆ ತಲೆ ಉಲ್ಟಾ ಮಾಡಿ, ಅಲ್ಲಿಗೇ ವಾಪಸ್ ಕಳುಹಿಸಿಲಿಕ್ಕುಂಟು’’ ಎಂದು ಪಾತುಮ್ಮ ನನ್ನಲ್ಲಿ ಆಗಾಗ ಕೊಚ್ಚಿಕೊಳ್ಳುವುದಿತ್ತು.
ನನ್ನ ಹೊಕ್ಕಳು ಬಳ್ಳಿಯನ್ನು ಕತ್ತರಿಸಿದ್ದೂ ಆಕೆಯೇ ಅಂತೆ. ನಾನು ಅಳದೆ ಆಕೆಯನ್ನು ನೋಡಿ ನಕ್ಕೆನಂತೆ. ಅದು ನಿಜವೇ ಇರಬಹುದು. ಆಕೆ ನನ್ನ ನಲ್ವತ್ತು ದಿನ ಮೀಯಿಸಿದಳು. ಕೈ ಹಿಡಿದು ನಡೆಸಿದಳು. ರೋಗಗಳಿಂದ ರಕ್ಷಿಸಿದಳು. ಕತೆ ಹೇಳಿಕೊಟ್ಟಳು. ಪದ ಹಾಡಿ ಮಲಗಿಸಿದಳು. ಅಂತಹ ಅಜ್ಜಿಗಳಿಗೆಲ್ಲ ಅಜ್ಜಿಯೆನ್ನಬಹುದಾದ ಪಾತುಮ್ಮ ನಾಲ್ಕೆೃದು ತಿಂಗಳ ಹಿಂದೆ ನನ್ನ ಕೈಯನ್ನು ತನ್ನ ಕಂಪಿಸುವ ಕೈಗಳಲ್ಲಿ ತುಂಬಿ ಕೇಳಿದ್ದಳು. ‘ಮಗನೇ ... ನಾನು ಸಾಯುವಾಗ ಝಂಝಂ ನೀರು ಕುಡಿದು ಸಾಯಬೇಕು ಎಂದು ಆಸೆ. ಎಲ್ಲಿಂದಾದರೂ ಝಂಝಂ ನೀರು ತರಿಸಿಟ್ಟುಕೋ... ಸಾಯುವ ಮೊದಲು ನನ್ನ ಪುಳ್ಳಿ ಅದ್ದುವನ್ನು ಕಳಿಸುತ್ತೇನೆ...’’ ಇದೀಗ ಈ ಹೊತ್ತಲ್ಲದ ಹೊತ್ತಿನಲ್ಲಿ ಪಾತುಮ್ಮಾದಳ ಪುಳ್ಳಿ ಅದ್ದು ನನ್ನ ಮುಂದೆ ನಿಂತು ಝಂಝಂ ನೀರು ಕೇಳುತ್ತಿದ್ದಾನೆ.
ಸಾವಿರಾರು ವರ್ಷಗಳ ಹಿಂದೆ ಮಕ್ಕಾ ಮರುಭೂಮಿಯಲ್ಲಿ ಪ್ರವಾದಿ ಇಬ್ರಾಹೀಂಮರ ಪತ್ನಿ ಹಾಜಿರಾ ಎನ್ನುವ ತಾಯಿ ತನ್ನ ಮಗುವಿನ ಜೊತೆ ಮರುಭೂಮಿ ಪಾಲಾದರಂತೆ. ಆ ಮರುಭೂಮಿಯ ನಟ್ಟ ನಡುವೆ ಮಗು ಬಾಯಾರಿ ಅಳತೊಡಗಿತು. ಪತ್ನಿ ಹಾಜಿರಾಂ ಎದೆ ಹಾಲು ಬತ್ತಿ ಹೋಗಿತ್ತು. ಮಗುವಿನ ಅಳುವಿನ ಸದ್ದು ಜೋರಾದಂತೆ ಹಾಜಿರಾ ನೀರಿಗಾಗಿ ಅತ್ತಿತ್ತ ತಡಕಾಡತೊಡಗಿದರು. ಮಗುವಿನ ಅಳು ಮರುಭೂಮಿಯನ್ನು ವ್ಯಾಪಿಸತೊಡಗಿದಂತೆ ಹಾಜಿರಾ ಏಳು ಬಾರಿ ನೀರಿಗಾಗಿ ಅಲೆಯುತ್ತಾ ಸಫಾ- ಮರ್ವಾ ಪರ್ವತವನ್ನಿ ಏರಿ ಇಳಿದರಂತೆ. ಆದರೆ ಒಂದು ಹನಿ ನೀರೂ ಸಿಗಲಿಲ್ಲ. ಇತ್ತ ಮಗುವಿನ ಬಳಿ ಅಂದರೆ ಬಾಯಾರಿ ನೊಂದ ಮಗುವಿನ ಪಾದದ ಬಡಿತಕ್ಕೆ ಎದೆಯಿಂದ ಹಾಲುಕ್ಕುವಂತೆ ಮರುಭೂಮಿಯಿಂದ ನೀರಿ ಚಿಮ್ಮಿತಂತೆ. ಚಿಮ್ಮಿ ಹರಿಯ ತೊಡಗಿದ ನೀರನ್ನು ತಾಯಿ ಹಾಜಿರಾ ‘‘ಝಂಝಂ(ನಿಲ್ಲು ನಿಲ್ಲು)’’ ಎಂದು ತಡೆದು, ತನ್ನ ಮಗುವಿಗೆ ಉಣಿಸಿದರಂತೆ. ಇಂದಿಗೂ ಮಕ್ಕಾದಲ್ಲಿ ಝಂಝಂ ನೀರು ಉಕ್ಕಿ ಹರಿಯುತ್ತಿದೆ. ಹಜ್ ಯಾತ್ರೆಗೆ ಹೋದ ಎಲ್ಲ ಯಾತ್ರಿಕರೂ ಹಾಜಿರಾ ಏಳು ಬಾರಿ ಬೆಟ್ಟವೇರಿ ಇಳಿದ ಸಂಕೇತವಾಗಿ, ಸಫಾ ಮರ್ವಾವನ್ನು ನಿರ್ವಹಿಸುತ್ತಾರೆ. ಜೊತೆಗೆ ಈ ಝಂಝಂ ನೀರಿನೊಂದಿಗೆ ಮರಳುತ್ತಾರೆ. ಹಜ್ ಯಾತ್ರೆ ನಿರ್ವಹಿಸಿ ಬಂದವರ ಮನೆಯಲ್ಲಿ ಈ ಝಂಝಂ ನೀರು ಜೋಪಾನವಾಗಿರುತ್ತದೆ. ಆ ಮನೆಯ ಬಾಗಿಲು ತಟ್ಟುವ ಮರಣ ದೇವತೆಯ ಪಾದವನ್ನು ತೊಳೆಯುವುದಕ್ಕೆ. ಮರಣಯ್ಯೆಯಲ್ಲಿರುವವರ ಕೊನೆಯ ದಾಹವನ್ನು ತಣಿಸುವುದಕ್ಕಾಗಿ.
ನನ್ನ ತಾಯಿಯ ಅಣ್ಣ ಮತ್ತು ಅವರ ಪತ್ನಿ ಅಂದರೆ ಮಾವ ಮತ್ತು ಅತ್ತೆ ಹಜ್ ನಿರ್ವಹಿಸುವುದಕ್ಕೆ ಹೋದವರು ಎರಡು ತಿಂಗಳ ಹಿಂದೆ ಮರಳಿದ್ದರು. ಬಳಿಕ ನಮ್ಮ ಮನೆಗೂ ಬೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಮಕ್ಕಾದಿಂದ ತಂದ ಒಂದು ಜಪಮಣಿ ಸರ, ಸಣ್ಣದೊಂದು ನಮಾಜು ನಿರ್ವಹಿಸುವ ಚಾಪೆ ಹಾಗೂ ಒಂದು ದೊಡ್ಡ ಬಾಡಲಿಯಲ್ಲಿ ಝಂಝಂ ನೀರು ತಂದಿದ್ದರು. ಆದ ನನಗೆ ಪಾತುಮ್ಮಾದಳ ನೆನಪಾಯಿತು. ಇರಲಿ ಎಂದು ಜೋಪಾನವಾಗಿ ಇಟ್ಟಿದ್ದೆ. ನಮ್ಮ ಮನೆಯಲ್ಲಿ ಝಂಝಂ ನೀರಿರುವುದು ಹಲವರಿಗೆ ತಿಳಿದು, ತಮ್ಮ ಅಜ್ಜಿ, ತಾಯಿ... ಹೀಗೆ ಯಾರದಾದರೂ ಮರಣದ ಸುದ್ದಿಯ ಜೊತೆಗೆ ಈ ಝಂಝಂ ನೀರಿಗಾಗಿ ಬರುತ್ತಿದ್ದರು. ಇಲ್ಲ ಎನ್ನುವುದು ತೀರಾ ಕಷ್ಟವಾಗಿತ್ತು. ವಾರದ ಹಿಂದೆ ಈ ಪಾತುಮ್ಮಜ್ಜಿ ಬಂದವಳು ‘‘ಮಗನೇ... ಎಲ್ಲವನ್ನು ಕೊಟ್ಟು ಮುಗಿಸಬೇಡ... ನನಗೆ ಎರಡು ಗುಟುಕು ನೀರು ಇರಲಿ’’ ಎಂದು ಮುದ್ದಾದ ಬೊಚ್ಚು ಬಾಯಿಯಿಂದ ಪಟ್ಟ ಮಗುವಿನಂತೆ ನಕ್ಕಿದ್ದಳು.’’ ‘‘ಆಯಿತಜ್ಜಿ ಎಂದು ಭರವಸೆ ನೀಡಿದ್ದೆ. ಮೂರು ದಿನಗಳ ಹಿಂದೆ ಪಾತುಮ್ಮಜ್ಜಿ ಕುಸಿದು ಬಿದ್ದ ಸುದ್ದಿ ಸಿಕ್ಕಿತ್ತು. ಆಕೆಯನ್ನು ನೋಡುವುದಕ್ಕೂ ಹೋಗಿದ್ದೆ. ಆಕೆ ನನ್ನನ್ನೇ ನೋಡಿ ವಿಚಿತ್ರವಾಗಿ ನಕ್ಕಿದ್ದಳು. ಆಮೇಲೆ ಆಕೆಯ ಆರೋಗ್ಯ ಕೆಡುತ್ತಾ ಬಂದಿತ್ತು.
***
‘‘ಇಲ್ಲೇ ನಿಲ್ಲು’’ ಎಂದು ಅದ್ದುವಿಗೆ ಹೇಳಿ, ನಾನು ಚಿಮಿಣಿ ಹಿಡಿದು ಒಳಕೋಣೆಗೆ ಹೋದೆ. ‘‘ಯಾರೋ ಅದು...’’ ಒಳಗಿನಿಂದ ಅಮ್ಮ ಕೇಳಿದಳು.
‘‘ಪಾತುಮ್ಮಜ್ಜಿ ಪುಳ್ಳಿ ಬಂದಿದ್ದಾನೆ... ಝಂಝಂ ನೀರು ಬೇಕಂತೆ...’’ ಎಂದೆ. ‘‘ಕೊನೆಗೂ ಮುದುಕಿಗೆ ಹೋಗುವ ಸಮಯ ಬಂತೂಂತ ಕಾಣುತ್ತದೆ...’’ ಅಮ್ಮನ ಗೊಣಗು ಕೇಳಿತು.
ನಾನು ಕೋಣೆಯ ಕಪಾಟು ತೆರೆದೆ. ಮೇಲಿನ ಚೌಕದಲ್ಲಿ ಝಂಝಂ ಬಾಟಲಿ ಹೊಳೆಯುತ್ತಿದೆ. ಕೈಗೆತ್ತಿಕೊಂಡೆ ಬಾಟಲಿ ನೋಡುತ್ತಿದ್ದಂತೆಯೇ ನನ್ನ ಹದಯ ಬಾಯಿಗೆ ಬಂತು... ಬಾಟಲಿ ಖಾಲಿಯಾಗಿತ್ತು. ಮೊನ್ನೆ ನೋಡಿದಾಗ ಬಾಟಲಿಯಲ್ಲಿ ನೀರಿತ್ತಲ್ಲ? ಬಹುಶಃ ತಂಗಿಯರು ಯಾರೋ ಕೇಳಿದರೆಂದು ಕೊಟ್ಟು ಬಿಟ್ಟರ? ಬಾಟಲಿಯ ತಳ ಒಣಗಿತ್ತು. ಯಾಕೋ ನನ್ನ ಕೈ ಕಂಪಿಸಿತು. ಗಂಟಲು ಕಟ್ಟಿದಂತಾಯಿತು. ಅದ್ದುವಿಗೆ ಏನೆಂದು ಹೇಳಲಿ? ಒಂದು ಕ್ಷಣ ಹಾಗೇ ಪಕ್ಕದ ಮಂಚದಲ್ಲಿ ಕೂತು ಬಿಟ್ಟೆ. ಅಷ್ಟೇ... ಏನೋ ಹೊಳೆಯಿತು ನನಗೆ. ಆ ಕತ್ತಲಲ್ಲಿ ಮಿಂಚೊಂದು ಸುಳಿಯುವಂತೆ. ಬಾಟಲಿಯೊಂದಿಗೆ ನೇರವಾಗಿ ಅಡುಗೆ ಕೋಣೆ ಹೊಕ್ಕೆ. ಅಲ್ಲಿ ಅಮ್ಮ ಬಾವಿಯಿಂದ ತಂದ ನೀರು ಕೊಡ ತುಂಬ ಹೊಳೆಯುತ್ತಿತ್ತು. ಅರ್ಧ ಬಾಟಲು ನೀರನ್ನು ತುಂಬಿಸಿ, ಹೊರಗೆ ಕಾಯುತ್ತಿರುವ ಅದ್ದುವಿನ ಕೈಗಿತ್ತೆ. ‘‘ಸ್ವಲ್ಪ ಉಳಿದಿತ್ತು... ತೆಗೆದುಕೋ’’ ಎಂದೆ.
***
ಮರುದಿನ ನಾನು ತಾಯಿ ಮತ್ತು ತಂಗಿಯರ ಜೊತೆಗೆ ಪಾತುಮ್ಮನ ಮನೆಗೆ ಹೋದೆ. ಮತದೇಹವನ್ನು ಮೀಯಿಸುವುದಕ್ಕೆ ಇಟ್ಟಿದ್ದರು. ಅದ್ದು ಯಾರಲ್ಲೋ ಹೇಳುತ್ತಿದ್ದ.‘‘...ಝಂಝಂ ನೀರು ತಂದಿದ್ದೇನೆ.... ಎಂದು ಹೇಳಿದಾಕ್ಷಣ ಅಜ್ಜಿ ಕಣ್ಣು ತೆರದಳು.. ಬಾಯಿಗೆ ನೀರು ಹಾಕಿದಂತೆ ಗಳಗಳನೆ ಕುಡಿದಳು... ಆಮೇಲೆ ಮೆಲ್ಲಗೆ ‘ ಈಗ ಸಮಾಧಾನವಾಯಿತು’ ಎಂದು ಉಸುರಿದಳು... ಹಾಗೆ ಕಣ್ಣು ಮುಚ್ಚಿದವಳು ಕಣ್ಣು ತೆರೆಯಲೇ ಇಲ್ಲ....’’
ಅಮ್ಮ ತಂಗಿಯನ್ನು ಪಾತುಮ್ಮಜ್ಜಿಯನ್ನು ಮೀಯಿಸುವಲ್ಲಿಗೆ ಹೋದರು. ನನಗೆ ಪಾತಿಮ್ಮಜ್ಜಿಯ ಮುಖವನ್ನು ನೋಡುವ ಧೈರ್ಯವಿರಲಿಲ್ಲ. ಅಂಗಳದಲ್ಲೇ ಕರ್ಪೂರದ ವಾಸನೆಯನ್ನು ಆಘ್ರಾಣಿಸುತ್ತಾ ನಿಂತಿದ್ದೆ. ಅಷ್ಟರಲ್ಲಿ ಆಕಾಶದಿಂದ ಒಂದು ಹನಿ ನನ್ನ ಕೆನ್ನೆಯ ಮೇಲೆ ಉದುರಿತು. ಮೇಲೆ ನೋಡಿದೆ. ಇನ್ನೇನು ಸುರಿಯುವುದಕ್ಕೆ ಸಿದ್ಧವಾಗಿ ನಿಂತಿರುವ ಮೋಡಗಳು.
‘‘ಝಂಝಂ’’ ಎನ್ನುವ ಎರಡು ಶಬ್ದಗಳು ನನ್ನ ಅಪ್ಪಣೆಯನ್ನು ಮೀರಿ ನನ್ನ ಬಾಯಿಂದ ಉದುರಿದವು.

Sunday, January 1, 2012

ಚಿಕ್ಕಿಯ ಬೆಳಗಿನ ತಿಂಡಿ!

ಚಿಕ್ಕಿ ಮತ್ತು ಪಿಂಕಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವ ಎರಡು ಪುಟ್ಟ ಗುಬ್ಬಚ್ಚಿ ಮರಿಗಳು. ಇಬ್ಬರು ಒಬ್ಬರನ್ನೊಬ್ಬರು ಗಾಢವಾಗಿ ಹಚ್ಚಿಕೊಂಡವರು. ಚಿಕ್ಕಿ ತನ್ನ ಶಾಲೆಯ ಹಿಂದುಗಡೆಯ ಓಣಿಯಲ್ಲಿರುವ ಜೋಪಡಾಪಟ್ಟಿಯ ಗುಡಿಸಲಿಂದ ಬರುತ್ತಾಳೆ. ಪಿಂಕಿ ಶ್ರೀಮಂತ ಮನೆಯ ಬಂಗಾರ ತೊಟ್ಟಿಲಿಂದ ಈಗಷ್ಟೇ ಇಳಿದು ಬಂದವಳು.

ಒಂದು ದಿನ ಬೆಳಗ್ಗೆ ಇಬ್ಬರು ಜೊತೆಯಾದರು. ಪಿಂಕಿ ಸದಾ ಚಿಂವ್ ಚಿಂವ್ ಎನ್ನುವ ಹುಡುಗಿ, ಹೇಳಿದಳು ‘‘ನಮ್ಮ ಮನೆಯಲ್ಲಿವತ್ತು ಬೆಳಗ್ಗೆ ತಿಂಡಿಗೆ ಅಮ್ಮ ನೀರುಸೌತೆಯ ಕಡುಬು ಮಾಡಿದ್ದಳು. ನಿಮ್ಮ ಮನೆಯಲ್ಲಿ ಎಂತ?’’
ಚಿಕ್ಕಿ ಒಂದರೆಕ್ಷಣ ವೌನವಾಗಿದ್ದಳು ಮೆಲ್ಲನೆ ಬಾಯಿ ತೆರೆದಳು ‘‘ನಮ್ಮ ಮನೆಯಲ್ಲಿ ಬೆಳಗ್ಗೆ ಉಪವಾಸ’’
ಉಪವಾಸ! ಪಿಂಕಿಗೆ ಅದು ಯಾವ ಬಗೆಯ ತಿಂಡಿ ಎಂದು ಅರ್ಥವಾಗಲಿಲ್ಲ.
ಪಿಂಕಿ ಕೇಳಿದಳು ‘‘ಅದು ಸಿಹಿಯಾಗಿರತ್ತ?’’
ಚಿಕ್ಕಿ ವೌನವಾಗಿದ್ದಳು.
ಪಿಂಕಿ ಮತ್ತೆ ಕೇಳಿದಳು. ‘‘ಅದನ್ನು ಹೇಗೆ ಮಾಡುತ್ತಾರೆ? ಅದಕ್ಕೆ ಗೋಡಂಬಿ ಹಾಕ್ತಾರಾ?’’
ಗೋಡಂಬಿ! ಈ ವಸ್ತುವನ್ನು ಚಿಕ್ಕಿ ಇದೇ ಮೊದಲ ಬಾರಿ ಕೇಳಿದ್ದಳು ‘‘ಗೋಡಂಬಿ ಅಂದ್ರೇನು? ಅದು ಸಿಹಿಯಾಗಿರತ್ತ?’’
ಪಿಂಕಿ ನಕ್ಕು ಕೇಳಿದಳು ‘‘ಅಯ್ಯೋ ದೇವರೆ, ನಿನಗೆ ಗೋಡಂಬಿ ಗೊತ್ತಿಲ್ಲವ? ನಮ್ಮ ಮನೆಯ ಎಲ್ಲ ಪದಾರ್ಥಕ್ಕೆ ಗೋಡಂಬಿ ಹಾಕ್ತಾರೆ...ಸಿಹಿಯಾಗಿರಲ್ಲ, ಆದ್ರೆ ಒಂಥರಾ ತಿನ್ನೋಕೆ ನೆಲಕಡಲೆ ಥರ ಚೆನ್ನಾಗಿರತ್ತೆ...ನೀವು ಬೆಳಗ್ಗೆ ಮಾಡೋ ಉಪವಾಸಕ್ಕೆ ಗೋಡಂಬಿ ಹಾಕಲ್ವಾ?’’
ಚಿಕ್ಕಿ ಮೆಲ್ಲ ಬಾಯಿ ತೆರೆದಳು ‘‘ಹೂಂ. ಗೋಡಂಬಿ, ತುಪ್ಪಾ, ಸಕ್ಕರೆ, ಬೆಲ್ಲ, ಎಲ್ಲ ಹಾಕ್ತಾರೆ...ಅದು ಒಲೆಯಲ್ಲಿ ಬೇಯುವಾಗ ಅಕ್ಕ ಪಕ್ಕದಲ್ಲೆಲ್ಲ ಪರಿಮಳ ಬರತ್ತೆ....’’
ಪಿಂಕಿಗೆ ಬಾಯಿಯಲ್ಲಿ ನೀರು ಬಂತು ‘‘ನಿಮ್ಮ ಮನೆಯಲ್ಲಿ ದಿನಾ ಬೆಳಗ್ಗೆ ಅದನ್ನೇ ಮಾಡೋದಾ?’’
ಚಿಕ್ಕಿ ತಲೆಯಾಡಿಸಿದಳು ‘‘ಹೌದು, ನಮ್ಮ ಮನೆಯಲ್ಲಿ ದಿನಾ ಬೆಳಗ್ಗೆ ಉಪವಾಸ’’ ಬಳಿಕ ಯಾಕೋ ವೌನವಾದಳು.
***
ಅಂದು ಪಿಂಕಿಯ ಮನೆಯಲ್ಲಿ ದೊಡ್ಡ ಗಲಾಟೆ. ಬೆಳಗ್ಗಿನ ತಿಂಡಿ ತಿನ್ನುವುದಕ್ಕೆ ಪಿಂಕಿ ಕೇಳುತ್ತಿಲ್ಲ. ‘‘ತಿನ್ನೇ...ನೀರುದೋಸೆ ಚೆನ್ನಾಗಿದೆ ಕಣೇ....’’ ತಾಯಿ ಒತ್ತಾಯಿಸುತ್ತಿದ್ದರೂ ಪಿಂಕಿಯದು ಒಂದೇ ಹಟ ‘‘ನನಗೆ ಉಪವಾಸ ಮಾಡಿಕೊಡು...ನನಗೆ ಅದು ಇಷ್ಟ...’’
‘ಇದೆಂಥದು ಉಪವಾಸ! ಅದನ್ನು ಮಾಡಿಕೊಡುವುದು ಹೇಗೆ...?’ ಪಿಂಕಿಯ ತಾಯಿಗೆ ಅಚ್ಚರಿ.
‘‘ಉಪವಾಸ ಅನ್ನೋದು ತಿಂಡಿಯಲ್ಲ ಕಣೇ...ಅಂಥದೊಂದು ತಿಂಡಿ ಇಲ್ಲ’’ ಪಿಂಕಿಯ ತಾಯಿ ಸಮಜಾಯಿಶಿ ನುಡಿದಳು.
ಪಿಂಕಿ ಹಟ ಬಿಡಲಿಲ್ಲ ‘‘ನನ್ನ ಗೆಳತಿ ಚಿಕ್ಕಿಯ ಮನೆಯಲ್ಲಿ ದಿನಾ ಬೆಳಗ್ಗೆ ಉಪವಾಸವಂತೆ....ಅದಕ್ಕೆ ಗೋಡಂಬಿ, ತುಪ್ಪ ಎಲ್ಲ ಹಾಕ್ತಾರಂತೆ. ನಿನ್ನೆಯೂ ಚಿಕ್ಕಿಯ ಮನೆಯಲ್ಲಿ ಬೆಳಗ್ಗೆ ಉಪವಾಸ ಅಂತೆ. ಗೊತ್ತಾ?’’ ಹೇಳಿಯೇ ಬಿಟ್ಟಳು.
ಪಿಂಕಿಯ ತಾಯಿ ದಂಗಾಗಿ ನಿಂತು ಬಿಟ್ಟಳು. ಯಾಕೋ ಎನೋ ಆಕೆಯ ಕಣ್ಣು ತುಂಬಿತ್ತು. ಪಿಂಕಿಯನ್ನು ಮೆಲ್ಲನೆ ಎದೆಗೊತ್ತಿಕೊಂಡಳು.
ಅಂದು ಪಿಂಕಿಯ ತಾಯಿ ಮಗಳ ಟಿಫಿನ್‌ಬಾಕ್ಸ್‌ನಲ್ಲಿ ಎಂದಿಗಿಂತ ಎರಡು ಸೌಟು ಜಾಸ್ತಿ ಉಪ್ಪಿಟ್ಟು ಹಾಕಿದಳು. ಮತ್ತು ಪಿಂಕಿಗೆ ಹೇಳಿದಳು ‘‘ನಿನ್ನ ಗೆಳತಿ ಚಿಕ್ಕಿಯಲ್ಲಿ ಹೇಳು, ದಿನಾ ಬೆಳಗ್ಗೆ ಉಪವಾಸವನ್ನು ತಿನ್ನುವುದು ಸರಿಯಲ್ಲ, ಹೊಟ್ಟೆ ಹಾಳಾಗತ್ತೆ, ಹೊಟ್ಟೆ ನೋವಾಗತ್ತೆ. ಇನ್ನು ಮುಂದೆ ನಾನು ಟಿಫಿನ್‌ಬಾಕ್ಸ್ ತುಂಬಾ ತಿಂಡಿ ತರ್ತೇನೆ, ಅದನ್ನೇ ತಿನ್ನು ಅಂತ ಹೇಳು...ಆಯ್ತ್’’
ಪಿಂಕಿ ತಾಯಿಯನ್ನೇ ನೋಡಿದಳು. ಏನು ಅನಿಸಿತೋ ‘‘ಆಯ್ತಮ್ಮ...’’ ಎಂದವಳೇ ಚೀಲ ಹೆಗಲೇರಿಸಿ, ಟಿಫಿನ್‌ಬಾಕ್ಸ್‌ನ್ನು ಹೆಮ್ಮೆಯಿಂದ ಕೈಯಲ್ಲಿ ಧರಿಸಿ, ಮನೆಯಿಂದ ಹೊರಗೆ ಹೆಜ್ಜೆಯಿಟ್ಟಳು.

ಚೇತನ ತೀರ್ಥ ಹಳ್ಳಿಯವರ ಫೇಸ್‌ಬುಕ್ ಸ್ಟೇಟಸ್‌ಗೆ ಮಾಲತಿ ಶೆಣೈ ಅವರು ಒಂದು ಕಮೆಂಟ್ ಹಾಕಿದ್ದರು. ಆ ಕಮೆಂಟ್‌ನ ಸ್ಫೂರ್ತಿಯಿಂದ ಈ ಪುಟ್ಟ ಕತೆಯನ್ನು ಬರೆದಿದ್ದೇನೆ.