Tuesday, January 17, 2012

ವಿವೇಕ್ ಶಾನುಭಾಗ್ ಕಂಡ ಉದ್ಯಾನವೊಂದರ ಕನಸು


ವಿವೇಕ್ ಶಾನುಭಾಗ್ ಅವರ ಸಂಪಾದಕತ್ವದ ‘ದೇಶಕಾಲ’ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಒಂದು ಪುಟ್ಟ ಬರಹ.

ನನ್ನ ಕೈಗೆ ಮೊತ್ತ ಮೊದಲ ‘ದೇಶಕಾಲ’ ಸಂಚಿಕೆ ಸಿಕ್ಕಿದಾಗ ನಾನು ದಂಗಾಗಿದ್ದೆ. ನನ್ನಂಥವರು ‘ಕೈ ತೊಳೆದು’ ಮುಟ್ಟಬೇ
ಕಾದಷ್ಟು ಚೆಂದವಾಗಿತ್ತು, ಮುದ್ದಾಗಿತ್ತು, ಅದ್ದೂರಿಯಾಗಿತ್ತು ಮತ್ತು ಶ್ರೀಮಂತವಾಗಿತ್ತು. ಒಂದು ರೀತಿಯಲ್ಲಿ ಮೊತ್ತ ಮೊದಲ ಬಾರಿ ಮಾರ್ಬಲ್ ಹಾಸಿದ ಮನೆ(ಸಾಹಿತ್ಯದ)ಯೊಳಗೆ ಕಾಲಿಟ್ಟ ಸ್ಥಿತಿ ನನ್ನದು. ಪುಟಪುಟಗಳನ್ನು ಬಿಡಿಸುವಾಗ ಸಣ್ಣದೊಂದು ಅಳುಕು. ಒಳ್ಳ ಕೋಣೆಯ ವಿನ್ಯಾಸ, ಲೈಬ್ರರಿ ರೂಮ್, ಡೈನಿಂಗ್ ಹಾಲ್, ಬಾಲ್ಕನಿ...ಹೀಗೆ ಪ್ರತಿಯೊಂದು ಒಪ್ಪ ಓರಣ, ಅಚ್ಚುಕಟ್ಟು. ಹಾಗೆಯೇ ಅದರೊಳಗಿರುವ ಶ್ರೀಮಂತ ಬರಹಗಳನ್ನು, ಅದಕ್ಕೆ ಮಾಡಿರುವ ವಿನ್ಯಾಸಗಳನ್ನು ನೋಡಿದಾಗ....ಇದೆಲ್ಲ ಕನ್ನಡದಲ್ಲಿ ಸಾಧ್ಯವೆ ಅನ್ನಿಸಿತ್ತು. ಆದರೆ ಅದೇ ಸಂದರ್ಭದಲ್ಲಿ ಒಂದು ಸಂಚಿಕೆಗೆ ನೂರು ರೂಪಾಯಿಯೆ ಎಂದು ನಿಟ್ಟುಸಿರು ಚೆಲ್ಲಿದ್ದೆ. ಆದರೂ ಕೊಂಡುಕೊಂಡಿದ್ದೆ. ಈಚಿನ ತಲೆಮಾರಿಗೆ ವಿವೇಕ್ ಶಾನುಭಾಗ್, ಜಯಂತ್ ಕಾಯ್ಕಿಣಿ, ನಟರಾಜ್ ಹುಳಿಯಾರ್, ಮೊಗಳ್ಳಿ ಮೊದಲಾದ ತಲೆಗಳು ತೀರಾ ಚಿರಪರಿಚಿತ. ಜಯಂತ್‌ರ ಕತೆಗಳಂತೆಯೇ ವಿವೇಕ್ ಶಾನುಭಾಗ್ ಅವರ ಕತೆಗಳೂ ನನಗೆ ಇಷ್ಟ. ಇದೀಗ ಅವರು ಒಂದು ಪತ್ರಿಕೆಯ ನೇತೃತ್ವವಹಿಸಿದ್ದಾರೆನ್ನುವುದು ನನ್ನಲ್ಲಿ ನಿಜಕ್ಕೂ ಕುತೂಹಲವನ್ನು ಹುಟ್ಟಿಸಿತ್ತು.ಚಂದ್ರಶೇಖರ ಪಾಟೀಲರ ‘ಸಂಕ್ರಮಣ’ ಒಂದು ಕಾಲದಲ್ಲಿ ಹುಟ್ಟಿಸಿ ಹಾಕಿದ ಸಾಹಿತ್ಯಕ ಚರ್ಚೆಗಳನ್ನು ನಾನು ಅರಿತಿದ್ದೇನೆ. ಓದಿದ್ದೇನೆ. ರುಜುವಾತು ಕೂಡ ಹಲವು ಕಾರಣಗಳಿಗಾಗಿ ನನ್ನೊಳಗೆ ಉಳಿದುಕೊಂಡಿದೆ. ಇದೀಗ ಹೊಸತಲೆಮಾರಿನ ತಲ್ಲಣಗಳನ್ನು, ಆಲೋಚನೆಗಳನ್ನು ಹಿಡಿದಿಡುವಲ್ಲಿ ಈ ಪತ್ರಿಕೆಗೆ ಖಂಡಿತವಾಗಿಯೂ ಸಾಧ್ಯವಿದೆ ಅನ್ನಿಸಿತ್ತು. ಆದುದರಿಂದಲೇ ಪ್ರತಿ ಸಂಚಿಕೆಗಾಗಿ ಕಾದು ಕೊಂಡುಕೊಂಡಿದ್ದೇನೆ. ಕೆಲವೊಮ್ಮೆ ‘ಗೆಳೆಯರಿಂದಲೂ ಪಡೆದು’ ಓದಿದ್ದೇನೆ.
 ಕೆಲವು ಸಂಚಿಕೆಗಳ ಬಳಿಕ ನನ್ನೊಳಗೆ ದೇಶಕಾಲದ ಕುರಿತಂತೆ ಸಣ್ಣದೊಂದು ಅಸಹನೆ ಸಿಡಿಯತೊಡಗಿತು. ಜಗತ್ತಿನ ಶ್ರೇಷ್ಟವಾದುದೆಲ್ಲ ತನ್ನಲ್ಲಿರಬೇಕೆಂಬ ಹಟ ಈ ಪತ್ರಿಕೆಯೊಳಗಿದೆ ಅನ್ನಿಸಿತು. ಶ್ರೀಮಂತನೊಬ್ಬನ ಮನೆಯ ಪಳಪಳ ಹೊಳೆಯುವ ಶೋಕೇಸ್‌ನಂತೆ ಭಾಸವಾಗತೊಡಗಿತು. ಈ ಪತ್ರಿಕೆಗೆ ಒಂದು ಪ್ರತಿ ಆಲೋಚನೆಯನ್ನು ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಗೊತ್ತಾಗತೊಡಗಿತು. ಅದಕ್ಕೆ ಕಾರಣವೂ ಇದೆ. ತಿಳಿದೋ ತಿಳಿಯದೆಯೋ ಈ ‘ದೇಶ ಕಾಲ’ ತನ್ನ ಓದುಗರನ್ನು ಮೊದಲೇ ನಿರ್ಧರಿಸಿಟ್ಟುಕೊಂಡಿದೆ. ತನ್ನಲ್ಲಿ ಪ್ರಕಟವಾಗಬಹುದಾದ ಬರಹಗಳನ್ನೂ ಮೊದಲೇ ನಿರ್ಧರಿಸಿಟ್ಟುಕೊಂಡಿದೆ. ಅಲ್ಲಿ ಯಾವುದೂ ಹೊಸದಾಗಿ ಘಟಿಸುತ್ತಿಲ್ಲ. ಕಳಪೆಯೆನ್ನುವುದು ಇರಲೇ ಬಾರದು ಎಂದಾಗ ಹುಟ್ಟುವ ಸಮಸ್ಯೆಯಿದು.

ಈ ಸಂದರ್ಭದಲ್ಲಿ ನಾನು ‘ದೇಶಕಾಲ’ದ ಜೊತೆಗೆ ‘ಸಂಕ್ರಮಣ’ವನ್ನು ಇಡಲು ಇಷ್ಟ ಪಡುತ್ತೇನೆ. ಚಂಪಾ ‘ಸಂಕ್ರಮಣ’ವನ್ನು ಸಾಧ್ಯವಾದಷ್ಟು ಜನರ ಬಳಿಗೆ ಕೊಂಡೊಯ್ಯಲು ಪ್ರಯತ್ನ ಪಟ್ಟರು. ಚಂದಾ ಸಂಗ್ರಹಿಸುವ ಅನಿವಾರ್ಯತೆ ಅವರಿಗಿದ್ದುದರಿಂದ ಅವರು ಯಾವುದೇ ವರ್ಚಸ್ಸು ಇತ್ಯಾದಿಗಳಿಗೆ ಕಟ್ಟು ಬೀಳದೆ, ಪಕ್ಕಾ ಬ್ಯಾರಿಯೊಬ್ಬ ಸಂತೆಯಲ್ಲಿ ವ್ಯಾಪಾರ ನಡೆಸುವಂತೆ ಸಹಜವಾಗಿ ಸಂಕ್ರಮಣವನ್ನು ಸಾಹಿತ್ಯವಲಯದಲ್ಲಿ ನಡೆಸಿದರು. ಸಾಹಿತ್ಯ ಸಮ್ಮೇಳನದಲ್ಲಿ ಅಪರಿಚಿತರೊಂದಿಗೂ ಪರಿಚಿತರಂತೆ ಹಲ್ಲುಕಿರಿಯುತ್ತಾ, ಚಂದಾ ವಸೂಲಿ ಮಾಡುತ್ತಿದ್ದರು. ಸಾಹಿತಿಗಳು, ಶಿಕ್ಷಕರು, ವಿದ್ಯಾಥಿಗಳು, ಉದಯೋನ್ಮುಖ ಕವಿಗಳು, ಜೊತೆಗೆ ಚಿಂತಕರೂ ಬರೆದರು. ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಿದರು. ಒಂದು ರೀತಿ ಸಹಜವಾಗಿ ಅರಳುವ ಕಾಡಿನಂತೆ ಸಂಕ್ರಮಣ ಒಂದಾನೊಂದು ಕಾಲದಲ್ಲಿ ಓದುಗರಲ್ಲಿ ಹಬ್ಬತೊಡಗಿತು. ಅಲ್ಲಿ ಕಳಪೆ ಕಳೆಗಳು ಜಾಸ್ತಿಯಿರಬಹುದು ನಿಜ. ಆದರೆ ಅದರ ಜೊತೆಗೇ ಹೊಸ ಹೊಸ ವೈವಿಧ್ಯಗಳು ಸಂಕ್ರಮಣದ ಮೂಲಕ ಹುಟ್ಟಿಕೊಂಡವು. ತನ್ನಷ್ಟಕ್ಕೆ ಹುಟ್ಟಿ, ಸಾಯುವ ಗಿಡಮರಗಳಿದ್ದುದರಿಂದ ಸಂಕ್ರಮಣವನ್ನು ಕುಂಡದೊಳಗಿಟ್ಟು ಸಾಕುವ ಅನಿವಾರ್ಯತೆ ಚಂಪಾ ಅವರಿಗೆ ಒದಗಲಿಲ್ಲ. ಆದರೆ ಶಾನುಭಾಗ್ ಅರಲ್ಲಿ ಕಾಡು ಬೆಳೆಸುವ ಉದ್ದೇಶವಿರಲಿಲ್ಲ. ಕುಂಡದೊಳಗಿಟ್ಟು ಗಿಡಗಳನ್ನು ಸಾಕಿ ಒಂದು ಉದ್ಯಾನವನವನ್ನು ಮಾಡುವ ಪ್ರಯತ್ನ ಮಾಡಿದರು. ಸಂಜೆಯ ಹೊತ್ತು ಅವರದೇ ಬಳಗ, ಅವರದೇ ಆಲೋಚನೆ, ಅವರದೇ ಅಭಿರುಚಿ ಅಲ್ಲಿ ಉಸಿರಾಡತೊಡಗಿತು. ಕುಂಡದೊಳಗಿಟ್ಟು ಸಾಕಿದ ಗಿಡಗಳು ಬಹಳ ದುಬಾರಿ. ಅದನ್ನು ಸಹಜವಾಗಿ ಬಿಡುವಂತಿಲ್ಲ. ಪ್ರತಿದಿನ ಅದರೆಡೆಗೆ ಕಣ್ಣಾಯಿಸುತ್ತಿರಬೇಕು. ನೀರು ಹನಿಸುತ್ತಿರಬೇಕು. ತುಸು ಎತ್ತರ ಹುಲ್ಲು ಬೆಳೆದರೆ ಅಳತೆಗೋಲು ಇಟ್ಟು ತುದಿಗಳನ್ನು ಕತ್ತರಿಸಬೇಕು. ಉದ್ಯಾನವನವೆಂದರೆ ಸುಮ್ಮಗಾಗುವುದಿಲ್ಲ. ಅಲ್ಲಿ ಒಂದು ಗಿಡ ಸತ್ತರೂ, ಒಂದು ಹೊಸ ಗಿಡ ಬಂದರೂ ಲಾಭ-ನಷ್ಟಗಳ ವಿಷಯವಾಗುತ್ತದೆ. ಆದರೆ ಸಹಜವಾಗಿ ಹರಡಿದ ಕಾಡುಗಳಲ್ಲಿ ಆ ಸಮಸ್ಯೆಯಿಲ್ಲ. ಒಂದು ಸತ್ತರೆ ಹತ್ತು ಹುಟ್ಟಿರುತ್ತವೆ. ಅಲ್ಲಿ ಬರೇ ನೋಡುವುದಕ್ಕಷ್ಟೇ ಅಲ್ಲ, ಅಡ್ಡಾಡಬಹುದು, ಕಾಯಿ ಉದುರಿಸಬಹುದು, ಮರ ಹತ್ತಬಹುದು. ಶಿಸ್ತಿನ ಚೌಕಟ್ಟು ಅಲ್ಲಿಲ್ಲ.

ಬಹುಶಃ ಸಂಕ್ರಮಣ ಮತ್ತು ದೇಶಕಾಲದ ನಡುವೆ ಇರುವ ಮುಖ್ಯ ವ್ಯತ್ಯಾಸ ಇದು. ಒಂದು ಸಹಜವಾಗಿ ಹರಡಿಕೊಂಡ ಕಾಡಾದರೆ ಇನ್ನೊಂದು ಕಷ್ಟಪಟ್ಟು, ಶಿಸ್ತಿನಿಂದ ಬೆಳೆಸಿದ ಉದ್ಯಾನವನ. ಒಂದು ಭೂಮಿಯಿಂದ ಸಹಜವಾಗಿ ಸಿಡಿದೆದ್ದ ಮೊಳಕೆಯ ಗಿಡವಾದರೆ, ಇನ್ನೊಂದು ಹೂಕುಂಡದಲ್ಲಿ ಸಂಗ್ರಹಿಸಿಟ್ಟ ಗಿಡ. ಶ್ರಮದ ಮಟ್ಟಿಗೆ ಶಾನುಭಾಗ್ ತುಂಬಾ ಬೆವರು ಸುರಿಸಿದ್ದಾರೆ. ದೇಶಕಾಲ ಇರುವಷ್ಟು ದಿನ ಒಂದಿಷ್ಟು ಕನಸು ಕಂಡಿದ್ದಾರೆ. ಏನೋ ಕಟ್ಟಬೇಕೆಂದು ಪ್ರಯತ್ನಿಸಿ ಸುಸ್ತಾಗಿದ್ದಾರೆ. ಆದರೆ ಅವರ ದೇಶಕಾಲದ ಪ್ರಯತ್ನವನ್ನು ಯಾವ ಕಾರಣಕ್ಕೂ ನಿರಾಕರಿಸುವಂತಿಲ್ಲ. ಅದು ಸದಾ ಉಳಿಯುವಂತಹದ್ದು. ಅಪರೂಪದ ಕೆಲವು ಹೂವುಗಿಡಗಳನ್ನು ಎಲ್ಲೆಲ್ಲಿಂದಲೋ ತಂದು ತನ್ನ ಉದ್ಯಾನವನದಲ್ಲಿ ನಟ್ಟು, ಅದರಲ್ಲಿ ಒಂದು ಸಂಜೆಯನ್ನು ಕಳೆಯಲು ನಮಗೂ ಅವಕಾಶ ನೀಡಿದ್ದಕ್ಕಾಗಿ ವಿವೇಕ್ ಶಾನುಭಾಗರಿಗೆ ಮತ್ತು ಅವರ ಬಳಗಕ್ಕೆ ಹೃದಯ ತುಂಬಿದ ಕೃತಜ್ಞತೆಗಳು. ಇದೀಗ ದೇಶಕಾಲ ತಾತ್ಕಾಲಿಕವಾಗಿ ನಿಂತಿರಬಹುದು. ಹೊಸ ಉತ್ಸಾಹ, ಸ್ಫೂರ್ತಿ, ಜೀವಂತಿಕೆಯೊಂದಿಗೆ ಶಾನುಭಾಗ್ ಮತ್ತೆ ಬಂದೇ ಬರುತ್ತಾರೆ. ಕನ್ನಡದ ಎಲ್ಲ ಸಾಹಿತ್ಯ ಪ್ರಿಯರು ಅವರ ನಿರೀಕ್ಷೆಯಲ್ಲಿದ್ದಾರೆ.

2 comments:

  1. WOW u have written so nicely!! Deshakala is my fav magazine too..though i came across it very late....me too eagerly awaiting its comeback...

    ReplyDelete
  2. ಕ್ವ್ಹೆಂದದ ಹೋಲಿಕೆ ಸಂಕ್ರಮಣಕ್ಕು ಮತ್ತು ದೇಶಕಾಲಕ್ಕು...

    ReplyDelete