Sunday, December 18, 2011

ಬಾಗಿಲು

ಕಳ್ಳರಿಗೆ ಹೆದರಿ ಮುಂಬಾಗಿಲು ಮುಚ್ಚಿಟ್ಟೆ
ಆದರೆ ದುರದೃಷ್ಟ ನೋಡಿ...
ಒಳ ಬರಬೇಕಾದ ನನ್ನವರೆಲ್ಲ
ಮುಚ್ಚಿದ ಬಾಗಿಲು ನೋಡಿ
ಹಾಗೆಯೇ ಮರಳಿದರು
ಕಳ್ಳನೋ ಹಿತ್ತಲಿಂದ ಕನ್ನ ಕೊರೆದು
ನನ್ನ ಮನೆಯನ್ನು ದೋಚಿ ಹೋಗಿದ್ದಾನೆ!

Saturday, December 17, 2011

ಮರ್ಯಾದಸ್ಥರು ಮತ್ತು ಇತರ ಕತೆಗಳು





















ಮಸ್ತಕಾಭಿಷೇಕ

ಆಳೆತ್ತರದ ಬಾಹುಬಲಿಯ ವಿಗ್ರಹಕ್ಕೆ ತುಪ್ಪ, ಹಾಲು, ಜೇನನ್ನು ಅಭಿಷೇಕ ಮಾಡಲಾಯಿತು.
‘ಇದೇನು?’ ಎಂದು ಕೇಳಿದರೆ ‘ಧರ್ಮ’ ಎನ್ನಲಾಯಿತು.
ಆತನ ಪಾದತಲದಲ್ಲಿ ಪುಟಾಣಿ ಮಗುವೊಂದು ಹಾಲಿಲ್ಲದೆ ಹಸಿವಿನಿಂದ ಕಣ್ಣೀರಿನ ಅಭಿಷೇಕ ಮಾಡುತ್ತಿತ್ತು.
‘‘ಇದೇನು?’’ ಎಂದು ಕೇಳಿದರೆ ‘‘ಕರ್ಮ’’ ಎನ್ನಲಾಯಿತು.
ಮಸ್ತಕಾಭಿಷೇಕದ ಮರುದಿನ ಬಾಹುಬಲಿ ‘ಮೈಯೆಲ್ಲ ಉರಿ’ ಎಂದು ಕಣ್ಣೀರಿಡುತ್ತಿರುವುದನ್ನು ನಾನು ಕಂಡೆ.

ರೋಬೊಟ್
ಆತನೊಬ್ಬ ವಿಜ್ಞಾನಿ. ಒಂದು ರೋಬೊಟನ್ನು ಮಾಡಲು ಹೊರಟ. ಹೆಂಡತಿ ಮಕ್ಕಳನ್ನು ಮರೆತು, ಸುಮಾರು ಇಪ್ಪತ್ತು ವರ್ಷಗಳ ಕಾಲದ ಪರಿಶ್ರಮದ ಬಳಿಕ ಒಂದು ರೋಬೊಟನ್ನು ಮಾಡಿದ. ತನ್ನ ಹೆಂಡತಿಯಲ್ಲಿ ಕೂಗಿ ಹೇಳಿದದ ‘‘ನೋಡು, ನಾನೊಂದು ಅಪರೂಪದ ರೋಬೊಟನ್ನು ನಿರ್ಮಿಸಿದ್ದೇನೆ’’
ಅದಕ್ಕೆ ಹೆಂಡತಿ ನಿಟ್ಟುಸಿರಿಟ್ಟು ಉತ್ತರಿಸಿದಳು ‘‘ಅದರಲ್ಲೇನಿದೆ ವಿಶೇಷ. ಇಪ್ಪತ್ತು ವರ್ಷಗಳ ಹಿಂದೆ ನಾನು ಅಂತಹದೇ ರೋಬೊಟೊಂದನ್ನು ಮದುವೆಯಾಗಿದ್ದೇನೆ’’

ಹಾಲು ಮಾರುವವಳು
ಸಂತೆಯಲ್ಲಿ ಹಾಲು ಮಾರುವವಳು ಮತ್ತು ಮೊಸರು ಮಾರುವವಳು ಎದುರು ಬದುರಾದರು.
ಮೊಸರು ಮಾರುವವಳು ಕಾಲು ಕೆದರಿ ಜಗಳಿಕ್ಕಿಳಿದಳು. ಹಾಲು ಮಾರುವವಳನ್ನು ಯದ್ವಾತದ್ವಾ ನಿಂದಿಸ ತೊಡಗಿದಳು. ಆದರೆ ಹಾಲು ಮಾರುವವಳು ವೌನವಾಗಿದ್ದಳು.
ತುಸು ಹೊತ್ತಿನ ಬಳಿಕ ಯಾರೋ ಕೇಳಿದರು ‘‘ಅವಳು ಅಷ್ಟು ಬೈದರೂ ನೀನೇಕೆ ಸುಮ್ಮಗಿದ್ದೆ?’’
ಹಾಲು ಮಾರುವವಳು ಉತ್ತರಿಸಿದಳು ‘‘ಹಾಲು ಮೊಸರಿನ ಮೇಲೆ ಬಿದ್ದರೂ, ಮೊಸರು ಹಾಲಿನ ಮೇಲೆ ಬಿದ್ದರೂ ಪರಿಣಾಮ ಮೊಸರೇ ಆಗುವುದು...ಏನಾದರೂ ಅದರ ಲಾಭ ಅವಳಿಗೇ. ಅದಕ್ಕೆ ವೌನವಾಗಿದ್ದೆ’’

ಬೆಲೆ
ಒಂದು ಖಾಲಿ ಕಾಗದ ಮತ್ತು ಸಾವಿರ ರೂಪಾಯಿಯ ನೋಟು ಮುಖಾಮುಖಿಯಾಯಿತು.
‘‘ನನಗೆ ಸಮಾಜದಲ್ಲಿ ಬೆಲೆಯಿದೆ. ನೀನೋ ಖಾಲಿ ಕಾಗದ’’ ನೋಟು ಬಿಂಕದಿಂದ ಬೀಗಿತು.
‘‘ನಿನ್ನ ಬೆಲೆ ಸಾವಿರಕ್ಕಿಂತ ಹೆಚ್ಚು ಬಾಳದು. ಆದರೆ ನಾನು ಖಾಲಿಯಾಗಿದ್ದೇನೆ. ಕೆಲವೊಮ್ಮೆ ನನ್ನಲ್ಲಿ ಬರೆಯಲ್ಪಡುವುದಕ್ಕೆ ಬೆಲೆಯನ್ನು ಕಟ್ಟುದಕ್ಕೂ ಕಷ್ಟವಾಗಬಹುದು’’ ಖಾಲಿ ಕಾಗದ ವಿನಯದಿಂದ ಹೇಳಿತು.

ಖಡ್ಗ
ಒಬ್ಬ ಕಮ್ಮಾನರ ರಾಜನಿಗೆ ಒಂದು ಖಡ್ಗವನ್ನು ಮಾಡಿಕೊಟ್ಟ.
‘‘ಎಂಥವನ ತಲೆಯನ್ನೂ ಈ ಖಡ್ಗ ಕ್ಷಣಾರ್ಧದಲ್ಲಿ ಕತ್ತರಿಸಿ ಹಾಕುತ್ತದೆ’’ ಕಮ್ಮಾರ ರಾಜನಲ್ಲಿ ನುಡಿದ.
‘‘ಹೌದೆ?’’ ರಾಜ ಖಡ್ಗವನ್ನು ಬೀಸಿದ.
ಕಮ್ಮಾರನ ತಲೆ ಕೆಳಗುರುಳಿತು.
‘‘ಹೌದು, ನಿಜಕ್ಕೂ ಅಪರೂಪದ ಖಡ್ಗ ಇದು’’ ರಾಜ ತೃಪ್ತಿಯಿಂದ ಖಡ್ಗವನ್ನು ಒರೆಗೆ ಹಾಕಿಕೊಂಡ.

ಪೆಟ್ಟಿಗೆ
‘‘ಅಲ್ಲೊಂದು ಪೆಟ್ಟಿಗೆ ಅನಾಥವಾಗಿ ಬಿದ್ದಿದೆ. ಅದರೊಳಗೆ ಏನೋ ಇದ್ದ ಹಾಗಿದೆ’’ ಒಬ್ಬ ಹೇಳಿದ.
‘‘ಅದು ನನ್ನದು ಕಣ್ರೀ...ತುಂಬಾ ದಿನದಿಂದ ಅದನ್ನು ಹುಡುಕುತ್ತಾ ಇದ್ದೆ’’ ಜಿಪುಣನೊಬ್ಬ ಕೂಗಿ ಅತ್ತ ಧಾವಿಸಿದ.
ನೋಡಿದರೆ ಅಲ್ಲೊಂದು ಶವಪೆಟ್ಟಿಗೆ ಅನಾಥವಾಗಿ ಬಿದ್ದಿತ್ತು.

ಮರ್ಯಾದಸ್ಥರು!
‘‘ಪ್ರಾಯ 35 ದಾಟಿರಬೇಕಲ್ಲ...ಬಹುಶಃ ನೀನು ಈ ವೃತ್ತಿಗೆ ಹೊಸಬಳು...ಅಲ್ಲವೆ’’ ವೃದ್ಧ ಗಡ್ಡ ನೀಯುತ್ತಾ ಕೇಳಿದ.
ಮಹಿಳೆ ಮುಚ್ಚಿದ ಬುರ್ಖಾದೊಳಗಿಂದಲೇ ಹೇಳಿದಳು
‘‘ಹೌದು. ಈ ಊರಿನ ದೊಡ್ಡ ಮರದ ಮಿಲ್ಲಿನ ಸಾಹುಕಾರರ ಮಗ ನನ್ನ ಮಗಳನ್ನು ಮದುವೆಯಾಗಲು ಒಪ್ಪಿದ್ದಾರೆ. 50 ಪವನ್ ಬಂಗಾರ ಹಾಕಬೇಕು. ಎಲ್ಲೂ ಹಣ ಹುಟ್ಟಲಿಲ್ಲ. ನಾವು ಬಡವರು. ಬೇರೆ ವಿಧಿಯಿಲ್ಲ...ಅದಕ್ಕಾಗಿ ಬಂದಿದ್ದೇನೆ....’’

ವೃದ್ಧ ಬೆವರಿ, ಧಿಗ್ಗನೆ ಎದ್ದು ನಿಂತ. ಬಳಿಕ ಅವಸರವಸರವಾಗಿ ಮೊಬೈಲ್ ತೆಗೆದು ಫೋನಲ್ಲಿ ಮಾತನಾಡತೊಡಗಿದ ‘‘ಮಗನೇ...ಆ ಸಂಬಂಧ ನಮಗೆ ಬೇಡ. ಅವರು ಮರ್ಯಾದಸ್ಥರಲ್ಲ...’’

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Thursday, December 15, 2011

ಬಾಗಿಲು ಮತ್ತು ಇತರ ಕತೆಗಳು

ಹಕ್ಕಿ ಮತ್ತು ಗರಿ
ಆದಿ ಅಂತ್ಯವಿಲ್ಲದ ದಿಗಂತವದು. ಬಾನಾಡಿಗಳು ಅದಾಗಲೇ ತಮ್ಮ ತಮ್ಮ ಗುರಿ ಹಿಡಿದು ಗೂಡು ಬಿಟ್ಟು ತೆರಳುತ್ತಿದ್ದವು. ಪ್ರಕೃತಿ ಅದನ್ನು ಸಂಭ್ರಮದಿಂದ ವೀಕ್ಷಿಸುತ್ತಿತ್ತು. ಹಕ್ಕಿಗಳು ಶೀಘ್ರ ಗುರಿ ತಲುಪಲಿ ಎಂದು ಹಾರೈಸುತ್ತಿದ್ದವು.
ಹೀಗೆ, ದಿಗಂತದಲ್ಲಿ ಹಕ್ಕಿಯೊಂದು ರೆಕ್ಕೆ ಬಿಚ್ಚಿ ಹಾರಿ ಹೋಗುತ್ತಿರುವ ಸಂದರ್ಭ, ರಭಸಕ್ಕೆ ಹಕ್ಕಿಯ ಗರಿಯೊಂದು ಉದುರಿ ಬಿತ್ತು. ಗರಿ ಸ್ವ್ವತಂತ್ರವಾಗಿ ಆಕಾಶದಲ್ಲಿ ತೇಲತೊಡಗಿತ್ತು.
ಗರಿ ಹೇಳಿಕೊಂಡಿತು ‘ನಾನೀಗ ಸ್ವತಂತ್ರ. ಹಕ್ಕಿಯ ಹಂಗಿಲ್ಲದೆ ಹಾರಾಡುತ್ತಿದ್ದೇನೆ’
ಗಾಳಿಯಲ್ಲಿ ತೇಲಾಡುತ್ತಾ ಹಕ್ಕಿಯನ್ನು ನೋಡಿ ಗರಿ ಹಂಗಿಸಿತು ‘ನನ್ನ ಸಂಗಾತಿಗಳನ್ನು ರೆಕ್ಕೆಯಂತೆ ಬಳಸಿ, ನೀನು ಆಕಾಶದಲ್ಲಿ ಹಾರಾಡುತ್ತಾ ಮೆರೆದೆ. ನಮ್ಮನ್ನು ಮರೆತೆ. ಈಗ ನೋಡು... ನನಗೀಗ ನಿನ್ನ ಹಂಗಿಲ್ಲ. ಎಲ್ಲಾ ಗರಿಗಳು ನನ್ನಂತೆಯೇ ಸ್ವತಂತ್ರವಾದರೆ ನಿನಗೆಲ್ಲಿ ಅಸ್ತಿತ್ವ’
ಮತ್ತೆ ಜೋರಾಗಿ ಪ್ರಕೃತಿಗೆ ಕೂಗಿ ಹೇಳಿತು ‘ನೋಡಿರಿ, ನೋಡಿರಿ ನಾನೀಗ ಸ್ವತಂತ್ರವಾಗಿ ಹಾರಾಡುತ್ತಿದ್ದೇನೆ. ನದಿಗಳೇ ನೋಡಿ, ನನ್ನ ದೆಸೆಯಿಂದ ಹಕ್ಕಿ ಹಾರುತ್ತಿದ್ದರೂ, ನೀವೆಲ್ಲ ಹಕ್ಕಿಯನ್ನೇ ಕೊಂಡಾಡಿದಿರಿ. ಈಗ ನೋಡಿ...’ ಆದರೆ ಗಾಳಿ ನಿಧಾನವಾಗಿ ಕಡಿಮೆಯಾಯಿತು. ಗರಿ ನಿಧಾನವಾಗಿ ನೆಲವನ್ನಪ್ಪಿತು. ಮತ್ತೆ ಅಲ್ಲಿಂದ ನೆಗೆದು ಹಾರುವುದಕ್ಕೆ ಯತ್ನಿಸಿತು. ಊಹುಂ...ಆಗುತ್ತಿಲ್ಲ. ಅದೆಷ್ಟು ಪ್ರಯತ್ನಿಸಿದರೂ ಹಾರುವುದಕ್ಕಾಗುತ್ತಿಲ್ಲ... ಗರಿ ಅಸಹಾಯಕತೆಯಿಂದ ಮೇಲೆ ನೋಡಿತು. ಅಲ್ಲಿ ಹಕ್ಕಿ ಸದ್ದು ಗದ್ದಲವಿಲ್ಲದೆ ಹಾರುತ್ತಾ ಹಾರುತ್ತಾ, ತನ್ನ ಗುರಿಯೆಡೆಗೆ ಸಾಗುತ್ತಿತ್ತು.

ಬಾಗಿಲು
ಒಬ್ಬ ಫಕೀರ ಶ್ರೀಮಂತನ ಮಹಲಿಗೆ ಬಂದವನು ಅಂಗಳದಲ್ಲಿ ನಿಂತು ಆ ಮನೆಯನ್ನೇ ನೋಡುತ್ತಿದ್ದ.
ಶ್ರೀಮಂತ ಅಚ್ಚರಿಯಿಂದ ಕೇಳಿದ ‘‘ಏನು ನೋಡುತ್ತಿರುವೆ?’’
‘‘ನಿನ್ನ ಮನೆಯ ಹೆಬ್ಬಾಗಿಲನ್ನು’’
ಶ್ರೀಮಂತ ಹೆಮ್ಮೆಯಿಂದ ಹೇಳಿದ ‘‘ಅದು ತೇಗದ ಮರದಿಂದ ಮಾಡಿದ ಬಲಿಷ್ಠ ಬಾಗಿಲು...’’
‘‘ಯಾರಿಗೆ ಹೆದರಿ ಈ ಬಾಗಿಲನ್ನು ತಯಾರಿಸಿದ್ದೀಯ?’’
‘‘ಕಳ್ಳಕಾಕರಿಗೆ ಹೆದರಿ...’’
‘‘ನೀನು ಯಾವಾಗ ಈ ಬಲಿಷ್ಟ ಬಾಗಿಲನ್ನು ತಯಾರಿಸಬೇಕೆಂದು ತೀರ್ಮಾಸಿದ್ದೆಯೋ ಆಗಲೇ ಕಳ್ಳ ನಿನ್ನ ಮನೆಯನ್ನು ಪ್ರವೇಶಿಸಿಯಾಗಿದೆ ಅವನನ್ನು ಮನೆಯೊಳಗಡೆ ಬಿಟ್ಟು ಬಾಗಿಲು ಭದ್ರ ಪಡಿಸಿ, ನೀನು ಹೊರಗೆ ಬಂದು ನಿಂತಿದ್ದೀಯ’’
ಎಂದವನೇ ಫಕೀರ ಮುಂದೆ ನಡೆದ.

ಹೆಸರು
ಅವನು ಓಡೋಡಿ ಬಂದ.
‘‘ಗುರುಗಳೇ ನನಗೆ ಗಂಡು ಮಗು ಹುಟ್ಟಿದೆ. ಸುಂದರವಾದ ಒಂದು ಹೆಸರನ್ನು ಹೇಳಿ’’
ಸಂತ ನುಡಿದ ‘‘ಸುಂದರವಾದ ಹೆಸರುಗಳಿಲ್ಲ. ಸುಂದರವಾದ ಮನುಷ್ಯರಿದ್ದಾರೆ. ಆ ಮಗುವಿನಿಂದಾಗಿಯೇ ಹೆಸರು ಸುಂದರವಾಗುತ್ತದೆ. ಹೋಗು, ಆ ಮಗುವನ್ನು ಹೆತ್ತ ತಾಯಿಯಲ್ಲಿ ಕೇಳು. ಅವಳ ಆಸೆಯಂತೆ ಹೆಸರನ್ನಿಡು’’

ನಗು
ಅವರೆಲ್ಲ ಹಿರಿಯರು, ಶ್ರೀಮಂತರು, ಅಧಿಕಾರಿಗಳು...ಎಲ್ಲರೂ ಮುಂಜಾನೆ ಆ ಮೈದಾನದಲ್ಲಿ ಸೇರಿ ಜೋರಾಗಿ ನಗುವಿನ ವ್ಯಾಯಾಮ ಮಾಡುತ್ತಿದ್ದರು. ಬಾರದ ನಗುವನ್ನು ಎಲ್ಲರೂ ಸೇರಿ ಜೋರಾಗಿ ನಗುವುದಕ್ಕೆ ಪ್ರಯತ್ನಿಸುತ್ತಿದ್ದರು. ಆ ನಗುವಿನಿಂದ ಅವರ ಆರೋಗ್ಯ ಉತ್ತಮವಾಯಿತೋ ಗೊತ್ತಿಲ್ಲ. ಪಕ್ಕದ ಗುಡಿಸಲಿನ ಮಕ್ಕಳು ಅವರನ್ನು ನೋಡಿ ನಕ್ಕು ನಕ್ಕು ತಮ್ಮ ಆರೋಗ್ಯವನ್ನು ಉತ್ತಮ ಪಡಿಸಿಕೊಂಡರು.

ಸ್ನೇಹಿತರು
‘‘ಸುಮ್ನೆ ಸ್ನೇಹಿತರ ಜೊತೆ ಅಲೆಯುತ್ತಿದ್ದೀಯಲ್ಲ, ಯಾವ ಲಾಭಕ್ಕಾಗಿ ಅವರನ್ನು ಜೊತೆ ಸೇರಿಸ್ಕೊಂಡಿದ್ದೀಯ?’’
ತಂದೆ ಮಗನ ಮುಂದೆ ಸಿಟ್ಟಿನಿಂದ ಕಿರುಚಿದ.
‘‘ನನ್ನಿಂದ ಯಾವ ಲಾಭವೂ ಇಲ್ಲದಿದ್ದರೂ ಅವರು ನನ್ನ ಜೊತೆಗಿದ್ದಾರೆ. ಅದಕ್ಕಾಗಿ ನಾನೂ ಅವರ ಜೊತೆಗಿದ್ದೇನೆ’’ ಮಗ ತಣ್ಣಗೆ ಹೇಳಿದ.

ಆಳ
‘‘ನೀರು ಆಳವಿದೆಯೆ?’’ ಆತ ಕೇಳಿದ.
ನೀರಲ್ಲಿದ್ದವ ‘‘ಇಲ್ಲ’’ ಎಂದ.
ಆತ ನೀರಿಗೆ ಹಾರಿದ. ನೋಡ ನೋಡುತ್ತಿದ್ದಂತೆ ಆತ ಮುಳುಗ ತೊಡಗಿದ ‘‘ಏನ್ರೀ...ಆಳವಿಲ್ಲ ಎಂದ್ರಿ...?’’
‘‘ಈಜಲು ಗೊತ್ತಿರುವವನ ಆಳಕ್ಕೂ, ಗೊತ್ತಿಲ್ಲದವನ ಆಳಕ್ಕೂ ವ್ಯತ್ಯಾಸವಿದೆ. ನನಗೆ ಈಜಲು ಗೊತ್ತಿದೆ’’

ಉಪ್ಪು
ಮದುವೆಯ ಊಟ ಭರ್ಜರಿಯಾಗಿತ್ತು.
ಯಾರೋ ಜೋರಾಗಿ ಹೇಳಿದರು ‘‘ಉಪ್ಪು ಜಾಸ್ತಿಯಾಗಿದೆ...’’
ಇನ್ನಾರೋ ವಿನಯದಿಂದ ಉತ್ತರಿಸಿದರು ‘‘ಮದುವೆ ಹೆಣ್ಣಿನ ತಂದೆಯ ಕಣ್ಣೀರು ಒಂದಿಷ್ಟು ಹೆಚ್ಚು ಬಿದ್ದಿರಬೇಕು. ಕ್ಷಮಿಸಿ ಬಿಡಿ. ಯಾವುದೇ ತಕರಾರು ಮಾಡದೇ ದಯವಿಟ್ಟು ಊಟ ಮುಗಿಸಿ’’

ವರದಿ
‘‘ನಗರದಲ್ಲಿ ಕೋಮುಗಲಭೆ, ಇಬ್ಬರ ಬರ್ಬರ ಕೊಲೆ’’
ವರದಿಗಾರ ಸುದ್ದಿ ಮಾಡುತ್ತಿದ್ದ.
ಇನ್ನೊಬ್ಬ ಕೇಳಿದ ‘‘ಅಂತದ್ದು ಯಾವುದೂ ನಡೆದಿಲ್ಲವಲ್ಲ?’’
‘‘ಇದು ಪ್ರಕಟವಾದ ಬಳಿಕ ನಡೆಯುತ್ತೆ. ಸುಮ್ಮನೆ ತಲೆಕೆಡಿಸಿಕೊಳ್ಳಬೇಡ’’ ವರದಿಗಾರ ಉತ್ತರಿಸಿದ.

Tuesday, December 13, 2011

ಕಳಚಿಟ್ಟು ಬಾ ಒಳಗೆ...

ಒಳ ಬರುವ ಮೊದಲು ಗೆಳೆಯ ಕೇಳಿದ
ಚಪ್ಪಲಿಯನ್ನು ಕಳಚಿಟ್ಟು ಬರಲೆ?
ಹೇಳಿದೆ:
ಗೆಳೆಯ ಕಾಲಿನಲ್ಲಿರುವ ಚಪ್ಪಲಿ
ಹಾಗೇ ಇರಲಿ
ನೀನು ಬಳಸಿ ಸವೆದು ಹೋಗಿರುವ
ನಿನ್ನ ಹೆಸರನ್ನು ಕಳಚಿ ಒಳಗೆ ಬಾ...

ಗೆಳೆಯಾ,
ತಪ್ಪು, ಹೆಸರನ್ನು ಹೊಲಿದ
ಚಮ್ಮಾರನದ್ದಲ್ಲ
ಅದನ್ನು ಧರಿಸಿ ನೀನು
ತುಳಿದ ದಾರಿಯದ್ದು

ನೀನು ಧರಿಸಿಕೊಂಡ
ಚಪ್ಪಲಿಯಲ್ಲಿ
ಅಂಟಿಕೊಂಡ ಧರ್ಮ, ಜಾತಿ
ವರ್ಗ, ಕುಲ, ಗೋತ್ರ...
ಇತ್ಯಾದಿ ಹೊಲಸುಗಳ ನೋಡು
ಒಳಗೆ ಬರುವುದಾದರೆ
ಕಳಚಿಟ್ಟು ಬಾ...
ಆ ನಿನ್ನ ಹೆಸರನ್ನ!

ಗೆಳೆಯಾ...
ಹೊಂಡ ತೋಡಿ ಮುಚ್ಚುವಾಗ
ನೀನೊಂದು ಬರೇ ಹೆಣ!
ನೀನು ಧರಿಸಿಕೊಂಡ
ಹೆಸರೆಂಬ ಚಪ್ಪಲಿಯನ್ನು
ಹರಿದು ಎಸೆದಿದ್ದಾರೆ ನೋಡು,
ಗುಜರಿ ಅಂಗಡಿಯ ತಕ್ಕಡಿಯಲ್ಲಿ
ತೂಗುತ್ತಿರುವ ನಿನ್ನ ಹೆಸರು
ಹತ್ತು ರೂಪಾಯಿಯಷ್ಟೂ
ಬೆಲೆ ಬಾಳುತ್ತಿಲ್ಲ!!

Tuesday, November 22, 2011

ದೇಶ

ಅಂದು ಮುಂಜಾನೆ ಎದ್ದು ನೋಡುತ್ತೇನೆ...
ಭಾರತ ಕಾಣೆಯಾಗಿದೆ
ಎಲ್ಲಿ ಹೋಯಿತು?
ಮಲಗುವವರೆಗೂ
ತನ್ನ ತ್ರಿವರ್ಣ ಸೆರಗನ್ನು
ಹಾರಿಸುತ್ತ ಬಿಂಕ ಬಿನ್ನಾಣದಿಂದ ಇಲ್ಲೇ ಓಡಾಡುತ್ತಿತ್ತಲ್ಲ
ಎಂದು ಹಿತ್ತಲಿಗೆ ಬಂದರೆ...
ತೆರೆದ ಮಲದ ಗುಂಡಿಯಲ್ಲಿ

ನನ್ನ ದೇಶದ ಹೆಣ ತೇಲುತ್ತಿತ್ತು!

Sunday, November 20, 2011

ಸಿರಿಸಂಪಿಗೆಯ ನೆನಪು

ಈ ಗ್ರೂಫ್ ಫೋಟೋದಲ್ಲಿ ಹಲ್ಲು ಕಿರಿಯುತ್ತಿರುವ ಜೋಕರ್ ಒಬ್ಬ(ಬಲಭಾಗದಲ್ಲಿ) ಇದ್ದಾನಲ್ಲ, ಅದು ನನ್ನ ಫೋಟೋ. ಸುಮಾರು 15 ವರ್ಷಗಳ ಹಿಂದೆ ಮುಂಬೈಯಲ್ಲಿ ಆಡಿದ ಚಂದ್ರಶೇಖರ ಕಂಬಾರ ಅವರ ಸಿರಿಸಂಪಿಗೆ ನಾಟಕದಲ್ಲಿ ಅವಳಿ-ಜವಳಿ ಹಾಸ್ಯಗಾರ ಪಾತ್ರದಲ್ಲಿ ನಾನು ಜವಳಿ ಪಾತ್ರ ವಹಿಸಿದ್ದೆ. ಅವಳಿ ಪಾತ್ರವನ್ನು ನನ್ನ ಗೆಳೆಯ ನವೀನ್ ಸುನಗ ವಹಿಸಿದ್ದರು. ಅವರೀಗ ನಾಟಕ, ಸಿನಿಮ ಅಂತ ಬಿಸಿಯಾಗಿದ್ದಾರೆ. ಸಿರಿಸಂಪಿಗೆ ನಾಟಕದ ರಾಜಕುಮಾರಿ ಪಾತ್ರದಲ್ಲಿ ಹಾ.ಮ. ಕನಕ (ಹಸಿರು ಸೀರೆ ಉಟ್ಟು ರಾಜಕುಮಾರಿ ತರ ಮುದ್ದಾಗಿದ್ದಾರಲ್ಲ, ಅವರೇ,) ನಟಿಸಿದ್ದರು. ಸುರೇಶ ಹಾನಗಲ್ಲಿ ಈ ನಾಟಕವನ್ನು ನಿರ್ದೇಶಿಸಿದ್ದರು. (ಕುಳಿತ ಗಡ್ಡಧಾರಿ ಮೂಗಿಗೆ ಕೈ ಇಟ್ಟಿದ್ದಾರಲ್ಲ ಅವರೇ). ಕೈಯಲ್ಲಿ ಮಗುವನ್ನು ಹಿಡಿದು ಎಡಭಾಗದಲ್ಲಿ ನಿಂತಿದ್ದಾರಲ್ಲ, ಅವರು ರಂಗಕರ್ಮಿ ಗಿರಿಧರ್ ಕಾರ್ಕಳ್, ಈಗವರು ಮೈಸೂರಲ್ಲಿದ್ದಾರೆ.

Thursday, November 17, 2011

ವೃತ್ತಿ ಮತ್ತು ಇತರ ಕತೆಗಳು


ಶ್ರೀಮಂತ
ನ್ಯಾಯಾಲಯ ಆದೇಶ ನೀಡಿತು ‘‘ಓರ್ವ ಪ್ರತಿ ದಿನ 35 ರೂ. ಖರ್ಚು ಮಾಡುತ್ತಿದ್ದರೆ ಅವನನ್ನು ಶ್ರೀಮಂತನೆಂದು ಕರೆಯಬೇಕು’’
ಅಂತೆಯೇ ರೈತನೊಬ್ಬ 35 ರೂ. ತೆತ್ತು ವಿಷವನ್ನು ಕೊಂಡ.
ಮಾಧ್ಯಮಗಳಲ್ಲಿ ಸುದ್ದಿ ‘‘ಶ್ರೀಮಂತ ರೈತನಿಂದ ಸಾಲ ಪಾವತಿಸಲಾಗದೆ ಆತ್ಮಹತ್ಯೆ’’

ಭಯ
ಮೀನು ಹಿಡಿಯಲೆಂದು ಸಮುದ್ರಕ್ಕೆ ತೆರಳಿದ್ದ ಮೀನುಗಾರರು ಆಗಷ್ಟೇ ದಡ ಸೇರಿದ್ದರು
‘‘ಮೀನು ಕೊಳ್ಳಲೆಂದು ಶ್ರೀಮಂತನೊಬ್ಬ ಕೇಳಿದ ‘‘ಮೀನು ಹಿಡಿಯಲೆಂದು ಹೋದ ಅದೆಷ್ಟು ಮೀನುಗಾರರು ಕಡಲಲ್ಲಿ ಮುಳುಗಿ ಸತ್ತಿದ್ದಾರೆ. ಆದರೂ ನೀವು ಸಮುದ್ರಕ್ಕೆ ಮೀನು ಹಿಡಿಯಲೆಂದು ಹೋಗುತ್ತೀರಲ್ಲ? ನಿಮಗೆ ಭಯವಾಗುವುದಿಲ್ಲವೆ?್ಫ್ಫ
ಮೀನುಗಾರ ನಕ್ಕು ಹೇಳಿದ ‘‘ನಿಮ್ಮ ಹಿರಿಯರೆಲ್ಲ ನಿಮ್ಮ ಮನೆಯ ವಿಶಾಲವಾದ ಮಂಚದ ಮೇಲೆ ಮೃತಪಟ್ಟಿದ್ದಾರೆ. ಆದರೂ ನೀವು ನಿದ್ರಿಸುವುದಕ್ಕೆ ಮತ್ತೆ ಅದೇ ಮಂಚದೆಡೆಗೆ ಧಾವಿಸುತ್ತೀರಲ್ಲ, ನಿಮಗೆ ಭಯವಾಗುವುದಿಲ್ಲವೆ?’’

ವೃತ್ತಿ
ಅವನ ವೃತ್ತಿಯೇ ಅಪರಾಧಿಗಳನ್ನು ಗಲ್ಲಿಗೇರಿಸುವುದು.
ಸುಮಾರು 49 ಜನರನ್ನು ಗಲ್ಲಿಗೇರಿಸಿದ್ದಾನೆ ಅವನು.
ಇದೀಗ ಇನ್ನೊಬ್ಬನನ್ನು ಗಲ್ಲಿಗೇರಿಸಿದರೆ 50 ಪೂರ್ತಿಯಾಗುವುದು.
ಯಾರೋ ಅವನ ಸಂದರ್ಶನಕ್ಕೆ ಬಂದರು.
‘‘ನೀವು ಇನ್ನು ಒಬ್ಬನನ್ನು ಗಲ್ಲಿಗೇರಿಸಿದರೆ ಅರ್ಧ ಶತಕವಾಗುತ್ತದೆ. ಈ ಬಗ್ಗೆ ನಿಮ್ಮ ಅನಿಸಿಕೆಯೇನು?’’
ಅವನು ನಿರ್ಲಿಪ್ತನಾಗಿ ಹೇಳಿದ ‘‘ನಲ್ವತ್ತ ಒಂಬತ್ತು ಬಾರಿ ನಾನು ಸತ್ತಿದ್ದೇನೆ. ಇನ್ನು 50ನೆ ಬಾರಿ ಸಾಯುವುದರಲ್ಲೇನು ವಿಶೇಷ?’’

ಕನಸಿನ ಅಂಗಡಿ
ಅವನೊಬ್ಬ ಸ್ಫುರದ್ರೂಪಿ ತರುಣ. ಅಂಗಡಿಯನ್ನು ತೆರೆದ. ಅಂಗಡಿಗೊಂದು ಬೋರ್ಡು
‘ಇಲ್ಲಿ ನಿಮಗೆ ಬಿದ್ದ ಕನಸುಗಳಿಗೆ ಅರ್ಥ ಹೇಳಲಾಗುತ್ತದೆ’
ಎಲ್ಲರು ತಮ್ಮ ತಮ್ಮ ಕನಸುಗಳೊಂದಿಗೆ ಅಂಗಡಿಗೆ ಮುಗಿ ಬಿದ್ದರು.
ಒಬ್ಬ ತರುಣಿ ಒಂದು ತಿಂಗಳಿನಿಂದ ಆ ಅಂಗಡಿಗೆ ಕನಸುಗಳನ್ನು ಹಿಡಿದುಕೊಂಡು ಬರುತ್ತಿದ್ದಳು.
ಅವನು ಅವುಗಳಿಗೆ ಅರ್ಥ ಹೇಳಲು ಪ್ರಯತ್ನಿಸುತ್ತಿದ್ದ.
ಕೊನೆಗೊಂದು ದಿನ ಹುಡುಗಿ ಸಿಟ್ಟಿನಿಂದ ಹೇಳಿದಳು.
‘‘ನನ್ನ ಕಣ್ಣನೊಮ್ಮೆ ನೀನು ಕಣ್ಣಿಟ್ಟು ನೋಡಿದ್ದರೆ ಸಾಕಿತ್ತು. ನಾ ಕಂಡ, ಕಾಣುತ್ತಿರುವ ಕನಸಿನ ಅರ್ಥ ನಿನಗೆ ತಿಳಿದು ಬಿಡುತ್ತಿತ್ತು’’

ವರ್ಷ
‘‘ತಾತ, ನಿನಗೆ ಎಷ್ಟು ವರ್ಷ?’’ ಮೊಮ್ಮಗು ಕೇಳಿತು
‘‘ಗೊತ್ತಿಲ್ಲ ಮಗು, ಆದರೆ ಕೆಲವು ದಿನಗಳನ್ನು ನಾನು ನೂರಾರು ವರ್ಷ ಬದುಕಿದ್ದೇನೆ’’ ತಾತ ಉತ್ತರಿಸಿದ.

ಋಣ
ಪುಟಾಣಿ ಮಗು ಹೇಳಿತು ‘‘ಅಮ್ಯಾ ರಾತ್ರಿ...ನಿನ್ನ ಕಾಲನ್ನು ಒತ್ತಿದ್ದೇನೆ. ನನಗೆ ಅದಕ್ಕಾಗಿ 100 ರೂ. ಪಾಕೆಟ್ ಮನಿ ಕೊಡಬೇಕು’’
‘‘ಅಯ್ಯೋ ನನ್ನ ಬಂಗಾರ...ಅದರ ಋಣವನ್ನು ಹಣದಿಂದ ಹೇಗೆ ತೀರಿಸಲಿ...ಜೀವನ ಪರ್ಯಂತ ನಿನ್ನ ಸೇವೆ ಮಾಡಿ ಅದರ ಸಾಲವನ್ನು ತೀರಿಸುತ್ತೇನೆ ಆಗದೆ?’’ ತಾಯಿ ಮಗುವಿನ ಕೆನ್ನೆ ಹಿಂಡಿ ಕೇಳಿದಳು.

ಮಾತು
‘‘ನನ್ನ ಮಗ ತನ್ನ ತಾಯಿಯೊಂದಿಗೆ ಮೊಬೈಲ್‌ನಲ್ಲಿ ಗಂಟೆಗಟ್ಟಳೆ ಮಾತನಾಡುತ್ತಾನೆ...ನನಗೆ ಅದೇ ಚಿಂತೆಯಾಗಿದೆ’’
‘‘ತಾಯಿಯೊಂದಿಗೆ ತಾನೆ, ಇದರಲ್ಲಿ ಚಿಂತೆ ಮಾಡುವುದೇನು ಬಂತು? ಮಕ್ಕಳು ತಾಯಿಯೊಟ್ಟಿಗಲ್ಲದೆ ಇನ್ನಾರೊಟ್ಟಿಗೆ ಮಾತನಾಡುತ್ತಾರೆ?’’
‘‘ಅವನ ತಾಯಿ ಇಹಲೋಕ ತ್ಯಜಿಸಿ ಇಂದಿಗೆ ಹತ್ತು ವರ್ಷಗಳಾದುವು’’