Monday, January 12, 2015

ಮನ ತಟ್ಟುವ ಥ್ರಿಲ್ಲರ್ ‘ಅಗ್ಲಿ’

ಅನುರಾಗ್ ಕಶ್ಯಪ್ ಚಿತ್ರವೆಂದರೆ, ಅದು ಹೃದಯವನ್ನು ಛೇದಿಸಿ ನಮ್ಮ ನರನರಗಳನ್ನು ಆವಾಹಿಸಿಕೊಳ್ಳುತ್ತದೆ.ಅನುರಾಗ್ ಕಶ್ಯಪ್ ಬಾಲಿವುಡ್ ಸಿನಿಮಾಗಳಿಗೆ ಒಂದು ಪ್ರತಿ ಭಾಷೆಯನ್ನು ಕೊಟ್ಟವರು. ತಮ್ಮ ಸಿನಿಮಾಗಳ ಮೂಲಕ ಹಲವು ಶಾಕ್ ಗಳನ್ನ ಅವರು ನೀಡಿದರು. ಗುಲಾಲ್,  ‘ಗ್ಯಾಂಗ್ಸ್ ಆಫ್ ವಾಸ್ಸೇಪುರ್’ ಭಾಗ ಒಂದು, ಎರಡು ಚಿತ್ರಗಳ ಮೂಲಕ ಬಾಲಿವುಡ್ ಕಮರ್ಷಿಯಲ್ ಸಿನಿಮಾಗಳು ಹೊಸ ತಿರುವನ್ನು ಪಡೆದು ಕೊಂಡವು. ಆದರೂ ಇತ್ತೀಚಿಗೆ ಕಶ್ಯಪ್ ತುಸು ತಣ್ಣ ಗಾಗಿದ್ದರು. ಗ್ಯಾಂಗ್ಸ್ ಆಫ್... ನಂತಹ ಚಿತ್ರಗಳಿಗೆ ತಮ್ಮೆಲ್ಲ ಪ್ರತಿಭೆಯನ್ನು ಮೊಗೆದು ಕೊಟ್ಟು ಸುಸ್ತಾಗಿ ಬಿಟ್ಟರೋ ಎನ್ನುವಂತೆ. ಆದರೂ ನಿರ್ಮಾಣ, ಚಿತ್ರಕತೆ ಎಂದು ಬಗೆ ಬಗೆಯಲ್ಲಿ ಬಾಲಿವುಡ್‌ನಲ್ಲಿ ತೊಡಗುತ್ತಲೇ ಇದ್ದಾರೆ. ಹೊಸ ಪ್ರತಿಭಾವಂತರನ್ನು ಹುಡುಕಿ ಅವರಿಗೆ ಅವಕಾಶಗಳನ್ನು ನೀಡುತ್ತಾ ಬರುತ್ತಿದ್ದಾರೆ. ಕಶ್ಯಪ್ ಎಂದರೆ ಬಾಲಿವುಡ್‌ನ ಒಂದು ಪ್ರತ್ಯೇಕ ಶಕ್ತಿಯೇ ಸರಿ. ಬಹಳ ಸಮಯದ ಬಳಿಕ ಇದೀಗ ಅವರ ಅಗ್ಲಿ ಎನ್ನೋ ಚಿತ್ರ ಬಿಡುಗಡೆಯಾಗಿದೆ.ಆದರೆ  ಪೀಕೆ ಚಿತ್ರದ ಗದ್ದಲಗಳ ನಡುವೆ ಅನುರಾಗ್ ಕಶ್ಯಪ್ ಅವರ ‘ಅಗ್ಲಿ’ ಚಿತ್ರ ಬಂದು ಹೋದುದು ಬಹುತೇಕರಿಗೆ ಗೊತ್ತೇ ಇರಲಿಕ್ಕಿಲ್ಲ.
ನಗರದೊಳಗಿನ ಮನುಷ್ಯ ಸಂಬಂಧಗಳನ್ನು ಇಟ್ಟುಕೊಂಡು  ಒಂದು ವಿಭಿನ್ನ ಥ್ರಿಲ್ಲರ್ ಚಿತ್ರವನ್ನು ‘ಅಗ್ಲಿ’ ರೂಪದಲ್ಲಿ ಅವರು ಕೊಟ್ಟಿದ್ದಾರೆ. ಒಂದು ಮಗುವಿನ ನಾಪತ್ತೆ ಪ್ರಕರಣವನ್ನು ಕೇಂದ್ರವಾಗಿಟ್ಟು ನಗರದ ಸಾಂಸಾರಿಕ ಬದುಕು ಮತ್ತು ಅದರ ಬಿಚ್ಚಿ ಹೋದ ಹೆಣಿಕೆಗಳನ್ನು ಹೃದಯ ಛೇದಿಸುವಂತೆ ಅವರು ಕಟ್ಟಿಕೊಡುತ್ತಾರೆ. ಚಿತ್ರದ ಕತೆ ತೀರಾ ಹೊಸತಾದುದೇನೂ ಅಲ್ಲ. ಆದರೆ ಅದರ ನಿರೂಪಣೆಯ ತಂತ್ರ ಮಾತ್ರ ಹೊಸತು. ಒಂದು ಮಗು ಇದ್ದಕ್ಕಿದ್ದಂತೆಯೇ ನಾಪತ್ತೆಯಾಗುತ್ತದೆ. ನಗರದ ಇಡೀ ಪೊಲೀಸರು ಆ ಮಗುವಿನ ಪತ್ತೆಯ ಹಿಂದೆ ಬೀಳುತ್ತಾರೆ. ಯಾಕೆಂದರೆ ಆ ಮಗು ಪೊಲೀಸ್ ಅಧಿಕಾರಿ ಶೌಮಿಕ್ ಭೋಸ್(ರೋನಿತ್ ರಾಯ್)ಯ ಮಲ ಮಗು. ಅಂದರೆ ಪತ್ನಿಯ ಮೊದಲ ಗಂಡನ ಮಗು. ಶೌಮಿಕ್ ತನ್ನೆಲ್ಲ ಶ್ರಮವನ್ನು ವಹಿಸಿ ಆ ಮಗುವಿನ ಪತ್ತೆಯ ಹಿಂದೆ ಬೀಳುತ್ತಾನೆ. ಆದರೆ ಇದೇ ಸಂದರ್ಭದಲ್ಲಿ ಆ ಮಗುವನ್ನು ಮುಂದಿಟ್ಟುಕೊಂಡು ಸಂಬಂಧಗಳೇ ವ್ಯವಹಾರಕ್ಕಿಳಿಯುತ್ತವೆ. ಗಂಡ, ಮನೆ, ಕುಟುಂಬದ ಹಿಂದಿರುವ ಅಶ್ಲೀಲತನ, ನೀಚತನಗಳು ಬಯಲಾಗುತ್ತಾ ಹೋಗುತ್ತವೆ. ಅಂತಿಮವಾಗಿ ಹೇಗೆ ಈ ತಿಕ್ಕಾಟಕ್ಕೆ ಮುಗ್ದ ಮಗು ಬಲಿಯಾಗಬೇಕಾಗುತ್ತದೆ ಎನ್ನುವುದೇ ‘ಅಗ್ಲಿ’ ಚಿತ್ರದ ಕಥಾವಸ್ತು.
  ಮೊದಲ ಪ್ರೇಮಿಯಾಗಿ ರಾಹುಲ್ ಭಟ್ ನಟನೆ, ಶೌಮಿಕ್ ಭೋಸ್ ಆಗಿ ರೋನಿತ್ ರಾಯ್ ನಟನೆ ಇಡೀ ಚಿತ್ರದ ಹೆಗ್ಗಳಿಕೆ. ಆರಂಭದಿಂದ ಕೊನೆಯವರೆಗೂ ಕುತೂಹಲವನ್ನು ಉಳಿಸಿಕೊಳ್ಳುವ ಚಿತ್ರ ಇದು. ಒಂದು ಸರಳ ಕತೆಯನ್ನು ಬಿಗಿಯಾಗಿ ನಿರೂಪಿಸುತ್ತಾ, ಕೊನೆಯವರೆಗೂ ಅದನ್ನು ಹಿಡಿದಿಟ್ಟುಕೊಳ್ಳುವಲ್ಲಿ ಕಶ್ಯಪ್ ಮಾಡಿದ ಪ್ರಯತ್ನಕ್ಕೆ ಸಾಟಿಯಿಲ್ಲ. ಕ್ರೌರ್ಯ, ವಿಷಾದ, ಸಮಯಸಾಧಕಗಳಿಂದ ಕೂಡಿಕೊಂಡ ಅಶ್ಲೀಲ ಸಂಬಂಧಗಳನ್ನು ಕಶ್ಯಪ್ ಕಟ್ಟಿಕೊಟ್ಟ  ನಮ್ಮನ್ನು ಬಹು ಕಾಲ ಕಾಡುತ್ತದೆ

1 comment: