Tuesday, January 7, 2014

ಕೊಂಗಾಣದ ಅಮಾನುಷ ಕೊಲೆಗಳು

 ಕವಿ, ಪತ್ರಕರ್ತ ದಿ. ಬಿ. ಎಮ್. ರಶೀದ್, ಲಂಕೇಶ್ ಪತ್ರಿಕೆಗೆ ಮಾಡಿದ ಒಂದು ವರದಿ. ಕೊಡಗಿನ ವೀರಾಜ ಪೇಟೆಯ ಕೊಂಗಾಣದಲ್ಲಿ ನಡೆದ ಬರ್ಬರ ಕೊಲೆಗಳ ಹಿಂದಿರುವ, ರಾಜಕೀಯ, ಸಾಮಾಜಿಕ ಮಗ್ಗುಲುಗಳನ್ನು ಶೋಧಿಸುವ ಕೆಲಸ ಈ ವರದಿ ಮಾಡುತ್ತದೆ. ಕ್ರೈಮ್ ಗಳನ್ನು  ವೈಭವೀಕರಿಸದೆಯೇ ಒಬ್ಬ ವರದಿಗಾರ ಮಾನವೀಯ ನೆಲೆಯಲ್ಲಿ ಹೇಗೆ ವರದಿ ಮಾಡಬಹುದು ಎನ್ನೂದಕ್ಕೆ ಉದಾಹರಣೆ ಯಾಗಿ ಇಲ್ಲಿ ನೀಡಿದ್ದೇನೆ. ಬಿ. ಎಮ್. ರಶೀದ್ ನ ಬರಹಗಳ ಸಂಗ್ರಹ "ಪರುಷ ಮಣಿ" ಕೃತಿಯಿಂದ ಇದನ್ನು ಆರಿಸಲಾಗಿದೆ.

ನಾಗರಿಕ ಜಗತ್ತಿನ ಸಂಪರ್ಕವೇ ಇಲ್ಲದ ಅರಣ್ಯಗಳು ಮನುಷ್ಯನ ಮನಸ್ಸಿನ ಮೇಲೆ ಎಂತಹ ಪ್ರಭಾವವನ್ನು ಸ್ಥಾಪಿಸಿರುತ್ತವೆನ್ನುವುದಕ್ಕೆ, ಕೊಡಗಿನ ಕೊಂಗಾಣ ಎಂಬ ಕುಗ್ರಾಮದಲ್ಲಿ ನಡೆದಿರುವ ಘಟನಾವಳಿಗಿಂತ ಬೇರೆ ಸಾಕ್ಷಿಯೇ ಬೇಕಾಗಿಲ್ಲ. ಕಾಡಿನ ಮೂಲಭೂತ ಗುಣ ಮತ್ತು ನಾಗರಿಕತೆಯ ನಡುವಿನ ಘರ್ಷಣೆಯಲ್ಲಿಯೇ ಬಹುಶಃ ಸನ್ನುವಿನಂತಹ ವಿಕ್ಷಿಪ್ತ ಮನಸ್ಸಿನ ಕೊಲೆಗಡುಕರು ಸೃಷ್ಟಿಯಾಗುತ್ತಾರೇನೋ! ನಾಗರಿಕ ಸಮಾಜ,ಪ್ರತಿಭಟನೆಗೆ ಪ್ರಜಾಸತ್ತಾತ್ಮಕ ದಾರಿಗಳನ್ನು ತೋರಿಸಿ ಕೊಟ್ಟಿವೆ ನಿಜ.ಆದರೆ ಕಾಡನ್ನೇ ತನ್ನ ಅಸ್ತಿತ್ವಕ್ಕಾಗಿ ನೆಚ್ಚಿಕೊಂಡಿರುವ ಮನುಷ್ಯರ ಮೇಲೆ ಕಾಡಿನ ನ್ಯಾಯ, ತನ್ನ ಪ್ರಭಾವವನ್ನು ಬೀರಿಯೇ ತೀರುತ್ತದೆನ್ನುವುದನ್ನು ಕೊಂಗಾಣದಲಿ ನಡೆದ ಸರಣಿ ಹತ್ಯೆಗಳು ಮನಗಾಣಿಸಿ ಕೊಡುತ್ತಿವೆ.
ಸ್ವಂತ ಪತ್ನಿ, ಮಗು, ಅಣ್ಣ, ಅತ್ತಿಗೆಯರನ್ನು ಕೊಂದು ಕೊನೆಗೆ ತನ್ನ ಅಣ್ಣನ ಮಗನಿಂದಲೇ ಸಿನಿಮೀಯ ರೀತಿಯಲ್ಲಿ ಹತ್ಯೆಗೀಡಾದ ಸನ್ನುವಿನ ಕೈಯಲ್ಲಿದ್ದದ್ದು ನಾಲ್ಕಲ್ಲ; ಕೊಲ್ಲಬೇಕಾದ ಹದಿನೈದು ಜನರ ಯಾದಿ! ತನಗೆ ಕಿರುಕುಳ ಕೊಟ್ಟವರನ್ನೆಲ್ಲಾ ಕೊಂದು ಭೂಗತ ಮಾಡುವುದೇ ತನ್ನ ಸಮಸ್ಯೆಗಳಿಗೆ ಅಂತಿಮ ಪರಿಹಾರವೆಂದು ಭಾವಿಸಿದ್ದ ಸನ್ನುವಿನ ಕೊಲೆಗಡುಕ ಮನೋಸ್ಥಿತಿಗೆ ನಿರ್ದಿಷ್ಟವಾಗಿ ಇಂತಹದೇ ಒಂದು ಕಾರಣವಿರಬಹುದೆಂದು ಊಹಿಸುವುದು ಮೂರ್ಖತನದ ಕೆಲಸವಾಗಲಾರದೇ? ಸನ್ನು ಕೊಲ್ಲಬೇಕೆಂದಿದ್ದವರ ಪಟ್ಟಿಯಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ಕೊಲೆಯ ಕಾರಣಗಳು ಭಿನ್ನವಾಗುತ್ತಾ ಹೋಗುವ ಸಾಧ್ಯತೆಯೇ ಹೆಚ್ಚಲ್ಲವೇ? ಹಾಗಿದ್ದರೆ ಕಾಡಲ್ಲಿ ಬಚ್ಚಿಟ್ಟುಕೊಂಡು ತನಗೆ ತೊಂದರೆ ಕೊಟ್ಟ ಹದಿನೈದು ಮಂದಿಯನ್ನು ಸರಣಿಯೋಪಾದಿಯಲ್ಲಿ ಕೊಲ್ಲಬೇಕೆಂದುಕೊಂಡ ಸನ್ನುವಿನ ಮನೋಸ್ಥಿತಿಯ ಹಿನ್ನಲೆ ಎಂತಹದು?ಯಾವುದಕ್ಕೂ ಮೊದಲು ಕೊಂಗಾಣವೆಂಬ ಕುಗ್ರಾಮವನ್ನು ಕಣ್ಣಲ್ಲಿ ಕಂಡು ಬಿಡಬೇಕು. ಅಷ್ಟಾಯಿತೆಂದರೆ ನಮ್ಮ ಅರ್ಧದಷ್ಟು ಪ್ರಶ್ನೆಗಳಿಗೆ ಆ ಊರೇ ಉತ್ತರ ನೀಡಿ ಬಿಡುತ್ತದೆ.
ಹೇಗಿದೆ ಕೊಂಗಾಣ?
ವೀರಾಜಪೇಟೆಯಿಂದ ಸುಮಾರು 18ಕಿ.ಮೀ. ದೂರದಲ್ಲಿರುವ ಕೊಂಗಾಣಕ್ಕೆ ತಲುಪಬೇಕೆಂದರೆ ದಬಾಯಿಸಿ ನಿಂತ ಕಾಡೊಳಗೆ ನಾಲ್ಕು ಕಿ.ಮೀ. ನಡೆಯಬೇಕು. ಹಾಗೆ ಪರಿಪಾಟಲು ಪಟ್ಟು ತಲುಪಿದ ಊರಿನಲ್ಲಿ ಟೆಲಿಫೋನಿರಲಿ, ಒಂದು ವಿದ್ಯುತ್ ಕಂಬದ ಕುರುಹೂ ಕೂಡ ನಿಮ್ಮ ಕಣ್ಣಿಗೆ ಬೀಳುವುದಿಲ್ಲ.ಕಾಡಿನ ನಡುವೆ ಹುದುಗಿ ಹೋದ ಹತ್ತಿಪ್ಪತ್ತು ಮನೆಗಳು ಹಂಚಿನ ಸಂದುಗಳಲ್ಲಿ ಹೊಗೆ ಕಾರುತ್ತಾ ಜೂಗರಿಸುವುದನ್ನು ನೀವು ಕಾಣುತ್ತೀರಿ. ಎಲ್ಲವೂ ಕಡೇಮಾಡ ಮನೆತನಕ್ಕೆ ಸೇರಿದ ಕೊಡವರ ಮನೆಗಳು. ಗ್ರಾಮವನ್ನಿಡೀ ಕಂಬಳಿಯಂತೆ ಕವುಚಿದ ಕಾಡಿನ ದೆಸೆಯಿಂದ ಹಗಲಿಗೂ,ರಾತ್ರಿಗೂ ಭೇದವೇ ಇಲ್ಲ.
ಕೊಂಗಾಣದ ಕೊಡವರು ಹೆಸರಿಗೊಂದಿಷ್ಟು ಕಾಫಿ. ಕರಿಮೆಣಸು, ಶುಂಠಿ ಕೃಷಿಗಳನ್ನು ನಡೆಸುತ್ತಿರುವವರಾದರೂ, ಮರಗಳ್ಳ ಸಾಗಾಣಿಕೆ, ಕಳ್ಳಬೇಟೆ, ಕಳ್ಳಭಟ್ಟಿ ಸಾರಾಯಿ ಎಲ್ಲರಿಗೂ ವರಮಾನದ ದಿಡ್ಡಿ ಬಾಗಿಲು.
ಅದರಲ್ಲೂ ಎರಡು ಗುಂಪು ಬೇರೆ. ಒಂದು ಗುಂಪು ಸನುವಿನದಾದರೆ ಮತ್ತೊಂದು ತಂಡಕ್ಕೆ ಕುಂಜಂಡ ರವಿ ಎಂಬ ಕುಖ್ಯಾತ ರೌಡಿ ನಾಯಕ. ಹೀಗಾಗಿ ದ್ವೇಷ ಸಾಧನೆ, ಜಗಳ, ಹಲ್ಲೆ ಕೊಲೆಗಳಿಗೆ ಕೊಂಗಾಣದಲ್ಲಿ ಬರವೂ ಇಲ್ಲ. ಕೊಂಗಾಣ 1974ರಿಂದಲೇ ಕೊಲೆಗಳಿಗೆ ಕುಪ್ರಸಿದ್ಧವಾದ ಊರು. 74ರಲ್ಲಿ ಕಾಳೆಂಗಡ ದೊರೆಯಪ್ಪ ಎಂಬ ನಟೋರಿಯಸ್ ಢಕಾಯಿತನ ಹೆಸರೆತ್ತಿದರೆ ಇಡೀ ಕೊಂಗಾಣವೇ ತತ್ತರ ನಡುಗುತ್ತಿತ್ತು. ಶಾಲೆಗೆ ಹೊರಟ ಹೆಣ್ಣುಮಕ್ಕಳು ದೊರೆಯಪ್ಪನ ಕಾಟದಿಂದ ಮರಳಿ ಮನೆ ಸೇರುವುದೇ ಅನಿಶ್ಚಿತವೆಂಬ ದಿನವಾಗಿತ್ತದು. ಕೊನೆಗೆ ಕೊಂಗಾಣದ ಜನರು ಏಳು ಮಂದಿಯ ತಂಡ ಕಟ್ಟಿ ದೊರೆಯಪ್ಪನ ಮೇಲೆ ಮುಗಿಬಿದ್ದು ಮುಗಿಸಿ ಹಾಕಿದರು.ಮೊನ್ನೆ ಸನ್ನುವಿನ ಕೈಯಿಂದ ಹತನಾಗಿ ಹೋದ ಗೋಪಿ ಬೋಪಯ್ಯಮತ್ತು ಕೂದಲೆಳೆ ಅಂತರದಿಂದ ಪಾರಾದ ಕಾಶಿ, ದೊರೆಯಪ್ಪನ ಕೊಲೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆನ್ನುವುದನ್ನು ಕೂಡ ನಾವಿಲ್ಲಿ ಮರೆಯುವಂತಿಲ್ಲ. ಮುಂದೆ ಅದೇನಾಯ್ತೋ, ದೊರೆಯಪ್ಪನ ಕೊಲೆಯ ಬಳಿಕ ಕೊಂಗಾಣದಲ್ಲಿ ಅಲ್ಲೊಂದು ಇಲ್ಲೊಂದರಂತೆ ಹೆಣಗಳು ಉರುಳುತ್ತಲೇ ಹೋಯ್ತು. ಎರವನೊಬ್ಬನನ್ನು ಪೆಟ್ರೋಲ್ ಹುಯ್ದು ಸಜೀವವಾಗಿ ಸುಟ್ಟು ಬಿಡಲಾಯ್ತು. ಮುದ್ದೇಡ ವಿಜಯ, ಜಗದಿ ಮುಂತಾದ ಯುವಕರು ಸದ್ದಿಲ್ಲದೆ ಕೊಲೆಯಾಗಿ ಹೋದರು. ಹೀಗೆ ಕೊಂಗಾಣದಲ್ಲಿ ಯಾವುದಕ್ಕೂ ಕೊಲೆಯೇ ಅಂತಿಮ ಪರಿಹಾರವೆನ್ನುವ ಅಘೋಷಿತ ನಿಯಮವೊಂದು ಅನಾದಿ ಕಾಲದಿಂದಲೇ ಜಾರಿಗೆ ಬಂದಿತ್ತು. ಹೆಣಗಳು ಬಿದ್ದಷ್ಟು ತಮಗೆ ಸುಗ್ಗಿಯೆಂದು ಬಗೆದು ಪೊಲೀಸರೆಂಬ ಪಾತಕಿಗಳು, ಕೊಂಗಾಣದ ಕೊಲೆಗಡುಕರಿಗೆ ತಮ್ಮ ಕೈಲಾದ ಸಹಾಯವನ್ನು ನೀಡುತ್ತಲೇ ಬಂದರು.
ಸನ್ನು ದುಷ್ಟನೇ?
ಇಂತಹ ಕೊಂಗಾಣವೆಂಬ ಕಗ್ಗಾಡಿನಲ್ಲಿ ಬೆಳೆದು ಬಂದ ಸನ್ನುವಿಗೆ ಇದೀಗ ವಿಕ್ಷಿಪ್ತ ಮನಸ್ಸಿನ ಕೊಲೆಗಡುಕನೆಂಬ ಹಣೆಪಟ್ಟಿ ಲಭಿಸಿದ್ದರೂ, ಬಲ್ಲವರ ಪ್ರಕಾರ ಆತ ಅಂತಹ ದುಷ್ಟನೇನೂ ಆಗಿರಲಿಲ್ಲ. ಒಂಭತ್ತು ವರ್ಷದ ಹಿಂದೆ ನೀತೂ ಎಂಬ ಸುಂದರಿಯನ್ನು ಮದುವೆಯಾಗಿದ್ದ ಸನ್ನುವಿಗೆ ಹೆಂಡತಿಯ ಕಡೆಗೆ ಪ್ರೀತಿಯಿತ್ತು. ಅವರ ದಾಂಪತ್ಯಕ್ಕೆ ನಾಲ್ಕು ವರ್ಷದ ಮಗು ನೀಷ್ಮಾ ಸಾಕ್ಷಿಯಾಗಿತ್ತು. ಪಿತ್ರಾರ್ಜಿತವಾಗಿ ಬಂದ ಇಪ್ಪತ್ತೈದು ಎಕರೆ ಜಮೀನಿನಲ್ಲಿ ಕಾಫಿ, ಕರಿಮೆಣಸು ಬೆಳೆದಿದ್ದ ಸನ್ನು, ಇನ್ನೊಂದು ಕಡೆಯಿಂದ ಕೊಂಗಾಣದ ಎಲ್ಲಾ ಮಹನೀಯರಂತೆ ಮರಗಳ್ಳ ಸಾಗಾಣಿಕೆಯ ದಂಧೆಯನ್ನೂ ನಡೆಸುತ್ತಿದ್ದವನು. ಇದೆಲ್ಲಾ ತಪ್ಪೆಂದು ಮನಗಾಣಿಸುವಂತಹ ಸಾಮಾಜಿಕ ವೌಲ್ಯಗಳು ಕೂಡ ಕೊಂಗಾಣದಲ್ಲಿರದಿದ್ದುದರಿಂದ ಕಳ್ಳ ಸಾಗಾಣಿಕೆ ಕೂಡ ಅಲ್ಲಿನ ಜನರಿಗೆ ಸಹಜ ದಂಧೆಯಾಗಿತ್ತು. ಒಟ್ಟಿನಲ್ಲಿ ಸನ್ನು ತನ್ನ ಕುಟುಂಬದೊಂದಿಗೆ ನೆಮ್ಮದಿಯಾಗಿದ್ದಕ್ಕೆ ನಿದರ್ಶನಗಳಿದ್ದವು. ಆದರೆ ಪರಿಸರದ ನೆಮ್ಮದಿ ಕೆಟ್ಟಾಗ ಮನೆಯ ನೆಮ್ಮದಿಯೂ ಕೆಡುತ್ತದೆನ್ನುವಂತೆ ಕೊಂಗಾಣದ ಮರಗಳ್ಳರು ಎರಡು ಗುಂಪುಗಳಾಗಿ ವಿಭಜಿಸಿ ಹೋಗಿ ಒಬ್ಬರಿಗೊಬ್ಬರ ವಿರುದ್ಧ ಕತ್ತಿ ಮಸೆಯುತ್ತಿದ್ದರು. ಒಬ್ಬರಿಗೊಬ್ಬರ ಕಳ್ಳ ನಾಟಕಗಳ ವಿವರಗಳನ್ನು ಇಲಾಖೆಗೆ ನೀಡಿ ರೈಡ್ ಮಾಡಿಸುವುದು ಇತ್ತಂಡಗಳ ಮುಖ್ಯ ಕಸುಬಾಗಿತ್ತು.
ನರ ಬೇಟೆಯ ಹಿಂದಿನ ಕಾರಣಗಳು!
ವೈಯಕ್ತಿಕವಾಗಿ ಒಳ್ಳೆಯವನೇ ಆಗಿದ್ದ ಸನ್ನುವಿನ ಬದುಕಿನಲ್ಲಿ ಕಡೆ ಮಾಡಕಾಶಿಯ ಮಗ ಗಣಪನ ಜೊತೆ ಪಾಲುದಾರಿಕೆಯಲ್ಲಿ ಶುಂಠಿ ಬೆಳೆದದ್ದು ಒಂದು ಮುಖ್ಯ ತಿರುವು. ಸ್ವತಃ ಕಠಿಣ ಪರಿಶ್ರಮಿಯಾಗಿದ್ದ ಸನ್ನು ಅದೇಕೆ ಅಂತಹ ಮೂರ್ಖ ನಿರ್ಧಾರ ತಳೆದನೋ? ಬರೇ ಇಪ್ಪತ್ತೇಳು ವರ್ಷ ಪ್ರಾಯದ ಎಳಸು ಗಣಪನೊಂದಿಗೆ ಸೇರಿ ತನ್ನ ಜಮೀನಿನಲ್ಲಿ ಶುಂಠಿ ಬೆಳೆಯ ತೊಡಗಿದನು. ಇದೇ ಹೊತ್ತಿನಲ್ಲಿ ಗಣಪ, ಸನ್ನುವಿನ ಮನೆಗೆ ಬಂದು ಹೋಗುವುದೆಲ್ಲಾ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಸನ್ನುವಿನ ಪತ್ನಿ ನೀತೂಗೂ, ಗಣಪನಿಗೂ ನಡುವೆ ಸ್ನೇಹ ಬೆಳೆದಿತ್ತೇ? ಹಾಗಂತ ಹೇಳುವವರಿದ್ದಾರೆ. ಆದರೆ ಕಂಡವರಿಲ್ಲ. ದಿನ ಕಳೆದಂತೇ ಗಣಪ ತನ್ನ ವಿರೋಧಿ ಪಾಳಯದಲ್ಲಿ ಪ್ರತ್ಯಕ್ಷನಾದದ್ದೇ ಸನ್ನುವಿನ ನೆಮ್ಮದಿಗೆಡತೊಡಗಿತು.ಇದರಿಂದ ಅವರಿಬ್ಬರೊಳಗಿನ ಸಂಬಂಧ ಹದಗೆಟ್ಟು ಗಣಪ, ಸನ್ನುವಿಗೆ 60 ಸಾವಿರ ರೂಪಾಯಿ ನಾಮ ತಿಕ್ಕಿಯೇ ಬಿಟ್ಟನು. ಹುಟ್ಟಾ ವಂಚಕ ಗಣಪ, ಸನ್ನುವಿಗೆ ವಂಚಿಸಲೆಂದೇ ಆತನ ವಿರೋಧಿ ಬಲಾಢ್ಯನೂ ಆಗಿದ್ದ ಕುಂಜಂಡ ರವಿಯ ಪಾಳಯ ಸೇರಿಬಿಟ್ಟಿದ್ದನು. ಶುಂಠಿಯ ಮೇಲೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ್ದ ಸನ್ನುವಿಗೆ ಇದು ಬಹುದೊಡ್ಡ ಏಟಾಯ್ತು. ಮೊದಲೇ ಸರಿಯಾದ ಬೆಲೆ ಇಲ್ಲದೇ ಕಾಫಿ, ಕರಿಮೆಣಸು ಕೈ ಕಚ್ಚಿ ಬಿಟ್ಟಿತ್ತು. ಸಮಯ ಹೀಗಿರುವಾಗಲೇ ಬೆಂಗಳೂರಿನಲ್ಲಿ ಮನೆ ಮಾಡಿ ಕೂತಿದ್ದ ಇಬ್ಬರು ಅಣ್ಣಂದಿರು ಆಸ್ತಿಯಲ್ಲಿ ಪಾಲು ಕೊಡಬೇಕೆಂದು ಸನ್ನು ಬಳಿ ಕುಸ್ತಿಗೆ ಬಂದು ಬಿಟ್ಟರು. ತಂದೆಯ ಪಾಲಿನ ಮನೆ ಪಡೆದು ಪಕ್ಕದಲ್ಲೇ ಕೂತಿದ್ದ ಮೂರನೆಯ ಅಣ್ಣ ಗೋಪಿ ಬೋಪಯ್ಯನಂತೂ ಕಳೆದ ಹದಿನೈದು ವರ್ಷಗಳಿಂದ ವ್ಯಾಜ್ಯದ ಹೆಸರಿನಲ್ಲಿ ಕೋರ್ಟು-ಕಚೇರಿ ಅಲೆದಾಡಿಸುತ್ತಿರುವುದು ಸನ್ನುವಿನ ಪಾಲಿನ ಮತ್ತೊಂದು ರೇಜಿಗೆ! ಇನ್ನೊಂದೆಡೆಯಿಂದ ತನಗೆ ಅರವತ್ತು ಸಾವಿರ ರೂಪಾಯಿ ನಾಮ ತಿಕ್ಕಿದ ಪಾಲುದಾರ ಗಣಪ, ತನ್ನ ವಿರೋಧಿ ಪಾಳಯ ಸೇರಿ ತನ್ನ ಕಳ್ಳನಾಟಕಗಳನ್ನೆಲ್ಲಾ ಒಂದೊಂದಾಗಿ ಇಲಾಖೆಯವರಿಗೆ ಸುಳಿವು ಕೊಟ್ಟು ಹಿಡಿಸುತ್ತಿದ್ದಾನೆ. ಸನ್ನುವಿನ ತಲೆ ಕೆಟ್ಟು ಕೆರ ಹಿಡಿಯಲು ಇನ್ನೇನು ಬೇಕು?
ಸರಣಿ ಕೊಲೆಗಳು!
 ಗಣಪನನ್ನು ಕೊಲ್ಲುವ ನಿರ್ಧಾರ ಕೈಗೊಳ್ಳುವ ಕೆಲವು ದಿನಗಳ ಮುನ್ನ ಸನ್ನು ಗಣಪನಲ್ಲಿ ತನಗೆ ಬರಬೇಕಾದ ಅರವತ್ತು ಸಾವಿರ ರೂಪಾಯಿಯನ್ನು ಕೇಳಿದ್ದನಂತೆ. ಅದಕ್ಕೆ ಗಣಪ ‘‘ಕುಂಜುಂಡ ರವಿಗೆ ಹೇಳಿ ನಿನ್ನ ಕೈಕಾಲು ಮುರಿಸುತ್ತೇನೆ’’ ಎಂದು ರೋಪು ಹೊಡೆದಿದ್ದನು. ಕೊಲೆಗಳಿಗಾಗಿ ಸನ್ನು ಅಂತಿಮವಾಗಿ ಸನ್ನದ್ಧವಾದದ್ದು ಅಂದೇ! ತನ್ನ ಪತಿಯನ್ನು ಈ ಪರಿ ಪೀಡಿಸುತ್ತಿರುವವರ ಬಗ್ಗೆ ಪತ್ನಿ ನೀತಾಳಲ್ಲೂ ಒಂದು ಅವ್ಯಕ್ತ ಆಕ್ರೋಶ ಮಡುಗಟ್ಟಿತ್ತು. ಆಕೆಯ ಬಳಿ ತನ್ನ ಶತ್ರುಗಳನ್ನು ಕೊಲ್ಲುವ ಪ್ರಸ್ತಾಪವನ್ನು ಸನ್ನು ಮಾಡಿದಾಗ ಆಕೆಗದು ಸರಿಯೆಂದೂ ಕಂಡಿತು. ನೀತೂ ಮಗುವಿನೊಂದಿಗೆ ತವರಿಗೆ ಹೋಗಬೇಕೆಂದೂ, ತಾನವರನ್ನು ಕೊಂದು ತಾನೂ ಸಾಯುತ್ತೇನೆಂದು ಸನ್ನು ಹೇಳಿದಾಗ ಮಾತ್ರ ಆಕೆ ಒಪ್ಪದಾದಳು. ಸಾಯುವುದಿದ್ದರೆ ನಾವೆಲ್ಲಾ ಜೊತೆಯಾಗಿಯೇ ಸಾಯೋಣ ಎಂದು ಸನ್ನುವಿನ ಪತ್ನಿ ಹಟ ಹಿಡಿದಳು. ಇದಕ್ಕೆ ಸಮ್ಮತಿಸಿದ ಸನ್ನು ಡೈರಿಯಲ್ಲಿ ತಮ್ಮ ನಿರ್ಧಾರವನ್ನು ಬರೆದಿಟ್ಟನು. ಆಗಸ್ಟ್ 2ರಂದು ಶುಕ್ರವಾರ ರಾತ್ರಿ ಸನ್ನು ತನ್ನ ತುಂಬಿದ ಕೋವಿಯೊಂದಿಗೆ ಮನೆಯಿಂದ ಹೊರ ಬಿದ್ದಾಗ ನೀತಾ ತಮ್ಮ ಅಂತಿಮ ಮರಣ ಪತ್ರ ಬರೆಯುತ್ತಿದ್ದಳು.
  ಕೋವಿಯೊಂದಿಗೆ ಆ ಕಗ್ಗತ್ತಲ ರಾತ್ರಿ ಮನೆಯಿಂದ ಹೊರಬಿದ್ದ ಸನ್ನು ಮೊದಲು ನಡೆದದ್ದೇ ಕಡೇಮಾಡ ಗಣಪನ ಮನೆಗೆ. ಗೋಣಿಕೊಪ್ಪಕ್ಕೆ ಹೋಗಿದ್ದ ಗಣಪ ಮರಳುವಾಗ ರಾತ್ರಿ ಹನ್ನೊಂದಾಗಿತ್ತು. ಗಣಪ ಕಾರಿಂದಿಳಿಯುವುದು ಕಂಡದ್ದೇ ಸನ್ನು ಗುಂಡು ಹಾರಿಸಿಯೇ ಬಿಟ್ಟನು. ಆದರೆ ಗುರಿ ತಪ್ಪಿ ಹೋಯ್ತು. ಗಣಪ ಕತ್ತಲಲ್ಲೇ ತೆವಳಿ ಪಾರಾಗಿಬಿಟ್ಟನು. ‘‘ಏನಿದು ಗುಂಡಿನ ಸದ್ದು’’ ಎಂದು ನೋಡಲು ಬಂದ ಗಣಪನ ಅಪ್ಪ ಕಾಶಿಯ ಮೇಲೂ, ಸನ್ನು ಒಂದು ಗುಂಡು ಹಾರಿಸಿದನು. ಆದರೆ ಗುಂಡು ಕಶಿಯ ಭುಜ ಸವರಿಕೊಂಡು ಹೋಯ್ತೇ ವಿನಾಃ ಜೀವಕ್ಕೆ ಹಾನಿಯಾಗಲಿಲ್ಲ. ಅವರಿಬ್ಬರು ಸತ್ತೇ ಹೋದರೆಂದು ಬಗೆದ ಸನ್ನು ಮನೆಗೆ ತೆರಳಿದ್ದಾನೆ. ಇತ್ತ ಗುಂಡಿನ ಸದ್ದು ಕೇಳುತ್ತಿದ್ದಂತೆ ತನ್ನ ಮಗುವಿಗೆ ವಿಷ ಕುಡಿಸಿದ ನೀತೂ ತಾನು ಕುಡಿದು ಒದ್ದಾಡುತ್ತಿದ್ದಳು. ಅವರಿಬ್ಬರ ಮೇಲೂ ಒಂದೊಂದು ಗುಂಡು ಹೊಡೆದ ಸನ್ನು, ತನ್ನ ಪತ್ನಿ- ಮಗುವಿನ ಬದುಕಿಗೆ ತಾನೇ ಇತಿಶ್ರೀ ಬರೆದಿದ್ದಾನೆ. ಅಲ್ಲಿಂದ ಪಕ್ಕದ ಪುಳಿಕೆ ಎಸ್ಟೇಟ್‌ಗೆ ಹೋದ ಸನ್ನು, ಅಲ್ಲಿನ ಅಪ್ಪಚ್ಚನ್ ಎಂಬವರ ಟೆಲಿಫೋನ್‌ನಿಂದ ಬೆಂಗಳೂರಿನಲ್ಲಿವ ತನ್ನ ಅಣ್ಣ ಕಾವೇರಿಯಪ್ಪನಿಗೆ ಫೋನಾಯಿಸಿ ‘ತಾನು ತನ್ನ ಪತ್ನಿ.. ಮಗುವನ್ನು ಸಾಯಿಸಿರುವುದಾಗಿಯೂ ತಾನು ಕೂಡ ಸಾಯುತ್ತಿರುವುದಾಗಿಯೂ, ಶವಸಂಸ್ಕಾರ ಮಾಡಲು ನೀವೆಲ್ಲಾ ಬರಬೇಕೆಂದೂ’ ತಿಳಿಸಿದ್ದಾನೆ. ಅಲ್ಲಿಂದ ಮನೆಗೆ ಮರಳಿ ಅಟ್ಟದಲ್ಲಿ ಅಡಗಿ ಕೂತು ಬಿಟ್ಟಿದ್ದಾನೆ. ಮರುದಿನ ಸನ್ನುವಿನ ಅಣ್ಣಂದಿರು, ಪೊಲೀಸರು ಬಂದು ಹೆಣ್ಣಗಳನ್ನು ಕೊಂಡೊಯ್ಯುವಾಗಲೂ ಸನ್ನು, ತನ್ನ ಮನೆಯ ಅಟ್ಟದಲ್ಲೇ ಇದ್ದ ಸಂಶಯಗಳಿವೆ. ಸನ್ನು ತಾನೂ ಸಾಯುತ್ತಿರುವುದಾಗಿ ಹೇಳಿದ್ದುದರಿಂದ ಆತ ಬರ, ಪೊಳೆ ನದಿಯ ಬದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಯೋಚಿಸಿದ್ದವರೇ ಅನೇಕರು. ಆದರೆ ಸೋಮವಾರ ಬೆಳಗಾಗುತ್ತಲೇ ತಮ್ಮದೆಂತಹ ಮೂರ್ಖ ಯೋಚನೆಯಾಗಿತ್ತೆನ್ನುವುದು ಹಲವರಿಗೆ ಮನವರಿಕೆಯಾಗಿಬಿಟ್ಟಿತು.
ಎರಡು ದಿನ ತನ್ನ ಮನೆಯ ಅಟ್ಟದಲ್ಲೇ ಬಚ್ಚಿಟ್ಟು ಕೂತ ಸನ್ನು, ಸೋಮವಾರ ಬೆಳ್ಳಂಬೆಳಗ್ಗೆ ತನ್ನ ಮೂರನೆಯ ಅಣ್ಣ ಗೋಪಿ ಬೋಪಯ್ಯನ ಮನೆ ಹಿತ್ತಿಲಲ್ಲಿ ಬಂದೂಕು ಸಮೇತ ಪ್ರತ್ಯಕ್ಷನಾಗಿ ಬಿಟ್ಟಿದ್ದಾನೆ. ಬೆಳಗೆದ್ದು ಹಿತ್ತಿಲಲ್ಲಿ ನಿಂತು ಹುಲ್ಲು ತಿಕ್ಕುವುದರಲ್ಲಿ ಮಗ್ನನಾಗಿದ್ದ ಬೋಪಯ್ಯ ತಲೆಯೆತ್ತಿ ನೋಡಿದರೆ, ನರಭಕ್ಷಕನಂತೆ ಗುರುಗುಡುತ್ತಿರುವ ಕಿರಿಯ ತಮ್ಮ ಸನ್ನು! ತಕ್ಷಣ ಕಿರುಚಿ ಮನೆಯೊಳಗೆ ಓಡಲು ಉದ್ಯುಕ್ತನಾದ ಅಣ್ಣನನ್ನು ಸನ್ನು ಬಹು ಹತ್ತಿರದಿಂದಲೇ ಹೊಡೆದು ಕೊಂದು ಹಾಕಿದ್ದಾನೆ.
ಗಂಡನ ಬೊಬ್ಬೆ ಕೇಳಿ ಓಡಿ ಬಂದ ಅತ್ತಿಗೆ ರತು ಗಂಗಮ್ಮನ ಎದೆಗೂ ಗುಂಡು ಹೊಡೆದ ಸನ್ನು ಆಕೆಯನ್ನು ಪರಂಧಾಮಕ್ಕಟ್ಟಿದ್ದಾನೆ. ಅಷ್ಟರಲ್ಲಿ ಬೋಪಯ್ಯನ ಮಗ ವಿಲೀನ್ ಗದ್ದಲ ಕೇಳಿ ಓಡಿ ಬಂದರೆ ಕಣ್ಣೆದುರಲ್ಲೇ ರಣರಂಗ! ಆದರೂ ಧೃತಿಗೆಡದ ವಿಲೀನ್ ಮನೆಯೊಳಗಿಂದ ಕೋವಿ ತಂದು ಚಿಕ್ಕಪ್ಪನಿಗೂ ಗುರಿ ಹಿಡಿದು ಕೆಡವಿ ಹಾಕಿಯೇ ಬಿಟ್ಟನು. ಸನ್ನು ಸತ್ತು ಬಿದ್ದ ವಾರ್ತೆ ಅರಿತದ್ದೇ ಆತನ ಶತ್ರು ಪಟಾಲಂ ಬಿಟ್ಟ ನಿಟ್ಟುಸಿರನ್ನು ಇಡೀ ಕೊಡಗು ಆಲಿಸಿದೆ.
ಅಂತಿಮವಾಗಿ ನಮ್ಮೆಲ್ಲರನ್ನು ಕಾಡುವ ಪ್ರಶ್ನೆ ಮತ್ತೆ ಅದೇ! ಸನ್ನುವಿಗೆ ತನ್ನ ಸಮಸ್ಯೆಗಳಿಂದ ಪಾರಾಗುವುದಕ್ಕೆ ಶತ್ರುಗಳನ್ನು ಕೊಲ್ಲುವುದೇ ಅಂತಿಮ ದಾರಿಯಾಗಿತ್ತೇ? ಪೊಲೀಸ್-ಕಾನೂನು-ನ್ಯಾಯಾಲಯಗಳ ಮೂಲಕ ಸನ್ನು ನ್ಯಾಯ ಪಡೆಯುವುದು ಸಾಧ್ಯವಿರಲಿಲ್ಲವೇ? ಸಾಕ್ಷಾತ್ ದಂಡಕಾರಣ್ಯದಂತಿರುವ ಕೊಂಗಾಣೇ ಉತ್ತರ ಹೇಳಬೇಕು.

No comments:

Post a Comment