Wednesday, November 13, 2013

ಕಾಗೆ ಮರಿಯ ಹಾಡು

 ನಾನೊಂದು
ಪುಟ್ಟ ಕಾಗೆ ಮರಿ

ಹಾರಿ ಹೋದ
ಅಮ್ಮ ಕಾಗೆಗಾಗಿ
ಕಾಯುತ್ತಿದ್ದೇನೆ

ನನ್ನಮ್ಮನ ಬಾಯಿಂದ
ರೊಟ್ಟಿ ಕಸಿದ
ನರಿಯ ಕತೆಯನ್ನು
ಓದುತ್ತಾ ಅಮ್ಮ
ಹೋದ ದಾರಿ ಕಾಯುತ್ತಿದ್ದೇನೆ
ಅಮ್ಮ ಕಾಗೆ ತರುವ
ತುಂಡು ರೊಟ್ಟಿಗಾಗಿ

ಜಾಣ ನರಿ
ನನ್ನ ತರಗತಿಗೆ ಪಾಠ
ಅದು ನನ್ನ ಪರಂಪರೆ
ನನ್ನ ಅಮ್ಮನ
ಬಣ್ಣ ಎಷ್ಟು ಚಂದ?
ಧ್ವನಿ ಎಷ್ಟು ಚಂದ ?
ಎಂದು ವಂಚಿಸಿದ ನರಿ
ಜಾಣ
ನಾವೆಲ್ಲರೂ ಜಾಣರಾಗಬೇಕು
ಕಾಗೆಯಂತೆ
ದಡ್ದರಾಗಬಾರದು
ಇದು ನನಗೆ ಪಾಠ
ನಾನಿದನ್ನು ಕಲಿತು
ಪರೀಕ್ಷೆ ಬರೆದು
ಜಾಣನಾಗಬೇಕು

ಆದರೂ ನನ್ನ ಅಮ್ಮನ ಬಣ್ಣ
ನನಗೆ ಎಷ್ಟು ಚಂದ!
ನನ್ನ ಅಮ್ಮನ
ಧ್ವನಿ ಎಷ್ಟು ಚಂದ!!

ನಾನೊಂದು
ಪುಟ್ಟ ಕಾಗೆ ಮರಿ

ಹಾರಿ ಹೋದ
ಅಮ್ಮನಿಗಾಗಿ
ಕಾಯುತ್ತಿದ್ದೇನೆ

2 comments:

  1. ತುಂಬ ಚೆನ್ನಾಗಿದೆ.

    ReplyDelete
  2. ಆದರೂ ನನ್ನ ಅಮ್ಮನ ಬಣ್ಣ
    ನನಗೆ ಎಷ್ಟು ಚಂದ!.... ಹೃದ್ಯವಾಗಿದೆ :)

    ReplyDelete