Wednesday, February 20, 2013

ಹುಷಾರು!

 ನೋಡಿ...ಅವನೊಟ್ಟಿಗೆ
ತುಂಬಾ ಬೆರೀ ಬೇಡಿ
ಅವನಷ್ಟು ಸರಿ ಇಲ್ಲ....

ಇತ್ತೀಚಿಗೆ ಎಲ್ಲರ ನಿಷ್ಟುರ
ಕಟ್ಕೋತಿದ್ದಾನೆ...
ನಿಮ್ಮ ಹೆಸರು ಹಾಳಾಗಬಹುದು...


ಸರ್ಕಾರದ ವಿರುದ್ಧ ಬಾಯಿಗೆ
ಬಂದದ್ದೆಲ್ಲ ಬರೀತಾನೆ....
ರಾಜ್ಯೋತ್ಸವ ಪ್ರಶಸ್ತಿಗೆ
ಟ್ರೈ ಮಾಡ್ತಾ ಇದ್ದೀರಲ್ಲ...?
ಸ್ವಲ್ಪ ಜಾಗ್ರತೆ....

ಸಾಧ್ಯವಾದರೆ
ನಿಮ್ಮ ಫೋನ್ ನಂಬರ್
ಚೇಂಜ್ ಮಾಡ್ಬಿಡಿ...
ಹಾಗೆಲ್ಲ ಮನೆಗೆ ಸೇರ್ಸೋದು
ಒಳ್ಳೇದಲ್ಲ...
ಮನೆಗೆ ಬಂದ್ರೆ ಇಲ್ಲ ಎಂದ್ಬಿಡಿ...
ಅವನೀಗ ಮೊದಲಿನ ಹಾಗಿಲ್ಲ..
ಯಾರ್ಯಾರದೋ ಸ್ನೇಹ ಇಟ್ಕೊಂಡಿದ್ದಾನೆ...

ಮೊದಲೆಲ್ಲ ಕತೆ ಕವಿತೆ
ಬರಕೊಂಡು ಚೆನ್ನಾಗಿದ್ದ...
ನನಗೂ ಗೊತ್ತು
ಇತ್ತೀಚಿಗೆ ಅವನ ತಲೆ ಕೆಟ್ಟಿದೆ..
ನೀವು ಮಾರ್ಯದಸ್ಥರು...
ಹೆಣ್ಣು ಮಕ್ಕಳಿದ್ದಾರೆ...
ನಿಮಗೆ ಸಮಾಜದಲ್ಲಿ ಒಂದು ಗೌರವವಿದೆ...
ಸ್ಟೇಟಸ್ ಇದೆ...
ಅವನಿಗೆ ಕಳ್ಕೋಳ್ಳಿಕ್ಕಾದ್ರು ಏನಿದೆ?
ನಿಮ್ಮದು ಸರ್ಕಾರಿ ಕೆಲಸ ಬೇರೆ?

ಯಾರಿಗೆ ಗೊತ್ತು?
ಯಾವ ಹುತ್ತದಲ್ಲಿ ಯಾವ
ಹಾವು ಇದೆ ಅಂತ ?
ನೀವಂತೂ ನಿಮ್ಮ
ಜಾಗೃತೆಯಲ್ಲಿರಿ...

ಮೊನ್ನೆ ಗೊತ್ತಲ್ಲ...
ಒಬ್ಬನ್ನ ಪೊಲೀಸರು
ಆರೆಸ್ಟ್ ಮಾಡಿರೋದು...
ಉಗ್ರರ ಜೊತೆಗೆ ನಂಟನ್ತೆ
ಇದ್ರೂ ಇರಬಹುದು
ಈಗ ಯಾರನ್ನೂ ನಂಬಕ್ಕಾಗಲ್ಲ...

ಯಾವುದಕ್ಕೂ
ನಿಮ್ಮ ಹುಶಾರಲ್ಲಿ ನೀವಿರೀ....
ಅವನಷ್ಟು ಸರಿ ಇಲ್ಲ...
ಕತೆ ಕವಿತೆ ಬರೀತಾ ಇರೋವಾಗ
ಅವನು ಸರಿಯೇ ಇದ್ದ...
ಆದರೆ ಈಗ ಅವನು ಮೊದಲಿನಂತಿಲ್ಲ...
ಗೊತ್ತಲ್ಲ...?
ಈಗ ಅವನು ಕತೆ ಕವಿತೆ ಬರೀತಾ ಇಲ್ಲ!

No comments:

Post a Comment