Wednesday, September 26, 2012

ಹುಲ್ಲುಗರಿ ಮತ್ತು ಇತರ ಕತೆಗಳು

ಶಪಥ
‘‘ಇವತ್ತಿನಿಂದ ನಾನು ಕುಡಿಯುವುದಿಲ್ಲ’’
ಕುಡುಕ ಶಪಥ ಮಾಡಿದ.
ಮರುದಿನ ಎಂದಿನಂತೆ ಕುಡಿಯತೊಡಗಿದ.
ಯಾರೋ ಕೇಳಿದರು ‘‘ಏನಾಯಿತು ನಿನ್ನ ಶಪಥ’’
‘‘ಅದು ನಾನು ಕುಡಿದ ಮತ್ತಿನಲ್ಲಿ ಮಾಡಿದ ಶಪಥ’’ ಕುಡುಕ ಹೇಳಿದ.

ಕಾಗೆ
ಅವನು ಬೀದಿ ಬದಿಯಲ್ಲಿ ಐದು ರೂಪಾಯಿಗೆ ಫುಲ್ ಬಿರಿಯಾನಿ ಕೊಡುತ್ತಿದ್ದ.
ಬೀದಿಯಲ್ಲಿ ಬದುಕುವ ಬಡವರೆಲ್ಲ ಅವನ ಗಿರಾಕಿಗಳು.
ಒಂದು ದಿನ ಪೊಲೀಸರು ಅಲ್ಲಿಗೆ ದಾಳಿ ನಡೆಸಿದರು. ಅವನು ಕಾಗೆಯ ಬಿರಿಯಾನಿಯನ್ನು ಚಿಕನ್ ಬಿರಿಯಾನಿಯೆಂದು ಮಾರುತ್ತಿರುವುದು ಬಯಲಾಯಿತು. ಪೊಲೀಸರು ಅವನನ್ನು ಜೈಲಿಗೆ ತಳ್ಳಿದರು.
 ಬೀದಿ ಬದಿಯ ಮುದುಕನೊಬ್ಬ ಆ ರಾತ್ರಿ ಹಸಿದುಕೊಂಡೇ ಮಲಗಿದ. ನಿದ್ದೆ ಬರದೇ ಗೊಣಗಿದ ‘‘ಕೋಳಿಯೋ, ಕಾಗೆಯೋ...ಹೊಟ್ಟೆ ತುಂಬಾ ಅನ್ನ ಹಾಕುತ್ತಿದ್ದ ಪುಣ್ಯಾತ್ಮನನ್ನು ಜೈಲಿಗೆ ತಳ್ಳಿದರಲ್ಲ....ಕಟುಕರು!’’
ಮೂರು ದಿನ ಕಳೆದರೆ ಅಲ್ಲಿ ಮೂವರು ಮುದುಕರು ಹೆಣವಾಗಿದ್ದರು.
ಪತ್ರಿಕೆಯೊಂದು ಪ್ರಕಟಿಸಿತು ‘‘ಬೆಂಗಳೂರಿನ ಚಳಿಗೆ ಮೂರು ಬಲಿ’’

ವಿಶೇಷ ಪುಟ
‘‘ಆ ಪಕ್ಷದ ಹಿರಿಯ ನಾಯಕರು ಐಸಿಯು ಸೇರಿದ್ದಾರಂತೆ. ಬದುಕೋ ಚಾನ್ಸ್ ಕಮ್ಮಿಯಂತೆ. ಅವರ ಕುರಿತ ವಿಶೇಷ ಪೇಜ್‌ನ್ನು ಈಗಲೇ ರೆಡಿ ಮಾಡಿ ಇಡಿ...’’
ಹೀಗೆಂದು ಸಂಪಾದಕ ಕಿರಿಯರಿಗೆ ನಿರ್ದೇಶನ ನೀಡಿ ಮನೆಗೆ ಹೊರಟ.
ಹಾಗೆ ಹೊರಟ ಸಂಪಾದಕನಿಗೆ ರಾತ್ರಿ ನಿದ್ದೆಯಲ್ಲೇ ಹೃದಯಾಘಾತವಂತೆ.
ಮರುದಿನ ಆ ಸಂಪಾದಕನ ಕುರಿತಂತೆಯೇ ಕಿರಿಯರು ವಿಶೇಷ ಪುಟವನ್ನು ಮಾಡಿದರು.
ಐಸಿಯು ಸೇರಿದ್ದ ನಾಯಕ, ಹೊರ ಬಂದು, ಸಂಪಾದಕನಿಗೆ ತನ್ನ ಶ್ರದ್ಧಾಂಜಲಿಯನ್ನು ತಿಳಿಸಿದ.

ಕುಡುಕ
ಕುಡುಕನೊಬ್ಬ ದಾರಿ ತಪ್ಪಿ ದೇವಾಲಯವನ್ನು ಪ್ರವೇಶಿಸಿದ.
‘‘ಕುಡುಕರಿಗೆ ಇಲ್ಲಿ ಪ್ರವೇಶವಿಲ್ಲ’’ ಪೂಜಾರಿ ಚೀರಿದ.
ಕುಡುಕ ನಕ್ಕು ಹೇಳಿದ ‘‘ಹೌದೆ? ನಾನು ಹೆಂಡವನ್ನು ಕುಡಿದಿದ್ದೇನೆ. ನೀವೋ ಧರ್ಮವನ್ನೇ ಕುಡಿದಿದ್ದೀರಿ. ಇಬ್ಬರೂ ಕುಡುಕರೇ. ನೆನಪಿಟ್ಟುಕೋ...’’ ಎನ್ನುತ್ತಾ ಅವನು ಅಲ್ಲಿಂದ ನಡೆದ.

ಮಗು

ಶಾಲೆ ಬಿಟ್ಟು ಬಂದ ಮಗು, ನೇರವಾಗಿ ತಾಯಿಯಲ್ಲಿ ಕೇಳಿತು ‘‘ಅಪ್ಪಾ ಅಂದರೆ ಏನಮ್ಮ....’’

ಬಣ್ಣ
ಅಂದು ಭೂಕಂಪ ಸಂಭವಿಸಿತ್ತು. ಸಾವಿರಾರು ಜನರು ಸತ್ತಿದ್ದರು.
ಅವಳಿಗೆ ‘ಬ್ರೇಕಿಂಗ್ ಸುದ್ದಿ’ ಓದುವುದಿತ್ತು.
ಸುದ್ದಿ ಓದಿ ಮುಗಿದಾಗ ಸಂಪಾದಕರು ಕೇಳಿದರು ‘‘ಅಂತಹ ಮುಖ್ಯ ಸುದ್ದಿ ಓದುವಾಗ ಒಂದಿಷ್ಟು ಮೇಕಪ್ ಸರಿಯಾಗಿ ಮಾಡ್ಕೋಬಾರ್ದೆ...’’

ಹುಲ್ಲುಗರಿ
ದೊಡ್ಡ ಜಮೀನ್ದಾರ ಆತ. ಆದರೆ ಜಿಪುಣ.
ಅವನಿಗೆ ಅಪರೂಪಕ್ಕೊಮ್ಮೆ ದಾನ ಮಾಡಬೇಕು ಅನ್ನಿಸಿತು.
ಸರಿ...ಹತ್ತು ಪೈಸೆಯ ನಾಣ್ಯವನ್ನು ರಾಶಿ ಹಾಕಿ...ಒಬ್ಬೊಬ್ಬರಿಗೆ ಒಂದೊಂದು ನಾಣ್ಯ ಹಂಚುವುದೆಂದು ನಿರ್ಧರಿಸಿದ.
ಅದನ್ನು ಬೇಡುವುದಕ್ಕೆ ಭಿಕ್ಷುಕನೂ ಹೋಗಲಿಲ್ಲ.
ಆದರೆ ಸಂತ ಮಾತ್ರ ಸಂಭ್ರಮದಿಂದ ಅತ್ತ ಧಾವಿಸಿದ.
ಹತ್ತು ಪೈಸೆಯನ್ನು ಇಸಿದುಕೊಂಡು ಅವನನ್ನು ಕೊಂಡಾಡಿ ಮರಳಿದ.
ಶಿಷ್ಯರು ಕೇಳಿದರು ‘‘ಎಂತೆಂತಹ ದಾನಿಗಳೆಲ್ಲ...ನಿಮಗೆ ಏನೇನೋ ದಾನ ಮಾಡಿದ್ದಾರೆ. ಇಷ್ಟು ಕೊಂಡಾಡಿಲ್ಲ...ಈ ಹತ್ತು ಪೈಸೆಯ ದಾನಕ್ಕೆ ಯಾಕೆ ಕೈಯೊಡ್ಡಿದಿರಿ’’
ಸಂತನ ಹತ್ತು ಪೈಸೆಯನ್ನೇ ನೋಡುತ್ತಾ ಹೇಳಿದ ‘‘ಬರಡು ಭೂಮಿಯನ್ನು ಸೀಳಿ ಒಂದೇ ಒಂದು ಹುಲ್ಲು ಗರಿ ಕುಡಿಯೊಡೆದಿದೆ. ದಟ್ಟ ಕಾಡಿನಲ್ಲಿ ಅಷ್ಟಗಲ ಹರಡಿ ನೆರಳು ಸೂಸುವ ಮರಕ್ಕಿಂತಲೂ ದೊಡ್ಡ ವಿಷಯ ಇದು...’’

ಕಾಲ
‘‘ನಮ್ಮ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು’’ ಅವನು ವಿವರಿಸುತ್ತಿದ್ದ.
 ‘‘ನಮ್ಮ ಕಾಲದಲ್ಲಿ ತೋಟಕ್ಕೆ ಕೆಲಸಕ್ಕೆ ಕರೆದರೆ ಜನ ಸಿಗುತ್ತಿತ್ತು. ಕೂಲಿಕಾರ್ಮಿಕರು ಇಷ್ಟು ಕೊಬ್ಬಿರಲಿಲ್ಲ. ಕೊಟ್ಟ ಸಂಬಳ ತೆಗೆದುಕೊಂಡು ಹೋಗುತ್ತಿದ್ದರು. ಸಮಾಜದ ಕಟ್ಟುಕಟ್ಟಲೆಗೆ ಬೆಲೆಯಿತ್ತು. ಯಾರ್ಯಾರು ಎಲ್ಲಿರಬೇಕಿತ್ತೋ ಅಲ್ಲಿಯೇ ಇರುತ್ತಿದ್ದರು...ನಮ್ಮ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು. ಈಗ ಕಾಲ ಕೆಟ್ಟು ಹೋಗಿದೆ...’’

2 comments: