Tuesday, May 22, 2012

ಬಾಡೂಟದ ಜೊತೆಗೆ ಗಾಂಧಿಜಯಂತಿ!

5 ವರ್ಷಗಳ ಹಿಂದೆ ಬರೆದ ಲೇಖನ ಇದು. ಪೇಜಾವರ ಶ್ರೀಗಳ ವಿವಾದಾತ್ಮಕ ಹೇಳಿಕೆ ಹಾಗು ಅಂಬೇಡ್ಕರ್ ಜಯಂತಿ ದಿನ ಮಾಂಸ ನಿಷೇಧ ಆದೇಶದ ಹಿನ್ನೆಲೆಯಲ್ಲಿ ಈ ಲೇಖನ ಪ್ರಸ್ತುತವಾಗಬಹುದು ಎಂದು ಹಾಕಿದ್ದೇನೆ. 

ಮೊನ್ನೆ ಗಾಂಧಿ ಜಯಂತಿ ದಿನ ಸಚಿವನ ಮಗನೊಬ್ಬ ಸಾರ್ವಜನಿಕ ಸ್ಥಳದಲ್ಲಿ ತನ್ನ ಗೆಳೆಯರೊಂದಿಗೆ ‘ಬಾಡೂಟ’ ಮಾಡಿ ಉಂಡದ್ದು ಸಾಕಷ್ಟು ಸುದ್ದಿಯಾಯಿತು. ಒಂದು ಟಿ.ವಿ. ಚಾನೆಲ್ ಅಂತೂ ಇದನ್ನು ಅನಾಹುತವೋ ಎಂಬಂತೆ ವರದಿ ಮಾಡಿತು. ಕೆಲವು ಗಾಂಧಿವಾದಿಗಳು ಇದಕ್ಕೆ ಆಘಾತ ವ್ಯಕ್ತಪಡಿಸಿದರು. ಸಚಿವನ ಮಗನೇ ಬಾಡೂಟ ಮಾಡಿ ಉಂಡಿರುವುದು ಗಾಂಧಿಗಾದ ಅವಮಾನ ಎಂಬಂತೆ ಚಿತ್ರಿತವಾಯಿತು. ಸಂಸ್ಕೃತಿಯನ್ನು ಕ್ರೆಡಿಟ್ ಕಾರ್ಡಿನಂತೆ ಕಿಸೆಯೊಳಗಿಟ್ಟು ಓಡಾಡುವ ಬಿಜೆಪಿಯ ಸಚಿವನಿಗೆ ತನ್ನ ಸುಪುತ್ರನ ಕೆಲಸದಿಂದ ಸಾಕಷ್ಟ ಮುಜುಗರವಾಯಿತು. ‘ಗಾಂಧಿ ದಿನದಂದು ಹಿಂಸೆ ಗಾಂಧಿ ದಿನದಂದು ಮಾಂಸ’! ಇತ್ಯಾದಿ ಉದ್ಗಾರಗಳು ಕೇಳಿ ಬಂದವು.

ಬಾಡೂಟವೆನ್ನುವ ಮೂರಕ್ಷರದ ಶಬ್ದಕ್ಕೆ ಸಾಂಸ್ಕೃತಿಕ ಹಿನ್ನೆಲೆಯಿದೆ. ಈ ದೇಶದ ಬಹುಜನರ ಆಹಾರ ಸಂಸ್ಕೃತಿ. ದಲಿತರು, ಶೂದ್ರರು, ಮುಸ್ಲಿಮರು, ಕ್ರಿಶ್ಚಿಯನ್ನರೂ ಮಾತ್ರವಲ್ಲ ದೇಶದ ಕೆಲವು ಭಾಗಗಳಲ್ಲಿ ಬ್ರಾಹ್ಮಣರೂ ಅತಿಯಾಗಿ ಇಷ್ಟಪಡುವ ಊಟ ಬಾಡೂಟ. ಬಾಡೂಟವನ್ನು ಅವಮಾನಿಸುವುದೆಂದರೆ ಗತಿಸಿಹೋದ ನಮ್ಮ ಹಿರಿಯರನ್ನು ಅವಮಾನಿಸುವುದೆಂದರ್ಥ.ತುಳುನಾಡಿನಲ್ಲಿ ಬಾಡೂಟಕ್ಕೆ ಹಲವು ಸಂಕೇತಗಳಿವೆ. ಅರ್ಥಗಳಿವೆ. ಬಾಡೂಟ ದುಡಿಮೆಯ, ಬೆವರಿನ ಸಂಕೇತ. ನೆಲದ ಮಣ್ಣಿನ ಸೊಗಡು ಅದರಲ್ಲಿ ಮಿಳಿತವಾಗಿದೆ. ಕಾಡು, ಬೇಟೆ, ಶೌರ್ಯ, ಹೋರಾಟ ಇತ್ಯಾದಿಗಳು ಈ ಬಾಡೂಟದೊಂದಿಗೆ ತಳಕು ಹಾಕಿಕೊಂಡಿವೆ. ಕೆದಂಬಾಡಿ ಜತ್ತಪ್ಪ ರೈಯವರ ‘ಬೇಟೆಯ ನೆನಪುಗಳು’ ಓದಿದರೆ ಬಾಡೂಟದ ಸೊಗಸನ್ನು, ಪರಿಮಳವನ್ನು ಅಸ್ವಾದಿಸಬಹುದು. ಈ ಊಟವನ್ನು ಆಗಷ್ಟೇ ತಾಳೆಮರದಿಂದ ಇಳಿಸಿದ ಕಳ್ಳ ಇನ್ನಷ್ಟು ಅರ್ಥಪೂರ್ಣಗೊಳಿಸುತ್ತದೆ. ಈ ಊಟದ ಜೊತೆಗೆ ಸಂಬಂಧ ಸಂಬಂಧಗಳು ಹತ್ತಿರವಾಗುತ್ತವೆ. ಬಾಡೂಟವನ್ನು ಅವಮಾನಿಸುದೆಂದರೆ ಮಣ್ಣಿನ ಮಕ್ಕಳ ದುಡಿಮೆಯನ್ನು, ಬೆವರನ್ನು ಅವಮಾನಿಸಿದಂತೆ.
  
   ಗಾಂಧಿ ಈ ದೇಶದ ಬಹುಸಂಸ್ಕೃತಿಯನ್ನು ಅತಿಯಾಗಿ ಗೌರವಿಸಿದವರು ಮಾತ್ರವಲ್ಲ. ಅದರ ಬಗ್ಗೆ ಗಟ್ಟಿ ನಂಬಿಕೆಯನ್ನು ಹೊಂದಿದ್ದರು. ಈ ದೇಶದ ಬಹು ಸಂಸ್ಕೃತಿ ಶಾಶ್ವತವಾಗಿ ಉಳಿಯಬೇಕೆಂದೇ ಗಾಂಧೀಜಿ ಜಾತಿಯನ್ನು ಬೆಂಬಲಿಸುತ್ತಿದ್ದರು. ಗಾಂಧಿ ಮಾಂಸ ತಿನ್ನದೇ ಇದ್ದುದು ಬರೇ ‘ಅಹಿಂಸೆ’ಯ ಕಾರಣಕ್ಕಾಗಿಯಲ್ಲ. ಅದು ಅವರ ಮನೆಯ ಸಂಪ್ರದಾಯವೂ ಆಗಿತ್ತು. ಕ್ರಮೇಣ ಆ ಸಂಪ್ರದಾಯ ಆಹಿಂಸೆಯೊಂದಿಗೆ ತಳಕು ಹಾಕಿಕೊಂಡಿತು. ಆಹಾರಕ್ಕಾಗಿ ಕೋಳಿ, ಕುರಿಗಳನ್ನು ಬಳಸುವುದನ್ನು ಭಾರತೀಯ ಸಂಸ್ಕೃತಿ ಯಾವತ್ತು ಹಿಂಸೆ ಎಂದು ಗುರುತಿಸಿಲ್ಲ. ಹಸಿವಿಗಿಂತ ಹಿಂಸೆ ಇನ್ನಾವುದಿದೆ? ಆ ಹಿಂಸೆಯನ್ನು ವಿರೋಧಿಸುವ ಪ್ರಕ್ರಿಯೆಯಲ್ಲಿ ಗಾಂಧೀಜಿಯ ಉಪವಾಸ ಕಲ್ಪನೆ ಹುಟ್ಟಿಕೊಂಡಿತು. ಗಾಂಧೀಜಿಯ ಹುಟ್ಟು ಹಬ್ಬದ ದಿನ ಈ ದೇಶದ 17ಕೋಟಿ ಮಕ್ಕಳು ಅಪೌಷ್ಟಿಕತೆಯಿಂದ ನರಳುತ್ತಿದ್ದಾರಲ್ಲ, ಅದು ಹಿಂಸೆ. ಗಾಂಧೀಜಿಯ ಈ ದೇಶದಲ್ಲಿ ಒಂದು ಮಗು ಹಸಿವಿನಿಂದ ಸತ್ತು ಹೋದರೆ, ಅದು ಬರ್ಬರ ಹಿಂಸೆ. ಅಪೌಷ್ಟಿಕತೆ, ಹಸಿವು ತುಂಬಿದ ನಾಡಿನಲ್ಲಿ ಬಹು ಸಂಖ್ಯಾತರ ಆಹಾರ ಪದ್ಧತಿಯನ್ನು ತಿರಸ್ಕರಿಸುವುದು ಬಹುದೊಡ್ಡ ಹಿಂಸೆ. ನಿಮಗೆ ನೆನಪಿರಬಹುದು ಕೆಲವು ವರ್ಷಗಳ ಹಿಂದೆ ಬಕ್ರೀದ್ ಹಬ್ಬ ಮತ್ತು ಮಹಾವೀರ ಜಯಂತಿ ಜೊತೆ ಜೊತೆಯಾಗಿಯೇ ಬಂತು. ಆಗ ರಾಜ್ಯದ ಮೂರ್ಖ ಸರಕಾರ (ಬಾಡೂಟವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜೆ.ಎಚ್. ಪಟೇಲರೇ ಆಗ ಮುಖ್ಯಂತ್ರಿಯಾಗಿದ್ದದು ದುರಂತ) ಮಹಾವೀರ ಜಯಂತಿ ದಿನ ಮಾಂಸ ಮಾರಾಟವನ್ನು ನಿಷೇಧಿಸಿತು. ಒಂದು ಧರ್ಮವನ್ನು ಗೌರವಿಸುವ ಹೆಸರಿನಲ್ಲಿ ಇನ್ನೊಂದು ಧರ್ಮದ ವೌಲ್ಯವನ್ನು ಅವಮಾನಿಸಿತು. ಬಕ್ರೀದ್ ಹಬ್ಬದಂದು ಶ್ರೀಮಂತರು ಮಾಂಸವನ್ನು ದೇವರ ಹೆಸರಿನಲ್ಲಿ ಬಡವರಿಗೆ ದಾನವಾಗಿ ಹಂಚುತ್ತಾರೆ. ಮನೆಮನೆಗಳಲ್ಲಿ ಬಾಡೂಟದ ಪರಿಮಳ ಆವರಿಸಿಕೊಂಡಿರುತ್ತದೆ. ಮಹಾವೀರನ ಹೆಸರಿನಲ್ಲಿ ಮುಸ್ಲಿಮರು ತಮ್ಮ ಹಬ್ಬವನ್ನೇ ಆಚರಿಸಿಕೊಳ್ಳಲಾಗದಂತಹ ಸನ್ನಿವೇಶ ನಿರ್ಮಾಣವಾಯಿತು. ಮುಸ್ಲಿಮರು ಇನ್ನೊಂದು ಧರ್ಮದ ನಂಬಿಕೆಗಳನ್ನು ಗೌರವಿಸಬೇಕು ಎಂಬ ಅತೀ ದೊಡ್ಡ ಸುಳ್ಳು ಘೋಷಣೆಯನ್ನು ಸಾರ್ವಜನಿಕವಾಗಿ ಹರಡಲಾಯಿತು. ಒಂದು ಧರ್ಮದ ಹಬ್ಬ ಇನ್ನೊಂದು ಧರ್ಮದ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತದೆಯೆಂದಾದರೆ ಅದನ್ನು ಸೌಹಾರ್ದ ಎಂದು ಕರೆಯಬಹುದೆ?

ಇನ್ನೊಂದು ಘಟನೆಯನ್ನು ಇಲ್ಲಿ ಸ್ಮರಿಸಬೇಕು. ಗುಜರಾತ್‌ನಲ್ಲಿ ಜೈನಧರ್ಮೀಯರ ಹಬ್ಬವೊಂದರ ನೆಪದಲ್ಲಿ ಅಲ್ಲಿನ ಮಹಾನಗರ ಪಾಲಿಕೆ ಒಂದು ವಾರ ಕಾಲ ಮಾಂಸ ನಿಷೇಧಿಸಿ ಹೊರಡಿಸಿದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್‌ನ ಪೀಠವೊಂದು ಸಮರ್ಥಿಸಿತು. 1998ರಲ್ಲಿ ಜೈನರ ‘ಪರ್‌ಯೂಶನ್’ ಹಬ್ಬದ ಹಿನ್ನೆಲೆಯಲ್ಲಿ ಗುಜರಾತ್‌ನ ಅಹ್ಮದಾಬಾದ್ ಮಹಾನಗರ ಪಾಲಿಕೆಯು ಆಗಸ್ಟ್ 19ರಿಂದ 26ರವರೆಗೆ ನಗರದಲ್ಲಿ ಮಾಂಸವನ್ನು ನಿಷೇಧಿಸಿ ಅಧಿಸೂಚನೆಯನ್ನು ಹೊರಡಿಸಿತ್ತು. ಈ ಅಧಿಸೂಚನೆಯಿಂದ ಮೂರು ಸಾವಿರಕ್ಕೂ ಅಧಿಕ ಮಾಂಸದ ವ್ಯಾಪಾರಿಗಳು ಸಂಕಷ್ಟವನ್ನು ಎದುರಿಸಬೇಕಾಯಿತು. ಇಷ್ಟು ವ್ಯಾಪಾರಿಗಳ ಕುಟುಂಬಗಳು ಇನ್ನೊಂದು ಧರ್ಮದ ಹಬ್ಬಕ್ಕಾಗಿ ತಮ್ಮ ದೈನಂದಿನ ಬದುಕನ್ನು ತೆತ್ತುಕೊಳ್ಳುವಂತಹ ಸನ್ನಿವೇಶ ಒದಗಿ ಬಂತು. ಸಹಜವಾಗಿಯೇ ಮಹಾನಗರ ಪಾಲಿಕೆಯ ವಿರುದ್ಧ ವ್ಯಾಪಾರಿಗಳ ಸಂಘ ನ್ಯಾಯಾಲಯದ ಮೆಟ್ಟಿಲೇರಿತು. 2005 ಜೂನ್ 22ರಂದು ಹೈಕೋರ್ಟ್ ಪೀಠವೊಂದು ಈ ಅಧಿಸೂಚನೆಯ ವಿರುದ್ಧ ತೀರ್ಪನ್ನು ನೀಡಿತು. ವ್ಯಾಪಾರಿಗಳ ಮೂಲಭೂತ ಹಕ್ಕನ್ನು ಈ ಅಧಿಸೂಚನೆ ಕಸಿದುಕೊಳ್ಳುತ್ತದೆ ಎಂದಿತು ಹೈಕೋರ್ಟ್. ಆದರೆ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಅಹ್ಮದಾಬಾದ್‌ನ ‘ಹಿಂಸಾವಿರೋಧಕ್ ಸಂಘ್’ ಸುಪ್ರೀಂಕೋರ್ಟ್‌ಗೆ ಹೋಯಿತು. ಕಳೆದ ಮಾರ್ಚ್ 14ರಂದು ತನ್ನ ತೀರ್ಪನ್ನು ನೀಡಿದ ಸುಪ್ರೀಂಕೋರ್ಟ್ ಪೀಠ, ಮಹಾನಗರ ಪಾಲಿಕೆಯ ತೀರ್ಪನ್ನು ಸಮರ್ಥಿಸಿಕೊಂಡಿತು.ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಾಧೀಶರು ತನ್ನ ತೀರ್ಪಿನಲ್ಲಿ ನೀಡಿದ ಹೇಳಿಕೆ ಏನು ಗೊತ್ತೆ ‘‘ಅಕ್ಬರ್ ಮಹಾರಾಜನು ಗುಜರಾತಿನಲ್ಲಿ ಆರು ತಿಂಗಳ ಕಾಲ ಮಾಂಸಾಹಾರದಿಂದ ದೂರವಿದ್ದಿರುವಾಗ, ಇನ್ನೊಂದು ಹಬ್ಬವನ್ನು ಗೌರವಿಸಲು ದೂರವಿರುವುದಕ್ಕಾಗುವುದಿಲ್ಲವೇ?’’ ಒಂದಾನೊಂದು ಕಾಲದಲ್ಲಿ ಅಕ್ಬರ್ ಮಹಾರಾಜನ ‘ನಾನ್‌ವೆಜಿಟೇರಿಯನ್’ ಕತೆಯನ್ನು ಮುಂದಿಟ್ಟುಕೊಂಡು ಈ ದೇಶದ ಬಹುಸಂಖ್ಯಾತ ಜನರ ಆಹಾರದ ಹಕ್ಕುಗಳ ಮೇಲೆ ದಾಳಿ ನಡೆಸುವ ನ್ಯಾಯವನ್ನು ‘ನ್ಯಾಯ’ವೆಂದು ಒಪ್ಪಿಕೊಳ್ಳಲು ಸಾಧ್ಯವೆ? ಎಲ್ಲಕ್ಕಿಂತ ಮುಖ್ಯವಾಗಿ, ಒಂದು ಸಮುದಾಯ ಹಬ್ಬ ಆಚರಿಸುತ್ತಿರುವಾಗ ಇನ್ನೊಂದು ಸಮುದಾಯ ತನ್ನ ಬದುಕುವ ಹಕ್ಕುಗಳನ್ನು ಕಳೆದುಕೊಳ್ಳುವುದು ಹೇಗೆ ‘ಸೌಹಾರ್ದ’ದ ಸಂಕೇತವಾಗಾತ್ತದೆ?

ಈ ದೇಶದ ಆಹಾರದ ಕೊರತೆಯನ್ನು ಎದುರಿಸುತ್ತಿರುವ ದಿನಗಳಲ್ಲಿ ‘ಮಾಂಸ’ವನ್ನು ಆಹಾರದ ಮುಖ್ಯವಾಹಿನಿಯಿಂದ ಹೊರಗಿಡುವ ಹುನ್ನಾರಕ್ಕೆ ನ್ಯಾಯಾಲಯ ತೀರ್ಪು ಪರೋಕ್ಷ ಬೆಂಬಲವನ್ನು ನೀಡಿತು. ಈ ದೇಶದ ಮುಖ್ಯ ಆಹಾರ ಮೀನು, ಕೋಳಿ, ಆಡು, ಕುರಿ, ಹಸು, ಮೊಟ್ಟೆ ಇತ್ಯಾದಿಗಳು. ಜನ ಸಾಮಾನ್ಯರ ಬದುಕಿನಲ್ಲಿ ಆಹಾರವಾಗಿ ಮಾತ್ರವಲ್ಲ, ಸಂಸ್ಕೃತಿಯಾಗಿ ಸೇರಿಕೊಂಡಿದೆ. ಲಕ್ಷಾಂತರ ಮೊಗವೀರರು ಮೀನಿನ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಮೀನುಗಾರಿಕೆ ಅವರ ‘ಧರ್ಮ’ವಾಗಿದೆ. ಅವರ ಬದುಕನ್ನು ಪೊರೆಯುವ ಕಡಲನ್ನು ಹೊರತುಪಡಿಸಿದ ಧರ್ಮ ಅವರಿಗಿಲ್ಲ. ಹಾಗೆಯೇ ಕೋಳಿಯ ಉದ್ಯಮವೂ ಈ ದೇಶದಲ್ಲಿ ಲಕ್ಷಾಂತರ ಜನರನ್ನು ಪೊರೆಯುತ್ತಿದೆ. ಕುರಿ, ಆಡಿನ ಮಾಂಸವೂ ಒಂದು ಉದ್ಯಮವಾಗಿ ಈ ದೇಶದಲ್ಲಿ ಬೆಳೆದಿದೆ. ಕುರಿ, ಆಡಿನ ಮಾಂಸ ತನ್ನ ದರದಿಂದಾಗಿ ಕೆಳವರ್ಗದ ಜನರ ಕೈಗೆಟಕದೇ ಇದ್ದಾಗ, ಗೋಮಾಂಸ ಅದನ್ನು ಪೊರೆದಿದೆ.

ತಳವರ್ಗದ ಜನರ ಹಬ್ಬ ಮಾಂಸವಿಲ್ಲದೆ ಪೂರ್ತಿಯಾಗುವುದಿಲ್ಲ. ಮಾಂಸದ ಪರಿಮಳದೊಂದಿಗೇ ಅವರ ಹಬ್ಬ ಸಂಭ್ರಮವನ್ನು ಪಡೆದುಕೊಳ್ಳುತ್ತದೆ. ಸಸ್ಯಾಹಾರಿಗಳ ಹಬ್ಬ ಸಸ್ಯಾಹಾರದ ಖಾದ್ಯಗಳ ಜೊತೆಗೆ ನಡೆಯುತ್ತದೆ. ಒಬ್ಬರ ಹಬ್ಬಗಳನ್ನು ಇನ್ನೊಬ್ಬರ ಆಹಾರದ ಜೊತೆಗೆ ತಳಕು ಹಾಕುವುದೇ ತಪ್ಪು. ಸಸ್ಯಾಹಾರಿಗಳ ಹಬ್ಬದ ದಿನ ಮಾಂಸಾಹಾರಿಗಳು ಮಾಂಸ ತ್ಯಜಿಸಬೇಕೆಂದು ಬಯಸುವುದು, ಮಾಂಸಾಹಾರಿಗಳ ಹಬ್ಬದ ದಿನ ಸಸ್ಯಾಹಾರಿಗಳು ಮಾಂಸವನ್ನು ಸೇವಿಸಿ ‘ಸೌಹಾರ್ದ’ವನ್ನು ಮೆರೆಯಬೇಕೆಂದು ಬಯಸಿದಷ್ಟೇ ಹಾಸ್ಯಾಸ್ಪದ. ಕನಿಷ್ಠ ಹಬ್ಬದ ದಿನವಾದರೂ ಮಾಂಸಹಾರವನ್ನು ತ್ಯಜಿಸಬೇಕು ಎಂಬ ಹೇಳಿಕೆಯಲ್ಲಿ ಪರೋಕ್ಷವಾಗಿ ಮಾಂಸಾಹಾರಿಗಳನ್ನು ‘ಅಪರಾಧಿ’ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರವಿದೆ. ‘ಮಾಂಸ’ವನ್ನು ಮುಖ್ಯವಾಹಿನಿಯಿಂದ ಹೊರಗಿಡುವ ಸಂಚಿದೆಈ ದೇಶದಲ್ಲಿ ಮಾಂಸ ಮತ್ತು ಮದ್ಯವನ್ನು ಒಂದೇ ತಕ್ಕಡಿಯಲ್ಲಿಡುವ ಪ್ರಯತ್ನ ಮೊದಲಿನಿಂದಲೂ ನಡೆದು ಬಂದಿದೆ. ಮಾಂಸ ಆಹಾರ, ಆದರೆ ಮದ್ಯ ಆಹಾರವಲ್ಲ. ಅದನ್ನು ಜೋಡಿಪದವಾಗಿ ಬಳಸುವುದೇ ಒಂದು ರಾಜಕೀಯ. ಜನರನ್ನು ಅವಿವೇಕದೆಡೆ ನಡೆಸುವ, ಅವರ ವಿವೇಕವನ್ನು, ಪ್ರಜ್ಞೆಯನ್ನು ನಾಶ ಮಾಡುವ ಪಾನೀಯ ಮದ್ಯ. ಅದನ್ನು ಸಾಧಾರಣವಾಗಿ ಅಕ್ಟೋಬರ್ 2, ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ನಿಷೇಧಿಸುವ ಪದ್ಧತಿಯಿದೆ. ಚುನಾವಣೆಯ ಸಂದರ್ಭದಲ್ಲೂ ಮದ್ಯದಂಗಡಿಗಳನ್ನು ನಿಷೇಧಿಸಲಾಗುತ್ತಿದೆ. ಕಾನೂನು, ಶಾಂತಿ ಸುವ್ಯವಸ್ಥೆಗೆ ಇದು ಅತ್ಯಗತ್ಯ. ಆದರೆ ಮಾಂಸ ತಿಂದು ಯಾರೂ ಹಿಂಸೆಗಿಳಿದ ಘಟನೆ ಈವರೆಗೆ ನಡೆದ ಉದಾಹರಣೆಯಿಲ್ಲ.

   ಈ ಸಂದರ್ಭದಲ್ಲಿ ಯುವ ದಲಿತ ಕವಿಯೊಬ್ಬರು ಬರೆದ ‘ಗೋವು ತಿಂದು ಗೋವಿನಂತಾದವನು...’ ಎಂಬ ಕವಿತೆಯ ಸಾಲು ನೆನಪಾಗುತ್ತದೆ. ಈ ಸನಾತನ ದೇಶದಲ್ಲಿ ಬ್ರಾಹ್ಮಣರು ಮಾಂಸ ತಿನ್ನದೇ ಬದುಕಿದರು. ದಲಿತರು ದನ ತಿಂದು ಬದುಕಿದರು. ಆದರೆ ಇತಿಹಾಸದಲ್ಲಿ ದಲಿತರು ಬ್ರಾಹ್ಮಣರು ಹಲ್ಲೆ ನಡೆಸಿದ ಉದಾಹರಣೆಯೇ ಇಲ್ಲ. ಆದರೆ ಬ್ರಾಹ್ಮಣರು ದಲಿತರ ಮೇಲೆ ನಡೆಸಿದ ದೌರ್ಜನ್ಯಕ್ಕೆ ಲೆಕ್ಕವೇ ಇಲ್ಲ. ದನದ ಮಾಂಸ ತಿಂದು ದಲಿತರು ದನದ ಹಾಗೆ ಸಾತ್ವಿಕವಾಗಿ ಬದುಕಿದರು. ಸೊಪ್ಪು ಕಡ್ಡಿ ತಿಂದರೂ ಬ್ರಾಹ್ಮಣರೂ ವ್ಯಾಘ್ರರಂತೆ ಅವರ ಮೇಲೆ ಎರಗಿದರು. ಈಗ ಹೇಳಿ ಗಾಂಧಿ ಜಯಂತಿಯ ದಿನ ಬಾಡೂಟ ಮಾಡಿದ ಕಾರಣದಿಂದ ಗಾಂಧಿಗೆ ಅವಮಾನವಾಯಿತೆನ್ನುವುದು ನಂಬುವುದಕ್ಕೆ ಅರ್ಹ ವಿಷಯವೇ?

ಹಸಿವು ತಡೆಯಲಾಗದೆ ವಿಶ್ವಾಮಿತ್ರ ನಾಯಿ ಮಾಂಸವನ್ನೇ ತಿಂದ ಕತೆಯನ್ನು ಹೊಂದಿದ ದೇಶ ನಮ್ಮದು. ಇಂತಹ ದೇಶದಲ್ಲಿ ಸಾವಿರಾರು ಜನರ ಹೊಟ್ಟೆಯ ಮೇಲೆ ಹೊಡೆದು, ಲಕ್ಷಾಂತರ ಜನರ ಆಹಾರವನ್ನು ಕಿತ್ತುಕೊಂಡು ಅದಕ್ಕೆ ಸೌಹಾರ್ದದ ಹೆಸರನ್ನು ನೀಡುವುದು ಅಮಾನವೀಯ. ಮತ್ತು ಈ ಅಮಾನವೀಯತೆಗೆ ಅಕ್ಬರನ ಕತೆಯನ್ನು ಸಮರ್ಥನೆಯಾಗಿ ನೀಡುವುದು ನಮ್ಮ ನ್ಯಾಯ ವ್ಯವಸ್ಥೆಯ ವಿಡಂಬನೆಯೇ ಸರಿ. ಅಂತಹ ತೀರ್ಪನ್ನು ನ್ಯಾಯಾಧೀಶ ತನ್ನ ವೈಯಕ್ತಿಕ ನಂಬಿಕೆಯ ಆಧಾರದಲ್ಲಿ ನೀಡಿದ್ದಾನೆಯೇ ಹೊರತು, ಸಂವಿಧಾನದ ಆಧಾರದ ಮೇಲಲ್ಲ ಎನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಧಾರ್ಮಿಕ ಹಬ್ಬಗಳೆನ್ನುವುದು ಆಯಾ ಧರ್ಮಗಳ ಖಾಸಗಿ ವಿಷಯಳು. ಹಬ್ಬದ ಹೆಸರಿನಲ್ಲಿ ಮೆರವಣಿಗೆ ಇತ್ಯಾದಿಗಳನ್ನು ಮಾಡಿ, ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಮಾಡಿದಷ್ಟೇ ಪ್ರಮಾದದಿಂದ ಕೂಡಿದೆ, ಹಬ್ಬದ ಹೆಸರಿನಲ್ಲಿ ಮಾಂಸಾಹಾರ ನಿಷೇಧ ಮಾಡುವುದು. ಇನ್ನೊಬ್ಬರ ಹಬ್ಬಕ್ಕಾಗಿ ಉಳಿದ ಧರ್ಮೀಯರು ತಮ್ಮ ಜೀವನಾವಶ್ಯಕ ಆಹಾರವನ್ನು ತ್ಯಜಿಸಬೇಕೆಂದು ಆದೇಶಿಸುವುದು. ಇದರಿಂದ ಸೌಹಾರ್ದ ಹೆಚ್ಚುವುದಿಲ್ಲ. ಪರಸ್ಪರ ಅಸಹನೆ ಬೆಳೆಯುತ್ತದೆ. ಹಸಿವಿಗಿಂತ ದೊಡ್ಡ ಹಿಂಸೆ ಬೇರಿಲ್ಲ. ಈ ದೇಶದಲ್ಲಿ 17 ಕೋಟಿ ಮಕ್ಕಳು ಆಹಾರದ ಕೊರತೆಯಿಂದ ನರಳುತ್ತಿದ್ದಾರೆ. ಇದು ಹಿಂಸೆ. ಇವರ ಉದರ ಯಾವತ್ತು ಸಂಪೂರ್ಣ ತುಂಬುತ್ತದೋ, ಅಂದು ಈ ದೇಶಕ್ಕೆ ನಿಜವಾದ ಹಬ್ಬ. ಅದುವೇ ನಿಜವಾದ ಸೌಹಾರ್ದ. ಅಂದು ಆಚರಿಸುವ ಗಾಂಧೀಜಯಂತಿಯೇ ನಿಜವಾದ ಅರ್ಥದ ಗಾಂಧೀಜಯಂತಿ.
(ಅಕ್ಟೋಬರ್ 5, 2007, ಶುಕ್ರವಾರ)

6 comments:

  1. ಬಷೀರ್,
    ನಿಮ್ಮ ಲೇಖನ ಓದಿ ನಗುವುದೋ ಅಳುವುದೋ ತಿಳಿಯಲಿಲ್ಲ. ಹೊಟ್ಟೆಗಿಲ್ಲದ ೧೭ ಕೋಟಿ ಮಕ್ಕಳಿಗೆ ಮಾಂಸಾಹಾರ ಹಂಚುವ ಕಾರ್ಯಕ್ಕೆ ಕೈ ಹಾಕೋಣವೆ? ವಿಷಯ ವಸ್ತು ಏನೋ ಆರೀಸುತ್ತೀರಿ, ಒಳಗೆ ಇನ್ನೊಂದು ತುರುಕುತ್ತೀರಿ. ಒಟ್ಟಿನಲ್ಲಿ ಎಲ್ಲವನೂ ಗಬ್ಬೆಬ್ಬಿಸಿ ಬಿಟ್ಟು ಸುಮ್ಮನಿರುತ್ತೀರಿ. ಪತ್ರಕರ್ತನಾಗಿ ನೀವು ಈ ತರ ಮಾಡುವುದು ಸಮಂಜಸವಲ್ಲ. ಸಮಾಜದ ಸ್ವಾಸ್ಥ್ಯ ಕಟ್ಟಬೇಕಾದ ನೀವುಗಳು ಜಾತೀಯತೆಯ ವಿಷದ ಇಂಜೆಕ್ಷನ್ ಕೊಡುತ್ತ ನಿರತರಾಗುತ್ತೀರಿ. ಬಿಟ್ಟು ಬಿಡಿ ಈ ಬುದ್ಧಿಯನ್ನು.

    ReplyDelete
    Replies
    1. ಪುಷ್ಪರಾಜ ಸರ್,
      ಈ ೧೭ ಕೋಟಿ ಮಕ್ಕಳು ’ಬರೀ ಮಾಂಸ ತಿಂದರೆ ಮಾತ್ರ ಬದುಕುವವರು’, ಅನ್ನ ತರಕಾರಿ ಅವರ ಹೊಟ್ಟೆಗೆ ಕೊಟ್ಟರೆ, ಬದುಕುವುದಿಲ್ಲ ಅನಿಸುತ್ತದೆ...

      ಗುಜರಿಅಂಗಡಿಗೆ ಬದಲಾಗಿ ಕಸಾಯಿಖಾನೆ ಅಂತ ಹೆಸರಿಟ್ಟುಕೊಂಡು ಬರೆಯಿರಿ.. ಸರಿಹೋಗುತ್ತದೆ

      Delete
  2. Total non sense.
    ಕಲ್ಲು ಎಷ್ಟು ಕಾಲ ನೀರಲಿದ್ದರೇನು ? ನೆನೆದು ಮೃದುವಾಗಬಲ್ಲುದೆ ?.
    These people never learn from others.
    These people can not put nation first.where ever they are ,they are pain to others.

    ReplyDelete
    Replies
    1. ಕುರಿ, ಆಡಿನ ಮಾಂಸ ತನ್ನ ದರದಿಂದಾಗಿ ಕೆಳವರ್ಗದ ಜನರ ಕೈಗೆಟಕದೇ ಇದ್ದಾಗ, ಗೋಮಾಂಸ ಅದನ್ನು ಪೊರೆದಿದೆ.
      ದರ ಕೈಗೆಟುಕದೇ ಇದ್ದಾಗ ’ಗೋಮಾಂಸ’ವೇ ಯಾಕೆ ಬೇಕು? ಹಂದಿ, ನಾಯಿ ಮಾಂಸ ತಿಂದರಾಗುವುದಿಲ್ಲವೆ??.’ಹಂದಿ’ ಎಂದಾಕ್ಷಣ ಅಲ್ಪಸಂಖ್ಯಾತರ ಧಾರ್ಮಿಕ ನಂಬಿಕೆಗಳಿಗೆ ಅಗೌರವ ತೋರಿಸಿದಂತೆ ಎಂಬುದು ತಮ್ಮ ವಾದವಾದರೆ.. ’ಗೋಮಾಂಸ’ ಎಂಬುದು ಬಹುಸಂಖ್ಯಾತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಂತೆ ಎಂದು ತಾವು ಯಾಕೆ ಯೋಚಿಸುವುದಿಲ್ಲ??

      "ಆದರೆ ಮಾಂಸ ತಿಂದು ಯಾರೂ ಹಿಂಸೆಗಿಳಿದ ಘಟನೆ ಈವರೆಗೆ ನಡೆದ ಉದಾಹರಣೆಯಿಲ್ಲ" ತಮ್ಮ ಪಂಗಡಕ್ಕೆ ಸೇರಿದ ಅಂತರರಾಷ್ಟೀಯ ಭಯೋತ್ಪಾದಕರೆಲ್ಲಾ ಸಸ್ಯಾಹಾರಿಗಳೇ???

      ಅಖಂಡ ಭಾರತ ಸ್ವತಂತ್ರವಾದಾಗ ಮಾತ್ರ ಅದು ಭಾರತೀಯ ರಾಷ್ಟ್ರವಾಗಿತ್ತು. ತಮ್ಮ ಬಂಧು ಬಾಂಧವರು ತಮ್ಮ ತಮ್ಮ ಪಾಲನ್ನು (ಪಾಕಿಸ್ತಾನ, ಬಾಂಗ್ಲ್ಲಾ)ತೆಗೆದುಕೊಂಡು ಹೋಗಿ ಯಾವಾಗ ಪ್ರತ್ಯೇಕತೆಯ ಬೀಜ ಬಿತ್ತಿದರೋ ಆಗ ಈ ದೇಶವು ’ಹಿಂದೂ’ಗಳ ಏಕೈಕ ರಾಷ್ಟ್ರವಾಗಿದೆ. ಇಲ್ಲಿರುವ ಬಹುಸಂಖ್ಯಾತ ಹಿಂದೂಗಳ ಭಾವನೆಯನ್ನು ಗೌರವಿಸದೆ, ಎಲ್ಲರ ನಡುವೆ ವಿಷಬೀಜಗಳನ್ನು ಬಿತ್ತುತ್ತಿರುವ ತಮ್ಮಂತಹವರಿಗೆ ಈ ದೇಶದಲ್ಲಿರಲು ಯೋಗ್ಯತೆಯಿಲ್ಲ...

      Delete
  3. ನಿನ್ ಮನೇಲಿ ಮಕ್ಳಿಲ್ವಾ? ಕರ್ಕೊಂಡ್ ಹೋಗಿ ಆ ಕಟುಕನ ಮಗೆನೆ ಕೊಡು. ಮಾಂಸ ಮಾರ್ಕೊಂಡ್ ಬದುಕ್ಕೊಳ್ಲಿ.
    ಲೋ, ನಿನ್ logic ಅರ್ಥ ಆಗಲ್ವೋ. ಒಂದ್ ಕೆ.ಜಿ ಮಾಂಸ ಬೆಳೆಸ್ಕೊಳ್ಳೋಕ್ಕೆ ಬೇರೆ ಜೀವ ಎಷ್ಟ್ ಸಸ್ಯ ತಿನ್ಬೇಕು, ಎಷ್ಟ್ ನೀರ್ ಕುಡಿಬೇಕು ಅಂತ ಗೊತ್ತಾ? ಒಂದ್ ಹೊತ್ತಿನ್ ಊಟಕ್ಕಾಗೋ ಅಶ್ಟ್ ಮಾಂಸ ಕೊಡೋ ಪ್ರಾಣಿ ಪೋಷಣೆ ಮಾಡೋಬದ್ಲು ಅಷ್ಟೇ ಸಂಪನ್ಮೂಲ ವ್ಯಯಿಸಿದ್ರೆ ಮೂರ್ ದಿನಕ್ಕಾಗೋ ಅಷ್ಟ್ ಬೆಳೆ ಬೆಳೀ ಬೋದು. ನಿನ್ ತಲೇಲೇನ್ ಹಂದಿ ಹೊಬ್ರ ಇದ್ಯಾ? ಒಂದ್ನೇಕ್ಲಾಸ್ ಹುಡ್ಲಿಗ್ ಅರ್ಥ ಆಗೋಅಷ್ಟೂ‌ ನಿಂಗಾಗಲ್ವಲ್ಲಾ.. ಥೂ.. ನಿನ್ ಜನ್ಮಕ್ಕೆ

    ReplyDelete
  4. What a pity Basheer...?? How come you become a journalist, having these kind of prejudice...???

    Ondu dinada baadoota dinda ondu samudaayada hasivu baduku poorti ingi houthadeye? Or Ondu dinada Baadoota tappidare avaru upavasa beeluthhareye?

    E deshada - rajyada or ottaare namma badavara (Ondu samudayadavaru or Muslim-Hindu yennuva agatyavaadaroo yenu? Badavaru yendare saalade?)

    svalpa chennaagi odikoLLutheeraa Basheer Plsss! Neevu namma nechchina kavi . But as Lankesh once said, "Kathe kattuvudu ondu jaadoo..aadare manushayanige idarinda aachegoo chintane-tarka bekaguthade..."

    So please dont brand all maulvis-Mullas as militants, so as hindutva preachers are anti muslims ...haam, one thing is sure, if you check the Data,(A Tahshil or a Police juridiction) any were in country, you will find most number of criminals,thiefs, law breakers names are muslim names...

    (Now you will defend saying Indian Muslim are uneducated and they are poors!! But I say most of them are not taught the culture good behaviour, honesty,civic sense, instead their religion teaches them more about koran and mohammed!! )

    For a human beeing civic sense-civic education is more important than koran, Geetha or Bible, with due respect to all three!! religious preaching and teaching should be secondary)

    Neevu , "Muslim moolabhootavaditvavannu jaathyateetate'" yendu thilisalui yatnisuva patrike seridaagale nimma nishpakshapaatate - nirapekshe pareekshege olagaayitu...?

    nannatha yaava moolabhootavaadavannoo puraskarisada vyaktige nimma "Vichara (Vikaara?) bharati" goo "Hosadiganta" kkoo yavude vyatyaasa kaanuthilla!

    Saamanya janatheya bhasheyalli heluvudadare nanu
    Muslim hudugiyannu maduveyada Hindu...but if you ask I am a human beeing ..Boy by birth and married a Girl ..Thats it!!!

    But if you ask me out of every ten, all nine muslim boys who marry a hindu girl change convert thier girl in to muslim...!!!

    Any way , I wish good - non prejudise sense prevail upon you Mr.Basheer, You are a great poet, go on penning ..its your area of talent...All the Best.
    Prashant B.Mumbai

    ReplyDelete