Wednesday, April 25, 2012

ಒಂದಾಗುವುದಕ್ಕೆ ಕರುಳ ಸಂಬಂಧವೊಂದೇ ಸಾಕು....

ಕಳೆದ ವರ್ಷ ಉಡುಪಿಯಲ್ಲಿ ವಿವಿಧ ಪ್ರಗತಿ ಪರ ಸಂಘಟನೆಗಳು ಒಂದಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿದ್ದವು. ಅದರ ಉದ್ಘಾಟನಾ ಭಾಷಣವನ್ನು ನಾನು ಮಾಡಿದ್ದೆ. ಆ ಭಾಷಣದ ಸಂಗ್ರಹ ಇಲ್ಲಿದೆ.

ನಾನಿಲ್ಲಿ ಮೈಕ್‌ನ ಮುಂದೆ ನಿಂತು ಈ ಅಂಬೇಡ್ಕರ್ ಜಯಂತಿಯನ್ನು ಉದ್ಘಾಟಿಸಲು ಹೊರಟಿದ್ದರೆ ನನ್ನ ಮುಂದೆ ಮೋಂಟನ ಮುಖ ದುತ್ತೆಂದು ನಿಂತು, ನನ್ನನ್ನು ಅಣಕಿಸಿದಂತೆ ಭಾಸವಾಗುತ್ತಿದೆ. ಮೋಂಟ ನನ್ನ ಮನೆಗೆ ಕಟ್ಟಿಗೆಗಳನ್ನು ಹೊತ್ತು ತರುತ್ತಿದ್ದ. ತೆಂಗಿನ ಗಿಡಗಳ ಬುಡಗಳನ್ನು ಬಿಡಿಸುವುದಕ್ಕೆ ಬರುತ್ತಿದ್ದ. ನನ್ನ ಮನೆಯ ಜಮೀನಿನಲ್ಲಿ ನನ್ನ ಮತ್ತು ನನ್ನ ತಂದೆಯ ಬೆವರು ಬೀಳುವುದಕ್ಕಿಂತ ಹೆಚ್ಚಾಗಿ ಮೋಂಟನ ಬೆವರು ಹರಿದಿದೆ. ನಾನು ತೀರಾ ಸಣ್ಣವನಿರುವಾಗಲೇ ಆತ ನನ್ನ ಮನೆಗೆ ಬರುತ್ತಿದ್ದ. ನಾನು ಬೆಳಗ್ಗೆ ತಡವಾಗಿ ಎದ್ದು ಹಲ್ಲುಜ್ಜಿ ಟೇಬಲ್ ಮೇಲೆ ರೊಟ್ಟಿ ತಿನ್ನುತ್ತಿದ್ದರೆ ಆತ, ಬೆವರಿಳಿಸಿ ದುಡಿದು ನನ್ನ ಮನೆಯ ಹೊರಗೆ ಮೆಟ್ಟಿಲಲ್ಲಿ ಕೂತು ರೊಟ್ಟಿ ತಿನ್ನುತ್ತಿದ್ದ. ವಿಶೇಷವೆಂದರೆ ತೀರಾ ಸಣ್ಣವನಿದ್ದ ನನ್ನನ್ನು ಅವನು ಬಹುವಚನದಿಂದ ಕರೆಯುತ್ತಿದ್ದ. ನಾನು ಆತನನ್ನು ಏಕವಚನದಿಂದ ಕರೆಯುತ್ತಿದ್ದೆ. ಪಿಯುಸಿಗೆ ಕಾಲಿಡುತ್ತಿದ್ದ ಹಾಗೆ ನನಗೆ ನಿಧಾನಕ್ಕೆ ವಿಪರ್ಯಾಸ ಅರ್ಥವಾಗತೊಡಗಿತು. ಬಳಿಕ ಆತನನ್ನು ಮನೆಯ ಒಳಗೆ ಕರೆದು ರೊಟ್ಟಿ ಕೊಡುವಷ್ಟು ನಾನು ಸುಧಾರಿಸಿದೆ. ನಿಧಾನಕ್ಕೆ ಅವನಿಗೆ ಹತ್ತಿರವಾಗಲು ಪ್ರಯತ್ನಿಸಿದೆ. ದುರದೃಷ್ಟವಶಾತ್, ನಾವು ಹತ್ತಿರವಾಗುವುದು ಅಷ್ಟು ಸುಲಭವಿರಲಿಲ್ಲ. ‘‘ನನ್ನನ್ನು ಏಕವಚನದಿಂದ ಕರಿ’’ ಎಂದು ಅವನಲ್ಲಿ ಹೇಳುವುದಾಗಲಿ, ಅವನನ್ನು ಬಹುವಚನದಿಂದ ಕರೆಯುವುದಾಗಲಿ ನನ್ನಿಂದ ಸಾಧ್ಯವೇ ಆಗಲಿಲ್ಲ. ಎಷ್ಟೋ ಸಮಯದ ಬಳಿಕ, ಅಲ್ಲಿಲ್ಲಿ ಅವನು ಎದುರಾದರೆ ಅವನಿಗೆ ಐವತ್ತೋ, ನೂರೋ ಹಣ ಕೊಡುತ್ತಿದ್ದೆ. ಅವನದನ್ನು ನೇರ ಹೆಂಡದಂಗಡಿಗೆ ಕೊಡುತ್ತಿದ್ದ ಎನ್ನುವುದು ಗೊತ್ತಿದ್ದರೂ. ಅದು ನನ್ನ ಪಾಪ ಪ್ರಜ್ಞೆಯ ಫಲವಾಗಿರಬಹುದು. ಇತ್ತೀಚೆಗೆ ಮೋಂಟ ತೀರಿಕೊಡ. ಆದರೆ ಪ್ರಶ್ನೆ ಈಗಲೂ ನನ್ನಲ್ಲಿ ಉಳಿದಿದೆ. ಯಾಕೆ ಅವನನ್ನು ಬಹುವಚನದಿಂದ ನನಗೆ ಕರೆಯಲು ಸಾಧ್ಯವಾಗಲಿಲ್ಲ? ಈ ಕ್ಷಣದಲ್ಲೂ ಆತನನ್ನು ‘ನೀವು’ ಎಂದು ಕರೆಯುವುದಕ್ಕೆ ನನ್ನನ್ನು ಕಟ್ಟಿ ಹಾಕಿದ ಶಕ್ತಿ ಯಾವುದು? ನಿಜಕ್ಕೂ ನನ್ನನ್ನು ನಾನು ಜಾತ್ಯತೀತ ಎಂದು ಕರೆದುಕೊಳ್ಳಲು ಅರ್ಹನೆ...ಈ ಪ್ರಶ್ನೆಗಳು ಈ ಕ್ಷಣದಲ್ಲೂ ನನ್ನನ್ನು ಕಾಡುತ್ತಿದೆ.

ಈ ಸಮಾರಂಭದಲ್ಲಿ ಮುಸ್ಲಿಮರು ಅತ್ಯಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ. ಕ್ರಿಶ್ಚಿಯನ್ನರೂ ಇದ್ದಾರೆ. ಈಗ ನನ್ನನ್ನು ಮತ್ತೊಂದು ಪ್ರಶ್ನೆ ಕಾಡುತ್ತಿದೆ. ಇಲ್ಲಿ ದಲಿತರು-ಮುಸ್ಲಿಮರು-ಕ್ರಿಶ್ಚಿಯನ್ನರು ಒಂದಿಷ್ಟು ಶೂದ್ರವರ್ಗದ ಜನರು ಒಂದಾಗಿ ಕುಳಿತಿದ್ದಾರೆ. ಆದರೆ ಯಾವ ಕಾರಣಕ್ಕೆ? ಹೌದು, ಕಾರಣ ಒಂದೇ...ಎಲ್ಲರಿಗೂ ಸಮಾನವಾದ ಒಬ್ಬ ಶತ್ರುವಿದ್ದಾನೆ. ಆ ಶತ್ರುವಿನ ಕಾರಣಕ್ಕಾಗಿ ನಾವು ಒಂದಾಗಿದ್ದೇವೆ. ಒಂದು ವೇಳೆ, ಈ ಶತ್ರು ಇಲ್ಲದೇ ಇರುತ್ತಿದ್ದರೆ ನಾವಿಲ್ಲಿ ಒಟ್ಟು ಸೇರುತ್ತಿದ್ದೇವೆಯೆ? ಸೇರುತ್ತಿರಲಿಲ್ಲ ಅನ್ನಿಸುತ್ತದೆ. ಆದುದರಿಂದಲೇ ನಾವೆಲ್ಲರೂ ನಮ್ಮಿಳಗಿನ ಜಾತ್ಯತೀತತೆಯನ್ನು ಉಜ್ಜಿ ನೋಡುವ ಸಂದರ್ಭ ಈ ಅಂಬೇಡ್ಕರ್ ಜಯಂತಿ.

ಮುಖ್ಯವಾಗಿ ದಲಿತರು ಮತ್ತು ಮುಸ್ಲಿಮರು ಒಟ್ಟು ಸೇರುವುದಕ್ಕೆ ಯಾವ ಶತ್ರುವಿನ ಅಗತ್ಯವೂ ಇಲ್ಲ. ಈ ಎರಡು ಸಮುದಾಯಗಳದ್ದು ಕರುಳ ಬಳ್ಳಿಯ ಸಂಬಂಧ. ಆ ಸಂಬಂಧವನ್ನು ನಾವು ಜೋಪಾನವಾಗಿ, ಗಟ್ಟಿ ಮಾಡಿ ಇಟ್ಟುಕೊಂಡಿದ್ದಿದ್ದರೆ ಯಾವ ಶತ್ರುವೂ ನಮ್ಮ ನಡುವೆ ಹುಟ್ಟುತ್ತಿರಲಿಲ್ಲ. ಶತ್ರುವಿದ್ದರೂ ನಮ್ಮ ಮುಂದೆ ತಲೆಯೆತ್ತುವ ಧೈರ್ಯ ಮಾಡುತ್ತಿರಲಿಲ್ಲ. ನಾವು ಕರುಳ ಸಂಬಂಧವನ್ನು ಮರೆತೆವು. ಅದರ ಪರಿಣಾಮವನ್ನು ಉಣ್ಣುತ್ತಿದ್ದೇವೆ.
ದಲಿತರು ಎನ್ನುವ ಶಬ್ದಕ್ಕೆ ವಿರುದ್ಧಾರ್ಥ ಬ್ರಾಹ್ಮಣ ಎಂದು ನಾವೆಲ್ಲ ತಿಳಿದುಕೊಂಡಿದ್ದೇವೆ. ಆದರೆ ಬ್ರಾಹ್ಮಣ್ಯ ಎನ್ನುವುದು ಒಂದು ಆಲೋಚನೆ ಎನ್ನುವ ಪ್ರಜ್ಞೆ ನಮ್ಮಲ್ಲಿರಬೇಕಾಗಿದೆ. ಆ ಆಲೋಚನೆ ನಮ್ಮ ನಿಮ್ಮಲ್ಲೆಲ್ಲ ಗುಟ್ಟಾಗಿ ಮನೆ ಮಾಡಿರಬಹುದು. ಮನು ಸಂವಿಧಾನದ ಫಲವನ್ನು ಕೇವಲ ಬ್ರಾಹ್ಮಣರು ಮಾತ್ರ ಉಂಡಿಲ್ಲ. ಅದರ ಸವಲತ್ತನ್ನು ಇಲ್ಲಿ ಕುಳಿತಿರುವ ಶೂದ್ರರು, ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಉಂಡಿದ್ದಾರೆ. ಹಾಗೆ ನೋಡಿದರೆ ಇಂದು ಬ್ರಾಹ್ಮಣ್ಯವಾದ ಕಾರ್ಯ ನಿರ್ವಹಿಸುತ್ತಿರುವುದು ಬ್ರಾಹ್ಮಣೇತರ ಕೈಗಳ ಮೂಲಕ. ಮನು ಸಂವಿಧಾನವನ್ನು ಬರೆದು ಅದನ್ನು ಉಳಿದವರ ಕೈಯಲ್ಲಿಟ್ಟು, ಅವರು ದೂರದಲ್ಲಿ ನಿಂತು ಅದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅಂದರೆ ಅದರ ಲಾಭಗಳನ್ನು ಇತರರೊಂದಿಗೆ ಹಂಚಿಕೊಳ್ಳುವಷ್ಟು ಉದಾರರಾಗಿದ್ದಾರೆ. ದಲಿತರ ಮೇಲೆ ದೌರ್ಜನ್ಯ ನಡೆಸುತ್ತಿರುವವರಲ್ಲಿ ಶೂದ್ರರೇ ಬಹುಸಂಖ್ಯಾತರು. ಹಾಗೆಯೇ ಮುಸ್ಲಿಮರೂ ದಲಿತರನ್ನು ತುಳಿದಿದ್ದಾರೆ. ಕ್ರಿಶ್ಚಿಯನ್ನರೂ ದಲಿತರನ್ನು ತುಳಿದಿದ್ದಾರೆ. ಬ್ರಾಹ್ಮಣ್ಯವೆನ್ನುವುದು ಶೂದ್ರರಲ್ಲಿ, ಮುಸ್ಲಿಮರಲ್ಲಿಯೂ ವಿಷದ ಹಾವಿನಂತೆ ತಣ್ಣಗೆ ಮಲಗಿರುವುದನ್ನು ನಾನು ನೋಡಿದ್ದೇನೆ.

 ಇಲ್ಲಿರುವ ಮುಸ್ಲಿಮರನ್ನು ನಾನೊಂದು ಪ್ರಶ್ನೆಯನ್ನು ಕೇಳುವುದಕ್ಕೆ ಬಯಸುತ್ತೇನೆ. ಇಸ್ಲಾಂ ಸಹೋದರತೆಯನ್ನು, ಸಮಾನತೆಯನ್ನು ಬೋಧಿಸುತ್ತದೆ ಎಂದು ನಾವೆಲ್ಲ ನಂಬಿದ್ದೇವೆ. ಆದರೂ ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಯಾಕೆ ಅನ್ನಿಸಲಿಲ್ಲ? ಇದೇ ಪ್ರಶ್ನೆಯನ್ನು ನನ್ನೊಬ್ಬ ಆತ್ಮೀಯ ಧರ್ಮಗುರುವಿಗೆ ಕೇಳಿದ್ದೆ. ಅವರು ಹೇಳಿದರು ‘‘ಬಹುಶಃ ಇಸ್ಲಾಮನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿರಬೇಕು’’

ಇಲ್ಲ, ಅದಲ್ಲ. ಇಸ್ಲಾಮನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾದುದಲ್ಲ. ಬದಲಿಗೆ ಇಲ್ಲಿನ ಮುಸ್ಲಿಮರು ಇಸ್ಲಾಮನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಗಡ್ಡವನ್ನೇ ಇಸ್ಲಾಮಿನ ಅಸ್ತಿತ್ವ ಎಂದು ನಂಬಿಕೊಂಡಿರುವ ವೌಲವಿಗಳು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ನಾವು, ನೀವು ಇಸ್ಲಾಮನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಆಳದಲ್ಲಿ ಭಾರತದ ಜಾತೀಯತೆಯ ಚರಂಡಿ ಇನ್ನೂ ನಮ್ಮ ಮನದಾಳದಲ್ಲಿ ಅಂತರ್‌ಗಂಗೆಯಂತೆ ಹರಿಯುತ್ತಿದೆ. ಆದುದರಿಂದಲೇ ನಾನು ಹೇಳುತ್ತಿದ್ದೇನೆ, ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಅನ್ನಿಸದೇ ಇರುವುದು ಭಾರತದ ಆಧುನಿಕ ದಿನಗಳಲ್ಲಿ ಇಸ್ಲಾಮ್ ಧರ್ಮದ ಅತಿ ದೊಡ್ಡ ಸೋಲು. ಅದಕ್ಕಾಗಿ ಇಲ್ಲಿನ ಮುಸ್ಲಿಮರು ಈಗಲೂ ಬೆಲೆ ತೆರುತ್ತಲೇ ಇದ್ದಾರೆ. ಭಾರತದ ಎಲ್ಲ ವೌಲ್ವಿಗಳು ಇದಾಕ್ಕಾಗಿ ನಾಚಿಕೆ ಪಟ್ಟುಕೊಳ್ಳಬೇಕು. ಇದು ಇಸ್ಲಾಂ ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರೈಸ್ತ ಧರ್ಮಕ್ಕೆ ಮತಾಂತರರಾದ ದಲಿತರ ಶವ ದಫನ ಹಲವು ಚರ್ಚುಗಳಲ್ಲಿ ವಿವಾದವಾದುದನ್ನು ನಾವು ನೋಡಿದ್ದೇವೆ. ದಲಿತ ಪಾದ್ರಿಗಳೇ ಅಲ್ಲಿ ಕೀಳರಿಮೆಯಿಂದ ಬದುಕುವ ಸನ್ನಿವೇಶವಿದೆ. ದಲಿತರು ದಲಿತರಾಗಿದ್ದುಗೊಂಡು ಅವಮಾನ ಅನುಭವಿಸುವುದಕ್ಕಿಂತಲೂ ಇದು ಕ್ರೂರವಾದುದು. ಇದೆಲ್ಲವೂ ಯಾಕೆ ಸಂಬಂಧವಿಸುತ್ತಿದೆಯೆಂದರೆ, ಇಂದು ನಾವು ರಾಜಕೀಯ ಕಾರಣಗಳಿಗಾಗಿ ದಲಿತರನ್ನು ಪ್ರೀತಿಸಲು ತೊಡಗಿರುವುದು. ದಲಿತರನ್ನು ಪ್ರೀತಿಸುವುದಕ್ಕೆ ಈ ದೇಶದ ಮುಸ್ಲಿಮರಿಗೆ, ಕ್ರಿಶ್ಚಿಯನ್ನರಿಗೆ ರಾಜಕೀಯ ಕಾರಣಗಳ ಅಗತ್ಯವಿಲ್ಲ. ಕರುಳ ಸಂಬಂಧವೊಂದೇ ಸಾಕು. ಅವರೊಂದಿಗೆ ನೂರಾರು ಜನ್ಮ ಜೊತೆ ಜೊತೆಯಾಗಿ ಬಾಳುವುದಕ್ಕೆ.

 ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿರಬಹುದು. ಬೌದ್ಧರಾಗಿದ್ದರೂ ಅವರು ಅತ್ಯುತ್ತಮ ಮುಸ್ಲಿಮರಾಗಿಯೂ, ಅತ್ಯುತ್ತಮ ಕ್ರಿಶ್ಚಿಯನ್ನರಾಗಿಯೂ ಬಾಳಿದರು. ಈ ದೇಶದಲ್ಲಿ ನಾನು ಅತಿಯಾಗಿ ಗೌರವಿಸುವ, ಇಷ್ಟ ಪಡುವ ಎರಡು ಜೀವಗಳು ಗಾಂಧಿ ಮತ್ತು ಅಂಬೇಡ್ಕರ್. ಇದೇ ಸಂದರ್ಭದಲ್ಲಿ ಗಾಂಧಿ ಇಲ್ಲದ ಭಾರತವನ್ನು ನಾನು ಕಲ್ಪಿಸಬಲ್ಲೆ. ಆದರೆ ಅಂಬೇಡ್ಕರ್ ಇಲ್ಲದ ಭಾರತವನ್ನು ನನಗೆ ಕಲ್ಪಿಸಲು ಸಾಧ್ಯವಿಲ್ಲ. ಗಾಂಧಿ ಮತ್ತು ಅಂಬೇಡ್ಕರ್‌ರಲ್ಲಿ ಯಾರನ್ನಾದರೂ ಒಬ್ಬರನ್ನು ಆರಿಸುವ ಅನಿವಾರ್ಯತೆ ಬಂದರೆ ನಾನು ಆರಿಸುವುದು ಅಂಬೇಡ್ಕರ್‌ರನ್ನು. ಇಂತಹ ನಾಯಕ ಜಯಂತಿ ಈ ದಿನ ನಾವು ಒಂದುಗೂಡಿದ ಉದ್ದೇಶ ಪ್ರಾಮಾಣಿಕವಾಗಿರುವುದು ಅತ್ಯಗತ್ಯ. ಈ ದಿನ ದಲಿತರು ಮತ್ತು ಇತರ ಶೋಷಿತ ಸಮುದಾಯಗಳು ತಮ್ಮ ನಡುವಿನ ಕರುಳ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುವತ್ತ ಯೋಚಿಸಬೇಕು. ಒಬ್ಬ ದಲಿತನಿಗೆ ನೋವಾದಾಗ ಅದಕ್ಕಾಗಿ ಈ ದೇಶದ ಸರ್ವ ಶೋಷಿತರ ಕರುಳುಗಳೂ ಸಹಜವಾಗಿ ಮಿಡಿಯಬೇಕು.

ನಮ್ಮ ಶತ್ರುಗಳನ್ನು ಹೇಗೆ ಎದುರಿಸುವುದು ಎನ್ನುವುದಕ್ಕಾಗಿ ನಾವು ಇಲ್ಲಿ ಒಂದಾಗಿದ್ದೇವೆ ಎಂದಾದರೆ ಅದು ಅಪ್ರಾಮಾಣಿಕ ನಡೆಯಾಗಿರುತ್ತದೆ. ಅಂತಹ ಬಾಂಧವ್ಯ ಹೆಚ್ಚು ಸಮಯ ಬಾಳದು. ಶತ್ರು ನಮ್ಮಾಳಗಿದ್ದಾನೆ. ಅವನನ್ನು ಹುಡುಕಿ ಎದಿರುಸುವುದು ಹೇಗೆ ಎನ್ನುವುದಕ್ಕಾಗಿ ನಾವು ಈ ದಿನವನ್ನು ಬಳಸಿಕೊಳ್ಳೋಣ. ನಾವು ಇನ್ನಷ್ಟು ಜಾತ್ಯತೀತರಾಗುವ ದಾರಿಯನ್ನು ಹುಡುಕೋಣ. ಎಲ್ಲರಿಗೂ ಅಂಬೇಡ್ಕರ್ ಜಯಂತಿಯ ಶುಭಾಶಯಗಳು.

6 comments:

  1. >>>> "ಇಸ್ಲಾಂ ಸಹೋದರತೆಯನ್ನು, ಸಮಾನತೆಯನ್ನು ಬೋಧಿಸುತ್ತದೆ ಎಂದು ನಾವೆಲ್ಲ ನಂಬಿದ್ದೇವೆ. ಆದರೂ ಇಸ್ಲಾಂ ತಾನು ಸ್ವೀಕರಿಸಬಹುದಾದ ಧರ್ಮ ಎಂದು ಅಂಬೇಡ್ಕರ್‌ಗೆ ಯಾಕೆ ಅನ್ನಿಸಲಿಲ್ಲ?"

    ಇಸ್ಲಾಂ ಸಹೋದರತೆಯನ್ನು, ಸಮಾನತೆಯನ್ನು ಬೋಧಿಸುತ್ತದೆ ಎಂಬುದು ನಿಜವಾಗಿದ್ದಲ್ಲಿ ಸುನ್ನಿ ಮುಸಲ್ಮಾನರು ಶಿಯಾ ಸೋದರರ ಮಾರಣಹೋಮ ಗೈಯುತ್ತಿರುವುದೇಕೆ?

    ಅಂಬೇಡ್ಕರರು ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಿದ್ದರೋ ಏನೋ, ಕೆಳಗಿನ ಎರಡು ಗೊಂದಲಗಳು ಇಲ್ಲವಾಗಿದ್ದಲ್ಲಿ:
    ೧. ಬೌದ್ಧ ಧರ್ಮ ದೇವರ ಇರುವಿಕೆಯನ್ನು ಅಲ್ಲಗಳೆಯುತ್ತದೆ. ಇಸ್ಲಾಂ ತದ್ವಿರುದ್ಧ ?
    2. ಕನ್ನಡದ ಯುವಕವಿ ಸಿಂಹರ ಕೆಳಗೆ ವಿವರಿಸಿದ ಗೊಂದಲ ಅಂಬೇಡ್ಕರರಿಗೂ ಬಂದಿರಬೇಕು -

    "ಪೈಗಂಬರರೆ ಪರಮಗುರು ಒಪ್ಪುವೆನು, ಒಪ್ಪುವೆನು !
    ಸಣ್ಣ ಸಂಶಯವೊಂದ ಪರಿಹರಿಸೆ ನೀನು !
    ನಾನು ನಿನ್ನವನಾಗೆ ಶಿಯಾ ಆಲಂಗಿಸುವನೆ? ಸುನ್ನಿ ಅಪ್ಪುವನೆ ನನ್ನ?
    ಯಾರ ಸೇರಲಿ, ತಿಳಿಸು ನೀನು."

    -- ಶ್ರೀ ಕಾರ್

    ReplyDelete
  2. ಶೋಷಣೆಗೆ ಉಪಾಯ ಸರಳ. ನೂರು ಮತದ ಹೊಟ್ಟು ತೂರಿ ವಿಗ್ನಾನ ದೀವಿಗೆ ಹಿಡಿಯೋದು. ದೈರ್ಯ ಮಾಡಬೇಕು ಅಷ್ಟೇ. ಇಲ್ಲವಾದಲ್ಲಿ ಅರೆಬೆಂದ ವೈಚಾರಿಕತೆ, ಅರ್ತವಿಲ್ಲದ ಕರುಳಕತೆ, ಕಾಲಹರಣವೇ ಗತಿ.

    ReplyDelete
  3. "ಬೌದ್ಧರಾಗಿದ್ದರೂ ಅವರು ಅತ್ಯುತ್ತಮ ಮುಸ್ಲಿಮರಾಗಿಯೂ, ಅತ್ಯುತ್ತಮ ಕ್ರಿಶ್ಚಿಯನ್ನರಾಗಿಯೂ ಬಾಳಿದರು" ಎನ್ನುವುದು ನನಗೆ ಹಿಡಿಸಲಿಲ್ಲ. ಒಂದು ಧರ್ಮಕ್ಕೆ ಪರಿಹಾರ ಇನ್ನೊಂದು ಧರ್ಮವಲ್ಲ. ಇವೆಲ್ಲವೂ ಕುರುಡೇ. ಹೀಗೆ ದಲಿತರಿಗೆ ಮುಸ್ಲಿಮರೋ, ಕ್ರಿಶ್ಚಿಯನ್ನರೋ ಹತ್ತಿರ ಎಂದು ಹೇಳುತ್ತಲೇ ನಮ್ಮ ನಮ್ಮ ನಡುವೆ ಯಾಕೆ ಕಂದಕಗಳನ್ನು ಹುಟ್ಟಿಸಬೇಕೆಂದೂ ನನಗೆ ತಿಳಿಯುತ್ತಿಲ್ಲ. ದಲಿತನೋ, ಮುಸ್ಲಿಮನೋ ಮನುಷ್ಯನಾಗಿ ನಾವು ಒಬ್ಬರನ್ನೊಬ್ಬರು ಪ್ರೀತಿಸುವುದು ಸಾಧ್ಯ. ಬ್ರಾಹ್ಮಣ ಹೇಗೆ ಬ್ರಾಹ್ಮಣನಾಗಿರುವ ತನಕ ಇದು ಸಾಧ್ಯವಿಲ್ಲವೋ ಮುಸ್ಲಿಮನು ಮುಸ್ಲಿಮನಾಗಿರುವ ತನಕವೂ ಸಾಧ್ಯವಿಲ್ಲ. ಇವನ್ನು ಮೀರಿ ಮನುಷ್ಯರಾಗಿ ಪ್ರೀತಿಸುವುದಕ್ಕೂ ನಮ್ಮ ಹತ್ತಿರ ಸಾಧ್ಯವಾಗದಾ? ಬಶೀರ್ ಹೀಗೆ ಮಾತನಾಡಿದ್ದು ನನ್ನಲ್ಲಿ ಆಶ್ಚರ್ಯ ಹುಟ್ಟಿಸುತ್ತಿದೆ

    ಬೌದ್ಧ ಧರ್ಮಕ್ಕೆ ಬೇರೆ ಧರ್ಮಗಳನ್ನು ಹೋಲಿಸುವುದು ಕೂಡಾ ಸಾಧ್ಯವಿಲ್ಲ. ಅದರ ರೂಪ ಈಗ ಹೇಗೇ ಬದಲಾಗಿದ್ದರೂ, ಮೂಲಭೂತವಾಗಿ ವೈಜ್ಞಾನಿಕ ಮನೋಧರ್ಮವನ್ನು ಬೆಂಬಲಿಸಿದ ಮೊದಲ ಧರ್ಮ ಅದು. ಪ್ರತ್ಯೇಕ ಸ್ಥಾನವಿದೆ ಅದಕ್ಕೆ.

    ReplyDelete
  4. ನಮ್ಮ ಮನೆಗೆ 'ಕೆಂಚಮ್ಮ' ಎನ್ನುವವರು ಕೆಲಸಕ್ಕೆ ಬರುತ್ತಾರೆ. ಎರಡು ವರ್ಷಗಳಿಂದ. ಅವರನ್ನು ನಾನು ಮೊದಲು ನೋಡಿದಾಗ "ಹೇಗಿದ್ದೀರಾ ಚಿಕ್ಕಸ್ವಾಮಿಯವರೇ?" ಆಂದಿದ್ದರು. ನಾನು "ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಾ?" ಎಂದಿದ್ದೆ. ನಾನಿನ್ನೂ ಅವರನ್ನು ಬಹುವಚನದಲ್ಲೇ ಕರೆಯುತ್ತೇನೆ, ಈಗ ಅವರಿಗೂ ರೂಢಿಯಾಗಿದೆ. ನನಗೆ ಅವರನ್ನು ಬಹುವಚನದಲ್ಲಿ ಕರೆಯುವುದು ಯೋಚಿಸಿದ ಕ್ರಿಯೆಯಲ್ಲ. ಸ್ವಾಭಾವಿಕ ಕ್ರಿಯೆ. ನನಗೆ ಅವರೊಡನೆ ಯಾವ "ಶೋಷಿತ ವರ್ಗಗಳ ಕರುಳ ಸಂಬಂಧ"ವೂ ಇಲ್ಲ. "ಮನುಷ್ಯರು ಅನ್ನುವ ಕರುಳ ಸಂಬಧವಿದೆ". ಅವರ ಮಕ್ಕಳು ನನ್ನ ಬಳಿಯಿರುವ ಎಷ್ಟೋ ಪುಸ್ತಕಗಳನ್ನು ಓದಿದ್ದಾರೆ. ಅಪ್ಪ ಅವರ ಶಾಲೆಗ ಹೋಗಿ ಮಾತನಾಡಿಸಿ ಬರುತ್ತಾರೆ.

    ನಾನಾದರೆ ನಾಸ್ತಿಕ. ನನಗೆ ಜಾತಿ ಧರ್ಮ ಇಲ್ಲ, ಅದರ ಹೊರಗೆ ನಾನು ಬಂದಿದ್ದೇನೆ. ಆದರೆ ಬ್ರಾಹ್ಮಣ ಅಪ್ಪನಿಗೂ ಬ್ರಾಹ್ಮಣ್ಯಕ್ಕಿಂತ ಮನುಷ್ಯರು ಮುಖ್ಯ ಅನ್ನಿಸುವುದು ಪ್ರೀತಿಯಿಂದ.ಮನುಷ್ಯ ಪ್ರೀತಿ ಧರ್ಮಗಳನ್ನು, ಜಾತಿಯನ್ನು ಮೀರಿದ್ದು. ಅದನ್ನು ಬೆಳೆಸೋಣ.

    ReplyDelete
  5. "ಯಾವ್ನೋ ಒಬ್ಬ ಸನ್ಯಾಸಿ ಮತ್ಯಾರೋ ಒಬ್ಬ ಬಿಕ್ನಾಸಿಯ ತಲೆಯ ಮೇಲೆ ನಾಲ್ಕು ಹನಿ ನೀರು ಚೆಲ್ಲಿದ ಕೂಡಲೇ ಅವ್ನ ಹುಟ್ಟಿದ ಜಾತಿ ಕರಗಿ ಹೋಗ್ತದೆ ಅಂತ ನಂಬುವವರು, ತಲೆ ಮೇಲೆ ಜೋರು ಮಳೆ ಬಿದ್ದಾಗ ಕಟ್ಟಿಕೊಂಡ ಹೊಸ ಜಾತಿ ಕೂಡಾ ತೊಳೆದು ಹೋಗ್ತದೆ ಎಂಬುದನ್ನೂ ಕೂಡಾ ನಂಬಬೇಕಾಗುತ್ತದೆ"

    - ಚೆಡ್ಡಿ ಅನಂತಣ್ಣ, ಸ್ವಾತಂತ್ರ್ಯದ ಓಟ(ಬೊಳುವಾರು)

    ReplyDelete
  6. ಮನ ಮುಟ್ಟುವ ಮಾತುಗಳು, ಬಶೀರ್ ನಿಮಗೆ ಅಭಿನಂದನೆಗಳು.

    ReplyDelete