Friday, August 12, 2011

ಕನ್ನಡಿ ಮತ್ತು ಇತರ ಕತೆಗಳು....

ಕನ್ನಡಿ
ಆತ ಹೊಸದಾಗಿ ತಂದ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿ ಅಸಮಾಧಾನದಿಂದ ಗೊಣಗಿದ
‘‘ಇತ್ತೀಚೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಕನ್ನಡಿಯೇ ಸಿಗುತ್ತಿಲ್ಲ’’

ಕ್ಷಮೆ
‘‘ನೀನು ನಿನ್ನ ಶತ್ರುವನ್ನು ಶಿಕ್ಷಿಸಬೇಕೆಂದಿದ್ದೆಯಲ್ಲ. ಶಿಕ್ಷಿಸಿದೆಯ?’’
‘‘ಹೌದು, ಅವನನ್ನು ಅತ್ಯಂತ ಕಠೋರವಾಗಿ ಶಿಕ್ಷಿಸಿದೆ’’
‘‘ಹೇಗೆ?’’
‘‘ನಾನು ಅವನನ್ನು ಕ್ಷಮಿಸಿದೆ’’

ಹಳೆಯ ಪತ್ರ
ಆತ ತನ್ನಲ್ಲಿದ್ದ ಆ ಹಳೆಯ ಪತ್ರಗಳನ್ನೆಲ್ಲ ತಂದು ಅಂಗಳದಲ್ಲಿ ಸುರಿದ.
ಆ ರಾಶಿ ಪತ್ರಗಳಿಗೆ ಬೆಂಕಿ ಹಚ್ಚಿದ.
ಪತ್ರಗಳು ಉರಿಯುತ್ತಾ ಉರಿಯುತ್ತಾ ಅದರ ದಟ್ಟ ಹೊಗೆ ಆಕಾಶವನ್ನು ಸೇರಿ ಮೋಡವಾಯಿತು.
ಸಂಜೆಯ ಹೊತ್ತಿಗೆ ಅವನ ಹೃದಯವೇ ಬಿರಿದಂತೆ ಸಿಡಿಲು, ಮಿಂಚು. ತುಸು ಹೊತ್ತಲ್ಲೇ ಕಣ್ಣೀರಿನಂತೆ ಮಳೆ ಸುರಿಯತೊಡಗಿತು. ನದಿಯ ನೀರು ರಕ್ತದಂತೆ ಕೆಂಪಾಗಿ ಹರಿಯ ತೊಡಗಿತು. ಹರಿ ಹರಿದು ಕೊನೆಗೆ ಕಡಲಾಯಿತು.
ಆ ಕಡಲ ತೀರದಲ್ಲಿ ಅವನು ಒಬ್ಬಂಟಿಯಾಗಿ ಕುಳಿತಿದ್ದ.
ಕಡಲ ತೆರೆಗಳು ಭೋರ್ಗರೆಯುತ್ತ ಎದ್ದೆದ್ದು ಅವನ ಪಾದವನ್ನು ಮುಟ್ಟಿ ಮರಳುತ್ತಿತ್ತು.
ಆದರೆ ಅವನಂತೂ ಕ್ಷಮಿಸಲೇ ಇಲ್ಲ.

ನಿಧಿ
ಆತ ಬಾವಿಯೊಳಗೆ ಬಿದ್ದಿದ್ದ.
ಗಾಯಗೊಂಡು ಸಹಾಯಕ್ಕಾಗಿ ಕೂಗುತ್ತಿದ್ದ.
ಯಾರೂ ಬರಲಿಲ್ಲ.
ತುಸು ಹೊತ್ತಿನ ಬಳಿಕ ‘‘ಬಾವಿಯೊಳಗೆ ನಿಧಿಯಿದೆ. ಬಂಗಾರವಿದೆ...ಬನ್ನಿ ಬನ್ನಿ...’’ ಎಂದು ಕರೆಯ ತೊಡಗಿದ.
ಗಂಟೆಯೊಳಗೆ ಅಲ್ಲಿ ಜನ ಸೇರಿದರು.
ಒಬ್ಬರು ಹಗ್ಗ ಇಳಿಸಿದರು.
ಅವನು ಹತ್ತಿ ಮೇಲೇರಿದ.
ಎಲ್ಲರು ಕೇಳಿದರು ‘‘ನಿಧಿ ಎಲ್ಲಿದೆ?’’
‘‘ನನ್ನ ಜೀವವೆಂಬ ನಿಧಿಯೊಂದಿಗೆ ನಾನು ಮೇಲೆ ಬಂದಿದ್ದೇನೆ’’ ಆತ ಉದ್ಗರಿಸಿದ.

ಅರಿವು
ಮೊದಲ ಮಳೆ.
ಎದೆಗೆ ಅಪ್ಪಳಿಸುವ ಗುಡುಗು.
ಕಣ್ಣು ಕುರುಡಾಗಿಸುವ ಮಿಂಚು.
ಎಲ್ಲವನ್ನು ದಿಕ್ಕಾಪಾಲುಗೊಳಿಸುವ ಗಾಳಿ.
ಆಶ್ರಮದೊಳಗೆ ಉಪನ್ಯಾಸ ನಡೆಯುತ್ತಿತ್ತು.
ಸಂತ ತನ್ನ ಶಿಷ್ಯರಿಗೆ ಹೇಳುತ್ತಿದ್ದ
‘‘ಅರಿವು ಮೊದಲ ಮಳೆಯಂತಿರುತ್ತದೆ. ಒಂದು ಕ್ಷಣ ಎಲ್ಲವನ್ನು ಅಸ್ತವ್ಯಸ್ತಗೊಳಿಸಿ ಬಿಡುತ್ತದೆ. ಅರಿವು ಮೊದಲು ಕೆಡವಿ ಹಾಕುತ್ತದೆ. ಅದು ಕಟ್ಟುವುದಿಲ್ಲ. ಬದಲಿಗೆ ಹೊಸತನ್ನ ಕಟ್ಟುವುದಕ್ಕೆ ಸ್ಫೂರ್ತಿ ಕೊಡುತ್ತದೆ. ಇದ್ದುದನ್ನು ನಾಶ ಮಾಡುವ ಮೂಲಕ’’

ಬೋಳುಗುಡ್ಡ
ಸಂತ ಕೇಳಿದ ‘‘ಸ್ವಾಮಿ ಅನ್ನ ಕೊಡಿ’’
ಆತ ಉತ್ತರಿಸಿದ ‘‘ಇದು ಅನ್ನ ಛತ್ರ ಅಲ್ಲ’’
ಸಂತ ಕೇಳಿದ ‘‘ಒಂದು ಲೋಟ ನೀರಾದರೂ ಕೊಡಿ’’
ಆತ ಉತ್ತರಿಸಿದ ‘‘ಇಲ್ಲಿ ಸಾರ್ವಜನಿಕ ಬಾವಿಯಿಲ್ಲ’’
ಸಂತ ಕೇಳಿದ ‘‘ಹಳೆಯ ಬಟ್ಟೆಯಾದರೂ ಕೊಡಿ’’
ಆತ ಹೇಳಿದ ‘‘ಇದು ಜವಳಿ ಅಂಗಡಿಯಲ್ಲ’’
ಸಂತ ಕೇಳಿದ ‘‘ಎಣ್ಣೆಯಾದರೂ ಚೂರು ಕೊಡಿ’’
ಆತ ಹೇಳಿದ ‘‘ಇದು ಕಿರಾಣಿಯಂಗಡಿಯಲ್ಲ’’
ಸಂತ ಇದ್ದಕ್ಕಿದ್ದಂತೆಯೇ ಜೋಳಿಗೆಯನ್ನು ಪಕ್ಕಕ್ಕಿಟ್ಟು ಮನೆಯೊಳಗೆ ನುಗ್ಗಿ ‘ಮಲವಿಸರ್ಜನೆ’ ಮಾಡುವುದಕ್ಕೆ ಕುಳಿತ.
ಆತ ಚೀರಿದ ‘‘ಲೋ ಬಿಕಾರಿ ಇದೇನು ಮಾಡುತ್ತಿದ್ದೀಯ?’’
ಸಂತ ಕಣ್ಮುಚ್ಚಿ ಮಲ ವಿಸರ್ಜನೆಯ ಸುಖ ಅನುಭವಿಸುತ್ತಾ ಹೇಳಿದ
‘‘ನಿನ್ನ ಮನೆ ಪಾಳು ಬಿದ್ದ ಒಂದು ಬೋಳುಗುಡ್ಡ, ಇದು ಮಲ ವಿಸರ್ಜನೆಗೆ ಮಾತ್ರ ಯೋಗ್ಯ’’

ಲಾಭ
ಸಂತನಲ್ಲಿ ಶಿಷ್ಯ ಕೇಳಿದ ‘‘ಗುರುಗಳೇ, ದೇವರಿಗೆ ಕೈ ಮುಗಿಯುವುದರಿಂದ ನಮಗಾಗುವ ಅತಿ ದೊಡ್ಡ ಲಾಭ ಯಾವುದು?’’
ಸಂತ ಉತ್ತರಿಸಿದ ‘‘ಮನುಷ್ಯರಿಗೆ ಕೈ ಮುಗಿಯುವುದರಿಂದ ನಾವು ಪಾರಾಗಬಹುದು. ಇದೇ ಅತಿ ದೊಡ್ಡ ಲಾಭ’’

ತಾರೆ
ಆತನೊಬ್ಬ ಖ್ಯಾತ ಸಿನಿಮಾ ತಾರೆ.
ಅಭಿಮಾನಿ ಆತನ ಬಳಿ ಕೇಳಿದ ‘‘ನೀವೇಕೆ ಜನ ಸಾಮಾನ್ಯರ ಜೊತೆ ಬೆರೆಯುವುದಿಲ್ಲ?’’
ಸಿನಿಮಾ ತಾರೆ ವಿಷಾದದಿಂದ ನಕ್ಕ ‘‘ಆಕಾಶದಲ್ಲಿದ್ದರೆ ಮಾತ್ರ ಅವುಗಳನ್ನು ನಕ್ಷತ್ರಗಳೆಂದು ಜನ ಕರೆಯುತ್ತಾರೆ. ಭೂಮಿಗಿಳಿದರೆ ಮಿಣುಕುಹುಳವೆಂದು ತಿರಸ್ಕರಿಸುತ್ತಾರೆ’’

5 comments:

  1. ಮುತ್ತು ರತ್ನಗಳ ಗುಜರಿ ಅಂಗಡಿ. ವ್ಯಾಪಾರಕ್ಕಲ್ಲ, ಸಾಂತ್ವಾನಕ್ಕೆ.

    ReplyDelete
  2. ಮೊದಲು ಸ್ವಲ್ಪ ನಿರ್ಲಕ್ಷ್ಯ ಇತ್ತು , ಆದರೆ ಸಂಪೂರ್ಣ ಒಪ್ಪಿದ್ದೇನೆ. ಚೆನ್ನಾಗಿದೆ.ಅಲೌಕಿಕ ಭಾವವಿರುವ ಬರಹ !

    ಈಶ್ವರ ಕಿರಣ ಭಟ್.

    ReplyDelete