Saturday, August 24, 2013

ಮದ್ರಾಸ್ ಕೆಫೆ: ಒಂದು ರಾಜಕೀಯ ಹತ್ಯೆ ಮತ್ತು ಅದರ ಒಳಸುಳಿಗಳು....

ಸತ್ಯಘಟನೆಗಳನ್ನು ಸಂಗ್ರಹಿಸಿ, ಅದನ್ನು ಸಿನಿಮಾ ಮಾಡುವಾಗ ‘ಸಾಕ್ಷ ಚಿತ್ರ’ವೂ ಅಗದೆ, ಸಿನಿಮಾವೂ ಆಗದೆ ಇರುವ ಅಪಾಯವಿದೆ. ಕನ್ನಡದಲ್ಲಿ ರಾಜೀವ್‌ಗಾಂಧಿ ಹಂತಕರನ್ನು ಬಂಧಿಸುವ ಕತೆಯೊಂದು ‘ಸೈನೈಡ್’ ಹೆಸರಲ್ಲಿ ತೆರೆಗಿಳಿದಿತ್ತು. ನಿರ್ದೇಶಕನ ಪ್ರಯತ್ನ ಉತ್ತಮವಾಗಿಯೇ ಇತ್ತಾದರೂ, ಸೈನೈಡ್ ಪೂರ್ಣವಾಗಿ ಒಂದು ಚಿತ್ರವಾಗಿ ಮನಸ್ಸನ್ನು ಆವರಿಸುವಲ್ಲಿ ಸಫಲವಾಗಲಿಲ್ಲ. ಎಲುಬುಗಳನ್ನು ಜೋಡಿಸುವಲ್ಲಿ ನಿರ್ದೇಶಕ ಯಶಸ್ವಿಯಾದರೂ, ಅದಕ್ಕೆ ಮಾಂಸವನ್ನು ತುಂಬಿ, ಸಿನಿಮಾವೆಂಬ ಆತ್ಮವನ್ನು ಆವಾಹಿಸುವಲ್ಲಿ ವಿಫಲರಾಗುತ್ತಾರೆ. ಈ ಕಾರಣದಿಂದಲೇ ರಾಜೀವ್‌ಗಾಂಧಿಯ ಹತ್ಯೆಯ ದುರಂತವನ್ನು ಆಧರಿಸಿ ಪ್ರತಿಭಾವಂತ ನಿರ್ದೇಶಕ ಶೂಜಿತ್ ಸರಕಾರ್ ‘ಮದ್ರಾಸ್ ಕೆಫೆ’ ಮಾಡಲು ಹೊರಟಾಗ, ಇದು ಎಷ್ಟರ ಮಟ್ಟಿಗೆ ಸಿನಿಮಾ ಆಗಬಹುದು ಎನ್ನುವ ಅನುಮಾನ ಎಲ್ಲರನ್ನೂ ಕಾಡಿತ್ತು. ಆದರೆ ಎಲ್ಲ, ಅನುಮಾನ, ಆತಂಕಗಳನ್ನು ಒದ್ದು, ಒಂದು ಪರಿಪೂರ್ಣ ಸಿನಿಮಾವಾಗಿ ‘ಮದ್ರಾಸ್ ಕೆಫೆ’ ಮೂಡಿ ಬಂದಿದೆ. ಚಿತ್ರದ ಆರಂಭದಿಂದ ಕೊನೆಯವರೆಗೂ ಕುತೂಹಲವನ್ನು ಕಾಯ್ದುಕೊಂಡೇ, ರಾಜೀವ್‌ಗಾಂಧಿಯ ಹತ್ಯೆಯ ಹಿನ್ನೆಲೆಯಲ್ಲಿರುವ ರಾಜಕೀಯಗಳ ಸಿಕ್ಕುಗಳನ್ನು ಬಿಡಿಸಲು ಪ್ರಯತ್ನಿಸುತ್ತದೆ ಈ ಚಿತ್ರ. ಒಂದು ಅಪರೂಪದ ಥ್ರಿಲ್ಲರ್ ಚಿತ್ರವನ್ನು ನೋಡಿದ ಅನುಭವ ನಮ್ಮದಾಗುತ್ತದೆ.

ಚಿತ್ರದ ನಾಯಕ ಜಾನ್‌ಅಬ್ರಾಹಾಂ ಆಗಿರುವುದರಿಂದ ಚಿತ್ರದ ಕುರಿತಂತೆ ಕೆಲವು ಪೂರ್ವಾಗ್ರಹಗಳನ್ನು ಇಟ್ಟುಕೊಂಡೇ ನಾವು ಚಿತ್ರಮಂದಿರ ಪ್ರವೇಶಿಸಿರುತ್ತೇವೆ. ಅವನು ರಾ ಏಜೆಂಟ್ ಅಂದ ಮೇಲೆ, ಒಂಟಿ ನಾಯಕನ ಸಾಹಸಗಳನ್ನು ಅವನ ಅಭಿಮಾನಿಗಳು ನಿರೀಕ್ಷಿಸಿದರೆ ಅವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಇಲ್ಲಿ ಜಾನ್ ಅಬ್ರಹಾಂ ಮೇಜರ್ ವಿಕ್ರಮ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ. ಶಾಂತಿಸೇನೆಯ ವೈಫಲ್ಯದ ಹಿನ್ನೆಲೆಯಲ್ಲಿ ಸಿಂಗ್‌ನ ಪ್ರವೇಶವಾಗುತ್ತದೆ. ಈ ಚಿತ್ರದಲ್ಲಿ ಭಾರತ ಸರಕಾರ ತಮಿಳರ ಹೋರಾಟ ಮತ್ತು ಎಲ್‌ಟಿಎಫ್(ಚಿತ್ರದಲ್ಲಿ ಎಲ್ಲ ಹೆಸರುಗಳನ್ನು ಅಲ್ಪಸ್ವಲ್ಪ ಬದಲಿಸಲಾಗಿದೆ)ನ ನಾಯಕ ಅಣ್ಣಾ ಭಾಸ್ಕರನ್(ಪ್ರಭಾಕರನ್ ಪಾತ್ರ)ನನ್ನು ಬೇರೆ ಬೇರೆಯಾಗಿ ಇಟ್ಟು ತನ್ನ ಯುದ್ಧ ತಂತ್ರವನ್ನು ಹೆಣೆಯುತ್ತದೆ. ಆದುದರಿಂದ ಅಣ್ಣಾನ ಬದಲಿಗೆ ತಮಿಳು ಹೋರಾಟಕ್ಕೆ ಪರ್ಯಾಯ ನಾಯಕನನ್ನು ಒದಗಿಸುವುದು ಶಾಂತಿಯ ಪಡೆಯ ಚಟುವಟಿಕೆ ಯಶಸ್ವಿಯಾಗಲು ಅನಿವಾರ್ಯ ಎಂದು ಅಭಿಪ್ರಾಯ ಪಡುತ್ತದೆ.. ಅಣ್ಣಾ ಭಾಸ್ಕರನ್ ಎಲ್ಲಿಯವರೆಗೆ ಇರುತ್ತಾನೆಯೋ ಅಲ್ಲಿಯವರೆಗೆ ಶ್ರೀಲಂಕಾದಲ್ಲಿ ತಮಿಳರು ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ಯಾಕೆಂದರೆ, ಅಣ್ಣಾನಿಗೆ ಇಡೀ ಜಾಫ್ನಾದ ಸೂತ್ರ ತನ್ನ ಕೈಯಲ್ಲಿರಬೇಕಾಗಿದೆ. ಆದುದರಿಂದ ಅಣ್ಣಾನನ್ನು ಬಂಧಿಸುವ ಪ್ರಕ್ರಿಯೆಗಾಗಿ ಮೇಜರ್ ವಿಕ್ರಮ್ ಸಿಂಗ್‌ನನ್ನು ರಾ ಏಜೆಂಟ್ ಆಗಿ ಜಾಫ್ನಾಕ್ಕೆ ಕಳುಹಿಸಲಾಗುತ್ತದೆ.

 ರಾ ಏಜೆಂಟ್ ಸಾಹಸಗಳ ಕುರಿತಂತೆ ಬಾಲಿವುಡ್‌ನಲ್ಲಿ ಹಲವು ಚಿತ್ರಗಳು ಬಂದಿವೆ. ಏಕ್ ಥಾ ಟೈಗರ್‌ನಲ್ಲಿ ಸಲ್ಮಾನ್‌ನ ಹೊಡಿ ಬಡಿ ನೋಡಿದವರಿಗೆ ಜಾನ್ ಅಬ್ರಹಾಂ ಪಾತ್ರ ನಿರಾಸೆ ತರುವ ಸಾಧ್ಯತೆಯಿದೆ. ನಿರ್ದೇಶಕರು ಇಡೀ ಚಿತ್ರವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆಂದರೆ, ಅತ್ಯಂತ ವಾಸ್ತವಿಕವಾಗಿ ಪ್ರತಿ ಫ್ರೇಮ್‌ನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಇಲ್ಲಿ ರಾ ಏಜೆಂಟ್‌ನ ಕೆಲಸ ತಂತ್ರಗಾರಿಕೆ ಮಾತ್ರ. ಅಣ್ಣಾನಿಗೆ ವಿರೋಧಿಗಳಾಗಿರುವ ಗುಂಪಿನೊಂದಿಗೆ ಮಾತುಕತೆ ನಡೆಸಿ, ಅಣ್ಣಾನ ವಿರುದ್ಧ ನಿಲ್ಲಿಸುವುದು. ಅಣ್ಣಾನನ್ನು ಬಂಧಿಸುವ ಅಥವಾ ಕೊಲ್ಲುವ ಶಾಂತಿ ಪಡೆಯ ದಾರಿಯನ್ನು ಸುಗಮ ಮಾಡಿಕೊಡುವುದು. ಆದರೆ ವಿಕ್ರಮ್ ಸಿಂಗ್ ಆರಂಭದಲ್ಲೇ ಇದರಲ್ಲಿ ಸೋಲನುಭವಿಸಬೇಕಾಗುತ್ತದೆ. ಶಾಂತಿ ಪಡೆಯ ಸೋಲಿನ ಹಿಂದಿರುವ ತನ್ನವರ ದ್ರೋಹ, ಅದಕ್ಕೆ ಬಲಿಯಾಗುವ ಅಮಾಯಕ ಸೈನಿಕರು, ಹೊಸದಿಲ್ಲಿಯ ರಾಜಕೀಯ ಇವೆಲ್ಲವನ್ನು ಸಿನಿಮಾದೊಳಗೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ವಿಕ್ರಮ್ ಸಿಂಗ್ ಈ ಒಳಸುಳಿಗಳ ನಡುವೆಯೇ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾ, ಅಣ್ಣಾನ ಕೇಂದ್ರ ಸ್ಥಳವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ. ಶಾಂತಿ ಸೇನೆ ದಾಳಿ ನಡೆಸುತ್ತದೆ. ಆದರೆ ಅಣ್ಣಾ ಕೂದಲೆಳೆಯ ಅಂತರದಿಂದ ಜೀವವನ್ನು ಉಳಿಸಿಕೊಳ್ಳುತ್ತಾನೆ. ಇದೇ ಸಂದರ್ಭದಲ್ಲಿ ಭಾರತ ಸರಕಾರ ಶಾಂತಿಪಡೆಯನ್ನು ಹಿಂದೆಗೆದುಕೊಳ್ಳುವ ನಿರ್ಧಾರ ಮಾಡುತ್ತ.ದೆ. ಸರಕಾರ ವಿಸರ್ಜನೆಯಾಗಿ ಹೊಸ ಚುನಾವಣೆ ಘೋಷಣೆಯಾಗುತ್ತದೆ. ಲಂಕಾದಲ್ಲಿ ತಮಿಳರ ಕ್ಷೇಮ ತನ್ನ ಗುರಿ ಎಂದು ಮಾಜಿ ಪ್ರಧಾನಿ ಘೋಷಿಸುತ್ತಾರೆ. ಮುಂದೆ ಚುನಾವಣೆಯಲ್ಲಿ ಈ ಪ್ರಧಾನಿ ಗೆದ್ದು ಬಂದರೆ ತನ್ನ ನಾಶ ಸ್ಪಷ್ಟ ಎಂದು ಅರಿತುಕೊಂಡ ಅಣ್ಣಾ ರಾಜೀವ್‌ಗಾಂಧಿ ಕೊಲೆಯ ಸಂಚನ್ನು ಹೂಡುತ್ತಾನೆ. ಉತ್ತರಾರ್ಧದಲ್ಲಿ ರಾ ಈ ಸಂಚನ್ನು ಭೇದಿಸಿ, ರಾಜೀವ್‌ಗಾಂಧಿಯನ್ನು ರಕ್ಷಿಸಲು ಯತ್ನಿಸುವುದು. ಆದರೆ ರಾಜಕೀಯ ಒಳಸುಳಿಗಳಿಂದಾಗಿ ಅದರಲ್ಲಿ ವಿಫಲವಾಗುವುದು ಒಟ್ಟುಕತೆ.

ಜಾನ್ ಅಬ್ರಹಾಂ ಇಡೀ ಚಿತ್ರದಲ್ಲಿ ತನ್ನ ಪಾತ್ರದ ಗಾಂಭೀರ್ಯವನ್ನು ಕಾಪಾಡಿಕೊಂಡಿದ್ದಾರೆ. ಅವರ ವೌನವೇ ಅವರ ಮಾತಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಬಿಗಿಯಾದ ಚಿತ್ರಕತೆ ಚಿತ್ರದ ಹೆಗ್ಗಳಿಕೆ. ಸಂಗೀತ ಚಿತ್ರದ ನಡೆಗೆ ಪೂರಕವಾಗಿದೆ. ರಾ ಅಧಿಕಾರಿ ಪಾತ್ರಕ್ಕೆ ಸಿದ್ಧಾರ್ಥ ಬಸು ನ್ಯಾಯ ನೀಡಿದ್ದಾರೆ. ಪತ್ರಕರ್ತೆಯ ಪಾತ್ರದಲ್ಲಿ ನರ್ಗೀಸ್ ಫಖ್ರಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರದಲ್ಲಿ ಯಾರೂ ನಾಯಕರಲ್ಲ. ಎಲ್ಲರೂ ನಾಯಕರೇ. ಅಣ್ಣಾ ಪಾತ್ರದಲ್ಲಿ ಸಣ್ಣದಾಗಿ ಕಾಣಿಸಿಕೊಂಡಿರುವ ಅಜಯ್ ರತ್ನಂ ಕೂಡ ಯಾವುದೇ ಮೆಲೋಡ್ರಾಮಗಳಿಲ್ಲದೆ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ನಿರೂಪಣೆ, ನಟನೆ, ಸಂಭಾಷಣೆ ವಾಸ್ತವಕ್ಕೆ ಹತ್ತಿರವಾಗಿದೆ. ರಾಜೀವ್‌ಗಾಂಧಿಯ ಪಾತ್ರವನ್ನು ಎಲ್ಲೂ ರಾಜಕೀಯ ವೈಭವೀಕರಣಕ್ಕೆ ಅಥವಾ ಪೂರ್ವಾಗ್ರಹಕ್ಕೆ ಈಡಾಗದೆ ಕಟ್ಟಿಕೊಟ್ಟಿರುವುದು ನಿರ್ದೇಶಕನ ಪಕ್ವತೆಯನ್ನು ತೋರಿಸುತ್ತದೆ. ಆದುದರಿಂದಲೇ ಇಡೀ ಚಿತ್ರ ಇಷ್ಟವಾಗುತ್ತದೆ. ಕೆಲವೊಮ್ಮೆ ಚಿತ್ರದ ನಿಲುವು ನಮಗೆ ಒಪ್ಪಿಗೆಯಾಗದೇ ಇರಬಹುದು. ಆದರೆ ಒಂದು ಥ್ರಿಲ್ಲರ್ ರಾಜಕೀಯ ಚಿತ್ರವನ್ನು ನೋಡಲು ಹೋದ ನಿಮಗೆ ಸಿನಿಮಾವಾಗಿ ‘ಮದ್ರಾಸ್‌ಕೆಫೆ’ ಮೋಸ ಮಾಡುವುದಿಲ್ಲ.

ದಿನಕ್ಕೊಂದು ಪುಸ್ತಕ-ಮೌನದ ಕೌದಿಯಲ್ಲಿ ಸುತ್ತಿಟ್ಟ ಸಾಲುಗಳು: ದೀಪದ ಗಿಡ


ಬಸವರಾಜ ಸೂಳಿಭಾವಿ ಕನ್ನಡ ಲೋಕಕ್ಕೆ ಹಲವು ಕಾರಣಗಳಿಗಾಗಿ ಚಿರಪರಿಚಿತರು. ಹೋರಾಟಚಳವಳಿಯಲ್ಲಿ ಒಮ್ಮೆ ಸಕ್ರಿಯರಾಗಿದ್ದ ಬಸು ಅವರು ಇದೀಗ ಪುಸ್ತಕಕಗಳ ಹಣತೆಗಳ ಮೂಲಕ ಕನ್ನಡದ ಕತ್ತಲನ್ನು ಗುಡಿಸುತ್ತಿರುವವರು. ಇವರ ಇನ್ನೊಂದು ಶಕ್ತಿ ಕಾವ್ಯ. ಅಥವಾ ಇವರ ನಿಜವಾದ ಶಕ್ತಿಯೇ ಕಾವ್ಯವೇನೋ? ‘ದೀಪದ ಗಿಡ’ ಓದುತ್ತಾ ಹೋದ ಹಾಗೆ, ಅದು ನಮ್ಮಾಳಗೆ ಬೆಳಕಾಗಿ ಹರಡಿಕೊಳ್ಳುವ ಪರಿಗೆ, ನಮ್ಮ ಕಣ್ಣ ಹಣತೆಯ ಕುಡಿ ತುಳುಕದೇ ಇರುವುದಿಲ್ಲ. ಅಲ್ಲಮನ ಅನುಭಾವ, ಬುದ್ಧನ ಕೆನ್ನೆಯ ಬಿಸುಪು, ಬಾಗಿದ ತೆನೆಯ ಕಂಪು, ಕುದಿವ ಅನ್ನದ ಪರಿಮಳ ಈ ಕಾವ್ಯದ ಮುಖ್ಯ ಗುಣಗಳು. ಒಂದು ಕಾಲದಲ್ಲಿ ಜನಸಂಘಟನೆಯಲ್ಲಿ ಸಕ್ರಿಯರಾಗಿದ್ದ ಬಸು ಅವರು ತನ್ನ ವೌನದ ಕೌದಿಯಲ್ಲಿ ಸುತ್ತಿಟ್ಟ ಸಾಲುಗಳು ಇವು. ಘಜಲ್‌ನ ಗುಣವುಳ್ಳ ಇಲ್ಲಿರುವ ಸಾಲುಗಳು ಉರಿದು ಮುಗಿದು ಹೋಗುವಂತಹದಲ್ಲ. ನಮ್ಮಿಳಗೆ ಬೆಳಕಿನ ಗಿಡವಾಗಿ ಸಹಸ್ರ ದೀಪಗಳನ್ನು ಹಚ್ಚುತ್ತವೆ. ವೌನ, ವಿಷಾದ, ಸಾವು, ನೆನಪು, ಬದುಕು ಇವೇ ಇಲ್ಲಿರುವ ಕವಿತೆಗಳ ಪ್ರಧಾನ ವಸ್ತುಗಳು.
‘‘ಎಷ್ಟು ಸಲ ತೊಳೆದರೂ ಕನ್ನಡಿಯನ್ನ
ಮುಖದ ಮೇಲಿನ ಕಲೆ ಹಾಗೇ ಉಳಿಯಿತು’’ ಇಂತಹ ಆತ್ಮವಿಮರ್ಶೆಯ ಸಾಲು ಅಲ್ಲಲ್ಲಿ ನಮ್ಮನ್ನು ಥಕ್ಕೆಂದು ಆವರಿಸಿಕೊಳ್ಳುತ್ತದೆ.
‘‘ಹೆಣಗಳಿಗೆ ಮಾತಿಲ್ಲ ಅಂದವರ್ಯಾರು?
ದಾರಿಯಲ್ಲಿ ಎದುರಾದ ಹೆಣಗಳೆಲ್ಲ ಬದುಕ ಎಚ್ಚರಿಸುತ್ತಾ ನಡೆದಿದ್ದವು’’ ಅಧ್ಯಾತದ್ಮ ಹೊಳಹುಗಳು ಹೊಳೆಯಿಸುವ ಇಂತಹ ಸಾಲುಗಳೂ ಇಲ್ಲಿ ಸಾಕಷ್ಟಿವೆ. ಬದುಕನ್ನು ತೀವ್ರವಾಗಿ ಪ್ರೀತಿಸುವ, ಹಚ್ಚಿಕೊಂಡಿರುವ ಕವಿಯಿಂದಷ್ಟೇ ಇಂತಹದೊಂದು ದೀಪದ ಗಿಡವನ್ನು ನೆಡಲು ಸಾಧ್ಯ. ಕನ್ನಡದ ಕಾವ್ಯಪ್ರಕಾರಕ್ಕೆ ಹೊಸ ಚೈತನ್ಯವನ್ನು, ಹೊಸ ಹೊಳಪನ್ನು ಈ ಸಾಲುಗಳು ನೀಡಿವೆ. ಕವಿತೆಗಳನ್ನು ಜನರ ಎದೆಯ ಬಳಿಗೆ ಕೊಂಡೊಯ್ಯುವ ಕವಿಯ ಪ್ರಯತ್ನ, ಮುಂದೆ ಹೊಸ ಪರಂಪರೆಯಾಗಿ ಮುಂದುವರಿಯುವ ಸಾಧ್ಯತೆಯಿದೆ.
 ಕವಿ ಪ್ರಕಾಶನ ಹೊನ್ನಾವರ(ದೂರವಾಣಿ: 9480211320) ಇವರು ಕೃತಿಯನ್ನು ಹೊರ ತಂದಿದ್ದಾರೆ. ಕೃತಿಯ ಮುಖಬೆಲೆ 150 ರೂ.

Thursday, August 22, 2013

ದಿನಕ್ಕೊಂದು ಪುಸ್ತಕ: ತಾಜೂಮಾರ ತಾಜಾ ಕವಿತೆಗಳು

ರಂಗಕರ್ಮಿಯಾಗಿರುವ ತಾಜೂಮಾ ಎಂಬ ಮುಸ್ಲಿಮ್ ತರುಣಿ ಕಾವ್ಯಲೋಕಕ್ಕೆ ಕಾಲಿಟ್ಟಿದ್ದಾರೆ. ‘ತಾಜೂಮಾ’ ಎಂಬ ತಲೆಬರಹದೊಂದಿಗೇ ಹೊರ ಬಂದಿರುವ ಈ ಸಂಕಲನವನ್ನು ಲಂಕೇಶ್ ಪ್ರಕಾಶನ ಮುದ್ರಿಸಿದೆ. ‘ಶಬ್ದ ನನ್ನೊಳಗೆ ಹೂವ ಹಾಳೆ...ತೆರೆದಷ್ಟೇ ಕೋಣೆ ಬೆಳಕು’ ಎಂಬಂತಹ ಥಕ್ಕೆನಿಸುವ ಸಾಲುಗಳಿಂದ ಭರವಸೆ ಹುಟ್ಟಿಸುವ ತಾಜೂಮಾ, ಕಾವ್ಯ ಲೋಕಕ್ಕೆ ತಾಜಾತನವನ್ನು ಕೊಟ್ಟಿದ್ದಾರೆ.

ಹಲವು ಕವಿತೆಗಳು ಬಹಿರಂಗ ರಾಜಕೀಯವನ್ನು ತೆರೆದಿಟ್ಟರೆ, ಕೆಲವು ಕವಿತೆಗಳು ಕವಿಯ ಒಳಗಿನ ಸೆಲೆಯಾಗಿ ಹುಟ್ಟಿದಂತವುಗಳು. ‘ಕಬ್ಬಿಣದ ತೊಟ್ಟಿಲು ಕಂದನ ತೊರೆದು ಆಕಾಶಕ್ಕೆ ಹಾರುತ್ತಿದೆ...’ ಎನ್ನುವ ಭಾವಗಳು ಅಲ್ಲಲ್ಲಿ ಅವರ ನಿಜ ಕವಯತ್ರಿಯನ್ನು ತೆರೆದಿಡುತ್ತದೆ. ರಂಗಭೂಮಿಯ ಮಾತುಗಳೇ ಕೆಲವೆಡೆ ಕವಿತೆಗಳಾಗಿ, ವಾಚ್ಯಗಳೆನಿಸಿ ಕಿರಿಕಿರಿಯಾಗುವುದೂ ಇದೆ. ಆದರೆ, ಅಂತಹ ಉದಾಹರಣೆಗಳು ಬೆರಳೆಣಿಕೆಯಷ್ಟು ಮಾತ್ರ. ಹಾಗೆ ನೋಡಿದರೆ, ತಾಜೂಮಾ ಅವರ ಮೊದಲ ಪ್ರಯತ್ನಗಳು ಇವೆಲ್ಲ. ಕವಿತೆಗಳು ಹುಟ್ಟುವ ಏಕಾಂತಗಳನ್ನು ತನ್ನದಾಗಿಸುವ ತಾಜೂಮಾ ತಪಸ್ಸು ಮುಂದುವರಿಯಬೇಕಾಗಿದೆ. ಇನ್ನಷ್ಟು ಉತ್ತಮ ಕವಿತೆಗಳನ್ನು ಈ ಕವಯತ್ರಿಯಿಂದ ನಿರೀಕ್ಷಿಸಬಹುದಾಗಿದೆ.


ಅಂದಹಾಗೆ ಇಡೀ ಸಂಕಲನವನ್ನು ಅತ್ಯಾಕರ್ಷಕವಾಗಿ ರೂಪಿಸಲಾಗಿದೆ. ಪತ್ನಿಯ ಕವಿತೆಗಳಿಗೆ ರಂಗಕರ್ಮಿ, ಕಲಾವಿದ ಇಕ್ಬಾಲ್ ರೇಖಾಚಿತ್ರಗಳ ಮೂಲಕ ಜುಗಲ್‌ಬಂದಿ ನಡೆಸಿದ್ದಾರೆ. ಕೃತಿಯ ಮುಖಬೆಲೆ 75 ರೂ.

ಶಿಪ್ ಆಫ್ ಥೀಸಿಯಸ್: ಬಿಡಿ ಭಾಗಗಳನ್ನು ಕಳಚಿಟ್ಟ ಮನುಷ್ಯ ಮತ್ತು ಬದುಕು...!

 ಭಾರತೀಯ ಚಿತ್ರ ಪರಂಪರೆಯಲ್ಲಿ ಕಲಾತ್ಮಕ ಚಳವಳಿಯ ಬೇರುಗಳನ್ನು ತಡಕಾಡಿದರೆ ಅಲ್ಲಿ ಕೈಗೆ ತೊಡರುವುದು ಕನ್ನಡ ಮತ್ತು ಬಂಗಾಳಿ ಮೊದಲಾದ ಪ್ರಾದೇಶಿಕ ಭಾಷೆಗಳು. ಬಾಲಿವುಡ್ ಮಂದಿ ಸಿನಿಮಾವನ್ನು ಒಂದು ಉದ್ಯಮವಾಗಿ ಭಾವಿಸಿ ಚಿತ್ರಗಳನ್ನು ಮಾಡುತ್ತಿದ್ದಾಗ, ಕನ್ನಡ, ಬಂಗಾಳಿ, ಮಲಯಾಳಂನಂತಹ ಪ್ರಾದೇಶಿಕ ಭಾಷೆಗಳು ಸಿನಿಮಾವನ್ನು ಕಲೆಯಾಗಿ ಸ್ವೀಕರಿಸಿ, ಹಲವು ಪ್ರಯೋಗಗಳನ್ನು ಮಾಡಿದವು. ಕಲಾತ್ಮಕ ಮತ್ತು ವಾಣಿಜ್ಯ ಎಂದು ಗೆರೆ ಎಳೆದಂತೆ ಸಿನಿಮಾ ಸೀಳಾದಾಗ, ಅದರ ನಡುವೆ ಒಂದು ಸೇತುವೆಯನ್ನು ನಿರ್ಮಿಸಿ ಚಿತ್ರವನ್ನು ಮಾಡುವ ನಿರ್ದೇಶಕರ ತಂಡ ಹುಟ್ಟಿಕೊಂಡಿತು. ಬಾಲಿವುಡ್‌ನಲ್ಲಿ ಅರ್ಧ ಸತ್ಯ, ಅಂಕುರ್, ಉತ್ಸವ್, ಮಂಡಿ ಹೀಗೆ ಕಲಾತ್ಮಕತೆಯ ಜೊತೆಗೇ ಸಿನಿಮಾವನ್ನು ಜನರೆಡೆಗೆ ಕೊಂಡೊಯ್ಯುವ ಪ್ರಯತ್ನ ನಡೆಯಿತು. ಮಲಯಾಳಂ ಚಿತ್ರಗಳೂ ಇದರಲ್ಲಿ ಯಶಸ್ವಿಯಾದವು. ಆದರೆ ಕರ್ನಾಟಕದಲ್ಲಿ ದುರದೃಷ್ಟವಶಾತ್, ಇನ್ನೂ ಆ ಪ್ರಯತ್ನ ನಡೆದಿಲ್ಲ. ಈ ಕಾರಣದಿಂದಲೇ, ಕನ್ನಡದ ಚಿತ್ರೋದ್ಯಮ ನಿಂತ ನೀರಾಗಿ ಕೊಳೆಯುತ್ತಿದೆ.
ಇದೇ ಸಂದರ್ಭದಲ್ಲಿ ಬಾಲಿವುಡ್‌ನ ಕೆಲವು ಪ್ರತಿಭಾವಂತ ತರುಣರು ಇಂದು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಮತ್ತು ಅವುಗಳಿಗಾಗಿಯೇ ಚಿತ್ರಗಳನ್ನು ಮಾಡುವಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಮಲ್ಟಿಪ್ಲೆಕ್ಸ್‌ನ ಬುದ್ದಿಜೀವಿ ಜನರನ್ನು ಗುರಿಯಾಗಿರಿಸಿಕೊಂಡು ಗಂಭೀರ ಚಿತ್ರಗಳು ಒಂದರನಂತರ ಒಂದರಂತೆ ಬರತೊಡಗಿವೆ. ಅವುಗಳಲ್ಲಿ ಮುಖ್ಯವಾದದ್ದು ಮತ್ತು ಇತ್ತೀಚೆಗೆ ಭಾರೀ ಸುದ್ದಿಯಲ್ಲಿರುವುದು ಆನಂದ್ ಗಾಂಧಿ ಎನ್ನುವ 30ರ ತರುಣ ನಿರ್ದೇಶಕನ ‘ಶಿಪ್ ಆಫ್ ಥೀಸಿಯಸ್. ‘ಭಾರತದ ಚಿತ್ರಗಳೂ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳ ಚಿತ್ರಗಳ ಮಟ್ಟಿಗೆ ಬೆಳೆದಿದೆ ಎನ್ನುವುದನ್ನು ಶಿಪ್ ಆಫ್ ಥೀಸಿಯಸ್’ ತೋರಿಸಿಕೊಂಡಿದೆ ಎಂದು ವಿದೇಶಿ ಚಿತ್ರ ವಿಮರ್ಶಕರು ಈ ಚಿತ್ರವನ್ನು ವೀಕ್ಷಿಸಿ ತಮ್ಮ ಷರಾವನ್ನು ಬರೆದಿದ್ದಾರೆ. ಜೊತೆಗೆ ಬಾಲಿವುಡ್‌ನ ಹಿರಿಯ, ಖ್ಯಾತ ನಿದೇರ್ಶಕರೂ ಆನಂದ್ ಗಾಂಧಿಯ ಪ್ರಯತ್ನವನ್ನು ಅಭಿನಂದಿಸಿದ್ದಾರೆ. ಭಾರತೀಯ ಚಿತ್ರಪಂಡಿತರ ಹೊಗಳಿಕೆಯ ಸುರಿಮಳೆಯೇ ಈ ಚಿತ್ರದ ಮೇಲೆ ಸುರಿದಿದೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಈ ಚಿತ್ರ ತನ್ನದಾಗಿಸಿಕೊಂಡಿದೆ.


  ‘ಶಿಪ್ ಆಫ್ ಥೀಸಿಯಸ್’ ಮೂಲಭೂತವಾಗಿ ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಶಬ್ದ. ಒಂದು ವಸ್ತುವಿನ ಎಲ್ಲ ಭಾಗಗಳನ್ನು ಬಿಡಿಬಿಡಿಯಾಗಿ ಸ್ಥಳಾಂತರಿಸಿ, ಪುನರ್ನಿಮಿಸಿದರೆ ಅದು ಮೂಲ ವಸ್ತುವಾಗಿ ಉಳಿಯುತ್ತದೆಯೆ? ಎಂಬ ವಿರೋಧಾಭಾಸದ ಕುರಿತು ಉತ್ತರವನ್ನು ಹುಡುಕುವ ಪ್ರಯತ್ನವೇ ‘ಶಿಪ್ ಅಫ್ ಥೀಸಿಯಸ್’. ಹೆರಾಕ್ಲಿಟಸ್, ಸಾಕ್ರಟೀಸ್, ಪ್ಲೇಟೋರಂತಹ ಚಿಂತಕರನ್ನು ತಲೆಕೆಡಿಸಿದ ಪ್ರಶ್ನೆಯಿದು. ಥೀಸಿಯಸ್ ಎಂಬ ಹಡಗಿನ ಬಿಡಿ ಭಾಗಗಳನ್ನು ತೆಗೆದು ಹೊಸ ಹಡಗನ್ನು ನಿರ್ಮಿಸಲಾಯಿತು. ಈಗ ಹಡಗು ಮೂಲ ಹಡಗಾಗಿ ಉಳಿದಿದೆಯೆ? ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪ್ಲುಟಾರ್ಕ್, ಥಾಮಸ್ ಹೋಬ್ಸ್ ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡುತ್ತಾರೆ. ಆನಂದ್ ಗಾಂಧಿ ಆ ಸಿದ್ಧಾಂತವನ್ನು ಕೇಂದ್ರವಾಗಿಸಿಕೊಂಡು, ಮನುಷ್ಯನ ಕುರಿತಂತೆ ಈ ಚಿತ್ರದಲ್ಲಿ ಚರ್ಚಿಸುತ್ತಾರೆ.

ಕಿರುಚಿತ್ರಗಳ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಆನಂದ್ ಗಾಂಧಿಯ ಈ ಚಿತ್ರವೂ, ಮೂರು ಕಿರುಚಿತ್ರಗಳ ಸಂಗಮ. ಆದರೆ ಕ್ಲೈಮಾಕ್ಸ್‌ನಲ್ಲಿ ಈ ಮೂರು ಚಿತ್ರಗಳ ಮುಖ್ಯಪಾತ್ರಗಳನ್ನು ಜೊತೆ ಸೇರಿಸುವ ಪ್ರಯತ್ನವನ್ನು ಮಾಡುತ್ತಾರೆ. ಚಿತ್ರದಲ್ಲಿ ಮೂರು ವಿಭಿನ್ನ ಪಾತ್ರಗಳಿವೆ. ಒಬ್ಬ ಕುರುಡಿ ಛಾಯಾಚಿತ್ರಗ್ರಾಹಕಿ, ಇನ್ನೊಬ್ಬ ಜೈನ ಸನ್ಯಾಸಿ ಮತ್ತು ಮಗದೊಬ್ಬ ಷೇರು ಉದ್ಯಮಿ. ಈ ಮೂರು ಪಾತ್ರಗಳಿಗೆ ತಮ್ಮ ತಮ್ಮ ಐಡೆಂಟಿಟಿಗಳು ಸವಾಲಾಗುವುದು ಮತ್ತು ಆ ಸವಾಲನ್ನು ಮುಖಾಮುಖಿಯಾಗುವುದು ಒಟ್ಟು ಚಿತ್ರದ ಕತೆ. ಛಾಯಾಗ್ರಾಹಕಿಯ ಕತೆ ಅಲೌಕಿಕ ಪ್ರಜ್ಞೆಗೆ ಸಂಬಂಧಿಸಿದ್ದು. ಕುರುಡಿಯಾಗಿದ್ದರೂ ಸದ್ದುಗಳನ್ನು ಆಲಿಸುತ್ತದೇ ಮುಂದಿರುವ ದೃಶ್ಯಗಳನ್ನು ತನ್ನ ಕ್ಯಾಮರಾದಲ್ಲಿ ಹಿಡಿಯುವ ಚಾಕಚಕ್ಯತೆ ಆಲಿಯಾ ಕಮಾಲ್ ಅವಳದು. ಈ ಮೂಲಕವೇ ಅವರು ವಿಶ್ವವಿಖ್ಯಾತಳಾಗುತ್ತಾಳೆ. ಅವಳ ಫೋಟೋಗಳು ಬಹು ಚರ್ಚೆಗೊಳಗಾಗುತ್ತವೆ. ಇದೇ ಸಂದರ್ಭದಲ್ಲಿ ವೈದ್ಯರ ಶಸ್ತ್ರ ಚಿಕಿತ್ಸೆಯ ಬಳಿಕ ಅವಳಿಗೆ ಕಣ್ಣು ಮರಳಿ ಬರುತ್ತದೆ. ವಿಪರ್ಯಾಸವೆಂದರೆ, ಅವಳಿಗೆ ಈಗ ಮೊದಲಿನಂತೆ ಸದ್ದುಗಳನ್ನು ಹಿಂಬಾಲಿಸಿ ದೃಶ್ಯವನ್ನು ಸೆರೆಹಿಡಿಯುವುದಕ್ಕಾಗುವುದಿಲ್ಲ. ಮೊದಲಿನಂತೆ ಅದ್ಭುತ ಫೋಟೋಗಳನ್ನು ಹಿಡಿಯುವಲ್ಲಿ ಅವಳು ವಿಫಲಳಾಗುತ್ತಾಳೆ. ತನಗೆ ದೊರಕಿದ ಕಣ್ಣು ಮತ್ತು ಸದ್ದು ಇವುಗಳ ನಡುವಿನ ತಿಕ್ಕಾಟದಲ್ಲಿ ಆಲಿಯಾ ತತ್ತರಿಸುತ್ತಾಳೆ. ಆದರೆ ಒಂದು ಸಂದರ್ಭದಲ್ಲಿ ಅವಳು ಮುಖಾಮುಖಿಯಾಗುವ ಹಿಮಾಲಯದ ತಪ್ಪಲು, ಹರಿಯುವ ನೀರು, ನೀಲಿ ಆಕಾಶ, ಸುತ್ತಲಿನ ನೀರವತೆ ಅವಳ ಆಲೋಚನೆಯ ದೃಷ್ಟಿಯನ್ನು ಬದಲಿಸುತ್ತದೆ. ಕ್ಯಾಮರಾ ಕೈ ಜಾರುತ್ತದೆ. ಪ್ರಕೃತಿಯನ್ನು ವಿನೀತಳಾಗಿ, ಮೂಕವಿಸ್ಮಿತಳಾಗಿ ಆಸ್ವಾದಿಸತೊಡಗುತ್ತಾಳೆ.


 ಎರಡನೆಯ ಕಥೆ ಮಧ್ಯ ವಯಸ್ಸಿನ ಜೈನ ಸನ್ಯಾಸಿಯದು. ಇಲ್ಲಿಯ ತಾಕಲಾಟ ಹಿಂಸೆ ಮತ್ತು ಅಹಿಂಸೆಯದು. ಔಷಧಿ ತಯಾರಿಕೆಗಾಗಿ ಮೂಕ ಪ್ರಾಣಿಗಳ ಹಿಂಸೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಹೋರಾಟ ನಡೆಸುವ ಮೈತ್ರೇಯಿಗೆ ಪರಿಚಯವಾಗುವುದು ಚಾರ್ವಾಕ ಎಂಬ ಯುವ ವಕೀಲ. ಈ ಹೋರಾಟದ ಹಂತದಲ್ಲೇ ಸನ್ಯಾಸಿಯ ಅತ್ಯಂತ ಕಠಿಣ ಬದುಕನ್ನೂ ತೋರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಸನ್ಯಾಸಿ ಯಕೃತ್ತಿನ ಕ್ಯಾನ್ಸರಿಗೆ ಒಳಗಾಗುತ್ತಾನೆ. ಈಗ ಅವನ ಆಯ್ಕೆ ಒಂದೋ ಕೃತಕ ಅಂಗವನ್ನು ಪಡೆದು, ಔಷಧಿಯನ್ನು ಸೇವಿಸುವುದು. ಅಥವಾ ದೇಹ ತ್ಯಾಗ ಮಾಡುವುದು. ಈ ಹಂತದಲ್ಲಿ ಸನ್ಯಾಸಿ ದೇಹ ತ್ಯಾಗಕ್ಕಿಳಿಯುತ್ತಾನೆ. ಇದೇ ಸಂದರ್ಭದಲ್ಲಿ ಚಾರ್ವಾಕ ಕೇಳುವ ಪ್ರಶ್ನೆ ‘ತನ್ನ ದೇಹವನ್ನು ತಾನೇ ದಂಡಿಸಿಕೊಳ್ಳುವ ಹಕ್ಕು ನಮಗಿದೆಯೇ? ಅದು ಹಿಂಸೆಯಲ್ಲವೇ?’ ಸಾವಿನ ಕೊನೆಯ ಹಂತದಲ್ಲಿರುವಾಗ ಆತ ಈ ಪ್ರಶ್ನೆಯನ್ನು ಒಪ್ಪಿಕೊಂಡು ಔಷಧಿಯನ್ನು ಸ್ವೀಕರಿಸಿ, ಬದುಕಿಗೆ ಮುಖ ಮಾಡುತ್ತಾನೆ.

 ಮೂರನೆಯ ಕತೆ ಶೇರು ಉದ್ಯಮವನ್ನು ಅವಲಂಬಿಸಿದ ಯುವಕ ನವೀನ್ ಪರ್ನಾಮಿಗೆ ಸಂಬಂಧಿಸಿದ್ದು. ಕಿಡ್ನಿ ಶಸ್ತಕ್ರಿಯೆ ಮುಗಿಸಿ, ಚೇತರಿಸಿ ಮನೆ ಸೇರುವ ಈತನನ್ನು ಈತನ ಅಜ್ಜಿ ‘ಬದುಕನ್ನು ಗಂಭೀರವಾಗಿ ಸ್ವೀಕರಿಸು’ ಎಂದು ಸದಾ ತರಾಟೆಗೆ ತೆಗೆದುಕೊಳ್ಳುತ್ತಿರುತ್ತಾರೆ. ಆಕೆ ಬದುಕಿನ ವೌಲ್ಯಗಳನ್ನು ನಂಬಿದಾಕೆ. ಒಂದು ದಿನ ಅವಳೇ ಬಿದ್ದು ಆಸ್ಪತ್ರೆ ಸೇರಬೇಕಾಗುತ್ತದೆ. ಅಜ್ಜಿಯನ್ನು ನೋಡಿಕೊಳ್ಳುವ ಹೊಣೆ ನವೀನ್ ಮೇಲೆ ಬೀಳುತ್ತದೆ. ತನ್ನ ಕಂಪ್ಯೂಟರ್ ಜೊತೆ ಕೆಲಸ ಮಾಡುತ್ತಲೇ ಅಜ್ಜಿಯ ಉಪದೇಶವನ್ನೂ ಕೇಳಬೇಕಾಗುತ್ತದೆ ಆತನಿಗೆ. ಇದೇ ಹೊತ್ತಿನಲ್ಲಿ ಆಸ್ಪತ್ರೆಯಲ್ಲಿ ಯಾರೋ ಚೀರಿದ ಧ್ವನಿ. ನವೀನ್ ಧ್ವನಿ ಬಂದತ್ತ ದಾವಿಸುತ್ತಾನೆ. ನೋಡಿದರೆ ಜನರಲ್ ವಾರ್ಡ್‌ನಲ್ಲಿ ಒಬ್ಬಾಕೆ ಚೀರಾಡುತ್ತಿರುತ್ತಾಳೆ. ಆಕೆಯ ಗಂಡನ ಕಿಡ್ನಿಯನ್ನು ಆಸ್ಪತ್ರೆಯ ವೈದ್ಯರು ಕದ್ದಿರುತ್ತಾರೆ. ನವೀನ್ ಈ ಕುರಿತು ವಿಚಾರಿಸುತ್ತಾ ಹೋದಂತೆ ತನಗೆ ಅಳವಡಿಸಿದ ಕಿಡ್ನಿ ಅವಳ ಗಂಡನಿಂದ ಕದ್ದಿರುವುದೇ ಎಂಬ  ಅನುಮಾನ ತಲೆಯೆತ್ತುತ್ತದೆ.  ಅದರ ಮೂಲವನ್ನು ಹುಡುಕಿ, ಕಿಡ್ನಿಯನ್ನು ಅವನಿಗೆ ಮರಳಿಸುವ ಪ್ರಯತ್ನವನ್ನು ಮಾಡುತ್ತಾನೆ. ಆರೋಪಿಗಳಿಗೆ ಶಿಕ್ಷೆಯಾಗಿಸಲು ಪ್ರಯತ್ನಿಸುತ್ತಾನೆ. ಆದರೆ ಕಿಡ್ನಿ ಕಳೆದುಕೊಂಡಾತ ಹೋರಾಟದ ಬದಲಿಗೆ, ಸಂಸ್ಥೆ ನೀಡುವ ಪರಿಹಾರಕ್ಕೇ ಸಂತೃಪ್ತನಾಗುತ್ತಾನೆ. ಆದರೆ, ಈ ಘಟನೆ ಆತನಿಗೆ ಬದುಕಿನ ಕಡೆಗೆ ಮುಖ ಮಾಡುವಂತೆ ಮಾಡುತ್ತದೆ. ಚಿತ್ರದ ಕೊನೆಯಲ್ಲಿ ಈ ಮೂರು ಕಥಾ ಪಾತ್ರಗಳು, ಹಾಗೆಯೇ ಇವರಂತಹ ಇನ್ನೂ ಹಲವು ಪಾತ್ರಗಳು ಒಂದು ಆಸ್ಪತ್ರೆಯಲ್ಲಿ ಜೊತೆಯಾಗುತ್ತಾರೆ. 


ಕುರುಡಿ ಮತ್ತು ಶೇರು ಉದ್ಯಮಿಯ ಕತೆ ಎದೆಯನ್ನು ಕಲಕುವಂತಿದೆ. ನಿರ್ದೇಶಕನ ಉದ್ದೇಶವನ್ನು ಮೀರಿ ಕತೆ ನಮ್ಮಾಳಗೆ ಬೆಳೆಯುತ್ತದೆ. ಆದರೆ ಜೈನ ಸನ್ಯಾಸಿಯ ಕತೆ ಎಲ್ಲೋ ಒಂದಿಷ್ಟು ವಾಚ್ಯವಾದಂತೆನಿಸುತ್ತದೆ. ಅಲ್ಲಿ, ಮಾತು, ಚರ್ಚೆಗಳು ಕತಾವಸ್ತುವಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಕತೆಯನ್ನು ಒಟ್ಟಾಗಿ ‘ಶಿಪ್ ಆಫ್ ಥೀಸಿಯಸ್’ ಹಿನ್ನೆಲೆಯಲ್ಲಿ ಗ್ರಹಿಸುವಾಗ ಕೆಲವು ಸಮಸ್ಯೆಗಳು ಕಾಡುತ್ತವೆ. ಚಿತ್ರಕ್ಕೆ ಆ ಹೆಸರು ಮಿತಿಯನ್ನು ಹೇರುತ್ತದೆ. ನಿರ್ದೇಶಕ ಆ ಹೆಸರಿಗೆ ಬದ್ಧನಾಗದೆ ಉಳಿದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ. ಚಿತ್ರದ ಕತೆ ತಣ್ಣಗೆ ಒಂದು ಕಿರು ನದಿಯಂತೆ ಸದ್ದಿಲ್ಲದೆ ನಮ್ಮಿಳಗೇ ಒಂದಾಗಿ ನಮ್ಮ ನರ ನಾಡಿಗಳಲ್ಲಿ ಹರಿಯತೊಡಗುತ್ತದೆ. ಸಂಗೀತದ ಅಬ್ಬರವಿಲ್ಲ. ನಿರೂಪಣೆಯ ವೈಭವವಿಲ್ಲ. ಮೂರು ಮುಖ್ಯ ಪಾತ್ರಗಳಲ್ಲಿ ಆಬಿದಾ ಅಲ್‌ಕಶಫ್, ನೀರಜ್ ಕಬಿ ಮತ್ತು ಸೋಹಮ್ ಶಾ ನಟನೆ ಚಿತ್ರವನ್ನು ಇನ್ನಷ್ಟು ಹತ್ತಿರವಾಗಿಸುತ್ತದೆ ಒಂದು ಸಿನಿಮಾವನ್ನು ಯಾಕಾಗಿ ಮಾಡಬೇಕು, ಹೇಗೆ ಮಾಡಬೇಕು ಎನ್ನುವುದಕ್ಕೆ ಇಲ್ಲಿ ಉತ್ತರವಿದೆ. ಛಾಯಾಗ್ರಹಣವಂತೂ ಅತ್ಯದ್ಭುತವಾಗಿದೆ. ಹೃದಯದ ಕಣ್ಣುಗಳಿಂದ ಛಾಯಾಗ್ರಾಹಕ ದೃಶ್ಯಗಳನ್ನು ನಿರೂಪಿಸಿದ್ದಾನೆ. 

ಇವೆಲ್ಲವುಗಳ ನಡುವೆ ಒಂದು ಮಾತು. ಇದು ಮಲ್ಟಿಪ್ಲೆಕ್ಸ್‌ನ ಬುದ್ದಿಜೀವಿಗಳನ್ನು ಗುರಿಯಾಗಿರಿಸಿಕೊಂಡು, ಅಂತಾರಾಷ್ಟ್ರೀಯ ಚಿತ್ರವಿಮರ್ಶಕರನ್ನು ಉದ್ದೇಶವಾಗಿಟ್ಟುಕೊಂಡು ಮಾಡಿದ ಚಿತ್ರವಾದುದರಿಂದ ಅಥವಾ ನಿರ್ದೇಶಕರಲ್ಲಿ ಮತ್ತು ನಿರ್ಮಾಪಕರಲ್ಲಿ ಆ ‘ಮೇಲರಿಮೆ’ ಗಟ್ಟಿಯಾಗಿರುವುದರಿಂದ ಜನಸಾಮಾನ್ಯರನ್ನು ತಲುಪುವುದು ಕಷ್ಟ.

Wednesday, August 21, 2013

ದಿನಕ್ಕೊಂದು ಪುಸ್ತಕ: ಭಾರತ ಸ್ವಾತಂತ್ರ ಸಂಗ್ರಾಮಕ್ಕೆ ಮುಸ್ಲಿಮ್ ಮಹಿಳೆಯರ ಕೊಡುಗೆ

ನಿನ್ನ ಹಣೆಯ ಮೇಲಿನ ಸೆರಗು ಬಹಳ ಸುಂದರ
ಅದನ್ನೇ ನೀನು ಬಾವುಟವನ್ನಾಗಿಸಿದರೆ ಇನ್ನೂ ಸುಂದರ
        -ಕವಿ ದಿ. ಮಜಾಜ್(1937)


ಸ್ವಾತಂತ್ರ ಹೋರಾಟಕ್ಕೆ ಮುಸ್ಲಿಮರ ಕೊಡುಗೆಯೆಷ್ಟು, ಬ್ರಾಹ್ಮಣರ ಕೊಡುಗೆಯೆಷ್ಟು, ದಲಿತರ ಕೊಡುಗೆಯೆಷ್ಟು ಎಂದು ಪಾಲು ಪಡೆದುಕೊಳ್ಳುವ ಪ್ರಕ್ರಿಯೆಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಪರೋಕ್ಷವಾಗಿ, ಈ ದೇಶದಲ್ಲಿ ತಮ್ಮ ತಮ್ಮ ಹಕ್ಕು ಸಾಧಿಸುವ ಭಾಗವಾಗಿ ಈ ವಾದಗಳು ಜೀವ ಪಡೆದಿವೆ. ಮುಸ್ಲಿಮರ ದೇಶಪ್ರೇಮ ಪ್ರಶ್ನಾರ್ಹವಾಗುತ್ತಿರುವ ದಿನಗಳಲ್ಲಿ, ಈ ದೇಶಕ್ಕಾಗಿ ನಮ್ಮ ರಕ್ತವೂ ಬಿದ್ದಿದೆ ಎಂದು ಘೋಷಿಸುವುದು ಅವರಿಗೆ ಅನಿವಾರ್ಯವಾಗಿದೆ. ಆರೆಸ್ಸೆಸ್‌ನಂತಹ ವಿಚ್ಛಿದ್ರಕಾರಿ ಶಕ್ತಿಗಳು ದೇಶಪ್ರೇಮದ ಮಾತನಾಡುವಾಗ, ನೀವು ಈ ದೇಶದ ಸ್ವಾತಂತ್ರಕ್ಕಾಗಿ ಸುರಿಸಿದ ರಕ್ತವೆಷ್ಟು ಎಂಬ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಒಟ್ಟಿನಲ್ಲಿ ಸ್ವಾತಂತ್ರ ಹೋರಾಟಕ್ಕೆ ಕಾರಣವಾದುದು ‘ಭಾರತೀಯತೆ’. ಎಲ್ಲ ಧರ್ಮ, ಜಾತಿಗಳು, ವರ್ಗಗಳು ಭಾರತೀಯತೆಯ ಹೆಸರಿನಲ್ಲಿ ಒಂದಾದ ಪರಿಣಾಮವಾಗಿ ಸ್ವಾತಂತ್ರ ಚಳವಳಿ ಹುಟ್ಟಿಕೊಂಡಿತು. ನಾವಿಂದು ಭಾರತೀಯತೆಯನ್ನು ಕಳೆದುಕೊಳ್ಳುತ್ತಿರುವ ಭಾಗವಾಗಿ, ನಮ್ಮ ನಮ್ಮ ಹಕ್ಕುಗಳನ್ನು ಮಂಡಿಸುತ್ತಿದ್ದೇವೆ.

ಇದೇ ಸಂದರ್ಭದಲ್ಲಿ ಮಹಿಳೆಯರೂ ತಮ್ಮ ಹಕ್ಕುಗಳನ್ನು ಮಂಡಿಸುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಮುಸ್ಲಿಮ್ ಮಹಿಳೆಯರು. ಅದಕ್ಕೆ ಪೂರಕವಾಗಿ ‘ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಮುಸ್ಲಿಮ್ ಮಹಿಳೆಯರ ಕೊಡುಗೆ’ ಕೃತಿ ಹೊರ ಬಂದಿದೆ. ನಾವು ಮರೆತ ಅದೆಷ್ಟೋ ಸಂಗತಿಗಳು ಸ್ವಾತಂತ್ರ ಇತಿಹಾಸದ ಧೂಳಿನಲ್ಲಿ ಸೇರಿ ಹೋಗಿವೆ. ಅದರಲ್ಲಿ ಮುಖ್ಯವಾದುದು, ದೇಶದ ಸ್ವಾತಂತ್ರಕ್ಕಾಗಿ ಪ್ರಾಣ ತೆತ್ತ ಮುಸ್ಲಿಮ್ ಮಹಿಳೆಯರ ಕೊಡುಗೆ. ಮುಸ್ಲಿಮ್ ಮಹಿಳೆಯ ಹಕ್ಕು, ಸ್ವಾತಂತ್ರಗಳ ಬಗ್ಗೆ ಇಂದು ಚರ್ಚೆ ನಡೆಯುತ್ತಿದೆ. ಒಂದು ಕಾಲದಲ್ಲಿ ಈ ಮಹಿಳೆಯರು ಹೇಗೆ ರಾಜಕೀಯ ಚಳವಳಿಯಲ್ಲಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸಿದರು ಎನ್ನುವುದನ್ನು ತೆರೆದಿಟ್ಟರೂ ಸಾಕು, ಅದು ಮುಸ್ಲಿಮ್ ಮಾತ್ರವಲ್ಲ ಎಲ್ಲ ಸಮಾಜದ ಹೆಣ್ಣು ಮಕ್ಕಳಿಗೂ ಮಾದರಿಯಾಗಬಹುದು.

 ‘ಭಾರತದ ಸ್ವಾತಂತ್ರ ಸಂಗ್ರಾಮಕ್ಕೆ ಮುಸ್ಲಿಮ್ ಮಹಿಳೆಯರ ಕೊಡುಗೆ’ ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಹೊರತಂದಿದೆ. ಡಾ. ಆಬಿದಾ ಸಮೀಉದ್ದೀನ್ ಹಿಂದಿಯಲ್ಲಿ ಬರೆದ ಈ ಕೃತಿಯನ್ನು ಕನ್ನಡಕ್ಕಿಳಿಸಿದವರು ಡಾ. ಷಾಕಿರಾ ಖಾನಂ. ಇಂದು ಮುಸ್ಲಿಮ್ ಹೆಣ್ಣು ಮಕ್ಕಳು ಶಾಲೆಗೆ ಹೋಗುವ ವಿಷಯ ವಿವಾದವಾಗುತ್ತಿದೆ. ಆದರೆ ಒಂದಾನೊಂದು ಕಾಲದಲ್ಲಿ ಬ್ರಿಟಿಷರ ವಿರುದ್ಧ ಧ್ವನಿಯೆತ್ತಿ ಜೀವಂತ ಸುಟ್ಟು ಹೋದ, ನೇಣು ಗಂಬವೇರಿದ ನೂರಾರು ಮುಸ್ಲಿಮ್ ಹೆಣ್ಣು ಮಕ್ಕಳು ಆಗಿ ಹೋಗಿದ್ದರು ಎಂದಾಗ, ಇಂದಿನ ವಿವಾದ ಆಧುನಿಕ ಸಮಾಜಕ್ಕೆ ಅವಮಾನವೇ ಸರಿ. ಇತಿಹಾಸದ ಪದರುಗಳಲ್ಲಿ ಮುಚ್ಚಿ ಹೋದ ಹತ್ತು ಹಲವು ಮುಸ್ಲಿಮ್ ಕಣ್ಮಣಿಗಳ ಕಥೆ ನಮ್ಮನ್ನು ಬೆಚ್ಚಿ ಬೇಳಿಸುತ್ತದೆ. ಅವರ ಶೌರ್ಯ, ತ್ಯಾಗ ಹೊಸ ದೇಶ ಕಟ್ಟುವುದಕ್ಕೆ ಸ್ಫೂರ್ತಿಯಾಗುತ್ತದೆ. ಆನೆಗಳ ಮೇಲೇರಿ ಬ್ರಿಟಿಷರ ವಿರುದ್ಧ ಕಾದಿದ್ದ ಹಝರತ್ ಮಹಲ್, ಝಾನ್ಸಿ ರಾಣಿಯ ಜೊತೆ ಜೊತೆಗೇ ಹುತಾತ್ಮಳಾದ ಅನಾಮಧೇಯ ಮುಸ್ಲಿಮ್ ಮಹಿಳೆ, 1857ರಲ್ಲಿ ಬ್ರಿಟಿಷರ ಜೊತೆಗೆ ಯುದ್ಧ ಹೂಡಿದ ತಪ್ಪಿಗೆ ಜೀವಂತ ಸುಡಲ್ಪಟ್ಟ ಅಸ್ಗರಿ ಬೇಗಂ, ಗಲ್ಲಿಗೇರಲ್ಪಟ್ಟ ಗುಜರ್ ಮುಸ್ಲಿಮ್ ಸಮುದಾಯದ ಹಬೀಬಾ....ಮುಸ್ಲಿಮ್ ಮಹಿಳೆಯರ ಶೌರ್ಯದ ಕತೆ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಸುಮಾರು 35ಕ್ಕೂ ಅಧಿಕ ಮುಸ್ಲಿಮ್ ಮಹಿಳಾ ಸ್ವಾತಂತ್ರ ಹೋರಾಟಗಾರರ ವಿವರಗಳು ಈ ಕೃತಿಯಲ್ಲಿದೆ. ಅಂದ ಹಾಗೆ ಈ ಕೃತಿ ಇತಿಹಾಸವನ್ನು ದಾಖಲೆಗಳ ಮೂಲಕ ಮಂಡಿಸುತ್ತದೆ. ಲೇಖಕಿ, ತನ್ನ ಬರಹಗಳಿಗೆ ಪತ್ರಗಳನ್ನು, ಬರಹಗಳನ್ನು ಆಧಾರವಾಗಿ ನೀಡುತ್ತಾರೆ. ಆದುದರಿಂದಲೇ ಈ ಕೃತಿ ನಮಗೆ ಮಹತ್ವದ್ದಾಗಿದೆ.
ಇಂದಿನ ಸಂದರ್ಭದಲ್ಲಿ ಇದೊಂದು ಅತ್ಯಪೂರ್ವ ಕೃತಿಯೇ ಸರಿ. ಇದರ ಮುಖಬೆಲೆ 140 ರೂ.

Tuesday, August 20, 2013

‘ಎ ಬ್ರೀಫ್ ಹಿಸ್ಟ್ರಿ ಆಫ್ ಟೈಮ್‌ಗೆ’ ಒಂದು ಕೈಪಿಡಿ

ನಾನು ಓದಿದ, ನನಗೆ ಖುಷಿಕೊಟ್ಟ ಪುಸ್ತಕವೊಂದನ್ನು ಪ್ರತಿದಿನ ಕೆಲವೇ ವಾಕ್ಯಗಳಲ್ಲಿ ನಿಮ್ಮ ಮುಂದೆ ಪರಿಚಯಿಸಬೇಕು ಎನ್ನೋದು ನನ್ನ ಆಸೆ. ದಿನಕ್ಕೊಂದು ಪುಸ್ತಕವನ್ನು ಗುಜರಿ ಅಂಗಡಿಯಲ್ಲಿ ನಿಮ್ಮ ಮುಂದಿಡುವೆ.


ಸ್ಟೀಫನ್ ಹಾಕಿಂಗ್ ‘ಎ ಬ್ರೀಫ್ ಹಿಸ್ಟ್ರಿ ಆಫ್ ಟೈಮ್’ ಒಂದು ನಿಗೂಢ ಕೃತಿ. ಒಂದು ರೀತಿಯಲ್ಲಿ ಹಾಕಿಂಗ್ ಅವರಂತೆ. ಒಬ್ಬ ಸಾಮಾನ್ಯ ಮನುಷ್ಯನಾಗಿದ್ದರೆ ಹಾಕಿಂಗ್ ಇಂದು ‘ದಯಾ ಮರಣವನ್ನು ಅಪೇಕ್ಷಿಸಿ’ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದರೋ ಏನೋ? ಯಾಕೆಂದರೆ ಅವರು ನಿಲ್ಲಲಾರರು. ಬರೆಯಲಾರರು. ಸ್ವತಃ ತಿನ್ನಲಾರರು. ನಡೆಯಲಾರರು. ಅಷ್ಟೇ ಏಕೆ, ಅವರು ಮಾತನ್ನೂ ಆಡಲಾರರು. ಅವರಲ್ಲಿ ಜೀವಂತವಾಗಿರುವುದು, ಅತ್ಯಂತ ಚಟುವಟಿಕೆಯಲ್ಲಿರುವುದು ಅವರ ಮೆದುಳು ಮಾತ್ರ. ಇಂತಹ ವ್ಯಕ್ತಿ ಇಂದು ಜಗತ್ತಿನ ಅಪರೂಪದ ವಿಜ್ಞಾನಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಕಾಲದ ಬೆನ್ನು ಹತ್ತಿ ಬರೆದ ಇವರ ‘ಎ ಬ್ರೀಫ್ ಹಿಸ್ಟ್ರಿ ಆಫ್ ಟೈಮ್’ ಕೋಟ್ಯಂತರ ಓದುಗರನ್ನು ಸೆಳೆಯಿತು. ಲಕ್ಷಾಂತರ ಪ್ರತಿಗಳು ಮಾರಾಟವಾಯಿತು. ಇದೊಂದು ವಿಜ್ಞಾನ ಕೃತಿಯಾಗಿ ಮಾತ್ರವಲ್ಲ ಸೆಳೆಯಲಿಲ್ಲ. ತತ್ವಶಾಸ್ತ್ರಜ್ಞರನ್ನು, ಸಾಹಿತಿಗಳನ್ನು, ಕಲಾಕಾರರನ್ನು, ಚಿಂತಕರನ್ನು ಇದರೆಡೆಗೆ ಹೊರಳಿ ನೋಡುವಂತೆ ಮಾಡಿತು. ಈ ವಿಶ್ವ ಹುಟ್ಟಿದ್ದು ಹೇಗೆ, ವಿಶ್ವವು ಹೇಗೆ ಮತ್ತು ಏಕೆ ಅಸ್ತಿತ್ವಕ್ಕೆ ಬಂತು? ವಿಶ್ವವು ಕೊನೆಯಾಗುವುದೇ? ಆಗುವುದಾದರೆ ಹೇಗೆ ಎನ್ನುವ ಪ್ರಶ್ನೆಗಳನ್ನು ಬೆನ್ನು ಹತ್ತುವ ಈ ಕೃತಿ ನೀಡುವ ಒಳನೋಟ ಅದ್ಭುತವಾದುದು. ಈ ಕೃತಿಯ ನಿಲುವುಗಳನ್ನು ಒಪ್ಪದವರಿರಬಹುದು. ಆದರೆ ಈ ಕೃತಿಯ ಬದ್ಧತೆ, ಆಕರ್ಷಣೆಗೆ ತಲೆಬಾಗದವರಿಲ್ಲ. ಎಲ್ಲ ಕ್ಷೇತ್ರವನ್ನು ತನ್ನೆಡೆಗೆ ಸೆಳೆದ ಬ್ಲಾಕ್‌ಹೋಲ್ ಹಾಕಿಂಗ್ ಅವರ ಈ ಕೃತಿ.

ಹಿರಿಯ ಚಿಂತಕರು, ಲೇಖಕರೂ ಆದ ಡಾ. ಮಾಧವ ಪೆರಾಜೆ ಈ ಕೃತಿಯನ್ನು ಕನ್ನಡಕ್ಕಿಳಿಸಿದ್ದಾರೆ. ಇದು ಎ ಬ್ರೀಫ್ ಹಿಸ್ಟ್ರಿ ಆಫ್ ಟೈಮ್‌ಗೆ ಪ್ರವೇಶಿಸಲು ನಮಗಿರುವ ಕೈಪಿಡಿಯಾಗಿದೆ. ಹಾಕಿಂಗ್‌ನ ಕೃತಿಯನ್ನು ಸರಳ ಕನ್ನಡಕ್ಕಿಳಿಸುವುದೆಂದರೆ ಸುಲಭದ ಮಾತಲ್ಲ. ಪೆರಾಜೆ ಅದರಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡಕ್ಕೆ ವಿಜ್ಞಾನದ ಒಂದು ಅಪರೂಪದ ಕೃತಿಯನ್ನು ಈ ಮೂಲಕ ಪರಿಚಯಿಸಿದ್ದಾರೆ. ಸರಳ ಕನ್ನಡದಲ್ಲಿ ವಿಜ್ಞಾನವನ್ನು ಹೇಗೆ ಕಟ್ಟಿಕೊಡಬಹುದು ಎನ್ನುವುದಕ್ಕೆ ಈ ಕೃತಿ ಸಾಕ್ಷಿ. ಕೃತಿಗೆ ಹಿರಿಯ ಲೇಖಕರಾದ ಪುರುಷೋತ್ತಮ ಬಿಳಿಮಲೆಯವರು ಅರ್ಥಪೂರ್ಣವಾದ ಮುನ್ನುಡಿಯನ್ನೂ ಬರೆದಿದ್ದಾರೆ. ವಿದ್ಯಾರ್ಥಿಗಳೂ, ಹಿರಿಯರೂ ಓದಲೇ ಬೇಕಾದ ಕೃತಿಯಿದು. ಬೇರೊಂದು ಅಜ್ಞಾತ ವಲಯಕ್ಕೆ ಎತ್ತೊಯ್ಯುವ ಶಕ್ತಿ ಈ ಕೃತಿಗಿದೆ. ಪಲ್ಲವ ಪ್ರಕಾಶನ ಚೆನ್ನಪಟ್ಟಣ ಹೊರತಂದಿರುವ ಈ ಕೃತಿಯ ಮುಖಬೆಲೆ 200 ರೂ.

Monday, August 19, 2013

ರುಚಿ ಮತ್ತು ಇತರ ಕತೆಗಳು



ನರಕ-ಸ್ವರ್ಗ
ಒಬ್ಬ ಸಜ್ಜನ ಮೃತನಾದ. ಅವನು ಸ್ವರ್ಗವಾಸಿಯಾದ.
ಅವನಿಗೊಮ್ಮೆ ನರಕವನ್ನು ನೋಡುವ ಬಯಕೆಯಾಯಿತು. ನರಕದ ಕಾವಲುಗಾರನಲ್ಲಿ ತೋಡಿಕೊಂಡ.
ಆತ ಅನುಮತಿ ನೀಡಿದ. ಅಂತೆಯೇ ಸಜ್ಜನ ನರಕ ಪ್ರವೇಶಿಸಿದ.
ಏನಾಶ್ಚರ್ಯ. ನರಕ ಸ್ವರ್ಗಕ್ಕಿಂತ ಭಿನ್ನವಾಗಿರಲಿಲ್ಲ.
ಸಜ್ಜನ ಅಚ್ಚರಿಯಿಂದ ಕೇಳಿದ ‘‘ಇದೇನಿದು, ನರಕ ಇಷ್ಟು ಸುಂದರವಾಗಿದೆ...’’
ಕಾವಲುಗಾರ ನಕ್ಕು ನುಡಿದ ‘‘ಯಾಕೆಂದರೆ ನೀನು ಸಜ್ಜನ.
ನೀನು ಪ್ರವೇಶಿಸಿದ ಪರಿಣಾಮವಾಗಿ ನರಕ ಸ್ವರ್ಗವಾಗಿ ಪರಿವರ್ತನೆಗೊಂಡಿತು. ನಮ್ಮಲ್ಲಿ ನರಕ, ಸ್ವರ್ಗಗಳಿಲ್ಲ. ಮನುಷ್ಯನೇ ಅದನ್ನು ತನಗೆ ಸಿದ್ಧಪಡಿಸಿಕೊಳ್ಳುತ್ತಾನೆ...’’

ಯೋಜನೆ
ಬಾಲಕಾರ್ಮಿಕ ವಿರೋಧಿ ಚಳವಳಿಯನ್ನು ಜಿಲ್ಲಾಡಳಿತ ಬಿರುಸಿನಿಂದ ಹಮ್ಮಿಕೊಂಡಿತು. ಅದಕ್ಕಾಗಿ ಬೃಹತ್ ಪೋಸ್ಟರ್‌ಗಳನ್ನು ಹಾಕುವ ಯೋಜನೆಯನ್ನು ಸಿದ್ಧಪಡಿಸಿತು. ಬೀದಿ ಬದಿಯಲ್ಲಿ ವಾಸಿಸುತ್ತಿದ್ದ ಮಕ್ಕಳಿಗೆ ಈಗ ಕೈ ತುಂಬಾ ಕೆಲಸ.

ಬಂಗಲೆ
ಬಾಲ್ಯದಲ್ಲಿ ತೀರಾ ಬಡವನಾಗಿ ಬದುಕಿದ್ದ ಆತ ಬೆಳೆದಂತೆ ಭಾರೀ ಬಂಗಲೆಗೆ ಒಡೆಯನಾದ.
ಒಂದು ದಿನ ಗೆಳೆಯನನ್ನು ತನ್ನ ಮನೆಗೆ ಆಹ್ವಾನಿಸಿದ.
ಬಂಗಲೆಯನ್ನು ವೀಕ್ಷಿಸಿ ಗೆಳೆಯ ಕೇಳಿದ ‘‘ನಿನ್ನ ತಂದೆ, ತಾಯಿ ಎಲ್ಲಿದ್ದಾರೆ?’’
ಆತ ನುಡಿದ ‘‘ಅವರು ಹಳೆಯ ಗುಡಿಸಲಲ್ಲೇ ಇದ್ದಾರೆ. ಅವರಿಗೆ ಈ ಬಂಗಲೆಯಲ್ಲಿ ನಿದ್ದೆ ಬರುವುದಿಲ್ಲವಂತೆ’’

ರುಚಿ
‘‘ನಿನಗೆ ನನ್ನ ಅಮ್ಮನ ಹಾಗೆ ಅಡುಗೆ ಮಾಡೋದಕ್ಕೆ ಗೊತ್ತಿಲ್ಲ. ಯಾವುದಕ್ಕೂ ರುಚಿಯಿಲ್ಲ...’’
ಆಗಷ್ಟೇ ಮದುವೆಯಾಗಿದ್ದ ಗಂಡ ಕೂಗಿ ಹೇಳಿದ.
ಕೋಣೆಯೊಳಗಿದ್ದ ಅಮ್ಮ ಖುಷಿಯಿಂದ ನಡುಗಿದಳು.
ಗಂಡ, ಪತ್ನಿಯನ್ನು ನೋಡಿ ಕಣ್ಣು ಮಿಟುಕಿಸಿದ. ಅವಳು ಮುಗುಳು ನಕ್ಕಳು.

ರಾಜ ರಸ್ತೆ

 ಆ ರಾಜ ರಸ್ತೆ ಜಂಬದಿಂದ ಬೀಗುತ್ತಿತ್ತು.
ದೊಡ್ಡ ದೊಡ್ಡ ಕಾರುಗಳು, ಬಸ್ಸುಗಳು ಓಡಾಡುವ ರಸ್ತೆ ನಾನು ಎಂದು ಅಕ್ಕಪಕ್ಕದ ಮರಗಿಡಗಳೊಂದಿಗೆ ಹೇಳಿಕೊಳ್ಳುತ್ತಿತ್ತು.
ಒಂದು ದಿನ ಏನಾಯಿತೆಂದರೆ, ಆ ರಸ್ತೆ ಸೇರುವ ನಗರದ ಅರ್ಥವ್ಯವಸ್ಥೆ ಕುಸಿದು ನಗರ ಪಾಳು ಬಿತ್ತು.
ಕೆಲವೇ ದಿನಗಳಲ್ಲಿ ಆ ರಾಜರಸ್ತೆಯಲ್ಲಿ ಹುಲ್ಲುಗರಿಗಳು ಮೊಳೆಕೆ ಹೊಡೆಯತೊಡಗಿದವು.
ಅಪರೂಪಕ್ಕೆ ಓಡಾಡುವ ಆ ಊರಿನ ಜನರು, ತಾವೇ ನಡೆದು ರೂಪಿಸಿದ ತಮ್ಮದೇ ಕಾಲುದಾರಿಯಲ್ಲಿ ಎಂದಿನಂತೆ ನಡೆದಾಡುತ್ತಿದ್ದರು.

ಧ್ಯಾನ
ಕುಖ್ಯಾತ ಕಳ್ಳನೊಬ್ಬ ಪೊಲೀಸರಿಗೆ ಅಂಜಿ ಸಂತನ ಆಶ್ರಮ ಪ್ರವೇಶಿಸಿದ ‘‘ಸ್ವಾಮಿ, ನಾನೂ ಧ್ಯಾನವನ್ನು ಕಲಿಯಬೇಕು’’
ಸಂತ ಅವಕಾಶ ನೀಡಿದ. ಕಳ್ಳ ಆಶ್ರಮದಲ್ಲಿ ತನಗೆ ಬೇಕಾದಂತೆ ಕಾಲ ಕಳೆಯತೊಡಗಿದ.
ಒಂದು ದಿನ ಸಂತ ಆತನನ್ನು ಕರೆದು ಹೇಳಿದ ‘‘ನಾವು ಏನು ಮಾಡುತ್ತೇವೋ ಅದನ್ನು ಶ್ರದ್ಧೆಯಿಟ್ಟು ಮಾಡುವುದೇ ಧ್ಯಾನ. ಕಳ್ಳತನದಲ್ಲಿರುವ ಶ್ರದ್ಧೆ ಆಶ್ರಮದಲ್ಲಿ ಕಾಣುತ್ತಿಲ್ಲ. ಹೋಗು ಕಳ್ಳತನ ಮಾಡು. ನಿನ್ನ ಪಾಲಿಗೆ ಅದುವೇ ಧ್ಯಾನ’’

ಗಾಳ
ಗಾಳದ ಜೊತೆಗೆ ಆತ ನದಿಗೆ ಮೀನು ಹಿಡಿಯಲು ಹೊರಟ.
ಗಾಳ ಹಾಕಿ ಕೂತ. ನೀರಿನಲ್ಲಿ ಎಳೆದಂತಾಯಿತು.
‘‘ಓಹ್ ಮೀನು ಸಿಕ್ಕಿತು’ ಎಂದು ಸಂಭ್ರಮದಿಂದ ಎದ್ದು ನಿಲ್ಲುವಷ್ಟರಲ್ಲಿ ಆಯ ತಪ್ಪಿ ನದಿಗೆ ಬಿದ್ದ.
ಸಂಜೆಯ ಹೊತ್ತಿಗೆ ಆತನ ಹೆಣವನ್ನು ಎತ್ತಿದರು.
ಪಕ್ಕದಲ್ಲೇ ಇದ್ದ ಗಾಳವನ್ನು ಯಾರೋ ಎತ್ತಿದರೆ ಅದರಲ್ಲೊಂದು ಮೀನು ವಿಲವಿಲ ಒದ್ದಾಡುತ್ತಿತ್ತು.