Sunday, April 15, 2012

ಮಾತು

ನನ್ನ ಬದುಕನ್ನು
ಒತ್ತೆ ಇಟ್ಟು ಬೆಳೆಸಿದ್ದೆ
ಎಂದು ನಾನು ಈವರೆಗೂ ಭಾವಿಸಿಕೊಂಡಿದ್ದ
ಅವಳು ನುಡಿದು ಬಿಟ್ಟಳು
"ನೀನು ಸತ್ತರೆ ನನಗೇನು?''

ನನಗೋ ಭಯವಾಯಿತು!
ತನ್ನ ಬಾಯಿಯಿಂದ ತಪ್ಪಿ
ಉದುರಿ ಬಿದ್ದ ಮಾತನ್ನು
ಮರಳಿ ಹೊಟ್ಟೆಗೆ ಹಾಕಿಕೊಳ್ಳುವ
ಅವಳ ಪ್ರಯತ್ನ ಫಲಿಸಿ ಬಿಡಲಿ ದೇವರೇ!

ನಾನು...

ನೀನಿಲ್ಲದೆಯೂ
ನಾನು ಬದುಕಬಲ್ಲೆ...
ಎಂಬ ಮಾತು
ನಿನ್ನೆದೆಯಿಂದ ಸ್ಫೋಟಗೊಂಡ
ದಿನದಿಂದ
ನಾನು
ನನ್ನ ಹೆಣವನ್ನು
ಹೊತ್ತುಕೊಂಡು ತಿರುಗಾಡುತ್ತಿದ್ದೇನೆ!

ಅಂಗೈಯಲ್ಲಿ ಆಕಾಶ!


ಮಿಂಚಿ ಮಾಯವಾಗುವ ಕೆಲವು ಕ್ಷಣಗಳು, ಘಟನೆಗಳು, ದೃಶ್ಯಗಳು, ಮಾತುಗಳು, ಸಾಲುಗಳು ಜೀವದ ಕೊನೆಯ ಉಸಿರಿನವರೆಗೂ ಮುಳ್ಳಿನಂತೆ ಕಚ್ಚಿ ಹಿಡಿದು ಬಿಡೂದಿದೆ. ಸಣ್ಣದಾದದ್ದು ನಮ್ಮೊಳಗೆ ಆಕಾಶದಂತೆ ಕೆಲವೊಮ್ಮೆ ಹರಡುತ್ತಾ ಹೋಗುವ ವಿಸ್ಮಯಕ್ಕೆ ನೀವೂ ಸಿಲುಕಿರಬಹುದು. ಇಲ್ಲಿನ ಕತೆಗಳಲ್ಲಿ ಅಂತಹ ಸಣ್ಣ ಸಣ್ಣ ಕ್ಷಣಗಳನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಿದ್ದೇನೆ. ಒಂದು ದೊಡ್ಡ ಕಾದಂಬರಿಯೇ ಆಗುವ ವಸ್ತುವೂ ಕೆಲವು ಹನಿಗಳಲ್ಲಿದೆ. ಅದನ್ನು ಬರಹದಲ್ಲಿ ಬೆಳೆಸುವ ಧೈರ್ಯ ಸಾಲದೆ, ಇದ್ದ ಹಾಗೆಯೇ ನಿಮ್ಮ ಮುಂದೆ ಇಟ್ಟಿದ್ದೇನೆ. ಕೆಲವೊಮ್ಮೆ ನನ್ನೊಳಗಿನ ಪತ್ರಕರ್ತನ ಅವಸರವೂ, ಜನ್ಮತಹ ನನ್ನ ಹಕ್ಕಾಗಿರುವ ಅಶಿಸ್ತು, ಮತ್ತು ಸೋಮಾರಿತನವೂ ಈ ಪುಟ್ಟ ಕತೆಗಳನ್ನು ಬರೆಸಿರುವ ಸಾಧ್ಯತೆ ಇರಬಹುದೇನೋ ಎಂಬ ಅನುಮಾನವೂ ಕಾಡಿದ್ದಿದೆ. ಏನೇ ಇರಲಿ, ಈ ಅಂಗೈಯ ಹನಿಗಳು ನಿಮ್ಮೊಳಗೂ ಆಕಾಶದಂತೆ ವಿಸ್ತರಿಸಿದರೆ, ನನ್ನ ಮತ್ತು ಅಹರ್ನಿಶಿ ಪ್ರಕಾಶನದ ಪ್ರಯತ್ನ ಸಾರ್ಥಕ.

Tuesday, April 10, 2012

‘ಮಾತು-ಮೌನ’ದ ಕುರಿತಿಷ್ಟು...

 ಪತ್ರಕರ್ತ, ಕವಿ ದಿ. ಬಿ. ಎಂ. ರಶೀದ್ ಅವರು ‘ಮಾತು-ಮೌನ’ದ ಕುರಿತಂತೆ ಬರೆದ ಕವಿತೆ ಇಲ್ಲಿದೆ. ಈ ಕವಿತೆಯನ್ನು ಅವರ ‘ಪರುಷಮಣಿ’ ಸಮಗ್ರ ಬರಹದಿಂದ ಆರಿಸಿಕೊಳ್ಳಲಾಗಿದೆ.


1.
ಒಳಗೊಂದು ಸಭೆ!
‘ಮಾತು-ಮೌನ’ದ 
ನಡುವೆ ಜಟಾಪಟಿ!!
ಮಾತಿಗೆ ಶಬ್ದಗಳಿವೆ: ಅರ್ಥಗಳಿಲ್ಲ
 

ಮೌನಕ್ಕೋ ಅರ್ಥಗಳಿವೆ; ಶಬ್ದಗಳಿಲ್ಲ

2
ಮಾತಿಗೇನೋ
ಹೇಳುವುದಿತ್ತು
ಆದರೆ..
ಹೇಳಲಿರುವುದನ್ನು
ಹೇಳದೇ ಬಿಡುವ;
ಹೇಳಲಿಲ್ಲದ್ದನ್ನು
ಹೇಳಿ ಬಿಡುವ
ಭಯದಿಂದ 
ಮಾತು ಮೌನವಾಯಿತು

3
ಮಾತು
ಮೌನವಾಗಿತ್ತು
ಮಾತನಾಡಲೇನೂ 
ಇರಲಿಲ್ಲ-
ವೆಂದಲ್ಲ
ಸಮಸ್ಯೆ ಯಾವುದಾಗಿತ್ತೆಂದರೆ
ಒಳಗೆ ಶಬ್ದಗಳ
ಮುಷ್ಕರವಿತ್ತು

4
ಮಾತಿನೊಳಗೊಂದು
 

ಮೌನವಿತ್ತು
ಮಾತು
 

ಮೌನವಾದೊಡನೆ 
ಮೌನ...
ಮಾತನಾಡತೊಡಗಿತು

5
ಮಾತಿಗೇನೂ ಇಲ್ಲದಾಗ
ಮಾತಿಗೆಲ್ಲ ಇದ್ದಾಗ
ಮಾತು-
ಮೌನ!
ನಮ್ಮ ಮುಖಾಮುಖಿಯಲ್ಲಿ
ನಾವೋ,
ಏನನ್ನೂ ಮಾತಾಡದೇ
ಎಲ್ಲವನ್ನೂ ಮಾತಾಡಿದೆವು
 

ಮೌನ-ಮಾತು!!

6
 

ಮೌನದೊಳಗೊಂದು
ಮಾತಿತ್ತು!
ಧ್ವನಿಯಿರಲಿಲ್ಲ
ಮಾತು
ಮೌನಕೆ ಸೋತು, 

ಮೌನದ ತೆಕ್ಕೆಗೆ ಜೋತು
ನೋಡಿದರೆ-
ಕಣ್ಣಂಚಲ್ಲೊಂದು 
ಹನಿಯಿತ್ತು!!

ಇಲ್ಲಿರುವ ನನ್ನ ಹೆಚ್ಚಿನ ಬರಹಗಳಿಗೆ ನಾನು ಫೋಟೋಗಳನ್ನು ಗೂಗಲ್ ಇಮೇಜ್ನಿಂದ ಪಡೆದಿದ್ದೇನೆ. ನನ್ನ ಬರಹಗಳ ತೂಕ ಹೆಚ್ಚಿಸಿದ ಈ ಎಲ್ಲ ಅನಾಮಿಕ ಕಲಾವಿದರಿಗೆ ನಾನು ಚಿರ ಋಣಿ.

Saturday, April 7, 2012

ಕಳ್ಳ ಮತ್ತು ಊರು

ಕಾಡೊಳಗೊಬ್ಬ ಕಳ್ಳ ಅವಿತಿದ್ದ.
ಆಗಾಗ ಊರಿಗೆ ನುಗ್ಗಿ ಕದಿಯುತ್ತಿದ್ದ.
ಊರವರಿಗೆ ಅವನು ದೊಡ್ಡ ತಲೆನೋವಾಗ ತೊಡಗಿದ.
ತಡೆಯಲಾರದೆ ಕೊನೆಗೆ ಸರಕಾರಕ್ಕೆ ದೂರು ಕೊಟ್ಟರು.
ಸರಕಾರ ಕಳ್ಳನನ್ನು ಹಿಡಿಯಲು ದೊಡ್ಡ ಪೋಲಿಸ್ ಪಡೆಯನ್ನು ಕಳುಹಿಸಿತು.
ಪೋಲಿಸ್ ಪಡೆ ಕಳ್ಳನನ್ನು ಹುಡುಕ ತೊಡಗಿತು.
ಕಳ್ಳ ಸಿಗಲೇ ಇಲ್ಲ. ಸಿಗುವವರೆಗೆ ಪೊಲೀಸರು ಊರೂ ಬಿಟ್ಟು ಹೋಗುವ ಹಾಗಿಲ್ಲ.
ಪೊಲೀಸರು ಊರಲ್ಲಿ ಬಿಡಾರ ಊಡಿದರು.
ಪೋಲೀಸರ ಯೋಗ ಕ್ಷೇಮ ಊರವರ ತಲೆ ಮೇಲೆ ಬಿತ್ತು.
ಪುಕ್ಕಟೆ ಊಟ, ಹಣ್ಣು ಕಾಯಿ ಒಪ್ಪಿಸೋದು ಅನಿವಾರ್ಯವಾಯಿತು.
ಪೋಲಿಸ್ ಲಾಟಿ ನಿಧಾನಕ್ಕೆ ಮಾತನಾಡ ತೊಡಗಿತು.
ಹೆಣ್ಣು ಮಕ್ಕಳು ಹೊರ ಹೋಗೂದು ಕಷ್ಟವಾಗತೊಡಗಿತು.
ಕಟ್ಟಕಡೆಗೆ ಯುವಕರು ಹೆದರಿ ಒಬ್ಬೊಬ್ಬರಾಗಿ ಕಾಡು ಸೇರ ತೊಡಗಿದರು.
ಈ ಹಿಂದೆ ಒಬ್ಬ ಕಳ್ಳನಿದ್ದನಲ್ಲ, ಅವನೇ ಯುವಕರಿಗೆ ನಾಯಕನಾದ.
ಇಡೀ ಊರು ಕಳ್ಳರ ಪರವಾಗತೊಡಗಿತು.
ಪೊಲೀಸರಿಗೂ ಊರಿಗೂ ಜಗಳ ಶುರುವಾಯಿತು.
ಇಡೀ ಊರೇ ಕಳ್ಳನನ್ನು ರಕ್ಷಿಸುತ್ತಿದೆ ಎಂದು ಸರಕಾರಕ್ಕೆ ವರದಿ ಹೋಯಿತು.
ಊರ ಪ್ರಮುಖರೆಲ್ಲ ಜೈಲು ಸೇರಿದರು.
ಹಲವರು ಎನ್ಕೌಂಟರ್ನಲ್ಲಿ ಸತ್ತರು.
ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡರು.
ಅಳಿದುಳಿದವರು ಜೀವ ಉಳಿಸಿಕೊಳ್ಳಲು ಕಾಡು ಸೇರಿದರು.
ಊರೂ ಸಂಪೂರ್ಣ ನಾಶವಾಯಿತು.
ಪೋಲಿಸರಿನ್ನು ಕಾಡಿನಲ್ಲಿ ಕಳ್ಳನಿಗಾಗಿ ಹುಡುಕುತ್ತಲೇ ಇದ್ದಾರೆ.

Thursday, April 5, 2012

ಹರಾಜು ಮತ್ತು ಇತರ ಕತೆಗಳು

ಥ್ಯಾಂಕ್ಸ್
ಆಟೋ ರಿಕ್ಷಾಚಾಲಕ ಅಂದು ಎಂದಿಗಿಂತ ತುಸು ಬೇಗ ಮನೆಗೆ ಬಂದಿದ್ದ.
ಪತ್ನಿ ಕೇಳಿದ ‘‘ಏನ್ರೀ...ಭಾರೀ ಖುಷಿಯಲ್ಲಿರೋ ಹಾಗಿದೆ. ಏನು ವಿಶೇಷ’’
ಆತ ಹೇಳಿದ ‘‘ಇಂದು ಒಂದು ವಿಚಿತ್ರ ನಡೆಯಿತು ಕಣೆ. ಪ್ರಯಾಣಿಕನೊಬ್ಬ ನನ್ನ ರಿಕ್ಷಾವನ್ನು ಏರಿದ. ಅವನು ಹೇಳಿದ ಸ್ಥಳಕ್ಕೆ ತಲುಪಿಸಿದೆ. ಮೀಟರ್ ನೋಡಿ ಹಣ ಕೊಟ್ಟ ವಿಚಿತ್ರವೆಂದರೆ ಹೋಗುವ ಮೊದಲು ಆತ ನನಗೆ ‘ಥ್ಯಾಂಕ್ಸ್’ ಹೇಳಿದ’’

ಉಪ್ಪು
‘ಕಡಲ ನೀರೇಕೆ ಉಪ್ಪು’
‘‘ನದಿಗಳೆಲ್ಲ ಹೆಣ್ಣಾದ ತಪ್ಪಿಗೆ...ಕಣ್ಣೀರ ರುಚಿಯೇ ಉಪ್ಪು’’

ಹರಾಜು
‘‘ಇಂದು ಲಂಡನ್ನಿನಲ್ಲಿ ಗಾಂಧೀಜಿಯ ವಸ್ತುಗಳ ಹರಾಜು ನಡೆಯುತ್ತದೆಯಂತೆ’’
‘‘ಹೌದಾ? ಹಾಗಾದರೆ ಗುಜರಾತ್‌ನಲ್ಲಿ 2002ರಲ್ಲಿ ನಡೆದದ್ದೇನು?’’

ಊಟ
‘ಇವತ್ತು ಮಧ್ಯಾಹ್ನ ಒಟ್ಟಿಗೆ ಊಟ ಮಾಡೋಣ. ಬರ್ತೀಯ?’ ಗೆಳೆಯ ಕೇಳಿದ.
‘ನಾನು ಇವತ್ತು ತುಸು ಬಿಜಿಯಾಗಿದ್ದೇನೆ. ನಾಳೆ ಮಧ್ಯಾಹ್ನ ಒಟ್ಟಿಗೆ ಕೂರೋಣ’’ ಎಂದೆ.
ಮರುದಿನ ಬೆಳಗ್ಗೆ ಗೆಳೆಯ ಅಪಘಾತದಲ್ಲಿ ಮೃತಪಟ್ಟ ಸುದ್ದಿ.
ಇನ್ನು ನನಗೆ ಮಧ್ಯಾಹ್ನದ ಊಟ ವರ್ಜ್ಯ.

ಅಚ್ಚರಿ
‘‘ರಾಜರಾಯರು ಇಂದು ಸತ್ತರಂತೆ...’’ ಒಬ್ಬ ಹೇಳಿದ.
‘‘ಅರೆ! ಅವರಿನ್ನೂ ಸತ್ತಿರ್ಲಿಲ್ವಾ...?’’ ಇನ್ನೊಬ್ಬ ಅಚ್ಚರಿ ವ್ಯಕ್ತ ಪಡಿಸಿದ.

ಬ್ಯಾಂಕ್
‘‘ಹಾಯ್ ಡಾರ್ಲಿಂಗ್ ಎಲ್ಲಿದ್ದೀಯ?’’ ಗೆಳತಿ ಫೋನಲ್ಲಿ ಕೇಳಿದಳು.
‘‘ನಾನು ಬ್ಯಾಂಕ್‌ನಲ್ಲಿದ್ದೇನೆ...’’ ಆತ ಉತ್ತರಿಸಿದ.
‘‘ಓಹ್ ಡಿಯರ್...ನನಗೆ ಅತ್ಯವಶ್ಯವಾಗಿ ಹತ್ತು ಸಾವಿರ ರೂ. ಬೇಕಾಗಿತ್ತು. ಬರುವಾಗ ಇಡ್ಕೊಂಡು ಬರ್ತೀಯ...’’
‘‘ನಾನು ಬ್ಯಾಂಕ್‌ನಲ್ಲಿದ್ದೀನಿ...ಅಂದ್ರೆ ಬ್ಲಡ್ ಬ್ಯಾಂಕ್‌ನಲ್ಲಿ. ಒಬ್ಬರಿಗೆ ರಕ್ತ ಕೊಡಬೇಕಾಗಿತ್ತು. ಅಂದ ಹಾಗೆ ನಿನ್ನ ಬ್ಲಡ್ ಗ್ರೂಪ್ ಯಾವುದು?’’
ಗೆಳತಿಯ ಫೋನ್‌ನ ರೇಂಜ್ ಕಟ್ಟಾಗಿ ಬಿಟ್ಟಿತು.