Monday, November 20, 2017

ಕುಂಡದೊಳಗಿಟ್ಟು ನಾವು ಸಾಕುತ್ತಿರುವ ಸೌಹಾರ್ದ!

ಇತ್ತೀಚೆಗೆ ಕರಾವಳಿಯಲ್ಲಿ ಜಿಲ್ಲಾ ಮಟ್ಟದ ಒಂದು ಕ್ರಿಕೆಟ್ ಪಂದ್ಯ ‘ಸೌಹಾರ್ದ’ ಕಾರಣಕ್ಕಾಗಿ ಸುದ್ದಿಯಾಯಿತು. ಈ ಪಂದ್ಯದ ಪ್ರಮುಖ ನಿಯಮಾವಳಿ ಏನೆಂದರೆ ‘ಭಾಗವಹಿಸುವ ಪ್ರತೀ ತಂಡದಲ್ಲಿ ಎಲ್ಲ ಧರ್ಮಕ್ಕೆ ಸೇರಿದ ಆಟಗಾರರು ಇರಬೇಕು” ಎನ್ನುವುದು. ಪತ್ರಿಕೆಗಳಲ್ಲೂ ಈ ಸೌಹಾರ್ದ ಕ್ರಿಕೆಟ್ ಪಂದ್ಯವನ್ನು ಶ್ಲಾಘಿಸಿ ಲೇಖನಗಳು ಪ್ರಕಟವಾದವು. ೨೦ ವರ್ಷಗಳ ಹಿಂದಿನ ಮಾತು. ನಮ್ಮ ಊರಿನ ಮೈದಾನದಲ್ಲಿ ಆಟದ ಖುಷಿಗಾಗಿ ಆಟಗಾರರು ಸೇರುತ್ತಿದ್ದರೇ ಹೊರತು, ಅವರು ತಮ್ಮ ಧರ್ಮದ ಪ್ರತಿನಿಧಿಗಳಾಗಿ ಅಲ್ಲಿ ಸೇರುತ್ತಿರಲಿಲ್ಲ. ಸಂಜೆಯಾದಾಕ್ಷಣ ಕ್ರಿಕೆಟ್ ಬ್ಯಾಟುಗಳ ಜೊತೆಗೆ ಸೇರುವ ನಝೀರ್, ಮೋಹನ, ರಾಮಕೃಷ್ಣ, ಮಜೀದ್, ಪಿಂಟೋ...ಇವರೆಲ್ಲ ತಮ್ಮ ಆಟದ ಸಾಮರ್ಥ್ಯಕ್ಕನುಗುಣವಾಗಿ ಅಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತಿದ್ದರು. ಸಂಜೆ ಏಳರವರೆಗೂ ಆಡಿ, ಬಳಿಕ ಒಂದು ಅರ್ಧ ಗಂಟೆ ‘ಪಟ್ಟಾಂಗ’ ಹೊಡೆದು ಅವರವರ ಮನೆಗೆ ತೆರಳುವುದು ಹದಿಹರೆಯದ ಹುಡುಗರ ಒಂದು ದಿನಚರಿಯೇ ಆಗಿತ್ತು. ಮುಖ್ಯವಾಗಿ, ಎಲ್ಲ ಜಾತಿ ಧರ್ಮಗಳನ್ನು ಮೀರಿ ನಾವಿಲ್ಲಿ ಒಂದಾಗಿದ್ದೇವೆ ಎನ್ನುವ ಅರಿವೂ ಅವರಿಗಿರಲಿಲ್ಲ. ಶಾಲೆಗಳನ್ನು ಹೊರತು ಪಡಿಸಿದರೆ, ನಮ್ಮೆಲ್ಲರನ್ನು ಜಾತಿ ಧರ್ಮದಾಚೆಗೆ ಒಂದಾಗಿಸುತ್ತಿದ್ದುದು ಈ ಮೈದಾನವೇ ಆಗಿತ್ತು. ಯಾವ ಸೌಹಾರ್ದದ ಭಾಷಣಗಳು, ದೇಶಭಕ್ತಿಯ ಘೋಷಣೆಗಳು ನಮಗೆ ಒಂದಾಗುವುದಕ್ಕೆ ಅಗತ್ಯವಿರಲಿಲ್ಲ. ಮನೆಯ ಬಳಿಕ ನಾವು ಹೊರಜಗತ್ತನ್ನು ಮುಖಾಮುಖಿಯಾಗುವುದೇ ಊರಿನ ಈ ಮೈದಾನಗಳ ಮೂಲಕ. ನಮ್ಮನ್ನು ಆ ಊರಿನ ಅಧಿಕೃತ ಸದಸ್ಯನಾಗಿ ಘೋಷಿಸುವುದು ಈ ಮೈದಾನಗಳೇ ಆಗಿದ್ದವು.
ನಮ್ಮ ಮನೆಯ ಹೊರಗಿನ ಸಮಾಜ ನಮಗೆ ಮೊದಲು ತೆರೆದುಕೊಳ್ಳುವುದು ಶಾಲೆಗಳ ಮೂಲಕ. ಇಲ್ಲಿ ಬೇರೆ ಬೇರೆ ಧರ್ಮ, ಸಂಸ್ಕೃತಿ, ಭಾಷೆಗಳ ಮುಖಾಮುಖಿಯಾಗುತ್ತದೆ. ಯಾರೂ ನಮಗೆ ಇನ್ನೊಂದು ಧರ್ಮವನ್ನು, ಭಾಷೆಯನ್ನು ಪರಿಚಯಿಸಬೇಕಾಗಿರಲಿಲ್ಲ. ನಾವೆಲ್ಲ ತುಳು ಭಾಷೆಯನ್ನು ಯಾವುದೇ ಶಾಲೆಯಲ್ಲಿ ಅಥವಾ ಗುರುಗಳಲ್ಲಿ ಕಲಿತಿರುವುದಲ್ಲ. ಮನೆ ಭಾಷೆ ಬ್ಯಾರಿಯಾಗಿದ್ದರೆ, ಊರ ಹುಡುಗರ ಜೊತೆಗೆ ಮೈದಾನದಲ್ಲಿ, ಶಾಲೆಯಲ್ಲಿ ಆಟವಾಡುತ್ತಲೇ ತುಳುವನ್ನು ನಮ್ಮದಾಗಿಸಿಕೊಂಡೆವು. ಜಾತ್ರೆಗಳಲ್ಲಿ, ಉರೂಸುಗಳಲ್ಲಿ ಓಡಾಡುತ್ತಾ ವಿವಿಧ ಸಂಸ್ಕೃತಿಗಳನ್ನು ಸಹಜವಾಗಿ ನಮ್ಮೊಳಗೆ ಇಳಿಸಿಕೊಳ್ಳತೊಡಗಿದೆವು. ಶಾಲೆಯಲ್ಲಿ ಒಟ್ಟಾಗಿ ಓದುತ್ತಾ, ಜಗಳ ಮಾಡುತ್ತಾ, ಆಡುತ್ತಾ ಎಲ್ಲರೂ ನಮ್ಮವರಾದರು. ನಾನು ಓದಿರುವುದು ಚರ್ಚ್ ಶಾಲೆಯಾಗಿತ್ತು. ಆ ಕಾಲದಲ್ಲಿ ಎಲ್ಲ ಧರ್ಮೀಯರು ಆದ್ಯತೆಯ ಮೇಲೆ ಚರ್ಚ್ ಶಾಲೆಗಳಿಗೇ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದರು. ಆದರೆ ಎಂದಿಗೂ ಅದು ಒಂದು ಧರ್ಮೀಯರ ಶಾಲೆ ಎಂದು ನಮಗಾಗಲಿ, ನಮ್ಮ ಪಾಲಕರಿಗಾಗಲಿ ಅನಿಸಿರಲಿಲ್ಲ. ನಾವ್ಯಾರೂ ಆ ಶಾಲೆಯಲ್ಲಿ ಕಲಿತ ಕಾರಣಕ್ಕೆ ಮತಾಂತರ ಹೊಂದಲಿಲ್ಲ. ಶಾಲೆಯಲ್ಲಿ ಕ್ರಿಸ್ಮಸ್, ದೀಪಾವಳಿ ಆಚರಿಸಿದ ಸಂದರ್ಭಗಳಲ್ಲಿ, ಅದೆಲ್ಲ ಬೇರೆಯವರದು ಎಂದೆನಿಸದೇ ನಾವೆಲ್ಲರೂ ತುಂಬು ಖುಷಿಯಿಂದ ಆಚರಿಸುತ್ತಿದ್ದೆವು. ಇಂದಿಗೂ ದೀಪಾವಳಿ ಹಬ್ಬ ಬಂದಾಗ ಹೃದಯದಲ್ಲೇನೋ ಅರಳಿದಂತಾಗುವುದು ಇದೇ ಕಾರಣಕ್ಕೆ ಇರಬಹುದು. ಇಲ್ಲಿ, ಯಾವುದೇ ಭಾಷಣ, ಸಮ್ಮೇಳನ, ಧಾರ್ಮಿಕ ಪುಸ್ತಕಗಳು ನಮ್ಮನ್ನು ಪರಸ್ಪರ ಪರಿಚಯಿಸಿ ಒಂದಾಗಿಸಿರುವುದಲ್ಲ. ಒಂದು ರೀತಿಯಲ್ಲಿ, ಸೌಹಾರ್ದವೆನ್ನುವುದು ನಮ್ಮ ಕಾಲಕ್ಕೆ, ಸಹಜವಾಗಿ ಹರಡಿಕೊಂಡ ಕಾಡುಗಳಾಗಿದ್ದವು. ಅದಕ್ಕೆ ಯಾರೂ ನೀರುಣಿಸಿರಲಿಲ್ಲ, ಯಾರೂ ಗೊಬ್ಬರ ಹಾಕಿರಲಿಲ್ಲ. ಆದರೂ ಅದು ಯಥೇಚ್ಛವಾಗಿ, ಸಮೃದ್ಧವಾಗಿ ಹರಡಿಕೊಳ್ಳುತ್ತಾ ಹೋಯಿತು. ಆದುದರಿಂದಲೇ ನಮ್ಮ ಪಾಲಿಗೆ ಯಾರೂ ಅನ್ಯರಲ್ಲ, ಯಾವುದೂ ಅನ್ಯವಾಗಿರಲಿಲ್ಲ. ನಮಗೆ ಆಗ ‘ಗೆಳೆಯ’ರಷ್ಟೇ ಇದ್ದರು. ಇಂದಿನ ಹಾಗೆ, ಮುಸ್ಲಿಮ್ ಗೆಳೆಯರು, ಹಿಂದೂ ಗೆಳೆಯರು, ಕ್ರಿಶ್ಚಿಯನ್ ಗೆಳೆಯರು ಇದ್ದಿರಲಿಲ್ಲ. ಹಿಂದೂ ಆಟಗಾರ, ಮುಸ್ಲಿಮ್ ಆಟಗಾರ ಎನ್ನುವ ಭಾಷೆಯೂ ಆಗ ಚಾಲ್ತಿಯಲ್ಲಿರಲಿಲ್ಲ. ವಿಪರ್ಯಾಸವೆಂದರೆ, ಇಂದು ಅಂತಹ ಸಹಜವಾಗಿ ಬೆಳೆದ, ಬೆಳೆಯುತ್ತಿರುವ ಕಾಡುಗಳನ್ನೆಲ್ಲ ಸಮಾಜ ಭಾಗಶಃ ಕಡಿದು ಹಾಕಿದೆ. ವಿವಿಧ ಜಾತಿ, ಧರ್ಮ, ಸಂಸ್ಕೃತಿಯ ಪುಟಾಣಿ ಮಕ್ಕಳು ಒಟ್ಟು ಸೇರುವ ಎಲ್ಲ ಮೈದಾನಗಳನ್ನು, ವೇದಿಕೆಗಳನ್ನು ನಾಶ ಮಾಡಿ, ನಾವು ನಮ್ಮ ನಮ್ಮ ಕಾಂಪೌಂಡ್‌ನೊಳಗೆ ಕುಂಡದಲ್ಲಿ ಸೌಹಾರ್ದ ಗಿಡಗಳನ್ನು ನೆಟ್ಟು ಬೆಳೆಸಲು ಹೊರಟಿದ್ದೇವೆ. 

ಇತ್ತೀಚೆಗೆ ಎಂಟನೆ ತರಗತಿಯಲ್ಲಿ ಕಲಿಯುತ್ತಿರುವ ನನ್ನ ಪರಿಚಯದ ಹುಡುಗನ ಜೊತೆಗೆ ನಾನು ಮಾತನಾಡಿದೆ. ಅವನು ಓದುತ್ತಿರುವ ಶಾಲೆಯ ಹೆಸರು ಕೇಳಿದೆ. ಅದು ಧಾರ್ಮಿಕ ಹಿನ್ನೆಲೆಯಿರುವ ಸಂಘಟನೆಯೊಂದು ನಡೆಸುವ ಶಾಲೆ. ಎಲ್‌ಕೆಜಿಯಿಂದ ಹಿಡಿದು ಎಂಟನೆಯ ತರಗತಿಯವರೆಗೂ ಅವನು ಅದೇ ಶಾಲೆಯಲ್ಲಿ ಕಲಿಯುತ್ತಾ ಬಂದಿದ್ದಾನೆ. ‘ನಿನ್ನ ಶಾಲೆಯಲ್ಲಿ ಬೇರೆ ಧರ್ಮೀಯರು ಎಷ್ಟಿದ್ದಾರೆ?” ಎಂಬ ಪ್ರಶ್ನೆಗೆ ಆಘಾತಕಾರಿ ಉತ್ತರ ದೊರಕಿತು. ಅವನ ಶಾಲೆಯಲ್ಲಿ ಒಬ್ಬನೇ ಒಬ್ಬ ಬೇರೆ ಧರ್ಮೀಯ ವಿದ್ಯಾರ್ಥಿಯಿರಲಿಲ್ಲ. ಈ ವಿದ್ಯಾರ್ಥಿ ತನ್ನ ಮನೆಯಿಂದ ಹೊರಗೆ, ಸಮಾಜಕ್ಕೆ ತೆರೆದುಕೊಳ್ಳುವುದು ಈ ಶಾಲೆಯ ಮೂಲಕವಾಗಿದೆ. ಶಾಲೆಯಿಂದ ನೇರವಾಗಿ ಈತ ಮನೆಗೆ ಬರುತ್ತಾನೆ. ಮನೆಯಿಂದ ಟ್ಯೂಶನ್‌ಗೆ ಹೋಗುತ್ತಾನೆ. ಬಳಿಕ ಮತ್ತೆ ಮನೆಗೆ. ತನ್ನ ಧರ್ಮೀಯರನ್ನು ಬಿಟ್ಟರೆ ಇನ್ನೊಂದು ಧರ್ಮದ ವಿದ್ಯಾರ್ಥಿಯನ್ನು ಭೇಟಿಯಾಗುವ ಅವಕಾಶವೇ ಅವನಿಗೆ ಈವರೆಗೆ ಸಿಕ್ಕಿಲ್ಲ. ಎಲ್ಲೋ ನೆರೆಯಲ್ಲಿ ಅಥವಾ ಹೊರಗಡೆ ಸಿಕ್ಕಿದರೂ ಅದು ಅತ್ಯಲ್ಪ. ಹಿಂದಿನಂತೆ ಮಕ್ಕಳನ್ನು ಹೊರಗಡೆ ಸಾರ್ವಜನಿಕ ಮೈದಾನಕ್ಕೆ ಆಟ ಆಡಲು ಸ್ವತಂತ್ರವಾಗಿ ಕಳುಹಿಸುವ ಪರಿಪಾಠವೂ ಈಗ ಇಲ್ಲ. ಈ ಹುಡುಗ ಹತ್ತನೇ ತರಗತಿಯವರೆಗೂ ಆ ಶಾಲೆಯಲ್ಲಿ ಕಲಿತು, ಬಳಿಕ ಕಾಲೇಜಿಗೆ ಕಾಲಿಡುತ್ತಾನೆ. ಅಂದರೆ ಹೊರಗಿನ ಸಮಾಜಕ್ಕೆ ಈತ ನಿಜವಾದ ಅರ್ಥದಲ್ಲಿ ಕಾಲಿಡುವುದು ತನ್ನ ಹತ್ತನೇ ತರಗತಿಯ ಬಳಿಕ. ಕಾಲೇಜಿಗೆ ಕಾಲಿಡುವುದೆಂದರೆ, ಈವರೆಗೆ ಅವನ ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ಒಮ್ಮೆಲೆ ಬಿಚ್ಚಿದಂತೆ. ತನ್ನೆದುರು ಕಾಣುತ್ತಿರುವುದೆಲ್ಲವೂ ಅವನಿಗೆ ‘ಅನ್ಯ’ ಅನ್ನಿಸತೊಡಗುತ್ತದೆ. ಇನ್ನೊಂದು ಧರ್ಮೀಯರ ಹೆಸರು, ಮಾತು, ಸಂಸ್ಕೃತಿ ಯಾವುದೂ ಅವನಿಗೆ ಪರಿಚಿತವಲ್ಲ. ಅವನು ಅದನ್ನು ಆ ಹೊತ್ತಿನಲ್ಲಿ ಹೊಸದಾಗಿ ತನ್ನದಾಗಿಸಲು ಪ್ರಯತ್ನಿಸಬೇಕು. ಬಾಲ್ಯದಲ್ಲೇ ಅವರ ಜೊತೆ ಜೊತೆಯಾಗಿ ಬಾಳುತ್ತಾ ತನ್ನದಾಗಿಸಿಕೊಳ್ಳುವುದಕ್ಕೂ, ಅನಿವಾರ್ಯ ಎನ್ನುವ ಕಾರಣಕ್ಕಾಗಿ ಇನ್ನೊಬ್ಬರನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನಕ್ಕೂ ವ್ಯತ್ಯಾಸವಿದೆ. ಯಾವುದನ್ನೂ ಅವನಿಗೆ ಸಹಜವಾಗಿ ಸ್ವೀಕರಿಸುವುದು ಕಷ್ಟವಾಗುತ್ತದೆ. ಆದುದರಿಂದ, ಆತ ಬೆರೆಯುವುದಕ್ಕಾಗಿ ತನ್ನ ಧರ್ಮೀಯನನ್ನೇ ಹುಡುಕಿಕೊಂಡು ಹೋಗುತ್ತಾನೆ. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರುವ ಅಪಾಯ ಅಲ್ಲ. ವಿಪರ್ಯಾಸವೆಂದರೆ, ಒಂದು ಕಾಲದಲ್ಲಿ ಲಕ್ಷಾಂತರ ಶಿಕ್ಷಿತರನ್ನು ಸೃಷ್ಟಿಸಿದ ಕ್ರಿಶ್ಚಿಯನ್ ಶಾಲೆಗಳಿಗೂ ಇದೀಗ ಧರ್ಮದ ಕಳಂಕವನ್ನು ಅಂಟಿಸಲಾಗಿದೆ. ಕ್ರಿಶ್ಚಿಯನ್ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿದರೆ ಅವರು ತಮ್ಮ ಧರ್ಮವನ್ನು ಮಕ್ಕಳ ತಲೆಯೊಳಗೆ ತುಂಬುತ್ತಾರೆ ಎಂಬ ಅಪಪ್ರಚಾರ ಹಿಂದೂಗಳಲ್ಲೂ, ಮುಸ್ಲಿಮರಲ್ಲೂ ತಿಳಿದೂ ತಿಳಿಯದಂತೆ ಹರಡಿಕೊಂಡಿದೆ. ಇತ್ತೀಚೆಗೆ ಒಬ್ಬ ಪುಟಾಣಿ ವಿದ್ಯಾರ್ಥಿಯ ಬಳಿ ಕೇಳಿದ್ದೆ “ನಿಮ್ಮ ಮನೆಯ ಹತ್ತಿರವೇ ಆ ಶಾಲೆಯಿರುವಾಗ ನೀನೇಕೆ ಅಷ್ಟು ದೂರ ಹೋಗಿ ಕಲಿಯಬೇಕು?”. ಆತ ತಕ್ಷಣ ನೀಡಿದ ಉತ್ತರ “ಅದು ಮುಸ್ಲಿಮರ ಶಾಲೆ ಅಲ್ಲವಾ?”. 
ಇಷ್ಟೇ ಅಲ್ಲ, ಕಲ್ಲಡ್ಕದಲ್ಲಿ ಪ್ರಭಾಕರಭಟ್ಟರಂತಹ ಸಂಘಪರಿವಾರ ನಾಯಕನ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕಲಿತ ವಿದ್ಯಾರ್ಥಿ ಈ ಸಮಾಜವನ್ನು ಹೇಗೆ ನೋಡಬಹುದು ಎನ್ನುವುದನ್ನು ನಾವು ಕಲ್ಪಿಸಿಕೊಳ್ಳೋಣ. ಬಹು ಸಂಸ್ಕೃತಿಯ ನಾಡು ಹೀಗೆ, ತನ್ನ ಬೇರಿನಲ್ಲೇ ವಿಭಜನೆಯ ರೋಗವನ್ನು ಇಟ್ಟುಕೊಂಡು ಬೆಳೆಯುತ್ತಿದೆ. ಇಂದು ಎಲ್ಲ ಧರ್ಮಗಳು, ಜಾತಿಗಳು ತಮ್ಮ ತಮ್ಮ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತಲು ತುದಿಗಾಲಿನಲ್ಲಿ ನಿಂತಿವೆ. ಆದುದರಿಂದಲೇ ಮದ್ರಸ, ಚರ್ಚು, ದೇವಸ್ಥಾನಗಳ ಅಂಗಳಗಳಲ್ಲೇ ಶಾಲೆಗಳು ತೆರೆಯುತ್ತಿವೆ. ಶಾಲೆಗಳು ತೆರೆಯುತ್ತಿರುವುದೇನೋ ಸರಿ. ಆದರೆ ಆ ಮೂಲಕ ಮಕ್ಕಳು ಧರ್ಮ, ಜಾತಿಯ ಹೆಸರಲ್ಲಿ ಸಂಪೂರ್ಣ ಬೇರ್ಪಟ್ಟು ಪರಸ್ಪರ ಅಪರಿಚಿತರಾಗಿ ಓದುವುದಕ್ಕೆ ಶುರು ಹಚ್ಚಿದರೆ ಈ ನಾಡಿನ ಬಹುತ್ವ ಉಳಿಯುವುದು ಹೇಗೆ?
ಇನ್ನೊಂದು ವಿಪರ್ಯಾಸವನ್ನೂ ನಾವು ಗಮನಿಸಬೇಕು. ಹೀಗೆ ವಿದ್ಯಾರ್ಥಿಗಳನ್ನು ವಿಭಜಿಸುವ ಧಾರ್ಮಿಕ ಸಂಘಟನೆಗಳೇ, ವರ್ಷಕ್ಕೊಮ್ಮೆ ಬೇರೆ ಬೇರೆ ಉತ್ಸವದ ಸಂದರ್ಭದಲ್ಲಿ ಸೌಹಾರ್ದ ಸಮ್ಮೇಳನಗಳನ್ನೂ ಹಮ್ಮಿಕೊಳ್ಳುತ್ತಿವೆ. ಮುಸ್ಲಿಮ್ ಧಾರ್ಮಿಕ ಸಂಘಟನೆಗಳ ಸಮಾವೇಶದಲ್ಲಿ ಪೇಜಾವರ ಶ್ರೀಗಳಂತಹ ಹಿರಿಯ ಧಾರ್ಮಿಕ ನಾಯಕರು ಭಾಗವಹಿಸುತ್ತಾರೆ. ಹಾಗೆಯೇ ಪೇಜಾವರ ಶ್ರೀಗಳ ಪರ್ಯಾಯ ಉತ್ಸವದ ಸರ್ವಧರ್ಮ ಸೌಹಾರ್ದ ಸಮ್ಮೇಳನದಲ್ಲಿ ಸಿ. ಎಂ. ಇಬ್ರಾಹೀಂರಂತಹ ಮುಸ್ಲಿಮ್ ಮುಖಂಡರು ಮಾತನಾಡಿ ಸೌಹಾರ್ದದ ಮಹತ್ವವನ್ನು ವಿವರಿಸುತ್ತಾರೆ. ಇಂತಹ ಸಮಾವೇಷಗಳಲ್ಲಿ, ಎಲ್ಲ ಧಾರ್ಮಿಕ ಮುಖಂಡರೂ ತಮ್ಮ ತಮ್ಮ ಧರ್ಮಗಳಲ್ಲಿರುವ ಸೌಹಾರ್ದದ ಮೌಲ್ಯಗಳನ್ನು ಸಮಾಜಕ್ಕೆ ಸಾರುತ್ತಾರೆ. ನಿಜ, ವಿವಿಧ ಧಾರ್ಮಿಕ ಸಂಘಟನೆಗಳು ಇಂದು ಸೌಹಾರ್ದಕ್ಕಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಾಕುತ್ತಿವೆ. ಸಮಾವೇಶಗಳನ್ನು ನಡೆಸುತ್ತಿವೆ. ಆದರೆ ಇದೊಂದು ರೀತಿ, ಸಹಜವಾಗಿ ಹರಡಿ ನಿಂತ ಸೌಹಾರ್ದದ ಕಾಡುಗಳನ್ನು ಕಡಿದು, ನಮ್ಮ ನಮ್ಮ ಕಾಂಪೌಂಡ್‌ಗಳೊಳಗೆ ಕುಂಡದಲ್ಲಿಟ್ಟು ಅದನ್ನು ಸಾಕಿದ ಹಾಗೆ. ಇಂತಹ ಸೌಹಾರ್ದಗಳು ಹೆಚ್ಚು ಸಮಯ ಬಾಳುವುದಿಲ್ಲ ಎನ್ನುವ ಎಚ್ಚರಿಕೆ ಬೇಕು. ಗಿಡಗಳನ್ನಾಗಲಿ, ಸೌಹಾರ್ದವನ್ನಾಗಲಿ ಕುಂಡದೊಳಗಿಟ್ಟು ಸಾಕುವುದು ದುಬಾರಿ. ಒಂದಿಷ್ಟು ಕಣ್ಣು ತಪ್ಪಿದರೂ ಆ ಗಿಡ ಬಾಡಿ ಹೋಗಬಹುದು ಅಥವಾ ಸತ್ತು ಹೋಗಬಹುದು. ಬಹುತೇಕ ಧಾರ್ಮಿಕ ಸಂಘಟನೆಗಳು ಹಮ್ಮಿಕೊಳ್ಳುವ ಸೌಹಾರ್ದ ಸಮಾವೇಶಗಳ ಉದ್ದೇಶ ತಾವು ತಮ್ಮ ಕಾಂಪೌಂಡ್‌ನೊಳಗೆ ಸಾಕಿರುವ ಸೌಹಾರ್ದದ ಕುಂಡಗಳ ಪ್ರದರ್ಶಿಸುವುದಷ್ಟೇ ಆಗಿರುತ್ತದೆ. ಈ ಮೂಲಕ, ತಮ್ಮ ಧರ್ಮದ ಸೌಹಾರ್ದ ಸಂದೇಶಗಳ ‘ಗೊಬ್ಬರ’ದ ಹಿರಿಮೆಯನ್ನು ಪ್ರದರ್ಶಿಸುವುದಾಗಿದೆ. ಅಂದರೆ “ನೋಡಿ, ನಮ್ಮ ಧರ್ಮದ ಗೊಬ್ಬರ ಹಾಕಿ ಬೆಳೆಸಿದ ಸೌಹಾರ್ದದ ಗಿಡಗಳು ಎಷ್ಟು ಸೊಂಪಾಗಿವೆ?” ಎನ್ನುವ ಮೂಲಕ ತಮ್ಮ ತಮ್ಮ ಧರ್ಮಗಳ ಗೊಬ್ಬರಗಳನ್ನು ಮಾರ್ಕೆಟ್ ಮಾಡುವ ಪರೋಕ್ಷ ಉದ್ದೇಶ ಅದರ ಹಿಂದೆ ಇರುತ್ತದೆ. ಇಷ್ಟಕೂ  ಸಹಜವಾಗಿ ಹಬ್ಬಬಲ್ಲ ಸೌಹಾರ್ದದ ಎಲ್ಲ ಬಾಗಿಲುಗಳನ್ನು ಮುಚ್ಚಿ, ಉಪದೇಶಗಳ ಮೂಲಕ, ಪುಸ್ತಕಗಳ ಮೂಲಕ, ಭಾಷಣಗಳ ಮೂಲಕ ಸಮಾಜದಲ್ಲಿ ಸೌಹಾರ್ದವನ್ನು ನಿರ್ಮಿಸಲು ಹೊರಡುವುದೇ ಒಂದು ದೊಡ್ಡ ವ್ಯಂಗ್ಯವಾಗಿದೆ.
ವಿದ್ಯಾರ್ಥಿ ಕಾಲದಲ್ಲಿ ರಾಮಾಯಣ, ಮಹಾಭಾರತ ಕತೆಗಳೆಂದರೆ ನಮಗೆ ಹಬ್ಬ. ಅಮರ ಚಿತ್ರಕತೆಗಳಿಂದ ಆರಂಭವಾದ ಮಹಾಭಾರತದ ಓದು ಪಂಪ, ರನ್ನರ ಮೂಲಕ ಮೂಲ ವ್ಯಾಸನವರೆಗೂ ನಿರಂತರವಾಗಿ ನಡೆಯುತ್ತಿತ್ತು. ಮಹಾಭಾರತ, ರಾಮಾಯಣ ಈ ದೇಶದ ಎರಡು ಮಹಾಕಾವ್ಯಗಳು ಎಂದು ನಮ್ಮ ಮೇಷ್ಟ್ರು ನಮಗೆ ಬೋಧಿಸಿದ್ದರು. ಇಂದಿಗೂ ನಮಗದು ಅದ್ಭುತ ಮಹಾಕಾವ್ಯಗಳೇ ಆಗಿವೆ. ಎಲ್ಲ  ಭಾರತೀಯರಿಗೆ ಸೇರಿದ  ಕೃತಿಗಳು ಅವು. ಇದೇ ಸಂದರ್ಭದಲ್ಲಿ, ವಿಳಾಸ ಕಳುಹಿಸಿದರೆ ಬೈಬಲ್ ಕತೆ ಪುಸ್ತಕಗಳ ಕಟ್ಟು ಕಳುಹಿಸುವ ಸಂಸ್ಥೆಯೊಂದಿತ್ತು. ನಾವೆಲ್ಲ ಪದೇ ಪದೇ ಆ ವಿಳಾಸಕ್ಕೆ ಪತ್ರ ಬರೆಯುತ್ತಿದ್ದೆವು. ಅಂಚೆಯಲ್ಲಿ ಬೈಬಲ್ ಕತೆಗಳ ಕಟ್ಟು ಬರುವುದೇ ಒಂದು ಸಂಭ್ರಮ. ಬೈಬಲ್ ಧಾರ್ಮಿಕ ಪುಸ್ತಕವೇ ಆಗಿದ್ದರೂ ನಮಗದು ಆಗ ಕತೆಪುಸ್ತಕಗಳೇ. ನನ್ನ ವಿದ್ಯಾರ್ಥಿ ಕಾಲದಲ್ಲಿ, ಕನ್ನಡ ಪಂಡಿತರಾದ ವಿ. ಆರ್. ಹೆಗಡೆ ನನ್ನ ಮೇಲೆ ವಿಶೇಷ ಪ್ರೀತಿಯಿಟ್ಟುಕೊಂಡಿರುವುದಕ್ಕೆ ‘ಮಹಾಭಾರತದ ಯಾವುದೇ ಪ್ರಶ್ನೆಗಳಿಗೂ ಚಕಚಕನೇ ಉತ್ತರಿಸುವುದೂ’  ಕಾರಣವಾಗಿರಬೇಕು. ರಾಮಾಯಣ, ಮಹಾಭಾರತ, ಬೈಬಲ್‌ನಲ್ಲಿ ಬರುವ ಕೆಲವು ನೀತಿಕತೆಗಳಿಂದ ನಾನು ಇನ್ನಷ್ಟು ಒಳ್ಳೆಯ ಮುಸ್ಲಿಮನಾಗಲು ಸಾಧ್ಯವಾಯಿತೇ ಹೊರತು, ಹಿಂದೂ ಅಥವಾ ಕ್ರೈಸ್ತನಾಗಿ ನಾನೆಂದಿಗೂ ಬದಲಾಗಲಿಲ್ಲ. 
ಇತ್ತೀಚೆಗೆ ನಾನು ಮಹಾಭಾರತದ ಒಂದು ಪಾತ್ರವನ್ನು ವಿಶ್ಲೇಷಣೆ ಮಾಡಿ ಸಾಮಾಜಿಕ ತಾಣದಲ್ಲಿ ಹಾಕಿದ್ದೆ. ಕೆಲವೇ ಕ್ಷಣದಲ್ಲಿ ಒಬ್ಬ ತರುಣ ಆಕ್ರೋಶಿತನಾಗಿ “ನಮ್ಮ ಧರ್ಮದ ಗ್ರಂಥದ ಬಗ್ಗೆ ಮಾತನಾಡಲು ನೀನು ಯಾರು?” ಎಂದವನೇ ವಾಚಾಮಗೋಚರವಾಗಿ ಕುರ್‌ಆನ್ ಗ್ರಂಥವನ್ನು ನಿಂದಿಸತೊಡಗಿದ. ನಾನು ಸಹನೆಯಿಂದಲೇ ಆ ತರುಣನಿಗೆ ಮಹಾಭಾರತದ ಕೆಲವು ಪ್ರಶ್ನೆಗಳನ್ನು ಕೇಳಿದೆ. ‘ದ್ರೌಪದಿಯ ಅಣ್ಣನ ಹೆಸರು ಏನು ಗೊತ್ತಾ?’ ಎಂದು ಕೇಳಿದೆ. ಅವನಲ್ಲಿ ಯಾವ ಪ್ರಶ್ನೆಗಳಿಗೂ ಉತ್ತರವಿರಲಿಲ್ಲ. ಅವನು ಮಹಾಭಾರತವನ್ನೇ ಸರಿಯಾಗಿ ಓದಿರಲಿಲ್ಲ. ಆದರೆ ಮಹಾಭಾರತವೆಂದರೆ ‘ಹಿಂದೂಗಳ ಧರ್ಮ ಗ್ರಂಥ’ ಎಂದು ಅವನ ತಲೆಗೆ ಯಾರೋ ತುಂಬಿಸಿದ್ದರು. 

ಮೇಲಿನೆಲ್ಲದರ ಅರ್ಥ, ಧಾರ್ಮಿಕ, ಜಾತಿ ಸಂಘಟನೆಗಳು ತಮ್ಮ ತಮ್ಮ ಪ್ರತ್ಯೇಕ ಶಾಲೆಗಳನ್ನು, ವಿದ್ಯಾರ್ಥಿ ಹಾಸ್ಟೆಲ್‌ಗಳನ್ನು ಕಟ್ಟಬಾರದು ಎಂದಲ್ಲ.  ದುರ್ಬಲ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಕಾಲಿಡುತ್ತಿರುವುದು ಅಭಿನಂದನೀಯ. ಇದು ಇಂದಿನ ಅಗತ್ಯವೂ ಕೂಡ. ಹಾಗೆಂದು ಆ ಶಾಲೆಗಳು, ಹಾಸ್ಟೆಲ್‌ಗಳು ತಮ್ಮದೇ ಜಾತಿ, ಸಮುದಾಯದ ಘೆಟ್ಟೋಗಳು ನಿರ್ಮಾಣವಾಗಲು ಕಾರಣವಾದರೆ ಅದರಿಂದ ಸಮುದಾಯಕ್ಕೆ ಭವಿಷ್ಯದಲ್ಲಿ ಇನ್ನಷ್ಟು ಅಪಾಯವಿದೆ. ಈ ಕಾರಣಕ್ಕೇ, ದುರ್ಬಲ ವರ್ಗದ ಸಮುದಾಯಗಳನ್ನು ಪ್ರತಿನಿಧಿಸುವ ಶಾಲೆಗಳು ಕೇವಲ ತಮ್ಮ ಧರ್ಮ, ಜಾತಿಯ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗುವಂತಹ ಸ್ಥಿತಿಯನ್ನು ಅಲ್ಲಿ ನಿರ್ಮಾಣ ಮಾಡಬಾರದು. ಇದಕ್ಕೂ ಕೆಲವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಒಂದು ಧರ್ಮದ ಸಂಘಟನೆ ನಡೆಸುವ ಶಾಲೆಯ ಮುಖ್ಯಸ್ಥರು ನನ್ನೊಂದಿಗೆ ಹೀಗೆ ಹಂಚಿಕೊಂಡರು “ನೋಡಿ, ನಮ್ಮ ಶಾಲೆಯಲ್ಲಿ ಬೇರೆ ಧರ್ಮೀಯರಿಗೂ ಧಾರಾಳ ಅವಕಾಶವಿದೆ. ಬೇರೆ ಧರ್ಮೀಯರು ಬಂದರೆ ಅವರಿಗೆ ಶುಲ್ಕದಲ್ಲೂ ನಾವು ವಿನಾಯಿತಿಯನ್ನು ಇಟ್ಟಿದ್ದೇವೆ. ಆದರೂ ಬರುತ್ತಿಲ್ಲ. ಇದು ನಮ್ಮ ತಪ್ಪೇ?”. ಅವರ ತಪ್ಪಲ್ಲ ನಿಜ. ಆದರೆ ಬೇರೆ ಧರ್ಮೀಯರು ಬರುತ್ತಿಲ್ಲ ಎನ್ನುವುದೂ ನಿಜ. ಅದರಿಂದ ಭವಿಷ್ಯದಲ್ಲಿ ಸಮಾಜ ಸಂಪೂರ್ಣವಾಗಿ ಒಡೆದು ಹೋಗಲಿದೆ ಎನ್ನುವುದೂ ಅಷ್ಟೇ ನಿಜ. ಆದುದರಿಂದ ‘ನಮ್ಮ ತಪ್ಪೇ?’ ಎನ್ನುವ ಅಸಹಾಯಕತೆ ಇದಕ್ಕೆ ಖಂಡಿತಾ ಪರಿಹಾರವಲ್ಲ. ಶಾಲೆಯೊಳಗೆ ಒಂದು ವೈವಿಧ್ಯವನ್ನು ಕಾಪಾಡಲು ಸಂಘಟಕರು ಗರಿಷ್ಠ ಪ್ರಮಾಣದಲ್ಲಿ ಶ್ರಮಿಸಿದರೆ ‘ಮುಸ್ಲಿಮ್ ಶಾಲೆ’ ‘ಹಿಂದೂ ಶಾಲೆ’ ಎನ್ನುವ ವ್ಯತ್ಯಾಸ ನಿಧಾನಕ್ಕಾದರೂ ಅಳಿಸಿ ಹೋಗಬಹುದು. ಈ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ನಡೆಸುವ ಶಾಲೆಗಳಲ್ಲಿ ‘ಕಡ್ಡಾಯವಾಗಿ’ ಇತರ ಧರ್ಮೀಯರು ‘ಇಷ್ಟು ಶೇಕಡ ಇರಲೇ ಬೇಕು’ ಎಂಬ ನಿಯಮವನ್ನಾದರೂ ಸರಕಾರ ತರಬೇಕು. ಇದೇ ಸಂದರ್ಭದಲ್ಲಿ, ಇದಕ್ಕಿರುವ ಇನ್ನೊಂದು ಅತ್ಯುತ್ತಮ ಪರಿಹಾರವೆಂದರೆ, ಸರಕಾರವು ಸರಕಾರಿ ಶಾಲೆಗಳನ್ನು ಮೇಲೆತ್ತುವುದು. ಮಠ, ಮಾನ್ಯಗಳಿಗೆ ಸರಕಾರ ಕೋಟಿ ಗಟ್ಟಳೆ ಅನುದಾನ ನೀಡಿ ಅದನ್ನು ಸದೃಢಗೊಳಿಸಲು ಅತ್ಯುತ್ಸಾಹ ವ್ಯಕ್ತಪಡಿಸುವಾಗ, ಅದೇ ಉತ್ಸಾಹದಲ್ಲಿ ಸರಕಾರಿ ಶಾಲೆಗಳನ್ನು ಮೇಲೆತ್ತಲು ಯಾಕೆ ಪ್ರಯತ್ನಿಸುತ್ತಿಲ್ಲ? ರಾಜ್ಯದಲ್ಲಿರುವ ಎಲ್ಲ ಸರಕಾರಿ ಶಾಲೆಗಳನ್ನು ಗುರುತಿಸಿ, ಯಾವುದೇ ಖಾಸಗಿ ಶಾಲೆಗಳಿಗಿಂತ ಅತ್ಯಾಧುನಿಕವಾಗಿ ರೂಪಿಸುವ ಮೂಲಕ ಎಲ್ಲ ಜಾತಿ ಧರ್ಮಗಳ ವಿದ್ಯಾರ್ಥಿಗಳನ್ನು ಅದರೆಡೆಗೆ ಆಕರ್ಷಿಸುವಂತೆ ಮಾಡುವುದರಿಂದ ಸಮಾಜಕ್ಕೆ ನೂರಾರು ಬಗೆಯ ಲಾಭಗಳಿವೆ. ಇಂದು ನಮ್ಮ ಮಕ್ಕಳು ಯಾವ ಮಾಧ್ಯಮಗಳಲ್ಲಿ ಕಲಿಯಬೇಕು ಎನ್ನುವುದನ್ನಷ್ಟೇ ನಾವು ಚರ್ಚಿಸುತ್ತಿದ್ದೇವೆ. ಯಾವ ಮಾಧ್ಯಮಗಳಲ್ಲಿ ಬೇಕಾದರೂ ಕಲಿಯಲಿ, ಆದರೆ ಎಲ್ಲ ಧರ್ಮ, ಜಾತಿಯ ಮಕ್ಕಳು ಒಟ್ಟಾಗಿ ಕಲಿಯುವಂತಹ ಶಾಲೆಗಳು ಇಂದಿನ ಅಗತ್ಯ. ಒಂದನೇ ತರಗತಿಯಿಂದಲೇ ಒಟ್ಟಾಗಿ ಆಡುತ್ತಾ, ಕಲಿಯುತ್ತಾ, ಜಗಳವಾಡುತ್ತಾ, ಪ್ರೀತಿಸುತ್ತಾ, ಮಧ್ಯಾಹ್ನದ ಬಿಸಿಯೂಟವನ್ನು ಒಂದೇ ಪಂಕ್ತಿಯಲ್ಲಿ ಉಣ್ಣುತ್ತಾ ಬೆಳೆಯಲಿ. ಆಗ ಯಾವ ಧರ್ಮೀಯರೂ “ನಮ್ಮ ಧರ್ಮ ಶಾಂತಿಯ ಧರ್ಮ” “ನಾವೂ ನಿಮ್ಮಂತೆಯೇ ಮನುಷ್ಯರು” ಎಂದೆಲ್ಲ ಪರಿಚಯಿಸಿಕೊಳ್ಳುವ ಅಗತ್ಯ ಬರುವುದಿಲ್ಲ. ಇಂದು ಪರಸ್ಪರ ಅನ್ಯರಂತೆ ಬಾಳುತ್ತಿರುವವರನ್ನು ಭವಿಷ್ಯದಲ್ಲಿ ಒಂದಾಗಿಸುವುದಕ್ಕೆ ಇರುವ ದಾರಿ ಇದೊಂದೆ. ಬಹುಸಂಸ್ಕೃತಿಯ ಭಾರತವನ್ನು ಉಳಿಸಿಕೊಳ್ಳಬೇಕಾದರೂ ನಮಗೆ ಇರುವ ದಾರಿ ಇದೊಂದೆ.

1 comment: